ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುವೆಂಪು ಕಾವ್ಯದಲ್ಲಿ ಶಿಕ್ಷಣವನ್ನು ಕುರಿತು ಚಿಂತನೆಗಳು

ಶಿವಕುಮಾರ ಕಾರೇಪುರ

ಸಮಾನತೆಯ ತತ್ವವನ್ನು ಕಟ್ಟುವ ಪ್ರಯತ್ನದ ಫಲವಾಗಿ ರೂಪುಗೊಂಡಿರುವ ಕುವೆಂಪು ಅವರ ಕಾವ್ಯ ತನ್ನ ವಿಸ್ತಾರತೆ ಹಾಗೂ ಅವರ ಚಿಂತನೆಗಳ ಫಲವಾಗಿ ಆಧುನಿಕ ಕನ್ನಡ ಕಾವ್ಯದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ.ಪರಂಪರೆಯನ್ನು ‘ಪ್ರಶ್ನೆ’ ಮಾಡುವುದೇ ಕುವೆಂಪು ಅವರ ಸೃಜನಶೀಲತೆಯ ಮುಖ್ಯ ಆಶಯ ಎನಿಸಿಕೊಂಡಿದೆ.
ಕುವೆಂಪು ಅವರು ತಮ್ಮ ಕತೆ, ಕಾದಂಬರಿ, ಆತ್ಮಕತೆ, ವಿಚಾರ ಸಾಹಿತ್ಯ ಮೊದಲಾದ ಬಹುತೇಕ ಬರಹಗಳಲ್ಲಿ ಶಿಕ್ಷಣ ಕುರಿತು ಚಿಂತನೆಗಳನ್ನು ಚರ್ಚೆಕುವೆಂಪು ಕಾವ್ಯ : ಶಿಕ್ಷಣ ಕುರಿತು ಚಿಂತನೆಗಳು. ಚರ್ಚೆಗೆ ಒಳಗು ಮಾಡಿದ್ದಾರೆ.ಅಂತೆಯೇ ಅವರು ತಮ್ಮ ಹಲವು ಕವಿತೆಗಳಲ್ಲಿಯೂ ವಸಾಹತುಶಾಹಿಯಿಂದ ರೂಪುಗೊಂಡ ಇಂಗ್ಲಿಷ್ ಶಿಕ್ಷಣ ಪದ್ಧತಿ, ಅದರಿಂದಾದ ಅನುಕೂಲತೆ ಮತ್ತು ಅದರಿಂದ ದೇಶಿಯ ಭಾಷೆಗಳಗೆ ಒದಗಿದ ಸಂಕಷ್ಟಗಳನ್ನು ಚರ್ಚಿಸಿದ್ದಾರೆ.
ವಿಶ್ವವಿದ್ಯಾನಿಲಯ ಎನ್ನುವ ಜ್ಞಾನನೀಡುವ ಆಲಯವು ಬುದ್ಧಿಗೆ ಅನ್ನವನು ಹೃದಯಕ್ಕೆ ಅಮೃತವನು ನೀಡುವ ಶಕ್ತಿಯನ್ನು ಹೊಂದಿದೆ ಎನ್ನುವುದು ಕವಿ ನಿಲವು. ಅಲ್ಲದೆ ಪರಂಪರೆಯಿಂದ ರೂಪುಗೊಂಡು ಸಾಹಿತ್ಯದಿಂದ ರಸ ಸುಖವನ್ನು ದೊರಕಿಸಿದ ಶ್ರೇಯಸ್ಸು ವಿದ್ಯಾನಿಲಯದ್ದು. ಹಾಗಾಗಿಯೇ ಕವಿಗೆ
ಭಗವತಿ ಶ್ರೀ ಸರಸ್ವತಿ –
ಅಸತ್ತಿನಿಂದೆ ಸತ್ತಿನೆಡೆಗೆ
ತಮಸ್ಸಿನಿಂದೆ ಜ್ಯೋತಿಯೆಡೆಗೆ
ಮೃತ್ಯುವಿಂದೆ ಅಮೃತದೆಡೆಗೆ
ಕರೆದೊಯ್ಯುವ ತಾರಿಣಿ
ಹಾಗಾಗಿ ಕುವೆಂಪು ಅವರಿಗೆ ವಿದ್ಯೆ ಕಲಿಯುವ ಕ್ರಿಯೆ ಜ್ಞಾನದ ಬೆಳಕನ್ನ ಪಡೆದುಕೊಳ್ಳುವ ಸಾಧನ ಎನಿಸುತ್ತದೆ. ಹೀಗೆ ಅಕ್ಷರ ಕಲಿಯುವ ಕ್ರಿಯೆಯ ಬಗೆಗೆ ಅಭಿಮಾನ ವ್ಯಕ್ತಪಡಿಸುವ ಕವಿಗೆ ಕಲಿಸುವ ಕ್ರಮದ ಬಗೆಗೆ ಅಸಮಾಧಾನವಿದೆ.

ಗಾಂಧಿಯಿಂದಿಂಗ್ಲಿಷಿನ ದಾಸ್ಯದಿಂ ಪಾರಾದೆ;
ಅವನಕೊಂದಿಂಗ್ಲಿಷಿಗೆ ದಾಸಿಯಾದೆ
ಓ ಭಾರತೀಯೆ, ಚೀಣಿಯರನೆ ಮಿರಿ
 
ಹಿಂಡುತಿದೆ ಕಂದರನು ಇಂಗ್ಲಿಷಿನ ಮಾರಿ !
ವಸಾಹತು ಶಿಕ್ಷಣ ನೀತಿಯಿಂದ ಜಾರಿಗೆ ಬಂದ ಇಂಗ್ಲಿಷನ್ನು ಕಲಿಸುವ ಕ್ರಮ ಕನ್ನಡದ ಕಂದರನ್ನು ಹಿಂಡುತ್ತಿರುವುದನ್ನು ನೋಡಿದ ಕುವೆಂಪು ಮರುಕ ಪಡುತ್ತಾರೆ.ತಮ್ಮ ಆತ್ಮಕತೆ ಹಾಗೂ ಇತರ ಬರಹಗಳಲ್ಲಿ ವಸಾಹತು ಶಿಕ್ಷಣ ನೀತಿಯಿಂದಾಗಿಯೆ ತನ್ನಂಥವರು ಶಿಕ್ಷಿತರಾಗಲು ಸಾಧ್ಯವಾಯಿತು ಎಂದಿದ್ದಾರೆ.
ಕುವೆಂಪು ಅವರು ವಿದ್ಯಾಥರ್ಿಗಳನ್ನು ಬಲವಂತದಿಂದ ಇಂಗ್ಲಿಷ್ ಕಲಿಸುವ ದಾಸ್ಯಕೆ ಒಳಗು ಮಾಡಿ ಅವರ ಭವಿಷ್ಯವನ್ನು ನಾಶಮಾಡುವ ಕ್ರಮದ ಬಗೆಗೆ ಸಿಟ್ಟನ್ನು ವ್ಯಕ್ತಪಡಿಸುತ್ತಾರೆ.ಡಾ. ಕೆ ಸಿ ಶಿವಾರೆಡ್ಡಿಯವರು ‘ಕುವೆಂಪು ಅವರ ಭಾಷೆಯ ಬಗೆಗಿನ ಚಿಂತನೆಗಳಲ್ಲಿ ಇಂಗ್ಲೀಷ್ ಭಾಷೆ ಹೊತ್ತು ತರುವ ವಿಚಾರಧಾರೆಯ ಬಗೆಗೆ ನಿರಂತರವಾಗಿ ಒಲವಿರುವುದು ಅವರ ಕೃತಿಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಹಾಗೆಯೇ ಶಿಕ್ಷಣದ ಮಾಧ್ಯಮವಾಗಿ ದೇಶೀಯ ಸಂಸ್ಕೃತಿಯ ಮೇಲೆ ಇಂಗ್ಲೀಷ್ ಭಾಷೆ ಎನಿಸುವ ಅನರ್ಥಗಳನ್ನು, ದುಷ್ಪರಿಣಾಮಗಳನ್ನು ಕಂಡಾಗ ಅವರ ಕಾವ್ಯ ಪ್ರತಿರೋಧದ ಮೊನಚನ್ನು ಪಡೆಯುತ್ತದೆ’ ಎನ್ನುತ್ತಾರೆ.
ಬಲಾತ್ಕಾರಕ್ಕಾಗಿ ಮಾತ್ರವೇ ಹೊರತು ಈ ರೋಷ
ಭಾಷೆಗಾಗಿ ನಮ್ಮ ದ್ವೇಷವೇನಿಲ್ಲ
ತೆಗೆಯಿರಿ ಬಲಾತ್ಕಾರದಂಶವನು ; ಆರಿಸಲಿ
ಸರ್ವರೂ ಇಂಗ್ಲಿಷನೆ, ಚಿಂತೆ ಇನಿತಿಲ್ಲ
ಕವಿಗೆಇಂಗ್ಲಿಷ್ ಬಗೆಗೆ ದ್ವೇಷವಿಲ್ಲ. ಅದನ್ನು ಬಲಾತ್ಕಾರವಾಗಿ ಕಲಿಸುವ ಕ್ರಮದ ಬಗೆಗೆ ಅವರಿಗೆ ರೋಷವಿದೆ. ಇಷ್ಟಪಟ್ಟು ಎಲ್ಲರೂ ಇಂಗ್ಲೀಷ್ ಕಲಿಯಲಿ.ಆದರೆ ಯಾರಿಗೂ ಬಲವಂತವಾಗಿ ಕಲಿಸುವ ಪ್ರಯತ್ನ ಮಾಡಬಾರದು ಎನ್ನುತ್ತಾರೆ.ಅಷ್ಟೆ ಅಲ್ಲದೆ ಕಲಿಯುವಾತನ ಅಗತ್ಯಕ್ಕೆ ಅನುಗುಣವಾಗಿ ಕಲಿಸಬೇಕಾದುದು ಧರ್ಮ ಎನ್ನುವ ನಿಲುವನ್ನು ತಮ್ಮ ಕಾವ್ಯದಲ್ಲಿ ವ್ಯಕ್ತಪಡಿಸಿದ್ದಾರೆ.
ಹೆಣಭಾರ! ಹೆಣಭಾರ! ಸಾಕೀ ಬಲತ್ಕಾರ
ಸಾಕು ನಿಲ್ಲಿಸಿ, ನಿಮಗೆ ಬೇಕಾದರುದ್ಧಾರ.
ಇಂಗ್ಲಿಷಿನ ಚಪ್ಪಡಿಯಡಿ ಹಸುಳೆ ಚೀತ್ಕಾರ
ಕೇಳಿಸದ ಕಿವುಡರಿರ, ನಿಮಗೇಕೆ ಅಧಿಕಾರ!
ಅಧಿಕಾರ ವ್ಯವಸ್ಥೆಯಲ್ಲಿರುವವರು ಸರಿಯಾದ ನಿಧರ್ಾರಗಳನ್ನು ತೆಗೆದುಕೊಳ್ಳಬೇಕು.
ವಿದ್ಯಾರ್ಥಿಗಳಿಗೆ ಯಾವುದನ್ನು ಎಷ್ಟು ಕಲಿಸಬೇಕು, ಎನ್ನುವುದರ ತಿಳುವಳಿಕೆ ಇರಬೇಕು.ನಿಮಗೆ ಉದ್ಧಾರ ಅನ್ನುವುದು ಬೇಕಾದರೆ ಮೊದಲು ಬಲಾತ್ಕಾರದಿಂದ ಕಲಿಸುವುದನ್ನು ನಿಲ್ಲಿಸಿ ಎನ್ನುತ್ತಾರೆ ಕುವೆಂಪು.
ಬಲಾತ್ಕಾರದಿಂದ ಹೇರುವ ಭಾಷೆಗಳ ಹೊರೆಯಿಂದ ಮಗುವಿನ ಮೇಲೆ ಬೀರುವ ದುಷ್ಪರಿಣಾಮಗಳನ್ನು ಅದರಿಂದ ಒಂದು ಸಂಸ್ಕೃತಿಗೆ ಒದಗುವ ಲಾಭ – ನಷ್ಟಗಳನ್ನು ಕುವೆಂಪು ಅವರ ಕವಿತೆಗಳು ಚಿಂತಿಸುತ್ತವೆ.
ಇಂಗ್ಲಿಷಿನ ಚಪ್ಪಡಿಯಡಿಯಲ್ಲಿ ಸಿಲುಕಿರುವ ಹಸುಳೆಗಳ ಚೀತ್ಕಾರ ಕೇಳಿಸದ ಕಿವುಡರ ಹಾಗೆ ವತರ್ಿಸುತ್ತಿರುವ ನಿಮಗೆ ಧಿಕ್ಕಾರ ಎನ್ನುವ ಮೂಲಕ ಕವಿ ತನ್ನ ಸಿಟ್ಟನ್ನು ವ್ಯಕ್ತಪಡಿಸಿದ್ದಾನೆ.
ಆಳುವ ವರ್ಗದವರಿಂದ ರಕ್ಷಣೆ ಸಿಗದಿದ್ದಾಗ ಸಂಕಷ್ಟಕ್ಕೆ ಒಳಗಾದವರು ತಮ್ಮನ್ನು ತಾವೇ ಕಾಪಾಡಿಕೊಳ್ಳಬೇಕು ಎನ್ನುವ ಒತ್ತಾಯ ಕವಿಯದು.
ಇಂಗ್ಲಿಷಿನ ಜಿಲೋಟಿನ್ನಿನಡಿ ನಿಮ್ಮ ಕೊರಳೊಡ್ಡಿ
ವರುಷ ವರುಷವು ಕೋಟಿ ಕೊಲೆಯಪ್ಪಿರೇಕೆ?
ನಿಮ್ಮ ಶಕ್ತಿಯ ಕುಂದದಲ್ಲ ಕಾರಣ ಕೊಲೆಗೆ;
ಪರಭಾಷೆ ಚಪ್ಪಡಿ! ಪರೀಕ್ಷೆಯ ನೆವಂ ಬೇಕೆ?
ಏಳು ಎಚ್ಚರಗೊಳ್ಳು ಓ ಭಾರತೀಯ ಕಂದ.
ನಿನ್ನ ಸ್ವಾತಂತ್ರ್ಯವನ್ನು ನೀನೇ ರಕ್ಷಿಸಿಕೋ !
ಬಲಾತ್ಕಾರದಿಂದ ಇಂಗ್ಲಿಷನ್ನು ಕಲಿಸುತ್ತಿರುವುದರ ಬಗೆಗೆ ತಮ್ಮ ಅಸಮಧಾನವನ್ನು ವ್ಯಕ್ತಪಡಿಸುತ್ತಾರೆ.ಅಧ್ಯಾಪಕರಾಗಿ ಕಾಲೇಜಿನ ಪ್ರಾಂಶುಪಾಲರಾಗಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಕಾರ್ಯನಿರ್ವಹಿಸಿರುವ ಕುವೆಂಪು ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ತೊಡಕುಗಳನ್ನು ಹತ್ತಿರದಿಂದ ಕಂಡವರು.
ಇಲ್ಲಿನ ಎಲ್ಲ ಅಭಿವ್ಯಕ್ತಿಯು ಕೇವಲ ಮಾತುಗಾರಿಕೆಯಾಗದೆ ಭಾರತೀಯ ಸ್ಥಳೀಯ ಭಾಷಿಕರು ಎದುರಿಸುತ್ತಿರುವ ಸಂಕಷ್ಟಗಳನ್ನು ತೆರೆದಿಡುತ್ತಿದೆ.ಕವಿಯ ಮುಂಗಾಣ್ಕೆ ನಮಗಿಲ್ಲಿ ಗೋಚರವಾಗುತ್ತಿದೆ. ಈ ಸಮಸ್ಯೆ ಪ್ರಸ್ತುತದಲ್ಲಿ ಬಹುದೊಡ್ಡ ಲೋಪವಾಗಿ ಗೋಚರವಾಗಿದ್ದರೂ ಇದರ ಬಗೆಗೆ ಚಿಂತಿಸಲೇಬೇಕಾದವರು ಮೌನವಾಗಿದ್ದಾರೆ. ಮಾನವ ಸಂಪನ್ಮೂಲ ವರವಾಗಿ ಪರಣಮಿಸಬೇಕಾಗಿದ್ದ ಭಾರತದಲ್ಲಿ ಅದೊಂದು ಸಾಮಾಜಿಕ ಪಿಡುಗಾಗಿದೆ. ಇದರ ಮೂಲಗಳನ್ನು ಹುಡುಕಿದರೆ ಶಿಕ್ಷಣರಂಗದಲ್ಲಿನ ಲೋಪಗಳು ಎದುರಾಗುತ್ತವೆ.
ಪ್ರಸ್ತುತದಲ್ಲಿ ಇಂಗ್ಲಿಷ್ ಜಾಗತಿಕ ಭಾಷೆಯಾಗಿ ರೂಪುಗೊಂಡಿರುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಅದನ್ನು ಎಲ್ಲರು ಕಡ್ಡಾಯವಾಗಿ ಕಲಿಯಬೇಕು ಎನ್ನುವುದು, ಎಲ್ಲರಿಗೂ ಕಲಿಸಲೇಬೇಕೆಂದು ಹೊರಟಿರುವುದು, ಇದಕ್ಕಾಗಿ ಸಾಕಷ್ಟು ಸಮಯ ಮತ್ತು ಧನವನ್ನು ವ್ಯಯ ಮಾಡುತ್ತಿರುವುದು ಅಸಂಗತವೆನಿಸಿದೆ. ಆದರೆ ಈ ವಿಷಯವಾಗಿ ಗಂಭೀರ ಚಚರ್ೆಗಳು ನಡೆಯದೆ ಇರುವುದು ದುರಾದೃಷ್ಟ.ಈ ಎಲ್ಲಾ ಚಿಂತನೆಗಳ ಹಿನ್ನಲೆಯಲ್ಲಿ ಶಿಕ್ಷಣ ಚಿಂತನೆಗಳನ್ನು ಕುರಿತು ಕುವೆಂಪು ಕಾವ್ಯ ನಮ್ಮ ಮುಂದಿಡುತ್ತಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಬೇಕಾಗಿದೆ.ಅಷ್ಟೆ ಅಲ್ಲ ಕವಿ ಕುವೆಂಪು ಸರ್ಕಾರದ ಜಾರಿಗೆ ತಂದ ತ್ರಿಭಾಷಾ ನೀತಿಯನ್ನು ಪ್ರಶ್ನಿಸುತ್ತಾರೆ ಮತ್ತು ತ್ರಿಭಾಷಾ ನೀತಿಯನ್ನು ವಿರೋಧಿಸುತ್ತಾರೆ.
ಚೂರು ತಿಂಡಿಗೆ ಸಿಕ್ಕಿಸಿಹರೋ ಈ ಮೂರು ಗಾಳ ;
ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣಶೂಲ !
-ಎನ್ನುತ್ತಾರೆ. ಒಂದಷ್ಟು ಮಂದಿ ತಜ್ಞರು ಎನಿಸಿಕೊಂಡವರು ತೆಗೆದುಕೊಳ್ಳುವ ನಿಧರ್ಾರ ಲಕ್ಷಾಂತರ ವಿದ್ಯಾಥರ್ಿಗಳ ಬದುಕಿಗೆ ಮುಳ್ಳಾಗಿರುವ ಹಲವು ಸಂಗತಿಗಳು ನಮ್ಮ ಮುಂದಿವೆ. ಅಂತೆಯೇ ತ್ರಿಭಾಷಾ ನೀತಿಯೂ ಕವಿ ಕುವೆಂಪುಅವರಿಗೆ ಒಂದು ಸಂಚಾಗಿ ಕಾಣಿಸಿದೆ.
‘ಮುಂದೆ ದಿಳ್ಳಿಯ ಮಂತ್ರಿಯಾಗುವವ ನೀನೋ?
ಬೇಡವೆಂದವರಾರು? ಹಿಂದಿಯನು ಕಲಿಯೊ !
ಬದುಕಿ ಇಲ್ಲಿಯೆ ಬಾಳಿ ಸಾಯುವವ ನಾನೋ ?
ನಿನ್ನ ಸೂತ್ರಕೆ ಏಕೆ ನನ್ನ ಬಲಿಯೋ ?
ಮುಂದೆ ಇಂಗ್ಲೆಂಡಿನ ನೀ ರಾಯಭಾರಿ ?
ಬೇಡವೆಂಬುವವರಾರು?
ಹೊಡೆ ಬಿರಿಯೆ ಕುಡಿಯೊ ಇಂಗ್ಲಿಷಿನ ಹೆಂಡ ಹೀರಿ!
ನನ್ನ ಮೇಲೆತಕ್ಕೆ ಮಾಡುವೆ ಬಲತ್ಕಾರದ ಸವಾರಿ?
ಅಗತ್ಯ ಇರುವವರು ಮಾತ್ರ ತಮಗೆ ಕಲಿಯಬೇಕು ಅನ್ನಿಸಿದ ವಿಷಯಗಳನ್ನು, ಸಂಗತಿಗಳನ್ನು, ಕಲಿಯಬೇಕೆನಿಸುವ ಭಾಷೆಯಲ್ಲಿ ಕಲಿಯಬೇಕು.ಕಲಿಕೆ ಬಲವಂತದಿಂದ ರೂಪುಗೊಳ್ಳುವಂತಹುದಲ್ಲ. ಆದರೆ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳು ತಮ್ಮ ಪ್ರತಿಷ್ಠೆಗಾಗಿ ಎಳೆಯ ಮಕ್ಕಳ ಮೇಲೆ ಬಲವಂತದಿಂದ ಏರುತ್ತಿರುವ ಭಾಷೆಗಳ ಬಗೆಗೆ ಕುವೆಂಪು ಅವರಿಗೆ ಸಿಟ್ಟಿದೆ.
 

‍ಲೇಖಕರು G

18 June, 2015

1 Comment

  1. Kiran

    Nice thoughts, both by the writer & KuVemPu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading