ಕಾಣದ ಕಡಲಿಗೆ ಹಂಬಲಿಸಿದೆ ಮನ…
ಹೆಜ್ಜೆ 21
ಕ್ಷಿಪಣಿ ಮಾನವನ ಕಣ್ಮರೆ

ಬೆಳಿಗ್ಗೆ ಗುಂಡೇನಹಳ್ಳಿಯಿಂದ ಹೊರಡಲು ಸಿದ್ಧನಾದೆ. ಭಾವುಕರಾದ ಹುಡುಗರನ್ನು ಸಮಾಧಾನ ಪಡಿಸಿ ಅಲ್ಲಿಂದ ಹೊರಟೆ. ಭಟ್ಟರು ಬ್ಯಾಡಗಿ ಮೇಲೆ ಪ್ರಯಾಣ ಬೆಳೆಸಿ ರಾಣೆಬೆನ್ನೂರು ತಲುಪುವಂತೆ ಸಲಹೆಯಿಟ್ಟಿದ್ದರು. ನನಗೇಕೋ ಆ ಯೋಜನೆ ಇಷ್ಟವಾಗಲಿಲ್ಲ. ಹೆದ್ದಾರಿ ಹಿಡಿದು ಮೋಟೆಬೆನ್ನೂರು ದಾಟಿ ಮೂರು ಮೈಲು ನಡೆಯುವಷ್ಟರಲ್ಲಿ, ಹೆದ್ದಾರಿಯ ಎಡಕ್ಕೆ ಒಂದು ಗುಡ್ಡ ನನ್ನನ್ನು ಕೈಬೀಸಿ ಕರೆದಂತಾಯಿತು.
ಅದರ ಅರ್ಧ ಭಾಗವನ್ನು ಕಸಿದುಕೊಂಡ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರು. ಮನುಷ್ಯನ ಜ್ಞಾನ, ವಿಜ್ಞಾನ, ತಂತ್ರಜ್ಞಾನಕ್ಕೆ ನಲುಗಿ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿತ್ತು. ಆ ಗುಡ್ಡವನ್ನು ಏರಿ, ಹೆದ್ದಾರಿ ದಿಕ್ಕಿಗೆ ತಿರುಗಿಕೊಂಡು ಒಂದು ಬಂಡೆ ಮೇಲೆ ಕುಳಿತು ಅದರ ಅಸಹಾಯಕ ಕಥೆಯನ್ನು ಮೌನವಾಗಿ ಕೇಳಲು ನನ್ನ ಅಂತಃಕರಣದ ಧಾತು ಹೃದಯದಲ್ಲಿ ನಾಟಿ ಬುದ್ಧಿಯೊಂದಿಗೆ ಧ್ವನಿಯಾಯಿತು.
ನನಗೆ ದಾರಿಯಲ್ಲಿ ಕಾಣುವ ಗುಡ್ಡಗಳದ್ದೇ ಒಂದು ಚಿಂತೆಯಾಗಿತ್ತು. ಅದರ ಜೊತೆ ನನ್ನ ಇತಿಮಿತಿಗಳು ಮತ್ತು ನಿಸ್ಸಹಾಯಕತೆಯನ್ನು ತಿಳಿಸುವಾಗ ಕಣ್ಣುಗಳಲ್ಲಿ ನೀರು ಚಿಮ್ಮಿದವು. ಬಂಡೆ ಮೇಲೆ ಕುಳಿತು ಭಟ್ಟರು ಕೊಟ್ಟಿದ್ದ ದಾಳಿಂಬೆ ಹಣ್ಣನ್ನು ಸುಲಿದು ತಿಂದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದೆ. ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದವರೆಲ್ಲಾ ನನ್ನ ಕಡೆಗೇ ತಿರುಗಿ ನೋಡುತ್ತಿದ್ದುದ್ದು ನನ್ನ ಗಮನಕ್ಕೆ ಬಂತು.
ನಿನಗೆ ಸಾವಿರಾರು ವರ್ಷಗಳ ಅನುಭವ,
ನಿಸ್ವಾರ್ಥ ಬದುಕು ಬಾಳಿದವ.
ಮೋಡಗಳನ್ನು ತಡೆದು ಕರಗಿಸಿ,
ಭುವಿಗೆ ಮಳೆಹನಿಗಳ ನೀರೆರೆದವ.
ಕಲ್ಲನ್ನು ಗರ್ಭದಲ್ಲಿಟ್ಟು, ಬಿದ್ದ ಮಳೆನೀರನ್ನು ಹರಿಸಿ,
ಕೆರೆ, ಕಟ್ಟೆ, ನದಿಗಳಿಗೆ ಕುಡಿಸಿದವ.
ನೀನು ತಲೆಮೇಲೊತ್ತ ಗಿಡ ಮರ ಗುಡಿಗಳೆಷ್ಟೋ,
ನಿನ್ನ ಮೇವಿಗೆ ಬಂದೋದ ಪ್ರಾಣಿಗಳೆಷ್ಟೋ.
ಅದೆಷ್ಟೋ ಊರುಗಳ ಮೈಲುಗಲ್ಲಾದೆ,
ಅದೆಷ್ಟೋ ಪೀಳಿಗೆಯ ನೆನಪುಗಳಾದೆ.
ನಿನ್ನ ನೋವಿನ ದನಿಗೆ ನಾ ಕಿವುಡನಾದೆ.
ನಿನ್ನ ಋಣವನ್ನು ತೀರಿಸದ ಭ್ರಷ್ಟನಾದೆ.
ತನ್ನ ಹೆತ್ತತಾಯಿಯ ಗರ್ಭವನ್ನೆ ಕಿತ್ತು ತಿನ್ನುವ ಜನರಿಂದ,
ನೀ ಕೊಲೆಯಾಗುವುದನ್ನು ನೋಡುವ ನಾ ಮೂಕ ಪ್ರೇಕ್ಷಕನಾದೆನಾ? ಓ ಪ್ರಕೃತಿ
ಗುಡ್ಡವನ್ನಿಳಿದು ಒಂದು ಮೈಲುನಡೆದು ಹೆದ್ದಾರಿಯ ಪಕ್ಕದಲ್ಲಿದ್ದ ಒಂದು ಪೆಟ್ಟಿಗೆ ಅಂಗಡಿಯಲ್ಲಿ ಟೀ ಕುಡಿದು ಅವನ ವಿಚಾರಗಳ ಬಗ್ಗೆ ಒಂದೆರಡು ನಿಮಿಷ ಮಾತನಾಡಿದೆ. ಅವನೇ ಕರೆದುಕೊಂಡು ಹೋಗಿ, ಅರ್ಧ ಮೈಲು ದೂರವಿದ್ದ ಛತ್ರವೆಂಬ ಊರಿನ ಪ್ರೌಢಶಾಲೆಗೆ ಬಿಟ್ಟು ಬಂದ. ಶಾಲೆಯನ್ನು ಹೊರಗಿನಿಂದ ನೋಡಿದಾಗ ಇದು ಖಾಸಗಿ ಶಾಲೆಯೋ ಅಥವಾ ಸರ್ಕಾರಿ ಶಾಲೆಯೋ ಎಂಬ ಅನುಮಾನ ಬಂತು.
ಶಾಲೆಯ ಮುಖ್ಯಸ್ಥರನ್ನು ಹೋಗಿ ವಿಚಾರಿದಾಗ, ದುಬೈ ದೇಶದಲ್ಲಿ ಕೆಲಸ ಮಾಡುತ್ತಿರುವ ಛತ್ರದವರೇ ಆದ ಡಾ|| ಮುಕ್ಕಯ್ಯಸ್ವಾಮಿ ಕಳಸೂರಮಠ ದಂಪತಿಗಳು ಈ ಶಾಲೆಯನ್ನು ದತ್ತು ಪಡೆದು ತಮ್ಮ ತಾಯಿ ಶ್ರೀಮತಿ ನಿಂಗಮ್ಮ ವೀರಯ್ಯ ಕಳಸೂರಮಠ ಅವರ ಹೆಸರಿನಲ್ಲಿ ತಮ್ಮ ಭೂಮಿಯಲ್ಲೆ ಕಟ್ಟಡ, ಶೌಚಾಲಯಗಳು, ಆಟದ ಮೈದಾನ, ದೇವರ ಗುಡಿಯೊಂದಿಗೆ ಒಂದು ಸುಸಜ್ಜಿತ ಶಾಲೆಯನ್ನು ತಮ್ಮ ಹಳ್ಳಿಗರಿಗಾಗಿ ಕಟ್ಟಿಸಿಕೊಟ್ಟಿದ್ದರು. ಅದಲ್ಲದೇ ಉತ್ತಮ ಅಂಕಗಳನ್ನು ಪಡೆಯುತ್ತಿರುವ ಬಡ ಮಕ್ಕಳ ಉನ್ನತ ವಿದ್ಯಾಭ್ಯಾಸದ ಖರ್ಚನ್ನು ಹೊರುತ್ತಿರುವುದು ಬಹಳ ಶ್ಲಾಘನೀಯವಾದ ಕೆಲಸವೆನಿಸಿತು.
ಶಾಲೆಯ ಮುಖ್ಯಸ್ಥರು ಅಲ್ಲಿಯ ವ್ಯವಸ್ಥೆ ಮತ್ತು ಕಾರ್ಯಕ್ರಮಗಳನ್ನು ವಿವರಿಸಿ, ಪ್ರಾರ್ಥನೆಯಾದ ನಂತರ ನನ್ನ ಉಪನ್ಯಾಸಕ್ಕೆ ಅವಕಾಶ ಮಾಡಿಕೊಟ್ಟರು. ನನಗೆ ಕೆ.ಎಂ. ರೇವಣ್ಣನವರು ಬರೆದಿರುವ “ಚೆನ್ನಬಸವಣ್ಣ” ಎಂಬ ಕಿರು ಪುಸ್ತಕವನ್ನು ಗೌರವಪೂರ್ವಕವಾಗಿ ಕೊಟ್ಟು ಸ್ವಾಗತಿಸಿದರು. ಮುಖ್ಯಸ್ಥರ ಕುರ್ಚಿಯ ಹಿಂದಿನ ಗೋಡೆಯ ಮೇಲೆ ಬರೆದಿದ್ದ ಹಿತನುಡಿಗಳೊಂದಿಗೆ ನನ್ನ ಉಪನ್ಯಾಸ ಶುರುಮಾಡಿದೆ.
“ಇಫ್ ಯು ಸಲ್ಯೂಟ್ ಯುವರ್ ಡ್ಯೂಟಿ,
ಯು ನೊ ನೀಡ್ ಟು ಸಲ್ಯೂಟ್ ಎನಿಬಡಿ.
ಬಟ್ ಇಫ್ ಯು ಪೊಲ್ಯೂಟ್ ಯುವರ್ ಡ್ಯೂಟಿ,
ಯು ನೀಡ್ ಟು ಸಲ್ಯೂಟ್ ಎವರಿಬಡಿ.”
- ಎಪಿಜೆ ಅಬ್ದುಲ್ ಕಲಾಂ
ಉಪನ್ಯಾಸದ ನಂತರ ದೇಶದ ಸ್ವಚ್ಛತಾ ಅಭಿಯಾನದ ಬಗ್ಗೆ ಸಂವಾದ ನಡೆಸಿ ಮುಗಿಸಿದೆ. ಮಧ್ಯಾಹ್ನ ಊಟದ ಸಮಯ ಮುಂಚೆಯೇ ಕಾಕೋಳದ ಉಪನ್ಯಾಸವನ್ನು ಮುಗಿಸಬೇಕೆಂದುಕೊಂಡು ಛತ್ರದ ಶಾಲೆಯಿಂದ ಹೊರಟು ಎರಡು ಮೈಲುಗಳ ದಾರಿಯನ್ನು ಬಹುಬೇಗನೆ ನಡೆದು ಕ್ರಮಿಸಿದೆ. ಕಾಕೋಳದ ಶ್ರೀ ಬೀರೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಿಗೆ ಊಟಕ್ಕೆ ಮುಂಚೆಯೇ ನನ್ನ ಉಪನ್ಯಾಸಕ್ಕೆ ಅವಕಾಶ ಮಾಡಿಕೊಡಬೇಕೆಂಬ ಆಸೆಯಿದ್ದರೂ, ಮತ್ತೊಬ್ಬ ಹಿರಿಯ ಶಿಕ್ಷಕರು ಅದಕ್ಕೆ ತಣ್ಣೀರೆರಚಿದರು.
ನನ್ನನ್ನು ಎರಡು ಗಂಟೆಗಳು ಕಾಯುವಂತೆ ಮಾಡಿ, ಮಧ್ಯಾಹ್ನದ ಊಟವನ್ನು ಬಡಿಸಿ ಸತ್ಕರಿಸಿದರು. ಊಟವಾದ ನಂತರ ಶಾಲೆಯ ಆವರಣವನ್ನು ಒಂದು ಸುತ್ತು ಓಡಾಡಿಕೊಂಡು ಬಂದೆ. ಸಾಕಷ್ಟು ಗಿಡ ಮರಗಳಿಂದ ಕಂಗೊಳಿಸಿದ್ದರೂ, ಶೌಚಾಲಯದ ವಾಸನೆ ಎಲ್ಲರ ಮೂಗನ್ನು ಸೆಳೆಯುತ್ತಿತ್ತು. ಶಾಲೆಯ ಮುಂದಿದ್ದ ಕೆಟ್ಟು, ಹಸಿರು ಪಾಚಿ ಆವರಿಸಿಕೊಂಡು ವಾಕರಿಕೆ ಬರುವಂತೆ ಮಾಡುತ್ತಿದ್ದ ಒಂದು ಪುಟ್ಟ ಹೊಂಡ ಊರಿನ ಮಾನವನ್ನು ನಿರಾಸಾಯವಾಗಿ ಕಳೆಯುತ್ತಿತ್ತು. ಉಪನ್ಯಾಸದ ನಂತರ ಚಂದ್ರಶೇಖರ ವಸ್ತ್ರದ ಅವರು ಬರೆದಿರುವ “ಮಾನವತಾವಾದಿ ಬಸವಣ್ಣನವರು” ಎಂಬ ಪುಸ್ತಕವನ್ನು ಕೊಟ್ಟು ಬೀಳ್ಕೊಟ್ಟರು.
ಎರಡು ಮೈಲು ದೂರವಿದ್ದ ಹನುಮನಮಟ್ಟಿಯಲ್ಲಿನ ಕೆ.ಎಲ್.ಇ ಶಾಲೆಯ ಆವರಣ ತಲುಪಿದೆ. ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ಆವರಣಕ್ಕೆ ಅಂಟಿಕೊಂಡೇ ಇದ್ದ ಶಾಲೆ, ಕಾಡಿನೊಳಗಿನ ಒಂದು ರೆಸಾರ್ಟ್‍ನಂತೆ ಇತ್ತು. ವಿದ್ಯಾರ್ಥಿಗಳ ಆಟವನ್ನು ನೋಡುತ್ತಾ ಕುಳಿತಿದ್ದ ಶಾಲೆಯ ಮುಖ್ಯಸ್ಥರನ್ನು ಭೇಟಿ ಮಾಡಿ ನನ್ನ ವಿಚಾರ ತಿಳಿಸಿದೆ. ಅವರು ಖುಷಿಗೊಂಡು ಆಟವಾಡುತ್ತಿದ್ದವರನ್ನು ಒಳಗೆ ಕರೆಸಿ ತಕ್ಷಣ ಅವಕಾಶಮಾಡಿಕೊಟ್ಟರು. ವಿದ್ಯಾರ್ಥಿಗಳಿಗೆ ನಾನೊಬ್ಬ ಆಗರ್ಭ ಶ್ರೀಮಂತ ಸಮಾಜ ಸೇವಕನಂತೆ ವರ್ಣಿಸಿದ್ದು ನನಗೆ ನಗು ತರಿಸಿತು.
ಆ ವರ್ಣನೆ ಮಕ್ಕಳಲ್ಲಿ ನನ್ನ ಉಪನ್ಯಾಸವನ್ನು ಶಿಸ್ತಿನಿಂದ ಕೇಳುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. ಎಂದಿಗಿಂತ ತುಸು ಹೆಚ್ಚು ತಮಾಷೆ ಸೇರಿಸಿ ನನ್ನ ಜೊತೆ ಸಲಿಗೆಯಿಂದ ಮಾತಾಡುವಂತೆ ಮಾಡಲು ನನಗೆ ಜಾಸ್ತಿ ಸಮಯ ಬೇಕಾಗಲಿಲ್ಲ. ಕೊನೆಗೆ ಚೆನ್ನಬಸವಣ್ಣನವರ “ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟು” ಎಂಬ ಮಾತಿನ ತಾತ್ಪರ್ಯದೊಂದಿಗೆ ನನ್ನ ಉಪನ್ಯಾಸವನ್ನು ಮುಗಿಸಿದೆ.
“ನಾವು ಒಂದು ಸಣ್ಣ ಗುಂಪು, ನಾವೇನು ಮಾಡಲು ಸಾಧ್ಯವೆಂದು ಧೃತಿಗೆಡಬೇಡಿ. ನಾನು ಈ ಕೆಲಸ ಶುರುಮಾಡಿದಾಗ ಒಂಟಿಯಾಗಿದ್ದೆ. ನನ್ನ ಮನೆಯವರಿಂದ ಹಿಡಿದು ಯಾರೂ ನನ್ನ ಕೆಲಸದಲ್ಲಿರಲಿಲ್ಲ. ನಾ ಎಲ್ಲಿಗೆ ಹೋಗಬೇಕು, ಎಲ್ಲಿಂದ ಶುರುಮಾಡಬೇಕು ಎಂಬುದಾಗಿ ಪ್ರಶ್ನೆಗಳು ಕಾಡುತ್ತಿದ್ದವು. ನಾನು ನನ್ನ ಮೊಬೈಲ್ ಅಥವಾ ಅಗತ್ಯಗಳಿಗೆ ಹಣವನ್ನು ತೆಗೆದುಕೊಳ್ಳದೇ ಇರುವುದೂ ಒಂದೂ ದೊಡ್ಡ ಸಮಸ್ಯೆಯಾಗಿ ಕಂಡಿತು. ನಮ್ಮ ಜನರು ಯಾವ ಯಾವ ವಸ್ತುಗಳ ವ್ಯಸನದಿಂದ ಬಳಲುತ್ತಿದ್ದಾರೋ ಅವುಗಳ ಹೊರಗೂ ಒಂದು ಸುಂದರ ಜೀವನವಿದೆ ಎಂದು ತೋರಿಸಬೇಕಾಗಿತ್ತು.
ಸಮಾಜದ ಸೇವೆಯಲ್ಲಿ ತೊಡಗುವ ಮನಸ್ಸು ಮಾಡಿದರೆ ಸಾಕು, ಮಿಕ್ಕಿದ್ದನ್ನು ಸಮಾಜವೇ ನಡೆಸಿಕೊಂಡು ಹೋಗುವುದರ ಜೊತೆಗೆ ನನ್ನ ಕ್ಷೇಮವನ್ನೂ ಕೂಡ ಕಾಪಾಡುತ್ತದೆ ಎಂಬ ಅರಿವಾಗಿತ್ತು. ಈ ಪ್ರಯಾಣದಲ್ಲಿ ನಾನು ಒಂಟಿಯಲ್ಲ. ಈಗಾಗಲೇ ನನ್ನ ಜೊತೆ ಕೈಜೋಡಿಸುತ್ತೇವೆ ಎಂದು ಮೂವತ್ತೈದು ಶಾಲೆಯ ಸಾವಿರಾರು ಮಕ್ಕಳು ಮತ್ತು ನೂರಾರು ಶಿಕ್ಷಕರು ಪ್ರತಿಜ್ಞೆ ಮಾಡಿದ್ದಾರೆ. ನಾನು ಮೈಸೂರನ್ನು ತಲುಪುವ ಮುಂಚೆ ಇನ್ನೂ ಸಾವಿರಾರು ಮಕ್ಕಳು ಹಾಗೂ ನೂರಾರು ಶಿಕ್ಷಕರು ನಮ್ಮ ಜೊತೆ ಕೈಜೋಡಿಸುತ್ತಾರೆ.
‘ಒಗ್ಗಟ್ಟಿನಲ್ಲಿ ಬಲವಿದೆ’, ‘ಹನಿ ಹನಿಗೂಡಿದರೆ ಹಳ್ಳ’ ಎಂಬ ಮಾತುಗಳು ಸಾವಿರಾರು ವರ್ಷಗಳಿಂದ ಚಾಲನೆಯಲ್ಲಿದೆ. ನಾನು ಅದನ್ನೆ ನಂಬಿ ಈ ಕೆಲಸಕ್ಕೆ ಇಳಿದಿದ್ದೇನೆ. ನನ್ನ ನಂಬಿಕೆಯನ್ನು ಹುಸಿಗೊಳಿಸಬೇಡಿ. ಪ್ರತಿಜ್ಞೆ ಪಡೆದಂತೆ ಒಬ್ಬಬ್ಬರೂ ಒಂದೊಂದು ಗಿಡ ನೆಟ್ಟು ಮರವಾಗಿ ಬೆಳೆಸಿದರೂ ಸಾಕು. ಈ ಎರಡು ಮೂರು ತಿಂಗಳ ಪ್ರಯಾಣದಲ್ಲೇ ನಾವೆಲ್ಲರೂ ಸೇರಿ ಸಾವಿರಾರು ಸಸಿಗಳನ್ನು ನೆಟ್ಟು, ಅದರ ರಕ್ಷಣೆ ಮತ್ತು ಪೋಷಣೆಯ ಜವಾಬ್ದಾರಿಯನ್ನು ಹೊತ್ತಂತೆ ಆಗುತ್ತದೆ. ಪುಟ್ಟದೊಂದು ಕಾಡನ್ನೇ ಬೆಳಸಿದಂತಾಗುತ್ತದೆ. ಆದರೆ ನಾವು ಒಂದೇ ಸಸಿಗೆ ನಮ್ಮ ಕೆಲಸವನ್ನು ನಿಲ್ಲಿಸಬೇಕಾ?” ಎಂದು ಜೋರಾಗಿ ಕೇಳಿದೆ.
