ಕುಸುಮವೆಂದರೆ ಅದು ದಾಸವಾಳ ಮಾತ್ರ.

ಪುಷ್ಪರಗಳೆ

ಪ್ರೊ. ಚಂದ್ರಶೇಖರ ಹೆಗಡೆ

ಒಂದು ಶುಭೋದಯ ಹಚ್ಚಹಸಿರನ್ನುಟ್ಟು ನನ್ನನ್ನೂ ದಾಟಿ ಮುಗಿಲಿನತ್ತ ಕೈಚಾಚಿ ನಿಂತಿರುವ ಕೊಂಬೆಯಲ್ಲರಳಿದ ದಾಸವಾಳದೊಂದಿಗೆ ಮಾತಿಗಿಳಿದೆ. ದಕ್ಷಿಣ ಕೊರಿಯಾ ಹಾಗೂ ಮಲೇಷಿಯಾದಲ್ಲಿ ಇದರ ಸಹೋದರರು ರಾಷ್ಟ್ರೀಯ ಪುಷ್ಪವಾಗಿ ಸ್ಥಾನ ಪಡೆದಿರುವ ಮಾಹಿತಿಯನ್ನು ಎಲ್ಲೋ ಓದಿದ್ದ ನನಗೆ ಮೊನ್ನೆ ತಾನೇ ಜಗತ್ತು ಆಚರಿಸಿದ ವಿಶ್ವ ಸಹೋದರ ಸಹೋದರಿಯರ ದಿನದ ವಿಶೇಷವಾಗಿ ಈ ಸಂಗತಿ ನೆನಪಾಗಿ ಮನೆಯಂಗಳದಲ್ಲಿ ಮಂದಹಾಸದ ಮುಖವರಳಿಸಿಕೊಂಡು ತೂಗುತ್ತಿದ್ದ ದಾಸವಾಳಕ್ಕೆ ಶುಭಾಶಯಗಳನ್ನು ಸಲ್ಲಿಸಿದೆ‌. ಜೊತೆಗೆ ನೇಸರನ ಕಿರಣಗಳು ಇಳೆಗಿಳಿಯುವ ಈ ಶುಭೋದಯದ ಹೊತ್ತಿಗೆ, ದಾಸವಾಳದ ಬಹುಪಯೋಗದ ಸಂಗತಿಗಳೆಲ್ಲ ಒಟ್ಟಿಗೆ ಮನದುಂಬಿಯಂತೆ ದಾಳಿಯಿಟ್ಟು ಕಾಡಲಾರಂಭಿಸಿದವು. ಹೌದು. ಇದುವರೆಗೂ ದಾಸವಾಳವೆಂದರೆ ಒಂದೇ ಕೇಂದ್ರಬಿಂದುವಿನಿಂದ ಹೊರಭಾಗಕ್ಕೆ ಮೈಚಾಚಿಕೊಂಡು ಯೋಗವನ್ನಾಚರಿಸುತ್ತಿರುವ ಕೆಂಪೇರಿದ ಪಾಂಚಾಲಿಯರಂತೆ ಒಟ್ಟಿಗೇ ಹಿಂಬಾಗಿ ನಿಂತ ದಳಗಳಿಂದಲಕಂರಿಸಿಕೊಂಡ ಕಣ್ಮನ ಸೆಳೆಯುವ ಸುಂದರವಾದ ಹೂವೆಂದುಕೊಂಡು ಮನದುಂಬಿಕೊಳ್ಳುತ್ತಿದ್ದ ನನಗೆ, ಅದರ ಬಹುರೂಪಿ ಉಪಯೋಗಗಳನ್ನು ಮನದೊಳಗೆ ಮಥಿಸಿ ಮುನ್ನಲೆಗೆ ತಂದುಕೊಂಡಾಗ ಅಚ್ಚರಿಗೊಂಡೆ.

ಹರ್ಬಲ್ ಚಹಾದ ಒಂದಂಶವಾಗಿ ಬಳಸುವ ಇದರ ಸೌಂದರ್ಯದ ಕರಾಮತ್ತು ಜಗತ್ತಿನ ಬೇರಾವ ಹೂವಿಗೂ ಹೀಗೆ ಸುಲಭವಾಗಿ ದಕ್ಕಿರಲಾರದು. ಕೇಶಾಲಂಕಾರದ ಉತ್ಪನ್ನಗಳಲ್ಲಿಯೂ ದಾಸವಾಳದ ಮೆರಗು ಇರುತ್ತದೆಂದು ಕೇಳಿದ್ದೇನೆ. ರಾಧೆ ಹಾಗೂ ಸಖಿಯರ ಕೇಶರಾಶಿಯೆಲ್ಲಾ ಆದಿಶೇಷನ ಹಾಗೆ ಹೊಳೆದು, ಹಬ್ಬಿ, ಕೃಷ್ಣನನ್ನು ಸುತ್ತಿ ಸುಳಿದು ಸೆಳೆದುಕೊಳ್ಳುವುದಕ್ಕೆ ದ್ವಾಪರಯುಗದ ದಾಸವಾಳದ ಮದ್ಧೂ ಕಾರಣವಾಗಿರಲೇಬೇಕು ಎಂದೆನಿಸಿತು. ವಿಶ್ವದಾದ್ಯಂತ ವೈವಿಧ್ಯಮಯ ಸಿಹಿ ಖಾದ್ಯಗಳ ತಯಾರಿಕೆಯಲ್ಲಿಯೂ ದಾಸವಾಳವು ಬಳಕೆಯಾಗುತ್ತದೆಯೆಂದರೆ ಇದರ ವಿಶ್ವಾತ್ಮಕತೆಯನ್ನು ನಾವು ಗೌರವಿಸಲೇಬೇಕು. ಮನುಜಮತ ವಿಶ್ವಪಥ ಎಂಬ ತತ್ವವನ್ನು ಅಕ್ಷರಶಃ ಪಾಲಿಸಿದ ದಾಸವಾಳ ಈ ಭುವನದ ಭಾಗ್ಯವೆಂಬುದರಲ್ಲಿ ನನಗಂತೂ ಯಾವುದೇ ಸಂಶಯವಿಲ್ಲ.

ಸೂತ್ರರೂಪದ ಗಣಿತಬದ್ಧ ಪ್ರಮೇಯದಿಂದ ಸುತ್ತುವರೆದ ವೃತ್ತಾಕಾರದಲ್ಲಿ ವಿನ್ಯಾಸಗೊಂಡಂತಿರುವ ದಾಸವಾಳದ ದಳಗಳು ಹಾಗೂ ಮಧ್ಯದಲ್ಲೊಂದು ಪರಾಗರೇಣುಗಳನ್ನು ಜ್ಯೋತಿಗಳಂತೆ ಹೊತ್ತುನಿಂತ ದೀಪಸ್ತಂಭದ ಅನನ್ಯ ರಚನೆ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಇಂತಹ ಅಭಿಜಾತ ಪುಷ್ಪರಾಣಿಯ ಹಿಂದೆ ಭೃಂಗಗಳಿಲ್ಲದಿದ್ದರೆ ಹೇಗೆ ಅಲ್ಲವೇ? ದುಂಬಿಗಳಂತೂ ಈ ಹೂವಿನ ಸೌಂದರ್ಯಕ್ಕೆ ಮಾರುಹೋಗಿ ಹಾರಿಹೋಗುವುದನ್ನೇ ಮರೆತು ಇದರ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆಯೆಂದರೆ ಅಮಲನ್ನೇರಿಸುವ ಇದರ ಅಲಂಕಾರವ್ಯೂಹವನ್ನೊಮ್ಮೆ ಹೃದಯತುಂಬಿಕೊಳ್ಳಲೇಬೇಕು. ಕೆಂಪು, ಬಿಳಿಯಾದಿಯಾಗಿ ಹಲವಾರು ರಂಗುಗಳಿಂದ ಮನ ಸೆಳೆಯುವ ಇದರ ರೂಪಲಾವಣ್ಯವು ಹೂಗಳಲ್ಲಿಯೇ ಇದನ್ನು ಅನನ್ಯವಾಗಿಸಿದೆ. ಕಾಮನಬಿಲ್ಲಿನಿಂದ ವರ ಪಡೆದುಕೊಂಡ ಬಣ್ಣಗಳು ಸ್ವತಂತ್ರವಾಗಿ ದಾಸವಾಳದ ರೂಪವಾಗಿ ಮೈವೆತ್ತಂತಿರುವ ಇದರ ಮಾದಕ ಲಾವಣ್ಯ ಅವರ್ಣನೀಯ. ಶಬ್ದಸೂತಕದ ಯಾವ ಸೌಂದರ್ಯ ಮೀಮಾಂಸೆಗೂ ನಿಲುಕದ ಇಂತಹ ಮನಮೋಹಕ ರೂಪಸಿ ದಾಸವಾಳವನ್ನು ಬಿಟ್ಟು, ಅಸಂಬದ್ಧವಾಗಿ ಪಕಳೆಗಳನ್ನು ಎಲ್ಲೆಂದರಲ್ಲಿ ಕೃತಕವಾಗಿ ಹೊಂದಿಸಿಕೊಂಡಂತಿದ್ದು, ತಾನೇ ಸುಂದರ ಜಗತ್ತಿ‌ನ ಮಹಾರಾಣಿಯೆಂಬ ಅಹಂಕಾರದ ಭ್ರಮೆಯಲ್ಲಿ ಮೆರೆಯುತ್ತಿರುವ ಗುಲಾಬಿಯನ್ನು ಕುಸುಮಗಳ ರಾಣಿಯೆಂದೇಕೆ ನಾಮಕರಣ ಮಾಡಿದರೋ ಅರ್ಥವಾಗುತ್ತಿಲ್ಲ!

ಸೂಕ್ಷ್ಮವಾಗಿ ಗಮನಿಸಿ ನೋಡಿ, ಅರಳಿದಾಗ ಗುಲಾಬಿ ಅಹಂಕಾರದಿಂದ ತಲೆಯೆತ್ತಿಕೊಂಡು ಮುಳ್ಳುಗಳ ಮಧ್ಯ ರಾಣಿಯಾಗಿ ಬೀಗಿದರೆ, ನವಿರನ್ನೇ ಮೈದುಂಬಿಕೊಂಡು ಅರಳಿದ ದಾಸವಾಳ ಟೊಂಗೆಯಲ್ಲಿಯೇ ಬಾಗಿ ಕುಳಿತು ರಸಿಕರನ್ನು “ಎನ್ನ ಪಾಡೆನಗಿರಲಿ ಅದರ ಸವಿಯನ್ನಷ್ಟೇ ಉಣಬಡಿಸುವೆ ನಿನಗೆ ರಸಿಕ” ಎಂದು ಬೇಂದ್ರೆಯವರ ಹಾಡನ್ನು ಹಾಡುತ್ತಲೇ ಕೈಬೀಸಿ ಆಹ್ವಾನಿಸುತ್ತದೆ. ಹೀಗೆ ಸ್ಥಾನದ ಅರ್ಹತೆಯಿದ್ದಾಗಲೂ ದಕ್ಕಿಸಿಕೊಳ್ಳಲಾಗದ ಮಹಾಭಾರತದ ದುರಂತ ನಾಯಕ ಕರ್ಣನಂತಿರುವ ಅಮಾಯಕ ದಾಸವಾಳದ ದುರದೃಷ್ಟವನ್ನು ನೆನೆದು ನಾನು ಹಳಹಳಸಿದ ಘಳಿಗೆಗಳಿಗೆ ಲೆಕ್ಕವಿಲ್ಲ; ಮೊರೆಯಿಟ್ಟು ಹಾಡಿದ ಭಾವಗೀತೆಗಳಿಗೆ ಎಣೆಯಿಲ್ಲ; ಪರಿತಪಿಸಿ ಶೂನ್ಯನಾದ ಕ್ಷಣಗಳಿಗೆ ಮಿತಿಯಿಲ್ಲ. ಹರಿಯ ಸೇವೆಗೈದ ದಾಸವರೇಣ್ಯರ ನಾಮವನ್ನೇ ತನ್ನ ಹೆಸರಿನ ಪೂರ್ವಾರ್ಧವನ್ನಾಗಿ ಆಯ್ದುಕೊಂಡಿರುವ ದಾಸವಾಳವು ಭಗವಂತನಿಗೆ ಹಾಗೂ ತನ್ನನ್ನು ಆರಾಧಿಸುವ ಹೃದಯವಂತರಿಗೆ ಸಲ್ಲಿಸುವ ಸೇವೆಯೂ ದಾಸರಷ್ಟೇ ಅನುಪಮವಾದದ್ದು.‌ ಭಗವಂತ ದಾಸನಾಗು ವಿಶೇಷನಾಗು ಎಂದು ಹಾಡಿ ದಾಸವಾಳವನ್ನೇ ಆಶೀರ್ವದಿಸಿ ಕಳುಹಿಸಿರಬೇಕು ಈ ಮರ್ತ್ಯಲೋಕಕ್ಕೆ. ಹಸಿರು ತೊಟ್ಟಿನ ಪಾತ್ರೆಯಲ್ಲಿ ಗರ್ಭದೊಳಗಿನ ಮಗುವಿನಂತೆ ಮೈಚಾಚಿಕೊಂಡು ಅರಳುವ ಈ Hibiscus ಹೂವಿನ ಮೋಹಕ ರಂಗನ್ನು ಕಂಡ ಚಿಟ್ಟೆಗಳು ಬೆಳಗಾಗುತ್ತಲೇ ಮುತ್ತಿ ಆ ದಿನದ ಪ್ರಥಮ ಚುಂಬನಗೈದು, ಗರ್ಭದೊಳಗಿರುವ ಮಧುವನ್ನು ಹೀರಿ ಹರ್ಷೋಲ್ಲಾಸದಲ್ಲಿ ತೇಲುವುದನ್ನು ನಾನು‌ ಕಂಡಿದ್ದೇನೆ. ಆಯುರ್ವೇದದ ಔಷಧಿಗಳಲ್ಲಿಯೂ ಬಳಕೆಯಾಗುವ ಇದರ ವೈದ್ಯಕೀಯ ಸೇವೆಗೆ ತಲೆದೂಗಿದ್ದೇನೆ.

ಹರಿಹರ ತನ್ನ ಪುಷ್ಪರಗಳೆಯಲ್ಲಿ ಪರಿಮಳದ ಹಬ್ಬವೇ ಬಾರ ಎಂದು ದವನದ ಹೂವನ್ನು ಕರೆಯುವಂತೆ ಬೆಳಗಾಗೆದ್ದು ನಾನು ದಾಸವಾಳವನ್ನು ಕುರಿತು ಹಾಡಬೇಕೆನ್ನಿಸುತ್ತದೆ. ಮನೆಯಂಗಳದ ಉದ್ಯಾನವನದಲ್ಲಿ ಕಣ್ಣು ಕೋರೈಸುವ ಮಡಿಯನ್ನುಟ್ಟ ನಿತ್ಯ ಮಧುವಣಗಿತ್ತಿಯಂತೆ ನನ್ನನ್ನು ಸೆಳೆಯುವ ಈ ದಾಸವಾಳದಿಂದಾಗಿ ನನಗೂ, ನನ್ನನ್ನು ಹೆತ್ತ ಸಾಕಿಯ ಮಧ್ಯೆ ನಿತ್ಯ‌ವೂ ಕೋಳಿಜಗಳ. ನಿತ್ಯ ಸಂಭವಿಸುವ ಈ ಕುಸುಮಕಾರಣದ ಕದನದೊಳಗಿನ ಹೂರಣವನ್ನೊಮ್ಮೆ ಸವಿದುಬಿಡಿ- ಹೂವು ಸದಾ ಶಿವನ ಸಿರಿಮುಡಿಯಲ್ಲಿರಬೇಕು ಎಂಬ ಭಕ್ತಿಯ ಹರಕೆಯನ್ನು ಹೊತ್ತು ಆರಾಧಿಸುವ ಹರಿಹರನ ಮತ ನನ್ನ ಸಾಕಿಯದ್ದು. ಹಾಗಾದಾಗಲೇ ಹೂವಿಗೊಂದು ಸಾರ್ಥಕ ಮೋಕ್ಷ; ತನಗೆಂದೂ ಪರಮಾನಂದ ಎಂದು ನಂಬಿರುವವಳು ಸಾಕಿ. ಇದು ಆಕೆ ನಂಬಿದ ಭಕ್ತಿವಾದದ ನೆಲೆ. ಕುಸಮವೆಂದಿಗೂ ತನ್ನ ತಾಯಿಯ ಮಡಿಲಲ್ಲಿ‌‌ ಅರಳುವ ಶಿಶುವಿನಂತೆ ಗಿಡದಲ್ಲಿದ್ದೇ ಸಹೃದಯರನ್ನು ಸೆಳೆಯುವ ಅದರ ಮಂದಹಾಸವೇ ಎದೆಯೊಳಗೆ ಹುಟ್ಟುಹಾಕುವ ಅಮಿತಾನಂದದ ಸೆಲೆ ಎನ್ನುವುದು ನನ್ನ ನಿಸರ್ಗವಾದ. ಸಾಕಿಯ ಭಕ್ತಿವಾದ ಹಾಗೂ ನನ್ನ ನಿಸರ್ಗವಾದಗಳೆರಡೂ ಶುಭೋದಯದ ಉದ್ಯಾನವನದಲ್ಲಿ ಹೀಗೆ ಕದನಕ್ಕಿಳಿಯುವುದನ್ನು ತೂಗಾಡುತ್ತಲೇ ಕಣ್ತುಂಬಿಕೊಳ್ಳುತ್ತವೆ ಹತ್ತಿರದ ತರುಲತೆಯಲ್ಲರಳಿದ ದಾಸವಾಳದ ಸಹೋದರ ಸಹೋದರಿಯರು. ಮಧ್ಯಾಹ್ನ ಮಲ್ಲಿಗೆಯ ಲೀಲೆ, ದುಂಡುಮೊಲ್ಲೆಯ ಬಾಲೆ, ಪೇರು ಮುಖಿ, ಜಾಜಿ ಸಖಿ, ರಾಣಿ ಚೆಂಡು, ಕಣಗಿಲೆ ದುಂಡು, ಬ್ರಹ್ಮಕಮಲದೆಸಳು, ಮಾವಿನೆಲೆಯ ಚಿಗುರು ಹೋಳು, ಹಚ್ಚ ಹಸಿರು ಸೀತೆ, ಅಚ್ಚ ನೀಲ ವನಿತೆಯರೆಲ್ಲರೂ ಈ ಕದನ ವಿದ್ಯಮಾನವನ್ನೆಲ್ಲಾ ಕಣ್ತುಂಬಿಕೊಂಡು ಕೂಡಿ ನಗುವ‌ ರಂಗದ ನಾಟಕೀಯತೆಯೇ ಮನೆಯಂಗಳದಲ್ಲಿ ಹಬ್ಬವಾಗಿ ನೆರೆದುಬಿಡುತ್ತದೆ.  ಕೊನೆಗೆ ತನ್ನತ್ತ ಕೈನೀಡಿದ ಸಾಕಿಗೆ ಶಿರಬಾಗಿ ತನ್ನ ಹೂವನ್ನು ಸಮರ್ಪಿಸಿ ಅವಳ ಭಕ್ತಿವಾದವನ್ನೇ ಗೆಲ್ಲಿಸುವ ದಾಸವಾಳದ ಔದಾರ್ಯ ಗುಣವನ್ನು ಕಂಡು ಕಣ್ಣೀರಾಗಿದ್ದೇನೆ ಕೆಲವೊಮ್ಮೆ. ಮೇಲ್ನೋಟಕ್ಕೆ ಪ್ರಕೃತಿ ಹಾಗೂ ಭಗವಂತ ಎಂಬ ದ್ವೈತಗಳ ಮಧ್ಯದ ತೊಳಲಾಟದ ಯುದ್ಧವೆಂಬಂತೆ ಕಾಣುವ ಈ ಜಗಳದಲ್ಲಿ, ಸಾಕಿಯ  ಭಕ್ತಿವಾದವೇ ಅಂತಿಮವಾಗಿ ಮೇಲುಗೈ ಪಡೆಯುತ್ತದೆ. ಹರಿಹರನ ಸಾಮವೇದಿಯ ರಗಳೆಯಲ್ಲಿನ ಶ್ವಪಚದೇವನ ಶಿವಭಕ್ತಿಯ ಪರಿಯನ್ನು ನೆನೆದು, ಸಾಕಿಯ ಭಕ್ತಿಪರವಶತೆಯ ಮುಂದೆ ನಾನು ಸೋಲೊಪ್ಪಿಕೊಂಡು ಬಿಡುತ್ತೇನೆ. ಆಗ ದ್ವೈತವೆಲ್ಲವೂ ಅದ್ವೈತವಾಗಿ ಪ್ರಕೃತಿ ಹಾಗೂ ಭಗವಂತನ ನಡುವಿನ ಭಿನ್ನತೆಯ ಗೆರೆ ಅಳಿದುಹೋದಂತಾಗಿ,

ಜಗಹೃದಯ ಆನಂದಮಯವಾಗಿ‌ ಕಾಣಲಾರಂಭಿಸಿತು. ಹೀಗೆ ನನ್ನ ನಿಸರ್ಗವಾದದ ಸೋಲಿನಲ್ಲಿಯೂ, ಆತ್ಮಿಕ ಗೆಲುವನ್ನು ಕಂಡು, ತನ್ನ ಸಿರಿಮುಡಿಯನ್ನು ಸಾಕಿ ತಂದು ಅರ್ಪಿಸಿದ ದಾಸವಾಳದಿಂದಲಂಕರಿಸಿಕೊಂಡ ಶಿವನನ್ನು, ಸಾಕಿಯೊಡನೆ ಹೃದಯದುಂಬಿ ಆರಾಧಿಸುವ ಹಾದಿಯನ್ನೀಗ ಕಂಡುಕೊಂಡಿದ್ದೇನೆ.

ಜನಪದದಲ್ಲಿ “ಆನೆ ಬದುಕಿದ್ದರೂ ಲಾಭ, ಸತ್ತರೂ ಲಾಭ” ಎಂಬ ನಾಣ್ಣುಡಿಯೊಂದಿದೆ. ಇದನ್ನು “ದಾಸವಾಳ ಅರಳಿದ್ದರೂ ಲಾಭ. ಒಣಗಿದ್ದರೂ ಲಾಭ” ಎಂದು ರೂಪಾಂತರ ಮಾಡಿ ಬದಲಾಯಿಸಿದರೆ ಹೇಗಾಗುತ್ತದೆಂಬುದನ್ನು ಹೇಳುತ್ತೇನೆ ಕೇಳಿ – ದಾಸವಾಳವೊಂದು ಅರಳಿದರೆ, ಸೌಂದರ್ಯ, ಔಷಧ, ಮನೆಮದ್ದು, ಕೇಶಾಲಂಕಾರ, ದೇವನಿಗರ್ಪಣೆ ಎಂದು ಬಗೆಬಗೆಯ ಲೀಲಾವಿಲಾಸವನ್ನುಂಟು ಮಾಡುವ ಕಲೆ ಒಂದೆಡೆಯಾದರೆ, ಒಣಗಿ ಮುರುಟಿದ ಹಾಳೆಯಂತಾಗಿ ಸಮಾಧಿ ಸೇರುವಾಗಲೂ ಆ ಅಮಾಯಕ ಕುಸುಮವು ಚಹಾ, ಕಷಾಯವಲ್ಲದೇ ಕೆಲವು ಸಿಹಿ ಖಾದ್ಯಗಳ‌ ಮಾದಕತೆಗೆ ಬಳಸಲ್ಪಡುವ ಬಲೆ ಮತ್ತೊಂದೆಡೆಗೆ. ಹೀಗೆ ದಾಸವಾಳವು ಇಹದಲ್ಲಿದ್ದಾಗಲೂ ಪರೋಪಕಾರಿ, ಪರದ ಪಯಣದಲ್ಲೂ ಜನಹಿತಕಾರಿ ಎಂಬುದನ್ನು ನೆನೆದಾಗ, ಸತ್ತ ನಂತರ ಒಂದಡಕೆಗೂ ಕೊಂಡುಕೊಳ್ಳದ ಮಾನವನ ದೇಹದ ನಶ್ವರತೆಯು ಕಣ್ಮುಂದೆ ಸುಳಿದು ಅಣಕವಾಡುತ್ತದೆ. ಹೆಸರಿಗೆ ತಕ್ಕ ಹಾಗೆ ದಾಸನಾಗಿ ಮಾನವ ಜನಾಂಗವನ್ನು ಉದ್ಧರಿಸಲು ಬಂದ ದೇವಲೋಕದ ಮತ್ತೊಂದು ಪಾರಿಜಾತವಾಗಿ, ದಾಸವಾಳದ ಪರಿಮಳ‌ ನನ್ನ ಹೃನ್ಮನಗಳನ್ನು ಇದ್ದಕ್ಕಿದ್ದ ಹಾಗೆಯೇ ತುಂಬಿಕೊಂಡು ತಾಂಡವವಾಡಲಾರಂಭಿಸುತ್ತದೆ.

“ವಚನದಲ್ಲಿ ನಾಮಾಮೃತ ತುಂಬಿ

ನಯನದಲ್ಲಿ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕಿವಿಯಲ್ಲಿ ಕೀರುತಿ ತುಂಬಿ…
ಎಂಬ ಬಸವ ವಚನದ ಸಾಲುಗಳು‌ ದಾಸವಾಳವನ್ನು ಹತ್ತಿರದಿಂದ ಭೇಟಿಯಾದಾಗಲೆಲ್ಲಾ ನನ್ನ ಮನದಲ್ಲಿ ಅನುರಣಿಸುತ್ತಲೇ ಇರುತ್ತವೆ. ಈ ಕುಸುಮದ ಮೃದು ಮಧುರ ನವಿರಾದ ಅಲರುಗಳ ಸ್ಪರ್ಶ ಹೃದಯವನ್ನು ಆರ್ದ್ರಗೊಳಿಸುತ್ತದಲ್ಲದೇ ಈ ಮಹದಾನಂದ ನನ್ನ ಪ್ರಬಂಧ ಬದುಕಿನ ಲಯಕ್ಕೆ ಹೀಗೆ ಬಾಹ್ಯದಲ್ಲಿ ಕೇಳದ ಆಲಾಪವಾಗಿ ಬಿಡಬಲ್ಲದು. ಕೆಲವೊಮ್ಮೆ ಅಂತರಂಗದ ಭಾವ ಹಾಡಾಗಿ ಹೊಮ್ಮುವುದಕ್ಕೂ ಕಾರಣವಾಗಬಲ್ಲದು. ಪ್ರಕೃತಿಯೊಂದಿಗಿನ ನನ್ನ ಅಮರ ಪ್ರೇಮದ ರೂಪಕವಾಗಿ ನನ್ನದೆಯೊಳಗೆ ಗುಲ್ಲೆಬ್ಬಿಸಿ ಅಧಿಕೃತತೆಯ ಮೊಹರನ್ನೊತ್ತುವ ಗುಲ್ ಮೊಹರ್ ಎಂದರೆ ಅದು ದಾಸವಾಳವೇ‌. ಅವಳ ಮೋಹಕ ಸೊಬಗು ಪ್ರಕೃತಿಯ ಲಾವಣ್ಯಕ್ಕೊಂದು ಮುಕುಟವಿದ್ದಂತೆ. ಭೂತಾಯಿಯ ಮುಡಿಗೊಂದು ಸಹಜ ಅಲಂಕಾರವಿದ್ದಂತೆ. ಏಕೆಂದರೆ ಅವಳ ಸೌಂದರ್ಯದಲ್ಲಿ ಆಧ್ಯಾತ್ಮಿಕ ಆನಂದವಿದೆ‌; ಅಲೌಕಿಕ ಪ್ರೇಮದ ನದಿಯ ಹರಿವಿದೆ; ಕರೆದೊಯ್ದು ಜಗತ್ತನ್ನು ಮರೆಸುವ ವಶೀಕರಣವಿದೆ; ಆಲಾಪಿಸಿ ತೇಲಿಸಿಬಿಡುವ ಆತ್ಮಧ್ಯಾನದ ಬೇರುಗಳಿವೆ; ಉಸಿರನ್ನೇ ಮರೆಸುವ ತಾದಾತ್ಮ್ಯವಿದೆ.ಪುಷ್ಪಗಳಿಗೆಲ್ಲಾ ಮಹಾರಾಣಿಯಂತಿರುವ ದಾಸವಾಳದಾಕೆಯನ್ನು ಹೇಗೆ ಬಣ್ಣಿಸುವುದು? ದಾಸವಾಳದೊಂದಿಗಿನ ಗೆಳೆತನ ನನ್ನನ್ನು ಮಾತ್ರ ಹೀಗೆ ಸೆಳೆದಿಲ್ಲ ಬದಲಾಗಿ ನನ್ನ ಮನೆಗೆ ಬರುವ ಮೊಸರಿನಾಕೆಯನ್ನೂ ತನ್ನ ಮೋಹಪಾಶದೊಳಗೆ ಬಂಧಿಸಿದೆ. ಆ ಕತೆಯನ್ನೊಮ್ಮೆ ಕೇಳಿಬಿಡಿ- ಮಾಸ್ತಿಯವರ ಕತೆಯಲ್ಲಿ ಬರುವ ಮೊಸರಿನ ಮಂಗಮ್ಮನಂತಹ ಹೆಣ್ಣಮಗಳೊಬ್ಬಳು ನಮ್ಮ ಮನೆಗೆ ಮೊಸರನ್ನು ತಂದುಕೊಡುತ್ತಿದ್ದ ಸಮಯ ಪ್ರಾತಃಕಾಲ ೪ ಗಂಟೆಯೆಂದರೆ ವಿಸ್ಮಯಪಡದಿರಿ. ಮೊಸರಿನ ಯಲ್ಲಮ್ಮನ ಬೆಳಗು ಪ್ರಾರಂಭವಾಗುವುದೇ ಹೀಗೆ ಮೊಸರಿನ ಮದವನ್ನು ಮನೆ ಮನೆಗೆ ಹಂಚುವುದರಿಂದ. ನಾವೆಲ್ಲರೂ ನಸುಕಿನ ಸಕ್ಕರೆಯ ಸಿಹಿಯಮೃತದ ನಿದ್ದೆಯಲ್ಲಿರುವಾಗಲೇ ಮೊಸರನ್ನು ಹಂಚಿ, ಕನಸಿನಲ್ಲಿಯೇ ಸಕ್ಕರೆ ಹಾಗೂ ಮೊಸರುಗಳ ಮಾಧುರ್ಯದ ರಸಾಯನವನ್ನು ಉಣಬಡಿಸಿದಂತಹ ಅನುಭಾವ ಹೊತ್ತ ನಮಗೆಲ್ಲಾ ಮೊಸರಿನ ಯಲ್ಲಮ್ಮನೆಂದರೆ ಮನೆಯಂಗಳದಲ್ಲಿ ಪ್ರತ್ಯಕ್ಷವಾಗಿ ದರ್ಶನ ನೀಡುವ ಅಚ್ಚುಮೆಚ್ಚಿನ ಪ್ರಾತಃಕಾಲದ ದೇವತೆ.ಜಗವು ಕಣ್ತೆರೆಯುವುದರೊಳಗಾಗಿ ನೆಲುವಿನಲ್ಲಿಟ್ಟ ಮೊಸರಿನ ಮಡಕೆ ತುಂಬಿ ತುಳುಕುತ್ತಿತ್ತು. ಮೊಸರಿನ ಕಂದಮ್ಮನನ್ನು‌ ಮಡಿಲಲ್ಲಿಟ್ಟುಕೊಂಡು, ತೂಗುಹಾಕಿದ ನಾರಿನ ನೆಲುವು ಮಾರ್ಜಾಲ ಬಯಕೆಗಳಿಂದ ಜತನದಿಂದ ಕಾಪಿಟ್ಟು ತೂಗುತ್ತಿತ್ತು. ಬೆಳಗಿನ ತಂಗಾಳಿ ಜೋಗುಳವನ್ನು ಹಾಡಿ ಮೊಸರು ಹುಳಿಯಾಗದಂತೆ ಅದರೊಳಗಿನ ಜೀವಾಣುಗಳನ್ನು ಮಲಗಿಸುತ್ತಿತ್ತು. ಮೊಸರಿನ ಮಡಕೆಯನ್ನು ಹೊತ್ತ ಈ ಮೊಸರಿನ ಯಲ್ಲಮ್ಮ ಯಾವ ಜನ್ಮದಲ್ಲಿ ರಾಧೆಯಾಗಿದ್ದಳೋ ಏನೋ. ಈಗ ಹೊತ್ತಲ್ಲದ ಹೊತ್ತಿಗೆ ಬೆಣ್ಣೆಯನ್ನು ಹುದುಗಿಸಿಟ್ಟುಕೊಂಡಿರುವ ಮೊಸರನ್ನು ಮಡಕೆಯಲ್ಲಿ ಸುರಿದು ತುಳುಕುವಂತೆ ಮಾಡುತ್ತಿದ್ದಳು. ಹೌದು. ಸವದತ್ತಿ ಯಲ್ಲಮ್ಮ, ರಾಧೆ ಇಬ್ಬರ ಮಧ್ಯೆ ಅದೆಂತಹ ಭಿನ್ನತೆಯಲ್ಲವೇ? ದೇವತೆಗಳ ಹೆಸರಿನಲ್ಲಷ್ಟೇ ದ್ವೈತ. ಸ್ವರೂಪದಲ್ಲಿ ಮಾತ್ರ ಗಗನ, ಭುವಿಗಳ ದಿಗಂತದಾಚೆಯ ಏಕತೆ. ಹೀಗೆ ಮನೆ-ಮನಗಳನ್ನೆಲ್ಲಾ ಆವರಿಸಿ ವ್ಯಾಪಿಸಿಕೊಂಡಿರುವ ಈ ಮೊಸರಿನ ಯಲ್ಲಮ್ಮ ಹಾಗೂ ನನ್ನ ಮಧ್ಯೆ ದಾಸವಾಳ ಕಾರಣದಿಂದಾಗಿ ಮುನಿಸೊಂದು ಹುಟ್ಟಿಕೊಂಡಿತು.ಆ ವೃತ್ತಾಂತವನ್ನು ಹೇಳುತ್ತೇನೆ ಕೇಳಿ- ಒಂದು ಬೆಳಗು ಗಿಡದ ಮುಂದೆ ನಿಂತು ಕಣ್ಣಾಡಿಸಿದೆ. ನಿತ್ಯ ನೆತ್ತಿಯ ಮೇಲೆ ಅಲಂಕರಿಸಿಕೊಳ್ಳುತ್ತಿದ್ದ ದಾಸವಾಳದ ಸುಳಿವೇ ಇರಲಿಲ್ಲ. ಸಾಕಿಯೇನಾದರೂ ಶಿವನಿಗರ್ಪಿಸಿರಬಹುದೆಂದು ಸುಮ್ಮನಾದೆ. ಮಾರನೇ ದಿನದ ಮುಂಜಾವು ಮತ್ತೆ ಗಿಡದ ಕೆನ್ನೆಯನ್ನು ಸವರಿ ಪುಷ್ಪಕ್ಕಾಗಿ ತಡಕಾಡಿದೆ. ಸುಗಂಧದ ಜಾಡೂ ಇಲ್ಲ. ಕುಸುಮದ ಹಾಡೂ ಇಲ್ಲ. ಎಲೆಗಳು ಅಲುಗಾಡಿ ಏನನ್ನೋ ಹೇಳುತ್ತಿರುವಂತೆ ಭಾಸವಾದರೂ ನಾನು ಅಷ್ಟಾಗಿ ಕಿವಿಗೊಡಲಿಲ್ಲ. ಮರುದಿನ ಮತ್ತೆ ಬರಿದಾಗಿರುವ ಗಿಡದ ಮನವನ್ನೊಮ್ಮೆ ಮೂಸಿದೆ. ಎಲ್ಲವೂ ಅರ್ಥವಾಗಿ ಹೋಯಿತು. ನಿತ್ಯ ಬೆಳಗಿನ ಸೂರ್ಯನಾರಾಯಣನ ಮುಕುಟಕ್ಕೆಂದು ಮೈಯ್ಯರಳಿಸಿಕೊಂಡು ನಿಂತ ದಾಸವಾಳವು ಮೊಸರಿನ ಯಲ್ಲಮ್ಮಳನ್ನು ಅದೆಷ್ಟರ ಮಟ್ಟಿಗೆ ಸೆಳೆದಿತ್ತೆಂದರೆ, ಮೊಸರನ್ನು ಮಡಕೆಯೊಳಗೆ ಸುರಿದವಳೇ, ಹೂವಿನ ಕುತ್ತಿಗೆಯನ್ನು ಹಿಡಿದು  ಕಿತ್ತುಕೊಂಡು ಭರಭರನೇ ಹೊರಟು ಹೋಗುತ್ತಿದ್ದಳು. ಪತ್ತೇದಾರಿಕೆಯ ತನಿಖೆಯಿಂದ ಹೊರಬಿದ್ದ ಈ ಅಚ್ಚರಿಯ ಸಂಗತಿಯಿಂದಾಗಿ, ಆ ಮೊಸರಿನ ಯಲ್ಲಮ್ಮಳಿಗೂ ಹಾಗೂ ನನಗೂ ಬಿಡಿಸಲಾಗದ ಶೀತಲ ಸಮರ ಬಹುಕಾಲ ಮುಂದುವರಿಯಿತು.

ಇಂದ್ರನ ನಂದನವನದಲ್ಲಿದ್ದ ಪಾರಿಜಾತವು ಮಾಧವ ಹಾಗೂ ಸತ್ಯಭಾಮೆಯರ ಮಧ್ಯೆ ಬಿರುಕನ್ನುಂಟು ಮಾಡಿದಂತೆ, ಈ ಮೊಸರಿನ ಯಲ್ಲಮ್ಮ ಹಾಗೂ ನನ್ನ ನಡುವಿನ ಶೀತಲಸಮರಕ್ಕೆ ಮನೆಯಂಗಳದ ದಾಸವಾಳ ಕಾರಣವಾಯಿತೆಂದರೆ ನೀವು ನಂಬಲೇಬೇಕು. ಬೆಳಗ್ಗೆ ನೇಸರನ ಕಿರಣಗಳ ಮಜ್ಜನದಿಂದಲೇ ಎಚ್ಚರಗೊಂಡು, ಅಪ್ರತಿಮ ಸೂರ್ಯವಂಶದವನೆಂದು ಬೀಗುತ್ತಿದ್ದ ನಾನು, ಈ ಶೀತಲ ಸಮರದಿಂದಾಗಿ ಪ್ರಾತಃಕಾಲದ ಕತ್ತಲೆಯಲ್ಲಿಯೇ ಬೆಳದಿಂಗಳ ತಂಪಿನಿಂದ ಕಣ್ದೆರೆಯುವ  ಚಂದ್ರವಂಶದವನಾಗಿ ಬದಲಾಗಿದ್ದೆ. ಯಲ್ಲಮ್ಮ ಹಾಗೂ ನನ್ನ ನಡುವಿನ ಈ ಶೀತಲ ಕುರುಕ್ಷೇತ್ರ ಯುದ್ಧ ಕೊನೆಗೊಂಡಿದ್ದು ಒಂದು ದುರಂತ ಸನ್ನಿವೇಶದಲ್ಲಿ. ಆ ಒಂದು ಮುಂಜಾವು ಮೊಸರಿನ ಮಡಕೆ ಬರಿದಾಗಿತ್ತು. ತಂಗಾಳಿಯೂ ತೆಪ್ಪಗಾಗಿತ್ತು. ಹೊತ್ತೇರಿದಂತೆ ಆಘಾತದ ಸುದ್ದಿಯೊಂದು ನಮ್ಮ ಮನೆಯನ್ನು ತಲುಪಿತ್ತು. ಮೊಸರಿನ ಯಲ್ಲಮ್ಮ ತೀರಿಹೋದಳು ಎಂಬ ಸಂಗತಿಯನ್ನು ಕೇಳಿ ಮರುಕಪಟ್ಟೆ. ಆ ದಿನ ಗಿಡದಲ್ಲರಳಿದ್ದ ದಾಸವಾಳದ ಮುಂದೆ ನಿಂತು  ಪ್ರಾರ್ಥಿಸಿದವನೇ ದುಃಖಿಸಿ ಪಶ್ಚಾತ್ತಾಪಪಟ್ಟೆ. ನನ್ನೊಂದಿಗೆ ದಾಸವಾಳವೂ ಅಂದು ಕಣ್ಣೀರು ಹಾಕಿದಂತೆನಿಸಿತು. ಅದರ ಕೆಂಬಣ್ಣ ಶೋಕದ ಸಂಕೇತವೆಂಬಂತೆ ಕಪ್ಪಾಗಿತ್ತು. ಹೀಗೆ ದಾಸವಾಳದಲ್ಲಿ ನಗುವಿದೆ; ಸಂತೋಷ, ಉಲ್ಲಾಸಗಳ ಸಮಾಗಮವಿದೆ;  ಸುಗಂಧದ ಆಹ್ಲಾದವಿದೆ; ದುಃಖ, ಕದನ, ಮುನಿಸುಗಳ ಸಂಕಥನವಿದೆ. ಇವೆಲ್ಲವುಗಳನ್ನೂ ಒಟ್ಟಿಗೇ ನನಗೆ ದಯಪಾಲಿಸದ ಪವಿತ್ರ ಕುಸುಮವೆಂದರೆ ಅದು ದಾಸವಾಳ ಮಾತ್ರ.

‍ಲೇಖಕರು nalike

August 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ತುಂಬಾ ಲಾಲಿತ್ಯದಿಂದ ಕೂಡಿದ ಲಲಿತ ಪ್ರಬಂಧ. ಇಷ್ಟವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: