ಕುಸುಮಾ ಆಯರಹಳ್ಳಿ
ಕನಸು ಕಾಣಲು ಆಕಾಶಕ್ಕಿಂತ ಅತ್ಯುತ್ತಮ ಜಾಗವಿಲ್ಲ.
ಕೆಲವರು ಬೆಳೀತಾ ಬೆಳೀತಾ ಚಿಕ್ಕೋರಾಗ್ತಾರೆ.
ಎಂತಹ ತೀವ್ರ ನೋವನ್ನೂ ಆರು ತಿಂಗಳಲ್ಲಿ ಮರೆತು ಮೊದಲಿನಂತಾಗ್ತೇವೆ ನಾವು.
ಇಂತಹ ಡೈಲಾಗುಗಳಿವೆ.
ತಟ್ಟೆ ಖಾಲಿ ಇಟ್ಟು ಕಾಯುತ್ತಿರುವ ಮಗಳನ್ನು ಬಿಟ್ಟು ಸಂಕಟದಲೇ ಕೋಪಿಷ್ಟ ಗಂಡನಿಗೆ ರೊಟ್ಟಿ ಬಡಿಸುವ ಅವಳು, ಕೊನೆಗೊಂದು ದೃಶ್ಯದಲ್ಲಿ ತಂದ ರೊಟ್ಟಿಯನು ಮೊದಲು ಮಗಳ ತಟ್ಟೆಗೆ ಹಾಕಿ ಹೋಗುತ್ತಾಳೆ. ಹಾಗೆ ಮಾಡಲು ಧೈರ್ಯ ಮತ್ತು ಭಯದ ಕಣ್ಣಲ್ಲಿ ಆತ್ಮವಿಶ್ವಾಸ ಮೂಡಲು ಏನಾದರೂ ಜರುಗಬೇಕಲ್ಲ? ಹಾಗೆ ಜರುಗುವುದೇ ಈ ಕತೆ. ಎಲ್ಲರಿಗೂ ಇಲ್ಲಿ ಪುಟ್ಟ ಪುಟ್ಟ ಕನಸುಗಳು. ಅದು ನೆರವೇರಲು ಸಿಗುವ ಅಪರಿಚಿತ ಆಸರೆಗಳು. ಯಾರಿಗಾಗಿಯೋ ತುಡಿವ ಸಂಬಂಧವಿರದ ಜೀವಗಳು!

ಓದುವ ಹಂಬಲದ ಆ ಅಸಹಾಯಕ ಹುಡುಗಿಯನ್ನು ಸಮುದ್ರದ ಕಿನಾರೆಯಲ್ಲಿ ಕೂತ ಮಾತು ಬಾರದ ತಾತ ಕೈ ತೋರಿಸಿ ಕೇಳುತ್ತಾರೆ ‘ಅದೋ…ಆ ದೊಡ್ಡ ಹಡಗು ನಾನು. ನೀನು?’ ಅವಳು ಅಲ್ಲೆ ಮುರಿದು ಬಿದ್ದ ಪುಟ್ಟ ದೋಣಿ ತೋರಿಸಿ ಹೇಳುತ್ತಾಳೆ ‘ಅದು ನಾನು’ ತಾತ ಅವಳತ್ತ ತಿರುಗಿ ‘ಇಲ್ಲ ಇಲ್ಲ…ನೀನು ಆ ಮುರಿದು ಬಿದ್ದ ದೋಣಿಯಲ್ಲ, ಹಾರಬೇಕಾದ ವಿಮಾನ’ ಅನ್ನುತ್ತಾರೆ.
ಮುರಿದು ಬಿದ್ದ ದೋಣಿಯಂತಾ ಬದುಕುಗಳು ವಿಮಾನವಾಗಿ ಬದಲಾಗಿ ಟೇಕಾಫ್ ಆಗುವ ಭಾವುಕಪಯಣವೇ ಈ ಸಿನೆಮಾ.
ಈ ಮಲಯಾಳಿಗಳು ಈಚೆಗೆ ಸಿನೆಮಾಗೆ ಚೆಂದದ ಭಾವದ ಕುಸುರಿ ಮಾಡುತ್ತಾರೆ.
ಕನ್ನಡದಲ್ಲಿ ಈಚಿನ ಅಂತಹ ಪ್ರಯತ್ನಗಳೆಂದರೆ ‘ಹೊಂದಿಸಿ ಬರೆಯಿರಿ’ ಮತ್ತು ‘ಡೇರ್ ಡೆವಿಲ್ ಮುಸ್ತಾಫ’ (ಉಳಿದ ಕೆಲವೂ ಇರಬಹುದು. ನಾ ನೋಡಿರದವು)

ಒಟಿಟಿ ಇರದಿದ್ದರೆ ಫಹಾದ್ ನಂತಹ ಪ್ರತಿಭೆ ಮತ್ತು ಇಂತಹ ಸಿನೆಮಾಗಳು ನಮ್ಮನ್ನು ತಲುಪುತ್ತಲೇ ಇರಲಿಲ್ಲವೇನೋ.
ಆಗುವುದೆಲ್ಲ ಒಳ್ಳೆಯದು!
ರಾಜೇಶ್ ನಟರಂಗ ಅವರ ಮಗಳು ಧ್ವನಿ ರಾಜೇಶ್ ಪ್ರಬುದ್ಧ ಅಭಿನಯ ನೀಡಿದ್ದಾಳೆ. ಸಿನೆಮಾದಲ್ಲಿ ವಿದೇಶೀ ಮಹಿಳೆ ನಿನ್ನ ಇಂಗ್ಲಿಷ್ ಪರ್ಫೆಕ್ಟ್ ಅನ್ನುವ ಹಾಗೆ, ಅವಳ ಅಭಿನಯವೂ ಇಲ್ಲಿ ಪರ್ಫೆಕ್ಟ್.
ಮುರಿದು ಬಿದ್ದ ದೋಣಿ ವಿಮಾನವಾಗಿ ಟೇಕಾಫ್ ಆಗುವುದನ್ನು ನೋಡಿ ಒಮ್ಮೆ. ಪ್ರೈಮ್ನಲ್ಲಿದೆ.
ಸಿನಿಮಾ ಹೆಸರು ಏನು