ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊನೆಗೂ… ಸೀಟು ಸಿಗಲಿಲ್ಲ

ಮಂಜುನಾಥ ದಾಸನಪುರ

ಏಳನೇ ತರಗತಿಯಲ್ಲಿ ನಮ್ಮ ಶಾಲಾ ಶಿಕ್ಷಣ ಮಂಡಳಿಯು ಪ್ರವಾಸದ ಯೋಜನೆಯನ್ನು ಹಮ್ಮಿಕೊಂಡಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಯು ಕಡ್ಡಾಯವಾಗಿ ಬರಬೇಕೆಂದು ತಾಕೀತು ಮಾಡಿದ್ದರಿಂದ ನಮ್ಮ ತರಗತಿಯ ಟೀಚರ್ ನಮಗೆ ಆಜ್ಞೆ ಹೊರಡಿಸಿದ್ದರು. ಈ ವಿಷಯವನ್ನು ಅಮ್ಮನ ಬಳಿ ಹೇಗೆ ಹೇಳುವುದು ಎಂದು ಯೋಚಿಸುತ್ತಾ ಮನೆಯ ಕಡೆ ಹೆಜ್ಜೆ ಹಾಕಿದೆ.

ಅಮ್ಮ ಮನೆಯಲ್ಲಿ ಅಡುಗೆ ಮಾಡುತ್ತಿದ್ದಳು. ಚಳಿಗಾಲ ಆಗಿದ್ದರಿಂದ ಒಲೆಯ ಮುಂದೆ ಬೆಚ್ಚಗೆ ಅಮ್ಮನ ಸಮೀಪ ಹೋಗಿ ಕುಳಿತೆ. ಅಮ್ಮ`ಹೊಟ್ಟೆ ಹಸಿತೈತಾ’ ಎಂದಳು. ಇಲ್ಲವೆಂದು ತಲೆ ಆಡಿಸುತ್ತಾ ಬಾಯಿ ತೆರೆದೆ ‘ಸ್ಕೂಲಲ್ಲಿ ಟೂರ್ ಹೊಗ್ತಾರೆ, ನಾನು ಬರಬೇಕಾಂತ ಟೀಚರ್ ಹೇಳಿದ್ದಾರೆ’ ಅಂದೆ. ಅಣ್ಣ(ಅಪ್ಪ) ಬರಲಿ ಕೇಳೊಣಾ ಎಂದು ಒಲೆಯನ್ನು ಉರಿಸುತ್ತಾ…ಕೆಮ್ಮುತ್ತಾ ಇದ್ದಳು. ನಾನು ಬೆಳಗ್ಗೆ ಶಾಲೆಯಲ್ಲಿ ನಡೆದ ಘಟನೆಗಳನ್ನು ನೆನೆಯುತ್ತಾ ಅಮ್ಮನ ಮಡಿಲಲ್ಲಿ ಉರಿಯುವ ಒಲೆಯನ್ನು ನೋಡುತ್ತಾ ಕುಳಿತೆ.

ಅಮ್ಮ ನನ್ನ ಮೈ ಕೊಡುವುತ್ತಾ…ಎದ್ದೇಳು ಊಟ ಮಾಡು ಎಂದು ಎಬ್ಬಿಸಿದಳು. ನಾನು ಕಣ್ಣು ಬಿಟ್ಟು ನೋಡಿದರೆ ತುಂಬಾ ಹೊತ್ತಾಗಿತ್ತು. ಅರೆ! ನಾನು ಯಾವಾಗ ಮಲಗಿದೆ…ಸಂಜೆ ಒಲೆಯ ಪಕ್ಕದಲ್ಲಿ ಕುಳಿತ್ತಿದ್ದನ್ನು ಜ್ಞಾಪಿಸಿಕೊಳ್ಳುತ್ತಾ ಅರೆ ಕಣ್ಣಿನಲ್ಲಿಯೇ ಬಚ್ಚಲ ಕಡೆಗೆ ನಡೆದು ಕೈ ತೊಳೆದುಕೊಂಡೆ. ಅಷ್ಟರಲ್ಲಾಗಲೇ ಅಣ್ಣ ಊಟ ಮಾಡುತ್ತಿದ್ದರು. ನಾನು ಪಕ್ಕದಲ್ಲಿ ಕುಳಿತೆ. ಅಮ್ಮ ನನಗೆ ಊಟ ಬಡಿಸಿ ಪಕ್ಕದಲ್ಲಿಯೇ ಕುಳಿತರು. ನಾನು ಅಮ್ಮನ ಮುಖವನ್ನು ನೋಡಿದೆ. ಇವರ ಸ್ಕೂಲಲ್ಲಿ ಟೂರ್ ಹೊಗ್ತಾರಂತೆ, ಇವನೂ ಬರಬೇಕಾಂತ ಇವರ ಟೀಚರ್ ಹೇಳಿದ್ದಾರಂತೆ ಅಂದಳು. ಹೂಂ ‘ದೇವಣ್ಣರ ಪ್ರಕಾಶನೂ ಹೊಗ್ತಾವ್ನಂತೆ ಅವರಪ್ಪ ಹೇಳ್ತಾ ಇದ್ರು’ ಎಂದು ಹೇಳುತ್ತಾ..`ಇವನಿಗೆ ಮೊನ್ನೆ ಫೀಜು ಕಟ್ಟಾಕ್ಕೆ ಸಾಲ ಸೀನಪ್ಪನ ಅತ್ರ ಸಾಲ ಮಾಡಿದ್ದೆ ಇನ್ನೂ ತೀರಿಸಲಿಲ್ಲ. ಮತ್ತೆ ಅವನ ಅತ್ರ ಹ್ಯಾಂಗೆ ಕೇಳೊದು’ ಎಂದೇಳುತ್ತಾ ಊಟ ಮುಗಿಸಿ ಹೊರಗಡೆ ಹೋದರು. ನಾನು ಅಮ್ಮನಿಗೆ ‘ನಾನು ಹೋಗಿಲ್ಲ ಅಂದ್ರೆ ಟೀಚರ್ ಹೊಡೀತ್ತಾರೆ’ಅಂದೆ. ’ಏನಾದರೂ ಮಾಡಾನ ಸುಮ್ನೆ ಊಟ ಮಾಡು’ ಎಂದು ಮುಖ ಸಿಂಡರಿಸಿಕೊಂಡರು.

ಬೆಳಗ್ಗೆ ಸ್ಕೂಲಿಗೆ ಹೋಗುವ ದಾರಿಯಲ್ಲಿ ಪ್ರಕಾಶ ಸಿಕ್ಕಿದ. ‘ಟೂರ್ಗೆ ಕಾಸ್ ತಂದಾ’ ಅಂದೆ. ತಂದಿದ್ದೀನಿ ನೀನು ಎಂದೇಳುತ್ತಾ ನನ್ನ ಮುಖವನ್ನು ನೋಡಿದ. ನನ್ನ ಮುಖವನ್ನು ನೋಡಿಯೇ ಅವನು ಸುಮ್ಮನಾದ. ಟೀಚರ್ ಮುಖವನ್ನು ನೆನೆಯುತ್ತಲೇ 3 ಕಿ ಮೀ ನಡೆದಿದ್ದೇ ಗೊತ್ತಾಗಲಿಲ್ಲ.

ತರಗತಿಯಲ್ಲಿ ಟೂರಿನ ವಿಷಯದ ಬಗ್ಗೆ ಗುಸು ಗುಸು ಮಾತು ಶುರುವಾಗಿತ್ತು. ಅವನು ತಂದಾವ್ನ..ಇವನು ತಂದಾವ್ನಾ ಎಂದು ಗುರುತು ಹಿಡಿಯುವು ಪ್ರಕ್ರಿಯೆ ನಮ್ಮಲ್ಲೆ ನಡೆದಿತ್ತು. ಮಾತು ಸ್ವಲ್ಪ ಜೋರಾಗಿತ್ತು ದಿಢೀರನೆ ಟೀಚರ್ ಬಂದಿದ್ದನ್ನು ಕಂಡು ಎಲ್ಲಾ ಹುಡುಗರು ತಮ್ಮ ಬಾಯಿಗಳನ್ನು ಹಾಗೆಯೇ ಬಂದ್ ಮಾಡಿದರು. ಟೀಚರ್ ಕೋಲನ್ನು ಹಿಡಿದುಕೊಂಡು ‘ಹೊಮ್ ವರ್ಕ್ ಯಾರ್ ಮಾಡಿಲ್ಲ ಏದ್ದೇಳಿ’ ಅಂದರು. ಭಯದಿಂದ ಎದ್ದು ನಿಂತುಕೊಂಡೆ. ಟೀಚರ್ ಎಲ್ಲಾರಿಗೂ ಮನಸ್ಸಿಗೆ ಬಂದ ಹಾಗೆ ಬಾರಿಸಿದರು. ಇಡೀ ತರಿಗತಿಯೇ ‘ಅಳು, ಗೊಳಾಟದಿಂದ ತುಂಬಿತು’. ನಮ್ಮ ತರಗತಿಯ ನಿಯಮದ ಪ್ರಕಾರ ಯಾರೂ ಹೊಮ್ ವರ್ಕ್ ಮಾಡುವುದಿಲ್ಲವೊ ಅವರು ಸಂಜೆಯವರೆಗೆ ತರಗತಿಯ ಮೂಲೆಯಲ್ಲಿ ನಿಂತುಕೊಳ್ಳಬೇಕಾಗಿತ್ತು ಹಾಗಾಗಿ ಕ್ಲಾಸಿನ ಒಂದು ಮೂಲೆಯಲ್ಲಿ ನಿಂತುಕೊಂಡೆನು.

ಟೀಚರ್ ಎಲ್ಲಾರನ್ನು ಹೊಡೆದ ನಂತರ ಪ್ರವಾಸದ ಬಗ್ಗೆ ಮಾತನಾಡಿದರು. ‘ಯಾರು ಯಾರು ದುಡ್ಡು ತಂದಿದ್ದೀರಾ’ ಎಂದು ಕೇಳಿದರು. ಹೆಚ್ಚಿನ ವಿದ್ಯಾರ್ಥಿಗಳು ದುಡ್ಡನ್ನು ತಂದಿದ್ದರು. ಹಣ ತಂದವರ ಹೆಸರನ್ನು ಬರೆದುಕೊಂಡು ಉಳಿದ ವಿದ್ಯಾರ್ಥಿಗಳು ಎದ್ದು ನಿಲ್ಲಿ ಎಂದರು. ನಾನು ಮೊದಲೆ ನಿಂತಿದ್ದರಿಂದ ನನ್ನ ಬಿಟ್ಟು ಉಳಿದ 9 ವಿದ್ಯಾರ್ಥಿಗಳು ಎದ್ದು ನಿಂತರು. ಒಬ್ಬರನ್ನೇ ವಿಚಾರಿಸಿಕೊಂಡು ನನ್ನ ಬಳಿ ಬಂದರು. ನಾನು `ಮನೆಯಲ್ಲಿ ಕೇಳ್ದೆ ಏನೂ ಹೇಳಲಿಲ್ಲ’ ಎಂದೇಳುವಷ್ಟರಲ್ಲಿ ಮುಖವನ್ನು ಸಿಂಡರಿಸಿಕೊಂಡು ‘ನಿನ್ನದು ಏಳು ವರ್ಷದಿಂದ ಇದೇ ಆಗೋಯ್ತು ತಿಂಗಳಿಗೊಮ್ಮೆ ಸರಿಯಾಗಿ ಫೀಜು ಕಟ್ಟಲ್ಲ, ಈಗ ಇದಕ್ಕೂ ಬರಲ್ಲ ಅಂತಿಯಾ, ನಾಳೆ ನಿಮ್ಮಮ್ಮನ್ನ ಕರೆದುಕೊಂಡು ಬಾ’ ಎಂದು ಹೇಳಿದರು.

ಸಂಜೆ ಶಾಲೆಯಿಂದ ಮನೆಗೆ ಬರಬೇಕಾದರೆ ಅದೇ ಚಿಂತೆ. ಇವತ್ತೇನೆ ಆಗಲಿ ದುಡ್ಡನ್ನು ಪಡಿಯಲೇಬೇಕೆಂದು ನಿರ್ಧರಿಸಿ ಮನೆಯ ಕಡೆಗೆ ಜೋರಾಗಿ ಹೆಜ್ಜೆ ಹಾಕಿದೆ. ಮನೆಯ ಬೀದಿಗೆ ಬರುವಷ್ಟರಲ್ಲಿ ನಮ್ಮ ಸ್ನೇಹಿತರು ಗೋಲಿಗಳನ್ನು ಆಡುತ್ತಿದ್ದರು. ನನ್ನನ್ನು ಆಡಲ್ಲಿಕ್ಕೆ ಕರೆದರು. ನನಗೆ ಬೇಜಾರು ಆಗಿದ್ದರಿಂದ ಅವರ ಮಾತಿಗೆ ವಾಲದೆ ಸೀದ ಮನೆಗೆ ನುಗ್ಗಿದೆ.

ಮನೆಯಲ್ಲಿ ಯಾರು ಇರಲಿಲ್ಲ. ಬ್ಯಾಗನ್ನು ಬಿಸಾಕಿ ಸೀದ ಮೂಲೆ ಮನೆಗೆ ಹೊದೆ. ಮಡಿಕೆಗಳ ಮೇಲಿನ ಪ್ಲೇಟುಗಳನ್ನು ತೆಗೆದು ನೊಡಿದೆ. ತಂಗ್ಳಿಟ್ಟು ಇತ್ತು. ಅನ್ನದ ಮಡಿಕೆಯತ್ತ ನಿರೀಕ್ಷೆಯಿಂದಲೇ ನೋಡಿದೆ. ಒಂದು ತುತ್ತು ಆಗುವಷ್ಟು ಅನ್ನ ಇತ್ತು. ನನಗೆ ಕೋಪ ಬೇಜಾರು ಎರಡು ಆಯ್ತು. ಇಟ್ಟನ್ನೇ ತಟ್ಟೆಗೆ ಹಾಕಿಕೊಂಡು ಇನ್ನೇನು ಮೂಲೆಯಿಂದ ಹೊರಡಬೇಕು, ಅಷ್ಟರಲ್ಲಿ ಒಂದು ತುತ್ತು ಅನ್ನ ಇರುವುದು ನೆನೆಪಿಗೆ ಬಂದಿದ್ದರಿಂದ ಅದನ್ನು ಯಾಕೆ ಬಿಡಬೇಕೆಂದು ಮಡಿಕೆಗೆ ಕೈ ಹಾಕಿ ಗೋಸಿ, ಆ ತುತ್ತು ಅನ್ನವನ್ನು ಒಮ್ಮೆಲೆ ಬಾಯಿಗೆ ಆಕಿಕೊಂಡು ಇಟ್ಟಿನ ತಟ್ಟೆ ಹಿಡಿದು ಮನೆಯ ಹೊರಕ್ಕೆ ಬಂದೆ. ಅಷ್ಟರಲ್ಲಿ ಅಮ್ಮ ಹಸುವನ್ನು ಹಿಡಿದುಕೊಂಡು ಬಂದರು. ‘ಯಾವಾಗ ಬಂದೆ ಅಂದರು’ ನನಗೆ ಕೋಪ ಬಂದಿದ್ದರಿಂದ ಏನು ಮಾತನಾಡಲಿಲ್ಲ. ಸುಮ್ಮನೆ ಊಟ ಮುಗಿಸಿದೆ. ಅಮ್ಮ ಯಾಕೋ ಹಾಂಗಿದ್ದೀಯಾ ಅಂದರು, ಇದೇ ಸಮಯವೆಂದು ‘ಟೀಚರ್ ಬೆಳೆಗ್ಗೆ ಟೂರ್ ಹೊಗಾಕ್ಕೆ ದುಡ್ಡು ತಂದಿಲ್ಲ ಅಂತ ಬೈದ್ರೂ ಅಂದೆ’ ಆಗ ಅಮ್ಮ ‘ ಆ ಸೀನಪ್ಪನ ಅತ್ರ ಕೇಳಿದ್ದೀನಿ, ಅಣ್ಣ ಬರ್ಲಿ ಅವರ ಮನೆ ಅತ್ರ ಕಳಿಸ್ತಿನಿ’ ಅಂದರು. ನನಗೆ ಸ್ವಲ್ಪ ಸಮಾದಾನ ಆಯ್ತು. ಯಾವಾಗ ಅಣ್ಣ ಬರ್ತ್ತಾರೊ ಅಂತ ಕಾಯ್ತಾ ಇದ್ದೆ. ಎಷ್ಟು ಹೊತ್ತಾದರೂ ಅಣ್ಣ ಬರಲಿಲ್ಲ. ಅಮ್ಮ ಅಡಿಗೆ ಮಾಡಿ ನನಗೆ ಬಲವಂತ ಮಾಡಿ ಊಟ ಬಡಿಸಿದಳು. ಹಾಸಿಗೆ ಮೇಲೆ ನಿದ್ದೆ ಮಾಡದೆ ಹಾಗೆಯೇ ಒದ್ದಾಡುತ್ತಾ ನಿದ್ದೆಗೆ ಜಾರಿದೆ. ಬೆಳಗ್ಗೆ ಏಳುವಷ್ಟರಲ್ಲಿ ಅಣ್ಣ ದ್ರಾಕ್ಷಿ ಕಟ್ಟು ಮಾಡಲಿಕ್ಕೆ ಹೊರಟು ಹೋಗಿದ್ದರು.

ಟೂರ್ ಹೊಗಲಿಕ್ಕೆ ಇವತ್ತೇನಾದರೂ ದುಡ್ಡು ಕೊಟ್ಟಿಲ್ಲ ಅಂದ್ರೆ, ಶಾಲೆಗೆ ಹೊಗುವುದು ಬೇಡವೆಂದು ಚಿಂತಿಸುತ್ತಾ… ಕಕ್ಕಸ್ಸಿಗೆ ತೋಟದ ಕಡೆ ಹೊದೆ. ತೋಟದ ದಾರಿಯಲ್ಲಿ ದೇವಣ್ಣ ಮನೆಯ ಜೀತಗಾರನ ಹುಡುಗ ಮಾದೇಶ ಯಾವುದೊ ಹಾಡನ್ನು ಹೇಳುತ್ತಾ ನನಗೆ ಎದುರಾದ. ಅವನನ್ನು ನನೆದು, ಇವನೇ ಅದೃಷ್ಟವಂತ! ಇವನಿಗೆ ಯಾರ ಭಯವೂ ಇಲ್ಲ. ನೋಡು ಎಷ್ಟ ಚೆನ್ನಾಗಿ ಹಾಡನ್ನು ಹೇಳುತ್ತಾ ಖುಷಿಯಾಗಿದ್ದಾನೆ. ಆದರೆ, ನಾನು ಪ್ರತಿದಿನ ಟೀಚರ್ ಕೈಯಲ್ಲಿ ಹೊಡೆಸಿಕೊಳ್ಳಬೇಕು, ಬೈಸಿಕೊಳ್ಳಬೇಕು. ಮಾತನಾಡೊಹಾಗಿಲ್ಲ, ಸುಮ್ಮನೆ ಇರೊ ಹಾಗಿಲ್ಲ. ಯಾಕೆ ಹೀಗೆ ಎಂದು ನೆನೆಯುತ್ತಾ ಕಕ್ಕಸ್ಸಿಗೆ ಹೊಗಿ ಮನೆಯ ಕಡೆಗೆ ಬಂದೆ. ಅಷ್ಟರಲ್ಲಿ ಅಮ್ಮ ‘ಯಾಕೋ ಸ್ಕೂಲಿಗೆ ಸಮಯ ಆಗಿಲ್ಲ’ ಅಂದರು. ಟೂರ್ಗೆ ದುಡ್ಡು ಕೊಡೋವರೆಗೂ ನಾನು ಶಾಲೆಗೆ ಹೊಗಲ್ಲ ಅಂದೆ. ‘ಅಣ್ಣಾ ನನ್ನತ್ರ ದುಡ್ಡು ಕೊಟ್ಟಾಂವ್ನೆ ಬೇಗ ರೆಡಿ ಆಗು. ರಾತ್ರಿ ಸೀನಪ್ಪ ದಾರಿಯಲ್ಲಿ ಸಿಕ್ಕಿದ್ದನಂತೆ, ಹಾಂಗೇ ಅವರ ಮನೆಗೆ ಕರೆದುಕೊಂಡು ಹೋದ್ನಂತೆ. ಸೀನಪ್ಪನ ಅತ್ತಿರನೇ ದುಡ್ಡು ತಂದವ್ನೆ’ ಅಂದರು. ಟೂರಿನ ವಿಷಯಕ್ಕೆ ಟೀಚರ್ ಬಳಿ ಬೈಸಿ ಕೊಳ್ಳುವುದು ತಪ್ಪುತ್ತದೆ. ಅದರೆ, ಹೊಂವರ್ಕ್ ಬರೆಯದಿರುವುದಕ್ಕೆ ಇವತ್ತು ಏಟನ್ನು ತಿನ್ನಬೇಕಲ್ಲಾ ಥೂ ಯಾವನಿಗೆ ಬೇಕು ಈ ಸ್ಕೂಲ್ ಎಂದು ಮನಸ್ಸಿನಲ್ಲಿಯೇ ಸ್ಕೂಲನ್ನು ಬೈಯುತ್ತಾ ರೆಡಿಯಾದೆ.

ಜೀವನದ ಮೊದಲ ಪ್ರವಾಸ.

ನನ್ನ ಜೀವನದಲ್ಲಿ ನನ್ನೂರು, ಶಾಲೆ ಹಾಗೂ ಅಜ್ಜಿಯ ಊರನ್ನು ಹೊರತು ಪಡಿಸಿ ಮತ್ತೊಂದು ಊರನ್ನು ನೋಡಿಲ್ಲ. ಟೂರ್ ಅಂದರೇ ಏನು ಎಂಬ ಎನ್ನುವ ಕಲ್ಪನೆಯೇ ನನಗಿರಲ್ಲಿಲ್ಲ. ಏಲ್ಲೆಲ್ಲಿಗೆ ಹೋಗುತ್ತಾರೆ ಎನ್ನುವುದೂ ನನಗೆ ತಿಳಿದಿರಲ್ಲಿಲ್ಲ.

ನಮ್ಮೂರಿನಿಂದ ನಾವು ಟೂರಿಗೆ ಹೊಗುತ್ತಿರುವುದು ದೊಡ್ಡ ವಿಷಯವೇ ಆಗಿತ್ತು. ನನಗೆ ನಾನು ಬಹಳ ದೂರ ಹೊಗುತ್ತಿದ್ದೇನೆ. ಅಲ್ಲಿ ಇಲ್ಲಿರುವುದಕ್ಕಿಂತ ಬೇರೆ ಬೇರೆ ವಿಶೇಷತೆಗಳು ಇರಬಹುದೆಂದು ನೆನೆಸಿಕೊಳ್ಳುತ್ತಾ ಭಯ ಮತ್ತು ಸಂತೋಷ ಎರಡನ್ನೂ ಅನುಭವಿಸುತ್ತಿದ್ದೆ.

. ಈ ಪ್ರವಾಸಕ್ಕೆ ನಮ್ಮೂರಿನಿಂದ ನನ್ನ ತರಗತಿಯವರೇ ಆದ ನನ್ನ ಚಿಕ್ಕಪ್ಪನ ಮಗ ಸೋಮ ಹಾಗೂ ಪ್ರಕಾಶ ಬರುತ್ತಿದ್ದದ್ದು, ನನಗೆ ಒಂದು ರೀತಿಯ ಧೈರ್ಯ ತಂದು ಕೊಟ್ಟಿತ್ತು. ಪ್ರವಾಸವು ಬೆಳಗ್ಗೆ 5ಗಂಟೆಗೆ ಶಾಲೆಯ ಆವರಣದಿಂದ ಹೊರಡುವುದೆಂದು ನಿರ್ಧರಿಸಲಾಯಿತು. ಶಾಲಾ ಮಂಡಳಿಯ ಈ ಕ್ರಮ ನಮಗೆ ಚಿಂತೆಗೆ ಇಡುಮಾಡಿತು. ನಾವು ಪ್ರತಿದಿನ ಶಾಲೆಗೆ ನಡೆದುಕೊಂಡೇ ಬರುತ್ತಿದ್ದದ್ದು. ಆದರೆ, ಬೆಳಗ್ಗೆ 5 ಗಂಟೆಗೆ ಕತ್ತಲು ಇರುತ್ತದೆ. ಹೇಗೆ ಬರುವುದು ಎಂದು ಪೀಕಲಾಟವಾಯಿತು. ಏನು ಮಾಡುವುದೆಂದು ತೊಚದೆ, ನಮ್ಮೂರಿನ ಪ್ರಕಾಶ ಟೀಚರ್ ಹತ್ತಿರ ನಮ್ಮ ಸಮಸ್ಯೆಯನ್ನು ಹೇಳಿದ. ಟೀಚರ್ ‘ನೀವು ರಾತ್ರಿನೇ ಇಲ್ಲಿಗೆ ಬಂದು ಉಳಿಯಿರಿ, ಪ್ರವಾಸದ ವೇಳೆ ನಮಗೆ ಅಡುಗೆ ಮಾಡುವವರು ರಾತ್ರಿಯೇ ಬಂದು ಕೆಲವೊಂದು ತಿಂಡಿಗಳನ್ನು ಮಾಡುತ್ತಿರುತ್ತಾರೆ. ಅವರ ಜೊತೆ ಇರಿ ಎಂದರು. ಅದೇ ಸರಿಯಾದ ಕ್ರಮವೆಂದು ಅಂದು ಸಂಜೆಯೇ ರೆಡಿಯಾದೆ. ಈ ವರ್ಷ ಯುಗಾದಿಗೆ ಹೊಲಿಸಿದ್ದ ಬಟ್ಟೆ ಜೊತೆಗೆ ಒಂದೆರಡು ಬಟ್ಟೆಗಳನ್ನು ಒಂದು ಬ್ಯಾಗಿಗೆ ತುರಿಕಿಕೊಂಡು ರೆಡಿಯಾದೆ. ಅಣ್ಣ ಶಾಲೆಯ ಅತ್ತಿರ ಕರೆದುಕೊಂಡು ಬಂದರು. ಅಷ್ಟರಲ್ಲಾಗಲೇ ಸೋಮ ಹಾಗೂ ಪ್ರಕಾಶ ಬಂದಿದ್ದರು.

ಅಣ್ಣ, ಪ್ರಕಾಶನ ಅಪ್ಪ, ನಮ್ಮ ಚಿಕ್ಕಪ್ಪ ಮೂವರೂ ಶಾಲಾ ಆಡಳಿತ ಕಚೇರಿಗೆ ಹೋಗಿ ಬಂದರು. ನಂತರ ನಮಗೆ ತಿಂಡಿಕೊಡಿಸಲು ಅಂಗಡಿಗೆ ಕರೆದುಕೊಂಡು ಹೋದರು. ಮಾರ್ಗ ಮಧ್ಯದಲ್ಲಿ ನಮಗೆ ಅವರು ಉಪದೇಶಗಳನ್ನು ಮಾಡಿದರು. ಮೊದಲಿಗೆ ಪ್ರಕಾಶನ ಅಪ್ಪ ‘ಇವತ್ತಿನ ರಾತ್ರಿ ನಿಮ್ಮ ಸಾರ್ಗಳು ಇಲ್ಲಿಯೇ ಉಳಿದು ಕೊಳುತ್ತಾರಂತೆ, ಆಗಾಗಿ ನೀವು ಅವರ ಜೊತೆ ಇರಿ. ನೀವು ಮೂವರು ಯಾವಾಗಲೂ ಜೊತೆಯಾಗಿಯೇ ಇರಬೇಕು. ನೀರಿಗೆ ಇಳಿಯ ಬೇಡಿ’ ಎಂದು ಹೇಳಿದರು. ಅಷ್ಟರಲ್ಲಿಯೇ ಬೇಕರಿ ಬಂತು, ಅಣ್ಣ ನನಗೆ ಮಿಚ್ಚರ್, ಬಿಸ್ಕೆಟ್, ರಸ್ಕ್ ಇನ್ನೂ ಹಲವು ತಿಂಡಿಗಳನ್ನು ಕೊಡಿಸಿದರು. ಇದನ್ನೆಲ್ಲಾ ನೋಡಿ ನನಗೆ ಬಹಳ ಖುಷಿಯಾಯಿತು. ಬೇರೆ ಸಮಯದಲ್ಲಿ ಈ ತರ ತಿಂಡಿ ಸಿಗುವುದಿಲ್ಲ. ನಾವೇನೊ ಬಹಳ ದೂರಕ್ಕೆ ಹೋಗುತ್ತಿರಬೇಕು. ಇಲ್ಲದಿದ್ದರೆ, ಇವರೇಕೆ ಯಾವತ್ತೂ ಇಲ್ಲದೆ ಇವತ್ತು ನಮ್ಮ ಬಗ್ಗೆ ಇಷ್ಟೊಂದು ಪ್ರೀತಿ ತೊರಿಸುತ್ತಿದ್ದಾರೆ ಎಂದೆನಿಸಿತು. ಮನೆಯಲ್ಲಿ ಅಣ್ಣ ನನ್ನ ಜೊತೆ ಈ ರೀತಿಯ ಆತ್ಮಿಯತೆ ಇರುವುದಿಲ್ಲವಲ್ಲ! ಯಾವಾಗಲೂ ಇದೇ ರೀತಿಯಲ್ಲಿ ಪ್ರೀತಿ ತೋರಿಸಿ, ಪ್ರತಿದಿನ ಏನಾದರೂ ತಿಂಡಿ ಕೊಡಿಸಿದರೆ ಎಷ್ಟೊಂದು ಚೆನ್ನಾಗಿರುತ್ತದೆ ಅಲ್ವಾ ಎಂದು ಮನದಲ್ಲಿಯೇ ನೆನೆದು ಶಾಲೆಯ ಆಡಳಿತ ಕಚೇರಿಗೆ ಹೊದೆವು. ಅಲ್ಲಿ ನಮ್ಮ ಹೆಡ್ಮಾಸ್ಟರ್ ಕುಳಿತ್ತಿದ್ದರು. ನನಗೆ ಅವರನ್ನು ನೋಡಿ ಭಯವಾಯಿತು. ನಾನು ಅಣ್ಣನ ಬೆನ್ನ ಹಿಂದಿಯೇ ನಡೆದೆ. ಅಣ್ಣ ಹೆಡ್ಮಾಸ್ಟರ್ಗೆ ನಮಸ್ಕಾರ್ ಆಕಿದರು. ‘ಓ..!ಇವರೇನಾ’ ಎಂದೇಳುತ್ತಾ, ಅಣ್ಣನನ್ನು ಉದ್ದೇಶಿಸಿ ‘ನಿವೇನೂ ಭಯ ಪಡಬೇಡಿ, ಇವರ ಜೊತೆ ನಾವೆಲ್ಲಾ ಇಲ್ಲೆ ಇರ್ತಿವಿ. ಟೂರ್ಗೆ ಶಾಲೆಯ ಎಲ್ಲಾ ಟೀಚರ್ಗಳು ಬರುವುದರಿಂದ ಎಲ್ಲಾ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ನೀವಿನ್ನು ಹೊರಡಿ ಎಂದರು. ಅಣ್ಣ ನನ್ನ ಕಡೆ ತಿರುಗಿ ಹುಷಾರು…! ಬರ್ಲಾ ಎಂದು ಕೇಳಿದರು. ನಾನು ಸುಮ್ಮನೆ ತಲೆ ಆಡಿಸಿದೆ. ಅಷ್ಟೊತ್ತಿಗಾಗಲೇ ರಾತ್ರಿ 7 ಗಂಟೆ ಆಗಿತ್ತು. ಪ್ರಕಾಶ ‘ಬರ್ರೊ ಫೀಲ್ಡಲ್ಲಿ ಸುತ್ತಾಡಿಕೊಂಡು ಬರೊಣ’ ಅಂದ. ಸರಿ ಎಂದು ನಾನು ಮತ್ತು ಸೋಮ ಅವನ ಜೊತೆಗೆ ಹೊದೆವು.

ನಾನು ಪ್ರಕಾಶನನ್ನು  ‘ಟೂರ್ ಬಸ್ ಹೇಗಿರುತ್ತೊ! ಅಂದೆ. ಅವನು, ಬಸ್ಸ್ನಲ್ಲಿ ಟಿವಿ ಇರುತ್ತೆ, ಸೀಟುಗಳು ಮೆತ್ತಗೆ ಇರುತ್ತೆ, ಆರಾಮವಾಗಿ ಮಲಗಬಹದು’ ಅಂದ. ನನಗೆ ತುಂಬಾ ಖುಷಿ ಆಯ್ತು. ಜೀವನದಲ್ಲಿ ಮೊದಲ ಬಾರಿಗೆ ಇಂಥ ಬಸ್ ನಲ್ಲಿ ಹೋಗುತ್ತಿರುವುದಕ್ಕೆ ಖುಷಿ ಆಯ್ತು.

ನಿಂತುಕೊಂಡು ಪ್ರವಾಸ ಮಾಡಿದ್ದು.

ರಾತ್ರಿ ನಮ್ಮ ಶಾಲೆಯಲ್ಲಿ ಮಲಗಿದೆವು. ರಾತ್ರಿಯಲ್ಲಾ ಆ ಬಸ್ಸಿನಲ್ಲಿ, ಮೆತ್ತಗೆ ಇರುವ ಸೀಟ್ನಲ್ಲಿ ಕುಳಿತು ಹೋಗುತ್ತಿರುವುದನ್ನೇ ಜ್ಞಾಪಿಸಿಕೊಳ್ಳುತ್ತಿದ್ದೆ… ಮುಂಜಾನೆ ನಾಲ್ಕಕ್ಕೆ ನಾನು, ಸೋಮ, ಪ್ರಕಾಶ ಎದ್ದೇವು. ಮುಖತೊಳೆದು ಬಸ್ಸನ್ನೇ ಎದುರು ನೋಡುತ್ತಾ ನಿಂತೆವು. 5 ಗಂಟೆಗೆ ಬಸ್ಸ್ ಬಂತು. ಅಷ್ಟೊತ್ತಿಗೆ ನಮ್ಮ ಮೂವರನ್ನು ಬಿಟ್ಟರೆ ಇನ್ನೂ ಯಾವ ವಿದ್ಯಾರ್ಥಿಗಳು ಬಂದಿರಲಿಲ್ಲ. ಟೂರ್ ಬಸ್ಸಿನ ಉಸ್ತುವರಿಯನ್ನು ವಹಿಸಿಕೊಂಡಿದ್ದ ರಮೇಶ್ ಸಾರ್ ಆ ಬಸ್ಸಿನ ಜೊತೆಯಲ್ಲಿಯೇ ಬಂದಿದ್ದರು. ನಮ್ಮನ್ನು ಕುರಿತು ‘ನೊಡ್ರೊ ಬಸ್ಸು ಹೇಗಿದಿಯಂತ’ ಅಂದರು. ನಾವು ಬಸ್ಸನ್ನು ಹತ್ತಿ ಪ್ರತೀ ಸೀಟನ್ನು ಮುಟ್ಟಿ ಮುಟ್ಟಿ ನೋಡುದೇವು. ತುಂಬಾ ಖುಷಿಯಾಯಿತು. ಯಾವಾಗ ಈ ಬಸ್ಸಿನಲ್ಲಿ ಹೊರಡುತ್ತೇನೊ ಎಂದೆನಿಸುತ್ತಿತ್ತು.

ಬೆಳಗೆ 6 ಗಂಟೆ ಆಗುತ್ತಿದ್ದಂತ್ತೆ ಎಲ್ಲಾ ವಿದ್ಯಾರ್ಥಿಗಳು ಬಂದರು. ಯಾರು ಮೊದಲು ದುಡ್ಡು ಕೊಟ್ಟರೋ ಆ ಪ್ರಕಾರವಾಗಿ ಬಸ್ಸಿನ ಒಳಗೆ ಬಿಟ್ಟರು. ನಾನು ದುಡ್ಡನ್ನು ಕೊನೆಯಲ್ಲಿ ಕೊಟ್ಟಿದ್ದರಿಂದ ನನಗೆ ಕೊನೆಗೆ ಬಸ್ಸಿನ ಒಳಗೆ ಹೋದ ತಕ್ಷಣ ಆಶ್ಚರ್ಯ ಚಕಿತನಾದೆ. ನಾನು ರಾತ್ರಿಯಲ್ಲಾ ಕಂಡ ಕನಸು ನುಚ್ಚು ನೂರಾಗಿತ್ತು. ಬಸ್ಸಿನ ಸೀಟುಗೆಳೆಲ್ಲಾ ಭರ್ತಿಯಾಗಿದ್ದವು.

ಮೊದಲೇ ನಾನು ಭಯಸ್ತನಾದ್ದರಿಂದ ಬಸ್ಸಿನ ಕೊನೆಯ ಸೀಟಿನ ಬಳಿ ನಿಂತಿದ್ದೆ. ಆಗ ರಮೇಶ್ ಸಾರ್, ಸಣ್ಣಕ್ಕಿದ್ದ ಇಬ್ಬರು ಹುಡುಗರ ಮಧ್ಯೆದಲ್ಲಿ ಕುಳಿಸಿದರು. ಆದರೆ, ಅವರು ನಮ್ಮ ತರಗತಿಯಲ್ಲಿ ತಂಬಾ ಚೆನ್ನಾಗಿ ಓದ ಬಲ್ಲವರಾಗಿದ್ದರು. ಆಗಾಗಿ, ನನಗೆ ಅವರ ಬಳಿ ಕುಳಿತುಕೊಳ್ಳುವುದಕ್ಕೆ ಭಯವಾಗುತ್ತಿತ್ತು. ಅವರು ಸಹ ನನ್ನನ್ನು ಬೇಸರದಿಂದಲೇ ಸ್ವೀಕರಿಸಿದರು. ಬಸ್ಸ್ ಸ್ವಲ್ಪ ದೂರ ಕ್ರಮಿಸಿದಾಗ ಆ ಹುಡುಗರು ನನಗೆ ಕಿರುಕುಳ ಕೊಡುವುದಕ್ಕೆ ಪ್ರರಂಭಿಸಿದರು. ಹಾಗಾಗಿ ನಾನು ನಿಂತುಕೊಂಡೆ. ಸ್ವಲ್ಪ ಸಮಯದ ನಂತರ ರಮೇಶ್ ಸಾರ್ ನನ್ನನ್ನು ಗಮಿನಿಸಿ, ‘ಯಾಕೋ ನಿಂತಿದ್ದೀಯಾ ಅಂದರು’. ಪರವಾಗಿಲ್ಲ ಸಾರ್ ನಿಂತುಕೊಳ್ಳುತ್ತೇನೆ ಎಂದೆ. ಅವರು ಏನು ಮಾತನಾಡಲಿಲ್ಲ. ನನಗೆ ತುಂಬಾ ನಿರಾಸೆ ಆಯಿತು….

‍ಲೇಖಕರು G

22 November, 2012

4 Comments

  1. ಶಿವು ಮೋರಿಗೇರಿ

    ಕೆಲವು ಮೂಲಭೂತ ತಪ್ಪುಗಳಿಗೆ ಹೆತ್ತವರಾಗಲೀ, ಈ ಸತ್ವ ರಹಿತ ಸಮಾಜವಾಗಲಿ,ಉತ್ತರ ಕೊಡುವ ಗೋಜಿಗೇ ಹೋಗೊಲ್ಲ. ನಿನ್ನ ಪ್ರವಾಸದ ಕಥೆಯೊಳಗೆ ಈ ಸಮಾಜದ ಅಸಮಾನತೆಯ ಮೆತ್ತನೆಯ ಸೀಟನ್ನು ನಮಗೆ ಪರಿಚಯಿಸಿದ್ದಕ್ಕೆ ನಿಂಗೆ ಧನ್ಯವಾದಗಳು ಮಂಜು.ಅಂದು ಬಸ್ಸಲ್ಲಿ ಆ ಮೆತ್ತನೆಯ ಸೀಟಲ್ಲಿ ಕುಳಿತವರೆಲ್ಲರೂ ಇಂದು ಜೀವನದ ಪಯಣದಲ್ಲಿ ಅಷ್ಟೇ ಪುಷ್ಟಿಕರಣದಿಂದ ಕುಳಿತಿದ್ದಾರಾ ? ಅಥವಾ ದಿಕ್ಕು ಕಾಣದೆ ಒಂಟಿ ಕಾಲಲ್ಲಿ ನಿಂತಿದ್ದಾರಾ ? ಒಮ್ಮೆ ಪರೀಕ್ಷಿಸಿಕೊಂಡು ಅಂದು ನಿಂತ ಸೇಡನ್ನು ಇಂದಿನ ಜೀವನದ ಬಸ್ಸ್ ನಲ್ಲಿ ಗೌರವಯುತ ಮೆತ್ತನೆಯ ಆರಾಮ ಕುರ್ಚಿಯನ್ನು ನಿನಗಾಗಿ,ಹೆತ್ತವರಿಗಾಗಿ,ಸಮಾಜದ ಏಳಿಗೆಗಾಗಿ ದಕ್ಕಿಸಿಕೊಳ್ಳುವ ಆತ್ಮ ವಿಶ್ವಾಸ ನಿನ್ನದಾಗಲಿ.ಶುಭವಾಗಲಿ ಗೆಳೆಯ

  2. Manjunatah dasanapura

    ‘ಆರಾಮ ಕುರ್ಚಿ’ ಎನ್ನುವುದು ಶೋಷಣೆಯ ಅಸ್ತ್ರ. ಅದು ಎಂದಿಗೂ ನನಗೆ ಬಾರದಿರಲಿ…..
    ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು ಶಿವು.

  3. Nagaraju.BN

    hai.
    manju very nice artical. all the best.innu jasti baree.

  4. me madesha

    ಆನುಭವವನ್ನು ಪದಗಳಲ್ಲಿ ಮೂಡಿಸಿರುವ ಬಗೆ ತುಂಬಾ ಆತ್ಮೀಯವಾಗಿ ಓದಿಸುತ್ತದೆ.ನಿಮ್ಮ ಭಾಷಾ ಉಪಯೋಗದ ಬಗೆ ಓದಿನ ಜೊತೆಗೆ ಕಣ್ಣ ಮುಂದೆ ಚಿತ್ರಗಳನ್ನು ಮೂಡಿಸುತ್ತದೆ.ತುಂಬಾ ಆತ್ಮೀಯವೆನಿಸುವ ಬರಹ. .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading