ತಮಿಳಿನಲ್ಲಿ ಕೇಳು ಪುಸ್ತಕಗಳು ಬಂದಿವೆ ಎಂಬುದು ಇತ್ತೀಚೆಗೆ ನನ್ನ ಗಮನಕ್ಕೆ ಬಂದಿತ್ತು. ಅದು ಬೆಂಗಳೂರು ಪುಸ್ತಕ ಮೇಳದಲ್ಲಿ. ಕನ್ನಡದಲ್ಲೂ ಲೇಖಕರು, ಪ್ರಕಾಶಕರಿಂದ ಇಂಥ ಪ್ರಯತ್ನಗಳಾಗಬೇಕು ಎಂದುಕೊಳ್ಳುತ್ತಿದ್ದೆ.
ಆ ನಿಟ್ಟಿನಲ್ಲಿ ಜಿ ಎನ್ ಮೋಹನ್ ಅವರ “ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ” ಕವನಸಂಕಲನದ ಕೇಳು ಪುಸ್ತಕ ಒಂದು ದಾಖಲೆಯಾಗಬಲ್ಲುದು.
ಇತ್ತೀಚೆಗೆ ನಾನು, ಅಂಧ ಓದುಗರ ಅನುಕೂಲದ ದೃಷ್ಟಿಯಿಂದ ಕನ್ನಡದ ಪ್ರಮುಖ ಕೃತಿಗಳು ಬ್ರೈಲ್ ಲಿಪಿಯಲ್ಲಿ ಮುದ್ರಣಗೊಂಡು ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಲಭ್ಯವಾಗುವುದರ ವಿಚಾರವಾಗಿ ಬರೆದಿದ್ದೆ. ಇಂಥ ಯೋಜನೆಗಳು ಹೆಚ್ಚು ವೆಚ್ಚದಾಯಕ ಎನ್ನಿಸಿದರೂ ಅಂಧ ಓದುಗರು ಕನ್ನಡದ ಅತ್ಯುತ್ತಮ ಕೃತಿಗಳನ್ನು ಓದುವ ಅವಕಾಶದಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಮುಖ್ಯ.
ಇದೇ ಬಗೆಯಲ್ಲಿ ಕೇಳು ಪುಸ್ತಕ ಕೂಡ ಅಂಧರಿಗೆ ಉಪಯುಕ್ತವಾಗಬಲ್ಲುದು. ಕವಿತೆಗಳನ್ನು ಅದೇ ಕವಿಯ ಮೂಲಕ ಅಥವಾ ಪರಿಣಾಮಕಾರಿಯಾಗಿ ವಾಚಿಸಬಲ್ಲವರ ಮೂಲಕ ಕೇಳಿಸಿಕೊಳ್ಳಲು ಅವಕಾಶವಾಗುವುದು, ಕನ್ನಡದಲ್ಲಿ ಓದುವ ಪ್ರವೃತ್ತಿ ಬೆಳೆಯಲು ಕಾರಣವಾಗಬಲ್ಲುದು.
ಮುಂದಿನ ದಿನಗಳಲ್ಲಿ ಕಾದಂಬರಿಗಳು, ಸಣ್ಣ ಕಥೆಗಳು, ಪ್ರಬಂಧಗಳು ಕೂಡ ಕೇಳು ಪುಸ್ತಕದ ರೂಪದಲ್ಲಿ ಬರುವಂತಾಗಬೇಕು. ದೇವನೂರು ಮಹಾದೇವ ಅವರ “ಕುಸುಮಬಾಲೆ” ಖಂಡಿತ ಈ ರೂಪದಲ್ಲಿ ಬರಬೇಕು. ಕೃತಿಯೊಂದು ಪ್ರಾದೇಶಿಕ ಮೌಖಿಕ ಪರಂಪರೆಯ ಭಾಗವಾಗಿಯೇ ಕಾಣುವಂತಾಗಲು ಇದರಿಂದ ಸಾಧ್ಯ.
ಹಾಗೆಯೇ ಕಂಬಾರರ ಕವಿತೆಗಳನ್ನು ಅವರದೇ ಧ್ವನಿಯಲ್ಲಿ, ಅನಂತಮೂರ್ತಿಯವರ ಭಾಷಣಗಳನ್ನು, ಇನ್ನೂ ಅನೇಕ ಕೃತಿಗಳನ್ನು (ಪುಸ್ತಕದ ಬದಲಾಗಿ) ಇದೇ ರೂಪದಲ್ಲಿ ತರಬಹುದು. ಕಾಗದದ ಖರ್ಚು ಕಡಿಮೆ ಮಾಡಬಹುದು ಎಂಬ ದೃಷ್ಟಿಯಿಂದಲೂ ಇದು ಹಿತವೆನ್ನಿಸೀತು.
ಸತೀಶ್ ಶಿಲೆ





Ee Hosa PrayOgakke kaataradinda kaayuttiddEve.
KeLu Pustaka yashasviyaagali endu haaraisuttEne.
kelu pustaka dhakaleyagli endu haaraisuve