ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇರಳದ ದಲಿತ ಹೋರಾಟಗಾರ ಅಯ್ಯನ್‌ ಕಾಳಿ

ಡಾ  ಅಪ್ಪಗೆರೆ ಸೋಮಶೇಖರ್


ಭಾರತೀಯ ಜಾತಿವಾದಿ ಸಮಾಜವು ಚರಿತ್ರೆಯ ಕರಾಳ ಗರ್ಭದಲ್ಲಿ ಮರೆಮಾಚಿರುವ ದಲಿತ ಹೋರಾಟಗಾರರ ಇತಿಹಾಸವನ್ನ ಪುನರ್ ಶೋಧಿಸುವ ಮೂಲಕ ದಲಿತರ ಸಾಂಸ್ಕೃತಿಕ ಚರಿತ್ರೆಯನ್ನು ಹೊಸದಾಗಿ ರೂಪಿಸಬೇಕಿದೆ. ಆ ಮೂಲಕ ಪ್ರಸ್ತುತ ದಲಿತ ಚಳವಳಿಯು ತನ್ನ ಹೋರಾಟದ ನೆಲೆ-ನಿಲುವುಗಳನ್ನು ಖಚಿತಪಡಿಸಿಕೊಳ್ಳಬೇಕಿದೆ. ಜೊತೆಗೆ ಭಾರತೀಯ ಶೋಷಿತರಲ್ಲಿ ಸ್ವಾಭಿಮಾನದ ಸಾಂಸ್ಕೃತಿಕ ಅಸ್ಮಿತೆಯನ್ನು ಜಾಗೃತಗೊಳಿಸುವ ತುತರ್ಿದೆ. ಭಾರತೀಯ ದಲಿತ ಚಳವಳಿಗೆ ಸುದೀರ್ಘವಾದ ಇತಿಹಾಸವಿದೆ. ಇಂತಹ ದಲಿತ ಚಳವಳಿಯನ್ನು ರೂಪಿಸಿದ ಮಹಾನ್ ಚೇತನಗಳಲ್ಲಿ ಮಹಾರಾಷ್ಟ್ರದ ಸ್ವತಂತ್ರ ಮಹಾರ್ ಬಟಾಲಿಯನ್ನ ಸೇನಾದಿಪತಿ ‘ಶಿದನಾಕ’ ಹಾಗೂ ಕೇರಳಾದ ದಲಿತ ಹೋರಾಟಗಾರ ‘ಅಯ್ಯನ್ಕಾಳಿ’ ಪ್ರಮುಖರು. ಸ್ವಾತಂತ್ರ ಪೂರ್ವದಲ್ಲೆ ಅಂದರೆ, 1818 ಜನವರಿ 1 ರಂದು ಶಿದನಾಕ ತನ್ನ ಮಹಾರ್ ಸೈನ್ಯದ ಜೊತೆಗೂಡಿ ಜಾತಿವಾದಿ ಪೇಶ್ವೆಗಳ ಅಸ್ಪೃಶ್ಯತಾಚರಣೆಯ ವಿರುದ್ಧ ಹೋರಾಡಿ ಗೆದ್ದ ಕೋರಿಗಾಂವ್ ವಿಜಯೋತ್ಸವ; 1904ರಂದು ಕೇರಳಾದ ಜಾತಿವ್ಯವಸ್ಥೆಯ ವಿರುದ್ಧ ಬಂಡೇಳುವ ಮೂಲಕ ದಲಿತರಿಗೆ ಸ್ವಾಭಿಮಾನ, ಸಾಮಾಜಿಕ ನ್ಯಾಯವನ್ನು ಕಲ್ಪಿಸಿಕೊಟ್ಟ ಕ್ರಾಂತಿಕಾರಿ ಅಯ್ಯನ್ಕಾಳಿ ಅವರ ಹೋರಾಟ ಇವತ್ತಿನ ದಲಿತ ಹೋರಾಟಕ್ಕೆ ದಾರಿದೀಪವಾಗಬೇಕಿದೆ. ‘ದಲಿತ ಹೋರಾಟಗಾರ ಅಯ್ಯನ್ಕಾಳಿ’ ಪುಸ್ತಕದ ಮೂಲ ಕತರ್ೃ ಚೆಂದರಾಶೇರಿ. ಈ ಪುಸ್ತಕವನ್ನು ತೆಲುಗಿಗೆ ಅನುವಾದಿಸಿದವರು ಅಲ್ಲಂ ನಾರಾಯಣ. ತೆಲುಗಿನ ಪುಸ್ತಕವನ್ನು ಕನ್ನಡಕ್ಕೆ ತಂದವರು ಬಿ. ಸುಜ್ಞಾನಮೂತರ್ಿ. ಇತ್ತೀಚೆಗೆ ಕನ್ನಡಕ್ಕೆ ಅನುವಾದಗೊಂಡಿರುವ ಮಹತ್ವದ ಕೃತಿಗಳಲ್ಲಿ ಇದು ಒಂದಾಗಿದೆ. ಪ್ರಸ್ತುತ ಕೃತಿಯು ಇಪ್ಪತ್ತಮೂರು ಶೀಷರ್ಿಕೆಯ ಅಡಿಯಲ್ಲಿ ಅಯ್ಯನ್ಕಾಳಿ ಅವರ ಬದುಕು-ಹೋರಾಟ-ಸಾಧನೆಯನ್ನು ಅನಾವರಣ ಮಾಡುತ್ತದೆ. ಕೃತಿಯ ಕೊನೆಯಲ್ಲಿ ‘ಅನುಬಂಧಗಳು’ ಎಂಬ ವಿಭಾಗದಲ್ಲಿ, ಕೇರಳಾದಲ್ಲಿ ಆಚರಣೆಯಲ್ಲಿದ್ದ ‘ಪುಲಯಗುಮ್ಮ’ ಎಂಬ ಆಚರಣೆಯ ಬಗೆಗೆ, ಚೇರುಮಾನ್ ಎಂಬ ಅಸ್ಪೃಶ್ಯ ಸಮುದಾಯದ ಬಗೆಗೆ ವಿವರವನ್ನು ಕೊಡಲಾಗಿದೆ.
ಅಸ್ಪೃಶ್ಯತಾಚರಣೆ ವ್ಯಾಪಕವಾಗಿದ್ದ ಕೇರಳದಲ್ಲಿ ದಲಿತರ ಸ್ವಾತಂತ್ರ್ಯ, ಸಮಾನತೆ, ಸ್ವಾಭಿಮಾನ ಹಾಗೂ ಸಾಮಾಜಿಕ ನ್ಯಾಯ, ಮಾನವ ಹಕ್ಕಿನ ಪರ ವೈಚಾರಿಕ ಕ್ರಾಂತಿಯನ್ನು ಹುಟ್ಟುಹಾಕಿದ ಅಯ್ಯನ್ಕಾಳಿ ಅವರು, ಕೇರಳಾದ ತಿರುವನಂತಪುರದ ವೆಂಗನೂರು ಎಂಬ ಹಳ್ಳಿಯಲ್ಲಿ ‘ಅಯ್ಯನ್’ ಮತ್ತು ‘ಮಾಲ’ ಪುಲಯ ದಂಪತಿಗಳಿಗೆ ಮಗನಾಗಿ 1863 ಆಗಸ್ಟ್ 24ರಂದು ಜನಿಸಿದರು. ಮಾರ್ಶಲ್ ಆಟರ್್ ಹಾಗೂ ಫುಟ್ಬಾಲ್ ಕ್ರೀಡೆಯಲ್ಲಿ ನಿಪುಣರಾಗಿದ್ದ ಕಾಳಿ ಅವರು, 1888ರಲ್ಲಿ ಚೆಲ್ಲಮ್ಮಳನ್ನು ಮದುವೆಯಾದರು. ಇವರಿಗೆ ಏಳು ಜನ ಗಂಡು ಮಕ್ಕಳು, ಒಬ್ಬಳೆ ಮಗಳು. ನಂತರದ ದಿನಗಳಲ್ಲಿ ಮಗಳು ತಂಗಮ್ಮ ಕೇರಳದ ಅಸೆಂಬ್ಲಿ ಸ್ಪೀಕರ್ಆಗಿದ್ದ ಟಿ.ಟಿ.ಕೇಶವನ್ಶಾಸ್ತ್ರಿಯನ್ನು ಮದುವೆಯಾದರು. ಸ್ವತಃ ಕಲಾವಿದರಾಗಿದ್ದ ಕಾಳಿ ಅವರು ಹರಿಶ್ಚಂದ್ರ ನಾಟಕದಲ್ಲಿ ಅಭಿನಯಿಸುತ್ತಿದ್ದರು. ಶೋಷಿತರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸ್ವತಃ ತಾವೇ ನಾಟಕ ರಚಿಸಿ ಆಡಿಸುತ್ತಿದ್ದದ್ದು ಉಂಟು.
ಸ್ವಾತಂತ್ರ್ಯ ಪೂರ್ವದಲ್ಲೆ ಸಮಾಜದಲ್ಲಿನ ಅಸ್ಪೃಶ್ಯತೆ, ಅಸಮಾನತೆ, ಶೋಷಣೆಗಳನ್ನು ತೀವ್ರವಾಗಿ ಪ್ರಶ್ನಿಸಿದ ಅಯ್ಯನ್ಕಾಳಿ ಅವರು ಆ ಸಂಬಂಧವಾಗಿ ಹಲವಾರು ಮಹತ್ವದ ಹೋರಾಟಗಳನ್ನು ರೂಪಿಸಿದವರು. ಈ ಕಾರಣದಿಂದಾಗಿಯೇ ಅನೇಕ ಬಾರಿ ದೈಹಿಕ ಹಲ್ಲೆೆ, ಕೊಲೆಯ ಸಂಚನ್ನು ಎದುರಿಸಬೇಕಾಯಿತು. ಆ ದಿನಗಳಲ್ಲಿ ದಲಿತರು ಸವಣರ್ೀಯರ ಮತ್ತು ಸಾರ್ವಜನಿಕ ಬೀದಿಗಳಲ್ಲಿ ಮುಕ್ತವಾಗಿ ನಡೆದಾಡುವ ಹಾಗಿರಲಿಲ್ಲ. ಇದನ್ನ ಮನಗಂಡ ಅಯ್ಯನ್ಕಾಳಿ ಅವರು ‘ಸ್ವಾತಂತ್ರ್ಯಕ್ಕಾಗಿ ನಡಿಗೆ’ ಎಂಬ ಹೋರಾಟವನ್ನು ಆರಂಭಿಸಿದರು. ಮೊಟ್ಟಮೊದಲಿಗೆ ತಮ್ಮ ಕಾರ್ಯಕರ್ತರೊಟ್ಟಿಗೆ ಬಲರಾಮಪುರದ ಚಳಿಯಾರ್ ಬಜಾರ್ ಪ್ರವೇಶಿಸಿ ಸವರ್ಣೀಯರ ಹಲ್ಲೆಗೆ ಗುರಿಯಾಗಬೇಕಾಯಿತು. ಎದೆಗುಂದದ ಅಯ್ಯನ್ಕಾಳಿ ಅವರು ಆ ತರುವಾಯದಲ್ಲಿ ಎಲ್ಲ ಬಗೆಯ ಹಿಂಸೆಯ ನಡುವೆಯೂ ಸಾರ್ವಜನಿಕ ಬಜಾರು, ಮಾರುಕಟ್ಟೆ, ಹೆದ್ದಾರಿಗಳನ್ನು ಪ್ರವೇಶಿಸುವ ಹೋರಾಟಗಳನ್ನು ನಿರಂತರವಾಗಿ ಹಮ್ಮಿಕೊಂಡರು. ‘ಹಿಂದುಳಿದ ಜನರ ವಿಮೋಚನೆ, ಪ್ರಗತಿ ಶಿಕ್ಷಣ-ಸಂಘಟನೆಯಿಂದ ಮಾತ್ರ ಸಾಧ್ಯ’ ಎಂದು ಹೇಳುತ್ತಿದ್ದ ಅಯ್ಯನ್ಕಾಳಿ ಅವರು, ಶೋಷಿತ ಸಮುದಾಯಗಳ ಅಕ್ಷರ ಹಾಗೂ ವೃತ್ತಿಶಿಕ್ಷಣದ ಹಕ್ಕಿಗಾಗಿ ಅಸಂಖ್ಯಾತ ಚಳವಳಿಗಳನ್ನ ಮಾಡಿದ್ದಾರೆ.
ಅಂದಿನ ಕೇರಳದ ಜಾತಿನಿಷ್ಠ ಸಮಾಜವು ಸಾರ್ವಜನಿಕ ಶಾಲೆಗಳಿಗೆ ದಲಿತ ಮಕ್ಕಳ ಪ್ರವೇಶವನ್ನು ನಿರಾಕರಿಸಿತ್ತು. ಇದನ್ನು ತೀವ್ರವಾಗಿ ಖಂಡಿಸಿದ ಕಾಳಿ ಅವರು, ಮತ್ತೆ ಹೋರಾಟವನ್ನು ಆರಂಭಿಸಿದರು. 1904ರಲ್ಲಿಯೇ ಕಾಳಿಯವರು ಪುಲಯ(=ಹೊಲಯ, ದಲಿತ)ರಿಗಾಗಿ ಸ್ವಂತ ಶಾಲೆಯನ್ನು ಸ್ಥಾಪಿಸುವ ಆಲೋಚನೆಯನ್ನು ಮಾಡಿದರು. ವೆಂಗನೂರಿನಲ್ಲಿ ಇವರು ಸ್ಥಾಪಿಸಿದ ಶಾಲೆಯನ್ನು ಸವಣರ್ೀಯರು ಧ್ವಂಸ ಮಾಡಿದರು. ಮತ್ತೊಂದು ಕಡೆ ಸವರ್ಣೀಯರು ಶಾಲೆಯನ್ನು ಸುಟ್ಟುಹಾಕಿದಾಗ ಆ ಶಾಲೆಗೆ ‘ಸುಟ್ಟು ಹೋದ ಶಾಲೆ’ ಎಂದು ಮರುನಾಮಕರಣ ಮಾಡಿ ಮತ್ತೆ ಶಾಲೆಯನ್ನು ಆರಂಭಿಸಿದರು. ಇದಲ್ಲದೆ, 1916ರಲ್ಲಿ ತಿಯ್ಯಂಗರ ಪುಲಯ ಪಾಠಶಾಲೆ, 1919ರಲ್ಲಿ ಷಣ್ಮುಗಂ ಪಾಠಶಾಲೆ, ಮನಾರ್ಕಾಡ್ನಲ್ಲಿ ರಾತ್ರಿ ಪಾಠಶಾಲೆ, 1936ರಲ್ಲಿ ವೆಂಗನೂರ್ ಪಡುವಳ್ ಪಾಠಶಾಲೆ ಹಾಗೂ ಕೈಮಗ್ಗದ ಕೇಂದ್ರಗಳನ್ನು ಸ್ಥಾಪಿಸಿದರು. ಆ ಕಾಲಕ್ಕಾಗಲೇ ಕಾಳಿ ಅವರು, ದಲಿತರಿಗೆ ಶಿಕ್ಷಣದಷ್ಟೆ ವೃತ್ತಿಪರ ಶಿಕ್ಷಣ ಕೂಡ ಬಹಳ ಮುಖ್ಯವೆಂದು ಪ್ರತಿಪಾದಿಸಿದ್ದರು. ದಲಿತರ ಸಂಘಟನೆ ಹಾಗೂ ಹಿತರಕ್ಷಣೆಗಾಗಿ 1907ರಲ್ಲಿ ‘ಸಾಧುಜನ ಪರಿಪಾಲನ ಸಂಘ'(ಎಸ್.ಜೆ.ಪಿ.ಎಸ್.)ಸ್ಥಾಪಿಸಿದ ಕಾಳಿ ಅವರು, ಸಂಘದ ಮೂಲಕ ಅಂದಿನ ಮಹಾರಾಜರಿಗೆ ದಲಿತ ಮಕ್ಕಳ ಶಾಲಾ ಪ್ರವೇಶಾತಿ ಕುರಿತು ಮನವಿಯನ್ನು ಸಲ್ಲಿಸಲಾಯಿತು. ಇದರ ಪರಿಣಾಮ ಮಹಾರಾಜರು, ದಲಿತ ಮಕ್ಕಳನ್ನು ಶಾಲೆಗಳಿಗೆ ಸೇರಿಸಿಕೊಳ್ಳಬೇಕೆಂಬ ಆದೇಶವನ್ನು ಜಾರಿಮಾಡಿದರು.

ಜಾತಿವಾದಿ ಜಮೀನ್ದಾರರು ರಾಜರ ಆದೇಶವನ್ನು ಉಲ್ಲಂಘಿಸಿ, ತಮ್ಮ ಒಡೆತನದ ಶಾಲೆಗಳಿಗೆ ದಲಿತ ಮಕ್ಕಳ ಪ್ರವೇಶವನ್ನು ನಿರಾಕರಿಸಿದಾಗ ಕಾಳಿ ಅವರು: ‘ನೀವು ನಮ್ಮ ಮಕ್ಕಳಿಗೆ ಓದಲು ಅವಕಾಶ ಕೊಡದಿದ್ದರೆ, ನಿಮ್ಮ ಹೊಲಗಳಲ್ಲಿ ಹುಚ್ಚುಕಳೆ ಮೊಳೆಯುತ್ತದೆ. ನಿಮ್ಮ ಹೊಲಗಳು ಬೀಳು ಬೀಳುತ್ತವೆ’ ಎಂದು ಎಚ್ಚರಿಸಿದರು. ದಲಿತರು ಶಾಲೆ ಸೇರುತ್ತಿದ್ದಾರೆ ಎಂಬ ವಿಚಾರ ಕೇಳಿದ ಸವರ್ಣೀಯನೊಬ್ಬ(ವೈದ್ಯರಾದ ನಾರಾಯಣ ಪಣಿಕ್ಕರ್ ಅವರ ಮಾವ) ಪ್ರಜ್ಞೆ ತಪ್ಪಿ ಬಿದ್ದು, ಮಾತು ಕಳೆದುಕೊಂಡದ್ದುಂಟು. ‘ಸವರ್ಣೀಯರ ಶಾಲೆಗಳು ದಲಿತ ಮಕ್ಕಳಿಗೆ ಪ್ರವೇಶವನ್ನು ನಿರಾಕರಿಸಿದಾಗ ಅನಿವಾರ್ಯವಾಗಿ ಶಾಲೆಗಳನ್ನು ಸ್ಥಾಪಿಸಬೇಕಾಯಿತು’ ಎಂದು ಹೇಳುತ್ತಿದ್ದ ಕಾಳಿ ಅವರು, ಜಾತಿ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದನ್ನು ವಿರೋಧಿಸುತ್ತಿದ್ದರು. ‘ಜಾತಿ ವಿಮೋಚನೆ ಶಿಕ್ಷಣದಲ್ಲಿ ಹುದುಗಿದೆ. ಒಟ್ಟು ಮಾನವ ಜಾತಿಯೆಲ್ಲ ಒಂದೇ ಕಡೆ ಕುಳಿತು ಕಲಿಯುವುದೇ ಶಿಕ್ಷಣ’ ಎಂಬ ತತ್ತ್ವದ ಬಗೆಗೆ ನಂಬಿಕೆ ಇಟ್ಟಿದ್ದರು.
ಅಯ್ಯನ್ಕಾಳಿ ಅವರ ಹೋರಾಟದ ಬಗೆಗೆ ಕೇಳಿ ತಿಳಿದಿದ್ದ ಗಾಂಧೀಜಿಯವರು ಕಾಳಿಯವರನ್ನು ಭೇಟಿ ಮಾಡುವ ಸಲುವಾಗಿ 1937ರಲ್ಲಿ ವೆಂಗನೂರಿಗೆ ಬರುತ್ತಾರೆ. ಗಾಂಧೀಜಿಯವರು ಕಾಳಿಯವರನ್ನು ತಮ್ಮ ಪಕ್ಕದಲ್ಲೆ ಕೂರಿಸಿಕೊಂಡು ಪ್ರಶಂಸಿಸಿ, ಮಾತನಾಡುತ್ತ: ‘ನಿಮ್ಮ ಸಾಮಾಜಿಕ ಸೇವೆ, ಹೋರಾಟಗಳ ಬಗೆಗೆ ನನಗೆ ಹೆಮ್ಮೆ ಇದೆ. ಅದನ್ನ ಮುಂದುವರಿಸಿ. ನಿಮಗೆ ಸದಾ ನನ್ನ ಬೆಂಬಲವಿದೆ. ನಿಮ್ಮ ಮಹತ್ತರವಾದ ಆಸೆ ಏನು?’ ಎಂದು ಕೇಳಿದಾಗ, ‘ನಾನು ಸಾಯುವುದರ ಒಳಗಾಗಿ ನನ್ನ ಸಮುದಾಯದಲ್ಲಿ ಕನಿಷ್ಠ ಹತ್ತು ಮಂದಿ ಬಿ.ಎ. ಪದವೀಧರರನ್ನು ನೋಡಬೇಕೆಂದಿದ್ದೇನೆ’ ಎಂದು ಹೇಳಿದ ಕಾಳಿಯ ಮಾತಿಗೆ ಗಾಂಧೀಜಿಯವರು ಪ್ರಭಾವಿತರಾಗುತ್ತಾರೆ. ಕೇರಳಾದ ಮತ್ತೊಬ್ಬ ಸಾಮಾಜಿಕ ಸುಧಾರಕರಾದ ಶ್ರೀ ನಾರಾಯಣಗುರು ಅವರು ಸಹಾ ಕಾಳಿ ಅವರನ್ನು ಭೇಟಿಮಾಡಿ ಅವರ ಹೋರಾಟದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ರಾಮಕೃಷ್ಣ ಪರಮಹಂಸ, ದಯಾನಂದ ಸರಸ್ವತಿ, ವಿವೇಕಾನಂದರ ಸಮಕಾಲೀನರಾದ ಅಯ್ಯನ್ಕಾಳಿ ಕೃಷಿ ಕೂಲಿ ಕಾರ್ಮಿಕರ ಬಗೆಗೆ ಅಪಾರವಾದ ಕಾಳಜಿ ಹೊಂದಿದ್ದರು. ಕಮ್ಯುನಿಷ್ಟ್ ಚಳವಳಿ ಕೇರಳವನ್ನು ಪ್ರವೇಶಿಸುವ ಮೊದಲೇ, ಅಯ್ಯನ್ಕಾಳಿ ಅವರು ಕೂಲಿ ಆಳುಗಳ ಪರವಾಗಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ‘ಕೂಲಿಗಳ ವೇತನವನ್ನು ಹೆಚ್ಚಿಸಬೇಕು; ಕೆಲಸಗಳಿಲ್ಲದ ದಿನಗಳಿಗೂ ಅವರಿಗೆ ಕೂಲಿ ಕೊಡಬೇಕು; ಜಮೀನ್ದಾರರು ಕೂಲಿಗಳ ಮೇಲೆ, ಅವರ ಹೆಣ್ಣು ಮಕ್ಕಳ ಮೇಲೆ ನಡೆಸುವ ದೌರ್ಜನ್ಯ, ಅತ್ಯಾಚಾರಗಳನ್ನ ನಿಲ್ಲಿಸಬೇಕು; ಕೂಲಿ ಆಳುಗಳು ಎಲ್ಲಿಗಾದರು ಹೋಗುವುದಕ್ಕೆ ಸ್ವಾತಂತ್ರ್ಯ ಕೊಡಬೇಕು; ಅವರ ಮಕ್ಕಳನ್ನು ಶಾಲೆಗೆ ಸೇರಿಕೊಳ್ಳಬೇಕು; ಕೂಲಿಗಳ ಮೇಲೆ ವಿನಾಕಾರಣ ಕೇಸು ಹಾಕುವುದನ್ನು ನಿಲ್ಲಿಸಬೇಕು; ಕೂಲಿ ಕೆಲಸದ ಸಮಯವನ್ನು ನಿಗದಿಪಡಿಸಬೇಕು’ ಎಂಬ ಬೇಡಿಕೆಗಳನ್ನ ಇಟ್ಟು ಜಮಿನ್ದಾರರ ವಿರುದ್ಧ ಕಾಳಿ ಚಳವಳಿಯನ್ನು ರೂಪಿಸಿದರು. ಇದರಿಂದ ಕುಪಿತರಾದ ಭೂಮಾಲೀಕರು, ‘ಕಾಳಿಯನ್ನು ಜೀವಂತವಾಗಿ ಹಿಡಿದುಕೊಟ್ಟವರಿಗೆ ಎರಡು ಸಾವಿರ ರೂ. ಕೊಂದು ತಂದವರಿಗೆ ಒಂದು ಸಾವಿರ ರೂ. ಬಹುಮಾನ’ವೆಂದು ಪ್ರಕಟಿಸಿದರು.
ಕೃಷಿ ಕೂಲಿ ಕಾರ್ಮಿಕರ ಹಕ್ಕೊತ್ತಾಯದ ಪರವಾಗಿ ಜೀವದ ಹಂಗು ತೊರೆದು ಜಮಿನ್ದಾರಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಭಾರತದ ಮೊಟ್ಟಮೊದಲ ಕ್ರಾಂತಿಕಾರಿ ಅಯ್ಯನ್ಕಾಳಿ. 1980ರಂದು ಇ.ಎಂ.ಎಸ್. ನಂಬೂದರಿಪಾಡ್ ಅವರು ಮಾತನಾಡುತ್ತಾ: ‘1907-08ರಲ್ಲಿ ಅಯ್ಯನ್ಕಾಳಿ ವ್ಯವಸಾಯ ಕೂಲಿಕಾರರ ಮುಷ್ಕರವನ್ನು ನಿರ್ವಹಿಸಿದ. ಅಸಂಘಟಿತ ಚಿಕ್ಕ ಚಿಕ್ಕ ಸಮೂಹಗಳಾಗಿದ್ದ ಕೂಲಿಕಾರರೆಲ್ಲರನ್ನು ಆತ ಒಂದು ಸೂರಿನ ಕೆಳಗೆ ತಂದು, ಅವರಿಗೆ ಸಾಂಸ್ಥಿಕ ಸಂಘಟಿತ ಶಕ್ತಿ ಎಂತಹುದೆಂದು ತಿಳಿಯಹೇಳಿದ.’ ಎಂದು ಹೇಳಿದರು. ಅಂದಿನ ನ್ಯಾಯಾಲಯಗಳು ದಲಿತರಿಗೆ ಅನ್ಯಾಯವೆಸಗುತ್ತಿದ್ದದ್ದನ್ನು ಮನಗಂಡ ಕಾಳಿಯವರು ದಲಿತರಲ್ಲಿ ಕಾನೂನಿನ ಅರಿವು ಮೂಡಿಸುವ ಸಲುವಾಗಿ, ವಿವಾದಗಳನ್ನು ಪರಿಹರಿಸುವಸಲುವಾಗಿ ‘ಜನತಾ ನ್ಯಾಯಾಲಯ’ಗಳನ್ನು ಸ್ಥಾಪಿಸಿದರು. ಆ ಜನತಾ ನ್ಯಾಯಾಲಯಗಳ ಮುಖ್ಯ ನ್ಯಾಯಾದೀಶರು ಕಾಳಿಯವರೇ ಆಗಿದು,್ದ ನಿಷ್ಪಕ್ಷಪಾತವಾದ ತೀಪರ್ುಗಾರರಾಗಿದ್ದರು. ಶೋಷಿತರಲ್ಲಿ ಅರಿವು, ಜಾಗೃತಿಯನ್ನು ಮೂಡಿಸುವ ಸಲುವಾಗೆ ಕಾಳಿಯವರು ಆ ಕಾಲಕ್ಕಾಗಲೇ, ಜೋಡಿಕುರಪ್ಪನ್ ಅವರ ಸಂಪಾದಕತ್ವದಲ್ಲಿ ‘ಸಾಧುಜನ ಪರಿಪಾಲನಿ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಅಸ್ಪೃಶ್ಯ ಹೆಣ್ಣು ಮಕ್ಕಳು ರವಿಕೆ ತೊಡುವ ಹಾಗಿರಲಿಲ್ಲ. ಗುಲಾಮಗಿರಿಯ ಸಂಕೇತವಾಗಿದ್ದ ಕಲ್ಲಿನ ಆಭರಣಗಳನ್ನು ಧರಿಸಬೇಕಾಗಿತ್ತು. ಇದನ್ನು ವಿರೋಧಿಸಿದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆಗಳು ನಡೆಯುತ್ತಿದ್ದವು. ಇಂತಹ ಅಮಾನವೀಯ ಪದ್ಧತಿಗಳನ್ನು ಕಂಡು ಮನನೊಂದ ಕಾಳಿ ಅವರು ಪ್ರಬಲವಾದ ಹೋರಾಟವನ್ನು ಮಾಡಿದರು. ಡಿಸೆಂಬರ್ 19, 1915ರಂದು ಬೃಹತ್ ಸಮಾವೇಶವನ್ನು ಮಾಡಿ, ಈ ಎಲ್ಲ ಅನಿಷ್ಟ ಪದ್ಧತಿಗಳನ್ನು ವಿರೋಧಿಸಬೇಕೆಂದು ಕರೆಕೊಟ್ಟರು. ನಿರಾಣದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಕಾಳಿಯವರು, ದಲಿತರು ಕುಡಿಯುವುದನ್ನು ಬಿಡಬೇಕೆಂದು ಕರೆಕೊಟ್ಟರಲ್ಲದೆ, ಕುಡಿದು ಬಂದವರಿಗೆ ಅನ್ನ ನೀಡಬೇಡಿ ಎಂದು ಹೆಣ್ಣು ಮಕ್ಕಳನ್ನು ಎಚ್ಚರಿಸಿದರು. ತಿರುವಂಕೂರಿನ ಮಹಾರಾಜರ ಜನಸಭೆಯಲ್ಲಿ ಪುಲಯರ ಪ್ರತಿನಿಧಿಯಾದ ಸವಣರ್ೀಯ ಪಿ.ಕೆ. ಗೋವಿಂದಪಿಳ್ಳೈ, ಅಯ್ಯನ್ಕಾಳಿ ಅವರ ದಲಿತ ಪರವಾದ ಹೋರಾಟ, ಚಿಂತನೆ, ಧೈರ್ಯವನ್ನ ಮೆಚ್ಚಿ ಕಾಳಿಯನ್ನು ಮಹಾರಾಜರ ಜನಸಭೆಗೆ ಪರಿಚಯಿಸಿದರು. ಜನಸಭೆಯ ಸದಸ್ಯರಾಗಿದ್ದ ಕಾಳಿ ಅವರು, ಪ್ರತಿ ಸಭೆಯಲ್ಲಿಯೂ ಅಸ್ಪೃಶ್ಯರ ಸಾಮಾಜಿಕ ನ್ಯಾಯ ಹಾಗೂ ಹಕ್ಕಿಗಾಗಿ ಸದಾ ಹೋರಾಡುತ್ತಿದ್ದರು. ಸಾಯುವ ಕೊನೆ ಗಳಿಗೆಯವರೆಗೂ ದಲಿತರ ಹಕ್ಕು, ಸ್ವಾತಂತ್ರ್ಯ, ಸಮಾನತೆಗಾಗಿ ನಿರಂತರವಾಗಿ ಹೋರಾಡಿದ ಅಯ್ಯನ್ಕಾಳಿ ಅವರು, ಉಬ್ಬಸ ವ್ಯಾಧಿಯಿಂದಾಗಿ 1941 ಜೂನ್ 18ರಂದು ಮರಣಹೊಂದಿದರು.
1963 ಸೆಪ್ಟೆಂಬರ್ 2ರಂದು ವೆಂಗನೂರಿನಲ್ಲಿ ನಡೆದ, ಅಯ್ಯನ್ಕಾಳಿ ಅವರ ಶತಮಾನೋತ್ಸವ ದಿನದಂದು ಕಾಳಿಯವರ ಭಾವಚಿತ್ರವನ್ನು ಅನಾವರಣ ಮಾಡಿದ ನಾಯರ್ ಧುರೀಣ ಮಾನ್ನತ್ತು ಪದ್ಮನಾಭನ್ ಮಾತನಾಡುತ್ತಾ: ‘ನಾನು ಒಬ್ಬ ಸವಣರ್ೀಯನಾಗಿ ಅಯ್ಯನ್ಕಾಳಿ ಅವರ ಸಂಕಷ್ಟಗಳಿಗೆ ಕ್ಷಮಾಪಣೆ ಕೋರುತ್ತಿದ್ದೇನೆ. ಸವಣರ್ೀಯರಾದ ನಾವು, ಹಳೆಯ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ತಕ್ಕ ಕ್ರಮವನ್ನು ತೆಗೆದುಕೊಳ್ಳೋಣ.’ ಎಂದು ಹೇಳಿದರು. ಐತಿಹಾಸಿಕ ಸಂಶೋಧಕರಾದ ಕುಂಜನ್ಪಿಳ್ಳೈ ಅವರು: ‘ಕೇರಳ ಜನ್ಮವಿತ್ತ ಅಪರೂಪದ ಕ್ರಾಂತಿಕಾರಿಗಳಲ್ಲಿ ಅಯ್ಯನ್ಕಾಳಿ ಒಬ್ಬರು.’ಎಂದು ಅಭಿಪ್ರಾಯಪಡುತ್ತಾರೆ.
ಪಬ್ಲಿಕ್ ಸವರ್ೀಸ್ ಕಮೀಷನ್ ಸದಸ್ಯರಾಗಿದ್ದ ಎ.ಪಿ. ಉದಯಭಾನು ಅವರು: ‘ನಾನು ಎಲ್ಲ ಬಗೆಯ ಸ್ಮಾರಕಚಿಹ್ನೆಗಳ ವಿರೋಧಿ. ಆದರೆ, ಯಾವುದಾದರು ಪ್ರತಿಮೆ ನಿಮರ್ಿಸಲೇಬೇಕೆನ್ನುವುದಾದರೆ ಅದು ಅಯ್ಯನ್ಕಾಳಿಯದಾಗಿರಬೇಕು. ಅಯ್ಯನ್ಕಾಳಿ ಅಸ್ಪೃಶ್ಯರಿಗೆ ಸ್ವಾಭಿಮಾನ, ಆತ್ಮವಿಶ್ವಾಸವನ್ನು ಕೊಟ್ಟ ಶ್ರೇಷ್ಠ ಕಾರ್ಯಕರ್ತ. ಒಬ್ಬ ಯುಗಪುರುಷ, ಶ್ರೇಷ್ಠ ಸಾಮಾಜಿಕ ಸುಧಾರಕ.’ ಎಂದು ಹೇಳಿದ್ದಾರೆ. 1919 ಫೆಬ್ರವರಿ 14ರಂದು ಪ್ರಕಟವಾದ ಕೇರಳದ ‘ಮನೋರಾಜ್ಯಂ’ ವಾರಪತ್ರಿಕೆಯು: ‘ಅಸ್ಪೃಶ್ಯರಲ್ಲಿ ಸ್ವಾತಂತ್ರ್ಯದ ಆತ್ಮವಿಶ್ವಾಸ ತುಂಬಿದ ಮೊದಲ ಮಹನೀಯನಾದ ಅಯ್ಯನ್ಕಾಳಿ ಕೇರಳ ಸುಧಾರಕರ ಹೆಸರಿಗೆ ಅರ್ಹರಾದವರು’ ಎಂದು ಪ್ರಕಟಿಸಿತು.
1980 ನವೆಂಬರ್ 10 ರಂದು ಕೇರಳಾದ ವೆಳ್ಳೈ ಅಂಬಳಂ ಜಂಕ್ಷನ್ನಲ್ಲಿ ಅಯ್ಯನ್ಕಾಳಿ ಅವರ ಖಂಚಿನ ಪ್ರತಿಮೆಯನ್ನು ಅನಾವರಣ ಮಾಡಿದ ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಮಾತನಾಡುತ್ತಾ: ‘ಅಯ್ಯನ್ಕಾಳಿ ತನ್ನ ಜನರ ಸಮಾನತೆಯ ಹಂಬಲದ ಪರಿಣಾಮದಿಂದ ಹುಟ್ಟಿದ ವ್ಯಕ್ತಿ. ತನ್ನ ಸಮಾಜದ ಒಳಿತಿಗಾಗಿ ಜೀವನವನ್ನು ಧಾರಿಯೆರೆದಿದ್ದಾನೆ. ಆತನ ಚಿಂತನೆಗಳು, ಆದರ್ಶಗಳು ಇಂದಿಗೂ ಬೆಲೆ ಬಾಳುವಂತವು. ಆದ್ದರಿಂದಲೇ ನಾನು ಈ ಪ್ರತಿಮೆಯ ಅನಾವರಣಕ್ಕೆ ಅಂಗೀಕಾರ ನೀಡಿದೆ.’ ಎಂದು ಹೇಳಿದರು. ಈ ಎಲ್ಲಾ ಅಭಿಪ್ರಾಯಗಳು ಅಯ್ಯನ್ಕಾಳಿ ಅವರ ಜೀವಪರವಾದ ವ್ಯಕ್ತಿತ್ವವನ್ನು ಸಾಕ್ಷೀಕರಿಸುತ್ತವೆ.
ಇಂತಹ ಮೇರುಸದೃಶ ಮಹಾನ್ ಚೇತನವನ್ನು ಕನ್ನಡಕ್ಕೆ ಪರಿಚಯಿಸಿದ ಬಿ. ಸ್ಮಜ್ಞಾನಮೂರ್ತಿ ಹಾಗೂ ಪ್ರಕಟಿಸಿದ ಪಲ್ಲವ ಪ್ರಕಾಶನದ ಡಾ. ಕೆ. ವೆಂಕಟೇಶ್ ಅವರಿಗೆ ನನ್ನ ತುಂಬು ಅಂತಃಕರಣದ ಕೃತಜ್ಞತೆಗಳು.
 

‍ಲೇಖಕರು avadhi

21 August, 2013

2 Comments

  1. g.n.nagaraj

    ಈ ಪುಸ್ತಕ ಻ನುವಾದಿಸಿದವರಿಗೆ, ಪ್ರಕಟಿಸಿದವರಿಗೆ, ಅದನ್ನು ಪರಿಚಯಿಸಿದವರಿಗೆ ಕೂಡ ನಮ್ಮ ವಂದನೆಗಳು

  2. dhanaraj patre

    thanks all sapports

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading