
ಕೆ.ವಿ.ತಿರುಮಲೇಶ್
ಕಾರ್ಲ್ ಸಾಗಾನ್- ಅವನ ಕಾಸ್ಮೋಸ್ ಕೃತಿಯನ್ನು ನಾನು ಕೂಡ ಆಗಾಗ ಓದುತ್ತಿರುತ್ತೇನೆ. ಇಂತ ಕೃತಿಗಳನ್ನು ಓದುವುದರಿಂದ ಮನಸ್ಸಿಗೆ ಅದೇನೋ ಹಿತವೆನಿಸುತ್ತದೆ.
ಕೆಲವು ವರ್ಷಗಳ ಹಿಂದೆ ಒಂದು ಲೈಬ್ರರಿಯಲ್ಲಿ ಕುಳಿತು ಸಿಗ್ಮಂಡ್ ಫ್ರಾಯ್ಡನ New Introductory Lectures on Psychoanalysis ಎಂಬ ಪುಸ್ತಕದಲ್ಲಿನ The Question of Weltanschauung ಅಧ್ಯಾಯವನ್ನು ಓದುತ್ತಿದ್ದೆ.
ಯಾವ ಯಾವ ಕಾರಣಗಳಿಗೋ ನನ್ನ ಮನಸ್ಸು ಪ್ರಕ್ಷುಬ್ದವಾಗಿದ್ದ ಕಾಲವಾಗಿತ್ತು ಅದು. ಬಹಳ ಒಂಟಿಯಾಗಿದ್ದೆ. ನನ್ನ ಬರಹಗಳನ್ನು ಮೂಲಭೂತವಾದಿಗಳು ಟೀಕಿಸುತ್ತಿದ್ದರು. ಒಮ್ಮೆ ಡಾರ್ವಿನ್ ಕುರಿತು ನಾನು `ಆಳ ನಿರಾಳ’ ಅಂಕಣದಲ್ಲಿ ಬರೆದಾಗ ಒಬ್ಬ ಸೃಷ್ಟಿವಾದಿ ನನ್ನನ್ನು ಈ ಮೇಲ್ ಮೂಲಕ ಬೆಂಬತ್ತಿದ. ಪತ್ರಗಳಿಗೆ ನಾನು ಹೆಚ್ಚಾಗಿ ಉತ್ತರಿಸದೆ ಇರುವುದಿಲ್ಲ. ಆದರೆ ನಾನು ಉತ್ತರಿಸಿದಂತೆ ಈ ಡಾರ್ವಿನ್ ವಿರೋಧಿಯ ಆಕ್ರಮಣ ಜೋರಾಗುತ್ತ ಹೋಯಿತು. ಕೊನೆಗೆ, ನೀನು ಸಿಕ್ಕಿದರೆ ನಿನ್ನ ಮುಖಕ್ಕೆ ಉಗಿಯುತ್ತೇನೆ ಎಂದು ಬೆದರಿಸುವ ತನಕ ಮುಂದುವರಿದ! ಅನಂತಮೂರ್ತಿಯವರನ್ನು ಕೂಡ ಅವನು ಇದೇ ರೀತಿ ಬಯ್ಯುತ್ತಿದ್ದ–ಯಾಕೆಂದರೆ ಅವರಿಗೆ ಮೇಲ್ ಮಾಡಿದ ಪತ್ರದ ಪ್ರತಿಯನ್ನು ನನಗೆ ರವಾನಿಸುತ್ತಿದ್ದ. ನಾವು ಎಂಥಾ ಕಾಲದಲ್ಲಿ ಇದ್ದೇವೆ ಎಂದು ಗಾಬರಿಯಾಯಿತು. ಆದರೂ ನಾನು ಹತಾಶನಾಗಿರಲಿಲ್ಲ; ಯಾಕೆಂದರೆ ಕೊನೆಗೂ ನನ್ನ ಬರಹಗಳ ಉದ್ದೇಶ ಶೈಕ್ಷಣಿಕವಾದ್ದು.
ಇಂಥ ಸಂದರ್ಭದಲ್ಲಿ ಫ್ರಾಯ್ಡ್-ನ್ನ ಓದುತ್ತಿದ್ದಂತೆ ಫ್ರಾಯ್ಡ್ ನನ್ನನ್ನೇ ಉದ್ದೇಶಿಸಿ ಆ ಅಧ್ಯಾಯವನ್ನು ಬರೆದ ಹಾಗೆ ಅನಿಸಿತು–ನನ್ನನ್ನು ಮತ್ತು ನನ್ನಂಥವರನ್ನು; ಅವನು ವಿಜ್ಞಾನ ವರ್ಸಸ್ ಮತಧರ್ಮಗಳ ಕುರಿತು ಹೇಳಿದ್ದ: ಆಧುನಿಕ ವಿಜ್ಞಾನ ಇನ್ನೂ ಹಸುಳೆ; ಅದಕ್ಕೆ ಸುಮಾರು ೨೦೦ ವರ್ಷ ವಯಸ್ಸು ಅಷ್ಟೆ. ಭೂಮಾನದ ಕಾಲದಲ್ಲಿ ಇದು ಏನೂ ಅಲ್ಲ. ಬೆಳೆಯುವುದು ಇನ್ನೂ ಇದೆ–ಎಂದು ಮುಂತಾಗಿ. ಈ ಅಧ್ಯಾಯದಲ್ಲಿನ ಅವನ ಮಾತುಗಳು ನನಗೆ ಅದೆಷ್ಟು ಸಾಂತ್ವನ ನೀಡಿದವಂದರೆ ನಾನವನ್ನು ಈಗಲೂ ನೆನಪಿಸಿಕೊಳ್ಳುತ್ತಿದ್ದೇನೆ. ದೊಡ್ಡ ದೊಡ್ಡ ಲೇಖಕರನ್ನು ಓದುವ ಉಪಯೋಗ ಇದು.
*
ಈಗ ಈ ರೋಹಿತ್ ಬಹಳ ಓದಿಕೊಂಡವ ಎನ್ನುವುದು ಅವನ ಪತ್ರದಿಂದ ಗೊತ್ತಾಗುತ್ತದೆ.
ಕಾರ್ಲ್ ಸಾಗಾನ್-ನ ಆದರ್ಶ ಅವನ ಮುಂದಿತ್ತು. ಅವನ ಆತ್ಮಹತ್ಯೆಗೆ ನಿಜಕ್ಕೂ ನಿರ್ದಿಷ್ಟವಾದ ಕಾರಣವೇನಿತ್ತು ಎನ್ನುವುದು ನನಗಿನ್ನೂ ಗೊತ್ತಾಗುತ್ತ ಇಲ್ಲ. ಬಹುಶಃ ಮುರಿದುಬಿದ್ದ ಮನುಷ್ಯ ಸಂಬಂಧ? ಭ್ರಮನಿರಸನ?
ಆ ಗಳಿಗೆಯಲ್ಲಿ ಅವನು ಕಾರ್ಲ್ ಸಾಗಾನ್ ಅಥವಾ ಫ್ರಾಯ್ಡನ ಬರಹಗಳನ್ನು ಕೈಗೆ ಎತ್ತಿಕೊಂಡಿದ್ದರೆ ಈ ವೃಥಾ ಸಾವು ತಪ್ಪುತ್ತಿತ್ತು ಎನಿಸುತ್ತದೆ. (ಇಲ್ಲಿ ಫ್ರಾಯ್ಡ್ ಬಹಳ ಪ್ರಸ್ತುತ, ಯಾಕೆಂದರೆ ಯೆಹೂದಿ ವಿರೋಧಿ ಜನಾಂಗ ದ್ವೇಷಕ್ಕೆ ಗುರಿಯಾದವ ಆತ–ಆದ್ದರಿಂದ ಕೊನೆಗಾಲದಲ್ಲಿ ಅವನು ದೇಶವನ್ನೇ ಬಿಡಬೇಕಾಯಿತು.)
ರೋಹಿತ್-ನನ್ನು ನೋಡಿಕೊಳ್ಳಬೇಕಿದ್ದ ಪ್ರಾಧ್ಯಾಪಕರು ಎಲ್ಲಿದ್ದರು ಎಂಬ ಪ್ರಶ್ನೆಯೂ ನನ್ನ ಮನಸ್ಸಿನಲ್ಲಿದೆ.
ಒಬ್ಬ ಗೈಡ್ ಅಥವಾ ಸೂಪರ್ವೈಸರ್ ಎಂದರೆ ಥೀಸಿಸ್-ನ ಚರ್ಚೆಗೇ ಮುಗಿಯಿತೇ? ಯುವ ಮನಸ್ಸುಗಳು ಮನ ಬಿಚ್ಚುವುದು ಯಾರೊಂದಿಗೆ?
ಫ್ರೆಂಡ್, ಫಿಲಾಸಫರ್, ಗೈಡ್ ಎನ್ನುತ್ತೇವೆ–ಅವರೀಗ ಎಲ್ಲಿ?





ಸರ್, ನೀವು ತೋರುತ್ತಿರುವ ಈ ಸ್ಥೈರ್ಯ ಎಲ್ಲರಿಗೂ ಬೇಕು. ಪ್ರೀತಿ ಎಂಬುದು ಕೇಳದೆ ಅಪೇಕ್ಷಿಸದೇ ಇದ್ದಾಗ ಸಿಕ್ಕರೆ ಅದರ ರುಚಿ ಸತ್ವ ಶಕ್ತಿ ಹೆಚ್ಚು. ಪ್ರಿತಿಯನ್ನ ಧೈರ್ಯವನ್ನ ಕಳೆದುಕೊಂಡಾಗ ಯಾರದೋ ಹತ್ತಿರ ಬೇಡಿ ಪಡೆದುಕೊಳ್ಳಲಾಗುವುದಿಲ್ಲ. ಅದೆಲ್ಲ ಇದ್ದವರು ನೀಡುವ ಸಲಹುವ ಉದಾರತೆಯನ್ನ ಯಾವಾಗಲೂ ಹೊಂದಿರಬೇಕು. ಒಬ್ಬ ಖಾಲಿಯಾದ ಮನುಷ್ಯನಿಗೆ ಇನ್ನೊಬ್ಬ ಜೀವಂತಿಕೆ ತುಂಬಿರುವ ಮನುಷ್ಯ ಕೊಡಬಹುದಾದದ್ದು ಸಾಕಷ್ಟಿರುತ್ತದೆ. ಆದರೆ ನಮ್ಮ ಸಂಬಂಧಗಳ ಗತಿ ಬಹಳಷ್ಟು ಸಂದರ್ಭಗಳಲ್ಲಿ ಏನಾಗಿದೆ ನೆನಪಿಸಿಕೊಂಡರೆ ಹೃದಯ ಅಲ್ಲಾಡುತ್ತದೆ. ನಿಮ್ಮ ಪ್ರಶ್ನೆಗಳು ಕೇವಲ ಪ್ರೊಫೆಸರ್ – ಶಿಷ್ಯನ ಸಂಬಂಧಕ್ಕೆ ಮಾತ್ರವಲ್ಲ, ತಂದೆ ಮಗನಿಗೆ, ತಾಯಿ ಮಕ್ಕಳಿಗೆ, ಗಂಡ ಹೆಂಡತಿಗೆ, ಸಹೋದರ ಸಹೋದರಿಯರಿಗೆ ಪ್ರೀತಿ ಬಯಸುವ ಪ್ರೀತಿ ಹಂಚುವ ಎಲ್ಲರಿಗೂ.
ತುಂಬ ದಗ್ಧ ಸನ್ನಿವೇಷದ, ಈ ವಿಷಮ ಸ್ಥಿತಿಯಲ್ಲಿ ಪ್ರಜ್ಞೆ ಇರಬಹುದಾದ, ಜೀವಪರತೆಗ ತುಡಿಯುವ ಎಲ್ಲರಿಗೂ ಸವಾಲು ಹತಾಶೆ ನಿತ್ಯ ವರ್ತಮಾನ. ಇದರ ಮದ್ಯೆಯೂ ಎದ್ದು ನಿಲ್ಲುವ, ಮಹಾತ್ವಾಕಾಂಕ್ಷೆಗೆ ತುಡಿಯುವ, ನಿರಾಸೆಯನ್ನ ಮೀರುವ ಮುಂದಡಿಯಿಡುವ ಉತ್ಸಾಹವನ್ತೂನಂತೂ ತಮ್ಮ ಮಾತುಗಳು, ಮಾತು ತೋರಿರುವ ದಾರಿಗಳು ತೋರುತ್ತಿವೆ, ಎದೆಗೆ ಹಾಕುತ್ತಿವೆ. ಮತ್ತೆ ಮತ್ತೆ ಓದಿಕೊಂಡೇ. ಹೋದ ರೋಹಿತನಿಗೆ ಸಂದರ್ಭಕ್ಕೆ ಆಗದೇ ಉಳಿದ ಗುರುಗಳಿಗೆ ಮಾತ್ರವಲ್ಲ, ಈಗ ಇರುವ ನಿತ್ಯ ನಿರಾಸೆಯ ಎದುರುಗೊಳ್ಳುವ ಎಲ್ಲರಿಗೂ ಈ ಮಾತುಗಳು.
ಎದೆ ತುಂಬಿತು. ಕಣ್ಣು ಹನಿಯುತ್ತಿದೆ. ರೋಹಿತ್ ನೀನು ಇರಬೇಕಿತ್ತು.
ಅವಧಿಯಲ್ಲಿ ರೋಹಿತನ ಆತ್ಮಹತ್ಯೆಗೆ ಮನಸ್ಸು ಮಾಡಿದ್ದು ಸರಿಯೆ ಎಂಬ ಚರ್ಚೆಗೆ ಪ್ರತಿಕ್ರಿಯಿದಾಗಲಿಂದ ನನ್ನನ್ನು ಈ ವಿಷಯ ಕಾಡುತ್ತಿದೆ. ನಿರಂತರ ಅವಮಾನ, ಕಷ್ಟ ಪರಂಪರೆಗಳನ್ನೆದುರಿಸಿದ ಸಮುದಾಯದ ವ್ಯಕ್ತಿಗಳ ಮನಸ್ಥಿತಿ ಹೇಗಿರಬಹುದು. ಲಾಗಾಯ್ತಿನಿಂದ ಸಂಕಟಗಳನ್ನು ಅನುಭವಿಸುತ್ತಾ ಅದಕ್ಕೆ ಒಗ್ಗಿ ಹೋಗಿರುವ ದಲಿತ ಸಮುದಾಯದ ವ್ಯಕ್ತಿಗಳು , ಸ್ವಾತಂತ್ರ್ಯಾನಂತರ ಸಮಾನತೆಯ ಮೌಲ್ಯಗಳನ್ನು ಶಿಕ್ಷಣದ ಮೂಲಕ ಪಡೆದ ದಲಿತ ವ್ಯಕ್ತಿಗಳು ವಾಸ್ತವ ಜೀವನದಲ್ಲಿ ಕಾಣುವ ಕಂದರ ಇವರ ಮನಸ್ಥಿತಿ ಈ ಬಗೆಗಿನ ಚಿಂತನೆಗಳಲ್ಲಿ ಮುಳುಗಿದೆ. ಚೋಮ, ಗುತ್ತಿ, ಬೈರ, ಸಾಕವ್ವ , ಕುಸುಮ ಬಾಲೆಯ ಮತ್ತು ತಮಂಧದ ಕೇಡು ಮೊದಲಾದ ಕಥೆಗಳ ಪಾತ್ರಗಳು ಮತ್ತು ಅಕ್ರಮ ಸಂತಾನ, ಉಚಲ್ಯಾ, ಗವರ್ನ್ ಮೆಂಟ್ ಬ್ರಾಹ್ಮಣ, ಸಂಬೋಳಿ ಿತ್ಯಾದಿ ಆತ್ಮ ಕಥೆಗಳು ಇವುಗಳಲ್ಲಿ ಕಾಣುವ ಚಿತ್ರಣ ಕಣ್ಣ ಮುಂದೆ ಹಾದು ಹೋಗುತ್ತಿವೆ. ತಮಗುಂಟಾದ ಅವಮಾನ , ಸಂಕಟಗಳಿಗೆ ಬೇರೆ ಬೇರೆ ದಲಿತ ವ್ಯಕ್ತಿಗಳ ಮನಸ್ಸು ಹೇಗೆ ರೂಪುಗೊಳ್ಳುತ್ತದೆ , ನಮ್ಮೆಲ್ಲರ ಮನಸ್ಸು ಮತ್ತು ದಲಿತ ಮನಸ್ಸುಗಳ ನಡುವಣ ಸಾಮ್ಯತೆ ಮತ್ತು ಭಿನ್ನತೆಗಳು ಇವುಗಳ ಬಗೆಗಿನ ಅಧ್ಯಯನ ಕೈಗೊಳ್ಳದ ನಮ್ಮ ವಿವಿಗಳು ಇವುಗಳ ಕಡೆಗೆ ಚಿಂತನೆ ಹರಿಯುತ್ತಿದೆ.
ಈ ಎಲ್ಲದರಿಂದ ಮನಶ್ಶಾಸ್ತ್ರದಲ್ಲಿ ದಲಿತ ಅಧ್ಯಯನ ಅಥವಾ ದಲಿತ ಮನಶ್ಶಾಸ್ತ್ರ ಎಂಬ ಶಿಸ್ತು ಅಗತ್ಯವಾಗಿದೆ ಎಂಬ ಬಲವಾದ ಅಭಿಪ್ರಾಯ ನನ್ನದಾಗಿದೆ.
ರೋಹಿತ್ ಜೊತೆಗಿದ್ದ ಸ್ನೇಹಿತರು, ಹೋರಾಟಗಳಲ್ಲಿ ಜತೆಯಾಗಿ ಹೆಜ್ಜೆ ಹಾಕಿದ್ದವರು, ಎಎಸ್ಎನಲ್ಲಿ ಜತೆಗೆ ಕುಳಿತು ಚಚರ್ಿಸುತ್ತಿದ್ದವರು ಆತ ಸಂಕಷ್ಟದಲ್ಲಿದ್ದಾಗ ಎಲ್ಲಿ ಹೋದರು. ಅವರೆಲ್ಲಾ ಆಗಲೂ ಜತೆಗಿದ್ದರೆ ರೋಹಿತ್ ಇರುತ್ತಿದ್ದ. ಹೋರಾಟಗಳು, ಚಚರ್ೆಗಳು ಅರ್ಥ ಕಳೆದುಕೊಳ್ಳವುದು. ಅಳುವವರ ಕಣ್ಣೀರೊರೆಸದ ಓದು, ಹೋರಾಟ, ಚಚರ್ೆ ಎಲ್ಲವೂ ವ್ಯರ್ಥ. ರೋಹಿತ್ ಸಾವು ಈ ಎಲ್ಲದಕ್ಕೂ ಒಂದು ಪಾಠ