ಕೆ ನಲ್ಲತಂಬಿ ಅನುವಾದ ಸರಣಿ- ಭ್ರಷ್ಟಾಚಾರದ ನಾಯಕ ಕ್ಲೈವ್!

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

11

ಭಾರತದ ಇತಿಹಾಸದಲ್ಲಿ ಎಲ್ಲಕ್ಕೂ ಉದಾಹರಣೆಗಳಿವೆ. ಮಾಧ್ಯಮಗಳಲ್ಲಿ ಇಂದು ವಿಸ್ತಾರವಾಗಿ ಮಾತನಾಡುವ ಭ್ರಷ್ಟಾಚಾರದ ದೂರುಗಳು ಹೊಸದಾಗಿ ಹುಟ್ಟುಕೊಂಡವಲ್ಲ. ಅದಕ್ಕೆ ಹಲವು ಮಾದರಿಗಳಿದ್ದರು. ಅವರಲ್ಲಿ ಇಬ್ಬರು ಪ್ರತ್ಯೇಕವಾಗಿ ಉಲ್ಲೇಖಿಸಬೇಕಾದವರು. ಒಬ್ಬ ಈಸ್ಟ್ ಇಂಡಿಯಾ ಕಂಪನಿಯನ್ನು ಭಾರತದಲ್ಲಿ ಬೇರೂರುವಂತೆ ಮಾಡಿದ ನಾಯಕ ಎಂದು ಕೊಂಡಾಡಲ್ಪಟ್ಟ ರಾಬರ್ಟ್ ಕ್ಲೈವ್ (Robert Clive). 

ಮತ್ತೊಬ್ಬ, ಕ್ಲೈವ್-ನ ಸಮಕಾಲೀನನಾದ ಪುದುಚೇರಿಯನ್ನು ಆಳಿದ ದುಯಿಪ್ಲೆಕ್ಸ್ –ನ ಹೆಂಡತಿ ಳಾನ್. Joseph-François Dupleix – Jeanne Albert) ತನ್ನ ಗಂಡನಿಗೆ ಸಾಟಿಯಾಗಿ ಅಧಿಕಾರವನ್ನು ಬಳಸಿಕೊಂಡು ಹಣವನ್ನು ದೋಚಿದವಳು. ಲಂಚ ಪಡೆಯುವುದರಲ್ಲಿ ಗಂಡು-ಹೆಣ್ಣು ಎಂಬ ಭೇದ ಇದೆಯೇನು? ದುರಾಸೆ ಎಂಬುದು ಇಬ್ಬರಿಗೂ ಸಹಜವಾದ ಗುಣವಲ್ಲವೇ? 

ಅಧಿಕಾರವನ್ನು ಬಳಸಿಕೊಂಡು ಬಹಳ ಹಣ ದೋಚಿದಳೆಂದು ದೂರು ಬಂದಿತು. ಅದಕ್ಕಾಗಿ ವಿಚಾರಣೆಗಳೂ ನಡೆಯಿತು. ಭಾರತೀಯರ ಹಣವನ್ನು ದೋಚಿ ಬದುಕಿದವಳು ಎಂದು ದುಯಿಪ್ಲೆಕ್ಸ್–ನ ಹೆಂಡತಿ ಳಾನ್ ಮೇಲೆ ಬಹಿರಂಗವಾಗಿಯೇ ಅನಂತರಂಗಂ ಪಿಳ್ಳೈ ತನ್ನ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ. ಇತಿಹಾಸದಲ್ಲಿ ಅಳಿಸಲಾಗದ ಕಲೆಯಾಗಿ ಉಳಿದುಹೋಯಿತು ಇವರಿಬ್ಬರ ಬದುಕು. ಇವರ ಬದುಕನ್ನು ಒಮ್ಮೆ ತಿರುಗಿನೋಡಿದರೆ, ಭಾರತ ಹೇಗೆ ಕೊಳ್ಳೆ ಹೊಡೆಯಲಾಗಿದೆ ಎಂಬುದನ್ನು ಸುಲಭವಾಗಿ ಅರಿತುಕೊಳ್ಳಬಹುದು. 

ರಾಬರ್ಟ್ ಕ್ಲೈವ್, 1774-ನೇ ಇಸವಿಯಲ್ಲಿ ತನ್ನ 49ನೇಯ ವಯಸ್ಸಿನಲ್ಲಿ ಇಂಗ್ಲೆಂಡಿನಲ್ಲಿ ತನ್ನ ಫಾರಂ ಹೌಸಿನಲ್ಲಿ ಕತ್ತನ್ನು ಕುಯ್ದುಕೊಂಡು ರಕ್ತ ಸೋರುತ್ತ ಆತ್ಮಹತ್ಯೆ ಮಾಡಿಕೊಂಡ.  ತೀವ್ರವಾದ ಮನಕ್ಲೇಶಕ್ಕೂ, ಗುಲ್ಮ (Gall Bladder) ಸರಿಯಾಗಿ ಕೆಲಸ ಮಾಡದೆಯೂ ಅವಸ್ಥೆಗೊಳಗಾದ ರಾಬರ್ಟ್ ಕ್ಲೈವ್, ನಿದ್ರೆ ಮಾಡುವುದಕ್ಕಾಗಿ ದಿನವೂ ಮತ್ತಿನ ಸೂಜಿ  ಹಾಕಿಕೊಳ್ಳುತ್ತಿದ್ದ. ಅದು ನರ ಬಲಹೀನತೆಯನ್ನು ಹೆಚ್ಚಾಗಿಸಿತು. ಅವನಿಂದ ಮಾತನಾಡಲಾಗಲಿಲ್ಲ. ನೋವು, ವ್ಯಥೆ, ಮಿತಿಮೀರಿದ ಕೋಪವನ್ನುಂಟುಮಾಡಿತು. ತನ್ನನ್ನು ಕೊಂದು ಬಿಡಿ ಎಂದು  ದಿನವೂ ಅತ್ತು ಗೋಳಾಡುತ್ತಿದ್ದ. 

17ನೇಯ ವಯಸ್ಸಿನಲ್ಲಿ ಭಾರತಕ್ಕೆ ಕೇವಲ ಗುಮಾಸ್ತನಾಗಿ ಕೆಲಸಕ್ಕೆ ಬಂದವನು, ಮೂವತ್ತು ವಯಸ್ಸಿನೊಳಗೆ ಈಸ್ಟ್ ಇಂಡಿಯಾ ಕಂಪನಿಯಲ್ಲಿ ದೊಡ್ಡ ಪದವಿಯನ್ನು ವಹಿಸಿ ಲಕ್ಷಗಟ್ಟಲೇ ಹಣವನ್ನೂ, ವಜ್ರಗಳನ್ನೂ ಭಾರತದಿಂದ ಕೊಳ್ಳೆಹೊಡೆದವನು, ನಂತರ ಇಂಗ್ಲೆಂಡಿನ ಪಾರ್ಲಿಮೆಂಟಿನ ಸದಸ್ಯನಾಗಿ ಹೆಸರು ಗಳಿಸಿದನು. ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಮೋಸ ಮಾಡಿದನು ಎಂದು ಅಪರಾಧ ಹೊರಿಸಿ, ಕ್ಲೈವನ್ನು ವಿಚಾರಿಸಲಾಯಿತು. ಮತ್ತೆ ಪದವಿಯನ್ನು ಪಡೆದುಕೊಂಡ ಕ್ಲೈವ್–ನ ಬದುಕು ಎಲ್ಲರ ಅಲಕ್ಷ್ಯಕ್ಕೆ ಒಳಗಾಗಿ, ಒಬ್ಬ ಅನಾಥನ ಬದುಕಿನಂತೆ ಕೊನೆಯಾಯಿತು. 

ಭಾರತವನ್ನು ಕೊಳ್ಳೆ ಹೊಡೆದ ದ್ರೋಹಕ್ಕೆ ಬೆಲೆ ತೆತ್ತಂತೆ, ಕ್ಲೈವ್ ತನ್ನ ಸಾವನ್ನು ತಾನೇ ಹುಡುಕಿಕೊಂಡ. ಹಾಗೆಯೇ ನಡೆಯುತ್ತದೆ ಎನ್ನುತ್ತದೆ ನೀತಿ ಧರ್ಮ. 

ಅದರಂತೆಯೇ, ಪುದುಚೇರಿಯ ಗವರ್ನರ್ ಆಗಿದ್ದ ತನ್ನ ಗಂಡನ ಪದವಿಯನ್ನು ದುರುಪಯೋಗ ಮಾಡಿಕೊಂಡು ಊರನ್ನೇ ಕೊಳ್ಳೆಹೊಡೆದಳು ಮೇಡಮ್ ದುಯಿಪ್ಲೆಕ್ಸ್. ಅಂದಿನ ಫ್ರಾನ್ಸ್ ಆಡಳಿತದಲ್ಲಿ ಮುಖ್ಯ ಪದವಿ ಎಲ್ಲವನ್ನೂ ಬಹಿರಂಗವಾಗಿಯೇ ಲಂಚ ಕೊಟ್ಟು ಕೊಂಡುಕೊಳ್ಳಲಾಯಿತು. ದುಯಿಪ್ಲೆಕ್ಸ್ ಹೆಂಡತಿ ಳಾನ್, ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದ್ದಳು. ಗಂಡ ಹಡಗಿನ ವ್ಯಾಪಾರದಲ್ಲಿ ಸಂಪಾದಿಸಿದ ಹಣಕ್ಕಿಂತಲೂ ಹೆಚ್ಚಾಗಿ ಳಾನ್ ಲಂಚ ಪಡೆದು ಶೇಕರಿಸಿದಳು ಎನ್ನುತ್ತದೆ ಇತಿಹಾಸ. ದುಯಿಪ್ಲೆಕ್ಸ್ ಮೇಲೆ ವಂಚನೆಯ ಅಪರಾಧ ಹೊರಿಸಿ ಕೈದಿಯಾಗಿ ವಿಚಾರಣೆಗಾಗಿ ಫ್ರಾನ್ಸ್–ಗೆ ಕಳುಹಿಸಲಾಯಿತು. ಅವನೊಂದಿಗೆ ಳಾನ್ ಸಹ ಫ್ರಾನ್ಸ್-ಗೆ ಹೋದಳು. 

ಅಲ್ಲಿ ಪದವಿಯನ್ನು ಕಳೆದುಕೊಂಡು ಬಡತನ, ಖಾಯಿಲೆಯೂ ಸೇರಿ ತನ್ನ ಗತ ಕಾಲದ ನೆನಪುಗಳಲ್ಲಿ ಮುಳುಗಿ ಹೋದ ಳಾನ್, ಹೇಗಾದರೂ ಪುದುಚೇರಿಗೆ ಮರಳಬೇಕೆಂಬ ತನ್ನ ಕೊನೆಯ ಆಸೆ ನೆರವೇರದೆ ನಿಧನ ಹೊಂದಿದಳು. ಹನ್ನೆರಡು ಮಕ್ಕಳ ತಾಯಿಯಾದ ಳಾನ್, ಪುದುಚೇರಿಯ ಇತಿಹಾಸದಲ್ಲೇ ಹೆಚ್ಚಿನ ಲಂಚ ಪಡೆದುಕೊಂಡ ಮೊದಲ ಮಹಿಳೆ ಎಂಬ ಕಳಂಕದೊಂದಿಗೆ ಚರಿತ್ರೆಯ ಪುಟಗಳಲ್ಲಿ ಸ್ಥಾನಗಳಿಸಿದಳು. ಳಾನ್ ಬಗ್ಗೆ ತಮಿಳು ಲೇಖಕರಾದ ‘ಪ್ರಪಂಚನ್’ ಬಹಳ ಅಧ್ಯಯನ ಮಾಡಿ ಸೂಕ್ಷ್ಮವಾದ ಪ್ರಬಂಧ ಒಂದನ್ನು ಬರೆದಿದ್ದಾರೆ. ಅದರಲ್ಲಿ ಒಂದು ಪ್ರಮುಖವಾದ ಮಾಹಿತಿ ಇದೆ.

ಪುದುಚೇರಿಯ ಆಸ್ಥಾನಿಕರಾಗಿ (Courtier), ಬಹಳ ಪ್ರಮುಖವಾದ ಸರಕಾರಿ ಜವಬ್ಧಾರಿಯಲ್ಲಿದ್ದ ಕನಕರಾಯ ಮುದಲಿ, ಮರಣ ಹೊಂದುತ್ತಾರೆ. ಮೊದಲೇ ಸಹಾಯಕ ಆಸ್ಥಾನಿಕರಾಗಿಯೂ ದುಭಾಷಿಯಾಗಿಯೂ ಇದ್ದ ಆನಂದರಂಗಮ್ ಪಿಳ್ಳೈಗೆ ಆ ಪದವಿ ದೊರಕುತ್ತದೆ ಎಂದೇ ಸರಕಾರಿ ವಲಯಗಳಲ್ಲಿ ಮಾತಿತ್ತು. ಆ ನಡುವೆ, ಅನ್ನಪೂರ್ಣ ಐಯರ್ ಎಂಬ ವೈದ್ಯರು, ಳಾನನ್ನು ಬೇಟಿಯಾಗುತ್ತಾರೆ. ಅವಳಿಗೆ 1500 ವರಾಹಗಳನ್ನೂ (ಒಂದು ವರಾಹ 3 ರೂಪಾಯಿ) ಗವರ್ನರಿಗೆ 5000 ವರಾಹಗಳನ್ನೂ ಕೊಡುವುದಾಗಿ ಹೇಳಿ, ಆ ಪದವಿಯನ್ನು ತನಗೆ ನೀಡಬೇಕೆನ್ನುತ್ತಾರೆ. ಕನಕರಾಯರ ತಮ್ಮ ಚಿನ್ನ ಮುದಲಿಯೂ ಸಹ ಆ ಪದವಿಗೆ ಹಣ ನೀಡಲು ತಯಾರಿರುತ್ತಾರೆ. 

ಳಾನ್, ಬಹಳ ಬುದ್ಧಿವಂತಿಕೆಯಿಂದ ಯೋಚಿಸುತ್ತಾಳೆ. ಪದವಿಯ ‘ಬೆಲೆ’ಯನ್ನು ಆನಂದರಂಗಮ್ ಪಿಳ್ಳೈ ಬಳಿ ಮಾತುಕತೆ ನಡೆಸಿ ಬೆದರಿಸುತ್ತಾಳೆ ಸಹ. ಅದರ ಬಗ್ಗೆ ಆನಂದರಂಗಮ್ ಪಿಳ್ಳೈ, ‘ಕಾಸಿನ ಶಬ್ಧ ಕೇಳಿದರೆ ಮಾತ್ರ ಅಮ್ಮ ಬಾಯಿ ತೆರೆಯುತ್ತಾಳೆ’ ಎಂದು ತನ್ನ ಡೈರಿಯಲ್ಲಿ ಬರೆದಿದ್ದಾರೆ. 

ಗವರ್ನರ್ ದೊರೆ ಲಂಚ ಪಡೆಯಬಹುದು. ದೊರೆಸಾನಿ ಲಂಚ ಪಡೆಯಬಾರದೇ ಎಂಬುದು ಳಾನ್ ಪ್ರಶ್ನೆಯಾಗಿತ್ತು. ಪದವಿಯನ್ನು ದುರ್ಬಳಕೆ ಮಾಡಿಕೊಂಡು ಸ್ವಂತ ಲಾಭ ಗಳಿಸುವ ರಾಜಕೀಯ ಇಡೀ ಜಗತ್ತಿನಲ್ಲಿ ಒಂದೇ ರೀತಿ ಇತ್ತು. ಅದರಲ್ಲೂ ವಿಶೇಷವಾಗಿ, ಈಸ್ಟ್ ಇಂಡಿಯಾ ಕಂಪನಿಯಂತಹ ವಾಣಿಜ್ಯ ಸಂಸ್ಥೆಗಳ ಮೂಲಕ ಆಡಳಿತವನ್ನು ವಶಪಡಿಸಿಕೊಂಡ ಗವರ್ನರ್-ಗಳಲ್ಲಿ ಹೆಚ್ಚಿನವರು ಕಂಪನಿಯನ್ನು ಬಳಸಿಕೊಂಡು ಸಂಪತ್ತನ್ನು ಹೆಚ್ಚಿಸಿಕೊಂಡರು. ವಿಶೇಷವಾಗಿ ಭಾರತದಿಂದ ಹತ್ತಿ, ಮಸಾಲೆ ವಸ್ತುಗಳು, ಸೆಣಬು ಎಂದು ಪ್ರಮುಖವಾದ ವಾಣಿಜ್ಯ ವಸ್ತುಗಳನ್ನು ತಾವೇ ಬಿಡಿಗಾಸಿಗೆ ಕೊಂಡು ಅದನ್ನು ಕಂಪನಿಯ ಹಡಗಿನಲ್ಲಿ ವಿದೇಶಕ್ಕೆ ರಫ್ತು ಮಾಡಿದರು. ಕಂಪನಿಯ ಕಮಿಷನ್ ಕಳೆದು ಉಳಿದ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಂಡರು. 

ಹಾಗೆ, ಈಸ್ಟ್ ಇಂಡಿಯಾ ಕಂಪನಿಯ ಉನ್ನತ ಅಧಿಕಾರಿಗಳು ನಡೆದುಕೊಳ್ಳಲು ಕಾರಣ ನಿರ್ವಹಣೆಯಲ್ಲಿಯೇ ಲಂಚದ ಹೆಗ್ಗಣಗಳಿದ್ದವು. 

ಅವರು ಲಂಚ ಪಡೆದುಕೊಂಡು ಇಂತಹವನ್ನು ಕಂಡುಕೊಳ್ಳಲೇ ಇಲ್ಲ. ಅದರಂತೆಯೇ, ತಮ್ಮ ಅಧಿಕಾರದ ಪರಿದಿಯಲ್ಲಿದ್ದ ಜಮೀನುದಾರರು, ನವಾಬ್-ಗಳಿಂದ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್-ಗಳು ಪಡೆದುಕೊಂಡ ಲಂಚದ ಹಣವೂ, ಒಡೆವೆಗಳೂ, ವಜ್ರಗಳೂ ಹೇರಳ. 

ರಾಬರ್ಟ್ ಕ್ಲೈವ್ ಇಂಗ್ಲೆಂಡಿನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದವನು. ಅತ್ತೆ ಮನೆಯಲ್ಲಿ ಬಾಲ ಪರ್ವವವನ್ನು ಕಳೆದ ಕ್ಲೈವ್, ಹದಿನಾಲ್ಕನೇಯ ವಯಸ್ಸಿನಲ್ಲಿ ಮನೆಯವರ ಮಾತು ಕೇಳದೆ ಅಲೆದ. ಅಬ್ಬೇಪಾರಿಯಾಗಿ ತಿರುಗಾಡುತ್ತಿದ್ದ ಹುಡುಗರನ್ನು ಗುಂಪು ಕಟ್ಟಿಕೊಂಡು  ಟ್ರಿಡೆಂಟ್ (Trident) ಮಾರುಕಟ್ಟೆ ಪ್ರದೇಶಗಳಲ್ಲಿ ಇರುವ ಅಂಗಡಿಯವರನ್ನು ಬೆದರಿಸಿ ಮಾಮೂಲಿ ವಸೂಲಿ ಮಾಡುತ್ತಿದ್ದನು ಕ್ಲೈವ್ ಎನ್ನುತ್ತವೆ  ಇತಿಹಾಸದ ಟಿಪ್ಪಣಿಗಳು. 

ತನಗೆ ಮಾಮೂಲಿ ಕೊಡದ ಅಂಗಡಿಗಳ ಮೇಲೆ ಕೆಸರನ್ನು ಬಾಚಿ ಎಸೆಯುವುದು, ಅಂಗಡಿಯ ಗಾಜುಗಳನ್ನು ಒಡೆದು ಹಾಕುವುದು ಕ್ಲೈವ್ ಕೆಲಸವಾಗಿತ್ತು. ಎರಡು ಬಾರಿ ಶಿಕ್ಷೆಗೂ ಒಳಗಾಗಿದ್ದ. ಶಿಸ್ತಿಲ್ಲದೆ, ಯಾರಿಗೂ ಅಡಗಿ ಹೋಗದ ಹುಡುಗನನ್ನು ಸುಧಾರಣೆ ಮಾಡಲು ಅವನನ್ನು ಈಸ್ಟ್ ಇಂಡಿಯಾ ಕಂಪನಿಗೆ ಗುಮಾಸ್ತನ ಕೆಲಸಕ್ಕಾಗಿ ಅವರ ಅಪ್ಪ ರಿಚರ್ಡ್ ಕ್ಲೈವ್ ಭಾರತಕ್ಕೆ ಕಳುಹಿಸಿದರು.

1743ನೇಯ ಇಸವಿ ಮಾರ್ಚ್ 10ರಂದು  ಮೆಡ್ವೇ (Medway) ಎಂಬ ಸ್ಥಳದಿಂದ ವಿಂಚೆಸ್ಟರ್ (Winchester) ಎಂಬ ಹಾಯಿ ಹಡಗಿನಲ್ಲಿ ಕ್ಲೈವ್ ಭಾರತಕ್ಕೆ ಪ್ರಯಾಣವನ್ನು ಬೆಳೆಸಿದನು. ಕ್ಲೈವ್-ಗೆ ಆಗ 17 ವರ್ಷ ವಯಸ್ಸು. ಅವನ ವಯಸ್ಸಿನ ಹಲವಾರು ಹುಡುಗರು ಆ ಹಡಗಿನಲ್ಲಿ ಪ್ರಯಾಣ ಮಾಡಿದರು.

ಹಡಗಿನಲ್ಲಿ ಪ್ರಯಾಣ ಮಾಡುವ ದಿನಗಳಲ್ಲಿ ಆಹಾರಕ್ಕೂ, ಕ್ಷೌರಕ್ಕೂ ಅವರೇ ಖರ್ಚು ಮಾಡಬೇಕು. ಅದಕ್ಕಾಗಿ ತನ್ನ ಬಳಿ ಹಣ ಇಲ್ಲ ಎಂದು ಕ್ಲೈವ್ ಜಗಳ ಕಾದಿದ್ದ. ಅದಲ್ಲದೆ, ತನ್ನಂತಹ ಹುಡುಗರನ್ನು ಜತೆ ಸೇರಿಸಿಕೊಂಡು, ಹಡಗಿನ ನಿಯಮಗಳನ್ನು ಉಲ್ಲಂಘಿಸಿ ಕುಡಿದು ಕುಪ್ಪಳಿಸಿದ. ಅದಕ್ಕಾಗಿ ಕ್ಯಾಪ್ಟನ್- ಇಂದ ಶಿಕ್ಷೆಯನ್ನೂ ಪಡೆದ. ಲ್ಯಾಟಿನ್, ಇಂಗ್ಲೀಷ್ ಕಲಿತಿದ್ದ ಕ್ಲೈವ್, ಭಾರತದಲ್ಲಿ ದಸ್ತಾವೇಜುಗಳನ್ನು ಪರೀಕ್ಷಿಸುವ ಗುಮಾಸ್ತನ ಕೆಲಸಕ್ಕೆ ಆಯ್ಕೆ ಆಗಿದ್ದ. ಅವನ ಹಡಗು ಬ್ರೆಜಿಲ್ ದೇಶದ ರಿಯೋಡಿಜೆನಿರೋ ನಗರದಲ್ಲಿ ಕೆಲವು ತಿಂಗಳು ನಿಲ್ಲಬೇಕಾಯಿತು. ಆ ದಿನಗಳಲ್ಲಿ, ಕ್ಲೈವ್ ಪೋರ್ಚುಗೀಸ್ ಭಾಷೆಯನ್ನು ಕಲಿತುಕೊಂಡ. ಅದು, ಮದರಾಸಿನ ದಿನಗಳಲ್ಲಿ ಕೆಲಸ ಮಾಡುವಾಗ ಅವನಿಗೆ ಬಹಳ ನೆರವಾಯಿತು.

| ಇನ್ನು ನಾಳೆಗೆ |

‍ಲೇಖಕರು Admin

August 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: