ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇಳುಗನೊಬ್ಬನ ಮಾತುಗಳಲ್ಲಿ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ – ಎಚ್ ಕೆ ಶರತ್

ಎಚ್ ಕೆ ಶರತ್


“ಮಾರಬಹುದೇ ಅವಳ ಬಳೆ ತೊಟ್ಟ ಸಂಭ್ರಮವನ್ನು… ಮಾರಬಹುದೇ ತೊದಲಿನ ಮೊದಲನ್ನು… ಮಾರುವ ಮಾರಿ ಹೊಕ್ಕಿದ್ದು ನಿನ್ನೆ ಮೊನ್ನೆಯಲ್ಲ’ ಎಂದು ಮಾರುವ ಮನಸ್ಥಿತಿಗೆ ಮರುಳಾದವರನ್ನು ಕುಟುಕಿದವರು ಹಿರಿಯ ಕವಯತ್ರಿ ಎಂ.ಆರ್.ಕಮಲ.

ರೈತರ ಆತ್ಮಹತ್ಯೆ, ಬಾಹುಬಲಿಯ ತ್ಯಾಗ, ಅತ್ಯಾಚಾರ, ಅಸ್ಪೃಶ್ಯತೆ, ಸಮ್ಮೇಳನದ ಆಡಂಬರಕ್ಕೆ ವಿರೋಧ ಹೀಗೆ ವರ್ತಮಾನಕ್ಕೆ ಸ್ಪಂದಿಸುವಂತಹ ಹಲವು ಕವನಗಳ ನಡುವೆ ವೈಯಕ್ತಿಕ ಅನುಭವಗಳಿಗೆ ಮೀಸಲಾದ ಕವನಗಳು ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ವಾಚಿಸಲ್ಪಟ್ಟವು.
ಕವಿಗೋಷ್ಠಿಯಲ್ಲಿ ಮೊದಲ ಕವನ ವಾಚಿಸಿದ ಜಿ.ಎನ್.ಮೋಹನ್ ಅವರು ತಮ್ಮ ಕವನವನ್ನು ರೈತರಿಗೆ ಅರ್ಪಿಸಿದರು. ರೈತರ ಆತ್ಮಹತ್ಯೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಅವರು ರಚಿಸಿದ್ದ “ಸಣ್ಣ ಸಾಲಕ್ಕೆ ನಮಸ್ಕಾರ’ ಕವನ ವರ್ತಮಾನದ ರೈತರ ಸಮಸ್ಯೆಗಳಿಗೆ ಕನ್ನಡಿ ಹಿಡಿಯಿತು. ಕಾವ್ಯಕೃಷಿಯಲ್ಲಿ ಹಲವು ವರ್ಷಗಳಿಂದ ತೊಡಗಿರುವ ಮೋಹನ್ ಅವರು, ಕವನ ವಾಚಿಸಿದ ರೀತಿಯು ಗಮನಸೆಳೆಯಿತು. “ಬೇಳೆ ಬೇಯಲು ಕಾವು ನೀಡಿದ ಸಣ್ಣ ಸಾಲವೇ ನಿನಗೆ ನಮಸ್ಕಾರ’ ಎಂಬ ಸಾಲು ಹಲವು ಅರ್ಥಗಳನ್ನು ಹೊಮ್ಮಿಸುವಂತಿತ್ತು.

ಸಾಹಿತ್ಯ ಸಮ್ಮೇಳನದ ಅದ್ಧೂರಿತನ ವಿರೋಧಿಸುವ ಕವನವನ್ನು ರೂಪ ಹಾಸನ ಅವರು ವಾಚಿಸಿದರು. “ಎಲ್ಲಾ ಮೂರೇ ದಿನಕ್ಕಾಗಿ’ ಎಂಬ ಶೀರ್ಷಿಕೆಯ ಅವರ ಕವನ ಸಾಹಿತ್ಯ ಸಮ್ಮೇಳನ ಆಯೋಜಿಸಿದವರ ಮತ್ತು ಅದರಲ್ಲಿ ಪಾಲ್ಗೊಳ್ಳುತ್ತಿರುವವರ ಆತ್ಮವಂಚನೆಯ ಪ್ರವೃತ್ತಿಗೆ ಕನ್ನಡಿ ಹಿಡಿಯುವಂತಿತ್ತು.

ಹೆಚ್.ಎನ್.ಆರತಿ ಅವರು ವಾಚಿಸಿದ “ನಾನು ಚೆನ್ನಾಗಿದ್ದೇನೆ’ ಕವನ ಅರ್ಥಪೂರ್ಣವಾಗಿತ್ತು. ಅವರ ವಾಚನಾಶೈಲಿ ಎಲ್ಲರ ಗಮನ ಸೆಳೆಯಿತು.
ತಮ್ಮ ಕವನ ಜಿ.ಎಸ್.ಎಸ್. ಅವರ ಕವಿತೆಯೊಂದರ ನೆರಳಿನಲ್ಲಿ ಮೂಡಿಬಂದಿದೆ ಎಂಬುದನ್ನು ಮೊದಲೇ ಹೇಳಿ “ನನ್ನ ಕವಿತೆ’ ವಾಚಿಸಿದ ಅರಸೀಕೆರೆಯ ಡಿ.ಎಸ್.ರಾಮಸ್ವಾಮಿ ಅವರು, ಕವಿಯೊಬ್ಬನ ಮನಸ್ಥಿತಿ ಬಿಂಬಿಸುವ ಪ್ರಯತ್ನ ಮಾಡಿದರು. ಅವರ ಕವಿತೆಯಲ್ಲಿನ “ನಾನು ಬರೆಯುವ ಕವಿತೆ ಶಾಶ್ವತ ಎಂಬ ಭ್ರಮೆಯಿಲ್ಲ… ಕವಿತೆ ಬರೆಯುತ್ತೇನೆ, ಅನುದಿನದ ಅಂತರಗಂಗೆ ದಾಟುವ ಸಲುವಾಗಿ… ಕವಿಗೋಷ್ಠಿ ಮುಗಿದ ಬಳಿಕ ನಾನು ಯಾರೋ ನೀವು ಯಾರೋ’ ಎಂಬ ಸಾಲುಗಳು ಆ ಕ್ಷಣದ ಸತ್ಯವನ್ನೂ ನೆರೆದಿದ್ದವರಿಗೆ ದಾಟಿಸಿದವು.
ಇಡೀ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದ್ದು ಕವಿ ಮುದಿಗೆರೆ ರಮೇಶ್ ಕುಮಾರ್. ಅಂಧರಾಗಿರುವ ಅವರು ದೃಷ್ಟಿಹೀನರ ಬದುಕಿನ ಬಣ್ಣಗಳನ್ನು ತಮ್ಮ ಕವನದ ಮೂಲಕ ತೆರೆದಿಟ್ಟರು. ಸಾಹಿತ್ಯ ಸಮ್ಮೇಳನಗಳಲ್ಲಿ ಅಂಗವಿಕಲರನ್ನು ನಿರ್ಲಕ್ಷಿಸುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿ ಆನಂತರ “ನಿರೀಕ್ಷೆ’ ಕವನ ವಾಚಿಸಿದ ಅವರು, “ಬಿಸಿಲು ಕಾಯಿಸುತ್ತಾ ನಿಂತ ನನ್ನ ಜನ ನೋಡಲಿಲ್ಲ ಬೆಳಕು…’ ಎನ್ನುವ ಮೂಲಕ ಅಂಧರ ನೋವು ಹೊರಹಾಕಿದರು.

ಖ್ಯಾತ ಯುವಕವಿ ಆರಿಫ್ ರಾಜಾ, ಕವನ ಆಲಿಸುವವರನ್ನು ಸಕ್ರಿಯವಾಗಿ ಒಳಗೊಳ್ಳುವ ವಿಭಿನ್ನ ಪ್ರಯೋಗ ಮಾಡಿದರು. ಗಜಲ್ ವಾಚಿಸಿದ ಅವರು, ತಾವು ಎರಡು ಸಾಲು ವಾಚಿಸಿದ ನಂತರ ನೆರೆದಿದ್ದವರಿಗೆ “ನಿಮ್ಮದೇ ತಪ್ಪು’ ಎಂದು ಸೇರಿಸಲು ತಿಳಿಸಿದರು. ಅದಕ್ಕೆ ಪೂರಕವಾಗುವಂತಹ ಸಾಲುಗಳು ಅವರ ಗಜಲ್ನಲ್ಲಿದ್ದವು. “ಒಂದೇ ಹೂವಿಗೆ ಜೀವನ ಪೂರ್ತಿ ಹಂಬಲಿಸಿದ್ದು ನಿಮ್ಮದೇ ತಪ್ಪು… ಕಂಡ ಕಂಡದ್ದಕ್ಕೆಲ್ಲ ಕಣ್ಣೀರು ಖಲಾಸು ಮಾಡಿದ್ದು ನಿಮ್ಮದೇ ತಪ್ಪು…” ಎಂಬ ಸಾಲುಗಳು ಯುವ ಮನಸ್ಸುಗಳಿಗೆ ಕಚಗುಳಿ ಇಟ್ಟವು.
ಕೆಲವರು ವಾಚಿಸಿದ ಕವನಗಳು ತೀರಾ ವಾಚ್ಯವಾಗಿದ್ದರೂ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸುವಲ್ಲಿ ಮುಂದಿದ್ದವು. ಅಂತಹ ಕವನಗಳಲ್ಲಿ ಹೆಚ್ಚು ಗಮನ ಸೆಳೆದದ್ದು ಪ್ರಭು ಖಾನಾಪುರ ಅವರು ವಾಚಿಸಿದ “ದೃಷ್ಟಿ’ ಕವನ. “ದೃಷ್ಟಿ ಬೇಕು ಕುರುಡರಿಗಲ್ಲ ಕಣ್ಣಿದ್ದವರಿಗೆ… ಕತ್ತಲಿಗಿಂತ ಹಗಲಿನಲ್ಲಿ ಎಡವಿಬಿದ್ದವರೇ ಹೆಚ್ಚು” ಎನ್ನುವ ಸಾಲುಗಳು ವಾಸ್ತವ ತೆರೆದಿಟ್ಟವು.
ಕಟ್ಟು ಪದಗಳನ್ನು ವಾಚಿಸಿದ ಬೇಲೂರು ರಘುನಂದನ್ ಅವರ “ಮೇವಿಗಾಗಿ ಕುಡಿಸಿದ ಹಾಲು ಯಾವ ಕ್ಷಣದಲ್ಲಿ ಕೀವಾಯಿತೋ ಅರಿಯೆನು ಶ್ವೇತಪ್ರಿಯ ಗುರುವೇ’ ಸಾಲು ಹಲವು ಅರ್ಥಗಳನ್ನು ಹೊಮ್ಮಿಸುವಂತಿತ್ತು.
ಶ್ರವಣಬೆಳಗೊಳದಲ್ಲಿ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಾಹುಬಲಿ ವ್ಯಕ್ತಿತ್ವವನ್ನು ತಮ್ಮ ಕವನಗಳಲ್ಲಿ ಹಿಡಿದಿಡುವ ಪ್ರಯತ್ನವನ್ನು ಟಿ.ಸತೀಶ್ ಜವರೇಗೌಡ (ಗೊಮ್ಮಟನಿಗೊಂದು ಪ್ರಾರ್ಥನೆ), ಡಾ.ಪಿ.ಚಂದ್ರಿಕಾ (ಮಗ) ಮಾಡಿದರು.
ದಲಿತ ಕವಿ ಗೋವಿಂದದಾಸ್ ಅವರನ್ನು ನೆನಪು ಮಾಡಿಕೊಂಡ ಎಂ.ಎಸ್.ಶೇಖರ್ ಅವರು, “ಕೃಷ್ಣವರ್ಣದ ಪುಟ್ಟ ಪೋರ” ಕವನ ವಾಚಿಸಿದರು.

ಉಳಿದಂತೆ ಹೆಚ್.ಆರ್.ಲೀಲಾವತಿ “ಬತ್ತಲಾಗಬೇಕು’, ವಿಜಯಶ್ರೀ ಸಬರದ “ಹೆಜ್ಜೆ ಮೂಡದ ಹಾದಿ’, ಕೊತ್ತಲ ಮಹದೇವಪ್ಪ “ಬೆಳಕು ಕಾಣಲಿಲ್ಲ”, ರೋಹಿಣಿ ಸತ್ಯ “ಮನಸ್ಸಿನ ಬುಟ್ಟಿಯಲ್ಲಿ’, ಜಯಶ್ರೀ ಭಂಡಾರಿ “ಮನುಕುಲದ ಅತ್ಯಾಚಾರಗಳು’, ಬಿ.ಎ.ಷಂಶುದ್ದೀನ್ “ಉತ್ತರ ಹುಡುಕುತ್ತಿದ್ದೇನೆ’, ಹುಲಿಕುಂಟೆ ಮೂರ್ತಿ “ನೀವು ಮನುಷ್ಯರಾಗಲೇ ಇಲ್ಲ’, ಟಿ.ಎಸ್.ಗೊರವರ “ಗಡಿಗಳಿಲ್ಲ ಪ್ರೇಮದ ನಕಾಶೆಯಲ್ಲಿ’, ಶಿವಾನಂದ ಹಿರೇಮಠ “ಕ್ಷಮಿಸು ಬುದ್ಧ ನಾನು ಅಬೋಧೆ’, ಮಹದೇವ ಶಂಕನಪುರ “ಉರಿಗದ್ದುಗೆ ಮೇಲೆ ತಂಬೂರಿ ಪದ’, ಮಹೇಶ್ ಕವನ ವಾಚಿಸಿದರು.
ಜಿ.ಎನ್.ಮೋಹನ್, ಎಂ.ಆರ್.ಕಮಲ ಹಾಗು ಹೆಚ್.ಎನ್.ಆರತಿ ಅವರ ಕವನಗಳು ಕವಿಗೋಷ್ಠಿಯ ಮೆರುಗು ಹೆಚ್ಚಿಸಿದವು. ಕೆಲವರ ಕವನಗಳು ತೀರಾ ವಾಚ್ಯವಾಗಿ ಭಾಷಣದಂತೆ ಮಂಡಿಸಲ್ಪಟ್ಟವು. ಕೆಲವರು ಕವನ ವಾಚನಕ್ಕೂ ಮುನ್ನ ಮಂಗಳವಾರದಂದು ನಿಧನರಾದ ಲೇಖಕಿ ವಸು ಮಳಲಿ ಅವರನ್ನು ಸ್ಮರಿಸಿ, ಅವರ ನಿಧನಕ್ಕೆ ಸಂತಾಪ ಸೂಚಿಸಿದರು.
ಕವಿಗೋಷ್ಠಿಗೆ ಸಾಹಿತ್ಯಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ತಮಗಿಷ್ಟವಾದ ಸಾಲುಗಳಿಗೆ ಚಪ್ಪಾಳೆ ತಟ್ಟುವ ಮೂಲಕ ಕವಿಗಳ ಬೆನ್ನು ತಟ್ಟಿದರು.

‍ಲೇಖಕರು G

9 February, 2015

1 Comment

  1. mmshaik

    kavigostiyalli bhaagavahisidantaaytu…dhanyavaadagaLu…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading