ವಿಶ್ವ ಪುಸ್ತಕ ದಿನದ ಅಂಗವಾಗಿ ಅವಧಿಯಲ್ಲಿ ಓದುಗರ ಟಾಪ್ಟೆನ್ ಪುಸ್ತಕಗಳನ್ನು ಪ್ರಕಟಿಸುತ್ತಿದ್ದೇವೆ.
ಆ ಪಟ್ಟಿಯಲ್ಲಿ ಕವನ ಸಂಕಲನಗಳ ಹೆಸರು ಕಡಿಮೆ ಇದ್ದದ್ದು ಗಮನಿಸಿ ತಿರುಮಲೇಶ್ ’ನಿಮ್ಮ ಲೆಕ್ಕದಲ್ಲಿ ನಾವಿಲ್ಲ’ ಎಂದು ಕವಿತೆಗಳ ಪರವಾಗಿ ಪ್ರಶ್ನಿಸಿದ್ದರಲ್ಲದೆ, ಕವನಸಂಗ್ರಹಗಳ ಕೆಲವು ಹೆಸರುಗಳನ್ನೂ ಕೊಟ್ಟಿದ್ದರು. ಆ ಪಟ್ಟಿಗೆ ಮತ್ತೂ ಹಲವು ಹೆಸರುಗಳು ಸೇರ್ಪಡೆ ಆದವು.
ನಿನ್ನೆ ಸ್ವತಃ ಕವಯತ್ರಿಯೂ, ’ಅವಧಿ’ ಓದುಗರೂ ಆದ ಎಂ ಎಂ ಶೇಕ್ ಅವರು ಕೊಟ್ಟಿದ್ದ ಅವರ ಮೆಚ್ಚಿನ ಪುಸ್ತಕಗಳ ಪಟ್ಟಿಯನ್ನು ಪ್ರಕಟಿಸಿದ್ದೆವು.
ಆ ಪಟ್ಟಿಯನ್ನು ಓದುವಾಗಲೇ ಅನ್ನಿಸಿತ್ತು, ಇದು ತಿರುಮಲೇಶ್ ಅವರಿಗೆ ಪ್ರಿಯವಾಗಬಲ್ಲ ಪಟ್ಟಿ ಅಂತ!
ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ. ಪ್ರೀತಿಯಿಂದ ಪ್ರತಿಕ್ರಯಿಸಿದರು ತಿರುಮಲೇಶ್.
ಅವರ ಪ್ರತಿಕ್ರಿಯೆ ಇಲ್ಲಿದೆ.
ಕೆ ವಿ ತಿರುಮಲೇಶ್
ನೀವೊಬ್ಬರಾದರೂ ಕಾವ್ಯಪ್ರಿಯರಿದ್ದೀರಲ್ಲ! ಅಷ್ಟು ಸಾಕು. ಕಾವ್ಯಕ್ಕೆ ಯಾವತ್ತೂ ಕಡಿಮೆ ಓದುಗರೇ ಇರೋದು. ಹಾಗೇ ಇರಲಿ. ಅದಲ್ಲದಿದ್ದರೆ ಕಾವ್ಯವೂ ಮಾರ್ಕೆಟ್ ಇಕಾನಮಿಯ ಭಾಗವಾಗಿಬಿಡುತ್ತದೆ ಅಂತ ಕಾಣುತ್ತದೆ.
ಮೊನ್ನೆ ಸ್ನೇಹಿತರೊಬ್ಬರು ನನಗೆ ಫೋನ್ ಮಾಡಿ ಹೇಳಿದರು: ಸಾರ್, ನಮ್ಮ ಇಂದಿನ ಜನರೇಶನಿನವರಿಗೆ ಕವಿತೆ ಹಿಡಿಸುವುದಿಲ್ಲ; ನಮಗೆ ಸುಲಭವಾಗಿ ಅರ್ಥವಾಗಬೇಕು; ನಮ್ಮದು ವೇಗದ ಬದುಕು; ಹೆಚ್ಚು ಪರಿಶ್ರಮಕ್ಕೆ ಸಮಯವಿಲ್ಲ–ಇತ್ಯಾದಿ. ಅವಧಿಯಲ್ಲಿ ನಾನೊಂದು ಕವನಸಂಕಲನಗಳ ಪಟ್ಟಿ ನೀಡಿದ್ದೆನಲ್ಲ–ಇದರ ಹಿನ್ನೆಲೆಯಲ್ಲಿ ಅವರು ಈ ಮಾತು ಹೇಳಿದ್ದು. ನಾನು ಸಪ್ಪೆಯಾದೆ; ಅವರ ಜತೆ ವಾದಿಸುವುದಕ್ಕೆ ಹೋಗಲಿಲ್ಲ. ಯಾಕೆಂದರೆ ಯಾವುದು ಓದಬೇಕು, ಅಥವಾ ಯಾವುದನ್ನಾದರೂ ಓದಬೇಕೇ ಎಂಬುದೆಲ್ಲ ಅವರವರಿಗೆ ಬಿಟ್ಟ ವಿಷಯ.
ನನ್ನಂಥ ಕೆಲವು ವಿಚಿತ್ರ ವ್ಯಕ್ತಿಗಳಿದ್ದಾರೆ (ನನ್ನ ಬಗ್ಗೆಯೇ ಹೇಳಿಕೊಳ್ಳುತ್ತಿರುವುದಕ್ಕೆ ಕ್ಷಮೆಯಿರಲಿ): ಅಂಥವರಿಗೆ ಎಲ್ಲ ತರದ ಪುಸ್ತಕಗಳೂ ಗ್ರಾಸವೇ. ನಾನು ರಿಚರ್ಡ್ ಫೆಯ್ನ್ ಮನ್ ನ Six Easy Pieces, Six Not-So-Easy Pieces ಓದುವ ಕುತೂಹಲದಲ್ಲೇ ಪೇಜಾವರ ಸದಾಶಿವರಾಯರ `ವರುಣ’ ಅಥವಾ ವಿ.ಕೃ. ಗೋಕಾಕರ `ಸಮುದ್ರ ಗೀತಗಳು’ಓದಬಲ್ಲೆ. ಎಲ್ಲವೂ ಅರ್ಥವಾಗುತ್ತವೆಯೇ? ಖಂಡಿತಾ ಇಲ್ಲ! ಕೆಲವು ಸಲ ಮತ್ತೆ ಮತ್ತೆ ಓದಬೇಕಾಗುತ್ತದೆ.
ಇದೇ ಒಂದು ಮಾದರಿ ಎಂದು ಹೇಳಲಾರೆ. ಆದರೆ ಇಂಥ ಓದು ಪ್ರಯೋಜನವಾದಿಗಳಿಗೆ (Pragmatists) ಹೇಳಿದ್ದಲ್ಲ. ಯಾಕೆಂದರೆ ಇದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ನನಗೆ ವೇಳೆಯಿದೆ, ಓದುತ್ತೇನೆ ಎಂದು ಹೇಳಬಹುದೇ? ಹಾಗಲ್ಲ, ಕೈತುಂಬ ಕೆಲಸವಿದ್ದಾಗಲೂ ನಾನು ಹೀಗೆ ಓದುತ್ತಿದ್ದೆ–ಬಹುಶಃ ಇಂದಿಗಿಂತಲೂ ಹೆಚ್ಚು. ಇದು ನನ್ನ ಮನಸ್ಸಿನಲ್ಲಿ ಗೊಂದಲವುಂಟುಮಾಡಿದೆ ಎನ್ನುವುದು ನಿಜ. ನಿಧಾನಿಯೂ ಸ್ವಲ್ಪ ಅನುಮಾನಿಯೂ ಆಗಿದ್ದೇನೆ. ಆದರೆ ಹೊರಜಗತ್ತಿನಷ್ಟೇ ವಿಶಾಲವಾದ ಒಂದು ಒಳಜಗತ್ತೂ ಲಭಿಸಿದೆ–ಅವು ಪರಸ್ಪರ ಸಂಬಂಧದಲ್ಲಿವೆ. ಒಂದರ ಮೇಲೊಂದು ಪ್ರಕಾಶ ಬೀರುತ್ತಿವೆ ಎಂದೆನಿಸುತ್ತದೆ.
ಕೆ.ವಿ.ತಿರುಮಲೇಶ್






avadhigu..pratikriyisida sir avariguu dhanyavaadagaLu..