ಆಕಾಶ್
ಪ್ರಿಯ ಸಹೃದಯರೆ, ಇತ್ತೀಚೆಗೆ ನಾನು ಸಚಿತ್ರವಾಗಿ ಓದಿ ಆಸ್ವಾದಿಸಿದ ಈ ಪುಸ್ತಕದ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳೋಣವೆಂದು ಈ ಲೇಖನ.
ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬುದು ಕ್ಲೀಷೆಯ ಮಾತಾಗಿರಬಹುದು. ಆದರೂ ಒಬ್ಬ ಶ್ರೇಷ್ಠ ಕಲಾಕಾರನ ಸೃಷ್ಠಿಯಲ್ಲಿ ಒಂದು ಚಿತ್ರ ಅಥವಾ ಛಾಯಾಚಿತ್ರ ನಿಜಕ್ಕೂ ಸಾವಿರ ಪದಗಳಲ್ಲಿ ಅಲ್ಲ ಒಟ್ಟಾರೆ ಪದಗಳಲ್ಲೇ ಹಿಡಿದಿಡಲು ಕಷ್ಟ ಎಂಬುದು ಉತ್ಪ್ರೇಕ್ಷೆಯ ಮಾತಲ್ಲ. ಹೀಗೆ ಚಿತ್ರಕಾರರಾಗಿ ನಂತರ ಕಪ್ಪು-ಬಿಳುಪು ಭಾವಚಿತ್ರ ಛಾಯಾಗ್ರಹಕರಾಗಿ ನಮ್ಮ ದೇಶದ ಕಲಾರತ್ನಗಳ ಹಾಗು ವಿಶಿಷ್ಟ ವ್ಯಕ್ತಿಗಳ ಅಪರೂಪದ ಪೋಟೋಗಳನ್ನು ತೆಗೆದಿರುವ ನಮ್ಮ ಹೆಮ್ಮೆಯ ಕನ್ನಡಿಗ ಶ್ರೀ ಕೆ.ಜಿ.ಸೋಮಶೇಖರ್ ಅವರ ಬದುಕಿನ ಏರಿಳಿತಗಳ ಚಿತ್ತಾಕರ್ಷಕ ಚಿತ್ರ-ಅಕ್ಷರ ರೂಪವೇ ನನ್ನ ಬದುಕು ನನ್ನ ಪೋಟೋಗ್ರಫಿ ಪುಸ್ತಕ.

ಕೆಜಿಎಸ್ ಅವರು ಹಿರೇಕೆರೂರಿನಲ್ಲಿದ್ದ ಕಂಪ್ಲೇರ ಮನೆತನದವರು. ಅವರ ಮನೆತನದ ವಿವರಗಳು, ಓದಿನಲ್ಲಿ ಅಷ್ಟೇನೂ ಚುರುಕಿರದಿದ್ದ ಅವರ ಬಾಲ್ಯ, ಹೇಗೋ ಚೆನ್ನಾಗಿ ಓದಲಿ ಎಂದು ಅವರನ್ನು ಬೆಂಗಳೂರಲ್ಲಿ ತಂದು ಬಿಡುವ ಅವರ ತಂದೆತಾಯಿಗಳು ಮುಂತಾದ ಮುಖ್ಯ ವಿವರಗಳೆಲ್ಲಾ ಸಂಕ್ಷಿಪ್ತವಾಗಿ ವೈಭವೀಕರಿಸದೇ ಈ ಪುಸ್ತಕದಲ್ಲಿ ದಾಖಲಾಗಿದೆ. ಬೆಂಗಳೂರಿನಲ್ಲಿ ಹೀಗೆ ಶುರುವಾದ ಅವರ ಬದುಕಿನ ಇನ್ನೊಂದು ಅಧ್ಯಾಯ ವಿಜಯಾ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಸೇರಿ ಅರ್ಧ ಓದುವವರೆಗೂ ಸಾಗುತ್ತದೆ. ಇವರ ಚಿತ್ರಕಲೆಯ ಬಗೆಗಿನ ಆಸಕ್ತಿ ಹಾಗು ಇನ್ನಿತರ ವಿಷಯಗಳ ಬಗೆಗಿನ ಕಷ್ಟಗಳನ್ನು ಗಮನಿಸಿದ ಗುರುಗಳಾದ ಶ್ರೀ.ಜಿ.ವೆಂಕಟಸುಬ್ಬಯ್ಯನವರ ಸಲಹೆ ಮೇರೆಗೆ ಕೊನೆಗೆ ಇವರು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಲ್ಲಿಂದ ಶುರುವಾದ ಅವರ ಪಯಣ ಶ್ರೀ ಅ.ನ.ಸುಬ್ಬರಾಯರ ಬಳಿ ಸ್ವಲ್ಪ ದಿನ ಚಿತ್ರಕಲೆ ಕಲಿಕೆ, ಮತ್ತೆ ಹಿರೇಕೆರೂರಿಗೆ ಪಯಣ, ಅಲ್ಲಿಂದ ಪೂನಾದಲ್ಲಿ “ಪೇಂಟರ್ ಮತ್ತು ಡೆಕೋರೇಟರ್” ಕೋರ್ಸ್ ಅಧ್ಯಯನ, ಮತ್ತೆ ಬೆಂಗಳೂರಿಗೆ ಪಯಣ, ಸ್ವಲ್ಪ ಕಾಲ ಹೆಚ್.ಎ.ಎಲ್. ನಲ್ಲಿ ಕೆಲಸ, ನಂತರ ಶ್ರೀಗಂಧದ ಹಾಳೆಗಳ ಮೇಲೆ ಚಿತ್ರರಚಿಸುವ ಕಲಿಕೆ ಹೀಗೆ ಸಾಗಿ ಕೊನೆಗೆ ಶ್ರೀ ಜಿ.ವೆಂಕಟಾಚಲಂ ಅವರ ಮಾರ್ಗದರ್ಶನದ ಮೇರೆಗೆ ಶ್ರೀಗಂಧಹಾಳೆಗಳ ಮೇಲೆ ಪೋರ್ ಟ್ರೇಟ್ ಚಿತ್ರ ಅರಳಿಸುವ ಕಲೆ ಕೈಗೆತ್ತುಕೊಳ್ಳುತ್ತಾರೆ. ಈ ಕಲೆಯನ್ನು ನಂಬಿ ಬೆಂಗಳೂರಿನಲ್ಲಿ ಸ್ವಲ್ಪ ಕಾಲ ದುಡಿದು ಬಾಂಬೆ ಹಾದಿಯನ್ನು ಹಿಡಿಯುತ್ತಾರೆ. ನಂತರದ ವಿವರಗಳಿಗೆ ಪುಸ್ತಕವನ್ನು ಪೂರ್ತ ಓದಿದರೇ ಸರಿ. ಏರಿಳಿತಗಳ ಮಧ್ಯೆ ಹೇಗೋ ಸಾಗುತ್ತಿದ್ದ ಅವರ ಜೀವನ ಅವರ ದೃಷ್ಠಿ ಮಂದವಾಗುವುದರೊಂದಿಗೆ ಮತ್ತೊಂದು ದಾರಿಗೆ ಹೊರಳುತ್ತದೆ, ಅದೂ ಶ್ರೀ ಚೈತನ್ಯ ಭಾಯಿ ಪಟೇಲ್ ಎಂಬ ಉದ್ಯಮಿಯೊಬ್ಬರ ಸಲಹೆಯ ಮೇರೆಗೆ ಶ್ರೀ ಸೋಮಶೇಖರ್ ಫೋಟೋಗ್ರಫಿಯನ್ನು ಶುರು ಮಾಡುತ್ತಾರೆ. ಅಲ್ಲಿಂದ ಇಲ್ಲಿಯವರೆಗೂ ಅವರ ಬದುಕು ಪೋರ್ ಟ್ರೇಟ್ ಫೋಟೋಗ್ರಫಿಯೊಂದಿಗೆ ತಳುಕು ಹಾಕಿಕೊಂಡಿದೆ.
ದಾವಣಗೆರೆಯಲ್ಲಿ ಶುರುವಾದ ಅವರ ಈ ಕಾಯಕ ಅವರು ಶ್ರೀ ಡಿ.ವಿ.ಗುಂಡಪ್ಪ, ಶ್ರೀ ಮಲ್ಲಿಕಾರ್ಜುನ ಮನ್ಸೂರ್, ಶ್ರೀ ಕುವೆಂಪು, ನೊಬೆಲ್ ವಿಜೇತ ಶ್ರೀ ಎಸ್.ಚಂದ್ರಶೇಖರ್, ಮದರ್ ಥೆರೆಸಾ, ನಿರ್ದೇಶಕ ಸತ್ಯಜಿತ್ ರೇ, ಶ್ರೀ ಪು.ಲ.ದೇಶಪಾಂಡೆ, ಶ್ರೀ ಡಿ.ರಾಮನಾಥನ್. ಡಾ. ಎಸ್.ಆರ್.ರಂಗನಾಥನ್, ಉಸ್ತಾದ್ ಚಾಂದ್ ಖಾನ್, ಶ್ರೀ ದಲೈಲಾಮ, ಉದ್ಯಮಿ ಶ್ರೀ ನೀಲಕಂಠರಾವ್ ಕಲ್ಯಾಣಿ ಮುಂತಾದ ಮಹನೀಯರ ಸಖ್ಯವನ್ನು ಒದಗಿಸಿದಲ್ಲದೇ ಕೆಲವರ ಶಾಶ್ವತ ಸಾಂಗತ್ಯವನ್ನು ದೊರಕಿಸಿಕೊಟ್ಟಿದ್ದುಂಟು. ಒಬ್ಬೊಬ್ಬ ಮಹನೀಯರ ಭಾವಚಿತ್ರಗಳನ್ನು ತೆಗೆಯಹೊರಟಾಗಲೂ ಒಂದೊಂದು ಕಥೆ. ಶ್ರೀ ಡಿ.ರಾಮನಾಥನ್ ಅವರು, ತಾವು ಪದ್ಮಶ್ರೀ ತೆಗೆದುಕೊಂಡ ಪೋಟೋ ಪಕ್ಕದಲ್ಲೇ ಶ್ರೀ ಸೋಮಶೇಖರ್ ತೆಗೆದ ಅವರು ಹೃದಯತುಂಬಿ ನಗುತ್ತಿರುವ ಇಟ್ಟು ನೋಡಿ “ಲುಕ್ ಅಟ್ ರಾಮನಾಥನ್. ರಾಮನಾಥನ್ ಈಸ್ ಲಾಫಿಂಗ್ ಅಟ್ ರಾಮನಾಥನ್ ರಿಸೀವಿಂಗ್ ಪದ್ಮಶ್ರೀ…! ” ಎಂದು ಹೇಳಿರುವ ಪ್ರಸಂಗ, ಕಲಾವಿದರ ಪಾಲಿಗೆ ಅವಶ್ಯ ಇರಬೇಕಾದ ನಿರಾಡಂಬರ ಮತ್ತು ಆತ್ಮಾವಲೋಕನದ ಜರೂರನ್ನು ಜ್ಞಾಪಿಸುತ್ತದೆ. ಹೀಗೆ ಬದುಕಿಗೆ ಚೈತನ್ಯ ಒಳ್ಳೆತನ ತುಂಬಬಲ್ಲ ಹಲವೂ ಸ್ವಾರಸ್ಯ ಕಥೆಗಳು ಇಲ್ಲಿವೆ. ಅಲ್ಲದೇ ಕೆಲವು ಕಡೆ ಕಹಿ ಅನುಭವಗಳಾದದ್ದೂ ಇಲ್ಲಿ ದಾಖಲಾಗಿವೆ. ಅವರು ನಡೆಸಿದ ಹುಡುಕಾಟ ಅವರನ್ನು ಅಮೆರಿಕಾ ಗೆ ಕರೆದೊಯ್ದದ್ದು, ಮಹಾರಾಷ್ಟ್ರ ರಾಜ್ಯದ ಕಲಾವಿದರ ಚಿತ್ರ ಪ್ರದರ್ಶನ, ದೆಹಲಿ ಕಲಾವಿದರ ಚಿತ್ರ ಪ್ರದರ್ಶನ, ಅವರು ಸಾಗರದಲ್ಲಿ ವಾಸವಿದ್ದಾಗ ಮಾಡಿದ ಯಕ್ಷಗಾನದ ಪೋಟೋಗ್ರಫಿ ಹೀಗೆ ವಿವಿಧ ಕ್ಷೇತ್ರಗಳ ವ್ಯಕ್ತಿ, ಕಲೆ ಹಾಗು ಸಮಾಜ ಇವೆಲ್ಲದರ ಬಗ್ಗೆ ಹಲವು ಮಜಲುಗಳುಳ್ಳ ಒಳನೋಟಗಳು ಪುಸ್ತಕದ ತುಂಬಾ ಸಿಗುತ್ತವೆ.
ಇಷ್ಟೇ ಅಲ್ಲದೆ ಅವರ ಮಕ್ಕಳ ಆಸೆಯ ಅನುಸಾರವಾಗಿ ಅವರ ಆಸಕ್ತಿಗೆ ನೀರೆರೆದು ಪೋಷಿಸಿದ ಕಥನವೂ ಇಲ್ಲಿದೆ. ನಿರಂತರ ಹುಡುಕಾಟದೊಂದಿಗೆ ಬದುಕಿನಲ್ಲಿ ಅವರು ವಿಚಾರಗಳಿಗೆ ತೆರೆದುಕೊಡದ್ದು, ವ್ರತದಂತೆ ತಮ್ಮ ಆಸಕ್ತಿಯನ್ನು ಪೋಷಿಸಿಕೊಂಡು ಬಂದದ್ದು, ಗೆಳೆಯರ ಒತ್ತಾಸೆ, ಮಾರ್ಗದರ್ಶಕರ ಒಡನಾಟ, ಸರ್ಕಾರದ ನಡೆನುಡಿಗಳು, ಅಧಿಕಾರಶಾಹಿ, ಅವರು ತೆಗೆದ ಛಾಯಾಚಿತ್ರಗಳ ದುರ್ಬಳಕೆ, ಅರೆ ಏನೇನಿಲ್ಲ? ಎಲ್ಲವೂ ಸ್ಪಷ್ಟ ಹಾಗು ಸಂಕ್ಷಿಪ್ತವಾಗಿ ಪುಸ್ತಕದ ತುಂಬಾ ಹರಡಿಕೊಂಡಿದೆ.
ಕನ್ನಡದ ಸಹೃದಯರಿಗೆ ನಿಜಕ್ಕೂ ಅವರ ಛಾಯಾಚಿತ್ರಗಳಂತೆ ಈ ಪುಸ್ತಕವೂ ಒಂದು ಅಪರೂಪದ ಕೊಡುಗೆ. ವಿವಿಧ ಕಲಾವಿದರ ಹಾಗು ವಿಶಿಷ್ಠ ವ್ಯಕ್ತಿಗಳ ಬಗ್ಗೆ ತಿಳಿಸಿಕೊಡುವ, ಸುಂದರ ವಿನ್ಯಾಸದೊಂದಿಗೆ ಅಚ್ಚುಕಟ್ಟಾಗಿ ಮುದ್ರಿತವಾಗಿರುವ ಅಪರೂಪದ ದಾಖಲೆ. ಶ್ರೀ ಕೆ.ಜಿ.ಸೋಮಶೇಖರ್ ಅವರ ಸಾಧನೆಯನ್ನು ಅಲಕ್ಷ್ಯ ಮಾಡಿದರೆ ಸಹೃದಯರು ತಮಗೆ ತಾವೇ ಮೋಸ ಮಾಡಿಕೊಂಡಂತೆ. ಕನ್ನಡದ ಪತ್ರಿಕಾ ಲೋಕ ಹಾಗು ಸಾಹಿತ್ಯ ಪ್ರಪಂಚ, ಸಾಹಿತ್ಯ ಲೋಕದಲ್ಲೇ ಬಂಧಿಯಾಗುವ ಬದಲು ಈ ರೀತಿಯ ವಿವಿಧ ಮಾರ್ಗಗಳಿಗೆ ತೆರೆದುಕೊಳ್ಳುವುದು ಕನ್ನಡ ಅಭಿವೃದ್ಧಿ ದೃಷ್ಠಿಯಿಂದ ಬಹು ಮುಖ್ಯ. ಈ ಪುಸ್ತಕದ ಬಗ್ಗೆ ಹೆಚ್ಚು ಪ್ರಚಾರ ಹಾಗು ವಿಮರ್ಶೆ ಬರದೆ ಇದ್ದದ್ದರಿಂದ ಈ ಮಾತನ್ನು ಉಪಯೋಗಿಸುತ್ತಿದ್ದೇನೆ.
ಅದೇನಿದ್ದರು ಈ ಪುಸ್ತಕದ ಬಗ್ಗೆ ಹೆಚ್ಚು ಶ್ರಮ ಆಸ್ಥೆ ವಹಿಸಿ, ವಾರವಾರವೂ ಅವರನ್ನು ಕಂಡು ಮಾತನಾಡಿಸಿ, ಅಕ್ಕರೆಯಿಂದ ನಿರೂಪಿಸಿದ ಶ್ರೀ ಜಯಪ್ರಕಾಶ ನಾರಾಯಣ ಅವರಿಗೂ ಹಾಗು ಅಷ್ಟೇ ಅಂದವಾಗಿ ಪ್ರಕಟಿಸಿರುವ ಆಕೃತಿ ಶ್ರೀ ಗುರುಪ್ರಸಾದ್ ನಿಜಕ್ಕೂ ಅಭಿನಂದನಾರ್ಹರು. ಈ ಪುಸ್ತಕದ ಕೇಂದ್ರಬಿಂದು ಕೆ.ಜಿ.ಸೋಮಶೇಖರ್ ಸರ್, ನಿಮಗೆ ಮತ್ತೊಮ್ಮೆ ಗೌರವಪೂರ್ವಕ ಅಭಿನಂದನೆಗಳು.






ಪುಸ್ತಕ ಪರಿಚಯ ಚೆನ್ನಾಗಿ ಮಾಡಿದ್ದೀರಿ. ಪುಸ್ತಕ ಓದಲೇ ಬೇಕೆನಿಸುತ್ತದೆ. ಎಲ್ಲಿ ಸಿಗುತ್ತೆ ಎಷ್ಟು ಬೆಲೆ ತಿಳಿಸಿದರೆ ಅನುಕೂಲ.