ಮಲ್ಲಿಗೆ ಕಂಪನು ಎಲ್ಲೆಡೆಗೊಯ್ಯುವ ಮಂದ ಮಾರುತನು ಕಲಾವಿದ
ಕಾವ್ಯಾಮೃತವನು ನಾಡಿಗೆ ಹಂಚಲು ಬಂದ ಗಾರುಡಿಗ ಕಲಾವಿದ
-ಡಾ ಎಚ್ ಎಸ್ ವೆಂಕಟೇಶಮೂರ್ತಿ
“I am the postman between the poets and the listeners” ಅಂತ ಅಣ್ಣ ಯಾವಾಗ್ಲೂ ಹೇಳೋರು.
ಕವಿ ಬರೆದದ್ದನ್ನು, ಜನ-ಮನಗಳಿಗೆ ತಲಪಿಸುವ ಕರ್ತವ್ಯ ಅವರದು ಎಂದು ನಂಬಿದ್ದರು.
ಈ postman ಕೆಲಸವನ್ನು ಅವರು ಸುಮಾರು ೧೯೬೦ಕ್ಕಿಂತ ಮುಂಚೆಯೇ ಶುರು ಮಾಡಿದ್ದರು.
ಕಾಲೇಜುಗಳಲ್ಲಿ ಹಿಂದಿ ಚಿತ್ರಗೀತೆಗಳು ಪ್ರಸಿದ್ಧವಾಗಿದ್ದ ಸಮಯದಲ್ಲಿ, ಹಿರಿಯರಿಗೆ, ಕಿರಿಯರಿಗೆ, ಕೆ ಎಸ್ ನರಸಿಂಹಸ್ವಾಮಿ ಅವರ ಪ್ರೇಮ ಜಾಲವನ್ನು ಬೀರಿದವರು, ಬೇಂದ್ರೆ ಅವರ ಗಂಗಾವತರಣವನ್ನು ಹರಿಸಿದವರು, ಕುವೆಂಪುರವರ ರಸಋಷಿಗಳ ಬೀಡನ್ನು ಭಾವಪೂರ್ಣವಾಗಿ ಮೆರೆಸಿದವರು.
ಜಯ ಹೇ ಕರ್ನಾಟಕ ಮಾತೆ
ಅಣ್ಣ ಅವರ ಮೊಟ್ಟಮೊದಲನೆ ಭಾವಗೀತ ಕಾರ್ಯಕ್ರಮದ ಬಗ್ಗೆ ಹಾಗೂ ಶ್ರೀ ಕುವೆಂಪು ಅವರನ್ನು ಭೇಟಿಯಾದ ಸಂಧರ್ಭದ ಬಗ್ಗೆ ಬರೆಯುತ್ತ ಹೀಗೆ ವರ್ಣಿಸಿದ್ದಾರೆ :
ಮೈಸೂರಿನ ಮಹಾರಾಜ ಕಾಲೇಜಿನ ಸಮಾರಂಭ ಅಂದು. ಕುವೆಂಪು ಅವರ ಅಧ್ಯಕ್ಷತೆ.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನೆ ಹಾಡಲು ನನ್ನನ್ನು ಆಹ್ವಾನಿಸಿದ್ದರು. ಅದೇ ನನ್ನ ಮೊಟ್ಟಮೊದಲ ಭಾವಗೀತಾ ಗಾಯನ ಕಾರ್ಯಕ್ರಮ. ಕವಿಯ ಎದುರು ಕವಿಯ ಕವನ, ‘ಓ ನನ್ನ ಚೇತನ’ ಹಾಡುವ ಸೌಭಾಗ್ಯ ನನ್ನದು.
ಕುವೆಂಪು, ಹಾಡುಗಾರಿಕೆ ಕೇಳಿ ಶಹಭಾಸಗಿರಿ ಹೇಳಿದ್ದು ನನ್ನ ಜೀವನದಲ್ಲಿ ಮಹತ್ತರವಾದ ದಿನ. ಕಾರ್ಯಕ್ರಮದ ಮಧ್ಯದಲ್ಲಿ ಅವರ ಕವನಗಳನ್ನೇ ಹಾಡಲು ನನಗೆ ಅವಕಾಶ ಸಿಕ್ಕಿತು. ಆಗ, “ಬಾಗಿಲೊಳು ಕೈ ಮುಗಿದು”, “ಜೈ ಭಾರತ ಜನನಿಯ ತನುಜಾತೆ”, “ಕನ್ನಡಕೆ ಹೊರಡು” ಗೀತೆಗಳನ್ನು ಹಾಡಿದೆ. ಕುವೆಂಪು ಅವರು ನನ್ನನ್ನು ಹತ್ತಿರಕ್ಕೆ ಕರೆದು, ಹೊಗಳಿ, ಆಶೀರ್ವದಿಸಿದರು, ಜೊತೆಗೆ ಅವರ ‘ಜಯಭಾರತ ಜನನಿಯ ತನುಜಾತೆ’ಯನ್ನು ವೃಂದಗಾನದಲ್ಲಿ ಹಾಡಿಸಲು ಸಲಹೆ ಕೊಟ್ಟರು.
೧೯೮೦ರಲ್ಲಿ ಮದರಾಸಿನ ಸಂಗೀತ ಕಂಪನಿಯವರು ತಂದ ‘ಭಾವಸಂಗಮ’ ಧ್ವನಿ ಸುರುಳಿಯಲ್ಲಿ ಅವರ ವಿಶ್ವಮಾನವ ಗೀತೆಯಾದ ‘ಓ ನನ್ನ ಚೇತನ’ ಎಂಬ ಕವನವನ್ನು ಬಳಸಿಕೊಳ್ಳಲು ಅವರ ಅನುಮತಿ ಬೇಕಿತ್ತು.
ಮೈಸೂರಿಗೆ ಅದಕ್ಕಾಗಿ ಹೋಗಬೇಕಿತ್ತು. ಆದರೆ ಸಮಯದ ಅಭಾವದಿಂದ ದೂರವಾಣಿಯ ಮೂಲಕ ಅವರನ್ನು ಸಂಪರ್ಕಿಸಲು ನಿಶ್ಚಯಿಸಿದೆ. ಯಾಕೋ ಹೆದರಿಕೆಯೂ ಇತ್ತೂ. ದೂರವಾಣಿಯ ಮೂಲಕ ಮಾತನಾಡಿದರೆ ಏನಾದರೂ ತಪ್ಪು ತಿಳಿಯಬಹುದು ನಂತರ ಅನುಮತಿಯೂ ಸಿಗದೇ ಹೋಗಬಹುದು ಅಂದುಕೊಂಡೇ ಅವರನ್ನು ಸಂಪರ್ಕಿಸಿದೆ.
ನನ್ನ ಆಶ್ಚರ್ಯಕ್ಕೆ ಅವರು ಕೂಡಲೇ “ಮಾಡಿ ಮಾಡಿ, ಚೆನ್ನಾಗಿ ಮಾಡಿ” ಎಂದು ಅನುಮತಿಯನ್ನು ದೂರವಾಣಿಯ ಮೂಲಕವೇ ಕೊಟ್ಟಿದ್ದಲ್ಲದೆ, ಆಮೇಲೆ ಅಂಚೆಯ ಮೂಲಕ ಬರವಣಿಗೆಯಲ್ಲೂ ಅನುಮತಿ ಪತ್ರ ಕಳುಹಿಸಿಕೊಟ್ಟರು. ಎಂಥ ದೊಡ್ಡ ಹೃದಯ.
ಇನ್ನೊಮ್ಮೆ ನನ್ನ ‘ಮಿಂಚು’ ಧ್ವನಿ ಸುರುಳಿಯಲ್ಲಿ ಅವರ “ಜಯ ಭಾರತ ಜನನಿಯ ತನುಜಾತೆ” ಮತ್ತೆ ‘ಋತು ಚಿನ್ಮಯೀ ಜಗನ್ಮಾತೆಗೆ’ ಎಂಬ ಎರಡು ಕವನಕ್ಕೆ ಅನುಮತಿ ಬೇಕಾಗಿತ್ತು. ಮೈಸೂರಿನ ಸೀತಾರಾಘವ ವೈದ್ಯಶಾಲೆಯ ವೈದ್ಯರಾದ ಡಾ ಸೀತಾರಾಂ ಅವರ ಜೊತೆ ಕಾರಿನಲ್ಲಿ ನನ್ನ ಹಾರ್ಮೋನಿಯಂ ಸಮೇತ ಅವರನ್ನು ನೋಡಲು ಹೊರಟಿದ್ದೆ.
ದೇ ಜವರೇಗೌಡರ ಮನೆಗೆ ಹೋದೆವು. ಜವರೇಗೌಡರು ನಮ್ಮನ್ನು ಅವರ ಮನೆಗೆ ಕರೆದುಕೊಂಡು ಹೋಗಿ, ಮನೆ ಒಳಕ್ಕೆ ಹೋಗುವ ಮುನ್ನ, “ನೋಡಿ ಅವರು ಹೇಳಿರುವ ಪ್ರಕಾರ, ನಮಗೆ ಕೇವಲ ಐದು ನಿಮಿಷ ಮಾತ್ರ ಸಮಯವಿದೆ” ಎಂದು ಹೇಳಿದ್ದರು. ನಾವು ಒಳಗೆ ಹೋಗಿ ಅವರನ್ನು ಭೇಟಿಯಾಗಿ ಅವರ ಕವನವನ್ನು ಹಾಡಲು ಅವರ ಅನುಮತಿ ಕೇಳಿಕೊಂಡೆ.
ಅವರು ಕೂಡಲೇ ಸಂತೋಷದಿಂದ ಒಪ್ಪಿ ನಮ್ಮೊಡನೆ ಬಂದು ಕುಳಿತರು. ಅಂದು ಸುಮಾರು ಎರಡು ಗಂಟೆಗಳ ಕಾಲ ಅವರೊಡನೆ ನಾವು ಇದ್ದೆವು. ಅಂದು ನಾನು ಮನಃಪೂರ್ವಕವಾಗಿ ಅವರೆಲ್ಲ ಗೀತೆಗಳನ್ನು ಅವರ ಮುಂದೆಯೇ ಹಾಡಿ ಅವರ ಆಶೀರ್ವಾದ ಪಡೆದೆ. ಇದು ನನ್ನ ಜೀವನದ ಮಹತ್ತರವಾದ ಘಳಿಗೆಗಳು.
ಅವರು ನುಡಿದ ಮಾತೊಂದು ನನ್ನ ಕಿವಿಯಲ್ಲಿ ಇಂದೂ ಝೇಂಕರಿಸುತ್ತಿದೆ:
“ಕನ್ನಡಕ್ಕಾಗಿ ನಿನ್ನ ಕೈ ಎತ್ತು ಅದು ಕಲ್ಪವೃಕ್ಷವಾಗುತ್ತದೆ, ಕನ್ನಡಕ್ಕಾಗಿ ನಿನ್ನ ಧ್ವನಿ ಎತ್ತು ಅದು ಪಾಂಚಜನ್ಯವಾಗುತ್ತದೆ” ಎಂದು ಅವರು ಹೇಳಿದ ಮಾತು ಎಷ್ಟು ಸತ್ಯವೋ ಹಾಗೆ ಕವಿಯಾಗಿ ಕುವೆಂಪು ಅವರನ್ನು ನಾವು ಎಂದಿಗೂ ಮರೆಯುವಂತಿಲ್ಲ, ಅವರು ಎಂದೆಂದಿಗೂ ಅಮರ.
ತಂದೆ-ಗುರುವೂ
೧೯೮೦ ರಿಂದ ೧೯೯೨ರ ವರೆಗೆ ನಾನು ಅಣ್ಣನ ಜೊತೆ ಕರ್ನಾಟಕದೆಲ್ಲೆಡೆ ಹಾಗು ಭಾರತದ ಕೆಲವು ರಾಜ್ಯಗಳಲ್ಲಿ ಹಾಗು ಹೊರನಾಡಿನಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಕುವೆಂಪುರವರ ‘ಜೈ ಭಾರತ ಜನನಿಯ ತನುಜಾತೆ’ ಅಂದಿನಿಂದ ಇಂದಿನವರೆಗೆ ಹಾಡಿಕೊಂಡು ಬಂದಿರುವುದಲ್ಲದೆ ಎಷ್ಟೋ ಹಲವಾರು ಮಕ್ಕಳಿಗೆ ಹಾಗು ಹಾಡುಗಾರರಿಗೆ ಹೇಳಿಕೊಟ್ಟಿದ್ದೂ ಉಂಟು .
ಅಣ್ಣ ಇದನ್ನು ೧೯೬೦ ರ ಹಾಗೆ ಸ್ವರ ಸಂಯೋಜಿಸಿದ್ದರು. ಅವರ ಮೊಟ್ಟ ಮೊದಲನೇ ಭಾವಗೀತೆ ಕಾರ್ಯಕ್ರಮದಲ್ಲಿ ಶ್ರೀ ಕುವೆಂಪುರವರ ಮುಂದೆ ಈ ರಚನೆಯನ್ನು ಹಾಡಿದರು. ಅಂದಿನಿಂದ ಇದನ್ನು ಎಲ್ಲೆಡೆ ಹಾಡಿ ಪ್ರಚಾರ ಮಾಡಿದರು. ಸುಮಾರು ೩೫ ವರ್ಷಗಳ ಕಾಲ, ಆ ಕವನವನ್ನು ನಾಡಗೀತೆ ಎಂದು ನೇಮಿಸುವ ಮುಂಚೆಯೇ ಅದನ್ನು ಎಲ್ಲೆಡೆ ಹಾಡುತ್ತ, ಪ್ರಚಾರ ಮಾಡುತ್ತಾ ಬಂದಿದ್ದರು.
ಫೇಸ್ ಬುಕ್ ಅಥವ ಇಂಟರ್ನೆಟ್ ಇಲ್ಲದಿರುವ ಕಾಲದಿಂದ ನಾನು ಇದನ್ನು ಅಣ್ಣನ ಜೊತೆ ಹಾಡುತ್ತ ಬಂದಿದ್ದೇನೆ. ನಾನು ಕಳೆದ ೨೫ ವರ್ಷಗಳಿಂದ ಈ ದೇಶದಲ್ಲಿ ನೆಲೆಸಿರುವ ಹೊರನಾಡ ಕನ್ನಡಿಗರಿಗೆ ಹಾಡುತ್ತಾ, ಹೇಳಿಕೊಡುತ್ತಾ ಬಂದಿದ್ದೇನೆ. ಅವರ ಮಗಳಾಗಿ, ಶಿಷ್ಯಳಾಗಿ, ನಾನು ಇಷ್ಟೂ ಮಾಡದಿದ್ದರೆ, ನನ್ನ ಜೀವನ ಹೇಗೆ ಸಾರ್ಥಕವಾದೀತು?
ಇಲ್ಲಿ ಡಾ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು ಬರೆದ ಸಾಲುಗಳು ನೆನಪಿಗೆ ಬರುತ್ತದೆ:
ತಂದೆ ಮಾತ್ರವೇ ನೀವು? ಗುರುವೂ, ಸುಗಮ ಗೀತಾಚಾರ್ಯರು
ಕನ್ನಡದ ಕವಿತೆಯನು ಹಾಡುವಲೆಲ್ಲ ನೀವು ಅನಂತರು
।ನಾಳೆ ನಿರೀಕ್ಷಿಸಿ।
ಏನಾಯ್ತು ನಾಡಗೀತೆಯ ರಾಗಕ್ಕೆ..??





ಗುರುಗಳು ‘ಭಾರತ ಜನನಿಯ ತನುಜಾತೆ’ ಹಾಡನ್ನು ಬಸವನಗುಡಿ ನ್ಯಾಷನಲ್ ಕಾಲೇಜ್ ನಲ್ಲಿ ಭಾರತದ ೨೫ನೆ ಸ್ವಾತಂತ್ರೋತ್ಸವಡ ಪ್ರಯುಕ್ತ ನಡೆದ 3 ದಿನಗಳ ಸಮಾರಂಭದಲ್ಲಿ, ಒಂದು 25 – 30 ಗಾಯಕ – ಗಾಯಕಿಯರ ವೃಂದವೊಂದನ್ನು ತಯಾರು ಮಾಡಿ ಹಾಡಿಸಿದ್ದರು. ‘ಜೋಗದ ಸಿರಿ’ ಕೂಡ ಹಾಡಿಸಿದ್ದರು. ವಿಶೇಷ ಅಂದರೆ ಅದೇ ಮೊದಲ ಬಾರಿಗೆ ಕನ್ನಡದ ಹಾಡುಗಳನ್ನು choir ಶೈಲಿ (with harmonies) ಯಾರಾದರೂ ಕೇಳಿದ್ದು. ಈಗಲೂ ಆ ಕಾರ್ಯಕ್ರಮವನ್ನು ನೆನಪಿಸಿ ಕೊಂಡಾಗ ಮೈ ನವಿರೇಳುತ್ತೆ!