ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುವೆಂಪು ಅವರು ಕೋಕಿಲೋದಯ ಚೈತ್ರನಿಗೆ ಹೆಸರಿಟ್ಟದ್ದು…

ಬಿ ಆರ್ ಸತ್ಯನಾರಾಯಣ ಅವರು ಬರೆದಿರುವ ಕುವೆಂಪು ಕಾವ್ಯಯಾನ ಪುಸ್ತಕ 29ರಂದು ಕುಪ್ಪಳಿಯಲ್ಲಿ ಬಿಡುಗಡೆಯಾಗುತ್ತಿದೆ. ಆ ಪುಸ್ತಕದ ಒಂದು ಲೇಖನ ಇಲ್ಲಿದೆ :

 

ಹೆಸರಿಟ್ಟು ಹರಸುವೆನು ಚೈತ್ರನಂ

೧೯೪೧ನೆಯ ಇಸವಿ. ಜಗತ್ತನ್ನು ಎರಡನೆಯ ಮಹಾಯುದ್ಧದ ಕಾರ್ಮೋಡಗಳು ಆವರಿಸಿದ್ದ ದಿನಗಳು. ಇತ್ತ ಮೈಸೂರು ವಿಶ್ವವಿದ್ಯಾಲಯ ಮಾತ್ರ ತನ್ನ ಜ್ಞಾನಪ್ರಸಾರದ, ಸಾಹಿತ್ಯ ಪ್ರಚಾರದ, ಕನ್ನಡ ಕಾಯಕದ ಕರ್ತವ್ಯಕ್ಕೆ ಕಿಂಚಿತ್ತೂ ಚ್ಯುತಿ ಬರದ ರೀತಿಯಲ್ಲಿ ಶ್ರೀಕಾರ್ಯೋನ್ಮುಖವಾಗಿತ್ತು. ಆ ವರ್ಷದ ಮೇ ತಿಂಗಳ ಮೊದಲವಾರದಲ್ಲೇ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ (ಆಗಿನ್ನು ಪ್ರಸಾರಾಂಗ ಎಂಬ ಹೆಸರು ಬಂದಿರಲಿಲ್ಲವಂತೆ) ಸಾಗರದಲ್ಲಿ ವಸಂತ ಸಾಹಿತ್ಯೋತ್ಸವ ಏರ್ಪಡಿಸಿತ್ತು. ಅದರಲ್ಲಿ ಭಾಗವಹಿಸಲು ಪ್ರೊ. ವೆಂಕಣ್ಣಯ್ಯ, ತೀನಂಶ್ರೀ, ಎ.ಎನ್.ಮೂರ್ತಿರಾವ್ ಮೊದಲಾದವರೊಂದಿಗೆ ಕುವೆಂಪು ಶಿವಮೊಗ್ಗಕ್ಕೆ ಬಂದು ಉಳಿದಿದ್ದರು.

ಕುವೆಂಪು ಅವರ ಶ್ರೀಮತಿಯವರು ಶಿವಮೊಗ್ಗೆಯ ತಮ್ಮ ತವರು ಮನೆಗೆ ಎರಡನೆಯ ಹೆರಿಗೆಗಾಗಿ ಬಂದಿದ್ದರು. ಮೇ ೨ನೆಯ ತಾರೀಖು ಬೆಳಗಿನ ಜಾವ ೪.೪೫ಕ್ಕೆ ಶ್ರೀಮತಿ ಹೇಮಾವತಿಯವರು ಗಂಡು ಮಗುವಿಗೆ ಜನ್ಮ ನೀಡುತ್ತಾರೆ. ಪುತ್ರೋತ್ಸವದ ಸಂತೋಷದಲ್ಲಿ ಮುಳುಗೇಳುತ್ತಿದ್ದ ಕುವೆಂಪು, ಏನೂ ಆಗದವರಂತೆ ನಿಗದಿತವಾಗಿದ್ದ ಪ್ರವಾಸ ಕಾರ್ಯಕ್ರಮವೊಂದಕ್ಕೆ ಹೊರಟೇ ಬಿಡುತ್ತಾರೆ. ತೀನಂಶ್ರೀ, ಮೂರ್ತಿರಾವ್ ಮೊದಲಾದ ಗೆಳೆಯರೊಂದಿಗೆ, ಮಾನಪ್ಪನವರ ಸಾರಥ್ಯದಲ್ಲಿ ಶಿವಮೊಗ್ಗಕ್ಕೆ ಐದಾರು ಕಿಲೋಮೀಟರ್ ದೂರದಲ್ಲಿದ್ದ ತುಂಗಾ ನದಿಯ ಏಳುಸೀಳು ಎಂಬಲ್ಲಿಗೆ ಹೋಗಿ ಈಜುವ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುತ್ತಾರೆ. ವೆಂಕಣ್ಣಯ್ಯ ಮತ್ತು ಒಂದಿಬ್ಬರು ನೀರಿಗಳಿಯದೆ ಹೊಳೆಯ ದಡದಲ್ಲಿ ಕುಳಿತು ಹರಟುತ್ತಿರುತ್ತಾರೆ. ನೀರಿಗಿಳಿದವರಲ್ಲಿ ಕೆಲವರು ಸ್ವಲ್ಪ ಹೊತ್ತು ಈಜಾಡಿ ಮೇಲೆ ಬಂದು ಕುಳಿತವರೊಡನೆ ಸೇರಿಕೊಳ್ಳುತ್ತಾರೆ. ಆಗ ಬಹುಶಃ ಮಾನಪ್ಪನವರಿಂದ, ಅಂದು ಬೆಳಗಿನ ಜಾವ ಕುವೆಂಪು ಅವರಿಗೆ ಪುತ್ರೋತ್ಸವಾಗಿದ್ದ ವಿಚಾರ ಎಲ್ಲರಿಗೂ ತಿಳಿಯುತ್ತದೆ. ಅಲ್ಲಿ ನೆರೆದಿದ್ದವರಿಗೆಲ್ಲಾ ಆಶ್ಚರ್ಯವಾಗಿತ್ತು. ಬೆಳಗಿನ ಜಾವ ಪುತ್ರ ಜನನವಾದ ಸುದ್ದಿ ತಿಳಿದು ಏನೂ ಆಗಿಲ್ಲ ಎಂಬಂತೆ ಎಲ್ಲರೊಡನೆ ಈಜಲು ಬಂದ ಕವಿಯ ವರ್ತನೆ ಎಲ್ಲರಿಂದಲೂ ತರಾಟಗೆ ಒಳಗಾಯಿತು. ತೀನಂಶ್ರೀಯವರು ಪುಟ್ಟಪ್ಪ, ನಿಮ್ಮ ಧೈರ್ಯವೇ ಧೈರ್ಯ ಬಿಡಿ ಎಂದು ಕವಿಯ ಔದಾಸೀನ್ಯವನ್ನು ಛೇಡಿಸಿದ್ದರಂತೆ!

ಕವಿಯ ಬಾಹ್ಯ ವರ್ತನೆಯಲ್ಲಿ ಬೇಜವಾಬ್ದಾರಿ ಇದ್ದಿತಾದರೂ, ಅಂತರಂಗದಲ್ಲಿ ಮಾತ್ರ ಆಗಿರಲಿಲ್ಲ. ಕವಿಯೇ ಹೇಳುವಂತೆ ಮೇಲುನೋಟಕ್ಕೇನೊ ನನ್ನ ವರ್ತನೆ ಹಾಗೆ ಕಾಣಿಸಿತ್ತಾದರೂ ನನ್ನ ಮಗನ ಜನನದ ವಿಚಾರದಲ್ಲಿ ನಾನು ಅಷ್ಟೇನೂ ನಿಷ್ಕಾಮನೂ ಉದಾಸೀನನೂ ಆಗಿರಲಿಲ್ಲ. ಅದಕ್ಕೆ ಕೋಕಿಲೋದಯ ಚೈತ್ರ’ ಎಂದು ಅವನು ಹುಟ್ಟಿದ ಮರುದಿನ ೩.೫.೧೯೪೧ರಂದು ಹಾಗೂ ಅವನನ್ನು ತೊಟ್ಟಿಲಿಗೆ ಹಾಕಿ ಹೆಸರಿಟ್ಟ ದಿನ ೧೨.೫.೧೯೪೧ರಂದು ಹೆಸರಿಟ್ಟು ಹರಸುವೆನು ಚೈತ್ರನಂ’ ಎಂದು ಬರೆದಿರುವ ಕವನಗಳೇ ಸಾಕ್ಷಿ ಎನ್ನುತ್ತಾರೆ.

ಬಂದನಿದೊ ಕೋಕಿಲೋಲ್ಲಾಸ ಚೈತ್ರಂ, ಕವಿಯ

ಜೀವನ ಸುಖ ವಹಿತ್ರಂ. ಆಗಮನ ಸಂಭ್ರಮಕೆ

ಸಮೆದಿಹಳ್ ಲೋಕಮಾತೆಯೆ ವಸಂತೋದಾರ

ಸಹ್ಯಸೀಮೆಯ ವಿಪಿನರಂಗಮಂ.

ಎಂದು ಕೋಕಿಲೋದಯ ಚೈತ್ರ ಕವಿತೆ ಆರಂಭವಾಗುತ್ತದೆ. ಮೇ ಮೊದಲ ವಾರವೆಂದರೆ ವಸಂತಕಾಲದ ಸಂಭ್ರಮದ ಕಾಲ. ಕವಿಪುತ್ರನ ಜನನಕ್ಕಾಗೆ ಲೋಕಮಾತೆ ಸಹ್ಯಾದ್ರಿಯ ವನರಂಗದಲ್ಲಿ ವಸಂತೋತ್ಸವವನ್ನು ನಡೆಸುತ್ತಿದ್ದಾಳೆ. ಮುಂದೆ ವಸಂತದ ವರ್ಣನೆ ಬರುತ್ತದೆ. ಅಂತಹ ವಸಂತಕಾಲದಲಿ ಜನಿಸಿದ ಪುತ್ರನಿಗೆ ಕೋಕಿಲೋದಯ ಚೈತ್ರ ಎಂಬ ಹೆಸರನ್ನು ಕವಿ ಟಂಕಿಸುತ್ತಾರೆ. ಮಗನ ಸ್ವಾಗತಕ್ಕೆ ಹೊಂಗೆ, ನೆಳಲ ನೆಯ್ಯುವ ಪಸುರ ಪೊಸತಳಿರುಡುಗೆಯನುಟ್ಟು, ತನ್ನ ಪಾದಕೆ ತಾನೆ ಕುಸುಮ ಧವಳಾಕ್ಷತೆಯ ರಂಗವಲ್ಲಿಯನಿಕ್ಕಿ ಸಿದ್ಧವಾಗಿತ್ತಂತೆ! ಹಳದಿಯ ಸಾಲ್ಮರ ಹೊನ್ನರಿಲ ಸೇಸೆಯ ಸೂಸಿ ಶುಭಕೋರಿ ಆಶೀರ್ವದಿಸಿತ್ತಂತೆ!

ಉಲಿಯಿರೈ,

ಮಲೆಯ ನೋಟದ ಚೆಲ್ವು ತಾಂ ಬೀಣೆಯಾಗಲಾ

ಶಾಂತಿ ಮೌನದ ತಂತಿಯಂ ಮೀಂಟೆ ಮಿಡಿಯುತ್ತೆ

ಕವಿಗೆ ರಸರೋಮಾಂಚನವನೀವ, ಓ ಮಲೆಯ

ಗರಿವೆತ್ತ ರಸಿಕರಿರ, ಮುಂದೆ ನಿಮ್ಮೊಡನುಲಿವ

ಗಿರಿವನಪ್ರಿಯ ಸಖನ ಪುಣ್ಯ ಜನ್ಮೋತ್ಸವಂ

ಸಂಭವಿಸಿತಿಂದು!

ಎಂದು ಸಂಭ್ರಮಿಸುತ್ತಾರೆ. ಕುವೆಂಪು ರಾಮನಿಗೆ ಟಂಕಿಸಿದ್ದ ವಿಶೇಷಣ ಗಿರಿವನಪ್ರಿಯ ಎಂಬುದು ಇಲ್ಲಿ ಮಗನಿಗೂ ಬಂದಿದೆ. ತ್ರಿಮೂರ್ತಿಗಳು ತಮ್ಮ ತಮ್ಮ ಹೆಂಡತಿಯರ ಜೊತೆಯಲ್ಲಿ ಬಂದು ಕಂದನನ್ನು ಆಶೀರ್ವದಿಸಬೇಕೆಂದು ಬಯಸುತ್ತಾರೆ. ಜೊತೆಗೆ ತಮ್ಮ ಗುರುಗಳು, ಕವಿಗಳು ಬರಬೇಕೆನ್ನುತ್ತಾರೆ.

ಬಲ್ಲ

ಋಷಿಗಳುಂ, ಮತ್ತೆಲ್ಲ ಗುರುಗಳುಂ, ಮೇಣಖಿಲ

ಕವಿಗಳುಂ ಸರ್ವದೇವತೆಗಳುಂ ಬಂದಿಲ್ಲಿ

ಹರಸುತಿರೆ ದಿವ್ಯ ಕಂದನ ಜೀವಮಾನಮಂ,

ನೀಡುತಿರೆ ತಮ್ಮ ತಮ್ಮಾತ್ಮೀಯ ದಾನಮಂ,

ನಾನೀವೆನಿದೊ ನಿನಗೆ ಈ ಪ್ರೀತಿತಾನಮಂ,

ಮಂತ್ರಛಂದಃಪೂರ್ಣ ಕವಿಹೃದಗಾನಮಂ!

ಎಂದು ಮಗನಿಗೆ ಮೊದಲ ಕಾಣಿಕೆಯ ಕವನಪುಷ್ಪವನ್ನು ಅರ್ಪಿಸುತ್ತಾರೆ. ಅಲ್ಲಿಂದ ಒಂಭತ್ತು ದಿನಗಳ ನಂತರ ಮಗುವಿಗೆ ನಾಮಕರಣವಾಗುತ್ತದೆ. ಕವಿ ಮಗ ಹುಟ್ಟಿದಂದೇ ಕೋಕಿಲೋದಯ ಚೈತ್ರ ಎಂದ ಹೆಸರಿಟ್ಟುಬಿಟ್ಟಿರುತ್ತಾರೆ. ಅಂದು ಅಧಿಕೃತವಾಗಿ ಅದೇ ಹೆಸರನ್ನು ಮಗನಿಗಿಟ್ಟು ಹರಸುತ್ತಾರೆ, ಹೆಸರಿಟ್ಟು ಹರಸುವೆನು ಚೈತ್ರನಂ’ ಎಂಬ ಕವಿತೆಯ ಮೂಲಕ. ವಸಂತಸಂಭ್ರಮದಲ್ಲಿ ಹುಟ್ಟಿದ ಮಗನಾದ್ದರಿಂದ, ಮತ್ತೆ ವಸಂತದ ವರ್ಣನೆ ಕವಿತೆಯಾರಂಭದಲ್ಲಿ ತೆರೆದುಕೊಳ್ಳುತ್ತದೆ. ಆದರೆ ಆ ಸಂಭ್ರಮವೆಲ್ಲಾ ಮಗನ ನಾಮಕರಣಕ್ಕಾಗಿಯೇ! ಪೊಸಮಲರ ಕಂಪಾಂತ ತಂಬೆಲರ ಸೊಂಪು, ಮಲ್ಲಿಗೆ ಹೊದರಿನಲ್ಲಿ ಮಡಿವಾಳ ಹಕ್ಕಿಯ ಸಂಗೀತ, ಜಗದ ಜಡನಿದ್ದೆಯಂ ಬಡಿದೆಚ್ಚರಿಸುವಂತೆವೋಲ್ ಬಡಿದುಕೊಳ್ಳುತ್ತಿರುವ ಕ್ರೈಸ್ತ ದೇವಾಲಯದ ಗಂಟೆ’ ಇವುಗಳ ನಡುವೆಯೇ ಮಗನ ನಾಮಕರಣ ನಡೆಯುತ್ತದೆ.

ತೇಜಸ್ವಿ ಸೋದರನೆ,

ಹೇಮಾಂಗಿನಿಯ ತನೂಭವನೆ, ಹೇ ನನ್ನಾತ್ಮ

ನವ್ಯತಾ ದೇವತಾ ಪ್ರತ್ಯಕ್ಷರೂಪಿ, ಓ

ಕೋಕಿಲೋದಯ ಚೈತ್ರ, ಹರಸುವೆನು ಹೆಸರಿಟ್ಟು,

ಹೆಸರಿನ ಹಿರಿಮೆ ಉಸಿರಿಗೂ ಬರಲಿ ಎಂದೊಲಿದು

ಬಯಸಿ:

ಎಂದು ಮಗನನ್ನು ಆಶೀರ್ವದಿಸುತ್ತಾರೆ. ವಿಂಧ್ಯ ಸಹ್ಯಾದ್ರಿ ಮಲಯ ಪರ್ವತಗಳು, ಗಂಗಾ ಯಮುನ ತುಂಗಭದ್ರಾ ನದಿಗಳು ನಿನಗಕ್ಕೆ ಭಾರತದ ಬಾಲ್ಯದಾಡುಂಬೊಲದ ಸಂಗಾತಿಗಳ್! ಎನ್ನುತ್ತಾರೆ.

ಸರ್ವಲೋಕ ಶೈಲೇಶ್ವರಂ

ನಿನಗಕ್ಕೆ ತಾಂ ಪ್ರತಿಸ್ಪರ್ಧಿ, ಹೈಮಾಚಲಂ,

ಧವಳಗಿರಿ ಶಿರವರೇಣ್ಯಂ, ಮಾನಸ ಸರೋ

ಜನ್ಮ ಮಹಿಮಂ! ಶ್ವಾಸಕೋಶಗಳಕ್ಕೆ ನಿನಗೆ

ಸಾಗರಾಕಾಶಂಗಳ್!

ತನ್ನ ಕಂದನಿಗೆ ಶಂಕರರ ಶ್ರೀಬುದ್ಧಿ, ರಾಮಾನುಜರ ಹೃದಯ, ಕ್ರಿಸ್ತ ಬುದ್ಧರ ಮಹಾಸಾತ್ವಿಕ ಕೃಪಾಸ್ಥೈರ್ಯ, ಗಾಂಧಿಯ ದಯಾ ಧೈರ್ಯ, ಶ್ರೀರಾಮಕೃಷ್ಣ ಮತ್ತು ವಿವೇಕನಂದರ ಧರ್ಮದೌದಾರ್ಯದ ಸಮಸ್ತ ಶ್ರೇಯಸ್ಸುಗಳು ಬಂದು ಆಶೀರ್ವದಿಸಬೇಕೆಂದು ಬಯಸುತ್ತಾರೆ. ಮುಂದುವರೆದು,

ನಿಖಿಲ ಭುವನ ಶ್ರೇಷ್ಠ ಗಾಯಕರ್

ಶಿಲ್ಪಿಗಳ್ ವರ್ಣಶಿಲ್ಪಿಗಳೆಲ್ಲರೈತಂದು

ತಂತಮ್ಮ ದಿವ್ಯಕಲೆಯಂ ಪ್ರಚೋದಿಸಲಿ ಮೇಣ್

ಪ್ರಿಯದಿಂ ಪ್ರತಿಷ್ಠಿಸಲಿ ಈ ನನ್ನ ಚಿಣ್ಣನೀ

ಕೋಕಿಲೋದಯ ಚೈತ್ರನಾತ್ಮಮಂದಿರದಮೃತ

ಪೀಠದಲಿ!

ಇಲ್ಲಿಯವರೆಗೆ ಮಗನ ಭವಿಷ್ಯತ್ತಿಗೆ ಆಶೀರ್ವಾದದ ತೋರಣವನ್ನೈದುತ್ತಿದ್ದ ಕವಿಯ ಮನಸ್ಸು, ಇದ್ದಕ್ಕಿದ್ದಂತೆ, ಫ್ರಾನ್ಸಿನಲ್ಲಿದ್ದ ತನ್ನ ಶ್ರೀಗುರು ಸಿದ್ದೇಶ್ವರಾನಂದರ ಕಡೆಗೆ ತಿರುಗುತ್ತದೆ. ಎರಡನೆಯ ಮಹಾಯುದ್ಧದ ಮಾರಕ ಯಜ್ಞದ ಮಧ್ಯೆ ಸಿಕ್ಕಿದ್ದ ಅವರ ಕ್ಷೇಮಕ್ಕಾಗಿ ಕಾತರಿಸಿ ಪ್ರಾರ್ಥಿಸುತ್ತದೆ. ಮಗನ ಹರಕೆಯೆಂತೆಯೇ ಹಿರಿಯ ಹರಕೆ ಗುರುವಿನ ಕ್ಷೇಮ ಎಂದು ಭಾವಿಸುತ್ತದೆ.

ಈ ಹರಕೆಗಿಂ ಮಿಗಿಲ್ ಹಿರಿಹರಕೆ

ಇರ್ಪೊಡಾ ಹರಕೆಯಂ ಯೋಗ ದಿವ್ಯಜ್ಞಾನಿ

ಜಗದೀಶ್ವರಗೆ ಬಿಡುವೆನೈ; ಬೇಡಿಕೊಳ್, ಕಂದಾ!

ಎಂದು ತನ್ನ ಗುರುವಿನ ಕ್ಷೇಮಕ್ಕಾಗಿ ನನ್ನ ಜೊತೆ ನೀನು ಬೇಡಿಕೊ ಎಂದು ತನ್ನ ಮಗನನ್ನು ಕೇಳಿಕೊಳ್ಳುತ್ತಾರೆ. ಈ ಪ್ರಾರ್ಥನೆಯ ಕಾಲಕ್ಕಾಗಲೇ ಹಿಟ್ಲರನ ಗೂಢಚರ ಸೇನೆ ಫ್ರಾನ್ಸನ್ನು ಆಕ್ರಮಿಸಿತ್ತು. ಪಾರಂಪರಿಕವಾದ ಪ್ಯಾರಿಸ್ ನಗರ ಹಾಳಾಗಬಾರದೆಂದು ಅದನ್ನು ತೆರೆದನಗರ’ವೆಂದು ಘೋಷಿಸಲಾಗಿತ್ತು. ಸ್ವಾಮೀಜಿ ಸರ್ಕಾರದ ಅಧೀನದಲ್ಲಿರಬೇಕಾಗಿತ್ತು. ಅವರ ಕ್ಷೇಮಕ್ಕಾಗಿ ಕವಿಯ ಪ್ರಾರ್ಥನೆಯೊಂದಿಗೆ ಕವಿತೆ ಮುಕ್ತಾಯವಾಗುತ್ತದೆ.

ನೀನ್ ಬಂದ ಈ ಜಗಂ ನೀನ್ ಬಿಡುವ ಆ ಜಗಕೆ

ಕೀಳಾಗುವಂತೆ ಬಾಳ್: ಇಂದಲ್ಲಿ, ಪಶ್ಚಿಮದಿ

ಮಾನವೀಯತೆ ಮಾಣ್ದು ತಾಂಡವಂಗೈಯುತಿದೆ

ನೀಚ ರಾಕ್ಷಸತೆ, ಯಾಂತ್ರಿಕ ಕ್ರೌರ್ಯದಾ ರುದ್ರ

ರಣದಲಿ. ಪೆಣ್ಗಳಂ ಮಕ್ಕಳಂ ಬಲಿಗೆಯ್ದು

ತಣಿಸುತಿರುವರು ಸಮರಚಂಡಿಯಂ. ಸೆಣಸುತಿವೆ

ಹಣೆಗೆ ಹಣೆ ಘಟ್ಟಿಸುತ್ತೆರೆಡು ದುಶ್ಯಕ್ತಿಗಳ್

ಲೋಕ ಚಕ್ರಾಧಿಪತ್ಯಕ್ಕೆ. ಆ ದುಷ್ಕರ್ಮ

ಶಕ್ತಿದ್ವಯಂಗಳುಂ ಹೇಳ ಹೆಸರಿಲ್ಲದೆಯೆ

ಒಂದರಿಂದೊಂದಳಿದು ಶೋಕವೊಂದುಳಿಯಲಾ

ಶೋಕಕೊಂದೊಳ್ಪಿನಾಕಾರಮಂ ನೀಡಲ್ಕೆ

ನೀಂ ಸತ್ಕೃತಿಯ ಲಸಚ್ಛಿಲ್ಪಿವರನಾಗೆಂದು

ಹರಸುವೆನು; ಹರಸುವೆನೊ ಗುರುದೇವನಂ ನುತಿಸಿ; ಮೇಣ್

ನನ್ನನಾಶೀರ್ವದಿಸಿ ಗೃಹಸ್ಥಾಶ್ರಮಕ್ಕೊಯ್ದು,

ಧರ್ಮದೌದಾರ್ಯಮಂ ಪೇಳೆ ಪಶ್ಚಿಮಕೆಯ್ದಿ,

ಐರೋಪ್ಯ ಯುದ್ಧದಾ ಕ್ರೌರ್ಯ ಭೂಮಿಯೊಳಿರ್ಪ

ನನ್ನ ಆ ಸಿದ್ಧೇಶ್ವರಾನಂದ ಸ್ವಾಮೀಜಿಗೆ

ಸುಕ್ಷೇಮಮಕ್ಕೆಂದು ಬಯಸಿ ನಲ್ಬಯಕೆಯಂ!

ಕವಿಯ ಪ್ರಾರ್ಥನೆ ಹುಸಿಯಾಗಲಿಲ್ಲ. ಪ್ರಭಾವಶಾಲಿ ಭಕ್ತಮಿತ್ರರ ನೆರವಿನಿಂದ ಸ್ವಾಮೀಜಿ ಪಾರಾದರು. ಯುದ್ಧಾನಂತರ ೧೯೪೫ರಲ್ಲಿ ಮತ್ತೆ ಪ್ಯಾರಿಸ್ಸಿಗೆ ಬಂದು ಗ್ರಟ್ಸ್’ನಲ್ಲಿ ಸೆಂಟರ್ ಫಾರ್ ವೇದಾಂತಿಕ್ ರಾಮಕೃಷ್ಣ’ ಸಂಸ್ಥೆಯನ್ನು ಪುನರುಜ್ಜೀವನಗೊಳಿಸುತ್ತಾರೆ. ಮುಂದೆ ೧೯೫೭ರಲ್ಲಿ ಅವರು ನಿಧನರಾಗುವವರೆಗೂ ಕವಿಯೊಂದಿಗೆ ಪತ್ರ ಸಂಪರ್ಕದಲ್ಲಿದ್ದ ಸ್ವಾಮಿಗಳು, ಪುಸ್ತಕಗಳನ್ನು ಕಳುಹಿಸುತ್ತಾ ತಮ್ಮ ಪ್ರಿಯ ಶಿಷ್ಯನಿಗೆ ಜಗತ್ತಿನ ಜ್ಞಾನದ ಹೊಸ ಹೊಸ ಬೆಳಕುಗಳಿಗೆ ಬಾಗಿಲುಗಳನ್ನು ತೆರೆದು ಹೊಸಜ್ಞಾನ ವಲಯಕ್ಕೆ ಕವಿಯನ್ನು ನೂಕುತ್ತಿದ್ದರು. “ನನ್ನ ಚೇತನೋದ್ಬೋಧಕ್ಕೆ ಅವರಿಂದಾದ ದೈವೀ ಉಪಕಾರವನ್ನು ನೆನೆದು ನನ್ನ ಭಕ್ತಿ ೯.೧.೧೯೬೦ರಲ್ಲಿ ಉದಯರವಿಯ ದೇವರ ಮನೆಯಲ್ಲಿ ಧ್ಯಾನದ ಕಾಲದಲ್ಲಿ ರಚಿಸಿದ ಕೃತಜ್ಞತೆ’ ಎಂಬ ಕವನವನ್ನು ಇಲ್ಲಿ ಅರ್ಪಿಸುತ್ತಿದ್ದೇನೆ” ಎಂದು ನೆನಪಿನ ದೋಣಿಯಲ್ಲಿ ದಾಖಲಿಸಿದ್ದಾರೆ. ಹಾಗೆ ಅರ್ಪಿಸಿದ ಕವಿತೆಯ ಪೂರ್ಣಪಾಠ ಇಲ್ಲಿದೆ.

ಗುರುವಿನೆಡೆಗೆ ಕರೆದ ಗುರುವೆ,

ನನ್ನ ಜೀವ ದೇವತರುವೆ,

ನಿಮ್ಮನೆಂತು, ಹೇಳಿ ಮರೆವೆ?

ನೆ ನೆ ವೆ

ಕೃತಜ್ಞತೆಯೊಳನುದಿನ!

ಮಾನ್ಯರಲ್ಲಿ ಪರಮ ಮಾನ್ಯ!

ಸಾಮಾನ್ಯರಲಿ ಸಾಮಾನ್ಯ!

ನಿಮ್ಮ ಕೃಪೆಯೊಳಾದೆ ಧನ್ಯ.

ನಿ ಮ್ಮ

ನೆನೆವುದೆನೆಗೆ ಪೂಜನ!

ಸತಿಯನೊಲಿದು ನಿಮ್ಮ ನೆನೆವೆ;

ಸುತರ ನಲಿಸಿ ನಿಮ್ಮ ನೆನೆವೆ;

ಕೃತಿಯನೋದಿ ನಿಮ್ಮ ನೆನೆವೆ;

ನಿ ಮ್ಮ

ನೆನೆವುದಾತ್ಮ ಸಾಧನೆ!

ಅಹೈತುಕೀ ಕೃಪಾಸಿಂಧು,

ನಿಷ್ಕಾರಣ ಆತ್ಮಬಂಧು,

ಅಂದಿನಂತೆ ಇಂದು ಮುಂದು

ಇರಲಿ ನನಗೆ ಎಂದೆಂದೂ,

ನಿ ಮ್ಮ

ಮೈತ್ರಿಯ ಅನುಮೋದನೆ!

‍ಲೇಖಕರು G

28 December, 2012

1 Comment

  1. Kiran

    Poornachandra Tejaswi, Kokilodaya Chaitra –

    On a Light note, as read somewhere: KUVEMPU did not name his sons; he sentenced them!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading