– ಮಹಿಪಾಲ ರೆಡ್ಡಿ ಮುನ್ನೂರ್
(ತುರ್ತು ಪರಿಸ್ಥಿತಿಗೆ 25 ವರ್ಷ ಆಗಿದ್ದ ಸಂದರ್ಭದಲ್ಲಿ ಸರಿತಾ ಮತ್ತು ಕುಸುಮಾಕರ ದೇಸಾಯಿ ಅವರೊಂದಿಗೆ ಸಂದರ್ಶನ ನಡೆಸಿದ ಲೇಖನವಿದು)

“… ಮೇಡಮ್ಮೋರೆ, ನಿಮ್ ಗಂಡ ಜಂಡಾ ಹಿಡ್ಕೊಂಡ್ ರೋಡಿನೊಳ್ಗ ಹುಚ್ಚನಂಗ ಓಡಾಡ್ಲಿಕತ್ಯಾರ.. ಹುಮ್ನಾಬಾದ್ ಬೇಸ್ನಿಂದ ಚೌಕ್ತನಕ ಒಬ್ರೇ ಕೂಗಾಡ್ಕೋಂತ.. ಚೀರಾಡ್ಕೋಂತ. ಓಡಾಡ್ಲಿಕತ್ಯಾರ..”
ಹೀಗಂತ ಪರಿಚಿತ ಇರುವ ವ್ಯಕ್ತಿಯೊಬ್ಬರು ಮನೆಗೆ ಬಂದು ಹೇಳಿದರಂತೆ. ಏನೇನೂ ಆಶ್ಚರ್ಯಗೊಳ್ಳದೇ, ಉಲ್ಲಸಿತರಾಗಿ, ಹೆಮ್ಮೆಯಿಂದ ಅಷ್ಟೇ ಸಲೀಸಾಗಿ `ಆ ರೀತಿ ಜಂಡಾ ಹಿಡ್ಕೊಂಡು ಚಳುವಳಿ ಮಾಡಲು.. ಸತ್ಯಾಗ್ರಹ ಮಾಡಲು ಹೊರಟ ಗಂಡನಿಗೆ ಆರತಿ ಮಾಡಿ ಜಯದ ತಿಲಕವಿಟ್ಟು ಕಳಿಸಿದ್ದೇನೆ’ ಎಂದು ಉತ್ತರ ಹೇಳಿದರಂತೆ.
ಜಂಡಾ ಹಿಡ್ಕೊಂಡು ಓಡಾಡಿದ ವ್ಯಕ್ತಿಯ ಹೆಸರು ಕುಸುಮಾಕರ ದೇಸಾಯಿ. ಹಾಗೇ ಹೊರಟ ಗಂಡನಿಗೆ ಆರತಿ ಮಾಡಿ ಕಳಿಸಿದ್ದು, ಅವರ ಪತ್ನಿ ಮತ್ತು ವಿಧಾನ ಪರಿಷತ್ತಿನ ಸದಸ್ಯೆಯಾಗಿದ್ದ ಲೇಖಕಿ ಸರಿತಾ ಕುಸುಮಾಕರ ದೇಸಾಯಿ.
ಇದು 1975 ರ ಜೂನ್ 25 ರ ಮಧ್ಯರಾತ್ರಿ ಜಾರಿಗೆ ಬಂದ ಸ್ವಾಭಿಮಾನಿ ಭಾರತೀಯನಿಗೆ ಆಘಾತ ತಂದ ತುತರ್ು ಪರಿಸ್ಥಿತಿಯ ವಿರುದ್ಧ ಇಡೀ ಕರ್ನಾಟಕ ರಾಜ್ಯದಲ್ಲಿ ಸತ್ಯಾಗ್ರಹ ನಡೆದಿದ್ದರೆ, ಇಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಗುಲಬರ್ಗಾದಲ್ಲಿ ಸತ್ಯಾಗ್ರಹದ ಸುಳಿವೇ ಇರಲಿಲ್ಲ. ತುರ್ತು ಪರಿಸ್ಥಿತಿ ವಿರುದ್ಧ ಒಬ್ಬೇ ಒಬ್ಬ ಭಾರತೀಯ ಸ್ವಾಭಿಮಾನಿ ಕೂಗು ಹಾಕಿದ್ದಿಲ್ಲ. ಅಂತಹ ಸಂದರ್ಭದಲ್ಲಿ ಗುಲಬರ್ಗಾ ನಗರದ ಹುಮನಾಬಾದ್ ಅಗಸಿಯಿಂದ ಚೌಕ್ವರೆಗೆ ಬಾವುಟ ಹಿಡಿದು ತುರ್ತು ಪರಿಸ್ಥಿತಿ ವಿಧಿಸಿದ್ದ ಇಂದಿರಾಗಾಂಧಿ ವಿರುದ್ಧ ಘೋಷಣೆ ಕೂಗುತ್ತಾ ಸತ್ಯಾಗ್ರಹ ಚಳುವಳಿ ಆರಂಭಿಸಿದ್ದ ಮೊದಲ ವ್ಯಕ್ತಿಯೆಂದರೆ ಕುಸುಮಾಕರ ದೇಸಾಯಿ.
`ನಿರ್ಭಯರಾಗಿರಿ, ಪ್ರಜಾತಂತ್ರವನ್ನು ಉಳಿಸಿರಿ. ಪ್ರಜಾತಂತ್ರ ಉಳಿಸಲು ಯುವಕರೇ ಒಂದಾಗಿ.. ತುತರ್ು ಪರಿಸ್ಥಿತಿ ಸಂವಿಧಾನಕ್ಕೊಂದು ದೊಡ್ಡ ಮೋಸ..’ ಮುಂತಾದ ಘೋಷಣೆಗಳನ್ನು ಹಾಕುತ್ತ ಬಿಸಿ ರಕ್ತದ ಯುವಕನಂತೆ, ಸದೃಢ ಕಾಯದ ಕುಸುಮಾಕರ ದೇಸಾಯಿ ಬೀದಿಗಳಲ್ಲಿ ಚಳುವಳಿಯ ಠೇಂಕಾರ ಹಾಕುತ್ತಿದ್ದರೆ, ಪರಿಚಿತ ವ್ಯಕ್ತಿಯೊಬ್ಬರು ಇದನ್ನು ಕಂಡು, ಚಳುವಳಿಯ ಅರಿವಿರದೇ ಮನೆಗೆ ಓಡೋಡಿ ಬಂದು `ಹುಚ್ಚು ಹಿಡಿದಿದೆ’ ಎಂದು ಹೇಳುವ ಹಾಗೂ ಅದಕ್ಕುತ್ತರವಾಗಿ ಆರತಿ ಮಾಡಿ ತಿಲಕವಿಟ್ಟು ಕಳಿಸಿದೆ ಎಂದು ಹೇಳುವ ತಾಕತ್ತು.. ಇದು ದೇಸಾಯಿ ದಂಪತಿಗಳಿಗೆ ಮಾತ್ರ ಸಾಧ್ಯ.

ಇದೇ ಜೂನ್ 25 ಕ್ಕೆ 39 ವರ್ಷ ಪೂರೈಸುತ್ತಿರುವ ಆ ಕರಾಳ ನೆನಪು, ಭಾರತದ ಪ್ರಜಾತಂತ್ರ ವ್ಯವಸ್ಥೆಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ. ಬ್ರಿಟಿಷ್ ಪ್ರಭುತ್ವದ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಗಳಿಸಿದ ಭಾರತೀಯ ತಾನೇ ಆರಿಸಿದ ಪ್ರಭುವನ್ನು ಪ್ರಶ್ನಿಸದೇ ಇರುವ.. ಹಾಗೊಂದು ವೇಳೆ ಪ್ರಶ್ನಿಸಿದರೆ ಜೈಲಿನ ಕಂಬಿಗಳನ್ನು ಎಣಿಸಬೇಕಾದ ಅಸಹಾಯಕ ಪರಿಸ್ಥಿತಿ ನಿರ್ಮಾಣದ ಕರಾಳ ದಿನದ ಹೆಸರು, 25 ಜೂನ್ 1975.
ಅಧಿಕಾರದ ವ್ಯಾಮೋಹ, ಸ್ವಾರ್ಥ ರಾಜಕಾರಣ, ಆಡಳಿತ ಪರಾಕಾಷ್ಠೆ, ತನ್ನದೇ ನಡೆಯಬೇಕೆನ್ನುವ ಮನೋಭಾವ ಹೊಂದಿರುವ ಪ್ರಭು, ಪ್ರಜಾತಂತ್ರ ವ್ಯವಸ್ಥೆಗೆ ಎಷ್ಟು ಮಾರಕವಾಗಬಲ್ಲ ಎಂಬುದಕ್ಕೆ ಇಂದಿರಾಗಾಂಧಿ ಒಂದು ನಿದರ್ಶನ ಹಾಗೂ ಅವರೇ ಹೇರಿದ ತುರ್ತು ಪರಿಸ್ಥಿತಿ ಸಂದರ್ಭದ ಕರಾಳ ದಿನಗಳು ಕೂಡ.
ಅದೂವರೆಗೆ ಸಾಕಷ್ಟು ಒಳ್ಳೆಯ ಸಾಧನೆಗಳನ್ನು ಮಾಡಿದ್ದ ಇಂದಿರಾಗಾಂಧಿಯವರು, ಇದೊಂದು ಕಾರಣಕ್ಕೆ ದೇಶವ್ಯಾಪಿ ವಿರೋಧಿ ನಿಲುವಿಗೆ ಉದಾಹರಣೆಯಾದರು.
ಅಂದಿನಿಂದ ಅಕ್ಷರಶಃ ಭಯದ ವಾತಾವರಣ ಹಬ್ಬಿತ್ತು. ಜುಲೈ 7 ರಂದು ರಮೇಶ ಬಂದಗದ್ದೆ ಮತ್ತು ಕುಸುಮಾಕರ ದೇಸಾಯಿ ಪ್ರಜಾತಂತ್ರದ ಕೊಲೆಯಾಗುತ್ತಿರುವುದರ ವಿರುದ್ದ ದೀರ್ಘ ಹೋರಾಟದ ಯೋಜನೆ ರೂಪಿಸಿಕೊಂಡು ಇದರ ಹೊರತು ಅವರಿಗೆ ಯಾವುದೇ ಮಾರ್ಗ ತೋರಲಿಲ್ಲ. ಜೆ.ಎಸ್.ವೆಂಕೋಬರಾವ ಹಾಗೂ ಬಾಪು ಹೆದ್ದೂರ ಶೆಟ್ಟಿ ಅವರೊಂದಿಗೆ ಭೂಗತ ಸಂಪರ್ಕವಿಟ್ಟುಕೊಂಡು ಚಟುವಟಿಕೆಗಳನ್ನು ಮಾಡುತ್ತ ಸಕ್ರಿಯವಾಗಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟಕ್ಕಿಳಿದರು. ರಾಜ್ಯದ ಇನ್ನಿತರ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟದ ಕಾವು ಹೆಚ್ಚಿದ್ದರೆ, ಗುಲಬರ್ಗಾ ಮತ್ತು ಬೀದರ್ ಜಿಲ್ಲೆಗಳಲ್ಲಿ ಯಾವುದೇ ಪ್ರತಿಭಟನೆಯ ಸುಳಿವೇ ಇಲ್ಲದಿದ್ದ ಸಂದರ್ಭದಲ್ಲಿ ಅಕ್ಟೋಬರ್ 9 ರಂದು ಏಕಾಂಗಿಯಾಗಿ ಸತ್ಯಾಗ್ರಹ ಆರಂಭಿಸಿದ್ದರು.
ಆಗ ಕುಸುಮಾಕರ ದೇಸಾಯಿ ಗುಲಬರ್ಗಾ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿದ್ದರು. 1947 ರಿಂದ ಸೆಪ್ಟಂಬರ್ 17, 1948 ರ ವರೆಗೆ ಹೈದ್ರಾಬಾದ್ ಕರ್ನಾಟಕ ವಿಮೋಚನೆ ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಭೂಗತ ಹಾಗೂ ಗೆರಿಲ್ಲಾ ಚಟುವಟಿಕೆಗಳಲ್ಲಿದ್ದ ದೇಸಾಯಿ ಅವರು, ಸತ್ಯಾಗ್ರಹದ ಚಳುವಳಿಯನ್ನು ತೀವ್ರಗೊಳಿಸಿದ್ದರು. ಬೀದಿಗಳಲ್ಲಿ ಬಾವುಟ ಹಿಡಿದು ಕೂಗಿದರು. ಘೋಷಣೆ ಹಾಕಿದರು. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಇಲ್ಲದ್ದರಿಂದ ಹೆಡ್ ಕಾನ್ಸ್ಟೇಬಲ್ ಡಿಐಜಿ ಅವರಿಗೆ ದೇಸಾಯಿಯವರ ಚಳುವಳಿ ಕುರಿತು ತಿಳಿಸಿದಾಗ, ತಕ್ಷಣವೇ ಅರೆಸ್ಟ್ ಮಾಡುವಂತೆ ಆಜ್ಞಾಪಿಸಿದರಂತೆ. ಅದರಂತೆ ಆ ಪೊಲೀಸ್ ದೇಸಾಯಿಯವರನ್ನು ದಸ್ತಗಿರಿ ಮಾಡಿದರು. ಅಕ್ಟೋಬರ್ 10 ರಂದು ಕೋರ್ಟ್ಗೆಗೆ ಹಾಜರು ಪಡಿಸಿದರು. ದೇಸಾಯಿಯವರ ಚಟುವಟಿಕೆಗೆ 6 ತಿಂಗಳ ಶಿಕ್ಷೆ ವಿಧಿಸಲಾಯಿತು. ದೇಸಾಯಿ ಅವರಿಗೆ ಗುಲಬರ್ಗಾ ಜೈಲಿಗೆ ಕಳಿಸಲಾಯಿತು. ಇವರ ವಿದ್ಯಾರ್ಥಿಗಳಾಗಿದ್ದ ಬಿ.ಆರ್.ಪಾಟೀಲ್ರು, ಮೂರು ದಿನಗಳ ನಂತರ ಸತ್ಯಾಗ್ರಹ ಆರಂಭಿಸಿದ್ದರು. ಜಮಾತೆ ಇಸ್ಲಾಮಿ, ಆನಂದ ಮಾರ್ಗಗಳು, ಆರೆಸ್ಸೆಸ್ ಕಾರ್ಯಕರ್ತರು ಚಳುವಳಿಯಲ್ಲಿ ಭಾಗವಹಿಸಿದ್ದರು. 44 ನೇ ಸಾಲಿನ ತಿದ್ದುಪಡಿ ಕಾಯಿದೆ ವಿರುದ್ಧ ಸಭೆ ಏರ್ಪಡಿಸಿದಾಗ ವೀರೇಂದ್ರ ಪಾಟೀಲ್ ಮತ್ತು ಲಕ್ಷ್ಮಿಸಾಗ ಭಾಗಿಗಳಾಗಿದ್ದರು. ದೇಸಾಯಿ ಅವರು ಜೈಲಿನಲ್ಲಿದ್ದಾಗಲೇ ಖಾಸಾ ತಂಗಿಯಾದ ವೈಜಯಂತಿಯ ಮದುವೆಯಾಯಿತು.
ಕನಿಷ್ಟ ಅನುಕಂಪ ಅಥವಾ ಸೌಜನ್ಯಕ್ಕಾಗಿ ತಂಗಿಯ ಮದುವೆಗೆ ಹೋಗಲು ಅನುಮತಿಸಲಿಲ್ಲ. ಅಣ್ಣನ ಮಗನ ಲಗ್ನಕ್ಕೂ ಹೋಗಲಾಗಲಿಲ್ಲ. ಅಂತಹ ಕರಾಳ ದಿನಗಳಲ್ಲಿ ದೇಸಾಯಿ ಅವರು, ಇಡೀ ರಾಜ್ಯದಲ್ಲಿ ಹೆಚ್ಚಿನ ಶಿಕ್ಷೆಗೊಳಪಟ್ಟಿದ್ದಾರೆ. ಡಿಫೆನ್ಸ್ ಆಫ್ ಇಂಡಿಯಾದೊಳಗೆ ದೇಸಾಯಿ ಅವರು 6 ತಿಂಗಳ ಶಿಕ್ಷೆ ಅನುಭವಿಸಿದ್ದು ಇವರೇ ಮೊದಲಿಗರು. ಗುಲಬರ್ಗಾದಲ್ಲಿ ಸತ್ಯಾಗ್ರಹ ಏನೆಂದೇ ಗೊತ್ತಿಲ್ಲದ ಸಂದರ್ಭದಲ್ಲಿ ಸತ್ಯಾಗ್ರಹ ನಡೆಸಿ. ತೀವ್ರ ಚಳುವಳಿ ಶುರು ಮಾಡಿ ಪ್ರಚಾರ ಮಾಡಿದ್ದರು. ವಿಶ್ವನಾಥ ಪಾಟೀಲ್ ಹೆಬ್ಬಾಳ, ಬಸಯ್ಯ ಗುತ್ತೇದಾರ್ ಚಿಂಚೋಳಿ, ಅನಂತ ಶಮರ್ಾ, ಅಶೋಕ ಪಾಟೀಲ, ವೆಂಕಟೇಶ ಗುರುನಾಯಕ, ಲಕ್ಷ್ಮಣ ದೊಂದೆ ಯಾದಗಿರಿ, ಜಯಾಚಾರ್, ಸಿದ್ದಣ್ಣ ವಕೀಲ, ಡಾ.ದರಭಂಜನ್, ಸಿಂಘಟಾಲು ಕೊಪ್ಪಳ ಚಳುವಳಿಯಲ್ಲಿ ಭಾಗವಹಿಸಿದ ಪ್ರಮುಖರಾಗಿದ್ದರು. ಮಾಜಿ ಸಂಸದ ಡಾ.ಬಿ.ಜಿ.ಜವಳಿಯವರ ಅಣ್ಣ ಶಿವಶರಣಪ್ಪ ಜವಳಿ, ಹಣಮಂತಪ್ಪ ಜಂಬಗಿ, ಮನೋಹರ ಧಮ್ಮೂರ್ ಮುಂತಾದವರು ಸೇರಿಕೊಂಡಿದ್ದರು.
ತುತರ್ು ಪರಿಸ್ಥಿತಿಯನ್ನು ವಿರೋಧಿಸಿದ್ದ ಜೆ.ಎಚ್.ಪಟೇಲ್, ಗಣೇಶ ಬೀಡಿಯ ಮಾಲೀಕ ಆನಂದರಾವ ಅವರನ್ನು ಕೂಡ ದೇಸಾಯಿಯವರಿದ್ದ ಜೈಲಿಗೆ ಕರೆತರಲಾಗಿತ್ತು. ಸಮಾಜವಾದಿ ಪಕ್ಷ ಸಕ್ರಿಯ ಕಾರ್ಯಕರ್ತರಾಗಿದ್ದ ದೇಸಾಯಿ, ಪಕ್ಷದ ಆದೇಶ ಹಾಗೂ ಸ್ಪೂರ್ತಿಯಿಂದ ಸತ್ಯಾಗ್ರಹ ಆರಂಭಿಸಿದ್ದರು. ಅನೇಕ ಸಂದರ್ಭಗಳಲ್ಲಿ ಪತ್ನಿ ಸರಿತಾ ದೇಸಾಯಿ ಕುಸುಮಾಕರ ಅವರಿಗೆ ಸಹಕರಿಸಿದ್ದಾರೆ. ಕರಾಳ ದಿನಗಳ ನಂತರವೂ ದೇಸಾಯಿ ಅವರು ಹೊರಗಡೆ ಬರುತ್ತಾರೆ ಎಂಬ ನಂಬಿಕೆಯಿರಲಿಲ್ಲ. ಸಂಜಯಗಾಂಧಿ ಮತ್ತು ಇಂದಿರಾಗಾಂಧಿ ಅವರನ್ನೇ ಹೊಗಳಬೇಕು. ಇವರ ಹೊರತು ಇನ್ನ್ಯಾರ ಬಗ್ಗೆಯೂ ಮಾತಾಡುವ ಸ್ಥಿತಿಯಿರಲಿಲ್ಲ.
ಲಂಡನ್ನಿಂದ ಹೊರಡುತ್ತಿದ್ದ `ಸ್ವರಾಜ್’ ಪತ್ರಿಕೆ ಭಾರತದಲ್ಲಿ ಕೇವಲ ಒಂದು ಸಾವಿರ ಜನಕ್ಕೆ ತಲುಪುತ್ತಿದ್ದವು. ಅದರಲ್ಲಿ ಕುಸುಮಾಕರ ದೇಸಾಯಿ ಕೂಡ ಒಬ್ಬರು. ಸ್ವರಾಜ್ ಪತ್ರಿಕೆಯು ಸಮಾಜವಾದಿ ಪಕ್ಷ ಹೊರಡಿಸುತ್ತಿದ್ದ ತುತರ್ು ಪರಿಸ್ಥಿತಿ ವಿರುದ್ಧ ಲೇಖನಗಳನ್ನು ಪ್ರಕಟಿಸುತ್ತಿತ್ತು. ಗುಪ್ತವಾಗಿ ರವಾನಿಸಲಾಗುತ್ತಿದ್ದ 40 ರೂ. ಬೆಲೆಯಿದ್ದ ಆ ಪತ್ರಿಕೆ ಬಗ್ಗೆ ಹಾಗೂ ಅದರ ಪ್ರಸಾರದ ಬಗ್ಗೆ ಕುಲದೀಪ್ ನಯ್ಯರ್ ತಮ್ಮ `ಜಡ್ಜ್ಮೆಂಟ್’ ಎಂಬ ಕೃತಿಯಲ್ಲಿ ಬರೆದಿದ್ದಾರೆ. ಕುಸುಮಾಕರ ದೇಸಾಯಿ ತುರ್ತು ಪರಿಸ್ಥಿತಿ ಅತಿರೇಕಗಳಿಗೆ ಸವಾಲಾಗಿದ್ದರು. ಅಜಾನುಬಾಹು ಶರೀರ ಚಳುವಳಿಯ ನಾಯಕತ್ವಕ್ಕೆ ಹೇಳಿಮಾಡಿಸಿದಂತಿತ್ತು. ತುರ್ತು ಪರಿಸ್ಥಿತಿ ಕರಾಳ ನೆನಪಿಗೆ ಬೆಳ್ಳಿಹಬ್ಬದ ಸಂದರ್ಭದಲ್ಲಿ ಕುಸುಮಾರ ದೇಸಾಯಿ ಹಾಗೂ ಸರಿತಾ ದೇಸಾಯಿ ಅವರನ್ನು ಸಂದರ್ಶನ ಮಾಡುವಾಗ, ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದರು. ದೇಸಾಯಿ ದಂಪತಿಗಳು ಈಗಿಲ್ಲ. ಆದರೆ, ಆವತ್ತು ನೆನಪು ಮಾಡಿಕೊಂಡ ಇತಿಹಾಸದ ಕಪ್ಪು ಚುಕ್ಕೆಯಾದ ತುರ್ತು ಪರಿಸ್ಥಿತಿಯ ನೆನಪಿದು.






fine write up!.
thnx
fine