ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುವೆಂಪು v/s ಮಾಸ್ತಿ

ತೀವ್ರ ಶ್ರದ್ಧೆ ಮತ್ತು ಅವಿವೇಕಗಳ ಮಧ್ಯೆ

g p basavaraju
ಜಿ.ಪಿ.ಬಸವರಾಜು

ಜಾತಿಮತ ಧರ್ಮಗಳು ಇವತ್ತಿಗೂ ನಮ್ಮಲ್ಲಿ ತೀರ ನಾಜೂಕಿನ ಸಂಗತಿಗಳಾಗಿವೆ. ಧರ್ಮದ ಹೆಸರಿನಲ್ಲಿ ಮಾತನಾಡುತ್ತಿರುವವರು ಅಥವಾ ಉಪದೇಶವನ್ನು ನೀಡುತ್ತಿರುವವರು ಬಹುಪಾಲು ‘ಹರಿಕಥೆ’ ದಾಸರಂತಾಗಿರುತ್ತಾರೆ. ಇಲ್ಲವೇ ಕಾವಿಯ ಸೋಗಿನಲ್ಲಿ ಸುಳ್ಳುಗಳನ್ನು ಹೆಣೆಯುತ್ತಿರುತ್ತಾರೆ. ಆವರ ನಡೆ, ನುಡಿ, ವಿಚಾರಗಳಿಗೆ ಯಾವುದೇ ಸಂಬಂಧ ಇರುವುದಿಲ್ಲ. ಧರ್ಮದ ಹೆಸರಿನಲ್ಲಿ ಅವರು ಮಾತನಾಡುತ್ತಿದ್ದರೂ, ಅದೆಲ್ಲ ಜಾತಿಯನ್ನು ಸುತ್ತುವರಿದ ವಿಚಾರಗಳೇ ಆಗಿರುತ್ತವೆ; ಜಾತಿಯ ಜನರನ್ನು ಒಂದುಮಾಡುವ, ಜಾತಿಯನ್ನು ರಾಜಕೀಯ ಬಲವಾಗಿ ರೂಪಿಸುವ ಹುನ್ನಾರಗಳೇ ಅಲ್ಲಿ ಹೆಚ್ಚು ಕೆಲಸಮಾಡುತ್ತಿರುತ್ತವೆ.

ಹೀಗಾಗಿ ಜನ ಸಮುದಾಯ ಕೂಡಾ ಜಾತಿ ಧರ್ಮಗಳ ಚೌಕಟ್ಟಿನ ಆಚೆಗೆ ಚಿಂತಿಸುವ ಗೋಜಿಗೇ ಹೋಗುವುದಿಲ್ಲ. ಅಂಥ ಶಕ್ತಿಯನ್ನೂ ಅದು ಕುಗ್ಗಿಸಿಕೊಂಡಿರುವಂತೆ ಕಾಣುತ್ತದೆ. ನಿಜಕ್ಕೂ ಈ ಜಾತಿಮತಧರ್ಮಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಎಷ್ಟು ಪ್ರಯೋಜನಕಾರಿಯಾಗಿವೆ? ಜಾತಿ ಮತಧರ್ಮಗಳು ಯಾಕೆ ತೀರ ನಾಜೂಕಿನ ಸಂಗತಿಗಳಾಗಿ ನಮ್ಮ ಸಮಾಜವನ್ನು ಆಳುತ್ತಿವೆ?-ಇಂಥ ಪ್ರಶ್ನೆಗಳನ್ನು ಕೇಳುವವರೇ ಇಲ್ಲವಾದ ಸನ್ನಿವೇಶದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ.

singing pencilಜಾತಿಮತ ಧರ್ಮಗಳು ಒಡ್ಡುತ್ತಿರುವ ಅಪಾಯದ ಬಗ್ಗೆ ಯಾರಾದರೂ ಧೈರ್ಯವಾಗಿ ಮಾತನಾಡಿದರೆ ಜನ ಸಿಟ್ಟಿಗೇಳುತ್ತಾರೆ; ಹಾಗೆ ಮಾತನಾಡಿದವರ ಮೇಲೆ ಹಲ್ಲೆಗಳು ನಡೆಯುತ್ತವೆ. ಮಾತನಾಡಿದವರನ್ನು ಕೊಂದ ಉದಾಹರಣೆಗಳೂ ನಮಗೆ ಸಿಕ್ಕುತ್ತವೆ. ಇವತ್ತು ಚಾಲ್ತಿಯಲ್ಲಿರುವ ಜೀವ ಬೆದರಿಕೆ, ಪೊಲೀಸ್ ಬೆಂಗಾವಲು ನಮ್ಮ ಸಮಾಜ ಕುಗ್ಗಿರುವ ರೀತಿಯನ್ನು ಹೇಳುತ್ತದೆ.

ಇತಿಹಾಸ ವಿಚಾರದಲ್ಲಿಯೂ ನಮ್ಮದು ಹೊಣೆಗೇಡಿತನದ ವರ್ತನೆ. ಇತಿಹಾಸವೂ ಮತಧರ್ಮ ಜಾತಿಗಳ ಜೊತೆಗೇ ತಳುಕುಹಾಕಿಕೊಂಡು, ಅಲ್ಲಿಯೂ ನ್ಯಾಯ ಸಮ್ಮತ ಸಂಗತಿಗಳನ್ನು ಹೇಳುವ ಸನ್ನಿವೇಶ ಇಲ್ಲದಂತಾಗಿದೆ. ಇತಿಹಾಸವನ್ನು ಅಧ್ಯಯನ ಮಾಡಿದವರು ತಾವು ಕಂಡ ಹೊಸ ‘ಸತ್ಯ’ಗಳನ್ನು ಹೇಳಲು, ಇತರರ ಜೊತೆ ಹಂಚಿಕೊಳ್ಳಲು ಹಿಂದುಮುಂದು ನೋಡಬೇಕಾಗಿದೆ. ನಮ್ಮ ದೊರೆಗಳು ಎಂಥವರಾಗಿದ್ದರು; ನಮ್ಮ ಸುಲ್ತಾನರು ಎಂಥ ಮನೋಧರ್ಮದವರಾಗಿದ್ದರು, ಜನತೆಯನ್ನು ಈ ದೊರೆಗಳೆಲ್ಲ ಹೇಗೆ ನೋಡಿಕೊಂಡರು ಇತ್ಯಾದಿ ಹಲವಾರು ಸಂಗತಿಗಳು ನಮ್ಮಲ್ಲಿ ಚರ್ಚಿತವಾಗುವುದಿಲ್ಲ. ಈಗಾಗಲೇ ಚಾಲ್ತಿಯಲ್ಲಿರುವ, ಜನ ನಂಬಿಕೊಂಡಿರುವ ಸಂಗತಿಗಳ ಸುತ್ತ ಮಾತನಾಡುವವನು ಹೆಚ್ಚು ಜನಪ್ರಿಯನಾಗಿ ಸಮುದಾಯದ ಗೌರವವನ್ನು ಪಡೆದುಕೊಳ್ಳುತ್ತಾನೆ. ಆಚೆಗೆ ನಿಂತು, ಹೊಸ ವಿಚಾರವನ್ನು ಕಂಡುಕೊಂಡ ವಿದ್ವಾಂಸ ಅದನ್ನು ಹೇಳಿದರೆ ಏಟು ತಿನ್ನುತ್ತಾನೆ. ಇದಿಷ್ಟೇ ಅಲ್ಲ, ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚುವ ಸಂಘಟನೆಗಳು, ಅದಕ್ಕೆ ಬೆಂಬಲವಾಗಿ ನಿಲ್ಲುವ ಸರ್ಕಾರಗಳನ್ನೂ ನಾವು ನೋಡುತ್ತಿದ್ದೇವೆ.

ಇದು ಇವತ್ತಿನ ವಿದ್ಯಮಾನ. ಹಲವಾರು ದಶಕಗಳ ವಿದ್ಯಮಾನವೂ ಇದೇ. ಗುಲಾಮಗಿರಿಯಿಂದ ನಾವು ಪಾರಾಗಿ ನಮ್ಮದೇ ರಾಷ್ಟ್ರವನ್ನು, ನಮ್ಮದೇ ಸಂವಿಧಾನವನ್ನು, ನಮ್ಮದೇ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದರೂ ಈ ವಿದ್ಯಮಾನದಲ್ಲಿ ಬದಲಾವಣೆಯಾಗಿಲ್ಲ. ಸಾಹಿತ್ಯ, ಕಲೆ, ತತ್ವಜ್ಞಾನ, ವಿಜ್ಞಾನ, ಸಂಸ್ಕೃತಿ ಹೀಗೆ ಎಲ್ಲದರಲ್ಲೂ ಮತಧರ್ಮಗಳು ನುಗ್ಗಿ ಎಲ್ಲಿಯೂ ಮುಕ್ತವಾದ ಮಾತುಕತೆ ನಡೆಯದಂತಾಗಿದೆ. ವ್ಯಕ್ತಿಯನ್ನು ಕುರಿತ ಮಾತು ಒಂದಿಷ್ಟು ಆಚೆಈಚೆ ನಡೆದರೆ ಅದು ಜಾತಿಯತ್ತ ತಿರುಗುತ್ತದೆ. ಸಾಹಿತ್ಯ, ಸಂಸ್ಕೃತಿ, ಬರಹಗಾರ, ಕಲಾವಿದ, ಚಿಂತಕ ಹೀಗೆ ಏನನ್ನೇ ಕುರಿತು ಮಾತನಾಡುವಾಗಲೂ ಅದು ಬಹು ಬೇಗ ತಿರುಗಿಕೊಳ್ಳುವುದು ಜಾತಿಮತ ಧರ್ಮಗಳ ಕಡೆಗೇ.

ಈ ಬೆಳವಣಿಗೆ ಇತ್ತೀಚಿನದೆಂದು, ಮೊದಲು ಎಲ್ಲವೂ ಸರಿಯಾಗಿತ್ತು ಎಂದು ಹೇಳುವವರೇ ಬಹಳ. ನಿಜಕ್ಕೂ ಹಿಂದೆ ಎಲ್ಲವೂ ಸರಿಯಾಗಿತ್ತೇ? ಒಂದು ಉದಾಹರಣೆಯನ್ನು ನೋಡಿ: 1944ರಲ್ಲಿ ಕುವೆಂಪು ಅವರ ನಾಟಕ ‘ಶೂದ್ರ ತಪಸ್ವಿ’ ಪ್ರಕಟವಾಯಿತು. ಈ ನಾಟಕದ ವಿಮರ್ಶೆಯನ್ನು ಮಾಸ್ತಿಯವರು ತಮ್ಮ ‘ಜೀವನ’ ಪತ್ರಿಕೆಯಲ್ಲಿ ಬರೆದರು. ಮೇಲು ನೋಟಕ್ಕೆ ಇದೊಂದು ವಿಮರ್ಶೆ, ಸಾಹಿತ್ಯ ವಿಮರ್ಶೆ. ಆದರೆ ಇದರ ಹಿಂದೆ ಬಲವಾಗಿ ನಿಂತದ್ದು ಮತಧರ್ಮ ವಿಚಾರವೇ.

ಶೂದ್ರನೊಬ್ಬ ತಪಸ್ಸು ಮಾಡಿದ ಕಾರಣಕ್ಕಾಗಿಯೆ ತನ್ನ ಮಗ ಸತ್ತಿದ್ದಾನೆಂದು ಹೇಳಿ, ಮಗನ ಶವದ ಜೊತೆ ರಾಮನ ಬಳಿಗೆ ಬಂದ ಬ್ರಾಹ್ಮಣ ನ್ಯಾಯ ದೊರಕಿಸಿಕೊಡಲು, ಆ ಮೂಲಕ ತನ್ನ ಮಗನನ್ನು ಬದುಕಿಸಿಕೊಡಲು ಕೇಳುತ್ತಾನೆ. ರಾಮ ಈ ಶೂದ್ರ ತಪಸ್ವಿ ಶಂಬೂಕನನ್ನು ಹುಡುಕಿಕೊಂಡು ಹೋಗಿ ಅವನ ತಲೆಯನ್ನು ಕಡಿಯುತ್ತಾನೆ. ಇದನ್ನು ದೇವತೆಗಳು ಮೆಚ್ಚುತ್ತಾರೆ. ಈ ಮೆಚ್ಚುಗೆಯ ಫಲವಾಗಿ ಬ್ರಾಹ್ಮಣನ ಮಗ ಬದುಕುತ್ತಾನೆ. ಶಂಬೂಕ ವಧೆ ವಾಲ್ಮೀಕಿ ರಾಮಾಯಣದಲ್ಲಿಯೇ ಇದೆ. ‘ಅಲ್ಪದೃಷ್ಟಿಯ ಕುಕವಿ ಕೃತವಾದ ಪ್ರಕ್ಷಿಪ್ತ’, ಇದು ಬಂದಳಿಕೆಯಂತೆ ಮಹಾಕವಿಯ ಕೃತಿಯಲ್ಲಿ ಸೇರಿದೆ ಎಂದು ಪರಿಭಾವಿಸಿರುವ ಕುವೆಂಪು, ಈ ‘ಕಸ’ವನ್ನು ಗುಡಿಸಿಹಾಕಿದಂತೆ ‘ಶೂದ್ರ ತಪಸ್ವಿ’ ನಾಟಕವನ್ನು ರಚಿಸಿದ್ದಾರೆ. ಶೂದ್ರ ತಪಸ್ವಿಯ ಮುನ್ನುಡಿಯಲ್ಲಿ ಕುವೆಂಪು ಅವರೇ ಈ ಎಲ್ಲ ಸಂಗತಿಗಳನ್ನು ಹೇಳಿಕೊಂಡಿದ್ದಾರೆ.

ಆದರೆ ಈ ನಾಟಕವನ್ನು ಕಟುವಾಗಿ ಟೀಕಿಸಿದ ಮಾಸ್ತಿ ಅವರು, (ವಾಲ್ಮೀಕಿಯ) ಉತ್ತರಕಾಂಡದ ಕಥೆಯಲ್ಲಿ ಪ್ರಕಟವಾಗುವ ಮನೋಧರ್ಮ ವರ್ಣವ್ಯವಸ್ಥೆಯನ್ನು ಕುರಿತ ಒಂದು ತೀವ್ರವಾದ ಶ್ರದ್ಧೆ. ಈ ಕಾವ್ಯದಲ್ಲಿ (ಶೂದ್ರ ತಪಸ್ವಿ) ಅದನ್ನು ಜಾತಿಗರ್ವಾಂಧತೆ ಎಂದು ವರ್ಣಿಸಿರುವುದು ಕಾಣುತ್ತದೆ.
ಇದಕ್ಕೆ ಕುವೆಂಪು ಬರೆದ ಉತ್ತರದಲ್ಲಿ ಹೀಗಿದೆ: ಅವಿವೇಕ ‘ತೀವ್ರವಾದ ಶ್ರದ್ಧೆಯಾದರೂ, ಅವಿವೇಕವಾಗಿಯೇ ನಿಲ್ಲುತ್ತದೆ. ಆದ್ದರಿಂದ ತನ್ನ ಶ್ರದ್ಧಾಂಶದಲ್ಲಿ ಅಲ್ಲದಿದ್ದರೂ ಅವಿವೇಕಾಂಶದಲ್ಲಿ ತಿದ್ದು ಪಡೆಯಬೇಕಾದುದೇ ಅತ್ಯಂತ ಅಗತ್ಯ.

ಇವತ್ತಿಗೂ ನಾವು ಶ್ರದ್ಧೆ ಮತ್ತು ಅವಿವೇಕಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. ಇವತ್ತಿನ ಸಮಾಜದಲ್ಲಿ ಶ್ರದ್ಧೆ ಕಡಿಮೆಯಾಗಿರುವುದು ಮತ್ತು ಅವಿವೇಕ ಹೆಚ್ಚಾಗಿರುವುದು ನಿಚ್ಚಳವಾಗಿ ಕಾಣಿಸುತ್ತದೆ. ಶ್ರದ್ಧೆ ಮತ್ತು ಅವಿವೇಕಗಳನ್ನು ಬೇರ್ಪಡಿಸಿ ನೋಡಲಾಗದ ಸಮಾಜ ಅವಿವೇಕವನ್ನು ಕಳೆದುಕೊಳ್ಳುವುದು ಕಷ್ಟ. ಕುವೆಂಪು ಅವಿವೇಕದ ಕಡೆಗೆ ಗಮನ ಸೆಳೆದು ಆರು ದಶಕಗಳು ಜಾರಿ ಹೋಗಿವೆ, ಈ ಕಾಲಾವಧಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ಆದರೆ ಈ ಬದಲಾವಣೆಗಳ ಹಿನ್ನೆಲೆಯಲ್ಲಿ ನಮ್ಮ ವಿವೇಕ ಸಂಪೂರ್ಣವಾಗಿ ಕ್ರಿಯಾಶೀಲವಾಗಿದೆ ಎಂದು ಹೇಳಲಾಗುವುದಿಲ್ಲ.

ಕುವೆಂಪು ಮತ್ತು ಮಾಸ್ತಿ ನಡುವಿನ ವೈಚಾರಿಕ ಸಂಘರ್ಷದಲ್ಲಿ ಇನ್ನೊಂದು ಮುಖ್ಯ ಸಂಗತಿಯೂ ಇರುವುದನ್ನು ನಾವು ಗಮನಿಸಬೇಕು. ಈ ವೈಚಾರಿಕ ತಿಕ್ಕಾಟ ನಡೆದದ್ದು, ಕನ್ನಡದ ಇಬ್ಬರು ಮುಖ್ಯ ಸಾಹಿತಿಗಳ, ಸಂಸ್ಕೃತಿ ಚಿಂತಕರ ಮಧ್ಯೆ. ಇವರಿಬ್ಬರೂ ಜ್ಞಾನಪೀಠ ಗೌರವವನ್ನು ಪಡೆದವರು. ಕನ್ನಡಿಗರ ಪ್ರೀತಿ-ಗೌರವಗಳನ್ನು ಪಡೆದುಕೊಂಡವರು. ಇಬ್ಬರ ತಿಳುವಳಿಕೆಯೂ ಆ ಕ್ಷೇತ್ರದಲ್ಲಿ ಎತ್ತರದ್ದು.

ಆದರೆ ಇವತ್ತು ಏನಾಗಿದೆ? ಸಾಹಿತ್ಯ ಮತ್ತು ಸಂಸ್ಕೃತಿಗಳ ವಿಚಾರದಲ್ಲಿ ಆ ಕ್ಷೇತ್ರದ ವಿದ್ವಾಂಸರೊಬ್ಬರು ಮಾತನಾಡಿದರೆ, ಅದಕ್ಕೆ ಉತ್ತರ ಕೊಡಲು ಮುಂದಾಗುವವರು ಜಾತಿಯ ಮುಖಂಡರಾಗಿರುತ್ತಾರೆ; ಇಲ್ಲವೇ ರಾಜಕೀಯ ಧುರೀಣರಾಗಿರುತ್ತಾರೆ. ಈ ವಿಚಾರದಲ್ಲಿ ಮಾತನಾಡಲು ತನ್ನ ಅರ್ಹತೆ ಏನು, ತಯಾರಿ ಏನು ಎಂದು ಕೇಳಿಕೊಳ್ಳುವ ಬದಲು ಸರ್ವಾಧಿಕಾರಿಗಳಂತೆ ಈ ಧುರೀಣರು ಮಾತನಾಡುತ್ತಾರೆ. ಈ ಮಾತೆಂದರೆ ಅದೊಂದು ಬೆದರಿಕೆ; ‘ಕ್ಷಮಾಪಣೆ ಕೇಳದಿದ್ದರೆ ನೋಡಿ’ ಎನ್ನುವ ಎಚ್ಚರಿಕೆ. ಅರ್ಹರು ಎನ್ನಬಹುದಾದ ಒಬ್ಬರೊ, ಇಬ್ಬರೊ ಮಾತನಾಡಲು ಮುಂದಾದರೆ, ಆ ಮಾತುಗಳು ಕೂಡಾ ವಿಚಾರಗಳನ್ನು ಹಂಚಿಕೊಳ್ಳಲು, ಹೊಸ ಎಚ್ಚರವನ್ನು ಸಮಾಜದಲ್ಲಿ ಮೂಡಿಸಲು ಎಡೆಮಾಡಿಕೊಡುವುದಿಲ್ಲ. ಆ ಮಾತುಗಳೂ ಬೆದರಿಕೆಯಂತೆಯೊ, ಇಲ್ಲವೇ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುವಂತೆಯೊ ಇರುತ್ತವೆ.

ಪ್ರತಿಯೊಂದು ಮಾತೂ ಜಾತಿಮತಗಳ ಕಡೆಗೆ, ಧರ್ಮದ ಕಡೆಗೇ ಹೊರಳಿ, ಸಾಹಿತ್ಯ, ಸಂಸ್ಕೃತಿ ಕುರಿತ ಚಿಂತನೆಗಳು ದಿಕ್ಕು ತಪ್ಪುತ್ತವೆ. ಜಾತಿ ಬಲದ ಮೇಲೆಯೇ ಸಂವಾದ ನಡೆಯುವುದೇನೋ ಎನ್ನುವ ಪರಿಸ್ಥಿತಿಯಲ್ಲಿ, ಅನಗತ್ಯ ಯುದ್ಧಕ್ಕೆ ಸಿದ್ಧರಿಲ್ಲದ ನಿಜವಾದ ಚಿಂತಕರು, ವಿದ್ವಾಂಸರು ಮೌನವಾಗಿ ಉಳಿದುಬಿಡುತ್ತಾರೆ. ಇದು ಒಟ್ಟಾರೆಯಾಗಿ ಸಮಾಜಕ್ಕೆ ಆಗುವ ಬಹುದೊಡ್ಡ ನಷ್ಟ. ಇದು ಹೀಗೆಯೇ ಮುಂದುವರಿದರೆ, ಜಾತಿ ಮತ ಧರ್ಮಗಳನ್ನು ಮೀರಿದ, ನಮ್ಮ ಸಂವಿಧಾನದ ಆಶಯಕ್ಕೆ ಸರಿಹೊಂದುವ ಸಮಾಜವನ್ನು ಕಟ್ಟುವುದು ಬಹಳ ಕಷ್ಟ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ನಮ್ಮ ಸಂವಿಧಾನದ ಆಶಯಗಳು ಹೀಗೆ ಹೀಗೆ ಎಂದು ಎಷ್ಟೇ ಜಂಭ ಕೊಚ್ಚಿಕೊಂಡರೂ, ನಿಜವಾದ ರಾಷ್ಟ್ರವನ್ನು ಕಟ್ಟುವುದು ಸಾಧ್ಯವಾಗುವುದಿಲ್ಲ. ಇದು ನಮಗೆಲ್ಲ ಅರ್ಥವಾಗಬೇಕು.

‍ಲೇಖಕರು admin

16 December, 2015

6 Comments

  1. ShreepadHegde

    ತುಂಬ ಸಮಯೋಚಿತವಾದ ಸಂಯಮದಿಂದ ಕೂಡಿದ ಎಲ್ಲರೂ ಚಿಂತಿಸಬೇಕಾದ ಬರಹ. ವಿವೇಕವನ್ನು ಕಳೆದುಕೊಂಡ ಮತಾಂಧರು ಕೆಲವರಾದರೂ ಓದಿ ತಮ್ಮನ್ನು ವಿಮರ್ಶಿಸಿಕೊಳ್ಳುವರೆಂದು ಆಶಿಸುವೆ.

  2. ಮುಗಿಯದ ಮೌನ- GKN

    ವಾಸ್ತವದ ಸಂದರ್ಭಕ್ಕೆ ಕನ್ನಡಿಯಂತೆ ನಿಲ್ಲುವ ಬರಹ, ಆಳದಲ್ಲಿ ಟೊಳ್ಳಾಗಿ , ಮೇಲ್ಮೈಯಲ್ಲಿ ತಳುಕುತ್ತಿರುವ ಎಲ್ಲರೂ ತಿಳಿದುಕೊಳ್ಳಬೇಕಾದ ಅರ್ಥಮಾಡಿಕೊಳ್ಳಬೇಕಾದ ಬರಹ ,

  3. KVTirumalesh

    ಬಸವರಾಜು
    ನಿಮ್ಮ ವಿಚಾರಧಾರೆ ಸರಿಯಾಗಿದೆ, ಸಮಯೋಚಿತವೂ ಆಗಿದೆ. ಮಾತೆಲ್ಲವೂ ಜಗಳಕ್ಕೆ ತಿರುಗುತ್ತದೆ ಎಂಬ ಕಾರಣಕ್ಕಾಗಿ ಹಲವರು ಸುಮ್ಮನೆ ಇದ್ದಾರೆ–ಶಬ್ದಮಾಲಿನ್ಯವನ್ನು ಹೆಚ್ಚಿಸುವುದು ಬೇಡ ಎಂದು. ಮೌನವು ಸಮ್ಮತಿಯೂ ಅಲ್ಲ, ವಿರೋಧವೂ ಅಲ್ಲ, ಹತಾಶೆಯಾಗಿದೆ.
    ಕೆ.ವಿ.ತಿರುಮಲೇಶ್

  4. ಲಲಿತಾ ಸಿದ್ಧಬಸವಯ್ಯ

    ಅನೇಕರ ಮನಸ್ಸಿಗೆ ದನಿಯಾಗಿದೆ ಲೇಖನ.
    ವಿತಂಡವಾದಗಳನ್ನೇ ಸಿದ್ಧಾಂತ ಎಂದು ಹೇಳುವವರ ನಡುವೆ ಆಡುವದಾದರೂ ಏನು ?

  5. HAJARAT ALI DEGINAL

    ಅಂದು ಮಾಸ್ತಿ ಮತ್ತು ಕುವೆಂಪು ಅವರ ನಡುವೆ ನಡೆದ ತಾತ್ವಿಕವಾದ ಸುಸಂಸ್ಕೃತವಾದ ವಾಗ್ವಾದಗಳು ಇಂದಿನ ನಮ್ಮ ದಿನಗಳಲ್ಲಿ ಏಕೆ ಸಾಧ್ಯವಾಗುತ್ತಿಲ್ಲವೆಂದು ವ್ಯಸನಪಡುವಂತಾಗಿದೆ.ಸಣ್ಣ-ಪುಟ್ಟ ಘಟನೆಗಳನ್ನು ದೊಡ್ಡದುಮಾಡಿ ಜಾತಿಧರ್ಮದೊಂದಿಗೆ ತಳಕುಹಾಕುವ ಒಂದು ಕೆಟ್ಟ ಚಾಳಿ ಇಂದು ನಮ್ಮ ಸಮಾಜವನ್ನು ಆವರಿಸಿಕೊಂಡಿರುವುದು ದುರಂತ

  6. M A Sriranga

    ಜಿ ಪಿ ಬಸವರಾಜು ಅವರಿಗೆ—-(೧)- ಸಿ ಪಿ ಕೆ ಅವರು ಬರೆದಿರುವ ‘ಮಹಾಕವಿಯೊಡನೆ ಮಾತುಕತೆ’ ಎಂಬ ಪುಟ್ಟ ಪುಸ್ತಕ (ಕುವೆಂಪು ಅವರ ಜೊತೆ ಸಿ ಪಿ ಕೆ ಅವರು ಆಗಾಗ ಮಾತಾಡಿದ್ದು) ತಾವು ಓದಿರಬಹುದು. ಅದನ್ನು ಓದಿದವರಿಗೆ ಬಹುಷಃ ತಮ್ಮ ಈ ಲೇಖನಕ್ಕೆ ವಿರುದ್ಧವಾದ ಇನ್ನೊಂದು ಮುಖವೂ ಕಾಣುವುದು ಅಪ್ರಸ್ತುತವಲ್ಲ ಎಂದು ಅನಿಸುತ್ತದೆ(೨). ಕುವೆಂಪು ಮಾಸ್ತಿ ಅವರ ವಾಗ್ವಾದ ನಡೆದ ಸಂದರ್ಭದಲ್ಲಿ ಇದ್ದ ಓದುಗರ ಸಂಖ್ಯೆ, ಪುಸ್ತಕಗಳು, ವಿದ್ಯಾಭ್ಯಾಸ,ಮಾಹಿತಿ ಇತ್ಯಾದಿಗಳೆಲ್ಲಾ ಈಗಿನ ಕಾಲಕ್ಕೆ ಹೋಲಿಸಿದರೆ ಮಿತವಾಗಿದ್ದವು. ಹೀಗಾಗಿ ಈಗ ವಿದ್ವಾಂಸರ ನಡುವಿನ ಚರ್ಚೆಗೆ ವಿದ್ವಾಂಸರೇ ಉತ್ತರಕೊಡಬೇಕು,ಮಾತಾಡಬೇಕು ಎಂಬ ನಿಲುವು ಸರಿಯೇ? ಇತರರು ಮಾತಾಡಿದಾಗ ಅವರು ಆಯಾ ಜಾತಿ ,ಮತದ ಮುಖಂಡರೆಂದೂ ಮತ್ತು ಸಾಹಿತ್ಯದಲ್ಲಾದರೆ ಪ್ರಗತಿಗಾಮಿ, ಪ್ರತಿಗಾಮಿ ಪಂಥ ಪಂಕ್ತಿಯವರೆಂದೂ ಉಭಯಪಕ್ಷಗಳಿಗೂ ಕಾಣುವುದು ಸಹಜವಾದ ವಿದ್ಯಮಾನವೇ. ಅಭಿವ್ಯಕ್ತಿ ಸ್ವಾತಂತ್ರ್ಯವಿರಬೇಕು ಎಂದು ಭಾವಿಸುವುದಾದರೆ ಅಂತಹ ವಿದ್ಯಮಾನವೂ ಅದರ ಜತೆಗೆ ಬರುತ್ತದೆ. ಬೇರೆ ದಾರಿ ಇಲ್ಲ. . (೩) ರಾಮಾಯಣದಲ್ಲಿ ಇಡೀ ಉತ್ತರಕಾಂಡವೇ ಪ್ರಕ್ಷಿಪ್ತ ಎಂದು ಕುವೆಂಪು ಮತ್ತು ಮಾಸ್ತಿ ಅವರ ಕಾಲದಲ್ಲೇ ವಿದ್ವಾಂಸರು ಅಭಿಪ್ರಾಯ ಹೊಂದಿದ್ದರು. ಹಾಗಾಗಿಯೇ ರಾಮಾಯಣದ ಪ್ರವಚನ ನಡೆಸುವಾಗ ಶ್ರೀರಾಮನ ಪಟ್ಟಾಭಿಷೇಕದ ತನಕ ಮಾತ್ರ ವಾಚನ ಮಾಡಿ ಮಂಗಳಾರತಿ ಮಾಡಿ ಮುಗಿಸುತ್ತಿದ್ದರು. ಈಗಲೂ ಆ ಪದ್ಧತಿ ಅನುಸರಿಸುತ್ತಿರುವವರು ಇದ್ದಾರೆ. (೪) ಮಾಸ್ತಿ ಅವರು ಶ್ರೇಷ್ಠ ಸಾಹಿತಿಗಳೂ,ಮಾನವೀಯ ಗುಣ ಸಂಪನ್ನರೂ ಆಗಿದ್ದರು ಎಂಬುದರಲ್ಲಿ ಸಂದೇಹವಿಲ್ಲ. ಹಾಗೆಂದು ಅವರಿಗೆ ಜಾತಿ, ಮತ, ವರ್ಣಾಶ್ರಮ ಇತ್ಯಾದಿಗಳ ಬಗ್ಗೆ -ಈಗ ನಮಗೆ ‘ಆ ಅಭಿಪ್ರಾಯ ಸರಿಯಲ್ಲವೇನೋ’ ಎಂದು ಅನಿಸುವಂತಹ ಅಭಿಪ್ರಾಯಗಳು ಇರಬಾರದಿತ್ತು ಎಂದು ನಾವುಗಳು ಭಾವಿಸುವುದು ತರವೇ? ,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading