ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆಟ್ಟ ದಾಸ ಅಲ್ಲ, ಚುಟ್ಟ ದಾಸ ಅಲ್ಲ, ಹುಟ್ಟಾ ದಾಸರು ನಾವು!!

ಮಲ್ಲಿಕಾರ್ಜುನ ಹೊಸಪಾಳ್ಯ, ತುಮಕೂರು

ಕಥಲು ವ್ಯಥಲಾಯ
ಕಾಪುರಾಲು ರೆಂಡಾಯ
ನಿನ್ನ ಚೆಚ್ಚಿನ ಕುಂದೇಲು ಈ ಪದ್ದು ಚಾರಾಯ
ಕುಂದೇಲ್ನಿ ಚಂಪಿನ ವೀರುಡು ಚನಿಪೋಯಿ ಆರುನೆಲಾಯ
ದೊಂಬಿದಾಸ ಅಲೆಮಾರಿ ಜನಾಂಗದ ನಾಯಕತ್ವ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಆ ಜನಾಂಗದ ಹಿರಿಯರೂ ಹಾಗೂ ಕಲಾವಿದರೂ ಆದ ಕಾಕೋಳು ರಾಮಯ್ಯನವರು ವೇದಿಕೆಯಿಂದ ಈ ಒಗಟನ್ನು ಹೇಳಿದರು. ದೊಂಬಿದಾಸ ಸಮುದಾಯದಲ್ಲಿ ಈ ಒಗಟು ಬಳಕೆಯಲ್ಲಿದೆ. ಇದನ್ನು ಕನ್ನಡದಲ್ಲಿ ಈ ರೀತಿ ಹೇಳಬಹುದು.
ಕಥೆಗಳು ವ್ಯಥೆಗಳಾದವು
ಸಂಸಾರಗಳು ಎರಡಾದವು
ನಿನ್ನೆ ಸತ್ತ ಮೊಲ ಇಂದು ಸಾರಾಯಿತು
ಮೊಲವನ್ನು ಕೊಂದ ವೀರ ಸತ್ತ ಆರು ತಿಂಗಳಾಯಿತು.
ಇದರ ಹಿನ್ನೆಲೆಯಾಗಿ ದೊಡ್ಡ ಕಥೆಯೇ ಇದೆ. ಶಿಬಿರದಲ್ಲಿದ್ದ ಒಬ್ಬರು ಕಥೆಯನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಿದರು.

‘ಒಂದೂರಲ್ಲಿ ಗಂಡ-ಹೆಂಡತಿಯರಿದ್ದರು. ಹೆಂಡತಿ ಚಾಲೂಕು, ಗಂಡ ತುಸು ಮೊದ್ದು. ಒಮ್ಮೆ ಇಬ್ಬರಿಗೂ ಮನಸ್ತಾಪವಾಯಿತು. ಹೆಂಡತಿ ಮೇಲೆ ಹೇಳಿದ ಒಗಟನ್ನು ಗಂಡನಿಗೆ ಹೇಳಿ ಇದರ ಅರ್ಥವನ್ನು ಮೂರು ದಿನದಲ್ಲಿ ಹೇಳದಿದ್ದರೆ ತಾನು ತವರಿಗೆ ಹೋಗುವುದಾಗಿ ಪಟ್ಟು ಹಾಕಿದಳು. ಎಷ್ಟು ಪ್ರಯತ್ನಿಸಿದರೂ ಗಂಡನಿಗೆ ಅರ್ಥ ತಿಳಿಯಲಿಲ್ಲ. ಸೀದಾ ಪಕ್ಕದೂರಿನ ತನ್ನ ತಂಗಿಯ ಬಳಿ ಹೋಗಿ ಈತರಕೀತರ ಅಂತ ವಿಷಯ ತಿಳಿಸಿದ. ನಾನು ಬಗೆಹರಿಸುತ್ತೇನೆ ಎಂದ ತಂಗಿ ಅಣ್ಣನ ಜೊತೆ ಊರಿಗೆ ಬಂದವಳು ಮನೆಗೆ ಹೋಗದೆ ಊರ ಹೊರಗಿನ ದೇವಾಲಯದಲ್ಲಿ ಉಳಿದು ಬೆಳಿಗ್ಗೆ ಬರುತ್ತೇನೆ ಎಂದಳು. ಆ ರಾತ್ರಿ ಊರಿನ ಎಲ್ಲಾ ಮನೆಗಳ ಜ್ಯೋತಿಗಳು ದೇವಸ್ಥಾನಕ್ಕೆ ಬಂದವು. ಒಂದು ಮಾತ್ರ ತಡವಾಗಿ ಬಂದಿತು. ಉಳಿದವು ತಡವಾಗಿದ್ದಕ್ಕೆ ಕಾರಣ ಕೇಳಿದಾಗ ‘ನನ್ನ ಮನೆಯಲ್ಲಿ ಗಂಡ ಹೆಂಡತಿಗೆ ಜಗಳವಾಗಿ ದೀಪವಾರಿಸುವುದು ತಡವಾಯಿತು’ ಎಂದಿತು. ಜಗಳದ ಹಿನ್ನೆಲೆ ಏನೆಂದರೆ, ಹೆಂಡತಿಯು ಗಂಡನಿಗೆ ಒಂದು ಒಗಟನ್ನು ಬಿಡಿಸಲು ಹೇಳಿದ್ದಾಳೆ, ಆತ ಅದರ ಅರ್ಥ ತಿಳಿಯದೆ ಒದ್ದಾಡುತ್ತಿದ್ದಾನೆ, ಆದರೆ ಅದರ ಅರ್ಥ ಹೀಗಿದೆ ಎಂದು ಹೇಳಲಾರಂಭಿಸಿತು.
ಒಗಟನ್ನು ಒಡ್ಡಿರುವ ಆ ಹೆಂಡತಿ ಅದೇ ಊರಿನ ಮತ್ತೊಬ್ಬನ ಜೊತೆ ಸಂಬಂಧ ಹೊಂದಿದ್ದಳು. ಇದರ ಸುಳಿವರಿತ ಗಂಡ ಪತ್ತೆ ಮಾಡಲು ಮುಂದಾದ. ಆ ರಾತ್ರಿ ಹೆಂಡತಿಗೆ ತಿಳಿಯದಂತೆ ಬಂದೂಕು ಹಿಡಿದು ಕಾವಲು ಕೂತ. ಸರೊತ್ತಿನ ಸಮಯ, ಕತ್ತಲಲ್ಲಿ ಗೆಜ್ಜೆ ಸಪ್ಪಳ ಕೇಳಿತು. ಗುಂಡು ಹಾರಿಸಿದ. ನೋಡಿದಾಗ ಪ್ರೇಮಿ ಸತ್ತು ಹೋಗಿದ್ದ. ಗಂಡ ಯಾರಿಗೂ ತಿಳಿಯದಂತೆ ಅವನನ್ನು ಊರ ಹೊರಗಿನ ಮರವೊಂದಕ್ಕೆ ನೇತು ಹಾಕಿಬಿಟ್ಟ. ತಿಂಗಳುಗಳುರುಳಿದವು. ನೇತು ಹಾಕಿದ್ದ ಹೆಣದಿಂದ ದ್ರವ ಸುರಿದು ಕೆಳಗಿನ ಅಷ್ಟಗಲ ನೆಲ ಫಲವತ್ತಾಗಿ ಹುಲುಸಾದ ಗರಿಕೆ ಬೆಳೆಯಿತು. ಒಂದು ಬೆಳಗಿನಜಾವ ಮೊಲವೊಂದು ಸೊಂಪಾದ ಆ ಗರಿಕೆಗೆ ಆಸೆಬಿದ್ದು ಬಂದು ತಿನ್ನುವಾಗ ಹೆಣ ಕಳಚಿಕೊಂಡು ಅದರ ಮೇಲೆ ಬಿತ್ತು. ಗಂಡ ಬೆಳಿಗ್ಗೆ ಆ ದಾರಿಯಾಗಿ ಬಂದು ನೋಡುತ್ತಾನೆ, ಹೆಣ ಬಿದ್ದು ಹೋಗಿದೆ, ಅದನ್ನು ಹೊರಳಿಸಿದಾಗ ಸತ್ತ ಮೊಲ ಕಂಡಿತು. ಅದನ್ನು ತಂದು ಹೆಂಡತಿಗೆ ಸಾರು ಮಾಡಲು ಹೇಳಿದ. ಎಲ್ಲಾ ವಿಷಯವನ್ನು ತಿಳಿದಿದ್ದ ಹೆಂಡತಿಗೆ ಪ್ರೇಮಿಯನ್ನು ಕಳೆದುಕೊಂಡ ದುಃಖ ಹೆಚ್ಚಾಗಿ ಮೇಲಿನಂತೆ ಒಗಟು ಕಟ್ಟಿ ಗಂಡನಿಗೆ ಕಾಟ ಕೊಡಲಾರಂಭಿಸಿದಳು. ಇದನ್ನು ಕೇಳಿದ ಉಳಿದ ಜೋತಮ್ಮಗಳು ಆ ಹೆಂಗಸಿನ ಚಾಲೂಕುತನಕ್ಕೆ ತಲೆದೂಗುತ್ತಾ ನಿದ್ದೆ ಹೋದವು. ಅದೇ ದೇವಸ್ಥಾನದಲ್ಲಿ ಅಡಗಿ ಕುಳಿತಿದ್ದ ತಂಗಿಯು ಜ್ಯೋತಮ್ಮನಿಂದ ಒಗಟಿನ ಅರ್ಥ ತಿಳಿದು ಬೆಳಿಗ್ಗೆ ಅಣ್ಣನಿಗೆ ತಿಳಿಸಿದಳು.

ಒಗಟಿನ ಅರ್ಥರೂಪದಲ್ಲಿ ಕಥೆಯನ್ನು ಕೇಲಿದ ರಾಮಯ್ಯ ಉತ್ಸಾಹದಿಂದ ಶಿಬಿರಾಥರ್ಿಗಳಿಗೆ ಮತ್ತೊಂದು ಒಗಟು ಒಡ್ಡಿದರು;
‘ರಾತ್ರಿ ಕಾದು ಪದ್ದು ಕಾದು
ಸರಿಪದ್ದುಲೋ ಪಿಲುಸ್ತೆ ರಾನು ಪೋ’!
 
ಇದರ ಕನ್ನಡ ಅನುವಾದ;
‘ಬೆಳಿಗ್ಗೆ ಅಲ್ಲ ರಾತ್ರಿ ಅಲ್ಲ
ಸರಿ ಹೊತ್ತಿನಲ್ಲಿ ಕರೆದ್ರೆ ಬರಲ್ಲ ಹೋಗು’!
 
ಇದಕ್ಕೂ ಸಹ ಒಂದು ಕಥೆ ಇದೆ.
ದೊಂಬಿದಾಸರ ಕುಟುಂಬದಲ್ಲಿ ನಡೆದ ಘಟನೆ ಇದು, ಒಮ್ಮೆ ಗಂಡ ಮೀನು ಹಿಡಿದುಕೊಂಡು ಬಂದು ‘ಮೀನ್ಸಾರು ಹಿಟ್ಟು ಮಾಡೇ’ ಎಂದು ಹೆಂಡತಿಗೆ ಹೇಳಿ ಹೊರಗೆ ಹೋದ. ಅವಳು ಸ್ವಲ್ಪ ಮೊದ್ದು, ಮೀನಿನ ಸಾರು ಮಾಡಿ ಅದಕ್ಕೇ ರಾಗಿ ಹಿಟ್ಟು ಹಾಕಿ ಕಲಸಿಬಿಟ್ಟಳು. ಮೀನು ಸಾರು ರಾಗಿ ಮುದ್ದೆ ಉಣ್ಣುವ ಉಮೇದಿನಲ್ಲಿ ಊಟಕ್ಕೆ ಕುಳಿತ ಗಂಡನಿಗೆ ತಟ್ಟೆಗೆ ಬಿದ್ದ ಐಟಂ ನೋಡಿ ಮೈಯೆಲ್ಲಾ ಉರಿದು ಹೋಯಿತು. ಎಲ್ಲವನ್ನೂ ಅವಳ ತಲೆಗೆ ಕಟ್ಟಿ ಮನೆಯಿಂದ ಆಚೆಗಟ್ಟಿದ. ರಾತ್ರಿ ಸರಿಹೊತ್ತಿನಲ್ಲಿ ಬೀದಿನಾಯಿಗಳು ವಾಸನೆ ಹಿಡಿದು ಬಂದು ಅವಳ ತಲೆಯನ್ನು ಎಳೆಯಹತ್ತಿದವು. ನಿದ್ದೆ ಮಂಪರಿನಲ್ಲಿದ್ದ ಆಕೆ ತನ್ನ ಗಂಡನೇ ಬಂದು ಕರೆಯುತ್ತಿದ್ದಾನೆಂದು ತಿಳಿದು ಮುನಿಸಿನಿಂದ ಅರ್ಧ ರಾತ್ರೀಲಿ ಕರೆದ್ರೆ ಬರಲ್ಲ ಹೋಗು ಎನ್ನುತ್ತಾಳೆ. ಒಳಗೆ ಮಲಗಿದ್ದ ಗಂಡ ಇವಳು ಯಾರ ಜೊತೆ ಮಾತನಾಡುತ್ತಿದ್ದಾಳೆ ಎಂದು ಅನುಮಾನವಾಗಿ ನೋಡುತ್ತಾನೆ. ನಾಯಿಗಳು ಎಳೆದಾಡುತ್ತಿವೆ. ಅವನ್ನು ಗದರಿಸಿ ಹೆಂಡತಿಯನ್ನು ಒಳಗೆ ಕರೆದೊಯ್ಯುತ್ತಾನೆ.
ಶಿಬಿರದಲ್ಲಿ ದೊಂಬಿದಾಸರ ಸಾಂಸ್ಕೃತಿಕ ಕೊಡುಗೆಗಳ ಬಗ್ಗೆ ನಡೆದ ವಿಸ್ತೃತ ಚಚರ್ೆಯ ಸಂದರ್ಭದಲ್ಲಿ ಇವೆಲ್ಲಾ ಚಚರ್ೆಯಾದವು. ಜೀ.ಶಂ.ಪರಮಶಿವಯ್ಯ ಸಂಗ್ರಹಿಸಿರುವ ‘ದೊಂಬಿದಾಸರ ಲಾವಣಿ’ ಹೊರತುಪಡಿಸಿದರೆ ಈ ಜನಾಂಗದ ಕಲೆ-ಸಂಸ್ಕೃತಿಯ ದಾಖಲಾತಿ ನಡೆದೇ ಇಲ್ಲ. ಇತೀಚೆಗೆ ಕುಪ್ಪೆ ನಾಗರಾಜ್ ಕೆಲವು ಬಿಡಿ ಲೇಖನಗಳನ್ನು ‘ಏಕತಾರಿ’ ಹೆಸರಿನ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಆದರೆ ದಾಖಲು ಮಾಡಬೇಕಾದ್ದು ಅಗಾಧವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಮೇಲಿನ ಕಥೆಗಳು, ಒಡಪುಗಳನ್ನು ಗಮನಿಸಿದರೆ ಖಂಡಿತ ಗಂಭೀರ ಅಧ್ಯಯನದ ಅಗತ್ಯವಿದೆ.

‍ಲೇಖಕರು G

17 September, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading