ಕೆ ನಲ್ಲತಂಬಿ ಅನುವಾದ ಸರಣಿ- ವರಾಹಮಿಹಿರ

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

18

ಚಂದ್ರಗುಪ್ತನ ಕಾಲದ ಖಗೋಳ ಶಾಸ್ತ್ರ ಪಂಡಿತ ವರಾಹಮಿತ್ರ. ಉಜ್ಜಯಿನಿಯಲ್ಲಿ 505ನೇಯ ಇಸವಿಯಲ್ಲಿ ಹುಟ್ಟಿದನು. ಗ್ರಹಣ ಬರುವುದನ್ನು ಮೊದಲೇ ಅರಿತು ಹೇಳುವ ಸರಳವಾದ ಮಾರ್ಗವನ್ನು ವರಾಹಮಿಹಿರ  ಕಂಡುಹಿಡಿದನು. ಎಣ್ಣೆಯ ಬಟ್ಟಲಿನಲ್ಲಿ ಸೊಪ್ಪೊಂದನ್ನು ತೇಲಬಿಡುವ ಮೂಲಕ ಯಾವಾಗ ಗ್ರಹಣ ಉಂಟಾಗುತ್ತದೆ ಎಂದು ಹೇಳಿದನು. ಗ್ರಹಗಳ ಕೂಡುವಿಕೆಯೇ ಗ್ರಹಣಕ್ಕೆ ಕಾರಣ ಎಂದು ವಿಜ್ಞಾನ ಪೂರಕವಾಗಿ ಬರೆದರು. ಇದು, ಗ್ರಹಣದ ಬಗ್ಗೆ ವಿದೇಶಿಯರು ಅರಿತುಕೊಳ್ಳುವುದಕ್ಕೆ ಹಲವು ಶತಮಾನಗಳ ಹಿಂದೆಯೇ ರೂಪುಗೊಂಡ ವಿಜ್ಞಾನ.

ಬೌದ್ಧ ಮತ ಪ್ರಖ್ಯಾತವಾಗಿದ್ದ ಕಾಲದಲ್ಲಿ, ಭಾರತದಲ್ಲಿ ಪ್ರಸಿದ್ಧವಾದ ಆರು ಬೌದ್ಧ ವಿಶ್ವವಿದ್ಯಾಲಯಗಳಿದ್ದವು. ಅವು, ನಲಂದಾ, ವಿಕ್ರಮಶೀಲ, ಉಡಂದಾಪುರಿ, ಸೋಮಪುರಂ, ಜಗತ್ತಾಲಂ, ವಲ್ಲಡಿ. ಈ ಆರು ವಿಶ್ವವಿದ್ಯಾಲಯಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿತರು. ವಿಷಯಾನುಸಾರ ಪ್ರತ್ಯೇಕ ವಿಭಾಗಳಲಿದ್ದವು. ನಲಂದಾದಲ್ಲಿ 1510 ಉಪಾಧ್ಯಾಯರಿದ್ದರು ಎನ್ನುತ್ತದೆ ಒಂದು ಅಂಕಿಅಂಶ. 

ಪ್ರವೇಶ ಪರೀಕ್ಷೆ ನಡೆಸಿಯೇ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತಿತ್ತು. ಪ್ರಾದ್ಯಾಪಕರನ್ನು ‘ದ್ವಾರ ಪಂಡಿತರು’ ಎಂದು ಕರೆಯಲಾಗುತ್ತಿತ್ತು. ಕಲಿಕೆಯ ಭಾಷೆಗಳು ಪಾಲಿಯೂ, ಸಂಸ್ಕೃತವೂ ಆಗಿತ್ತು. ಪ್ರತಿ ವಿಷಯದ ವಿಭಾಗಕ್ಕೂ ಪ್ರತ್ಯೇಕ ಉಪನ್ಯಾಸ ಸಭಾಂಗಣ ಎಂದು ಒಂದು ಸ್ಥಳವನ್ನು ಮೀಸಲಿಡಲಾಗಿತ್ತು. ಶಿಕ್ಷಣ ಸಂಸ್ಥೆಯ ಅಂಗಳದೊಳಗೆಯೇ ಅಧ್ಯಾಪಕರು ತಂಗುತ್ತಿದ್ದರು. ಪ್ರಾಧ್ಯಾಪಕರಾಗಿ ನೇಮಕ ಮಾಡಲ್ಪಟ್ಟವರಿಗೆ ಪ್ರತ್ಯೇಕ ತರಬೇತಿ ಪದ್ಧತಿಯನ್ನೂ, ಪರೀಕ್ಷೆಯನ್ನೂ ನಡೆಸುತ್ತಿದ್ದರು. ನಲಂದಾದಲ್ಲಿ 300 ಕೊಠಡಿಗಳೂ, ಏಳು ಪ್ರತ್ಯೇಕ ಅಂಗಳಗಳೂ ಇದ್ದವು. 

ವಿಶ್ವವಿದ್ಯಾಲಯಗಳನ್ನು ನಡೆಸಲು ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿ ಮಾಡುತ್ತಿರಲಿಲ್ಲ. ಸಮೀಪದಲ್ಲಿರುವ 20 ಹಳ್ಳಿಗಳಿಂದ ವಸೂಲಿ ಮಾಡುವ ತೆರಿಗೆಯಿಂದ ವಿಶ್ವವಿದ್ಯಾಲಯವನ್ನು ನಿರ್ವಹಿಸಲಾಗುತ್ತಿತ್ತು. ಶಿಕ್ಷಣ ಸಂಸ್ಥೆಯೊಳಗೆ ದೊಡ್ಡ ಗ್ರಂಥಾಲಯವೂ ಇತ್ತು. ಕ್ರಿ.ಪೂ. 1037ರಲ್ಲಿ ನಡೆದ ಆಕ್ರಮಣದಲ್ಲಿ ನಲಂದಾ ವಿಶ್ವವಿದ್ಯಾಲಯವನ್ನು ದಹಿಸಲಾಯಿತು. 

ಕಾಂಚೀಪುರದಲ್ಲೂ ನಾಗಪಟ್ಟಿನದಲ್ಲೂ ಈ ರೀತಿಯಾದ ದೊಡ್ಡ ಬೌದ್ಧ ವಿಶ್ವ ವಿದ್ಯಾಲಯಗಳು ಇದ್ದವು. ಅವುಗಳ ಬಗ್ಗೆ ಯುವಾನ್ ಸುವಾಂಗ್ (Yuvan Suvang) ತನ್ನ ಟಿಪ್ಪಣಿಯಲ್ಲಿ ದಾಖಲೆ ಮಾಡಿದ್ದಾನೆ. 

ಅದೇ ಸಮಯದಲ್ಲಿ, ಇಂಗ್ಲೆಂಡಿನ ಶಿಕ್ಷಣ ಇತಿಹಾಸವನ್ನು ತೆಗೆದು ನೋಡಿದರೆ, 16ನೇಯ ಶತಮಾನದವರೆಗೆ ಅಲ್ಲಿ ಶಿಕ್ಷಣಕ್ಕೆ ಹೆಚ್ಚಾಗಿ ಪ್ರಾಮುಖ್ಯತೆ ನೀಡಿರಲಿಲ್ಲ. ಆಕ್ಸ್ಫೋರ್ಡ್, ಕೇಂಬ್ರಿಡ್ಜ್ ಮುಂತಾದ ವಿಶ್ವ ವಿದ್ಯಾಲಯಗಳೆಲ್ಲಾ 11ನೇಯ ಶತಮಾನದಲ್ಲಿ ಪ್ರಾರಂಭವಾಗಿದ್ದರೂ, ಅವು ದೊಡ್ಡ ಶಿಕ್ಷಣ ಸಂಸ್ಥೆಗಳಾಗಿ ಬೆಳದಿರಲಿಲ್ಲ. 1546ರಲ್ಲಿ ಆಕ್ಸ್ಫೋರ್ಡ್ನಲ್ಲಿ ಕೆಲಸ ಮಾಡಿದವರು ಐದು ಪ್ರಾಧ್ಯಾಪಕರುಗಳು. ಅವರಿಗೆ ನೆರವಾಗಿ ಕೆಲವು ತರಬೇತಿ ಪಡೆಯುವ ಅಧ್ಯಾಪಕರು ಇದ್ದರು. 1805ರಲ್ಲಿ ಹೊಸ ಪಠ್ಯ ವಿಭಾಗಗಳಾಗಿ ವೈದ್ಯಕೀಯ, ಉನ್ನತ ವಿಜ್ಞಾನ ಪರಿಚಯಿಸಲಾಯಿತು. ಆಕ್ಸ್ಫೋರ್ಡ್ ವಿಶ್ವ ವಿದ್ಯಾಲಯ ಬೆಳೆಯಲು ಮುಖ್ಯವಾದ ಕಾರಣ ಕೆಲವು ವ್ಯಕ್ತಿಗಳು ನೀಡಿದ ದೇಣಿಗೆಗಳು ಮತ್ತು ದತ್ತಿ ಸಂಸ್ಥೆಗಳು ನೀಡಿದ ಭೂಮಿ, ಧನ ಸಹಾಯಗಳು! 

ಇಂಗ್ಲೆಂಡಿನಲ್ಲಿ 1780ರಲ್ಲಿ ಭಾನುವಾರದ ತರಗತಿಗಳು ಎಂಬ ಹೊಸ ಪದ್ಧತಿ ಪ್ರಾರಂಭಗೊಂಡಿತು. 1802ರ ನಂತರವೇ, ಪ್ರಾರಂಭಿಕ ಶಿಕ್ಷಣದ ಬಗ್ಗೆ ವಿಶೇಷ ಗಮನ ಹರಿಸಲಾಯಿತು. ಆದರೂ ಗಣಿತ, ಭೂಗೋಳ ಶಾಸ್ತ್ರ ಮತ್ತು ಸಾಹಿತ್ಯದ ಹೊರತಾಗಿ ಬೇರೆಯ ಕ್ಷೇತ್ರಗಳಲ್ಲಿ ಅದು ಆಸಕ್ತಿ ತೋರಲಿಲ್ಲ. ಇಂಗ್ಲಿಷ್ ಶಾಲೆಗಳಲ್ಲಿ ಪ್ರಮುಖವಾಗಿ ಲ್ಯಾಟಿನ್ ಮತ್ತು ಗಣಿತವನ್ನು ಮಾತ್ರವೇ ಕಲಿಸಲಾಗುತ್ತಿತ್ತು. ಅದರಲ್ಲಿ 20ಕ್ಕೂ ಕಡಿಮೆ ವಿದ್ಯಾರ್ಥಿಗಳೇ ಇರುತ್ತಿದ್ದರು. 

1812ರಲ್ಲಿ ಭಾರತದಲ್ಲಿ ಕೆಲಸ ಮಾಡಿದ ಕ್ರೈಸ್ತ ಮಿಷನರಿಗೆ ಸೇರಿದ ಹಾವಲ್ (Howell) ಇಂಗ್ಲೆಂಡಿಗೆ ಮರಳಿ ತನ್ನ ಸ್ವಂತ ಹಳ್ಳಿಯಲ್ಲಿ, ಭಾರತದಲ್ಲಿ ಇರುವಂತೆ ಬಡಬಗ್ಗರಿಗೆ ಶಿಕ್ಷಣ ನೀಡಬೇಕೆಂದು ಪ್ರಚಾರ ಮಾಡಿದಾಗ ಪ್ರಭುಗಳ ಮಕ್ಕಳಿಗೆ ನೀಡುವ ಶಿಕ್ಷಣವನ್ನು ಹೇಗೆ ಬಡವರಿಗೆ ನೀಡಲು ಸಾಧ್ಯ ಎಂದು ಮತ ಸಭೆ ಅವರ ಮೇಲೆ ಕ್ರಮ ತೆಗೆದುಕೊಂಡಿತು. ಎಲ್ಲರಿಗೂ ವಿದ್ಯೆ ಎಂಬುದು ಇಂಗ್ಲೆಂಡಿಗೆ ಮೊದಲೇ ಭಾರತದಲ್ಲಿ ಚಾಲನೆಯಲ್ಲಿತ್ತು ಎಂಬುದು ಐತಿಹಾಸಿಕ ಸತ್ಯ. 

ಆದರೆ ಭಾರತದಲ್ಲಿ ಇದ್ದ ಜಾತಿ ಕಟ್ಟುಪಾಡು, ಶಿಕ್ಷಣದಲ್ಲಿ ಶೂದ್ರರನ್ನು ದೂರವಿಟ್ಟದ್ದು. ಸ್ತ್ರೀ ಶಿಕ್ಷಣವನ್ನು ಸಂಪೂರ್ಣವಾಗಿ ನಿರಾಕರಿಸಿದ್ದು ಮುಂತಾದುವನ್ನು ಅಲ್ಲಗೆಳೆಯಲಾಗುವುದಿಲ್ಲ. ಎಲ್ಲರಿಗೂ ಶಿಕ್ಷಣ ದೊರಕಬೇಕೆಂಬ ದನಿ ನ್ಯಾಯವಾದದ್ದು. ಯಾವ ಶಿಕ್ಷಣ ಎಂಬುದು ಸಮಸ್ಯೆ, 

ರಾಜನಾಗಲು, ಮಂತ್ರಿಯಾಗಲು ಶಿಕ್ಷಣದ ಅರ್ಹತೆ ಅಗತ್ಯವಿಲ್ಲ. ಆದರೆ, ಸಾಮಾನ್ಯ ಮನುಷ್ಯ ಆರ್ಥಿಕ ರೀತಿಯಲ್ಲಿ ಅನುಕೂಲವಾಗಿಲ್ಲದಿರುವಾಗ ವಿದ್ಯೆ ಮಾತ್ರವೇ ತನಗೆ ಏಳಿಗೆ ನೀಡುತ್ತದೆ ಎಂಬುದನ್ನು ಅರಿತು ಕೊಳ್ಳುತ್ತಾನೆ. ವಿದ್ಯೆಯನ್ನು ಬಯಸಿ ಹೋಗುತ್ತಾನೆ. ಅದೇ ಈ ವಿದ್ಯೆಯ ಕೇಂದ್ರ ಬಿಂದು. 

ಇಂಗ್ಲಿಷ್ ಶಿಕ್ಷಣ ರಚನೆಯಾಗುವ ಹಲವು ವರ್ಷಗಳ ಹಿಂದೆಯೇ, ಭಾರತದಲ್ಲಿ ತರಗತಿಯ ಕೊಠಡಿ, ಪಠ್ಯ ವಿಭಾಗ, ಪಾಠದ ಸಮಯ, ಕಲಿಸಲು ವಿಶೇಷ ಅಧ್ಯಾಪಕರು, ವಸತಿ ಸಹಿತ ವಿದ್ಯಾಭ್ಯಾಸ ಪದ್ಧತಿ ಎಂದು ಎಲ್ಲವೂ ಇದ್ದವು. ಹೆಚ್ಚಾಗಿ ಪ್ರಕೃತಿಯೊಂದಿಗೆ ಕಲೆತು ವಿದ್ಯೆ ಕಲಿಯ ಬೇಕೆಂಬುದಕ್ಕಾಗಿ ಬೆಟ್ಟದ ಮೇಲೆಯೋ, ಕಾಡಿನ ಶಾಂತವಾದ ಭಾಗದಲ್ಲೋ ಕೆಲವು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಲಾಯಿತು. ವಿದ್ಯೆಯೊಂದಿಗೆ ಶಿಸ್ತು, ಜೀವನ ಪಾಠಗಳನ್ನು ಸೇರಿಸಿಯೇ ಭೋಧಿಸಲಾಯಿತು. ಅಧ್ಯಾಪಕ – ವಿದ್ಯಾರ್ಥಿ ಎಂಬ ಸಂಬಂಧ ತಂದೆ–ಮಗನ ಸಂಬಂಧದಂತೆ ಆಪ್ತವಾಗಿಯೇ ಇತ್ತು. 

1000 ವರ್ಷಗಳ ಹಿಂದೆಯೇ, ಮದುರೈಯ ಸುತ್ತ ಇರುವ ಎಂಟು ಬೆಟ್ಟಗಳಲ್ಲಿ ಜೈನರು ಗುಹೆ ಶಾಲೆಗಳನ್ನು ನಡೆಸಿ, ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿದರು. ತಮಿಳಿನಲ್ಲಿ ‘ಪಳ್ಳಿ’ ಎಂಬ ಪದವನ್ನು ಜೈನರು ನೀಡಿದ್ದು. ಬೆಟ್ಟದ ಗುಹೆಗಳಲ್ಲಿ ಕಲ್ಲಿಂದ ಮಾಡಿದ ಆಸನಗಳನ್ನು ನಿರ್ಮಿಸಿ, ಆಲ್ಲಿಯೇ ಪಾಠ ಕಲಿತು, ಅಡುಗೆ ಮಾಡಿ ಅದೇ ಜಾಗದಲ್ಲಿ ನಿದ್ರಿಸುತ್ತಿದ್ದರು. ವಸತಿ ಸಹಿತ ಶಾಲೆ ಎಂಬ ಪದ್ಧತಿಯನ್ನು ಅವರು ಸೃಷ್ಟಿಸಿದರು. ಅದಕ್ಕೆ ಇಂದಿಗೂ ಅಡಿಗೆ ಮನೆಯನ್ನು ‘ಮಡಪ್ಪಳ್ಳಿ’ (ಪಾಕಶಾಲೆ) ಎಂದೂ, ಮಲಗುವ ಕೋಣೆಯನ್ನು ‘ಪಳ್ಳಿ ಅರೈ’ ಎಂದೂ ತಮಿಳಿನಲ್ಲಿ ಕರೆಯಲಾಗುತ್ತದೆ. ಅವು, ಒಂದು ಕಾಲದಲ್ಲಿ ಜೈನ ಶಾಲೆಗಳ ಭಾಗವಾಗಿ ಇದ್ದುದರ ನೆನಪೇ ಇದಕ್ಕೆ ಕಾರಣ. 

ಇಂತಹ ಭಾರತದಲ್ಲಿ ಅಸಲಿ ಶಿಕ್ಷಣವನ್ನು ಅಳಿಸಿ, ಅದರ ಮೇಲೆ ಕಟ್ಟಲ್ಪಟ್ಟದ್ದೇ ಇಂದು ನಾವು ಕಲಿಯುವ ಇಂಗ್ಲಿಷ್ ವಿದ್ಯಾಭ್ಯಾಸ. ಸೆರೆಮನೆಯಂತಹ ಆಕಾರದಲ್ಲಿ ತರಗತಿಯ ಕೊಠಡಿಗಳನ್ನು ಬ್ರಿಟೀಷರು ರೂಪಿಸಿದರು. ಓದದ ವಿದ್ಯಾರ್ಥಿಯನ್ನು ಬೆತ್ತದಿಂದ ಹೊಡೆಯಬೇಕೆಂಬುದು ಐರೋಪ್ಯದಿಂದ ನಮಗೆ ಪರಿಚಯವಾಯಿತು. 

ವಿದ್ಯಾರ್ಥಿಯ ಬರವಣಿಗೆಯ ಸಾಮಾರ್ಥ್ಯವನ್ನು ಮಾತ್ರವೇ ಪರಿಗಣಿಸಿ ಪರೀಕ್ಷೆ ಮಾಡುವುದಕ್ಕಿಂತಲೂ, ಅವನ ಮಾತು, ಬರವಣಿಗೆ, ವಿಶೇಷ ಸಾಮರ್ಥ್ಯಗಳ ಮೂರು ಕ್ಷೇತ್ರಗಳಲ್ಲಿ ಪರೀಕ್ಷೆ ನಡೆಸಿ ಅವನ ಬುದ್ಧಿಯನ್ನು ತೀಕ್ಷ್ಣಗೊಳಿಸಿದ್ದು ಭಾರತೀಯ ಶಿಕ್ಷಣ ಪದ್ಧತಿ. 

1931ರ ವೃತ್ತ ಮೇಜಿನ ಸಮ್ಮೇಳನದಲ್ಲಿ, ‘ಭಾರತದ ಸಾವಿರ ವರ್ಷಗಳ ಕಾಲದ ಭಾರತೀಯ ಶಿಕ್ಷಣ ಪದ್ಧತಿಯನ್ನು ಅಳಿಸಿ, ಹೊಸ ಶಿಕ್ಷಣ ಪದ್ಧತಿಯನ್ನು ತಂದಿರುವುದರಿಂದ, ಮೊದಲಿಗಿಂತ ಹೆಚ್ಚಾಗಿ ವಿದ್ಯೆಯ ಜ್ಞಾನವಿಲ್ಲದವರು ಸೃಷ್ಟಿಯಾಗುತ್ತಿದ್ದಾರೆ’ ಎಂದು ಆತಂಕದಿಂದ ಮಾತನಾಡಿದರು ಗಾಂಧಿ. ಅದಕ್ಕೆ ಕಟುವಾದ ಆಕ್ಷೇಪಣೆಗಳು ಎದ್ದವು. ಆದರೆ, ಅವರ ಆತಂಗ ನ್ಯಾಯವಾದದ್ದು ಎಂಬುದನ್ನು ಇಂದಿನ ಶಿಕ್ಷಣ ನೀತಿ ತೋರಿಸುತ್ತಿದೆ. 

ಮೆಕಾಲೆ ಶಿಕ್ಷಣ ಪದ್ಧತಿ ಬರುವ ಮೊದಲು, ಪಾಠಶಾಲೆ, ಮದರಸಾ, ಗುರುಕುಲ ಎಂಬ ಮೂರು ಬಗೆಯ ಮೂಲ ಶಿಕ್ಷಣ ಸಂಸ್ಥೆಗಳು ಭಾರತದಲ್ಲಿ ಕಾರ್ಯಾಚರಣೆಯಲ್ಲಿ ಇದ್ದವು. ಭಾರತದಲ್ಲಿ ಜಾತಿ ಕಟ್ಟುನಿಟ್ಟಿನಿಂದ ಕೆಳಮಟ್ಟದ ಜನಗಳಿಗೆ ಶಿಕ್ಷಣ ದೊರಕದೆ ಹೋದದ್ದನ್ನು ತಮಗೆ ಸಾಧಕವಾಗಿ ಬಳಸಿಕೊಂಡ ಬ್ರಿಟೀಷ್ ಸರಕಾರ, ಮೇಲ್ವರ್ಗದವರೊಂದಿಗೆ ಸಮಾನವಾಗಿ ಇರಬೇಕೆಂದರೆ… ಅದಕ್ಕೆ ಇಂಗ್ಲಿಷ್ ವಿದ್ಯಾಭ್ಯಾಸ ಅಗತ್ಯ ಎಂಬ ವಾದವನ್ನು ಮುಂದಿಟ್ಟಿತು. ಅದನ್ನು ಅಂದಿನ ಹಿಂದುಳಿದ ಸಮಾಜ ನಿಜವೆಂದು ನಂಬಿ ಒಪ್ಪಿಕೊಂಡಿತು. 

ಆದರೆ ದೆವ್ವದಿಂದ ತಪ್ಪಿಸಿಕೊಂಡು ಪಿಶಾಚಿಯ ಕೈಗೆ ಸಿಕ್ಕಿಕೊಂಡ ಕತೆಯಂತೆ, ಇಂಗ್ಲಿಷ್ ಶಿಕ್ಷಣ ಬಂದದ್ದರಿಂದ ಉಂಟಾದ ಬೆಳವಣಿಗೆ ಒಂದು ಕಡೆಯಾದರೆ, ನವೀನ ಅಸ್ಪೃಶ್ಯತೆಯಾಗಿ ರೈತರನ್ನೂ, ಕಾರ್ಮಿಕರನ್ನೂ ಅಸ್ಪೃಶ್ಯರಂತೆ ಇಂಗ್ಲಿಷ್ ಕಲಿತವರು ನಡೆಸುವುದು ಮತ್ತೊಂದು ಕಡೆ ಉಂಟಾಯಿತು. 

ಆಂಗ್ಲ ವಿದ್ಯಾಭ್ಯಾಸದಿಂದ ಉಂಟಾದ ಒಳಿತುಗಳನ್ನು ನಾವು ನಿರಾಕರಿಸಲಾಗದು. ಆದರೂ ಅದು ಸೃಷ್ಟಿಸಿದ ಇಂಗ್ಲಿಷ್ ಮೋಹ ನಮ್ಮನ್ನು ಕುಣಿಸುತ್ತಿದೆ. ತಮಿಳಿನಲ್ಲಿ ಕಾಲೇಜು ಕಲಿತವರನ್ನೂ ಸಹ ಕೀಳಾಗಿ ನಡೆಸಿಕೊಳ್ಳುವಾಗ, ಇಂಗ್ಲಿಷ್ ಮಾತನಾಡಲು ಬರದೇ ಇರುವುದರಿಂದ ಪಾಪಪ್ರಜ್ಞೆ ಉಂಟಾಗುವುದೂ, ಸರಳವಾದ ಅರ್ಜಿಗಳನ್ನೂ ಸಹ ಇಂಗ್ಲಿಷಿನಲ್ಲಿಯೇ ಮುದ್ರಿಸುವ ಸ್ಥಿತಿ ನಿರ್ಮಾಣವಾದದ್ದೂ ಇಂಗ್ಲಿಷ್ ಮೇಲಿನ ಅತಿ ಮೋಹವಲ್ಲದೆ ಮತ್ತಿನ್ನೇನು! 

ಅಶೋಕ ಬದುಕಿದ್ದ, ಅಕ್ಬರ್ ಒಟ್ಟು ಭಾರತವನ್ನೇ ರಾಜ್ಯವಾಳಿದ, ರಾಜೇಂದ್ರ ಚೋಳ ಚೋಳ ಸಾಮ್ರಾಜ್ಯವನ್ನೇ ಕಟ್ಟಿದ ಎಂದೆಲ್ಲಾ ಇತಿಹಾಸದಲ್ಲಿ ಓದುತ್ತೇವೆ. ಅವರು ಯಾವ ಭಾಷೆಯಲ್ಲಿ ಮಾತನಾಡಿದರು? ಮಾತೃಭಾಷೆಯಲ್ಲಲ್ಲದೆ ಪರಕೀಯ ಭಾಷೆಯನ್ನು ಮಾತನಾಡಿಯೇ ಆಡಳಿತ ಮಾಡಿದರು? ಆ ಸತ್ಯವನ್ನು ನಾವು ಯಾಕೆ ಇತಿಹಾಸದಿಂದ ಕಲಿಯಲು ಮರೆತೆವು! 

ಎಲ್ಲಾ ಭಾಷೆಯಂತೆ ಇಂಗ್ಲಿಷ್ ಸಹ ಬಳಕೆಗೆ ಇರುವ ಒಂದು ಭಾಷೆ. ಅವಶ್ಯಕತೆ ಇರುವವರು ಅದನ್ನು ಒಪ್ಪಿಕೊಳ್ಳಲಿ. ಉತ್ತಮವಾಗಿ ಬಳಸಿಕೊಳ್ಳಲಿ. ಬದುಕನ್ನು ಸಮೃದ್ಧಿಗೊಳಿಸಿಕೊಳ್ಳಲಿ. ಆದರೇ, ಒಂದು ಭಾಷೆ ತನ್ನ ಅಧಿಕಾರದಿಂದ ಮತ್ತೊಂದು ಭಾಷೆಯನ್ನು ಅಳಿಸಿ ನಾಶಮಾಡುವುದನ್ನು ಜನ ಮೌನವಾಗಿ ನೋಡಿಕೊಂಡು ಇರುವುದು ವ್ಯಥೆ ತರುವಂತಹದ್ದು.

| ಇನ್ನು ನಾಳೆಗೆ |

‍ಲೇಖಕರು Admin

August 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: