ಕೆ ವಿ ತಿರುಮಲೇಶ್
ಜಂಗಮರು
ಬೋಳುಮಂಡೆ ಜಂಗಮರು
ಸಂಗಮದಲ್ಲಿ ಮುಳುಗಿದರು
ಅಮೇಲವರು ಕಾಣಿಸದಾದರು
ಯಾತಕ್ಕೆಂದರೆ
ತಿಮಿಂಗಿಲ ಅವರನು ನುಂಗಿದರು
ಕಾವಲಿಗೆ
ಅಂತರಗಟ್ಟಿ ಪಂತರಗಟ್ಟಿ
ಕಾವಲಿಗೆಯಲಿ ಬೆಣ್ಣೆಯ ಗಟ್ಟಿ
ಕರಗಲಿ ಕರಗಲಿ ಕರಗಲಿ ಎಂದು
ದೋಸೆಯ ಮ್ಯಾಲೆ ಕೂರಿಸಿಬಿಟ್ಟಿ
ಕಾವಲಿಗೆಂದು ಯಾರನ್ನಿಟ್ಟಿ?
ನನ್ನ ನನ್ನ ನನ್ನ …
ವಿ ಎಸ್ ಮರಾಠೆ
ವಿ ಎಸ್ ಮರಾಠೆ
ಹಸಿವಾಗತ್ತೆ ಹಸಿವಾಗತೇಂತ
ದಿನವೆಲ್ಲ ತರಾಟೆ
ಕೊನೆಗೆರಡು ಬಿಸಿ ಬಟಾಟೆ
ಬಾಯಿಗೆ ತುರುಕಲು ನಿಂತಿತು ಗಲಾಟೆ
ಬದನೆ ಕೊದನೆ
ಬದನೆ ಕೊಟ್ಟು ಕೊದನೆ ಕೊಂಡು
ಅದನೆ ತಿನಿರಿ ಎಂದರೂ
ಅದನೆ ತಿನುವ ಬದಲು ನಾವು
ಇದನೆ ತಿನುವೆವೆಂದರು!
ಸತ್ಯ ಸುಳ್ಳು
ಸತ್ಯ ಅಂದ್ರೆ ಎಷ್ಟೊಂದ್ ಸುಂದ್ಲ
ಒಂದೊಂದ್ಲ ಒಂದ್ಲ
ಯಾವಾಗ್ಲೂ ಒಂದ್ಲ!
ಸುಳ್ಳೆಂದ್ರೆ ಗೊಂದ್ಲ
ಹತ್ತೊಂಭತ್ತು ಹತ್ತೊಂಭಾತ್ಲ
ಒಂದೊಂದ್ಸಲ ಒಂದೊಂದ್ಲ
ಥಿಯೋಡೋರ್ ರೋತ್ಕೆ
ಅಮೇರಿಕನ್ ಕವಿ ಥಿಯೋಡೋರ್ ರೋತ್ಕೆ
ಅಳುತ್ತಾ ಇದ್ದದ್ಯಾತ್ಕೆ?
ಥಿಯೋಡೋರ್ ರೋತ್ಕೆ
ನಗುತ್ತಾ ಇದ್ದದ್ಯಾತ್ಕೆ–ಅದ್ಕೇ!
ಜರ ಹಸ್ಕೇ ಜರ ರೋತ್ಕೇ!
ಬೂದುಗುಂಬಳಗಾಯಿ
ಎಷ್ಟೊಂದ್ ದೊಡ್ಡದೀ
ಬೂದುಗುಂಬಳಗಾಯಿ!
ನುಡಿದರೆ ಬಾಯ್ತುಂಬ
ಬರೆದರೆ ಸಾಲ್ತುಂಬ
ಚೀನೀಕಾಯಿ ಬಚ್ಚಂಗಾಯಿ
ಪಪ್ಪಾಯಿ ಅಥವ ಯಾವುದೇ ಕಾಯಿ
ಇದರ ಮುಂದೆ ನಾಯಿ–
ಕಾಯಿ ಅಂದ್ರೆ ಬೂದುಗುಂಬಳಗಾಯಿ
ತುಂಬುವುದದನಂತಂದವರ ಬಾಯಿ!
ಚಿಟ್ಟೆ
ನಯನಮನೋಹರ ಚಿಟ್ಟೆ
ಉಟ್ಟಿದೆ ಬಣ್ಣದ ಬಟ್ಟೆ
ಮುಟ್ಟಿದರೆ ಮಾತ್ರ ಅದರ
ಗುಟ್ಟಾಗುವುದು ರಟ್ಟು:
ಬಣ್ಣದ ಕೆಳಗೆ ಬಟ್ಟೆಯೆ ಇಲ್ವೆ!
ಜೂಲಿಯಸ್ ಸೀಸರ್
ಜೂಲಿಯಸ್ ಸೀಸರ್
ಪ್ರತಿ ದಿನ ನೇಸರ್
ಮೂಡುವ ಮೊದಲೇ
ಮಾಡೋನು ಸ್ನಾನ
ಸ್ವಿಚಾನ್ ಮಾಡಿ ಗೀಸರ್
ನಂತರ ಕಳೆಯಲು ಬೇಸರ್
ಕುಡೀತಿದ್ದನು ಆಲ್ಕೋಹಾಲು
ಸೇರಿಸಿ ಅದಕೆ ಸ್ವಲ್ಪ ಕೇಸರ್
ಪುರಂದರ ವಿಠಲ
ಪಲ್ಲವಿಯಲ್ಲೇ ಬರಬಾರದೆ ಹೇ
ಪುರಂದರ ವಿಠಲ್ಲ?
ಕೊನೇ ತಂಕ ಕಾಯುವುದಿಲ್ಲ
ದುಷ್ಟನಾದ ಅಟಿಲ್ಲ
ಬಾಣಸವಾಡಿಗೆ ಒಯ್ದು
ಮಾಡುತಾನೆ ಪಲ್ಯ!
ವಿಠಲಗೆ ಸಿಗೋದಾಮೇಲೆ
ನಮ್ಮ ಮೈಮೇಲಿನ ಶಲ್ಯ!
ಕಾವ್ಯಾಭಿಮಾನ
ಭಾರತ ಬರೆಯಲು ಕುಮಾರವ್ಯಾಸ
ಒದ್ದೆ ಬಟ್ಟೆಯಲಿ ಕುಂತಿರೆ ಅವನ
ಬಟ್ಟೆಯೆಂದೂ ಆರದ ಹಾಗೆ
ನೋಡ್ಕೊಳ್ಳೋದಲ್ವೇ
ನಿಜವಾದ ಕಾವ್ಯಾಭಿಮಾನ?
ಎಷ್ಟು ಜನರಿಗಿದೆ ಈ ಗ್ಯಾನ?
ನಂಗಿದೆ ನಂಗಿದೆ ನಂಗಿದೆ ಅಂತವೆ
ಅಪ್ಪಟ ಕನ್ನಡ ಹೈಕ್ಳು
ನಾಳೆ ಬರೋವಾಗ ತರ್ತವೇ
ಒಂದೊಂದು ಬಿಂದಿಗೆ ನೀರು!
ಸೋಗೆ
ಹಗಲು ಕಾಣದ ಗೂಗೆ
ಇರುಳು ಕಾಣದ ಕಾಗೆ
ಎರಡೂ ಕಾಣದ ಹಾಗೆ
ತಾಳೆ ಮರದ ಸೋಗೆ
ಸ್ಫೂರ್ತಿ
ಗಾನ ವಿಭೀಷಣ ಶ್ರೀಕಂಠ ಮೂರ್ತಿ
ಯಾರಪ್ಪಾ ನಿಮಗೆ ಸ್ಫೂರ್ತಿ?
ಪುಳಿಹೋಗರೆ ವಡೆ ಚಿತ್ರಾಹ್ನವೈ
ತಪ್ಪಿದರೆ ಮೊಸರನ್ನ ಹುಪ್ಪಿನ ಕಾಯ್
ದಿವಸಕೆ ಮೂರ್ನಾಕ್ ಸರ್ತಿ
ಕಂಠಪೂರ್ತಿ!
ತೂತಂಕಾಮನ್
ಮಮ್ಮೀ ಮಮ್ಮೀ ಗುಲಾಬ್ ಜಾಮನ್
ಅಂತ ಹಟಮಾಡಿದ್ದಕ್ಕೆ ತೂತಂಕಾಮನ್
ಮಮ್ಮಿ ಮಾಡಿಟ್ಟರು ಪಿರಮಿಡಿನೊಳಗವನ
ಈಜಿಪ್ಟ್ನಲ್ಲಿದು ಕಾಮನ್!
ವ್ಯಾಕರಣ ಸಮಸ್ಯೆ
ಚೋಳ ರಾಜನನು ತೋಳ ಹಿಡಿದಿದೆ
ಕಾಯೋ ವೆಂಕಟರಮಣ!
ಇದೇನು ವ್ಯಾಕರಣ, ಯಾರ ಕಾಯಲಿ
ಚೋಳ ರಾಜನ ಅಥ್ವ ತೋಳ ರಾಜನ?
ಎಂದರಿಯದೆ ಸುಮ್ಕಿದ್ದ ಸಂಕಟಹರಣ!
ಕಟ್ಟಬೊಮ್ಮನ್ ಕೆಟ್ಟಬೊಮ್ಮನ್
ಯಾರನ್ ನಂಬಿದ್ರೂ ನನ್ನ ತಮ್ಮನ್ ನಂಬೇಡಿ
ಅಂತಾನೆ ವೀರ ಪಾಂಡ್ಯ ಕಟ್ಟಬೊಮ್ಮನ್
ನಾನ್ ಕಟ್ಟಬೊಮ್ಮನ್
ಅವ ಕೆಟ್ಟಬೊಮ್ಮನ್
ಸ್ಪೆಲ್ಲಿಂಗ್ ತಪ್ ಮಾಡಿ ಆಗಾಗ ನನಗೆ
ತರ್ತಾನೆ ಕೆಟ್ಟ ಹೆಸರನ್
ತಮ್ಮನ್ ಎಂಬ ಈ ಗುಮ್ಮನ್!
ಇಶ್ ಬಿನ್ (`ನನ್ಹೆಸರು’)
ಕೇರಳದ ರಾಜ ಮಾರ್ತಾಂಡ ವರ್ಮನ್
ಜರ್ಮನಿಗೆ ಹೋಗಿ ಬಂದಾನ್
ಆಮೇಲೆ ಎಲ್ಲೆಲ್ಲು ಅಂದಾನ್
ಇಶ್ ಬಿನ್ ಮಾರ್ತಾಂಡ ವರ್ಮನ್
ಡಸ್ಟ್ ಬಿನ್ ಟ್ರ್ಯಾಶ್ ಬಿನ್ ಸರೀನಪಾ
ಆದ್ರೆ ಈ ಇಶ್ ಬಿನ್ ಯಾತಕೆ ಎಂದ್ರೆ
ಇಶ್ ಬಿನ್ ಮಾರ್ತಾಂಡ ವರ್ಮನ್
ಅದಕೇ ಇಶ್ ಬಿನ್ ಅಂದಾನ್!
Odalu saralavenisidaru maarmika saalugalu manasannu thattuthave. Chennagide sir
ಚಪ್ಪರಿಸಿ ಓದಿದೆ ಮತ್ತೆ ಮತ್ತೆ
ಕತ್ತರಿಸಿ ಓದಿದೆ ಮತ್ತೆ ಮತ್ತೆ
ಕೆವಿ ತಿರುಮಲೇಶ ಅಂದ್ರೆ ಸ್ಪೆಲ್ಲಿಂಗ್ ಮಿಸ್ಟೇಕು
ಕವಿ ತಿರುಮಲೇಶ ಅಂದ್ರೆ ಸಾಕು ಬಿಟ್ಹಾಕು
ಮಜಾ ಬಂತು. ತಿರುಮಲೇಶ್ ಪಾಪಿಯೂ ಸಂಕಲನದ ಪದ್ಯಗಳು ನೆನಪಾದವು.
ವಾವ್ಹ…..ವಾವ್ಹ. …ಎಷ್ಟು ಸಾರಿ ಓದಿದ್ರೂ ಬೇಜಾರು ಆಗಲ್ಲ.ನಿಜಕ್ಕೂ ಕುಟು ಕುಟು ಕುಟುಕ್ತವೆ.ಹೈಕ್ಲಾಸಾಗಿವೆ -ಸಾಲುಗಳು.
😀 Hhha Hhha
ತುಂಬ ಖುಷಿ ಕೊಟ್ಟ ಪುಟ್ಟ ಪುಟ್ಟ ಪದ್ಯಗಳು. ಅರ್ಥಗರ್ಭಿತ ಕೂಡಾ…
tumbha chennagide
ತಿರು ತಿರುಗಿಸಿ ತಿರುಗಾ ಮುರಗಾ ಓದಿಸಿಕೊಂಡು ಹೋಗುವ ಕವಿ ಕೆ.ವಿ.ತಿರುಮಲೇಶರ ಪದ್ಯಗಳು -ಆಕಾರದಲ್ಲಿ ಚಮಚೆಯಷ್ಟೇ ಚಿಕ್ಕವಿದ್ದರೂ ಪರಿಣಾಮದಲ್ಲಿ ಔಷದಿಯಂತೆ ಕಿಕ್ ಕೊಡುವಂತಿವೆ.
~ಅನಿಲ
doddavarigoo ishtavaaguva makkaLa padyagaLu. maja ive. khushi aytu.
ಸರ್, ಬಹಳ ಚೆನ್ನಾಗಿವೆ. ವೈ ಎನ್ ಕೆ ನೆನಪಾದರು!
padyagalu chennagive sir
Excellent
chennagive 17.11.2014
m.m.shivapraash hampi
ಈನಡುವೆ ಮಕ್ಕಳ, ಖಳರ ಪದ್ಯಗಳನ್ನೆಲ್ಲಾ ಬರೆದು ಖುಶಿ ನೀಡುತ್ತಿದ್ದಿರಿ. ಥ್ಯಾಂಕ್ಯು ಸರ್ !