
ಮಂಜುಳಾ ಹುಲಿಕುಂಟೆ
ಕಳೆದ ಎರಡು ವಾರಗಳಿಂದೆ ಓದೋಕೆ ಶುರುಮಾಡಿದ್ದ, ನಿರಂಜನ ಅವರ ‘ಚಿರಸ್ಮರಣೆ’ ಇವತ್ತಿಗೆ ಮುಕ್ತಾಯವಾಯ್ತು,
ಇದೇನು ಅಷ್ಟು ಚಿಕ್ಕ ಪುಸ್ತಕ ಅದ್ರಲ್ಲೂ ಒಂದು ಅದ್ಭುತ ಪುಸ್ತಕ ಓದೋಕೆ ಎರಡು ವಾರ ಬೇಕಾ ಅಂತಾ ಯಾರಾದ್ರು ಕೇಳ್ತಾರೆ. ಆದ್ರೆ ಅದಕ್ಕೆ ಕಾರಣ ಪುಸ್ತಕ ನಂಗೆ ಸಿಗದೇ ಇದ್ದದ್ದು.
ಕಯ್ಯೂರಿನ ರೈತ ಕ್ರಾಂತಿಯ ಕುರಿತು ಇದ್ದ ಆ ಪುಸ್ತಕ ನಂಗೆ ಎಲ್ಲೂ ಸಿಗ್ದೇ ಕೊನೆಗೆ ಅಣ್ಣಂಗೆ ಆ ಪುಸ್ತಕ ಬೇಕು ಅಂತಾ ಹೇಳ್ದೆ. ಎಕ್ಸಾಂ ಡ್ಯೂಟಿಲಿದ್ದ ಅಣ್ಣ ಪುಸ್ತಕ ನನಗೆ ತಲುಪಿಸೋದಕ್ಕೆ ಆಗ್ದೆ ಆನ್ ಲೈನ್ ಲಿಂಕ್ ಕಳ್ಸಿದ್ರು, ಆದ್ರೆ ಅದು ಮೊಬೈಲ್ನಿಂದ ಓದೋಕೆ ಸಾಧ್ಯ ಆಗ್ದೆ, ಮನೇಲಿ ಸಿಸ್ಟಮ್ ಇಲ್ದೇ ಆಫೀಸಲ್ಲೇ ಓದ್ಬೇಕಾದ ಪರಿಸ್ಥಿತಿ..
ಜೊತೆಗೆ ನ್ಯೂಸ್ ಚಾನೆಲ್ ವರ್ಕ್, ಅದ್ರಲ್ಲೂ ಫಸ್ಟ್ ಶಿಫ್ಟ್. ನಾಲ್ಕು ಗಂಟೆಗೆ ಕೆಲ್ಸ ಮುಗ್ದಾಗ ಅರ್ಧ ಗಂಟೆ ಓದು, ಲೇಟಾದ್ರೆ ಬಸ್ಸಿಲ್ಲ, ಆಫೀಸಲ್ಲೂ ತುಂಬಾ ಹೊತ್ತು ಕೂರೋಕಾಗಲ್ಲ… ಇಂತಹ ಸಂದಿಗ್ಧ ಸ್ಥಿತೀಲೂ ಓದು ಎಲ್ಲೂ ತನ್ನ
ಕುತೂಹಲ ಕಳೆದ್ಕೊಳ್ಳಿಲ್ಲ, ಹಾಗೆ ಕೂತು ಓದ್ವಾಗ.. ಅದ್ರಲ್ಲಿ ಕಳೆದೋದಾಗ ಕಣ್ಣಂಚಲ್ಲಿ ನೀರು, ಸೆಟೆದು ನಿಲ್ಲೋ ಸ್ವಾಭಿಮಾನದ ಕಿಚ್ಚು ,ಕರುಳಲ್ಲೆಲ್ಲೊ ಒಂಥರದ ಚಳುಕೇಳ್ತಿತ್ತು .
ಬಸ್ಸಿಗೆ ಟೈಂ ಆಯ್ತು ಅಂತಾ ಎದ್ದು ಬಂದಾಗ್ಲು ತಲೇಲಿ ಅದೇ ಅಪ್ಪು, ಅದೇ ಚಿರಕುಂಡ , ಮಾಷ್ಟ್ರು , ಕಣ್ಣ, ಪಂಡಿತ್ರು, ಅಬೂಬಕರ್, ಕುಂಞಂಬು, ದೇವಕಿ, ಜಾನಕಿ..
ಮತ್ತೆ ಯಾವಾಗ ಆಫೀಸ್ಗೆ ಹೋಗ್ತೀನೋ ನೋಡ್ತಿನೋ ಅನ್ನೋ ಕಾತರ ಇದ್ದೇ ಇತ್ತು.
ಅಂತದ್ದೊಂದು ಕ್ರಾಂತಿ ಇಲ್ಲೇ ಎಲ್ಲೋ ನಡೀತಿದೆ ಅನ್ಸೊವಷ್ಟು ಆತ್ಮೀಯತೆ, ಇವತ್ತು ಕೊನೆಯ ಭಾಗ ಓದ್ವಾಗ ಗಂಟಲುಬ್ಬಿ ಅಳು ತಡೆಯೋಕೆ ಆಗ್ತಿರ್ಲಿಲ್ಲ, ಅದ್ರಲ್ಲೂ ಅಂತಾದ್ದೊಂದು ಪುಸ್ತಕಾನ ಆಫೀಸಲ್ಲಿ ಕೂತು ಓದೋದು ಅಷ್ಟು ಸುಲಭದ ವಿಚಾರ ಅಲ್ಲ ಅಂತಾ ಗೊತ್ತಿತ್ತು.
ಕೊನೆಗೆ ಓದಿದ್ನಲ್ಲ ಅನ್ನೊ ತೃಪ್ತಿ. ಆ ಕ್ರಾಂತಿ ರೋಮಾಂಚನ ಸನ್ನಿವೇಶಗಳನ್ನ ಮನಸ್ಸಿಗೆ ತುಂಬ್ಕೊಳ್ವಾಗ ಚಲೋ ಉಡುಪಿ, ಚಲೋ ತುಮಕೂರು, ಗುಡಿಬಂಡೆ ಹೋರಾಟಗಳಿಗೆ ಟೊಂಕ ಕಟ್ಟಿನಿಂತ ಯುವಜನ ಕಣ್ಮುಂದೆ ಬರ್ತಿದ್ರು,
ಜೊತೆಗೆ ಎಂಥಾ ಅನ್ಯಾಯ ಆದ್ರು ಎಲ್ಲಿ ಯಾರೇ ಸತ್ರು ನಮಗೂ ಅದಕ್ಕು ಸಂಬಂಧ ಇಲ್ಲ ಅನ್ನೋಹಾಗೆ ಬದ್ಕೊ ಇತ್ತೀಚಿನ ಜಡ ಮನಸ್ಥಿತಿ ಕೂಡಾ ಕಣ್ಮುಂದೆ ಬರ್ತಿತ್ತು.
ಇಷ್ಟು ದಿನದ ನಮ್ ಪಠ್ಯ ಪುಸ್ತಕದಲ್ಲಿ ಇಂತದ್ದೊಂದು ಇತಿಹಾಸ ಓದೋಕೆ ಆಗ್ಲಿಲ್ವಲ್ಲ ಅನ್ನೋ ನೋವು ಮಾತ್ರ ಇದ್ದೇ ಇದೆ… ಕೆಲವೊಮ್ಮೆ ನಾನೇ ಅಂದ್ಕೊಳ್ತಿನಿ ನಮಗೆ ವಂಚಿಸಿದ್ದೇ ನಾವು ಓದೋ ಇತಿಹಾಸ ಅಂತಾ.. ನಮ್ಮ ಶಾಲಾ-ಕಾಲೇಜುಗಳ ಪಠ್ಯ ಹಾಗಿದೆ.
ಬದಲಾವಣೆಗೆ ತುಡಿಯೋ ನಮ್ಮ ಯುವಜನ ಖಂಡಿತ ಈ ಪುಸ್ತಕ ಓದಲೇಬೇಕು… ಬದಲಾವಣೆಯೂ ಶುರುವಾಗುವುದೂ ನಮ್ಮಿಂದಲೇ ಅನ್ನೋ ಹಾಡಲ್ಲೇ ಹೋರಾಟಕ್ಕೆ ಸಿದ್ದವಾಗೋ ಸಂಗಾತಿಗಳಿಗೆ ಈ ಪುಸ್ತಕದ ಅನಿವಾರ್ಯತೆ ಇದೆ




Yes