ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಬೂದಿಯಾಗಿದ್ದೇನೆ. ನಿಜ,
ಕಿಡಿಗಳನ್ನು ಇನ್ನೂ ಉಳಿಸಿಕೊಂಡಿದ್ದೇನೆ.
ನಿಗಿನಿಗಿ ಹೊಳೆಯದೆ ಕೆಂಡ,
ಏನನ್ನೂ ನಂಬುವುದಿಲ್ಲ ಜಗತ್ತು.
ಗಾಳಿ ಬೀಸಲಿ ಒಮ್ಮೆ
ಧಗಧಗನೆ ಉರಿಯುವ ಕಲೆಯನ್ನು
ನಾನಿನ್ನೂ ಮರೆತಿಲ್ಲ.
ಕಟ್ಟುವುದು ನನಗೇನೂ ಹೊಸದಲ್ಲ ಬಿಡು
ಒಮ್ಮೆ ನೋವು
ಒಮ್ಮೆ ಹೂವು
ಮಾಲೆಯಾದ ಯಾವುದನ್ನೂ ನಾನು ಇಟ್ಟುಕೊಂಡಿಲ್ಲ.
ಕತ್ತಿ ಕೊರಳಿನ ನಡುವೆ
ದೇವರು ಪ್ರತ್ಯಕ್ಷನಾಗಲು ಎಷ್ಟು ಹೊತ್ತು?
ನಾನಿನ್ನೂ ತಪಸ್ಸು ಬಿಟ್ಟು ಎದ್ದಿಲ್ಲ.
ಕಣ್ಣು ಬಿಟ್ಟಿಲ್ಲ.
ಇಷ್ಟು ದೂರ ಕರೆದು ಬಂದ ದಾರಿಯನ್ನು
ಇನ್ನೂ ಅಪ್ಪಿಕೊಂಡಿದ್ದೇನೆ.
ಕಲ್ಲು ಮುಳ್ಳುಗಳಿಗೆ ಹೆದರಿ
ನಾನಿನ್ನೂ ಕಾಲು ಕಿತ್ತಿಲ್ಲ.
ಯಾರದ್ದೋ ಗೆಲುವಿನ ಸುದ್ದಿಯಿಂದ
ನನ್ನನ್ನು ವಿಚಲಿತಗೊಳಿಸುವ ಹುನ್ನಾರವೇ?
ನನ್ನ ಗುರಿ ನನ್ನನ್ನೇ ಹುಡುಕಿಕೊಂಡಾಗ
ನಾನಿನ್ನು ರಸ್ತೆಗೇ ಇಳಿದಿರಲಿಲ್ಲ.
ಸ್ಪರ್ಧೆಗೆ ನಿಲ್ಲುವುದನ್ನು
ಯಾವತ್ತೋ ಬಿಟ್ಟು ಬಿಟ್ಟಿದ್ದೇನೆ.
ನಡೆಯಲು ಕಲಿತಿದ್ದೇನೆ.
ಚಿಪ್ಪಿನಲ್ಲಿ ಬಿದ್ದ ಹನಿಗಳಿಗೆಲ್ಲಾ
ಮುತ್ತಾಗುವ ಯೋಗವಿರುವುದಿಲ್ಲ.
ಮೌನದ ಬೀಜ ಮಣ್ಣೊಳಗೇ
ಬಿರಿಯುವ ಸದ್ದು;
ಕಾಯದೇ ಬೆಳಕಾಗುವುದಿಲ್ಲ.
ಚೆನ್ನಾಗಿದೆ