ಕೆ ಸತ್ಯನಾರಾಯಣ ಅವರು ತಮ್ಮ ಒಂಬತ್ತನೆಯ ಕಾದಂಬರಿಯನ್ನು ಓದುಗರ ಮುಂದಿಡುತ್ತಿದ್ದಾರೆ . ಇದು ಕನ್ನಡ ಕಾದಂಬರಿ ಲೋಕಕ್ಕೆ ಹೊಸ ಸೂಕ್ಷ್ಮತೆಯ ಸೇರ್ಪಡೆ. ಒಂದು ಹಸ್ತಪ್ರತಿ ಬರೆದು ಅದನ್ನು ಹರಿದು ಹಾಕಿ ಮತ್ತೆ ಇನ್ನೊಂದನ್ನು ಸತ್ಯನಾರಾಯಣ ಅವರು ಬರೆದಿದ್ದಾರೆ.
‘ಅಭಿನವ’ ಈ ಕೃತಿಯನ್ನು ಪ್ರಕಟಿಸಿದೆ
ಏಕೆ ಎನ್ನುವ ಕುತೂಹಲವಾದರೆ ‘ಅವಧಿ’ ಓದುಗರಿಗಾಗಿಯೇ ನೀಡಿರುವ ಕೆ ಸತ್ಯನಾರಾಯಣ ಅವರ ಟಿಪ್ಪಣಿಯನ್ನು ಓದಿ. ಜೊತೆಗೆ ಕೃತಿಯ ಮಹತ್ವವನ್ನು ದಾಖಲಿಸುವ ಆರ್ ವಿಜಯರಾಘವನ್ ಅವರ ಟಿಪ್ಪಣಿ ಇದೆ-

ಪ್ರಸ್ತುತ ಕಾದಂಬರಿಯ ಮುಖ್ಯ ಹಾಗೂ ಸೂಕ್ಷ್ಮ ಭಾಗವನ್ನು ಸುಮಾರು ೨೦೧೫ರಲ್ಲೇ ಕೊಡಗಿನ ಒಂದು ರೆಸಾರ್ಟಿನಲ್ಲಿ ಒಂದು ಇಡೀ ದಿನ ಮತ್ತು ರಾತ್ರಿ ಕುಳಿತು ಬರೆದಿದ್ದೆ.
ನಿಜವಾಗಿ ಆ ಭಾಗ ಒಂದು ಕಾಲದಲ್ಲಿ ನನಗೆ ಹತ್ತಿರದವರಾಗಿದ್ದು ಈಗ ದಿವಂಗತರಾಗಿರುವವರೊಬ್ಬರು ಮಾಡಿಕೊಂಡಿದ್ದ ಆತ್ಮನಿವೇದನೆ.
ಬರವಣಿಗೆ ಎಷ್ಟೊಂದು ಪುಟಗಳಾಯಿತೆಂದರೆ-ಎಷ್ಟು ಚೆನ್ನಾಗಿ ಬಂತೆಂದರೆ-ನನಗೇ ನನ್ನ ಬಗ್ಗೆ ನಾಚಿಕೆಯಾಯಿತು, ಹೆದರಿಕೆಯೂ ಆಯಿತು. ಇನ್ನೊಬ್ಬರ ಖಾಸಗಿ ಜೀವನವನ್ನು ನಿರೂಪಣೆಯ ಸೊಗಸಿಗೆ ಬಳಸಿಕೊಳ್ಳುವುದರ ಬಗ್ಗೆ ಖೇದವಾಯಿತು. ನಮಗೆ ಆಪ್ತರಾಗಿದ್ದವರ ಬಗ್ಗೆ ಬರೆದರೆ ತಪ್ಪೇನಿಲ್ಲ. ಆದರೆ ನಾವು ಬರೆಯಬೇಕಾದ್ದು ಅವರ ಬದುಕಿನ ವಿವರಗಳನ್ನಲ್ಲ; ಆ ವಿವರಗಳ ಹಿಂದಿರುವ ತಾತ್ವಿಕ ಪ್ರೇರಣೆಗಳನ್ನು ಕುರಿತು ಎಂಬ ಭಾವನೆಯೊಡನೆ, ಆ ಬರವಣಿಗೆಯನ್ನು ನಾನೇ ಬದಿಗೆ ಸರಿಸಿ, ನಂತರ ನಾಶ ಮಾಡಿದೆ.
ಬರವಣಿಗೆಯ ಪುಟಗಳು ನಮ್ಮ ಮನೆಯಲ್ಲಿರುವಷ್ಟು ದಿನವೂ ವಿಚಿತ್ರ ರೀತಿಯ ಹಿಂಸೆಯಾಗುತ್ತಿತ್ತು. ಆದರೆ ಆ ನಿವೇದನೆ ನನ್ನನ್ನು ಕಾಡುತ್ತಲೇ ಇತ್ತು. ಅದರ ಜೊತೆಗೆ, ಇನ್ನೂ ಕೆಲವು ಕಥನ-ನಿವೇದನೆಗಳು ಸೇರಿಕೊಂಡು ಬರವಣಿಗೆ ಈಗ ಈ ರೂಪಕ್ಕೆ ಬಂದಿದೆ. ಹಿಂದಿನ ಕಾದಂಬರಿಗಳ ಕೆಲವು ನೋಟಗಳು ಕೂಡ ಈ ಬರವಣಿಗೆಯಲ್ಲಿ ಇನ್ನಷ್ಟು ಸ್ಪಷ್ಟವಾಗಿ ಹರಳುಗಟ್ಟಿವೆ, ಹದಗೊಂಡಿವೆ ಎಂದು ಕೂಡ ಭಾವಿಸಿದ್ದೇನೆ. ಒಂದು ಪ್ರವಾಸದ ಸಂದರ್ಭದಲ್ಲಿ ಶ್ರೀಮತಿ ರಜನಿ ನರಹಳ್ಳಿಯವರು ತಮ್ಮ ಎಂದಿನ ಲಹರಿಯಲ್ಲಿ ಕೇಳಿದ ಒಂದು ಸೂಕ್ಷ್ಮ ಪ್ರಶ್ನೆ ಕೂಡ ನನ್ನನ್ನು ತುಂಬಾ ದಿನ ಕಾಡಿದೆ.
ಬರವಣಿಗೆಯಲ್ಲಿ ಲೋಕದ ಬಗ್ಗೆ ಬರೆಯಬಹುದು, ಬರೆಯಬೇಕು. ಅನ್ಯರ ಬಗ್ಗೆ ಬರೆಯಬಹುದು, ಬರೆಯಬೇಕು. ಆದರೆ ಇದೆಲ್ಲವನ್ನೂ ನಮ್ಮ ಅಂತರಂಗದ ಸಮಸ್ಯೆಯಾಗಿ, ನಮ್ಮ ದಿನನಿತ್ಯದ ಬದುಕಿನ ಸಮಸ್ಯೆಯಾಗಿ, ತುಮುಲವಾಗಿ ಬರವಣಿಗೆಯಲ್ಲಿ ಎದುರಿಸುವುದು ಹೇಗೆ? ಒಳಗುಮಾಡಿಕೊಳ್ಳುವುದು ಹೇಗೆ? ಸಾಮಾಜಿಕ ವ್ಯಕ್ತಿಗಳಾಗಿ, ಕುಟುಂಬಸ್ಥರಾಗಿ ನಾವು ಈ ಕೃತಿಯಲ್ಲಿ ಪರಿಶೀಲನೆಗೆ ಒಳಗಾಗಿರುವ ಬದುಕಿನ ಸ್ತರವನ್ನು ಲೋಕವು ಮೆಚ್ಚುವಂತೆ, ನಮ್ಮ ಸಾಮಾಜಿಕ ಸ್ಥಾನಮಾನ ಪ್ರಸಿದ್ಧಿಗೆ ಧಕ್ಕೆ ಬಾರದಂತೆ ಯಶಸ್ವಿಯಾಗಿ ಎದುರಿಸಿಬಿಡುವಷ್ಟು ಮರೆಮಾಚಿಬಿಡುವಷ್ಟು (ಸ್ವತಃ ನಮ್ಮಿಂದಲೂ) ಜಾಣರಾಗಿರುತ್ತೇವೆ. ಒಂದು ಹಂತದಲ್ಲಿ ಅದು ಅವಶ್ಯಕವೋ ಏನೋ?
ಆದರೆ ಇದನ್ನೆಲ್ಲ ಬರವಣಿಗೆಯಲ್ಲಿ ಎದುರಿಸುವುದು ಎಂದರೇನು? ಎದುರಿಸುವುದು ಹೇಗೆ? ನನ್ನನ್ನು ತುಂಬಾ ದಿನ ಕಾಡಿರುವ ಈ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಈ ಕಾದಂಬರಿ ಓದುಗರ ಮುಂದಿದೆ. ಎಂದಿನಂತೆ ಅವರ ಓದು, ಪ್ರೀತಿ, ಗಮನವನ್ನು ಕೋರುತ್ತಾ …..
-ಕೆ. ಸತ್ಯನಾರಾಯಣ

ಪ್ರಿಯ ಸತ್ಯನಾರಾಯಣ,
ನಮಸ್ಕಾರ.
ಮೊದಲಿಗೆ ನಿಮ್ಮ ಕಾದಂಬರಿ ಲೈಂಗಿಕ ಜಾತಕವನ್ನು ಕುತೂಹಲದಿಂದಲೂ, ಅಚ್ಚರಿಯಿಂದಲೂ ಓದಿದೆ. ಬಹಳ ಮೌಲಿಕ ಬರೆವಣಿಗೆ. ಮೊದಲ ಓದುಗರಲ್ಲಿ ಒಬ್ಬನಾಗಿದ್ದಕ್ಕೆ ಸಂತೋಷವಿದೆ. ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆ ಮತ್ತು ವಂದನೆ ಸಹ.
‘ಕಾಲಜಿಂಕೆ’ಯಿಂದ ಹಿಡಿದು ಪ್ರಸ್ತುತ ಕಾದಂಬರಿಯವರೆಗೂ ನಿಮ್ಮ ಕಾದಂಬರಿಗಳನ್ನು ಓದಿಕೊಂಡೇ ಬಂದಿದ್ದೇನೆ. ಈ ಕೃತಿಯಲ್ಲಿಯೂ ‘ಸಾವಿನ ದಶಾವತಾರ’, ‘ವಿಚ್ಛೇದನಾ ಪರಿಣಯ’ದಂತೆಯೇ ನಿಮ್ಮ ವಸ್ತು ನಿರ್ವಹಣೆಯ ಕ್ರಮ ಹರಳುಗಟ್ಟಿದೆ. ನಿರೂಪಣಾ ವಿಧಾನವಂತೂ ನಿಮ್ಮದೇ ಎಂದು ಗುರುತು ಮಾಡಿಕೊಂಡಿದೆ. ಕಥೆ ಸಾಗುವ ಗತಿಯಲ್ಲಿನ ಸಾವಧಾನ, ಓದುಗನನ್ನು ನಿಲ್ಲಿಸಿ ನಿಲ್ಲಿಸಿ ಆಲೋಚನೆಗೆ ತೊಡಗುವಂತೆ ಮಾಡುವ ವಸ್ತು ನಿರ್ವಹಣಾ ಪರಿ ನಿಮ್ಮ ಕಾದಂಬರಿಗಳ ಸ್ಥಾಯಿ ಗುಣವಾದರೂ ಈ ಕಾದಂಬರಿಯಲ್ಲಿ ಅದರ ಹರವು ಹೆಚ್ಚು ವಿಸ್ತಾರವಾಗಿದೆ.
ಸಲಿಂಗ ಕಾಮವನ್ನು ಸದ್ಗೃಹಸ್ತ ಕಾಮದ ಹಲವು ಆಯಾಮಗಳೊಟ್ಟಿಗೆ ಶೋಧಿಸುವ ವಿಧಾನ ನನಗೆ ಕನ್ನಡದಲ್ಲಿ ಈ ವಸ್ತುವನ್ನು ಕೇಂದ್ರದಲ್ಲಿ ಇಟ್ಟುಕೊಂಡು ಬಂದ ಕಾದಂಬರಿಗಳ ಹಿನ್ನೆಲೆಯಲ್ಲಿ ಅಪೂರ್ವವೆನ್ನಿಸಿದೆ. ಮೊದಲಿಗೇ ನೀವು ನಿರ್ಮಿಸಿಕೊಳ್ಳುವ ಅಡಿಪಾಯ ತಾತ್ವಿಕ ಚರ್ಚೆಯೊಂದಕ್ಕೆ ಓದುಗನನ್ನು ಅಣಿಗೊಳಿಸುತ್ತದೆ. ಮುಂದುವರಿದಂತೆ ಹಲವು ಬದುಕುಗಳಿಗೆ ಮುಖಾಮುಖಿಯಾಗುವ ಕಾಮ ಕಾಮುಕತೆಯಿಂದ ಬಿಡುಗಡೆ ಪಡೆದ ನೆಲೆಯಲ್ಲಿ ನಿಂತು ಓದುಗನನ್ನು ಎದುರುಗೊಳ್ಳುತ್ತದೆ.
ಸಲಿಂಗರತಿಯ ರೋಚಕ ವ್ಯಾಖ್ಯಾನಗಳಿಂದ ದೂರನಿಂತು ಅದನ್ನು ಮನೋವೈಜ್ಞಾನಿಕ ಹಾಗೂ ಸಾಮಾಜಿಕ ನೆಲೆಗಳಿಂದ ನಿರ್ವಚಿಸುವುದರಿಂದ ಕೃತಿಗೆ ಹೊಸ ಆಯಾಮವೊಂದು ಲಭಿಸಿದಂತಾಗಿದೆ. ರಾಮಮಂದಿರದ ಕಥಾನಾಯಕನ ಮಧ್ಯಮವರ್ಗದ ಮದುವೆಯ ವೃತ್ತಾಂತದ ಕಲ್ಪನೆ ಅನನ್ಯವಾಗಿದೆ. ಹಾಗೆ ನೋಡಿದರೆ ಮಧ್ಯಮ ವರ್ಗದ ಕ್ರೈಸಿಸ್ ಗಳನ್ನು ಆಳವಾಗಿ ಎಕ್ಸ್ಪ್ಲೋರ್ ಮಾಡುವುದು ನಿಮ್ಮ ಕೃತಿಗಳ ಅನನ್ಯ ಗುಣವಾಗಿದೆ
ನನಗೆ ನಿಮ್ಮ ಧೋರಣೆಯಲ್ಲಿ ಇಷ್ಟವಾಗುವುದು ದಡ ಸೇರುವ ಪ್ರವೃತ್ತಿಯಿಂದ ನಿಲ್ಲುವ ದೂರದಲ್ಲಿ, ಶಾಶ್ವತ ಅಶಾಶ್ವತಗಳ ಬಗ್ಗೆ ನೀವು ತಳೆದಿರುವ ನಿಲುವಿನಲ್ಲಿ, ವಸ್ತುವನ್ನು ಮುತ್ತು ರತ್ನಗಳ ಪರೀಕ್ಷಕನ ಹಾಗೆ ತನ್ಮಯರಾಗಿ ಪರಿಕಿಸುವ ಪರಿಯಲ್ಲಿ, ಆಪ್ತ ನಿರೂಪಣಾ ವಿಧಾನದಲ್ಲಿ, ಕಥಾ ಕೇಂದ್ರದ ನಿರ್ವಹಣೆಯಲ್ಲಿ. ಬಹುಶಃ ಇದೆಲ್ಲ ನಿಮಗೇ ವಿಶಿಷ್ಟವಾದ ಸಾಧನೆ ಎಂದರೆ ಅತಿಶಯವಿಲ್ಲ.
ತೀರಾ ದೊಡ್ಡದಾದ ಸ್ಪೇಸ್ ಬಯಸದ ನಿಮ್ಮ ಕಾದಂಬರಿಗಳು ಇರುವ ಅವಕಾಶದಲ್ಲಿ ಬಂಧಿಯಾಗದೆ ವಿಸ್ತಾರ ಆಲೋಚನೆಗೆ ಎಡೆಮಾಡಿಕೊಡುವುದು ಇನ್ನೊಂದು ವಿಶೇಷ. ನಿಮಗೆ ಇದು ಬಹಳ ಫಲಕಾರಿಯಾದ ತಂತ್ರವಾಗಿ ಸಿಕ್ಕಿದೆ ಎಂದು ಹಲವು ಸಲ ನನಗೆ ಅನ್ನಿಸಿದೆ.
ಮತ್ತೊಮ್ಮೆ ವಂದಿಸಿ
ಆರ್. ವಿಜಯರಾಘವನ್





ಪುಸ್ತಕ ಓದಬೇಕೆಂದೆನಿಸಿದೆ