ಕೋಟೆ ದಾಟಿದ ಜೀವ
ವಿ.ಗಾಯತ್ರಿ
ಆತ್ಮೀಯರೇ,
ತುಂಬಾ ಆತ್ಮೀಯರಾದ ತುಮಕೂರಿನ ಶ್ರೀ ಕೋಟೆ ನಾಗಭೂಷಣ ತೀರಿಕೊಂಡಿದ್ದಾರೆ. ೨೪ ಘಂಟೆಗಳ ಕಾಲದಲ್ಲಿ ಎರಡು ತೀವ್ರ ಹೃದಯಘಾತಗಳನ್ನು ತಾಳಿಕೊಳ್ಳಲಾಗದೆ ಸಾವಿಗೆ ಶರಣಾಗಿಬಿಟ್ಟರು. ತಮ್ಮ ಈ ಹಠಾತ್ ನಿರ್ಗಮನವನ್ನು ಆತ್ಮೀಯರು ಹೇಗೆ ತಾಳಿಕೊಂಡಾರು ಎಂಬ ಚಿಂತೆಗೆ ಹೋಗದೆ ತಮ್ಮ ಪಾಡಿಗೆ ಕಣ್ಣು ಮುಚ್ಚಿಬಿಟ್ಟರು.
ಪತ್ರಕರ್ತ, ರಂಗಕರ್ಮಿ, ಲೇಖಕ, ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಹತ್ತಿರತ್ತಿರ ನಾಲ್ಕು ದಶಕಗಳ ಕಾಲ ಬಿಡುವು ಎಂಬುದನ್ನು ಸಂಪೂರ್ಣ ಮರೆತವರಂತೆ ದುಡಿದಿದ್ದಾರೆ ಕೋಟೆ. (ಅವರಿಗೀಗ ೬೨ ವರ್ಷಗಳು).
ಅವರ ಕಾರ್ಯವೈಖರಿಯನ್ನು ನಾನು ಹತ್ತಿರದಿಂದ ಕಂಡಿದ್ದು ೧೦-೧೫ ವರ್ಷಗಳ ಹಿಂದೆ ಎನ್ ಎ ಪಿ ಎಂ(ಜನಾಂದೋಲನಗಳ ಸಮನ್ವಯ)ನಲ್ಲಿ ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ. ಎನ್ ಎ ಪಿ ಎಂನಂಥ ಪರ್ಯಾಯ ರಾಜಕೀಯ ಚಿಂತನೆ ಅಷ್ಟೇನೂ ಒಪ್ಪಿತವಲ್ಲದಿದ್ದ ಸಮಯದಲ್ಲಿ ಅದರ ಮಹತ್ವ/ಅನಿವಾರ್ಯತೆಯನ್ನು ಮನಗಂಡು ಅದನ್ನು ಜನಮನದಲ್ಲಿ ನೆಲೆಯೂರಿಸುವಲ್ಲಿ ಅವರು ಒಳಗೊಳ್ಳುತ್ತಿದ್ದ ರೀತಿಯಲ್ಲಿ ಒಬ್ಬ ಕಾರ್ಯಕರ್ತನ ಸಾಮಾಜಿಕ ಜವಾಬ್ದಾರಿಯ ಅಗಾಧತೆಯ ಸಾಕ್ಷಾತ್ ದರ್ಶನವಾಗಿತ್ತು. ಪರ್ಯಾಯ ಚಿಂತನೆಗಳನ್ನು ತೆರೆದ ಮನಸ್ಸಿನಿಂದ ಬರಮಾಡಿಕೊಂಡು, ಎಲ್ಲ ಮಗ್ಗುಲುಗಳಿಂದ ಅದನ್ನು ತಿಕ್ಕಿ ತೀಡಿ ಪರಿಶೋಧಿಸಿ, ಸಂಬಂಧಪಟ್ಟ ಸಾಮಗ್ರಿಗಳನ್ನೆಲ್ಲಾ ಸಂಗ್ರಹಿಸಿ ಅಧ್ಯಯನ ಮಾಡಿ, ಇದು ತಕ್ಕುದೆಂದು ಕಂಡ ನಂತರ ಅದನ್ನು ಜನರ ನಡುವೆ ಕೊಂಡೊಯ್ಯುವುದು ಅವರ ಯಾವತ್ತೂ ಕ್ರಮ. ನಾನು ‘ಸಹಜ ಸಾಗುವಳಿ’ ಪತ್ರಿಕೆ ಸಂಪಾದಿಸಲು ಶುರು ಮಾಡಿದ ಮೇಲೆ ತಾವೂ ಅದನ್ನು ಹಚ್ಚಿಕೊಂಡು ಕಂಡವರಿಗೆಲ್ಲ ಅದನ್ನು ಪರಿಚಯಿಸುತ್ತಾ, ತಾವೂ ಬರೆಯುತ್ತಾ, ನೆಪ ಮಾಡಿಕೊಂಡು ಹೊಗಳುತ್ತಾ ಅದೆಷ್ಟು ಉತ್ತೇಜಿಸುತ್ತಿದ್ದರೋ!
ಇತ್ತೀಚೆಗೆ ಅವರು ಚಿಕ್ಕನಾಯಕನಹಳ್ಳಿ, ಚಿತ್ರದುರ್ಗಗಳಲ್ಲಿ ಗಣಗಾರಿಕೆ ವಿರುದ್ಧದ ಹೋರಾಟದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದರು. ಭೂ ಕಬಳಿಕೆಯ ವಿರುದ್ಧ ಪತ್ರಿಕೆಗಳಲ್ಲಿ ಬರವಣಿಗೆ, ಹೋರಾಟ, ವಿಚಾರ ಸಂಕಿರಣಗಳು, ಜನಾಭಿಪ್ರಾಯ ಕಾರ್ಯಕ್ರಮಗಳು, ಪುಸ್ತಕ ಪ್ರಕಟಣೆ ಹೀಗೆ ತಮ್ಮಿಂದಾದ ಎಲ್ಲವನ್ನೂ ಮಾಡುತ್ತಿದ್ದರು. ಮೊನ್ನೆ ತುಮಕೂರಿನಲ್ಲಿ ಭೂ ಸ್ವಾಧೀನ, ಪುನರ್ವಸತಿ ಮಸೂದೆ ಬಗ್ಗೆ ಅವರ ನೇತೃತ್ವದಲ್ಲಿ ನಡೆದ ರಾಷ್ಟ ವಿಚಾರ ಸಂಕಿರಣದಲ್ಲಿ ರೈತರ ಆತ್ಮಹತ್ಯೆಯ ಬಗ್ಗೆ ನಿರ್ಣಯವೊಂದನ್ನು ಮಂಡಿಸುವಾಗ ಅತ್ತೇ ಬಿಟ್ಟಿದ್ದರು. ಕರ್ನಾಟಕ ಕುಲಾಂತರಿ ವಿರೋಧಿ ಆಂದೋಲನದ ‘ಅಂದು ಉಪ್ಪು ಇಂದು ಬೀಜ’ ಜಾಥಾಕ್ಕಾಗಿ ಕಳೆದ ೬ ತಿಂಗಳಿಂದ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದರು. ಹೃದಯಾಘಾತವಾದ ದಿನವೂ ಎರಡು ತಾಲೂಕು ಸಭೆಗಳನ್ನು ಮಾಡಿ ಮುಗಿಸಿದ್ದರು.
ಅವರಿಗೆ ಅದೇನೋ ಅನಾರೋಗ್ಯ ಕಾಡುತ್ತಿತ್ತು. ಏನಾದರೂ ಕೇಳಿದರೆ, ಹೇಳಿದರೆ ನಗುತ್ತಿದ್ದರು, ಸ್ವಲ್ಪ ಬಲವಂತ ಮಾಡಿದರೆ ಸಿಡುಕಿಬಿಡುತ್ತಿದ್ದರು. ದಿನಕ್ಕೆ ನಾಲ್ಕು ತಾಲೂಕುಗಳಲ್ಲಿ ಹತ್ತಾರು ಹಳ್ಳಿಗಳಲ್ಲಿ ಓಡಾಡುತ್ತಾ ನೂರಾರು ಜನರನ್ನು ಭೇಟಿಯಾಗುತ್ತಾ ತಮಗೆ ಇದ್ದಿರಬಹುದಾದ ದೈಹಿಕ ಸಮಸ್ಯೆಗಳನ್ನು ಪರಿಹಾಸ್ಯವೇ ಮಾಡಿಬಿಡುತ್ತಿದ್ದರು. ಹಾಗೇ ಸಾವನ್ನೂ ಕೂಡ.
ಒಬ್ಬ ಕಾರ್ಯಕರ್ತ ‘ತಾನು’ ಅನ್ನುವುದರ ಆಚೆಗೆ ನಿಂತ ಒಬ್ಬ ‘ಸಂತ ‘ಅನ್ನುವುದರ ಸಾಕ್ಷಾತ್ ದರ್ಶನವನ್ನು ಅವರು ನಮಗೆ ಮಾಡಿಸಿದ್ದಾರೆ. ಲೇಖನಿಯೊಂದು ಸಾಮಾಜಿಕ ಪ್ರಶ್ನೆಗಳಿಗಾಗಿಯೇ ತನ್ನನ್ನು ಅರ್ಪಿಸಿಕೊಳ್ಳುವ ವೈಖರಿಯನ್ನು ತೋರಿಸಿಕೊಟ್ಟಿದ್ದಾರೆ. ಒಬ್ಬ ಕಾರ್ಯಕರ್ತ/ಪತ್ರಕರ್ತ ಸೂಕ್ಷ್ಮ ಮನಸ್ಸಿನ ಕಲಾವಿದನೂ ಹೌದು ಎಂಬುದನ್ನು ತಮ್ಮ ಸಾಹಿತ್ಯ, ಸಂಗೀತ ಪ್ರೀತಿಯಲ್ಲಿ ತೋರಿಕೊಟ್ಟಿದ್ದಾರೆ. ಇಂಥ ಕೋಟೆ ಇನ್ಯಾವತ್ತೂ ನಮ್ಮೊಂದಿಗೆ ಬರಲಾರರು ಎಂಬುದೇ ಭ್ರಮೆ ಅನ್ನಿಸುತ್ತಿದೆ.
ವಿ ಗಾಯತ್ರಿ]]>
ಕೋಟೆ ನಿರ್ಗಮನ
ನಿಮಗೆ ಇವೂ ಇಷ್ಟವಾಗಬಹುದು…





ಪ್ರಜಾಪ್ರಗತಿಯಲ್ಲಿ ಇವರ ಕೆಲವು ಲೇಖನಗಳನ್ನು ನಾನು ಕಾಲೇಜಿನಲ್ಲಿದ್ದಾಗ ಓದಿದ್ದು, ಕೆಲವು ಸಮಾರಂಭಗಳಲ್ಲಿ ಕಂಡಿದ್ದು, ಕೇಳಿದ್ದು ಬಿಟ್ಟರೆ, ಇತ್ತೀಚಿಗೆ ಅವರೊಂದಿಗೆ ಸುನೀತಾ ಹೋಟೇಲ್ನಲ್ಲಿ ಉಗಮ ಸರ್ ಜೊತೆ ಭೇಟಿಯಾಗಿ ಕಾಫೀ ಕುಡಿದಿದ್ದು ಎಲ್ಲವೂ ನೆನ್ನೆ ರಾತ್ರಿ ನೆಟ್ನಲ್ಲಿ ವಿಷಯ ತಿಳಿದು ಮರೆಯಲಾಗದ ನೆನಪಾಯಿತು.
ವಿ ಮಿಸ್ ಯು ಸರ್.