ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆನೆತ್ ಅಂಡರ್ಸನ್ ಜಾಡಿನಲ್ಲಿ – ೪

ಇಲ್ಲಿಯವರೆಗೆ ಮಲ್ಲಿಕಾರ್ಜುನ ಹೊಸಪಾಳ್ಯ

ಹಾ…

ಅಬ್ಬಬ್ಬಾ….

ಎಂಥೆಂಥದೋ ಉದ್ಗಾರಗಳು!

ಅದೇ ಮೊದಲ ಬಾರಿಗೆ ನಾವೆಲ್ಲಾ ಹುಲಿ ಉಗುರು ನೋಡಿದ್ದು. ಒಂದು ಜೊತೆ ಇದ್ದವು. ಉಗುರಿನ ಬುಡದ ಭಾಗದಲ್ಲಿದ್ದ ಚರ್ಮ ಮತ್ತು ಕೂದಲು ಅವಕ್ಕೊಂದು ಗಾಂಭೀರ್ಯ ತಂದುಕೊಟ್ಟಿತ್ತು. ‘ಇದರಲ್ಲಿ ಪರಚಿದರೆ ಸಾಯದೆ ಇನ್ನೇನಾದೀತು?!’ ಎಂಬುದು ನಮ್ಮೆಲ್ಲರ ಒಕ್ಕೊರಲ ಅಭಿಪ್ರಾಯವಾಗಿತ್ತು.

ತಮ್ಮ ಸೋದರಮಾವ ಚನ್ನಬಸಣ್ಣ ಎಷ್ಟೋ ವರ್ಷಗಳ ಹಿಂದೆ ಹೊಡೆದಿದ್ದ ಹುಲಿಯ ಉಗುರುಗಳನ್ನು ಬೈಲೂರಿನ ಮಹದೇವಸ್ವಾಮಿಯವರು ನಮಗೆ ತೋರಿಸುತ್ತಿದ್ದರು. ಅದನ್ನು ವಿವಿಧ ಕೋನಗಳಲ್ಲಿ ಹಿಡಿದು ನೋಡಿ ಮುಟ್ಟಿ ರೋಮಾಂಚಿತರಾದೆವು. ಬೈಲೂರು ಸುತ್ತ-ಮುತ್ತ ಅಲ್ಲಲ್ಲಿ ದನಗಳನ್ನು ಕಟ್ಟಿ ಹುಲಿ ಹೊಡೆಯುತ್ತಿದ್ದ ಅಸ್ಪಷ್ಟ ನೆನಪು ಅವರಿಗಿತ್ತು. ದನ ಹಾಗೂ ಮೇಕೆ ಕಟ್ಟಿ ಹುಲಿ ಬೇಟೆಯಾಡುತ್ತಿದ್ದ ‘ಹುಲಿಗೂಡು’ ಎಂಬ ಸ್ಥಳ ಈಗಲೂ ಇದೆ ಎಂಬ ಮಹತ್ವದ ಸುಳಿವು ಸಿಕ್ಕಿತು. ಅದನ್ನು ನೋಡಲೇಬೇಕು ಎಂದುಕೊಂಡೆವು. ಮಹದೇವಸ್ವಾಮಿಯವರಿಗೆ ಕೆನೆತ್ ಕೊಂದಿದ್ದ ನರಭಕ್ಷಕನ ಬಗ್ಗೆಯಾಗಲೀ, ಆ ನಿರ್ದಿಷ್ಟ ಸ್ಥಳಗಳ ಬಗ್ಗೆಯಾಗಲೀ ಹೆಚ್ಚಿನ ಮಾಹಿತಿ ಇರಲಿಲ್ಲ.

ಕೇಪಿಯವರು ಬೈಲೂರಿನಲ್ಲಿ ಹಲವು ವರ್ಷಗಳಿಂದ ಸಾವಯವ ಕೃಷಿ ಬಗ್ಗೆ ಕೆಲಸ ಮಾಡುತ್ತಿದ್ದರು. ಬಹುತೇಕರ ಪರಿಚಯವಿತ್ತು, ಹಾಗಾಗಿ ನಾವು ಅನುಮಾನದ ಕಣ್ಣುಗಳಿಂದ ಬಚಾವು! ಕೇಪಿಗೆ ಪರಿಚಯದ ಪುಟ್ಟರಾಜು, ಮಾದಪ್ಪ, ಚನ್ನಮಲ್ಲದೇವರು ನಮಗೆ ಗೈಡುಗಳಾಗಿ ಬಂದರು.

21ನೇ ಮೈಲಿಕಲ್ಲಿನ ಬಳಿ ಹಸುವನ್ನು ಹಿಡಿದಿದ್ದ ಹೆಣ್ಣುಹುಲಿ ಮತ್ತದರ ಮರಿಗಳಿಂದ ಯಾವುದೇ ಅಪಾಯಗಳಿಲ್ಲದೆ ಪಾರಾಗಿ ಬಂದ ಕೆನೆತ್ ಬೈಲೂರಿನಲ್ಲಿ ತನಗಾಗಿ ಕಾಯುತ್ತಿದ್ದ ಸಂಗಾತಿಗಳಿಗೆ ತಾನು ತಾಯಿಹುಲಿಯಿಂದ ಪಾರಾಗಿ ಬಂದ ವಿಚಾರವನ್ನು ತಿಳಿಸಿ ಅರಣ್ಯ ವಸತಿಗೃಹದತ್ತ ಹೊರಡುತ್ತಾನೆ. ಆಗ . . . ಒಕ್ಕಣ್ಣದಲ್ಲಿ ಬರುವ ವಿವರಣೆ ಹೀಗಿದೆ.

‘ಅವರಿಗೆ ವಿದಾಯ ಹೇಳಿ ನಾನು ಅರಣ್ಯಗೃಹದತ್ತ ಹೊರಟಾಗ ಸಂಜೆ ಆರೂವರೆ ಗಂಟೆ. ಕತ್ತಲು ಕವಿಯಲು ಶುರುವಾಗಿತ್ತು. ನಾನು ಆ ದಾರಿಯಲ್ಲಿ ನಡೆದು ಬರುತ್ತಾ ಬೈಲೂರಿಗೂ ಅರಣ್ಯಗೃಹಕ್ಕೂ ನಡುವೆ ಹುಲಿಯನ್ನಾಕರ್ಷಿಸಲು ಕಟ್ಟಿದ್ದ ಹೋರಿಯ ಜ್ಞಾಪಕ ಬಂತು. ಅದೇನೂ ದಾರಿಯಿಂದ ಬಹಳ ದೂರವಿರಲಿಲ್ಲ. ಯಾಕೋ ಏನೋ ಅದನ್ನೊಮ್ಮೆ ಹೋಗಿ ನೋಡೋಣ ಎನ್ನಿಸಿತು. . . . . . . . . ನಾನು ಹಳ್ಳದ ಬಳಿ ಎಡಕ್ಕೆ ತಿರುಗಿ ಹೋರಿ ಕಟ್ಟಿದ್ದ ಕಡೆ ಹೋಗಿದ್ದ ಕಾಲುದಾರಿ ಹಿಡಿದೆ. . . . . . . . ರಸ್ತೆ ಬದಿಯಲ್ಲಿ ಹಾಕಿದ್ದ ಸರ್ವೆ ಮರಗಳ ನಡುವೆ ಮೆಲುಗಾಳಿ ನಿಟ್ಟುಸಿರು ಬಿಟ್ಟಂತೆ ಸದ್ದು ಮಾಡುತ್ತಾ ಬೀಸುತ್ತಿತ್ತು.

ನಾನು ಹೋರಿಕಟ್ಟಿದ್ದ ಬಸರಿ ಮರದ ಬಳಿಸಾರಿದೆ. ಅಲ್ಲಿ ದಟ್ಟವಾದ ಮರದ ನೆರಳು ಕರ್ರಗೆ ಬಿದ್ದಿತ್ತು. ಹೋರಿ ಕಂದು ಬಣ್ಣಕ್ಕಿದ್ದುದರಿಂದ ಅದೆಲ್ಲಿದೆಯೋ ಕಣ್ಣಿಗೆ ಕಾಣಲಿಲ್ಲ. ಮಲಗಿದ್ದ ಅದರ ಕಾಲನ್ನು ಎಡವಿದಾಗಲೇ ಅದು ಬೆಚ್ಚಿ ಎಚ್ಚೆತ್ತು ಎದ್ದು ನಿಂತಿತು . . . . . . .  ಆ ಕ್ಷಣ ನರಭಕ್ಷಕ ಘರ್ಜಿಸಿ ನನ್ನ ಮೇಲೆ ನೆಗೆಯಿತು.

ಆ ಇಡೀ ಪರಿಸರವನ್ನು ನೋಡಲು ಹೊರಟೆವು. ಬೈಲೂರಿನಿಂದ ಅರಣ್ಯಗೃಹದತ್ತ ಹೋಗುವ ಕಾಲುದಾರಿ ಈಗಲೂ ಬಳಕೆಯಲ್ಲಿದೆ. ತುಸು ಎತ್ತರದಲ್ಲಿದ್ದ ಅರಣ್ಯಗೃಹ ಕಾಣುತ್ತಿತ್ತು. ಕೆನೆತ್ ಹಳ್ಳದ ಬಳಿ ಎಡಕ್ಕೆ ತಿರುಗಿದ ಸ್ಥಳ ಸ್ಪಷ್ಟವಾಗಲಿಲ್ಲ. ಹಳ್ಳದ ಬದಲು ಅಲ್ಲಿ ಪುಟ್ಟ ಕೆರೆಯಿತ್ತು. ಕೆನೆತ್ ಎಲ್ಲೂ ಈ ಕೆರೆಯ ಪ್ರಸ್ತಾಪ ಮಾಡುವುದಿಲ್ಲ. ಕೆರೆಯ ಕೋಡಿ ನೀರು ಹರಿಯುವ ಜಾಗ ಹಳ್ಳದಂತೆ ಇತ್ತು. ಆಗ ಹರಿಯುತ್ತಿದ್ದ ಹಳ್ಳಕ್ಕೆ ಇತ್ತೀಚೆಗೆ ಕೆರೆ ಕಟ್ಟಿರಬೇಕೆಂದು ನನ್ನ ಅನುಮಾನ. ಆದರೆ ಕೆರೆ ತುಂಬಾ ಹಿಂದಿನಿಂದಲೂ ಇದೆ ಎಂದು ಎಲ್ಲರೂ ಹೇಳಿದರು. ಅವರ ಹೇಳಿಕೆ ಪ್ರಕಾರ ನೂರು ವರ್ಷಕ್ಕೂ ಹಿಂದೆಯೇ ಕೆರೆ ನಿಮರ್ಾಣವಾಗಿತ್ತು.

ಹೋಗಲಿ ಬಸರಿ ಮರ ಎಲ್ಲಿದ್ದವು ಎಂದು ವಿಚಾರಿಸಲಾಗಿ, ಈಗ ಇಲ್ಲೆಲ್ಲೂ ಬಸರಿಮರಗಳಿಲ್ಲ, ಆದರೆ ಹಿಂದೆ ಕೆರೆಪಕ್ಕದಲ್ಲಿ ಬಹಳಷ್ಟು ಇದ್ದವು, ಅವೆಲ್ಲಾ ಬಿದ್ದು ಹೋಗಿ ಸಾಕಷ್ಟು ವರ್ಷಗಳಾದವು ಎಂಬ ಮಾಹಿತಿ ಸಿಕ್ಕಿತು.

‘ಹಾಂ ಹಾಗಿದ್ದರೆ ನರಭಕ್ಷಕನನ್ನು ಕೊಂದ ಜಾಗ ಇದೇ’ ಎಂದುಕೊಂಡೆವು. ಆದರೂ ಏನೋ ಸಂದೇಹವಾಯಿತು. ಪುಸ್ತಕ ತೆಗೆದು ಮತ್ತೊಮ್ಮೆ ಓದಿದೆವು. ಕಾಲುದಾರಿ, ಎಡಕ್ಕೆ ತಿರುಗಿದ್ದು, ಹಳ್ಳ, ಸರ್ವೇಮರ… ಏನೋ ಮಿಸ್ಸಾಗುತ್ತಿದೆಯಲ್ಲಾ!

ಕೆರೆ ಹಿಂಭಾಗಕ್ಕೆ ಹೋದೆವು. ಕೋಡಿ ನೀರು ಹರಿಯುವ ಜಾಗ ಸ್ವಲ್ಪಮಟ್ಟಿಗೆ ಹಳ್ಳವನ್ನು ಹೋಲುತ್ತಿತ್ತು. ಆದರೆ ಕಾಲುದಾರಿಯ ಬದಲು ಅಲ್ಲಿ ಅಗಲವಾದ ಜಲ್ಲಿ ರಸ್ತೆ ಇತ್ತು. ಆದರೆ ಆಶ್ಚರ್ಯ!! ಸರ್ವೆ ಮರಗಳು ಕಂಡವು. ಅವು ಎಂಭತ್ತು ವರ್ಷಗಳಷ್ಟು ಹಳೆಯವೋ ಅಥವಾ ಇತ್ತೀಚಿನವೋ ಗೊತ್ತಾಗಲಿಲ್ಲ. ಆದರೆ ದೊಡ್ಡ-ದೊಡ್ಡ ಸರ್ವೆ ಮರಗಳು ಇದ್ದುದ್ದಂತೂ ನಿಜ. ಹಾಗೇ ಮುಂದೆ ನಡೆದೆವು. ಕೋಡಿನೀರು ಹರಿಯುವ ಜಾಗ ಇಲ್ಲಿ ಹಳ್ಳದ ಸ್ವರೂಪ ಪಡೆದಿತ್ತು. ಇನ್ನೂ ಮುಂದೆ ತುಸು ಎಡಕ್ಕೆ ತಿರುಗಿದ ಹಳ್ಳದಲ್ಲಿ ಬೃಹತ್ ಗಾತ್ರದ ಅತ್ತಿ, ಆಲದ ಮರಗಳಿದ್ದವು.

ಬಹಳ ಹೊತ್ತು ಅಲ್ಲೆಲ್ಲಾ ನೋಡಿದ ನಂತರ ನರಭಕ್ಷಕನನ್ನು ಹೊಡೆದ ಸ್ಥಳ ಅದೇ ಇರಬಹುದೆಂದು ತೀರ್ಮಾನಿಸಿದೆವು.

ಅಸಲಿಗೆ ತೇಜಸ್ವಿಯವರ ಅನುವಾದದಲ್ಲಿ ಆದ ಒಂದು ಸಣ್ಣ ತಪ್ಪು ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿತ್ತು.

ನಾವು ವಾಪಸು ಊರಿಗೆ ಬಂದ ನಂತರ ಪ್ಯಾಟಿ, ಕೆನೆತ್ನ ಇಂಗ್ಲಿಷ್ ಪುಸ್ತಕವನ್ನು ತರಿಸಿದರು. ಅದರಲ್ಲಿ ನರಭಕ್ಷಕಕನನ್ನು ಹೊಡೆದ ಸ್ಥಳ ತಿಟಜ ಜಿರ ಣಡಿಜಜ ಬಳಿ ಎಂದಿದೆ. ಹಾಗೆಂದರೆ ಕನ್ನಡದಲ್ಲಿ ಅತ್ತಿಮರ. ಈ ಕುಟುಂಬದ ಅತ್ತಿ, ಆಲ, ಬಸರಿ, ಅಂಜೂರ ಮುಂತಾದ ಮರಗಳನ್ನು ಸಮಾನಾರ್ಥದಲ್ಲಿ  ಕರೆಯುತ್ತಾರೆ. ಹಾಗಾಗಿ ತೇಜಸ್ವಿಯವರು ಬಸರಿ ಮರ ಎಂದು ಅನುವಾದಿಸಿರಬಹುದು. ಇದೇ ನರಭಕ್ಷಕನನ್ನು ಹೊಡೆದ ಸ್ಥಳದ ಬಗ್ಗೆ ಗೊಂದಲವಾಗಲು ಕಾರಣವಾಗಿತ್ತು.

ಅರಣ್ಯವಸತಿ ಗೃಹದ ಬಳಿ ಕೆನೆತ್ ಸ್ನಾನ ಮಾಡಿದ ಬಾವಿ ಹುಡುಕಿದೆವು. ಸಿಕ್ಕಿತು. ಆದರೆ ಒಂದೇ ಕಡೆ ಮೂರು ಬಾವಿಗಳಿದ್ದವು. ಎಲ್ಲವೂ ಮುಂಚೆ ನೋಡಿದ ಕೆರೆಯ ಅಂಗಳದಲ್ಲೇ ಇದ್ದವು. ಪುಟ್ಟರಾಜು ಪ್ರಕಾರ ಮೂರು ಬಾವಿಗಳೂ ವಿವಿಧ ಜಾತಿಗಳ ಬಳಕೆಗೆ ಮೀಸಲಾಗಿದ್ದವು. ಅವುಗಳಲ್ಲಿ ಕೆನೆತ್ ಬಳಸಿದ್ದ್ಯಾವುದು ಅಂತ ಗೊತ್ತಾಗಲಿಲ್ಲ. ಸುಮ್ಮನಾದೆವು.

ಕೆನೆತ್ ಬೈಲೂರಿಗೆ ಬಂದಾಗ ನರಭಕ್ಷಕನನ್ನು ಆಕಷರ್ಿಸಲು ಮೂರು ಕಡೆ ಹಸುಗಳನ್ನು ಕಟ್ಟಿರುತ್ತಾರೆ. ಅವುಗಳಲ್ಲಿ ಈಗಾಗಲೇ 21ನೇ ಮೈಲಿಕಲ್ಲು ಹಾಗೂ ಬಸರಿಮರ ನೋಡಿದ್ದೆವು. ಉಳಿದಿದ್ದು ಅರಣ್ಯಗೃಹದ ಪಶ್ಚಿಮಕ್ಕೆ ಹರಿಯುತ್ತಿದ್ದ ಹಳ್ಳದ ತಡಿ. ಅದನ್ನು ನೋಡೋಣವೆಂದು ಹೊರಟೆವು. ಆದರೆ ಪುಟ್ಟರಾಜು ‘ಹುಲಿಗೂಡು ತೋರುಸ್ತೀವಿ ಬನ್ನಿ ಸಾ’ ಅಂತ ಕರೆದೊಯ್ದರು.

ಹೋಗುತ್ತಾ ದಾರಿಯಲ್ಲಿ ಚನ್ನಮಲ್ಲದೇವರು ‘ಎಷ್ಟೋ ಸಾವಿರ ವರ್ಷಗಳ ಹಿಂದೆ ಈ ಕಾಡಿನಲ್ಲಿ ನೆಲಮುರಿಯರೆಂಬ ಕುಳ್ಳ ಜಾತಿಯವರಿದ್ದರು, ಅವರು ಕಟ್ಟಿರುವ ಕಲ್ಲುಚಪ್ಪಡಿ ಮನೆಗಳ ಕುರುಹು ಈಗಲೂ ಅಲ್ಲಲ್ಲಿ ಇವೆ’ ಎಂದು ಹೇಳಿದರು. ನೆಲಮಟ್ಟದಿಂದ ಕೇವಲ ಒಂದೆರಡು ಅಡಿ ಎತ್ತರದಲ್ಲಿ ಆ ಮನೆಗಳಿವೆಯಂತೆ. ನೋಡುವ ಕುತೂಹಲವಾಯಿತು. ಆದರೆ ತುಂಬಾ ದೂರ, ಕಾಡೊಳಗೆ ಹೋಗಬೇಕು, ಅರಣ್ಯ ಇಲಾಖೆಯಿಂದ ಪರವಾನಿಗಿ ಪಡೆಯಬೇಕು ಎಂದಾಗ ಈ ಸಲ ಆಗುವುದಿಲ್ಲವೆನಿಸಿತು.

 

(ಇನ್ನೂ ಇದೆ)

‍ಲೇಖಕರು G

29 September, 2012

0 Comments

Trackbacks/Pingbacks

  1. ಕೆನೆತ್ ಅಂಡರ್ಸನ್ ಬೇಟೆಯ ಜಾಡಿನಲ್ಲಿ – ಭಾಗ ೫ « Avadhi / ಅವಧಿ - [...] ಕೆನೆತ್ ಅಂಡರ್ಸನ್ ಬೇಟೆಯ ಜಾಡಿನಲ್ಲಿ – ಭಾಗ ೫ September 30, 2012 by G ಇಲ್ಲಿಯವರೆಗೆ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading