ಇಲ್ಲಿಯವರೆಗೆ

ಮಲ್ಲಿಕಾರ್ಜುನ ಹೊಸಪಾಳ್ಯ
ಅದೊಂದು ಸಾಧಾರಣ ಎತ್ತರದ ಮರ. ಅದರ ಬುಡದಲ್ಲಿ ಕಾಡುಗಲ್ಲು ಚಪ್ಪಡಿಗಳನ್ನು ನಿಲ್ಲಿಸಲಾಗಿತ್ತು. ಒಂದು ಕಡೆ ಒಳಹೋಗಲು ಖಾಲಿ ಜಾಗ. ಅದೇ ಹುಲಿಗೂಡು. ಅದರೊಳಗೆ ಮೇಕೆ ಅಥವಾ ಹಸುವನ್ನು ಕಟ್ಟಿ ಪಕ್ಕದ ಎತ್ತರದ ಮರದಲ್ಲಿ ಮಚಾನು ಕಟ್ಟಿಕೊಂಡು ಕುಳಿತು ಬೇಟೆಯಾಡುತ್ತಿದ್ದರು. ಹುಲಿಗೂಡಿನ ಒಂದು ಭಾಗದ ಚಪ್ಪಡಿಗಳು ಬಿದ್ದು ಹೋಗಿದ್ದವು. ಕಸ-ಕಡ್ಡಿ ಬೆಳೆದಿತ್ತು. ಹತ್ತಿರದಲ್ಲಿ ಹಲವಾರು ದೊಡ್ಡ ಮರಗಳಿದ್ದವು. ಮಚಾನು ಕಟ್ಟಿದ ಗುರುತುಗಳೇನೂ ಇರಲಿಲ್ಲ.
ತುಸು ದೂರದಲ್ಲಿ ನಿಂತಿದ್ದ ಪ್ಯಾಟಿ ಏನೋ ಲೆಕ್ಕಾಚಾರ ಮಾಡುವಂತೆ ತಲೆ ಗುಣುಕು ಹಾಕುವುದು, ಆ ಕಡೆ- ಈ ಕಡೆ ನೋಡುವುದು ಮಾಡುತ್ತಿದ್ದ. ಹುಲಿ-ಗಿಲಿ ವಾಸನೆ ಹಿಡಿಯುತ್ತಿದ್ದಾನಾ ಅಂದುಕೊಂಡು ಮಾತಾಡಿಸಿದೆ. ‘ಏ ತಗಡು… ಕೆನೆತ್ ಅರಣ್ಯಗೃಹದ ಪಶ್ಚಿಮದ ಹಳ್ಳದ ತಡಿಯಲ್ಲಿ ಹಸು ಕಟ್ಟಿದ ಜಾಗ ಇದೇ’ ಎಂದ.
ಹಾಗಾದರೆ ಹಳ್ಳ? ಪಕ್ಕದಲ್ಲೇ ಒಂದು ಕಟ್ಟೆ ಇದೆ ಎಂದರು ಮಾದಪ್ಪ. ಅಲ್ಲಿಗೆ ಹೋದೆವು. ಹುಲಿಗೂಡಿಗೂ ಕಟ್ಟೆಗೂ ಕೆಲವೇ ಮೀಟರುಗಳ ದೂರ. ಕಾಡುಪ್ರಾಣಿಗಳು ನೀರು ಕುಡಿಯಲು ಅಲ್ಲಿ ತಗ್ಗಿನ ಜಾಗ ಇತ್ತೆನಿಸುತ್ತದೆ. ಅದನ್ನೇ ಅರಣ್ಯ ಇಲಾಖೆಯವರು ದೊಡ್ಡದು ಮಾಡಿದ್ದಾರೆ. ಇಲ್ಲಿಗೆ ಜಿಂಕೆ ಮುಂತಾದ ಪ್ರಾಣಿಗಳು ನೀರು ಕುಡಿಯಲು ಬರುತ್ತಿದ್ದುದರಿಂದ ಹುಲಿಗಳ ಆಹಾರಾನ್ವೇಷಣೆಗೆ ಪ್ರಶಸ್ತವಾಗಿತ್ತು. ಹಾಗಾಗಿ ಇಲ್ಲಿ ಕೆನೆತ್ ಹಸು ಕಟ್ಟಿರಬಹುದು. ಅಲ್ಲದೆ ಸುತ್ತ-ಮುತ್ತ ಎಲ್ಲಿಯೂ ಬೇರೆ ಹಳ್ಳ ಇಲ್ಲವೆಂದು ಹಳ್ಳಿಗರು ದೃಢಪಡಿಸಿದರು. ಹಾಗಾಗಿ ಮೂರನೇ ಹಸು ಕಟ್ಟಿದ ಜಾಗ ಇದೇ ಎಂಬುದು ಖಾತರಿಯಾಯಿತು. ಅಲ್ಲೆಲ್ಲಾ ನಿನ್ನೆ ಮೊನ್ನೆ ಹಾಕಿದ ಆನೆ ಲದ್ದಿ ಗುಪ್ಪೆ-ಗುಪ್ಪೆಯಾಗಿ ಬಿದ್ದಿತ್ತು.
ದೂರದಲ್ಲಿ ಕಾಣುವ ಬಿಳಿಗಿರಿರಂಗನ ಬೆಟ್ಟಸಾಲುಗಳನ್ನು ಅಕ್ಕ-ತಂಗಿ ಬೋಳಿ, ದೂಪಾರೆ ಬೆಟ್ಟ, ಮಾರಿಗುಡ್ಡ ಮುಂತಾದ ಹೆಸರುಗಳಿಂದ ಕರೆಯುವುದಾಗಿ ಪುಟ್ಟರಾಜು ಹೇಳಿದರು. ಆ ಹೆಸರುಗಳುಗೆ ಕಾರಣ ಕೇಳುತ್ತಾ ಹಿಂತಿರುಗಿ ಟಾರುರಸ್ತೆಗೆ ಬಂದು ನಿನ್ನೆ ಮಸಿಕತ್ತಲಲ್ಲಿ ನೋಡಿದ್ದ ಅರಣ್ಯಗೃಹವನ್ನು ಬೆಳಕಿನಲ್ಲಿ ನೋಡಲೆಂದು ಹೋದೆವು.
ಈ ಬಾರಿ ಚೆಕ್ಪೋಸ್ಟಿನಲ್ಲಿದ್ದ ಅಧಿಕಾರಿಗೆ ಸ್ವಲ್ಪಮಟ್ಟಿಗೆ ಇಲ್ಲಿ ನಡೆದಿದ್ದ ಬೇಟೆಗಳ ಬಗ್ಗೆ ತಿಳಿದಿತ್ತು. ಉತ್ಸಾಹದಿಂದ ಹಲವಾರು ಮಾಹಿತಿ ಹಂಚಿಕೊಂಡರು. ಅರಣ್ಯ ಇಲಾಖೆ ವತಿಯಿಂದಲೇ ಬಿ.ಆರ್. ಹಿಲ್ಸ್ನಿಂದ ಬೈಲೂರುವರೆಗೆ ಟ್ರಕ್ಕಿಂಗ್ ನಡೆಸುವ ವಿಚಾರ ಅವರಿಂದ ತಿಳಿಯಿತು. ‘ರಾಂಪುರದ ಒಕ್ಕಣ್ಣ’ ಪುಸ್ತಕ ಕಳಿಸಬೇಕೆಂದು ತಮ್ಮ ವಿಳಾಸ ಕೊಟ್ಟರು.
ನಮ್ಮ ದುರದೃಷ್ಟಕ್ಕೆ ಅರಣ್ಯಗೃಹದ ಕೀ ಇರಲಿಲ್ಲ. ಸ್ವಲ್ಪಹೊತ್ತು ಅಲ್ಲೇ ಕುಳಿತಿದ್ದೆವು. ‘ಯೂಟ್ಯೂಬ್’ಗೆ ಹಾಕಲು ಪ್ಯಾಟಿ ಕೆಲವರ ಸಂದರ್ಶನ ಮಾಡಿದ. ಅರಣ್ಯಗೃಹದ ಸಮೀಪದಲ್ಲೇ ಹಲವಾರು ಮನೆಗಳಾಗಿದ್ದವು. ಕೆನೆತ್ನ ಸ್ಟುಡಿಬೆಕರ್ ಕಾರು ಬರಲೂ ಸಾಧ್ಯವಾಗದ ಕಾಡುದಾರಿ ಈಗ ನಮ್ಮ ಕೆಂಪಿಯೂ ಸಲೀಸಾಗಿ ಹೋಗುವ ಪಕ್ಕಾ ಟಾರು ರಸ್ತೆಯಾಗಿ ಬದಲಾಗಿತ್ತು. ವಸತಿಗೃಹದ ಎದುರಿಗೆ ಇರುವ ಅರಣ್ಯ ಇಲಾಖೆ ನೌಕರರ ವಸತಿಗೃಹದ ಗೋಡೆಯ ಮೇಲೆ 1901ನೇ ಇಸವಿಯ ಫಲಕವಿತ್ತು.
* * *
‘ಟೀ, ಬೋಂಡಾ ಕೊಡಮ್ಮ’ ಸೀಮಾ ಆರ್ಡರ್.
‘ಟೀ ಬಿಸೀಗ್ ಮಡಗಿ’ ಆಕೆಯಿಂದ ಒಳಗಡೆಗೆ ಮರು ಆರ್ಡರ್.
ಅದ್ಯಾರು ಒಳಗೆ ಅಂತ ನೋಡಿದರೆ ಆಕೆಯ ಪತಿ. ‘ನೋಡ್ರೀ ಜೆಂಡರ್ ಬ್ಯಾಲೆನ್ಸ್ ಹೆಂಗಿದೆ, ನೀವೂ ಇದಿರ ಕುಂತ್ಕಡೆನೆ ಎಲ್ಲ ಸಪ್ಲೈ ಆಗ್ಬೇಕು’ ಸೀಮಾ ವಾಗ್ಬಾಣ. ಅಷ್ಟರಲ್ಲಾಗಲೇ ಹೊತ್ತು ಮೀರುತ್ತಿದ್ದುದರಿಂದ ಚಚರ್ೆ ಕಂಟಿನ್ಯೂ ಆಗಲಿಲ್ಲ. ಅರಣ್ಯಗೃಹದ ಎದುರಿನ ಟೀ ಅಂಗಡಿಯಿಂದ ಎದ್ದೆವು.
ಬೈಲೂರಿನಲ್ಲಿ ಎಂ.ಸಿದ್ದಯ್ಯ ನಮಗಾಗಿ ಕಾಯುತ್ತಿದ್ದರು. ಹಿರಿಯರಾದ ಅವರಿಗೆ ಈ ಭಾಗದ ಬೇಟೆಯ ವಿಚಾರ ಬಹಳಷ್ಟು ತಿಳಿದಿದೆ ಎಂದು ಪುಟ್ಟರಾಜು ಹೇಳಿದರು. ಆದರೆ ಅವರಿಗೆ ನಿದರ್ಿಷ್ಟವಾಗಿ ಕೆನೆತ್ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಬಿಳಿಗಿರಿರಂಗನಬೆಟ್ಟದ ಹೊನ್ನಮೇಟಿ ಎಸ್ಟೇಟ್ನಲ್ಲಿ ವಾಸವಾಗಿದ್ದ ಮೌರಿಸ್ ದೊರೆ ಮತ್ತು ಆತನ ಮಗಳು ಇಲ್ಲೆಲ್ಲಾ ಬಂದು ಕುದುರೆ ಮೇಲೆ ಓಡಾಡುತ್ತಿದ್ದುದು, ಹಲವಾರು ಹುಲಿ ಬೇಟೆಯಾಡಿದ ಬಗ್ಗೆ ಸಾಕಷ್ಟು ಹೊತ್ತು ಮಾತಾಡಿದರು. ಮೌರಿಸ್ ಬರೆದ ಪತ್ರ ಹುಡುಕಾಡಿದರು. ಸಿಗಲಿಲ್ಲ. ಹೊನ್ನಮೇಟಿ ಎಸ್ಟೇಟ್ನಲ್ಲಿ ಮೌರಿಸ್ ಕಟ್ಟಿಸಿದ ಮನೆ, ಗೆಸ್ಟ್ಹೌಸ್, ಅವನ ನಾಯಿಗಳ ಸಮಾಧಿ ಈಗಲೂ ಇವೆ. ಸ್ವಾತಂತ್ರ್ಯ ಬಂದ ಮೇಲೆ ಬಿಲರ್ಾ ಅವರಿಗೆ ಎಸ್ಟೇಟನ್ನು ಮಾರಿ ಅವರ ದೇಶಕ್ಕೆ ಹೋದರಂತೆ. ಇಡೀ ದಿನ ಕುಳಿತು ಮಾತಾಡುವಷ್ಟು ಸರಕು ಹಾಗೂ ಉಮೇದು ಅವರಲ್ಲಿತ್ತು. ಆದರೆ ನಾವು ನೋಡಬೇಕಾದ ಸ್ಥಳಗಳು ಇನ್ನೂ ಸಾಕಷ್ಟಿದ್ದವು. ಹಾಗಾಗಿ ಮತ್ತೊಮ್ಮೆ ಬರುವುದಾಗಿ ವಿದಾಯ ಹೇಳಿದೆವು.
* * *
ಮೊದಲ ದಿನ ಕೊಳಕುಮಂಡಲಕ್ಕೆ ಹೆದರಿ ವಾಪಸ್ ಹೋಗಿದ್ದೆವಲ್ಲ? ಅದನ್ನು ನೋಡಲು 21ನೇ ಮೈಲಿಕಲ್ಲಿನ ಬಳಿ ತಲುಪಿದೆವು. ಕೆನೆತ್ ತಾಯಿ ಹುಲಿಯನ್ನು ಭೇಟಿಯಾದ ಕಲ್ಲುಗುಡ್ಡ ನೋಡಬೇಕಿತ್ತು. ನಿಖರ ಮಾಹಿತಿಗಾಗಿ… ‘ಒಕ್ಕಣ’್ಣನನ್ನು ಮತ್ತೊಮ್ಮೆ ಓದಿಕೊಂಡೆವು.
. . . ಹುಲಿ ಸತ್ತ ಹೋರಿಯನ್ನು ಮೊದಲ ಮುನ್ನೂರು ಗಜ ಹಳ್ಳದ ದಡದಲ್ಲಿ ನೆಲದ ಮೇಲೆ ಎಳೆದೊಯ್ದಿತ್ತು. ನಂತರ ದಟ್ಟವಾದ ಲಂಟಾನದ ಜಿಗ್ಗು ಅಡ್ಡಲಾಗಿದ್ದರಿಂದ ಸತ್ತ ಹೋರಿಯನ್ನು ನೆಲದಮೇಲೆ ಎಳೆಯುವುದು ದುಸ್ತರವಾಗಿದೆ. . . . . ಹೆಗಲ ಮೇಲೆ ಹಾಕಿಕೊಂಡು ಲಂಟಾನದ ಅಡಿಯಲ್ಲಿ ಮುಂದುವರೆದಿತ್ತು. . . . . . . ಕೆಳಗೆ ಜಮಖಾನ ಹಾಸಿದಂತೆ ಬಿದ್ದಿದ್ದ ತರಗೆಲೆಗಳ ರಾಶಿಯಲ್ಲಿ ಅದರ ಹೆಜ್ಜೆ ಗುರುತಂತೂ ಕಾಣುತ್ತಿರಲಿಲ್ಲ. . . . . . . . ಲಂಟಾನ ಮುಗಿದು ಅಡಿಯ ಹಳು ಕಡಿಮೆಯಿರುವ ಎತ್ತರದ ಮರಗಳ ಕಾಡು ಪ್ರಾರಂಭವಾಯ್ತು. . . . . ಹುಲಿಯ ಜಾಡು ಬೆಟ್ಟದತ್ತ ತಿರುಗಿತು. ಕಲ್ಲುಗಳಿಂದಲೂ ಬಂಡೆಗಳಿಂದಲೂ ಕೂಡಿದ್ದ ಆ ಜಾಗ ಅಪಾಯಕರ ಎನ್ನಿಸಿತು. . . . . ಹುಲಿಯ ಜಾಡು ನೇರವಾಗಿ ಆ ಶಿಖರದತ್ತ ಸಾಗಿತ್ತು. . . . . . ಬಂಡೆಗಳ ಮೇಲೆ ಅಲ್ಲಲ್ಲಿ ಸತ್ತ ಹೋರಿಯ ರಕ್ತ ಧಾರಾಕರವಾಗಿ ಸುರಿದಿತ್ತು. . . . . . . ಬಂಡೆಯನ್ನು ಬಳಸಿ ದಾಟುತ್ತಾ ಮುಂದುವರಿದೆ. . . . . . ಅಷ್ಟರಲ್ಲಿ ಬಂಡೆಯೊಂದರ ನಡುವಿಂದ ಪಟ್ಟೆಪಟ್ಟೆಯ ಉಣ್ಣೆಯ ಚೆಂಡುಗಳಂತಿದ್ದ ಎರಡು ಪುಟ್ಟ ಹುಲಿ ಮರಿಗಳು ಪ್ರತ್ಯಕ್ಷವಾಗಿಬಿಟ್ಟವು!
ಮೇಲೆ ವಿವರಿಸಿರುವ ಜಾಗವನ್ನು ನೋಡಲೇಬೇಕಿತ್ತು ನಾವು. ಹಳ್ಳದ ಎಡಭಾಗದಗುಂಟ ನಡೆದು ಲಂಟಾನ ಜಿಗ್ಗು ಗಾಟಿದೆವು. ಹೊಳೆಮತ್ತಿ ಮುಂತಾದ ಎತ್ತರದ ಮರಗಳು ಸಿಕ್ಕವು. ಅವುಗಳ ತರಗು ನೆಲದ ಮೇಲೆ ಹಾಸಿತ್ತು. ಬಿದಿರುಮೆಳೆಯಂತೂ ಅಗಾಧವಾಗಿತ್ತು. ಸಾಕಷ್ಟು ಕಡೆ ಇನ್ನೂ ಆನೆಯ ಹಸಿ ಲದ್ದಿ ಬಿದ್ದಿತ್ತು. ಆನೆಗಳು ಬಿದಿರುಗಳಗಳನ್ನು ತಿರುಚಿ ಎಳೆದಾಡಿದ್ದವು. ಎಡಗಡೆ ಎತ್ತರದ ಪ್ರದೇಶ ಕಂಡಿತು, ಅದೇ ಬೆಟ್ಟವಿರಬೇಕೆಂದು ಅತ್ತ ಹೊರಟೆವು. ಜನರು ಓಡಾಡಿದ ಗುರುತಿದ್ದ ಕಾಲ್ಹಾದಿಯಿತ್ತು. ಎಷ್ಟೋ ಹೊತ್ತಾದ ಮೇಲೆ ಅದರ ನೆತ್ತಿ ಸಿಕ್ಕಿತು. ಆದರೆ ಬಂಡೆಗಳ ಸುಳಿವಿಲ್ಲ. ಅಲ್ಲೆಲ್ಲಾ ಸುತ್ತಾಡಿದೆವು. ಬಾಡುಬಕ್ಕನ ಮುಳ್ಳಿಗೆ ಸಿಲುಕಿ ಕೈಚರ್ಮ, ಪ್ಯಾಂಟಿನ ನೂಲು ಕಿತ್ತುಬಂದವು.
ಒಂದು ಹಂತದವರೆಗೂ ಕೆನೆತ್ ವಿವರಣೆಯ ದಾರಿಯೇ ಇತ್ತು. ಆದರೆ ಬಂಡೆಗಳ ಜಾಗ ಮಾತ್ರ ಸಿಕ್ಕಲಿಲ್ಲ. ದೂರದಲ್ಲಿ ಕೆಲವು ಮನೆಗಳೂ ಅದಕ್ಕೂ ಆಚೆ ಕೆಲ ಬಂಡೆಗಳೂ ಕಂಡವು. ಆದರೆ ಅವು ಹುಲಿ ಮರಿಮಾಡುವಷ್ಟು ಅಗಾಧವಾಗಿರಲಿಲ್ಲ. ನಾವು ನಿಂತ ಗುಡ್ದದ ತುದಿ ಮತ್ತು ನಮ್ಮೆದುರಿನ-ಅಂದರೆ ಹಳ್ಳದ ಬಲಭಾಗದ ಆಚೆಕಡೆ- ಜೀರಿಗೆಗದ್ದೆಯ ಬಳಿ ಒಂದು ಪುಟ್ಟ ಗುಡ್ಡ ಕಾಣುತ್ತಿತ್ತು. ಆದರೆ ಅಲ್ಲೆಲ್ಲೂ ಬಂಡೆಗಳು ಇರಲಿಲ್ಲ. ಇವು ಬಿಟ್ಟರೆ ದೂರದಲ್ಲಿ ಮೂನರ್ಾಲ್ಕು ಮೈಲಿಗಳಾಚೆ ಬಿಳಿಗಿರಿರಂಗನ ಬೆಟ್ಟಸಾಲುಗಳಿದ್ದವು.
ವಾಪಸ್ಸು ಇಳಿದು ಹಳ್ಳದಗುಂಟವೇ ಇನ್ನೂ ಸ್ವಲ್ಪ ಮೇಲೇರಿದೆವು. ಕಾಲ್ದಾರಿ ಇರಲಿಲ್ಲ. ನುಗ್ಗುತ್ತಾ ಹೋದೆವು. ಕಾಡು ದಟ್ಟವಾಯಿತು. ಮರಗಳ ನೆರಳು ಅಗಾಧವಾಗಿ ಬಿದ್ದು ಬೆಳಕು ಕ್ಷೀಣಿಸಿತ್ತು. ಆನೆಗಳ ವಾಸಕ್ಕೆ ಅತ್ಯಂತ ಪ್ರಶಸ್ತ ಸ್ಥಳ. ಸಮಯವೂ ಮೀರುತ್ತಿತ್ತು. ಮುಂದೆ ಹೋಗಬೇಕೆಂಬ ಉತ್ಸಾಹದ ಜಾಗದಲ್ಲಿ ಭಯ ಮೂಡತೊಡಗಿತು. ಒಬ್ಬರು ಹೆದರಿಕೆ ವ್ಯಕ್ತಪಡಿಸಿದರೂ ಅದರಿಂದ ಉಳಿದವರೂ ಭಯಪಟ್ಟಾರು ಎಂಬ ಆತಂಕದಿಂದ ಹೆಚ್ಚು ಮಾತಾಡದೇ ವಾಪಸು ಹೊರಟೆವು. ನಾಲ್ಸಾರು ಸಲ ದಾರಿ ತಪ್ಪಿ, ಹೊರಟಲ್ಲಿಗೇ ಬಂದು ಮತ್ತಷ್ಟು ಹೆದರಿಕೆ ಮೂಡಿತು. ಯಾರಾದರೂ ಸ್ಥಳೀಯರೊಂದಿಗೆ ಬೆಳಿಗ್ಗೆಯೇ ಹೊರಟರೆ ಆ ಜಾಗವನ್ನು ಪತ್ತೆ ಮಾಡಬಹುದೆನ್ನಿಸಿತು. ಕೃಷಿ ಮತ್ತಿತರ ಕಾರಣಗಳಿಗಾಗಿ ಆ ಬೆಟ್ಟವನ್ನೇ ಇಲ್ಲವಾಗಿಸಿದ್ದಾರೋ ಎಂಬ ಅನುಮಾನವೂ ಮೂಡಿತಾದರೂ ಅದರ ಸಾಧ್ಯತೆ ಕಡಿಮೆ.
ಮೊದಲಬಾರಿಗೆ ನಿರಾಶೆಯಾಗಿತ್ತು. ಇನ್ನೂ ಒಂದು ದಿನ ಹೆಚ್ಚಿಗೆ ಇದ್ದಿದ್ದರೆ ಈ ಸ್ಥಳವನ್ನು ಪತ್ತೆ ಹಚ್ಚಬಹುದಿತ್ತು. ಸಮಯಾಭಾವಕ್ಕಾಗಿ ನಮ್ಮನ್ನು ನಾವೇ ಬೈದುಕೊಂಡೆವು.
ಮುಂದಿನ ನಮ್ಮ ಗುರಿ ರಾಂಪುರ.
ಇನ್ನೂ ಇದೆ….







nice i like your writing