ವ್ಯಾಲೆಂಟೈನ್ಸ್ ಡೇ ಎಂಬ ಪ್ರೇಮಿಗಳ ದಿನಾಚರಣೆ
ಜಿ ಎನ್ ನಾಗರಾಜ್
ಫೆಬ್ರುವರಿ 14, ವಿಶ್ವದಾದ್ಯಂತ ಪ್ರೇಮದ ಪಲ್ಲವಿ ಕೋಟ್ಯಾಂತರ ಹೃದಯಗಳಿಂದ ಕೋಟ್ಯಾಂತರ ಹೃದಯಗಳಿಗೆ ಪ್ರತಿ ವರ್ಷ ಹರಿದಾಡುವ ದಿನ. ಈ ದಿನದಂದು ತಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಲು, ಆಗಲೇ ಪ್ರೇಮಿಗಳಾದವರು ತಮ್ಮ ಪ್ರೇಮವನ್ನು ಮತ್ತಷ್ಟು ಗಾಢವಾಗಿಸಿಕೊಳ್ಳಲು ಚಾತಕ ಪಕ್ಷಿಯಂತೆ ಕಾಯುವ ದಿನ. ವ್ಯಾಲೈಂಟೈನ್ಸ್ ಡೇ ಅಥವಾ ಪ್ರೇಮಿಗಳ ದಿನಾಚರಣೆ ಎಂದು ವಿಶ್ವದಾದ್ಯಂತ ಆಚರಿಸಲಾಗುವ ಈ ದಿನ ಭಾರತದಲ್ಲಿಯೂ ವರ್ಷದಿಂದ ವರ್ಷಕ್ಕೆ ಹಬ್ಬುತ್ತಾ ನಡೆದಿದೆ. ಪ್ರಜಾಪ್ರಭುತ್ವವನ್ನು ಒಪ್ಪಿದ ನಮ್ಮ ದೇಶಕ್ಕೆ ಸಹಜವೂ ಆಗಿದೆ. ಆದರೆ ಇದೇ ಪ್ರಜಾಪ್ರಭುತ್ವ ವ್ಯಾಪಕಗೊಳ್ಳುತ್ತಿರುವುದರಿಂದ ತಮ್ಮ ಸಾವಿರಾರು ವರ್ಷಗಳ ಪಟ್ಟಭದ್ರ ಹಿತಗಳಿಗೆ ಧಕ್ಕೆಯಾಗುತ್ತಿರುವುದರಿಂದ ಕ್ರುದ್ಧರಾದ ಜಾತೀಯ, ಮತೀಯ ಶಕ್ತಿಗಳು ಪ್ರೇಮದಿಂದ ಯುವಕ,ಯುವತಿಯರು ಪಡೆಯುತಿರುವ ಉಲ್ಲಾಸದ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಈ ಸಂದರ್ಭದಲ್ಲಿ ಈ ವ್ಯಾಲೆಂಟೈನ್ ಯಾರು ? ಅವನ ಹೆಸರಿನಲ್ಲಿ ಇಷ್ಟೊಂದು ವ್ಯಾಪಕವಾಗಿ ಪ್ರೇಮಿಗಳ ದಿನಾಚರಣೆಯನ್ನು ಏಕೆ ಆಚರಿಸಲಾಗುತ್ತಿದೆ ? ತಿಳಿದುಕೊಳ್ಳೋಣ.
ಯಾರೀ ವ್ಯಾಲೆಂಟೈನ್ ?
ವ್ಯಾಲೆಂಟೈನ್ ಎಂಬುವರು ಒಬ್ಬ ಕ್ರಿಶ್ಚಿಯನ್ ಪಾದ್ರಿ. ಸುಮಾರು ಕ್ರಿ.ಶ.260ರ ಸಮಯದಲ್ಲಿ ರೋಮಿನಲ್ಲಿದ್ದವರು. ಆಗ ರೋಮ್ ಛಕ್ರಾಧಿಪತ್ಯದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಲಾಗಿದ್ದ, ಅನೇಕ ದಮನಕಾರೀ ಕ್ರಮಗಳನ್ನು ಕೈಗೊಳ್ಳುತ್ತಿದ್ದ ಸಮಯ. ಸೈನಿಕರು ಮದುವೆಯಾಗಬಾರದೆಂಬ ನಿಯಮವೂ ಇತ್ತು. ಆಗ ಸೈನಿಕರಿಗೆ ಗುಟ್ಟಾಗಿ ಮದುವೆ ಮಾಡಿಸುವುದು, ಹಿಂಸೆಗೆ ತುತ್ತಾಗಿದ್ದ ಕ್ರಿಶ್ಚಿಯನ್ನರು ಪಾರಾಗಲು ಸಹಾಯ ಮಾಡುವುದು ಮುಂತಾದ ಕೃತ್ಯಗಳಿಂದ ಅಂದಿನ ರೋಮ್ ಛಕ್ರಾಧಿಪತಿಗಳ ಕೆಂಗಣ್ಣಿಗೆ ವ್ಯಾಲೈಂಟೈನ್ ಪಾದ್ರಿ ಗುರಿಯಾಗಿದ್ದ. ಅವನನ್ನು ಬಂಧಿಸಿ ಕಾರಾಗೃಹಕ್ಕೆ ಅಟ್ಟಲಾಯಿತು. ಅಲ್ಲಿ ಈ ಪಾದ್ರಿ ಸೆರೆಮನೆಯ ಅಧಿಕಾರಿಯ ಮಗಳು ಜೂಲಿಯಾಳ ಅಂಧತ್ವವನ್ನು ಗುಣಪಡಿಸಿದ. ಅವನನ್ನು ಮರಣದಂಡನೆಗೆ ಗುರಿಪಡಿಸುವ ಮುನ್ನಾ ದಿನ ಜೂಲಿಯಾಳಿಗೆ ಪತ್ರವೊಂದನ್ನು ಬರೆದು ಅದಕ್ಕೆ ಇತಿ ನಿನ್ನ ವ್ಯಾಲೈಂಟೈನ್ ಎಂದು ಸಹಿ ಮಾಡಿದ್ದ ಎಂಬ ಪ್ರತೀತಿ ಇದೆ. ಇದೇ ಮುಂದೆ ಪ್ರೇಮಿಗಳು ‘ ನಿನ್ನ ವ್ಯಾಲೈಂಟೈನ್ ‘ ಎಂದು ಸಹಿ ಮಾಡಲು ಕಾರಣವಾಯಿತು.ಅವನ ದೇಹವನ್ನು ಸಮಾಧಿ ಮಾಡಿದ ದಿನವಾದ ಫೆಬ್ರುವರಿ 14 ಅನ್ನು ವ್ಯಾಲೈಂಟೈನ್ ದಿನವಾಗಿ ಆಚರಿಸಲ್ಪಡುತ್ತಿದೆ. ಅವನ ಸಮಾಧಿಯ ಮೇಲೆ ಜೂಲಿಯಾ ಪಿಂಕ್ ಬಣ್ಣದ ಹೂಗಳ ಬಾದಾಮಿಯ ಮರವೊಂದನ್ನು ನೆಟ್ಟಳು ಎಂಬ ದಂತ ಕಥೆ ಇದೆ.ಈ ಕಾರಣಕ್ಕಾಗಿ ಪಿಂಕ್ ಬಣ್ಣ ಪ್ರೇಮದ ಸಂಕೇತವಾಯಿತು.
ಪ್ರೇಮದಲ್ಲಿಯೂ ವರ್ಗ ವಿಭಜನೆ

ಮಲೆಗಳಲ್ಲಿ ಮದುಮಗಳು ಕನ್ನಡದ ಹೆಮ್ಮೆಯ ರಾಷ್ಟ್ರ ಕವಿ ಕುವೆಂಪುರವರ ಮಹಾ ಕಾದಂಬರಿ. 1890 ರ ಆಸುಪಾಸಿನ ಮಲೆನಾಡಿನ ಜೀವನದ ವಿವರಗಳು ಈ ಕಾದಂಬರಿಯಲ್ಲಿ ದಟ್ಟವಾಗಿ ಮೂಡಿವೆ. ಒಂದು ಶತಮಾನಕ್ಕೂ ಹಿಂದಿನ ಆ ದಿನಗಳಲಿ ಪುರೋಹಿತಶಾಹೀ ್ಲ ಸಂಪ್ರದಾಯಗಳ ಹಿಡಿತ ಬಹಳ ಬಿಗಿಯಾಗಿ ಜನ ಜೀವನವನ್ನು ಬಾಧಿಸುತ್ತಿದ್ದ ಸಮಯ. ಹಳ್ಳಿಗಾಡಿನ ಸಮಾಜದ ರಚನೆಯೂ ಎಷ್ಟು ಭೀಕರವಾಗಿತ್ತೆಂದರೆ ಜಮೀನುಳ್ಳ ಶ್ರೀಮಂತ ವರ್ಗ ತಮ್ಮ ಹೊಲ ಗದ್ದೆಗಳಲ್ಲಿ ದುಡಿಯುತ್ತಿದ್ದ ಜೀತಗಾರರು ಮನುಷ್ಯರೇ ಅಲ್ಲವೇನೋ ಎನ್ನುವಂತೆ ಕ್ರೂರ ದಬ್ಬಾಳಿಕೆಗೆ ಗುರಿ ಮಾಡಿದ್ದ ಸಮಯ. ಆಗಲೇ ಈ ಕಠಿಣ ಸಂಪ್ರದಾಯಗಳ ಕಟ್ಟೊಡೆದು, ಆ ಸಮಾಜದ ಕ್ರೌರ್ಯವನ್ನೆದುರಿಸಿ ಪ್ರೇಮ ಚಿಗುರುತ್ತಿದ್ದುದನ್ನು , ಅದಕ್ಕಾಗಿ ಎಸಗಿದ ಸಾಹಸಗಳು, ಎದುರಿಸಿದ ಅಪಾಯಗಳನ್ನು ಕುವೆಂಪು ಇಲ್ಲಿ ಚಿತ್ರಿಸಿದ್ದಾರೆ.
ಜಮೀನುಳ್ಳವರು ತಮ್ಮ ಶ್ರೀಮಂತಿಕೆಯ ಜರ್ಬಿನಲ್ಲಿ ಹಲವಾರು ಮದುವೆಯಾಗುವುದು, ಮುದುಕರು ಸುಂದರವಾದ ಎಳೆ ಹುದುಗಿಯರನ್ನು ಮದುವೆಯಾಗಿ ಅವರ ಬದುಕನ್ನು ನರಕಕ್ಕೆ ದೂಡುವುದು, ತಮ್ಮ ಕೆಲಸಗಾರ ಯುವತಿಯರ ಮೇಲೆ ಅತ್ಯಾಚಾರ, ಇವುಗಳ ಜೊತೆಗೆ ಇನ್ನೂ ಹಲವು ರೀತಿಯ ಹೊರ ಸಂಬಂಧಗಳು. ಹೀಗೆ ಹೆಣ್ಣಿನ ಬಾಳು ‘ ಸುಣ್ಣಾಗಿ ಕುದಿಯುವ ‘ ಸಮಯದಲ್ಲಿಯೇ ಪ್ರೇಮ ಹೇಗೆ ಮಾನವತೆಯ ಉನ್ನತ ಸ್ಥರಕ್ಕೆ ಜೀವಿಗಳನ್ನು ಕೊಂಡೊಯ್ಯಬಲ್ಲುದು, ಹೆಣ್ಣಿನ ವಿಮೋಚನೆಯ ಬೆಳಕಾಗಬಲ್ಲುದು ಎಂಬುದನ್ನು ಕುವೆಂಪು ಹೃದಯಂಗಮವಾಗಿ ಚಿತ್ರಿಸಿದ್ದಾರೆ. ಮೇಲ್ವರ್ಗದ ಮುಕುಂದಯ್ಯ-ಚಿನ್ನಮ್ಮರ ಪ್ರೇಮ ಹಾಗೂ ಜೀತಗಾರ ಹೊಲೆಯರ ಗುತ್ತಿ-ತಿಮ್ಮಿಯರ ಪ್ರೇಮಕ್ಕೂ ಇರುವ ವೈದೃಶ್ಯವನ್ನು ಗಮನಿಸಲೆಂದೇ ಎರಡು ಜೋಡಿಗಳ ಸಾಹಸ-ಸಂಕಟಗಳನ್ನು ಬೇರೆ ಬೇರೆಯಾಗಿ ನೀಡಲಾಗಿದೆ
ಈ ಪರಿಯ ಸೊಬಗಾವ ಸಂಸ್ಕೃತಿವಂತರಲ್ಲಿಯೂ ಕಾಣೆ
ಸಮಾಜ ಜೀವಿ ಮಾನವನ ಮೂಲ ಸೆಲೆಯೇ ವಾತ್ಸಲ್ಯ, ಪ್ರೇಮ, ಪ್ರೀತಿ, ಪ್ರಣಯ, ಗೆಳೆತನ ಎಂಬ ಮಧುರ ಭಾವನೆಗಳು. ಅದು ಮನುಷ್ಯ ಸಮಾಜದ ಉಗಮವಾದ ಬುಡುಕಟ್ಟು ಜೀವನದಲ್ಲಿ ಎಷ್ಟು ಸೊಗಸಾಗಿ, ಸಹಜವಾಗಿ, ಪ್ರಕೃತಿ-ಪರಿಸರದೊಡನೆ ಬೆರೆತು ವ್ಯಕ್ತವಾಗುತ್ತದೆ ಎಂದರೆ ಬಹಳ ‘ ಮುಂದುವರೆದ ‘ ಸಮಾಜವೆನ್ನುವವರಿಗೆ ಅಸೂಯೆ, ನಾಚಿಕೆ ಎರಡೂ ಒಮ್ಮೆಗೇ ಮೊಳೆಯುತ್ತವೆ. ಅಂತಹ ಬುಡುಕಟ್ಟು ಜೀವನದ ಎರಡು ಚಿತ್ರಣಗಳನ್ನು ಇಲ್ಲಿ ನೀಡಲಾಗಿದೆ.
ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ಪ್ರದೇಶದ ಕಾಡು ಕುರುಬರ ಜೀವನವನ್ನು ಕನ್ನಡದ ಮೊದಲ ತಲೆಮಾರಿನ ಸಾಹಿತಿಗಳಲ್ಲೊಬ್ಬರಾದ ‘ ಮಾಸ್ತಿ ಕನ್ನಡದ ಆಸ್ತಿ’ ಎಂದು ಹೆಸರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಅವರ ಅಪೂರ್ವ ನಾಟಕ ‘ ಕಾಕನ ಕೋಟೆ ‘ಯಲ್ಲಿ ಚಿತ್ರಿಸಿದ್ದಾರೆ. ನೂರಕ್ಕೂ ಹೆಚ್ಚು ರಂಗ ಪ್ರದರ್ಶನಗಳನ್ನು ಕಂಡ ಈ ನಾಟಕ ಕನ್ನಡ ರಂಗ ಭೂಮಿಯಲ್ಲಿ ಒಂದು ದಾಖಲೆ. ನಂತರ ಒಂದು ಸಿನೆಮಾ ಕೂಡ ಆಗಿದೆ. ಕನ್ನಡ ರಂಗ ಭೂಮಿಯ ಮೇರು ನಟರು, ಮುಂದೆ ಸಿನೆಮಾದಲ್ಲಿ ಪ್ರಸಿದ್ಧರಾದ ಶ್ರೀನಾಥ್, ಸಿಂಹ, ಲೋಕೇಶ್,ಗಿರಿಜಾ, ಲೋಕನಾಥ್ ಮತ್ತನೇಕರು ಈ ನಾಟಕದ ಮೂಲಕ ಬೆಳೆದರು. ವಿಶೇಷವೆಂದರೆ ಗಿರಿಜಾ-ಲೋಕೇಶ್ ಈ ನಾಟಕದ ಅಭಿನಯದ ಸಮಯದಲಿಯೇ ಪ್ರೀತಿಸಿದರು ಮದುವೆಯಾದರು.
ಈ ಪ್ರದೇಶದ ಕಾಡುಕುರುಬ ಬುಡುಕಟ್ಟಿನಲ್ಲಿ ಮದುವೆಯೆಂದರೆ ಹಿರಿಯರ ಯಾವ ಕೈವಾಡವೂ ಇಲ್ಲದೆ ಯುವಕ-ಯುವತಿಯರು ತಮಗೆ ಮೆಚ್ಚಿದವರನ್ನು ಪ್ರೇಮಿಸುತ್ತಾರೆ. ತಮ್ಮ ಒಲವನ್ನು ಪರಸ್ಪರ ವ್ಯಕ್ತಪಡಿಸುತ್ತಾರೆ. ಅವರೂ ಒಪ್ಪಿಕೊಂಡರೆ ಕೆಲಕಾಲ ತಮ್ಮ ಬೇಟವನ್ನು ತಮ್ಮ ಹಾಡಿಯಲ್ಲಿಯೇ ( ವಸತಿಯ ಸ್ಥಳ ) ನಡೆಸುತ್ತಾರೆ. ಪರಸ್ಪರ ಅರಿತುಕೊಳ್ಳುತ್ತಾರೆ. ಒಂದು ದಿನ ತಮ್ಮಷ್ಟಕ್ಕೆ ತಾವೇ ತೀರ್ಮಾನಿಸಿ ತಮ್ಮ ಓರಗೆಯ ಅತ್ಯಂತ ಹತ್ತಿರದ ಗೆಳೆಯ-ಗೆಳತಿಯರಿಗಷ್ಟೇ ತಿಳಿಸಿ ಕಾಡಿನೊಳಕ್ಕೆ ಮಾಯವಾಗುತ್ತಾರೆ. ಮೂರು ದಿನ ಬಿಟ್ಟು ಅವರ ಹಾಡಿಗೆ ಮರಳುತ್ತಾರೆ. ತಮ್ಮ ತಂದೆ ತಾಯಿಯರ ಮನೆಗಲ್ಲ. ಅಷ್ಟು ಹೊತ್ತಿಗೆ ಅವರ ಗೆಳೆಯರು ಅವರಿಗಾಗಿ ಒಂದು ಬೂಡನ್ನು ( ಪ್ರತ್ಯೇಕವಾದ ಗುಡಿಸಲನ್ನು ) ಕಟ್ಟಿರುತ್ತಾರೆ. ಅದರಲ್ಲಿ ತಮ್ಮ ಹೊಸ ಜೀವನ ಆರಂಭಿಸುತ್ತಾರೆ. ಹೇಗಿದೆ ವಿವಾಹ, ಸಂಸಾರದ ‘ ಈ ಪರಿಯ ಸೊಬಗಾವ ಸಮಾಜದಲ್ಲಿಯೂ ಕಾಣೆ ‘ ಎಂಬ ಅಚ್ಚರಿ. ಹೆಣ್ಣು ನೋಡುವುದು-ತರುವುದು ಜಾತಕ- ಮಹೂರ್ತ, ಶಾಸ್ತ್ರ- ಸಂಪ್ರದಾಯ, ವರದಕ್ಷಿಣೆ-ಆಭರಣ, ಉಡುಗೆ-ತೊಡುಗೆ, ಆಮಂತ್ರಣ-ಮುನಿಸು, ಜಗಳ-ನ್ಯಾಯ, ಅತ್ತೆ ಮನೆ-ತವರು ಮನೆ ಗಳ ಗೋಜಿಲ್ಲದ ಈ ಪರಿ.
ಬಸ್ತಾರ್ ಪ್ರದೇಶದ ಘೋಟುಲ್ಗಳು

ಮಧ್ಯ ಪ್ರದೇಶ, ಛತ್ತೀಸ್ ಘಡ ರಾಜ್ಯಗಳಲ್ಲಿ ವಾಸಿಸುವ ಬುಡುಕಟ್ಟು ಜನರ ಬಾಲಕರ ಹಾಗೂ ಯುವಕ-ಯುವತಿಯರ ಜೀವನದಲ್ಲಿ ಪ್ರಧಾನ ಪಾತ್ರ ವಹಿಸುವ ಘೋಟುಲ್ ಎಂಬ ಸಂಸ್ಥೆಗಳು ಇನ್ನೂ ಹೆಚ್ಚು ಕುತೂಹಲಕರ. ನಂಬುವುದಕ್ಕೆ ಕೂಡ ಕಷ್ಟ . ಆರು ವರ್ಷ ಮೀರಿದ ಎಲ್ಲ ಬಾಲಕ, ಬಾಲಕಿಯರು ತಮ್ಮ ಮದುವೆಯಾಗುವವರೆಗೂ ರಾತ್ರಿಗಳನ್ನು ಒಟ್ಟಿಗೆ ಕಳೆಯುವ ಆ ಮೂಲಕ ಜೀವನದ ಎಲ್ಲ ಅಂಶಗಳ ಬಗ್ಗೆ ನೋಡಿ, ಮಾಡಿ ಕಲಿಯುವ ವಿಶೇಷ ಆದಿಕಾಲದ ವ್ಯವಸ್ಥೆ. ಯುವಕ-ಯುವತಿಯರು ಪ್ರತಿಯೊಬ್ಬರೂ ಪರಸ್ಪರ ಲೈಂಗಿಕ ಸಂಬಂಧ ಹೊಂದುವ ಪದ್ಧತಿ. ಒಂದು ರಾತ್ರಿಗೆ ಒಂದು ಜೋಡಿ ಒಟ್ಟಿಗೆ ಉಳಿದೆಲ್ಲ ಜೋಡಿಗಳು ಮಾತ್ರವಲ್ಲ ಬಾಲಕ,ಬಾಲಕಿಯರ ಎದುರಿನಲ್ಲೇ ಲೈಂಗಿಕ ಕ್ರೀಡೆಯಲ್ಲಿ ತೊಡಗುವ ವಿಶೇಷ. ಯಾರು ಅಂದು ಯಾರ ಜೊತೆಯಲ್ಲಿ ಕಳೆಯಬೇಕು ಎಂಬುದನ್ನು ಈ ಯುವಕ-ಯುವತಿಯರೇ ಆರಿಸಿದ ಮೋತಿಯಾರಿ ( ಯುವತಿ ) ಸೂಚಿಸುತ್ತಾಳೆ. ಆದರೆ ಮದುವೆಯಾದ ಮೇಲೆ ಕಟ್ಟು ನಿಟ್ಟಾಗಿ ತಮ್ಮ ಬಾಳ ಸಂಗಾತಿಯ ಜೊತೆ ಮಾತ್ರ ಸಂಬಂಧ. ಈ ವಿಶಿಷ್ಟತೆಯ ಬಗ್ಗೆ ಪ್ರವಾಸ ಕಥನವೊಂದರಿಂದ ಆಯ್ದ ಭಾಗವನ್ನು ಇಲ್ಲಿ ಕೊಡಲಾಗಿದೆ.
ದೇವಾನುದೇವತೆಗಳ ಜಾತಿ-ವಿಜಾತಿ ಪ್ರೀತಿ-ಪ್ರಣಯ ಜಾನಪದರು ಕಂಡಂತೆ
ಪ್ರೇಮ, ಪ್ರೀತಿ ಇವೆಲ್ಲ ವಿದೇಶಿ ಸಂಸ್ಕೃತಿ. ಭಾರತೀಯ ಸಂಸ್ಕೃತಿಗೆ ಇವೆಲ್ಲ ಹೊರತು ಎಂಬ ಬೊಬ್ಬೆ ಕೇಳಿ ಬರುತ್ತದೆ, ಅದರಲ್ಲಿಯೂ ವಿವಿಧ ಜಾತಿಗಳ, ಧರ್ಮಗಳ ಯುವಕ-ಯುವತಿಯರ ನಡುವಣ ಪ್ರೇಮವಂತೂ ಇಡೀ ಸಮಾಜದ ವಿರೋಧಕ್ಕೆ ಗುರಿಯಾಗುತ್ತದೆ. ಈ ಭಾರತೀಯ ಸಂಸ್ಕೃತಿ ಎಂದರೆ ಯಾವುದು ? ಕೇವಲ ವೇದ, ಉಪನಿಷತ್ ಪ್ರಣೀತವಾದ ವೈದಿಕ ಸಂಸ್ಕೃತಿ ಮಾತ್ರವೇ ಸಂಸ್ಕೃತಿಯಲ್ಲ. ಭಾರತವೆಂಬುದೊಂದು ಉಪಖಂಡ. ಆರ್ಯ, ದ್ರಾವಿಡ, ಉತ್ತರ-ದಕ್ಷಿಣ, ಈಶಾನ್ಯ-ನೈರುತ್ಯ ಹೀಗೆ ವಿವಿಧ ರೀತಿಯ ಸಂಸ್ಕೃತಿಗಳು, ಆಚರಣೆಗಳು, ಪದ್ಧತಿಗಳು ಬೆಳೆದು ಬಂದಿವೆ. ಇದು ಮಹಾಭಾರತ, ರಾಮಾಯಣ ದಂತಹ ಪ್ರಾಚೀನ ಮಹಾಕಾವ್ಯಗಳು, ಇತರ ಗ್ರಂಥಗಳಲ್ಲಿಯೇ ಬಿಂಬಿತವಾಗಿವೆ.
ಭಾರತೀಯ ಸಂಸ್ಕೃತಿಯ ಬಗ್ಗೆ ಇಂದು ಮುಂದಿಡಲಾಗುತ್ತಿರುವ ವಾಖ್ಯಾನದಲ್ಲಿ ಜಾನಪದ ಸಂಸ್ಕೃತಿಯ ಪಾತ್ರವೇನು ? ಅತ್ಯಂತ ವೈವಿಧ್ಯಮಯವೂ, ಶ್ರೀಮಂತವೂ ಆದ, ವಿವಿಧ ಭಾಷಿಕ ಜನಾಂಗಳ, ಬುಡುಕಟ್ಟುಗಳ ಜನ ಸಮುದಾಯದ ಮನಸ್ಸನ್ನು, ಚಿಂತನೆಯನ್ನು ರೂಪಿಸುತ್ತಾ ಬಂದಿರುವ ಜಾನಪದ ಸಂಸ್ಕೃತಿಗಳನ್ನು ಹೊರತುಪಡಿಸಿದರೆ ಅದು ಭಾರತೀಯ ಸಂಸ್ಕೃತಿ ಎಂದು ಹೆಸರು ಪಡೆಯಲು ಯೋಗ್ಯವೇ ? ಹೀಗೆ ಹಲವು ಪ್ರಶ್ನೆಗಳು ಎದ್ದಿವೆ.
ಗೆಳೆತನ ಬಿತ್ತಲ್ಲ ನಿನ ಮೇಲೆ
ಕನ್ನಡ ಜಾನಪದದ ಶ್ರೀಮಂತಿಕೆಯನ್ನಂತೂ ಆಧುನಿಕ ಕವಿ ವರೇಣ್ಯರನೇಕರು ಹಾಡಿ ಹೊಗಳಿದ್ದಾರೆ. ಅದರಿಂದ ಪ್ರಭಾವಿತರಾಗಿ ಉತ್ತಮ ಕಾವ್ಯ ರಚಿಸಿದ್ದಾರೆ, ಮತ್ತು ಜನಪ್ರಿಯರಾಗಿದ್ದಾರೆ. ಇಂತಹ ಕನ್ನಡ ಜಾನಪದದವಂತೂ ಪ್ರೇಮಮಯವಾಗಿದೆ. ಜಾನಪದರು ಹಲವು ರೀತಿಯಲ್ಲಿ ಪ್ರೇಮವನ್ನು ಪರಿಭಾವಿಸಿದ್ದಾರೆ. ವರ್ಣಸಿದ್ದಾರೆ. ತ್ರಿಪದಿ, ಲಾವಣಿಗಳಲ್ಲಿ, ಕಥನ ಗೀತೆಗಳಲ್ಲಿ ಪ್ರೇಮದ ಯಶಸ್ಸನ್ನು , ಸಮಾಜದ ಕ್ರೌರ್ಯವನ್ನು ಹೃದಯಂಗಮವಾಗಿ ಹಾಡಿದ್ದಾರೆ. ವಿಶೆಷವೆಂದರೆ ನಮ್ಮ ಜಾನಪದರು ಪ್ರೇಮ, ಪ್ರೀತಿಯ ಭಾವನೆಗಳನ್ನು ಗೆಳೆತನವಾಗಿ ಕಾಣುತ್ತಾರೆ. ಗೆಣೆಕಾರ, ಗೆಣೆಕಾರ್ತಿ ಎಂದು ಕರೆದುಕೊಳ್ಳುತ್ತಾರೆ. ಪ್ರೀತಿ ಬಿತ್ತಲ್ಲ ನಿನ ಮೇಲೆ ಎನ್ನುವ ಧ್ವನಿಯಲ್ಲಿಯೇ ಗೆಳೆತನ ಬಿತ್ತಲ ್ಲ ನಿನ ಮೇಲೆ ಎನ್ನತ್ತಾರೆ. ಪ್ರೇಮ, ಪ್ರೀತಿಗಳ ಹೂರಣವೇ ಗೆಳೆತನ ಎಂದು ಅವರು ಕಂಡುಕೊಂಡಿದ್ದಾರೆ. ಅದುವೇ ಸಾಂಪ್ರದಾಯಿಕ ಮದುವೆಗಳಿಗೂ ಪ್ರೇಮ ವಿವಾಹಗಳಿಗೂ ಮುಖ್ಯ ವ್ಯತ್ಯಾಸ. ಯುವಕ-ಯುವತಿಯರು ಗೆಣೆಕಾರ-ಗೆಣೆಕಾರ್ತಿಯರಾಗಿ ನಡೆಸುವ ಪ್ರಣಯ ಅವರ ಮನ ಸೆಳೆದಿದೆ. ಆದರೆ ಅದರಲ್ಲಿ ಎಷ್ಟು ಫಲಕಾರಿಯಾಗುತ್ತದೆ ? ಜಾತಿ, ಆಸ್ತಿ, ಅಂತಸ್ತುಗಳ ಬಲೆಯಲ್ಲಿ ಸಿಕ್ಕು ವಿಲವಿಲ ಒದ್ದಾಡಿದ ಜಾನಪದ ಮನಸು ತಮ್ಮ ಪ್ರೇಮದ ಬಯಕೆ, ಆಶಯಗಳನ್ನು ಹಲವಾರು ರೂಪದಲ್ಲಿ ಅದನ್ನು ವ್ಯಕ್ತಪಡಿಸಿದೆ. ‘ ಮೊಗ್ಗಾಗಿ ಬಾರೋ ತುರುಬೀಗೆ ‘ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ ‘ ಇತ್ಯಾದಿ ಜಾನಪದ ಗೀತೆಗಳು, ಸಾಲುಗಳು ಸಾವಿರಾರು ವರ್ಷಗಳಿಂದ ಜನರನ್ನು ಸೆಳೆದಿವೆ.
ದೇವ-ದೇವಿಯರ ಪ್ರಣಯ-ಪ್ರೇಮ
ಪ್ರೇಮದ ಬಗೆಗಿನ ಜಾನಪದರ ಬಯಕೆ ಎಷ್ಟು ತೀವ್ರವಾಗಿದೆಯೆಂದರೆ ತಮ್ಮ ಪ್ರೀತಿಯ ದೇವ-ದೇವಿಯರಿಗೂ ಪ್ರೀತಿ-ಪ್ರೇಮದ ಸಾಂಗತ್ಯವನ್ನು ಹಚ್ಚಿದ್ದಾರೆ. ಯಾವ ದೇವರು-ದೇವತೆ ಯಾರನ್ನು ಪ್ರೇಮಿಸಬೇಕು ಎಂಬುದು ಹಲವು ಬಾರಿ ಪುರಾಣಗಳಿಂದ ತೀರ್ಮಾನವಾದರೆ, ಮತ್ತನೇಕ ಬಾರಿ ತಮ್ಮ ಪ್ರಿಯ ದೇವ-ದೇವಿಯರಲ್ಲಿ ತಾವೇ ಆಯ್ಕೆ ಮಾಡಿ ಅವರ ನಡುವೆ ಗಾಢ ಪ್ರೀತಿಯನ್ನು ಬೆಸೆದಿದ್ದಾರೆ. ಹಾಡು ಕಟ್ಟಿ ಕುಣಿದಿದ್ದಾರೆ. ಜಾತ್ರೆಗಳಲ್ಲಿ ಮೆರೆಸಿದ್ದಾರೆ. ತಮ್ಮ ಬದುಕಿನಲ್ಲಿ ಅನುಭವಿಸಲು ಸಾಧ್ಯವಾಗದ ಪ್ರೇಮದ ಉತ್ಕಟತೆಯನ್ನು ಅವರು ಅನುಭವಿಸುವಂತೆ ಮಾಡಿ ಅದರಲ್ಲಿಯೇ ಸುಖ ಕಂಡಿದ್ದಾರೆ.
ದೇವ-ದೇವಿಯರ ಪ್ರೇಮವೇನೋ ಸರಿ ಆವರ ನಡುವೆ ಜಾತಿ, ಅಂತಸ್ತುಗಳ ಅಡ್ಡ ಬಂಡೆ ಎದುರಾಗುವುದಿಲ್ಲ ಆದ್ದರಿಂದ ಸರಾಗ ಎಂದು ನಮಗ್ಯಾರಿಗಾದರೂ ಅನ್ನಿಸಿದರೆ ಅದು ಸಹಜವೇ. ಅದರೆ ನಮ್ಮ ಜಾನಪದರು ದೇವರುಗಳಿಗೂ ತಮ್ಮ ತಮ್ಮ ಜಾತಿಯನ್ನು ದೇವರುಗಳಿಗೂ ಹಚ್ಚಿದ್ದಾರೆ. ಜಾತಿಯನ್ನು ಮೀರುವ ಪ್ರೇಮದ ಸೆಳೆತವನ್ನು ಮನಗಂಡಿದ್ದಾರೆ ಹಾಗು ಬಹಳ ಆಸಕ್ತಿಯಿಂದ ಸ್ವಾರಸ್ಯಕರವಾಗಿ ಬಣ್ಣಿಸಿದ್ದಾರೆ ನಮ್ಮ ದೇವರುಗಳು ಜಾತಿಯನ್ನು ಮಾತ್ರವಲ್ಲ ಧರ್ಮದ ಗಡಿಯನ್ನೂ ಮೀರಿದ್ದಾರೆ. ಇದೊಂದು ಊಹಿಸಲೂ ಆಗದ ಆಶ್ಚರ್ಯಕರ ಸಂಗತಿ !!
ಅನೇಕ ದೇವ-ದೇವಿಯರನ್ನು ಪ್ರೇಮದ ಸೆಳೆತಕ್ಕೆ ಜನಪದರು ಸಿಲುಕಿಸಿದ್ದಾರೆ.ತಂತಮ್ಮ ಊರ ‘ ಅಮ್ಮ ‘ಗಳಿಗೆ , ಮನೆ ದೇವರುಗಳಿಗೆ ಅಲ್ಲಲ್ಲಿಯ ಜಾನಪದ ಗೀತೆ-ಲಾವಣಿಗಳಲ್ಲಿ ಪ್ರೇಮ-ಪ್ರೀತಿ-ಪ್ರಣಯಗಳನ್ನು ಕಲ್ಪಿಸಿ ಬಣ್ಣಿಸಿ ಆನಂದಪಟ್ಟಿದ್ದಾರೆ. ಅದರಲ್ಲಿ ಬಹಳ ಪ್ರಚಲಿತವಾದ ಪ್ರೇಮ ಪ್ರಸಂಗಗಳ ಜಾನಪದ ಗೀತೆಗಳಿಂದ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ. ನಂಜನಗೂಡಿನ ನಂಜುಂಡ-ಮೈಸೂರಿನ ಚಾಮುಂಡಿ, ಆದಿ ಚುಂಚನಗಿರಿಯ ಭೈರವೇಶ್ವರ-ಕುರುಬತಿ ಗಂಗೆ ಮಾಳಮ್ಮ , ಮೈಲಾರದ ಮೈಲಾರ ಲಿಂಗ-ಕುರುಬತಿ ಮಾಳಮ್ಮ, ಬಿಳಿಗಿರಿ ರಂಗ-ಲಕ್ಕಮ್ಮ ಇವೆಲ್ಲ ಜಾತಿ ಮೀರಿದ ಪ್ರೇಮದ ಉದಾಹರಣೆಗಳು. ಮೇಲುಕೋಟೆಯ ಚೆಲುವರಾಯ ಸ್ವಾಮಿ-ದಿಲ್ಲಿ ಬಾದಶಹನ ಮಗಳು ಬೀಬಿ ನಾಚ್ಚಿಯಾರ್ ( ವರನಂದಿ )ಯ ಪ್ರೇಮ ಪ್ರಸಂಗ ಹಿಂದು ಧರ್ಮದ ದೇವರನ್ನು ಮುಸ್ಲಿಮ್ ಯುವತಿಯೊಬ್ಬಳು ಒಲಿದ, ಅದಕ್ಕಾಗಿ ದೂರದ ದಿಲ್ಲಿಯಿಂದ ಮೇಲುಕೋಟೆಯವರೆಗೂ ಹುಡುಕಿಕೊಂಡು ಬಂದ ಕಥೆ. ಬೀಬಿಗೆ ಜಾನಪದರು ಪ್ರೀತಿಯಿಂದ ವರನಂದಿ ಎಂದು ನಾಮಕರಣ ಮಾಡಿದ್ದಾರೆ.
ಜಾನಪದರು ಕಲ್ಪಿಸಿಕೊಂಡ ದೇವರುಗಳ ಅಂತಜರ್ಾತಿ ಪ್ರೇಮದ ಪರಿ ಕುತೂಹಲಕರವಾದದ್ದು ಮತ್ತು ಅವರ ಮನೋಭಿತ್ತಿಯನ್ನು ಬಿಂಬಿಸುತ್ತದೆ. ಮೇಲುಜಾತಿಯ ಸಸ್ಯಾಹಾರಿ ಗಂಡು ದೇವರು ಕೀಳುಜಾತಿಯ ಮಾಂಸಹಾರಿ ಹೆಣ್ಣು ದೇವರನ್ನು ಪ್ರೇಮಿಸುವ ಪ್ರಸಂಗಗಳು ಬಹಳ ರೋಚಕವಾಗಿ ಬಣ್ಣಿಸಲ್ಪಟ್ಟಿವೆ. ಹಾಗೆಯೇ ಕೆಳ ಜಾತಿಯ ಗಂಡು ಮೇಲು ಜಾತಿಯ ಹೆಣ್ಣನ್ನು ಪ್ರೀತಿಸುವುದನ್ನೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.ಸಾಮಾನ್ಯವಾಗಿ ಈ ಜಾನಪದ ಗೀತೆಗಳಲ್ಲಿ ಮೇಲು ಜಾತಿಯ ಗಂಡು ಶಿವ-ಮೈಲಾರದ ಲಿಂಗನ ರೂಪದಲ್ಲಿ ಅಥವಾ ಆದಿಚುಂಚನಗಿರಿಯ ಭೈರವೇಶ್ವರನ ರೂಪದಲ್ಲಿ -ಅವನು ಕುರುಬತಿಯನ್ನು ಪ್ರೀತಿಸಿ ಅವಳನ್ನು ಪಡೆಯಲು ಏನೆಲ್ಲ ಕಷ್ಟ ಪಡುತ್ತಾನೆ ಎಂಬುದನ್ನು ಜಾನಪದ ಗಾಯಕ ಕವಿಗಳು ಬಹಳ ಆಕರರ್ಷಕವಾಗಿ ವಣರ್ಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಶಿವ ಕುರುಬರ ಮನೆಯಲ್ಲಿ ಕುರಿಕಾಯುವ, ಕಂಬಳಿ ನೇಯುವ ಅದರಲ್ಲಿನ ಎಲ್ಲ ಕಷ್ಟಗಳನ್ನು ಅನುಭವಿಸುವ, ಕೌಶಲ್ಯವನ್ನು ಕಲಿಯುವ ಪ್ರಕ್ರಿಯೆಯನ್ನು ಸಾದರಪಡಿಸುವ ರೀತಿ ಆಸಕ್ತಿಕರವಾದದ್ದು. ಈ ವಸ್ತು ಎಷ್ಟು ಪ್ರಮುಖವಾದುದೆಂದರೆ ಅದನ್ನು ಪ್ರತ್ಯೇಕವಾಗಿ ಸಮಾಜ ಶಾಸ್ತ್ರೀಯ , ಮಾನವ ಶಾಸ್ತ್ರೀಯ, ಇತಿಹಾಸದ ಅಧ್ಯಯನಕ್ಕೆ ಒಳಪಡಿಸಬೇಕಾಗಿದೆ. ಪ್ರೇಮ-ಪ್ರೀತಿ ಚಿಗುರೊಡೆಯುವ ಬಗೆಗಿನ ಈ ಪುಸ್ತಕದ ತಿರುಳಿಗೆ ಅನುಗುಣವಾದ ವಿಷಯಗಳನ್ನು ಮಾತ್ರ ಇಲ್ಲಿ ಗಮನಿಸೋಣ.
ಸಮಾಜದಲ್ಲಿ ಜಾತಿವ್ಯವಸ್ಥೆಯ ಕಟ್ಟು ಕಟ್ಟಳೆಗಳು ಬಹಳ ಬಿಗಿಯಾಗಿ ಎಲ್ಲರನ್ನೂ ಬಂಧನಕ್ಕೆ ಒಳಪಡಿಸಿರುವಾಗ, ದಿನ ನಿತ್ಯವೂ ಹಲವು ರೂಪದಲ್ಲಿ ಕಾಡುತ್ತಿರುವಾಗ ಈ ಜಾನಪದ ಕಾವ್ಯಗಳಲ್ಲಿ, ಬಿಡಿ ಜಾನಪದ ಗೀತೆಗಳಲ್ಲಿ ಜಾತಿಯ ಗಡಿಯನ್ನು ಮೀರಿದ ಶಿವನ ಪ್ರೇಮವನ್ನು ಕೆಳ ಜಾತಿಯ ಗಾಯಕರ ಮನಸ್ಸಗಳು ಕಲ್ಪಿಸಿಕೊಂಡಿರುವುದೇ ಒಂದು ರೋಚಕ ಸಂಗತಿ. ಅದನ್ನು ಅವರು ಉತ್ಸಾಹಭರಿತರಾಗಿ ಹಾಡಿರುವ ರೀತಿ ಜಾತಿಯ ಗಡಿಯನ್ನು ಮೀರಬೇಕೆನ್ನುವ ಜಾನಪದರ ಅದಮ್ಯ ಬಯಕೆಯನ್ನು ವ್ಯಕ್ತಪಡಿಸುತ್ತದೆ.
ಮುಂದೆ ಇಲ್ಲಿ ನೀಡಿರುವ ಜಾನಪದ ಗೀತೆಗಳು ನಮ್ಮ ಜಾನಪದ ಕವಿಗಳೇ ಕಲ್ಪಿಕೊಂಡ ಸಂಬಂಧಗಳು. ಆದರೆ ಅದರ ಹೊರತಾಗಿ ಇಡೀ ದೇಶಕ್ಕೆ ಅನ್ವಯವಾಗುವ ಪುರಾಣಗಳನ್ನು ಕೂಡ ನಮ್ಮ ಜಾನಪದರು ಹೇಗೆ ಪುನರ್ ವಾಖ್ಯಾನಕ್ಕೆ ಒಳಪಡಿಸಿದ್ದಾರೆ, ಜಾತಿಯನ್ನು ಮೀರಿದ ಪ್ರೇಮದ ಬಗ್ಗೆ, ಜಾತಿ ವ್ಯವಸ್ಥೆಯ ವಿರುದ್ಧ ಬಂಡೇಳುವ ತಮ್ಮ ಆಕಾಂಕ್ಷೆಯನ್ನು ವ್ಯಕ್ತ ಪಡಿಸುವುದಕ್ಕೆ ಬಳಸಿಕೊಂಡಿದ್ದಾರೆ ಎಂಬುದು ಕೂಡ ಅಧ್ಯಯನ ಯೋಗ್ಯ ವಿಷಯ. ಇದಕ್ಕೆ ಒಂದು ಉದಾಹರಣೆ ಮುಡುಕುತೊರೆ ಮಲ್ಲಿಕಾಜರ್ುನ ಹಾಗೂ ಬೆಸ್ತ ಸಮುದಾಯದ ಗಂಗೆಯರ ಪ್ರೇಮದ ಪರಿಯನ್ನು ಮೈಸೂರು ಜಿಲ್ಲೆಯ ನರಸೀಪುರ ಪ್ರದೇಶದ ಪಾರ್ವತೀ ಗೊರವರು ಬಣ್ಣಿಸುವ ರೀತಿ.
ಹುಚ್ಚು ಹಿಡೀತೆ ಶಿವನೇ , ನಾವು ಗಬ್ಬು ಚುಂಗು ಜಾತಿಯಯ್ಯಾ

ಮಲ್ಲಿಕಾರ್ಜುನ ಗಂಗೆಯಲ್ಲಿ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ :
ನಿನ್ನ ಅಂದವ ನೋಡಿಬಂದೆ
ನಿನ್ನ ಚೆಂದವ ನೋಡಿ ಬಂದೆ
ಏಳೇಳು ಲೋಕದೊಳಗೆ
ನಿನ್ನ ಅಂಗಾಲ ಹೋಲುವರಿಲ್ಲ
ಒಪ್ಪಿದೆ ಕಾಣೇ ಬಾಲೆ ನಿನ್ನ ಗಂಗಾಯಿ ಕೇಳೇ
ನನಗೂ ನಿನಗೂ ಸರಿ ಕಾಣ್ಹೆಣ್ಣೆ
ಕಡೆದು ಬಾರೆ ಕೈಲಾಸದಪುರಕೆ
ಅದಕ್ಕೆ ಗಂಗೆ ಉತ್ತರ ನೀಡುತ್ತಾಳೆ :
ಹುಚ್ಚು ಕೂಡಿತೆ ಶಿವನೇ ನಿಮಗೆ
ಮಂಕು ಬೂದಿ ಹಿಡಿದಿತಯ್ಯ
..
ನಿನ್ನ ಪ್ರಾಣನಾದರು ಕೊಲುತಾರೆ
ಬಂದ ಮಾರ್ಗವ ಹಿಡಿಯೋ ದೇವ ಶಂಭು ಶಿವರಾಯ
ಕೊನೆಗೆ ಗಂಗೆ ಹೇಳುತ್ತಾಳೆ :
ಹುಚ್ಚು ಜಂಗಮನೇ ಕೇಳೋ ಶಿವನೆ
ನಾವು ಗಬ್ಬ ಚುಂಗು ಜಾತಿಯಯ್ಯ
ನಳ್ಳಿ ಗುಳ್ಳೆ ತಿನ್ನುವರಯ್ಯ
ಮೀನು ಶೀಗಡಿ ತಿನ್ನವರಯ್ಯಾ
ನೀ ಚಜ್ಜೆ ಲಿಂಗದ ದೇವರು ಸ್ವಾಮಿ
ನಿಮ್ಮ ಲಿಂಗ ನೋಡಿ ಹೆದರುತದೆ
ಅದಕ್ಕೆ ಶಿವನ ಉತ್ತರ :
ನೀ ಬೆಸ್ತರ ಮಗಳಾದರೂ ಸರಿಯೇ
ನೀ ಅಂಬಿಗರ ಮಗಳಾದರೂ ಸರಿಯೇ
ನೀ ನಳ್ಳಿ ಗುಳ್ಳೆ ತಿಂದರೂ ಸರಿಯೇ
ನಮ್ಮ ಗಂಗೆಗೆ ಕಟ್ಟುಗಳುಂಟೆ
ನಮ್ಮ ಲಿಂಗಕ್ಕೆ ಸೂತುಗ ಉಂಟೆ
ಗಂಗೆ ಅದಕ್ಕೆ ಹಾಕುವ ಶರತ್ತುಗಳು ಇಂತಿವೆ :
ಕೇಳು ಕೇಳಯ್ಯ ಶಿವನೆ
ನಿಮ್ಮ ಸಂಗಡ ಬಂದ ಮೇಲೆ
ಬ್ಯಾಟೆಯನ್ನೇ ತರಬೇಕಯ್ಯಾ
ಅರಸಿಗೆ ಪಾಲಕಿ ಹೊರಬೇಕಯ್ಯಾ
ಅರೆದೋಳಂಗಿ ಇಕ್ಕಬೇಕಯ್ಯಾ
ನಿನಗೆ ಬ್ಯಾಟೆಯಾಡಲು ಬರುವುದಿಲ್ಲ
ನೀ ಬಂದ ಮಾರ್ಗವ ಹಿಡಿಯೋ ದೇವಾ
ಅದಕ್ಕೆ ಶಿವ ತನ್ನ ಲಿಂಗವನ್ನು ಕಳೆದಿಟ್ಟು, ಬೆಸ್ತರ ವೇಷವನ್ನು ಧರಿಸುತ್ತಾನೆ :
ನೋಡು ನೋಡೆಲೆ ಬಾಲೆ ಗಂಗಾ
ನಿಮ್ಮೋರ ಹಂಗೆ ಆದಿ ಕಾಣೆ
ಸುತ್ತ ಮುತ್ತ ಬಲೆಯ ಬಿಟ್ಟ
ಗೋರು ಬಲೆಯಲಿ ಗೋರುತಾನೆ
ಎಳೆವ ಬಲೆಯಲಿ ಎಳೆಯುತಾನೆ
ಎತ್ತು ಬಲೆಯಲಿ ಎತ್ತುತಾನೆ
ಬೀಸು ಬಲೆಯಲಿ ಬೀಸುತಾನೆ
ನೂರೆಂಟು ಬ್ಯಾಟೆ ಮಾಡಿಕೊಂಡ
ನಿಮ್ಮೋರ ಬೇಟೆ ತಂದಿವ್ನಿ ಕಾಣೆ
ನೋಡುಬಾರೆ ಎಲೆ ಗಂಗೆ
ಆಗ ಗಂಗೆ ಅವನ ದೃಢವನ್ನು ಮೆಚ್ಚಿ ಅವನನ್ನು ಮದುವೆಯಾಗಲು ಸಮ್ಮತಿ ಸೂಚಿಸುತ್ತಾಳೆ :
ಸ್ವಾಮಿ ನಮ್ಮೋರು ಬ್ಯಾಟೆಗೆ ಹ್ವಾದರೆ
ಈಟೊಂದು ಬ್ಯಾಟೆ ತರುವುದಿಲ್ಲ
ಒಪ್ಪಿದೆ ಕಾಣೋ ಶಿವನೆ ನಿನ್ನ
ನೆಚ್ಚಿದೆ ಕಾಣೋ ಹರನೆ ನಿನ್ನ
ಹೀಗೆ ಜನಪದರು ಮೇಲು ಜಾತಿಯವರು ತಮ್ಮ ಜಾತಿಯ ಹೆಣ್ಣನ್ನು ಕೇಳಿದ ಕೂಡಲೆ ತಮ್ಮ ಜನ್ಮ ಪಾವನವಾಯಿತೆಂದು ತಮ್ಮ ಸ್ವಾಭಿಮಾನವನ್ನು ತೊರೆದು ದಡಕ್ಕನೆ ಒಪ್ಪಿ ಅವರಿಗೆ ಶರಣಾಗುವುದನ್ನು ಒಪ್ಪಿಕೊಳ್ಳುವುದಿಲ್ಲ. ‘ ಕೀಳೆಂದು ‘ ಸಮಾಜ ಭಾವಿಸಿದ ತಮ್ಮ ದುಡಿಮೆಯ ಕಡು ಕಷ್ಟದ ಕೆಲಸಗಳನ್ನು ಕಲಿತು ಸೈ ಎನ್ನಿಸಿಕೊಂಡ ಮೇಲೆಯೇ ಅವನು ತಮ್ಮ ರೀತಿಯಲ್ಲೇ ದುಡಿಮೆಗಾರನಾಗಿ ಪರಿವತರ್ಿತನಾದ ಮೇಲೆಯೇ ತಮ್ಮ ಹೆಣ್ಣು ಅವನನ್ನು ಒಪ್ಪಿಕೊಳ್ಳವಂತೆ ಮಾಡಿದ್ದಾರೆ.
ನಮ್ಮ ಪುರಾಣ, ಮಹಾಕಾವ್ಯಗಳಲ್ಲಿ ಭಗೀರಥನೆಂಬುವನು ಸತ್ತು ಬೂದಿಯಾದ ತಮ್ಮ ವಂಶಜರು ಉನ್ನತ ಲೋಕಗಳಿಗೆ ಸೇರಲೆಂದು ಗಂಗೆಯನ್ನು ಭೂಮಿಯ ಮೇಲೆ ಹರಿಯುವಂತೆ ಮಾಡುವ ಯತ್ನದಲ್ಲಿ ಸ್ವರ್ಗದಿಂದ ಧುಮ್ಮಿಕ್ಕುವ ಅವಳ ರಭಸವನ್ನು ತಡೆಯಲೆಂದು ಶೀವನನ್ನು ಪ್ರಾಥರ್ಿಸುತ್ತಾನೆ ಆಗ ಶಿವ ತನ್ನ ಜಟೆಯನ್ನು ಬಿಚ್ಚಿ ಅದರ ಮೇಲಕ್ಕೆ ಗಂಗೆ ಧುಮುಕಲೆಂದೂ ತಾನು ಆ ರಭಸವನ್ನು ತಡೆದು ಶಾಂತವಾಗಿ ಗಂಗೆ ಹರಿಯುವಂತೆ ಮಾಡುತ್ತೇನೇಂದು ಒಪ್ಪಿಕೊಂಡು ಅದರಂತೆ ಮಾಡುತ್ತಾನೆ. ಗಂಗೆಯ ಬಗೆಗಿನ ಪುರಾಣಗಳ ಕಥೆಗೂ, ನಮ್ಮ ಜಾನಪದ ಕವಿಗಳು ಗಂಗೆ-ಶಿವನ ಸಂಬಂಧವನ್ನು ವಾಖ್ಯಾನಿಸಿ ವಿಸ್ತರಿಸುವ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಅದರಿಂದ ಒಂದು ಅದ್ಭುತ ಪ್ರೇಮ ಕಥೆ ಹೊರ ಹೊಮ್ಮುತ್ತದೆ. ಅದೇ ರೀತಿ ಶಿವ ಪರ್ವತಿಯರ ಪ್ರೇಮವನ್ನು ಕೂಡ ಎಷ್ಟು ಬಣ್ಣಿಸಿದರೂ ತಣಿಯದು ನಮ್ಮ ಜಾನಪದರ ಮನಸ್ಸು. ಇದನ್ನೂ ಕೂಡ ಅಂತಸ್ತು, ಜಾತಿಗಳನ್ನು ಮೀರಿದ ಮಾನವೀಯ ತುಡಿತವಾಗಿ ‘ ಕಾಣು ‘ವ ಅವರ ಕಾಣ್ಕೆ ಹಾಗೂ ಅವರ ಚಿತ್ರಕ ಶಕ್ತಿ ಪ್ರಸಿದ್ಧ ಮಹಾಕವಿಗಳಿಗೆ ಹೆಗಲೆಣೆಯಾದದ್ದು.ಜೊತೆಗೆ ನಮ್ಮ ಯಾವ ವೇದ ಪುರಾಣಗಳನ್ನೂ ಮೀರಿದ ಜಾತಿರಹಿತ ಮನೋಭಾವನೆಯನ್ನು ಜಾನಪದರು ಹೊರಗೆಡಹುತ್ತಾರೆ.
ಬೀಬಿ ನಾಚ್ಚಿಯಾರ್ ಮತ್ತು ಮೇಲುಕೋಟೆ ಚೆಲುವರಾಯ ಸ್ವಾಮಿಯ ಪ್ರೇಮ ಪ್ರಸಂಗ
ಹೀಗೂ ಉಂಟೆ !!! ಹಿಂದೂ ಧರ್ಮದ ಪರಿಧಿಯೊಳಗೇ ಜಾತಿರಹಿತ ಮದುವೆಗಳ ಬಗ್ಗೆಯೇ ಎಷ್ಟೆಲ್ಲಾ ಕೊಲಾಹಲಗಳು ,! ಅಂತಹದ್ದರಲ್ಲಿ ಹಿಂದು ದೇವರನ್ನು ಮುಸ್ಲಿಂ ಯುವತಿ ಪ್ರೀತಿಸುವುದೆಂದರೇನು ? ದೇವರೇ ಅದನ್ನು ಒಪ್ಪಿ ಸ್ವೀಕರಿಸುವುದೆಂದರೇನು ? ಎಲ್ಲಿಯ ದೆಹಲಿ ಬಾದಶಹ, ಎಲ್ಲಿಯ ಮೇಲುಕೋಟೆ ಚೆಲುವರಾಯ !! ಇಂತಹ ಸಂಬಂಧವೊಂದು ಜಾನಪದರ ಮನಸ್ಸಿನಲ್ಲಿ ನೆಲೆಯೂರಿದೆ. ಬಾದಶಾಹನ ಮಗಳು ಬೀಬಿ ನಾಚ್ಚಿಯಾರ್ಗೆ ‘ ವರನಂದಿ ಎಂದು ಹೊಸ ನಾನಕರಣ ಮಾಡಿ ಎದೆಗಪ್ಪಿಕೊಂಡ ನಮ್ಮ ಜಾನಪದರ ಹೃದಯ ವೈಶಾಲ್ಯ ಇಂದಿಗೂ ಆದರ್ಶವಾದದ್ದು.. ‘
ಇದಕ್ಕೆ ಸಂಬಂಧಿಸಿದ ಐತಿಹ್ಯ ಹೀಗಿದೆ : ದೆಹಲಿ ಬಾದಶಾಹ ದಕ್ಷಿಣ ಭಾರತಕ್ಕೆ ದಂಡೆತ್ತಿ ಬಂದು ಇಲ್ಲಿಯ ಅನೇಕ ದೇವರುಗಳ ಮೂರ್ತಿಗಳನ್ನು ಕೊಂಡೊಯ್ಯುತ್ತಾನೆ. ಅದರಲ್ಲಿ ಮೇಲುಕೋಟೆ ಚೆಲುವನ ಮೂರ್ತಿಯ ಚೆಲುವು ಈ ಬಾದಶಾಹನ ಮಗಳನ್ನು ಆಕಷರ್ಿಸುತ್ತದೆ. ಅವಳು ಅದನ್ನು ತನ್ನ ಆಟದ ಗೊಂಬೆಯಾಗಿ ಆರಿಸಿಕೊಂಡು ಹಗಲೂ ಇರುಳೂ ಅದನ್ನು ಮುದ್ದಿಸುತ್ತಾ ಅದರ ಸಂಗಾತದಲ್ಲೇ ಕಾಲ ಕಳೆಯುತ್ತಾಳೆ. ಮೇಲು ಕೋಟೆಯ ಚೆಲುವರಾಯನ ಭಕ್ತರಾದ, ಮೆಲುಕೋಟೆ ಕ್ಷೇತ್ರದ ಪುನರುತ್ಥಾನ ಮಾಡಿದ ಪ್ರಸಿದ್ಧ ತ್ರಿಮತಸ್ಥ ಆಚಾರ್ಯಗಳಲ್ಲೊಬ್ಬರಾದ ರಾಮಾನುಜ ಐಯ್ಯಂಗಾರ್ಯರಿಗೆ ಚೆಲುರಾಯನ ಮೂರ್ತಿ ದೆಹಲಿಯಲ್ಲಿರುವುದು ತಿಳಿಯಿತು. ಆಗ ಅವರು ಕಾಶೀ ಯಾತ್ರೆಗೆ ಹೋಗುವುದರ ಜೊತೆಗೆ ದೆಹಲಿ ಬಾದಶಾಹನ ಆಸ್ಥಾನಕ್ಕೆ ಹೋದರು.. ಅಲ್ಲಿ ಬಾದಶಾಹನ ಮನವೊಲಿಸಿ ಈ ಉತ್ಸವ ಮೂರ್ತಿಯನ್ನು ಪಡೆದು ಮೇಲುಕೋಟೆಗೆ ತಂದು ಅಲ್ಲಿನ ದೇವಾಲಯದಲ್ಲಿ ಸ್ಥಾಪಿಸಿದರು. ಈ ದೇವರನ್ನು ಪ್ರೇಮಿಸಿ ತನ್ನ ಗಂಡನೆಂದೇ ಭಾವಿಸಿದ್ದ ಬೀಬಿ ನಾಚ್ಚಿಯಾರ್ ಈ ಚೆಲುವನ ಅಗಲಿಕೆಯನ್ನು ಸಹಿಸಲಾರದೆ ವಿರಹ ವೇದನೆಗೊಳಗಾದಳು. ಕೊನೆಗೆ ತನ್ನ ಪ್ರೀತಿಯ ದೇವತೆಯನ್ನು ಅರಸುತ್ತಾ ಮೇಲುಕೋಟೆಗೆ ಬಂದಳು.. ಅಲ್ಲಿ ಕಟ್ಟಾ ಸಂಪ್ರದಾಯಸ್ಥ ಪುರೋಹಿತ ವರ್ಗ ಅವಳನ್ನು ಗರ್ಭಗುಡಿಗೆ ಸೇರಿಸಲಿಲ್ಲ. ನೊಂದಕೊಂಡ ಬೀಬಿ ತನ್ನ ಇನಿಯನ ದೇಗುಲ ಯಾವಾಗಲೂ ಕಣ್ನ ಮುಂದಿರುವಂತೆ ಕೆಲಗೆ ಒಂದು ಬಂಡೆಯ ಮೇಲೆ ನೆಲೆ ನಿಂತಳು. ಇವಳ ಗಾಢ ಪ್ರೇಮಕ್ಕೆ ಒಲಿದ ಚೆಲುವರಾಯ ದೇವಾಲಯದಲ್ಲಿ ತನ್ನ ಮೂಲ ವಿಗ್ರಹದ ಪಾದದ ಬುಡದಲ್ಲಿ ಅವಳಿಗೆ ಸ್ಥಾನ ನೀಡಿದ, ಈಗಲೂ ಆ ಮೂತರ್ಿಯನ್ನು ಕಾಣಬಹುದು.

ಇಂತಹದೊಂದು ರೋಚಕವಾದ ಪ್ರೇಮಪ್ರಸಂಗ ನಮಮ್ಮ ಜಾನಪದ ಕವಿಗಳ ಕ್ಯಗೆ ಸಿಕ್ಕರೆ ಅವರಿಗೆ ರಸಭರಿತ ಕಬ್ಬು ಸಿಕ್ಕಂತೆ ! ಅವರು ಅದನ್ನು ತಮ್ಮದೇ ಕಲ್ಪನೆಯೊಂದಿಗೆ ವಿಸ್ತರಿಸಿ ರಾತ್ರಿಯೆಲಾ ಕಣ್ಣ ರೆಪ್ಪೆ ಮುಚ್ಚದೆ ಕುಳಿತು ನೊಡುವಂತಹ ಚೆಂದದ ಕಾವ್ಯವನ್ನು ಸೃಷ್ಠಿಸಿದ್ದಾರೆ. ಜಾನಪದ ಕಾವ್ಯದ ಪ್ರಕಾರ ಹಲವು ದೇವರುಗಳ ಮೂತರ್ಿಗಳು ದಿರುಳಿ ಪಾಶ್ಚಾನ ( ದೆಹಲಿ ಬಾದಶಾನ ) ಖಜಾನೆಯಲ್ಲಿ ಬಂಧನಕ್ಕೊಳಗಾಗಿವೆ. ಬಿಡುಗಡೆಯ ದಾರಿಯೇನೂ ಎಂದು ಪರಿತಪಿಸುತ್ತಿವೆ. ಆಗ ಬಾದಶಾನ ಮಗಳು ತಂದೆಯ ಅಪ್ಪಣೆಪಡೆದು ಆಟಕ್ಕಾಗಿ ಬೊಂಬೆಯನ್ನು ಹುಡುಕಿಕೊಂಡು ಖಜಾನೆಗೆ ಬರುತ್ತಾಳೆ ಅವಳಿಗೆ ಬೇರೆ ಬೇರೆ ಕಾರಣಗಳಿಗಾಗಿ ತಿರುಪತಿಯ ವೆಂಕಟೇಸನೂ ಸೇರಿದಂತೆ ಅನೇಕ ದೇವರುಗಳು ಇಷ್ಟವಾಗುವುದಿಲ್ಲ. ಆಗ ದೇವರುಗಳೆಲ್ಲಾ ಸೇರಿ ಚೆಲುವರಾಯನನ್ನು ಕೇಳಿಕೊಳ್ಳುತ್ತಾರೆ. ನೀ ನು ಹೇಗಾದರೂ ಮಾಡಿ ಅವಳನ್ನು ಸೆಳೆದುಕೋ ಅದೊಂದೇ ನಮ್ಮೆಲ್ಲರ ಬಿಡುಗಡೆಯ ದಾರಿ. .ಅವಳು ಬೇರೆ ಧರ್ಮದವಳಾದರೂ ಪರವಾಗಿಲ್ಲ. ನಾವೆಲ್ಲಾ ಸೇರಿ ನಿಮ್ಮಿಬ್ಬರ ಮದುವೆಯನ್ನು ಮಾಡಿಸುತ್ತೇವೆ. ಸರಿ. ನಮ್ಮ ಚೆಲುವ ತನ್ನ ಮಾಟವನ್ನು ಬೀರುತ್ತಾನೆ. ಹೊರಟು ಹೋಗುವುದರಲ್ಲಿದ್ದ ಅವಳನ್ನು ಕೂಗಿ ಕರೆಯುತ್ತಾನೆ. ಅವನ ವೈರಮುಡಿ , ಅವನ ಚೆಲುವಿಕೆ ಅವಳ ಮನಸೆಳೆಯುತ್ತದೆ. ಆದರೆ ಸುಲಭವಾಗಿ ಕೈಗೆ ಸಿಗದೆ ಅವಳನ್ನು ಖಜಾನೆಯ ತುಂಬೆಲ್ಲಾ ಓಡಿಯಾಡಿಸಿ ಬಳಲಿಸುತ್ತಾನೆ ಕೊನೆಗೆ ಅವಳಿಗೆ ಒಲಿಯುತ್ತಾನೆ. ಅವಳು ಚೆಲುವನನ್ನೇ ಒಲಿದು, ಅವನಲ್ಲದೆ ನಾನು ಬೇರೆ ಯಾರನ್ನೂ ಮದುವೆಯಾಗುವುದಿಲ್ಲವೆಂದು ನಿಶ್ಚಯಿಸುತ್ತಾಳೆ. ರಾತ್ರಿಯ ವೇಳೆೆ ಮನುಷ್ಯ ರೂಪು ತಳೆದು ಬೀಬಿಯನ್ನು ಕೂದುತ್ತಾನೆ. ಕೊನೆಗೆ ಬೀಬಿಯೂ ಚೆಲುವನೂ ಇತರ ಎಲ್ಲಾ ದೇವರೊಡಗೂಡಿ ತಪ್ಪಿಸಿಕೊಂಡು ಓಡಿಬರುತ್ತಾರೆ. ಎಲ್ಲ ದೇವರುಗಳೂ ಸೇರಿ ತಾವು ಕೊಟ್ಟ ಮಾತಿನಂತೆ ಬೀಬಿಯ ನಾಲಗೆ ಸುಟ್ಟು ಚೆಲುವರಾಯನ ಜೊತೆ ವೈಭವದಿಂದ ಮದುವೆ ಮಾಡಿಸುತ್ತಾರೆ. ಜಾನಪದರು ಅವಳನ್ನು ವರನಂದಿಯೆಂದು ಪೂಜಿಸುತ್ತಾರೆ. ಈಗಲೂ ಅಲ್ಲಿಯ ಪುರೋಹಿತ ವರ್ಗ ತಮ್ಮ ಯಾವುದೇ ಆಚರಣೆಗಳಲ್ಲಿ ವರನಂದಿಯೆಂಬ ಈ ಬೀಬಿಯನ್ನು ಸೇರಿಸಿಕೊಳ್ಳುವುದಿಲ್ಲ ಅವಳ ಹೆಸರೂ ಎತ್ತವುದಿಲ್ಲ. ಚೆಲುವರಾಯನ ಮೂಲಮೂತರ್ಿಯ ಪಾದದ ಬುಡದಲ್ಲಿರುವ ಅವಳ ಮೂತರ್ಿಯನ್ನೂ ಹೂವಿನಿಂದ ಮುಚ್ಚಿಬಿಡುತ್ತಾರೆ. ಆದರೆ ಜಾನಪದರು ಮೇಲುಕೋಟೆಯ ಸುತ್ತ ಮುತ್ತಲ ನಾಲ್ಕು ಗ್ರಾಮದ ಜನರು ಪ್ರತಿ ಆಶ್ವಯುಜ ಮಾಸದಲ್ಲಿ ವರನಂದಿಯ ಜಾತ್ರೆಯನ್ನು ಮಾಡುತ್ತಾ ಬರುತ್ತಿದ್ದಾರೆ.
ಪ್ರೀತಿಗೆ ಜಾತಿ ಮತಗಳ ಬೇಧವಿಲ್ಲ. ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ ಎಂಬ ಬೇಧದ ಕೋಟೆ ಗೋಡೆಗಳನ್ನೊಡೆದು ಪ್ರೇಮ ಅರಳುತ್ತದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ ! ಜಾನಪದರು ಈ ಪ್ರೇಮದ ಬಗ್ಗೆ ಯಾವುದೇ ದ್ವೇಷ, ವಿರೋಧದ ಭಾವನೆಯನ್ನು ತೋರ್ಪಡಿಸದೆ ಸಂಭ್ರಮದಿಂದ ಹಾಡಿ ನಲಿಯುವುದನ್ನು ನೋಡಿದರೆ ಸಾಕು ಸಾಮಾನ್ಯ ಜನ ಮೂಲಭೂತವಾಗಿ ಜಾತಿ ಮತಗಳನ್ನು ಮೀರಿದ ಪ್ರೇಮದ ಪರವಾಗಿದ್ದಾರೆ. ಆದರೆ ಕುಲ, ಜಾತಿ, ಪಂಗಡಗಳ ಒತ್ತಡಗಳು ಮುಖ್ಯವಾಗಿ ಆಯಾ ಸಮುದಾಯದ ಮುಖ್ಯಸ್ತರಿಂದ, ಪಟ್ಟಭದ್ರ ಹಿತಗಳಿಂದ ಅವರನ್ನು ಮಾನವಿಯ ಭಾವನೆಗಳಿಂದ ವಿಮುಖಗೊಳಿಸುತ್ತವೆ. ಇಂತಹ ಸಂದರ್ಭದಲ್ಲಿ ಜಾತಿ,ಮತಗಳ ಸಂಕುಚಿತ ಭಾವನೆಗಳಿಗೆ ವಿರುದ್ಧವಾಗಿ ದೇವಾನು ದೇವತೆಗಳ ಬಗೆಗಿನ ಜಾನಪದ ಸಾಹಿತ್ಯವನ್ನು ಬಳಸಿದರೆಅವರಲ್ಲಿನ ಮಾನವೀಯ ಭಾವನೆಯನ್ನು ಉದ್ದೀಪ್ತಗೊಳಿಸುವುದಕ್ಕೆ ವಿಪುಲ ಅವಕಾಶವಿದೆ.
‘ ಭಾರತ ‘ ವೆಂಬಾ ನಮ್ಮ ದೇಶದ ಹೆಸರಿನ ಮೂಲದಲ್ಲಿಯೇ ಪ್ರೇಮ ರಾರಾಜಿಸುತ್ತಿದೆ
ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ಪ್ರೇಮಿಗಳ ದಿನಾಚರಣೆ, ಅಷ್ಟಕ್ಕೇ ನಿಲ್ಲದೆ ಪ್ರೇಮಿಸುವುದೇ ನಮ್ಮ ಸಂಸ್ಕೃತಿಗೆ ಹೊರಗು ಎಂಬಂತೆ ಬಿಂಬಿಸಲಾಗುತ್ತಿದೆ, ವಿವಿಧ ರೀತಿಯ ಧಾಳಿಗಳನ್ನು ಮಾಡಲಾಗುತ್ತಿದೆ. ಈ ಬಾರಿ ಕರ್ನಾಟಕ ಸರ್ಕಾರವೇ ಪ್ರೇಮಿಗಳ ದಿನದಂದು ತಂದೆ ತಾಯಿಯರನ್ನ ಗೌರವಿಸಬೇಕೆನ್ನುವ ಉಪದೇಶಗಳನ್ನು ಶಾಲಾ ಕಾಲೇಜುಗಳಲ್ಲಿ ಸಂಘಟಿಸಿ ಹಾಸ್ಯಾಸ್ಪದವೆನ್ನಿಸಿಕೊಂಡಿದೆ. ಈ ಮೂರ್ಖರಿಗೆ ಭಾರತೀಯ ಸಾಂಸ್ಕೃತಿಕ ಇತಿಹಾಸದ ಬಗ್ಗೆ ಎಳ್ಳು ಮೊನೆಯಷ್ಟಾದರೂ ಗೊತ್ತಿದೆಯೇ ಎಂಬ ಅನುಮಾನ ಹುಟ್ಟುತ್ತದೆ.ನಮ್ಮದು ಭಾರತೀಯ ಸಂಸ್ಕೃತಿ ಎಂದು ಒಣ ಜಂಭ ಪಡುವವರು ನೈಜವಾದ ಹೆಮ್ಮೆ ಪಡಲು ನಮ್ಮ ದೇಶದ ಸಂಸ್ಕೃತಿಯ ಇತಿಹಾಸವನ್ನು ಸ್ವಲ್ಪವಾದರೂ ಅಧ್ಯಯನ ಮಾಡಬೇಕು.ಅದರಲ್ಲಿಯೂ ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಬರಲು ಕಾರಣವಾದ ಪ್ರಸಂಗದ ಬಗ್ಗೆ ಯಾದರೂ ತಿಳಿದುಕೊಳ್ಳದೇ ಹೋದರೆ ಹೇಗೆ ?
ಭಾರತ, ಭರತ ವರ್ಷ ಎಂದು ನಮ್ಮ ದೇಶಕ್ಕೆ ಹೆಸರು ಬರಲು ಕಾರಣನಾದ, ದೀರ್ಘಕಾಲ ನಮ್ಮ ದೇಶವನ್ನು ಆಳಿದ ಚಕ್ರವತರ್ಿ ಭರತ, ದುಷ್ಯಂತ-ಶಕುಂತಲೆಯರ ಪ್ರೇಮ ಹಾಗೂ ಗಾಂಧರ್ವ ವಿವಾಹದ ಫಲವಾಗಿಹುಟ್ಟಿದವನು. ಪ್ರಾಚೀನ ಮಹಾಕಾವ್ಯವಾದ ಮಹಾಭಾರತದಲ್ಲಿ ಶಕುಂತಳೋಪಖ್ಯಾನದಲ್ಲಿ ಉಲ್ಲೇಖವಾದ ಈ ಉದಾಹರಣೆಯೇ ಭಾತರದ ಮೊದಲ ಪ್ರೇಮ ಪ್ರಸಂಗವೇನೂ ಅಲ್ಲ. ನಮ್ಮ ದೇಶದಲ್ಲಿ ಮೊದಲ ಸಾಹಿತ್ಯವಾಗಿ ಋಗ್ವೇದ ಎಂದು ಸೃಷ್ಠಿಯಾಯಿತೋ ಅದರ ಜೊತೆಯಲ್ಲಿಯೇ ಮೊದಲ ಪ್ರೇಮ ಪ್ರಕರಣವೂ ಉಲ್ಲೇಖಿತವಾಯಿತು. ಋಗ್ವೇದದ ಹತ್ತನೆಯ ಮಂಡಲದಲ್ಲಿ ಊರ್ವಶಿ-ಪುರೂರವರ ಪ್ರೇಮದ ಸೂಚನೆಯಿದೆ. ನಂತರ ಇದು ಶತಪಥ ಬ್ರಾಹ್ಮಣದಲ್ಲಿ, ಅನೇಕ ಪುರಾಣಗಳಲ್ಲಿ ವಿಸ್ತರಿಸಲ್ಪಟ್ಟಿದೆ. ಶಿವ-ದಕ್ಷನ ಮಗಳು ಸತಿ, ಅವಳು ತೀರಿಕೊಂಡ ನಂತರ ಹಿಮವಂತನ ಮಗಳು ಪಾರ್ವತಿಯ ಪ್ರೇಮದ ಕಥೆಗಳು ಯಾವುದೇ ಅಮರ ಪ್ರೇಮ ಪ್ರಸಂಗಗಳಿಗಿಂತ ರೋಚಕವಾಗಿವೆ. ಮಹಾಭಾರತದಲ್ಲಯೇ ನಳ-ದಮಯಂತಿಯ ಪ್ರೇಮದ ಸುಖ, ಅದಕ್ಕಾಗಿ ಅವರು ಪಡುವ ಕಷ್ಟ ಮನಸ್ಸು ಇರುವ ಯಾರನ್ನಾದರೂ ಪ್ರೇಮಿಗಳ ಪರವಾಗಿಸುತ್ತದೆ. ಇವುಗಳ ಜೊತೆಗೆ ಕೃಷ್ಣ-ರುಕ್ಮಿಣಿ, ರಾಧಾ-ಕೃಷ್ಣ, ಶಂತನು-ಗಂಗೆ ಅದು ಕೊನೆಗೊಂಡ ನಂತರ ಶಂತನು- ಸತ್ಯವತಿ, ಅರ್ಜುನ- ಸುಭದೆ, ಭೀಮ-ಹಿಡಿಂಬೆಯರ ಪ್ರೀತಿಯ ಬೆಳಕು ಭಾರತದ ಜನಜೀವನವನ್ನು ಸಾವಿರಾರು ವರ್ಷಗಳ ಕಾಲದಿಂದ ಬೆಳಗಿಸಿದೆ.ಇದಲ್ಲದೆ ತಿರುಪತಿಯ ವೆಂಕಟೇಶ- ಪದ್ಮಾವತಿಯ ಪ್ರೇಮದ ಕಥೆಯಂತೆ ಭಾರತದ ತುಂಬೆಲ್ಲಾ ಎಷ್ಟೊಂದು ಸ್ಥಳ ಪುರಾಣಗಳು . ಹೀಗೆ ನಮ್ಮ ವೇದ, ಪುರಾಣ ಮೊದಲಾದ ಧಾಮರ್ಿಕ ಗ್ರಂಥಗಳಲ್ಲಿ ಎಷ್ಟೊಂದು ಪ್ರೇಮ, ಪ್ರೀತಿ, ಪ್ರಣಯಗಳು.
ಪ್ರೇಮ ಕಥಾನಕಗಳನ್ನು ಕೈ ಬಿಟ್ಟರೆ ಸಂಸ್ಕೃತ ಸಾಹಿತ್ಯದಲ್ಲಿ ಉಳಿಯುವುದೆಷ್ಟು ?
ಇನ್ನು ಸಂಸ್ಕೃತ ಸಾಹಿತ್ಯದಲ್ಲಿ ಮಹಾಕವಿ ಕಾಳೀದಾಸನಂತೂ ಬರೆದದ್ದೆಲಾ ಮಹತ್ವದ ಪ್ರೇಮ ಕಾವ್ಯವೇ. ಅವನ ಮೂರು ಪ್ರಸಿದ್ಧ ನಾಟಕಗಳು ‘ ವಿಕ್ರಮೋವಶರ್ೀಯ ‘ ( ಋಗ್ವೇದದ ಪುರೂರವ-ಊರ್ವಶಿಯರ ಕಥೆ ),’ ಮಾಳವಿಕಾಗ್ನಿ ಮಿತ್ರ ‘( ಅಗ್ನಿ ಮಿತ್ರನೆಂಬ ರಾಜ ಮತ್ತು ಮಾಳವಿಕೆಯರ ಪ್ರೇಮ ಕಥೆ ), ‘ ಅಭಿಜ್ಞಾನ ಶಾಕುಂತಲ (ದುಶ್ಯಂತ- ಶಕುಂತಲೆಯರ ಕಥೆ ), ‘ ಅವನ ಕಾವ್ಯ ‘ ಕುಮಾರಸಂಭವ ‘ ಶಿವ – ಪಾರ್ವತಿಯರ ಪ್ರೇಮ ಕಥೆ ) , ‘ ಮೇಘದೂತ (ಪ್ರೀತಿಯ ಹೆಂಡತಿಯನ್ನು ಅಗಲಬೇಕಾಗಿ ಬಂದ ಯಕ್ಷನೊಬ್ಬನ ವಿರಹಗೀತೆ ) ‘,’ ಋತು ಸಂಹಾರ (ವಿವಿಧ ಋತುಗಳಲ್ಲಿ ಪ್ರಕೃತಿಯ ವರ್ಣನೆ ಆಯಾ ಋತುಗಳು ಉಂಟುಮಾಡುವ ಶೃಂಗಾರ ಭಾವನೆಗಳ ಬಣ್ಣನೆ ) , ‘ ಪ್ರೇಮದ ವಿವಿಧ ರೂಪ, ಹಂತಗಳನ್ನು ನವಿರಾಗಿ ಬಣ್ಣಿಸಿ ಯಶಸ್ಸು ಪಡೆದಿವೆ. ಕಾಳಿದಾಸನ ನಂತರದ ಸ್ಥಾನ ಪಡೆದ ಭಾಸನ ‘ ಸ್ವಪ್ನ ವಾಸವದತ್ತಾ ‘ ‘ ಪ್ರತಿಜ್ಞಾ ಯೌಗಂಧರಾಯಣ ‘ (ರಾಜಾ ಉದಯನ- ವಾಸವದತೆಯರ ಪ್ರೇಮ ಗಾಥೆ ) ್ತ, ಶೂದ್ರಕನ ‘ ಮೃಚ್ಛಕಟಿಕ ‘ ( ವೇಶ್ಯೆ ವಸಂತಸೇನೆ-ನಾಗರಿಕ ಚಾರುದತ್ತರ ಪ್ರೇಮ ಗಾಥೆ ) ನಾಟಕಗಳು ಬಾಣ ಭಟ್ಟನ ‘ ಕಾದಂಬರಿ ‘ ( ಮಹಾಶ್ವೇತೆ-ಪುಂಡಲೀಕ , ಕಾದಂಬರಿ- ಚಂದ್ರಾಪೀಡರ ಪ್ರೇಮ ಕಥೆ ) ಭತೃಹರಿಯ ‘ ಶೃಂಗಾರ ಶತಕ ‘ ಜಯದೇವ ಕವಿಯ ‘ ಗೀತಗೋವಿಂದ ‘, ರುದ್ರ ಭಟ್ಟನ’ ಜಗನ್ನಾಥ ವಿಜಯ ‘ ಹೀಗೆ ಸಂಸ್ಕೃತದ ನಾಟಕ, ಕಾವ್ಯಗಳಿಂದ ಪ್ರೇಮ ಕಥಾನಕಗಳನ್ನು ತೆಗೆದು ಹಾಕಿದರೆ ಉಳಿಯುವುದೆಷ್ಟು ?
ಗಂಡು- ಹೆಣ್ಣು ಒಂದು ಕಡೆ ನಿಂತು ಮಾತಾಡಬಾರದು, ಅವರು ಸಂಧಿಸಬಾರದು, ಬೆರೆಯಬಾರದು, ಅವರು ಪ್ರೇಮಿಸಲು ಅವಕಾಶ ಕೊಡಬಾರದು, ಹಿರಿಯರು ನಿಶ್ಚಯಿಸಿದ ಮದುವೆ, ಮದುವೆಯ ನಂತರವಷ್ಟೇ ಪ್ರೇಮ, ಅದೇ ಭಾರತೀಯ ಸಂಸ್ಕೃತಿ ಎನ್ನವವರು ಈ ಕಾವ್ಯ, ನಾಟಕಗಳನ್ನು ತಪ್ಪದೇ ಓದಬೇಕು. ಪ್ರೇಮಿಸುವಾಗ ಈ ದೇವರುಗಳು ಯಾವ ಜಾತಿ, ಅಂತಸ್ತುಗಳನ್ನು ಲೆಕ್ಕಕ್ಕೇ ಇಟ್ಟಕೊಂಡಿಲ್ಲದಿರುವುದು ತಂತಾನೇ ಅರಿವಾಗುತ್ತದೆ .ಭಾರತದ ದೇವಾನುದೇವತೆಗಳೇ ಹಾಕಿಕೊಟ್ಟ ಹಾದಿಯನ್ನು ಭಾರತೀಯರು ತುಳಿದರೆ ಸಾಕು ಭಾರತದಲ್ಲಿ ಪ್ರೇಮ ಜಾತಿ, ಕುಲ, ಅಂತಸ್ತು, ಸಂಪತ್ತುಗಳ ಮೇರೆ ಮೀರಿ ಪಲ್ಲವಿಸುತ್ತದೆ.
ಭದ್ರೆ, ಎನಿತೆನಿತೋ ಕುವರಿಯರು ಪ್ರೇಮಿಗಳನ್ನು ಗಾಂಧರ್ವ ವಿವಾಹವಾಗಿದ್ದಾರೆ –
( ದುಶ್ಯಂತ- ಶಕುಂತಲೆಯರ ಪ್ರಣಯ ಪ್ರಸಂಗ )
ಎನಿತೆನಿತೋ ಮುನಿಸುತೆಯರು ಅರಸುಕುವರಿಯರು
ಗಾಂಧರ್ವ ವಿಧಿಯಿಂದೆ ಪ್ರೇಮಿಗಳ ವರಿಸಿಹರು
ಇದನು ತಿಳಿದಾ ಬಳಿಕಾ ತಂದೆ ತಾಯಿಯರು
ತಂತಮ್ಮ ಮಕ್ಕಳನು ಅಭಿನಂದಿಸಿಹರು
ವಿಶ್ವದಲಿ ತನ್ನ ಕಾವ್ಯಮಯತೆಯಿಂದ ಅತ್ಯಂತ ಶ್ಲಾಘನೆಗೆ ಪಾತ್ರವಾದ ಭಾರತೀಯ ಸಾಹಿತ್ಯ ಕೃತಿ ಮಹಾಕವಿ ಕಾಳಿದಾಸನ ಸಂಸ್ಕೃತ ನಾಟಕ ‘ ಅಭಿಜ್ಷಾನ ಶಾಕುಂತಲ ‘ ದಲ್ಲಿ ಇದು ದುಷ್ಯಂತ ಶಕುಂತಲೆಗೆ ಧೈರ್ಯ ತುಂಬಲು ಹೇಳುವ ಮಾತುಗಳಿವು. ಮಹಾಭಾರತದ ಒಂದು ಉಪಕಥೆಯನ್ನು ಕಾಳಿದಾಸ ಮಹೋನ್ನತ ನಾಟಕವಾಗಿ ರೂಪಿಸಿ ನಮ್ಮ ದೇಶದ ಸಾಹಿತ್ಯಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟಿದ್ದಾನೆ.
ಕಾಡಿನಲ್ಲಿ ಕಣ್ವ ಋಷಿಯ ಆಶ್ರಮದಲ್ಲಿ ಗಿಡಗಳಿಗೆ ನೀರೆರೆಯುತ್ತಿದ್ದ ಶಕುಂತಲೆಯನ್ನು ಪುರುವಂಶದ ಚಕ್ರವತರ್ಿ ದುಷ್ಯಂತ ಬೇಟೆಗೆ ಹೋಗಿದ್ದಾಗ ಸಂಧಿಸುತ್ತಾರೆ. ಪರಸ್ಪರ ಪ್ರೀತಿಸುತ್ತಾರೆ. ಕಣ್ವಋಷಿ ಆಗ ಆಶ್ರಮದಲ್ಲಿ ಇರುವುದಿಲ್ಲ. ಅವರ ಗೈರು ಹಾಜರಿಯಲ್ಲಿಯೇ ಗಾಂಧರ್ವ ವಿವಾಹವಾಗುತ್ತಾರೆ. ಇದಕ್ಕೆ ಆಶ್ರಮದ ತಾಪಸರು, ತಾಪಸಿಯರು ಯಾರೂ ವಿರೋಧ ವ್ಯಕ್ತಪಡಿಸುವುದಿಲ್ಲ, ಬದಲಾಗಿ ಸಹಕರಿಸುತ್ತಾರೆ, ಕಣ್ವರು ಕೂಡ ಈ ಬಗ್ಗೆ ಯಾವ ಆಕ್ಷೇಪಣೆ ಮಾಡುವುದಿಲ್ಲ ಎಂಬುದನ್ನು ನೋಡಿದರೆ ಈ ರೀತಿ ಬೇರೆ ಯಾರ ಅಭಿಪ್ರಾಯ ಒಪ್ಪಿಗೆಯ ಅವಶ್ಯಕತೆಯೂ ಇಲ್ಲದೆ ಮದುವೆಯಾಗುವುದು ನಾಟಕದಲ್ಲಿ ದುಷ್ಯಂತ ಹೇಳುವಂತೆ ಒಂದು ವ್ಯಾಪಕವಾಗಿ ಬಳಕೆಯಲ್ಲಿದ್ದ ಪದ್ಧತಿಯಂತೆ ಕಾಣುತ್ತದೆ. ದುಷ್ಯಂತ ಆಶ್ರಮದಲ್ಲಿಯೇ ಅವಳನ್ನು ಬಿಟ್ಟು ರಾಜಧಾನಿಗೆ ಹಿಂದಿರುಗುತ್ತಾನೆ.
ಆದರೆ ದುಷ್ಯಂತ ಇಡೀ ಪ್ರಸಂಗವನ್ನೇ ಮರೆತು ಬಿಡುತ್ತಾನೆ. ಗಭರ್ಿಣಿ ಶಕುಂತಲೆಯನ್ನು ತಿರಸ್ಕರಿಸುತ್ತಾನೆ. ಶಕುಂತಲೆಗೆ ಭರತ ಮಗನಾಗಿ ಹುಟ್ಟಿದ ಎಷ್ಟೋ ಕಾಲದ ನಂತರವಷ್ಟೇ ಮತ್ತೆ ಶಕುಂತಲೆಯನ್ನು ಭೇಟಿಯಾದಾಗ ಮತ್ರ ಅವನಿಗೆ ಅವಳನ್ನು ಮದುವೆಯಾದ ನೆನಪು ಬರುತ್ತದೆ. ಅಲ್ಲಿಯವರೆಗೆ ಶಕುಂತಲೆ ಅನುಭವಿಸಿದ ವೇದನೆ, ಅವಮಾನ ಅನುಭವಿಸುತ್ತಾಏಕಾಂಗಿಯಾಗಿ ಕಾಲ ದೂಡಬೇಕಾಯಿತು. ಇದು ಇಂದು ಕೂಡ ಗಂಡಿನ ಮೋಸಕ್ಕೆ ತುತ್ತಾಗುವ ಅಸಂಖ್ಯ ಹೆಣ್ಣುಗಳ ಕಥೆಯನ್ನು ಪ್ರತಿಬಿಂಬಿಸುವಂತೆ ತೋರುತ್ತದೆ.
ತಪಸ್ಸು ಯಾಕಂದ್ರೆ ? ಪ್ರೀತಿಗಾಗಿ, ಕೇವಲ ಪ್ರೇಮಕ್ಕಾಗಿ
( ಶಿವ-ಸತಿ, ಶಿವ ಪಾರ್ವತಿಯರ ಪ್ರೇಮ-ಕಾಮ )
ಶಿವ- ಪಾರ್ವತಿಯರ ದಾಂಪತ್ಯ ಸರಿಸುಮಾರು ಭಾರತೀಯರೆಲ್ಲರಿಗೂ ಗೊತ್ತಿರಬಹುದು, ಅವರ ಪ್ರೇಮ ಪ್ರಸಂಗ ಹಲವರಿಗೆ ಗೊತ್ತಿರಬಹುದು. ಆದರೆ ಅದಕ್ಕೆ ಮೊದಲಿನ ಶಿವ-ಸತಿ ಪ್ರೇಮದ ಬಗ್ಗೆ ಕೆಲವೇ ಜನರಿಗೆ ಮಾತ್ರ ಗೊತ್ತು.
ಶಿವ ಸೊಂಟಕ್ಕೊಂದು ಚರ್ಮದ ತುಂಡು ಸುತ್ತಿಕೊಂಡು ಬೂದಿಬಡಕನಾಗಿ ಹಿಮಾಲಯದ ಬೆಟ್ಟಗಳ ಮೇಲೆ ಸುತ್ತಾಡುತ್ತಿದ್ದ.ಸ್ಮಶಾನವೇ ಅವನ ವಾಸ ಸ್ಥಳ. ಆಗ ಈ ಯೋಗಿಯ ಮೇಲೂ ಮನಸ್ಸಿಟ್ಟು ಅವನನ್ನೇ ಮದುವೆ ಆಗಬೇಕೆಂದು ಹಠ ಹಿಡಿದವಳು ದಕ್ಷ ಪ್ರಜಾಪತಿಯ 24 ಜನ ಹೆಣ್ಣು ಮಕ್ಕಳಲ್ಲೋಬ್ಬ ಮಗಳು ಸತಿ. ಬಾಲ್ಯದಿಂದಲೇ ಶಿವನ ಬಗ್ಗೆ ನೆರೆಹೊರೆಯವರಾಡುವುದನ್ನು ಕೇಳುತ್ತ ಕೇಳುತ್ತಾ ಬೆಳೆದ ಆಕೆ ಶಿವನಲ್ಲಿಯೇ ನೆಟ್ಟು ಹೋಯಿತು.
ಸರಿ ಮದುವೆಯ ವಯಸ್ಸಾಯಿತು. ಬ್ರಹ್ಮನ ಹತ್ತು ಜನ ಮಕ್ಕಳಲ್ಲಿ ಒಬ್ಬನಾಗಿ ಪ್ರಸಿದ್ಧನಾಗಿದ್ದ ದಕ್ಷ ರಾಜಾಧಿರಾಜರನ್ನು, ವೀರಾಧಿವೀರರನ್ನು ಮಗಳಿಗೆ ತೋರಿಸಿದ. ಆದರೆ ಯಾರನ್ನೂ ಒಪ್ಪಲಿಲ್ಲ ಈ ದಾಕ್ಷಾಯಣಿ ( ದಕ್ಷನ ಮಗಳು ). ಸರಿ ತಂದೆಗೆ ಸಿಟ್ಟು ಬಂತು. ನಿನ್ನ ಮನಸ್ಸಿನಲ್ಲಿರುವುದೇನು ? ಮದುವೆಯಾಗದೇ ಕನ್ಯೆಯಾಗಿಯೇ ಉಳಿಯಬೇಕೆಂದಿದ್ದೀಯೇನು ? ಬಾಯಿ ಬಿಟ್ಟು ಹೇಳು ಎಂದು ಗದರಿಸಿದ. ತಾನು ಇಂತವನನ್ನು ಪ್ರೀತಿಸುತ್ತೇನೇಂದು ತಂದೆಯ ಮುಂದೆ ಯಾವ ಮಗಳು ಧೈರ್ಯವಾಗಿ ಹೇಳಿಯಾಳು ? 21 ನೆಯ ಶತಮಾನದಲ್ಲಿ ಕೂಡ ಅದು ಕಷ್ಠಕರ.ಇನ್ನು ಆಗ !
ಕೊನೆಗೆ ಬೇರೇ ದಾರಿಯಿಲ್ಲದೇ ಮೆಲ್ಲನುಸುರಿದಳು ಸತಿ : ತಾನು ಶಿವನನ್ನು ಪ್ರೀತಿಸಿರುವನೆಂದು. ಒಮ್ಮಗೇ ತಂದೆಗೆ ಸಿಡಿಲು ಬಡಿದಂತಾಯ್ತು ಅವನೇ ಆ ಬೂದಿಬಡಕ, ತಾನೇನು ! ತನ್ನ ಅಂತಸ್ತೇನು? ಅವನಿಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡುವುದೇ ? ಎಂದೆಂದಿಗೂ ಸಾಧ್ಯವಿಲ ಎಂದು ಕೈ ಕೊಡವಿಬಿಟ್ಟ ದಕ್ಷ ಪ್ರಜಾಪತಿ. ಅವನಿಗೆ ಶಿವನನ್ನು ಕಂಡರೇ ಆಗುತ್ತಿರಲಿಲ್ಲ, ಆದರೆ ತಾನು ಮದುವೆಯಾದರೆ ಶಿವನನ್ನೇ ಹೊರತು ಮತ್ಯಾರನ್ನೂ ಅಲ್ಲ ಎಂದು ಸತಿ ಹಠ ಹಿಡಿದಳು. ತಂದೆ ಏನೇ ಆಸೆ ತೋರಿಸಿದರೂ. ಬೆದರಿಸಿದರೂ ಜಗ್ಗಲಿಲ್ಲ. ಕೊನೆಗೆ ಅವಳನ್ನು ತನ್ನರಮನೆಯಿಂದ ಹೊರಗೇ ದೂಡಿಬಿಟ್ಟ ಕಠಿಣ ಹೃದಯದ ತಂದೆ. ಈಗಲೂ ಅಂತಹ ಪ್ರಕರಣಗಳು ಹೇರಳವಾಗಿವೆಯಲ್ಲ.
ಒಂಟಿಯಾಗಿ ಹೊರಗೆ ಬಂದ ಸತಿ ಏನು ಮಾಡಿಯಾಳು ? ಇವಳೇನೋ ಶಿವನನ್ನು ಪ್ರೀತಿಸಿದ್ದಾಳೆ ಸರಿ . ಆದರೆ ಶಿವ ! ಅವನು ಮದುವೆಯ ಯಾವ ಗೊಡವೆಯನ್ನೂ ಹಚ್ಚಿಕೊಳ್ಳದೆ ತಪಸ್ಸು ಮಾಡುತ್ತಾ ಜೋಗಿಯಂತೆ ಅಲೆದಾಡುತ್ತಾ ಇದ್ದ. ಅವನ ಬಳಿ ಸತಿಯ ಪ್ರೇಮವನ್ನು ಪ್ರಸ್ತಾಪ ಮಾಡುವರ್ಯಾರು ? ಯೋಚನೆ ಮಾಡಿಯೇ ಮಾಡಿದಳು ಸತಿ ಕೊನೆಗೆ ಅವಳಿಗೆ ಹೊಳೆದದ್ದು ಒಂದೇ ಮಾರ್ಗ. ಅಂದಿನ ದಿನಗಳಲ್ಲಿ ಬಹಳ ಪ್ರಚಲಿತವಾಗಿದ್ದ ಮಾರ್ಗ ; ತಪಸ್ಸು ಶಿವನೂ ಅದರಲ್ಲಯೇ ಮುಳುಗಿದ್ದವನಲ್ಲವೇ !
ಸರಿ. ತಪಸ್ಸಿಗೆ ಕುಳಿತಳು. ಹಂತ ಹಂತವಾಗಿ ಆಹಾರವನ್ನು ತ್ಯಜಿಸುತ್ತಾ ಹೋದಳು. ದಿನಕ್ಕೆ ಒಂದೇ ಒಂದು ಬಿಲ್ವ ಪತ್ರೆಯ ಎಲೆಯನ್ನು ಮಾತ್ರ ಸೇವಿಸಿ ತಿಂಗಳುಗಟ್ಟಲೇ ಕಳೆದಳು. ಕೊನೆಗೆ ಆ ಒಂದು ಎಲೆಯನ್ನೂ ತಿನ್ನುವುದನ್ನು ಬಿಟ್ಟು ಬಿಟ್ಟಳು. ( ಅದಕ್ಕಾಗಿಯೇ ಸತಿ ‘ ಅಪಣರ್ಾ ‘ ಎಂದು ಹೆಸರಾದದ್ದಂತೆ. ) ಸರಿ ಇಷ್ಟರ ವೇಳೆಗೆ ಅವಳ ಭೀಕರ ತಪಸ್ಸು ಹಿಮಾಲಯದಲ್ಲೆಲಾ ಮನೆ ಮಾತಾಯಿತು ( ಆಗ ಹಿಮಾಲಯದಲ್ಲಿ ಎಷ್ಟು ಮನೆಗಳಿದ್ದುವು ಎಂದು ಕೊಂಕು ತೆಗೆಯಬೇಡಿ ನಾನೇನು ಅದರ ಜನಗಣತಿ ಮಾಡಿಲ್ಲ. ) ತನ್ನನ್ನು ಒಲಿಸಿಕೊಳ್ಳುವ ಸಲುವಾಗಿ ಹುಡುಗಿಯೊಬ್ಬಳು ಘನಘೋರ ತಪಸ್ಸು ಮಾಡುತ್ತಿರುವ ವಿಷಯ ಕೊನೆಗೂ ಶಿವನ ಕಿವಿಗೆ ಬಿತ್ತು. ಅವಳ ಧೃಡತೆಗೆ ಮೆಚ್ಚಿ ಶಿವ ಸತಿಯನ್ನು ನೋಡಲೆಂದು ಬಂದ . ನೋಡಿದ. ಮರುಳಾದ. ಯಾರಿದು ತನ್ನ ಏಕಾಂತಕ್ಕೆ ಲಗ್ಗೆಯಿಟ್ಟು ತನ್ನ ತಪೋಭಂಗಕ್ಕೆ ಕಾರಣರಾದವರು ಎಂದು ಸಿಟ್ಟಿನಿಂದ ಕಣ್ಣು ತೆಗೆದಳು ಸತಿ . ನೋಡಿದರೆ ತನ್ನ ಮೆಚ್ಚಿನ ನಲ್ಲ ತನ್ನೆದುರೇ ನಿಂತಿದ್ದಾನೆ. ಕೈ ಚಾಚಿದ್ದಾನೆ. ಕೈ ಹಿಡಿಯುಯಲು ತಯಾರು ಎನ್ನುತ್ತಿದ್ದಾನೆ. ಹಿರಿ ಹಿರಿ ಹಿಗ್ಗಿದ ಸತಿ ಒಪ್ಪಿದಳು.
ಇಲ್ಲಿಂದ ಮುಂದಕ್ಕೆ ಏನು ನಡೆಯಿತು ಎಂಬ ಬಗ್ಗೆ ಬೇರೇ ಬೇರೇ ಮೂಲಗಳು , ಪುರಾಣಗಳು ಬೇರೇ ಹೇಳುತ್ತವೆ ಅವಳು ಮದುವೆಯಾದ ನಂತರ ನಿನ್ನ ಜೊತೆ ಬರುವೆ ನೆಂದು ತಂದೆ ದಕ್ಷನ ಅರಮನೆಗೆ ಮರಳಿದಳು ಆಗಲೂ ತಂದೆ ಒಪ್ಪಲಿಲ್ಲ. ಕೊನೆ ಗೆ ಅನಿವಾರ್ಯವಾಗಿ ತಾನೇ ಶಿವನೊಡನೆ ಕೈಲಾಸಕ್ಕೆ ಹೋಗಿ ಸಂಸಾರ ಹೂಡಿದಳು ಎಂದು ಕೆಲವು, ಶಿವನು ಒಲಿದ ಕೂಡಲೇ ಇಬ್ಬರೂ ಕೈಲಾಸಕ್ಕೆ ಹೋಗಿ ನೆಲಸಿದರು ಎಂದು ಮತ್ತೆ ಕೆಲವು ಹೇಳುತ್ತವೆ. ಹೇಗಾದರೂ ಆಗಲಿ ಸತಿ ತನ್ನ ಮನದನ್ನನನ್ನು ಒಲಿಸಿಕೊಂಡಳು. ನೆಲೆಯಿಲ್ಲದ ಶೀವನಿಗೆ ಕೈಲಾಸ ನೆಲೆಯಾಯಿತು.
ಇಲ್ಲೀಗೆ ಶಿವಶಿವ ಇಲ್ಲೀಗೆ ಹರ ಹರ ಎನ್ನ ಬಹುದೇ ? ಇಲ್ಲ ಇನ್ನೂ ಬಹಳ ಕಥೆ ಬೆಳೆದಿದೆ.
ಇನ್ನು ಮುಂದಿನ ಕಥೆ ಬಹಳಷ್ಡು ಶಿವಭಕ್ತರಿಗೆ ತಿಳಿದ ಕಥೆ. ಅವರಿಂದ ದೇವಾಲಯಗಳ ಶಿಲ್ಪಗಳು, ಕಾವ್ಯ, ಪುರಾಣಗಳು, ಶರಣರ ವಚನಗಳು, ಮಠ,ಮಂದಿರಗಳಲ್ಲಿ ನಡೆಯುವ ಹರಿಕಥೆ, ಶಿವಕಥಾ ಕಾಲಕ್ಷೇಪಗಳು ಇವುಗಳ ಮೂಲಕ ಹಲವರಿಗೆ ತಿಳಿದ ವಿಷಯ. ಆದ್ದರಿಂದ ಸಂಕ್ಷಿಪ್ತವಾಗಿ ಮುಗಿಸೋಣ.
ಸತಿ ಶಿವರು ಹೀಗೇ ಕೈಲಾಸದಲ್ಲಿ ಸುಖವಾಗಿ ಜೀವನ ಸಾಗಿಸುತ್ತಮಿರೆ , ಏನಾಯ್ತಪ್ಪಾ ಅಂದರೆ : ಸತಿಯ ತಂದೆ ದಕ್ಷಬ್ರಹ್ಮ ಒಂದು ದೊಡ್ಡ ಯಾಗ ಮಾಡುವ ಯೋಚನೆ ಮಾಡಿದ. 33 ಕೋಟಿ ದೇವತೆಗಳಿಗೂ, ಗಂಧರ್ವ, ಯಕ,್ಷ ಕಿನ್ನರ ,ಕಿಂಪುರುಷ ಮೊದಲಾದ ಸುತ್ತೇಳು ಲೋಕದ ಜನರಿಗೂ ಕರೆ ಹೊಯಿತು ಆದರೆ ಮೂರು ಲೋಕದ ದೇವ ಶಿವನಿಗೆ , ಅವನ ಸತಿಗೆ ಕರೆ ಬರಲಿಲ್ಲ. ತನ್ನ ತಂದೆಯ ಮನೆಗೆ ಹೋಗುವುದಕ್ಕೆ ಕರೆ ಬೇಕೆ ಎಂದು ಸತಿ ಹೊರಟು ನಿಂತಳು. ಶಿವ ಕರೆ ಬರದೆ ಹೋಗುವುದು ಬ್ಯಾಡ ಕನಮ್ಮಿ ಎಂದು ಎಷ್ಟು ಹೇಳಿದರೂ ಕೇಳಲಿಲ್ಲ. ಅಲ್ಲಿಗೆ ಹೊದರೆ ಅವಳನ್ನು ತಂದೆಯೂ , ಅವಳ ತವರು ಮನೆಯವರ್ಯಾರೂ ಕ್ಯಾರೇ ಎನ್ನಲಿಲ್ಲ.ಯಜ್ಞದ ಪ್ರಸಾದವನ್ನೂ ಕೊಡಲಿಲ್ಲ. ಜೊತೆಗೆ ಅಲ್ಲಿ ಶಿವನ ಮೂತರ್ಿಯನ್ನು ದ್ವಾರಪಾಲಕನಂತೆ ಇಟ್ಟು ಅವಮಾನ ಬೇರೆ ,ಈ ಭೂಲೋಕದ ಮೇಲೆ ಜನರು ಮಾಡುವ ಸಿಟ್ಟು ,ಸೆಡವು, ದ್ವೇಷ, ರೋಷ ಯಾವುದಕ್ಕೂ ಕಡಿಮೆಯಿಲ್ಲದಂತೆ ಆ ದೇವಲೋಕದಲ್ಲಿಯೂ ನಡೆಯುತ್ತದೆ, ಇದೇ ಸಣ್ಣ ಮನಸ್ಸುಗಳೇ ಅವರಿಗೂ ಎನ್ನವುದಕ್ಕೆ ಬೇರೆ ಉದಾಹರಣೆ ಬೇಕೇ !
ಈ ಅಪಮಾನ, ಅದರಲ್ಲಿಯೂ ತನ್ನ ಪ್ರೀತಿಯ ಶಿವನಿಗೆ 1 ಕೊನೆಗೆ ತಡೆಯಲಾರದೇ ಯಜ್ಞ ಕುಂಡಕ್ಕೇ ಧುಮುಕಿ ಬಿಟ್ಟಳು ಶಿವನ ಸತಿ ಸತೀ ದೇವಿ. ಸತಿ ಉರಿದು ಹೋದಳು. ಈ ಸುದ್ದಿ ಶಿವನಿಗೆ ಮುಟ್ಟಿತು. ಶಿವ ಕೆಂಡಾಮಂಡಲವಾದ. ಉಗ್ರ ರೂಪ ತಾಳಿದ. ಮೂಲೋಕಗಳೂ ತರತರಗುಟ್ಟುವಂತೆ ತಾಂಡವ ನೃತ್ಯವನ್ನಾರಂಭಿಸಿದ. ಅವನ ಹಣೆಯ ಬೆವರಿನಿಂದ ಯಾ ಮುಂದಲೆಯ ಕೂದಲಿನಿಂದ ವೀರಭದ್ರ ಜನಿಸಿದ. ಅವನ ನೇತೃತ್ವದಲ್ಲಿ ಶಿವನ ಗಣಂಗಳು ದಕ್ಷನ ಯಜ್ಞ ಶಾಲೆಯನ್ನು ಹಾಳುಗೆಡವಿದರು. ಮುಂದೆ ದೇವತೆಗಳ ಪ್ರಾರ್ಥನೆಯ ಮೇರೆಗೆ ದಕ್ಷನಿಗೆ ಹೋತನ ತಲೆಯನ್ನು ಸಿಕ್ಕಿಸಿ ಅವನಿಗೆ ಪ್ರಾಣ ದಾನ ಮಾಡಿದ ನಮ್ಮ ಶಿವ. ಆದರೆ ಸತಿಯನ್ನು ಕಳೆದುಕೊಂಡ ಅವನ ದಃಖ ಮೇರೇ ಮೀರಿತು. ಅವಳ ಶವವನ್ನು ಭುಜದ ಮೇಲೇ ಹೊತ್ತು ಇಡೀ ಲೋಕ ಸಂಚರಿಸಿದ. ಕೊನೆಗೆ ವಿಷ್ಣು ಸತಿಯ ದೇಹವನ್ನು ಕತ್ತರಿಸಿ ದೇಶದ ಹನ್ನೆರಡು ಜಾಗಗಳಿಗೆ ಹಂಚಿ ಹಾಕಿದ . ಈ ಹನ್ನೆರಡು ಜಾಗಗಳೂ ಶಕ್ತಿಯ ಪೂಜಾ ಕೇಂದ್ರಗಳಾಗಿವೆ ಎಂದು ಪ್ರತೀತಿ. ನಂತರ ಶಿವ ಈ ಲೋಕದ ಗೊಡವೆಯನ್ನೇ ಬಿಟ್ಟು ತನ್ನ ತಪಸ್ಸಿನಲ್ಲಿ ಮುಳುಗಿ ಹೋದ.
ಶಿವನು ಭಿಕ್ಷಕೆ ಬಂದ ನೀಡು ಬಾರೇ ತಂಗಿ, ಶಿವಗಿಂತ ಚೆಲುವರಿಲ್ಲ ನೋಡು ಬಾರೇ
ನೋಡಿ ನಮ್ಮ ಶಿವನು ತಪಸ್ಸಿಗೆ ಕುಳಿತೇ ಬಿಟ್ಟ, ಸ್ವಾಮಿ ನೀವು ತಪಸ್ಸಿಗೆ ಕುಳಿತರೆ ಹೆಂಗೆ ? ನಿಮಗಿನ್ನೂ ಮಕ್ಕಳಾಗಬೇಕು. ಅವರು ದೇವರನ್ನೂ ಮಾನವರನ್ನೂ ಸಲುವಬೇಕು. ಸತಿಯ ಹಾಗೆಯೇ ಮುಂದೆ ಹಿಮವಂತನ ಮಗಳು ಪಾರ್ವತಿ, ಗಿರಿಜೆ, ಹೈಮವತಿ ಎಂದೇನಾದರು ಕರೆಯಿರಿ. ಅವಳೂ ಶಿವನನ್ನೇ ಪ್ರೇಮಿಸಿದಳು. ಗಿರಿರಾಜ ದಕ್ಷನಂತೆ ವಿರೋಧಿಸಲಿಲ್ಲ ಬದಲಾಗಿ ಸಂತಸಗೊಂಡ. ಆದರೆ ಸಮಸ್ಯೆಯೇನೇಂದರೆ ಶಿವನನ್ನು ತಪಸ್ಸಿನಿಂದ ಎಚ್ಚರಿಸುವವರು ಯಾರು ? ಸಂಸಾರ ಮುಖಿಯಾಗಿಸುವವರು ಯಾರು ? ಕೊನೆಗೆ ನಾರದನ ಸಲಹೆಯಂತೆ ಶಿವನ ಪೂಜೆಗೆ ಆಣಿ ಮಾಡಿಕೊಡಲು ಪಾರ್ವತಿಯನ್ನು ನೇಮಿಸಿದರು. ಇಲ್ಲ, ಶಿವ ಕದಲಲಿಲ್ಲ.ಕೊನೆಗೆ ಮನ್ಮಥನ ಹೂ ಬಾಣದ ಸಹಾಯವನ್ನು ಪಡೆದರು. ಆದರೆ ಇದೇನಾಯಿತು ? ಮನ್ಮಥನೇ ಸುಟ್ಟು ಭಸ್ಮವಾಗಿಬಿಟ್ಟ. ಕೊನೆಗೆ ಉಳಿದದ್ದು ಮತ್ತೆ ಅದೇ ದರಿ. ಸತಿ ತುಳಿದ ತಪಸ್ಸಿನ ಹಾದಿ. ಶಿವ ಇದಕ್ಕೆ ಮಣಿಯಲೇ ಬೇಕಾಯಿತು. ಗಿರಿಜೆಗೆ ಒಲಿದು ಮದುವೆಯಾಗಿ ಮತ್ತೆ ಕೈಲಾಸ ಗಿರಿಯನ್ನು ಸೇರಿದ.ಅವರ ಸುರತ ಸಂಭ್ರಮವೂ ಎಣೆಯಿಲ್ಲದಂತಾಯಿತು. ಅವರ ಪ್ರೇಮ, ಪ್ರೀತಿಯೂ ಜಗತ್ತಿಗೆ ಮಾದರಿ ಎನ್ನುವಂತಾಯಿತು. ಇದನ್ನು ಅರ್ಧ ನಾರೀಶ್ವರನೆಂಬ ಕಲ್ಪನೆಯ ಮೂಲಕ ಭಾರತೀಯ ಮನಸ್ಸು ಅಜರಾಮರವನ್ನಾಗಿಸಿದೆ.
***
ಜಿ ಎನ್ ನಾಗರಾಜ್ ಅವರ ಪುಸ್ತಕ ’ಪ್ರೇಮ ಉಕ್ಕಿತೋ ಸಾಗರದ್ಹಾಂಗ’ ಇಂದು ಬಿಡುಗಡೆಯಾಗುತ್ತಿದೆ. ಪುಸ್ತಕದ ಮುನ್ನುಡಿ ’ಅವಧಿ’ ಓದುಗರಿಗಾಗಿ








sakaalika baraha..
ಪ್ರೀತಿಗೆ ಎಷ್ಟೊಂದು ರೂಪಗಳು !