ಎಲ್ಲರೂ ಒಕ್ಕೊರಲಿನಿಂದ ಜೋರಾಗಿ “ಇಲ್ಲಾ ಸರ್” ಎಂದು ಕೂಗಿದರು.
ಹೇಗೆ ಯಾವುದೇ ಶಿಕ್ಷಣವಿಲ್ಲದೆ, ಹಣವಂತೆಯಲ್ಲದ, ಹಳ್ಳಿಯಲ್ಲಿ ಬೆಳೆದ ಸಾಲುಮರದ ತಿಮ್ಮಕ್ಕ ಹತ್ತು ಹದಿನೈದು ವರ್ಷಗಳ ಹಿಂದೆಯೇ ಸಸಿಗಳನ್ನು ನೆಟ್ಟು, ರಕ್ಷಣೆ ಮಾಡಿ, ಹತ್ತಾರು ಮೈಲುಗಳಿಂದ ತಂದು ನೀರೆರೆದು ಪೋಷಿಸಿ ನೂರಾರು ಮರಗಳನ್ನು ಬೆಳೆಸಿದಳೆಂಬುದನ್ನು ಮನರಿಕೆಯಾಗುವಂತೆ ಹೇಳಿದೆ. “ಅಂತಹ ಹಳ್ಳಿಯ ಮಹಾತಾಯಿಯೇ ತನ್ನ ಇಚ್ಛಾಶಕ್ತಿಯಿಂದ, ಧೃಡ ನಿಲುವಿನಿಂದ ಪರಿಸರವನ್ನು ಉಳಿಸುವ ಕಾರ್ಯ ಮಾಡಿರಬೇಕಾದರೆ, ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ನಾವು ಮಾಡುತ್ತಿರುವ ಕೆಲಸ ತುಂಬಾ ಚಿಕ್ಕದು ಎಂದು ಅನಿಸುವುದಿಲ್ಲವೇ” ಎಂದು ಕೇಳಿದೆ.
“ಹೌದು ಸರ್” ಎಂದು ಜೋರಾಗಿ ಉತ್ತರಕೊಟ್ಟರು. ನನ್ನ ವಂದನೆಗಳೊಂದಿಗೆ ಉಪನ್ಯಾಸವನ್ನು ಮುಗಿಸಿ ಹೊರಟೆ.
ಅಲ್ಲಿಂದ ರಾಣೆಬೆನ್ನೂರಿಗೆ ಒಂಬತ್ತು ಮೈಲುಗಳು. ಸೂರ್ಯ ಮುಳುಗಲು ಇನ್ನೂ ಸಮಯವಿದ್ದರಿಂದ ಬಹಳ ಒತ್ತಾಯ ಮಾಡಿದರೂ ಯಾವ ಶಿಕ್ಷಕನ ವಾಹನವನ್ನೂ ಏರಲಿಲ್ಲ. ನನಗೆ ಈ ತರಹದ ದೂರ ನಡಿಗೆ ಇಷ್ಟವಾಗ ತೊಡಗಿತ್ತು. ಬೇಕಾದಲ್ಲಿ ನಿಂತು ವಿಶ್ರಾಂತಿ ಪಡೆದು, ಬೇಕಾದವರನ್ನು ಮಾತಾಡಿಸಿಕೊಂಡು, ಬೇಕಾದಲ್ಲಿ ಉಳಿದುಕೊಳ್ಳುವ ಸ್ವಾತಂತ್ರ್ಯವಿತ್ತು. ಅದೆಲ್ಲದಕ್ಕಿಂತ ಮುಖ್ಯವಾಗಿ ನನಗೆ ನನ್ನ ಕೆಲಸದ ಬಗ್ಗೆ ಮತ್ತು ಉಪನ್ಯಾಸಗಳ ಬಗ್ಗೆ ಯೋಚನೆ ಮಾಡಲು ಅದು ಒಳ್ಳೆ ಸಮಯವಾಗಿತ್ತು.
ರಾಣೆಬೆನ್ನೂರಿನಲ್ಲಿ ವಾಸವಾಗಿದ್ದ ಹಾವೇರಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಕಂದಾಟಿಯವರು ದಿನವೂ ಹಾವೇರಿಯಿಂದ ರಾಣೆಬೆನ್ನೂರಿಗೆ ಪ್ರಯಾಣ ಮಾಡುವುದರಿಂದ ನಾನು ಅವರಿಗೆ ಮಾರ್ಗ ಮಧ್ಯೆ ಸಿಗಬಹುದೆಂಬ ಆಶಾಭಾವನೆಯಿಂದ ಹೆದ್ದಾರಿಯ ಎಡ ಪಥದಲ್ಲಿ ನಡೆಯಲು ಶುರುಮಾಡಿದೆ. ಹಾಗೇ ದಾರಿಯಲ್ಲಿ ಸಿಕ್ಕ ಒಂದು ಸೇತುವೆಯ ಪಾದಚಾರಿಯ ಮೇಲಿದ್ದ ಕಟ್ಟೆಯನ್ನೇರಿ ಕುಳಿತೆ. ದಾರಿಹೋಕರು ಮತ್ತು ವಾಹನಗಳಲ್ಲಿ ಪ್ರಯಾಣ ಮಾಡುವವರು ನನ್ನನ್ನು ತಿರುಗಿ ನೋಡಿ ಗಮನಿಸುತ್ತಿದ್ದ ರೀತಿಯೇ ನನಗೆ ನಗು ತರಿಸುತ್ತಿತ್ತು.
ಸಾವಿರಾರು ವರ್ಷಗಳಿಂದಲೂ ನಡೆದಾಡಿಕೊಂಡೇ ಜೀವನ ಮಾಡುತ್ತಿದ್ದ ಮಾನವರು, ಈಗ ನಡೆದಾಡಿಕೊಂಡು ಓಡಾಡುವುದೇ ಒಂದು ಸಾಹಸವೆಂಬುವಂತೆ ವರ್ತಿಸುತ್ತಿರುವುದು ಸೋಮಾರಿತನದ ಪರಮಾವಧಿಯಲ್ಲದೇ ಮತ್ತೇನು? ಹೀಗೇ ಯೋಚನೆ ಮಾಡುತ್ತಿದ್ದಾಗ, ಹತ್ತು ವರ್ಷದ ಹುಡುಗ ಒಂದು ಕಡ್ಡಿ ಹಿಡಿದುಕೊಂಡು ಬಂದು ನನ್ನ ಪಕ್ಕ ಕುಳಿತು “ಯಾವೂರ್ರೀ?” ಎಂದು ಕೇಳಿದ. ಅವನ ಹಲ್ಲುಗಳನ್ನು ಬಿಟ್ಟು ಬೇರೆಲ್ಲವೂ ಕಪ್ಪು. ಕೈಕಾಲುಗಳು ಕೆರೆದುಕೊಂಡು ಗಾಯಗಳಾಗಿದ್ದವು.
ನಾನು ಏನು ಉತ್ತರಿಸದೇ ಸುಮ್ಮನೆ ನಕ್ಕು “ನಿನ್ ಹೆಸರೇನಪ್ಪಾ” ಎಂದು ಕೇಳಿದೆ.
“ಕುಬೇರ ರ್ರೀ” ಎಂದು ನಾಚಿಕೊಂಡ.
“ಕುಬೇರನಾ? ಮತ್ತೆ ನಿನ್ನ ಅರಮನೆ ಬಿಟ್ಟು ಇಲ್ಲೇನು ಮಾಡ್ತಾ ಇದೀಯ?” ಎಂದು ಕೇಳಿದೆ.
“ನಂಗಾ ಇದೇ ಅರಮನೆ ರ್ರೀ. ನಾನೇ ರಾಜ” ಎಂದು ತಾನು ಕೈಯಲ್ಲಿ ಹಿಡಿದಿದ್ದ ಕೋಲನ್ನು ಎತ್ತಿ ಹಿಡಿದು ಹೇಳಿದ.
“ಸರೀ, ನಿನ್ನ ಮಂತ್ರಿಗಳೆಲ್ಲಾ ಎಲ್ಲಿ ಹೋದರು? ಯಾರೂ ಕಾಣ್ತಾನೆ ಇಲ್ಲ?” ಎಂದು ನಗುತ್ತಾ ಕೇಳಿದೆ.
“ಅಲ್ ನೋಡ್ರಿ. ಅಲ್ ನಿಂತು ಮೇಯ್ತಾವಲ್ಲ ಅವೇ ಮಂತ್ರಿಗಳು ರ್ರೀ” ಎಂದು ಸೇತುವೆ ಕೆಳಗೆ ಮೇಯುತ್ತಿದ್ದ ಕೆಲವು ಆಡು ಕುರಿಗಳನ್ನು ತೋರಿಸಿದ.
ನಾನು ನಕ್ಕು ಮತ್ತೆ ಕೇಳಿದೆ. “ಕುಬೇರ ಮಹಾರಾಜರೇ, ಶಾಲೆಗೆ ಹೋಗದೇ ಇಲ್ಲೇನು ಮಾಡುತ್ತಿದ್ದೀರಿ?”
ಅವನ ಮುಖ ಪೆಚ್ಚಾಯಿತು. “ನಮ್ ಅಪ್ಪಾ ನನ್ನ ಸಾಲಿಗ್ ಕಳ್‍ಸೋಲ್ರೀ” ಎಂದ.
“ಯಾಕೇ?” ಎಂದು ಕೇಳಿದೆ.
“ಗೊತ್ತಿಲ್ರೀ” ಎಂದುದಕ್ಕೆ ನನಗೆ ಏನು ಹೇಳಬೇಕೋ ತಿಳಿಯಲಿಲ್ಲ.
“ನಿಂಗೆ ಶಾಲೆಗೆ ಹೋಗೋಕೆ ಇಷ್ಟಾನಾ?” ಎಂದು ಕೇಳಿದುದಕ್ಕೆ ಅವನು ಹೂಂ ಎಂಬಂತೆ ತಲೆ ಅಳ್ಳಾಡಿಸಿದ. ಪೆಚ್ಚಾಗುವ ಸರದಿ ನನ್ನದು. ಅವನ ತಲೆ ಸವರಿ ಪಕ್ಕಕ್ಕೆ ಎಳೆದುಕೊಂಡು ಅವನಿಗೆ ಒಂದು ಬಾಳೆ ಹಣ್ಣು ಕೊಟ್ಟು ನಾನು ಒಂದು ಬಾಳೆಹಣ್ಣು ತಿಂದು ಚೆನ್ನಾಗಿ ನೀರು ಕುಡಿದೆವು. ಇಂತಹವರನ್ನು ಹುಡುಕಿ ಶಾಲೆಗೆ ಸೇರಿಸಬೇಕಾದಂತಹ ಶಿಕ್ಷಕರು ಏನು ಕತ್ತೆ ಮೇಯಿಸುತ್ತಿದ್ದಾರಾ ಎಂಬ ಪ್ರಶ್ನೆ ಹಾದು ಹೋಯಿತು. ಶಿಕ್ಷಣ ಪಡೆಯುವುದು ಎಷ್ಟು ಮುಖ್ಯ ಎಂಬುದನ್ನು ಅವನಿಗೆ ತಿಳಿಯುವಂತೆ ಹೇಳಿದೆ.
“ಸರೀ, ಒಂದ್ ಕೆಲಸ ಮಾಡು. ನಾಳೆ ಅಥವಾ ಯಾವಾಗ ನಿಮ್ಮ ಅಪ್ಪ ಊರಿನಲ್ಲಿರಲ್ಲವೋ, ಆವಾಗ ಹುಲಿಹಳ್ಳಿ ಶಾಲೆಗೆ ಹೋಗಿ ಶಿಕ್ಷಕರನ್ನು ಭೇಟಿಯಾಗಿ, ನೀನು ಶಾಲೆಗೆ ಹೋಗಬೇಕೆಂದರೂ, ನಿನ್ನ ಅಪ್ಪ ಒಪ್ಪುವುದಿಲ್ಲವೆಂದು ಹೇಳಿ ಸಹಾಯ ಮಾಡುವಂತೆ ಕೇಳಿಕೋ. ಇದು ನಿನ್ನ ಅಪ್ಪನಿಗೆ ಗೊತ್ತಾಗಿ ನಿನಗೆ ಹೊಡೆಯಬಹುದು. ಯಾವ ಕಷ್ಟ ಬಂದರೂ ಶಾಲೆಯನ್ನು ಬಿಡಬಾರದು” ಎಂದು ತಿಳಿಹೇಳಿ ಅವನ ಕೈಗೆ ಸ್ವಲ್ಪ ದುಡ್ಡುಕೊಟ್ಟು ಅಲ್ಲಿಂದ ಹೊರಟೆ. ನಾನು ಅವನಿಗೆ ಕಾಣಿಸುವವರೆಗೂ ನನಗೆ ಕೈಬೀಸುತ್ತಿದ್ದ. ಮನಸ್ಸು ಭಾರವಾಗಿತ್ತು. ಹಾಗೇ ನಡೆದು ರಾಣೇಬೆನ್ನೂರು ತಲುಪಿದೆ.
ನಗರಸಭೆ, ಪೋಲಿಸ್ ಠಾಣೆಯನ್ನು ದಾಟಿ ಪಾದಚಾರಿಯ ಮೇಲಿನ ತಳ್ಳುಗಾಡಿಯಲ್ಲಿ ಒಂದು ಪ್ಲೇಟ್ ಮಸಾಲ ಪುರಿ, ಬೇಲ್ ಪುರಿ ತಿಂದು ಹಸಿವನ್ನು ನೀಗಿಸಿದೆ. ಕಂದಾಟಿಯವರನ್ನು ಭೇಟಿ ಮಾಡುವ ಕನಸನ್ನು ಅಲ್ಲಿಗೇ ಬಿಟ್ಟು, ರೈಲ್ವೆ ನಿಲ್ದಾಣ ಹತ್ತಿರ ವಾಸವಿರುವುದಾಗಿ ಹೇಳಿದ್ದ, ನನಗೆ ಆಶ್ರಮದಲ್ಲಿ ಪರಿಚಯವಾಗಿದ್ದ ಕಾಂತಪ್ಪಜ್ಜನನ್ನು ಹುಡುಕಿಕೊಂಡು ಹೊರಟೆ. ಅದೂ ಕೈಗೂಡಲಿಲ್ಲ. ಅಜ್ಜನ ದೂರವಾಣಿ ಸಂಖ್ಯೆಯನ್ನೂ ಪಡೆದಿರಲಿಲ್ಲ. ಕಂದಾಟಿಯವರಿಗಾದರೂ ಕರೆ ಮಾಡೋಣವೆಂದರೆ, ಎಲ್ಲೂ ಒಂದು ದೂರವಾಣಿ ಕರೆಮಾಡಲೂ ಕೂಡ ವ್ಯವಸ್ಥೆಯಿರಲ್ಲಿಲ್ಲ. ಮಾರ್ಗದ ಮಧ್ಯೆ ತಮ್ಮ ದೂರವಾಣಿ ಕಳೆದುಕೊಂಡವರ ಗತಿಯೇನಾಗ ಬೇಡ? ಮೊಬೈಲ್ ಬಳಸದೆ ಜೀವಿಸಲು ಆಗದೇ ಇರುವ ಒಂದು ವಾತಾವರಣವನ್ನು ನಿರ್ಮಿಸಿಬಿಟ್ಟಿದ್ದಾರೆ ಎಂದೆನಿಸಿತು.
ಇಂಗ್ಲೆಂಡ್‍ನಲ್ಲಿ ಈಗಲೂ ಅಲ್ಲಿನ ನಗರ, ಪಟ್ಟಣಗಳಲ್ಲಿ ಸ್ಥಿರ ದೂರವಾಣಿ ಕೇಂದ್ರಗಳು ಇದ್ದು ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿದ್ದುದು ನೆನಪಾಯಿತು. ನಮ್ಮ ಸರ್ಕಾರಕ್ಕೆ ಅಂತಹ ಸಾಮಾನ್ಯ ಪ್ರಜ್ಞೆ ಎಲ್ಲಿಂದ ಬರಬೇಕು ಹೇಳಿ. ಕಾಂತಪ್ಪಜ್ಜನೂ ಸಿಗಲಿಲ್ಲ, ದೂರವಾಣಿ ಸೇವೆಯೂ ಸಿಗಲಿಲ್ಲ. ನಡೆದು ನಡೆದೂ ಕಾಲುಗಳು ಹಾಗೂ ತೊಡೆಯ ಸಂದಿ ಉರಿಯುತ್ತಿದ್ದವು. ಬಸ್ ನಿಲ್ದಾಣದ ಎದುರಿಗಿರುವ ಶ್ರೀ ನಂದಿ ಲಾಡ್ಜ್‍ನಲ್ಲಿ ಒಂದು ಕೋಣೆ ಪಡೆಯಬೇಕಾಗಿ ಬಂದು ನನ್ನ ಜೇಬಿನಿಂದ ಐನೂರು ರೂಪಾಯಿ ತೆರಬೇಕಾಯಿತು. ಬಂದು ದೂರದರ್ಶನ ನೋಡಿದರೆ ಡಾ|| ಕಲಾಂರವರ ಸಾವಿನ ಸುದ್ದಿ ಪ್ರಸಾರಗೊಳ್ಳುತ್ತಿತ್ತು. ಕೇಳುತ್ತಾ ಬೆರಗಾಗಿ ಕುಳಿತೆ. ಆ ದಿನ ತಾನೆ ಛತ್ರದ ಶಾಲೆಯಲ್ಲಿ ಕಲಾಂರವರ ನುಡಿ ಮುತ್ತುಗಳ ಮತ್ತು ಅವರ ಅವಿರತ ಕಾಯಕದ ಬಗ್ಗೆ ಸಂವಾದ ನಡೆಸಿದ್ದೆವು. ದಿಗ್ಭ್ರಮೆಯಿಂದ ಅವರ ಬಗ್ಗೆ ದೂರದರ್ಶನದಲ್ಲಿ ತೋರಿಸುತ್ತಿದ್ದ ತುಣುಕುಗಳನ್ನು ನೋಡುತ್ತಾ ಕುಳಿತೆ. ಊಟದ ನೆನಪೂ ಕೂಡ ಬರಲಿಲ್ಲ.
ಅಲ್ಲಿ ಮಂಗಳ ಗ್ರಹ ತಲುಪಿದ್ದಾಯಿತು,
ಇಲ್ಲಿ ಮಕ್ಕಳಿಗೆ ಶಿಕ್ಷಣ ಭಾಗ್ಯವೇ ಇಲ್ಲ.
ವಿಶ್ವಮಟ್ಟದಲ್ಲಿ ಆಟಗಾರರು ಮಿಂಚಿದ್ದಾಯಿತು,
ಇಲ್ಲಿ ಮಕ್ಕಳಿಗೆ ಆಟದ ಮೈದಾನವೇ ಇಲ್ಲ.
ದೇಶದ ಹೆಸರು ಪ್ರಕಾಶಮಾನವಾಗಿ ಬೆಳಗಿತು,
ಹಳ್ಳಿಗಳು ಕತ್ತಲೆಯಿಂದ ಹೊರ ಬರಲೇ ಇಲ್ಲ.
ಅಲ್ಲಿ ಮಹಿಳೆಯರು ಉತ್ತುಂಗಕ್ಕೇರಿದರು,
ಇಲ್ಲಿ ಮಹಿಳೆಯರಿಗೆ ಶೌಚಾಲಯವೇ ಇಲ್ಲ.
ಆಗರ್ಭ ಶ್ರೀಮಂತರ ಸಂಖ್ಯೆ ಏರಿತು,
ಇಲ್ಲಿ ಬಡವರ ಸಂಖ್ಯೆ ಇಳಿಯಲೇ ಇಲ್ಲ,
ಬೇರೆಯವರ ಮೇಲಿನ ಅಭಿಮಾನ ಆಕಾಶ ದಾಟಿತು,
ನಮ್ಮವರಲ್ಲಿನ ಸ್ವಾಭಿಮಾನ ಪಾತಾಳ ಸೇರಿತು.
ನಿನ್ನ ದೇಶ ರಾಮರಾಜ್ಯವಾಗುವುದೆಂತು ಕಲಾಂ?
ನೀನು ಕಂಡ ಕನಸುಗಳಿಗೆ ನನ್ನದೊಂದು ದೊಡ್ಡ ಸಲಾಂ.
ಕಲಾಂರವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲು ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಆದ ಕಾರಣ ನನಗೆ ಮಾಡಲು ಏನು ಕೆಲಸವಿಲ್ಲದೆ, ಎದ್ದು ಮುಖತೊಳೆದು ಕೆಳಗೆ ಹೋಗಿ ತಿಂಡಿ ತಿಂದು ಬಂದೆ. ಹೋಟೆಲ್‍ನ ದೂರವಾಣಿಯಿಂದ ಪೂಜಾಳಿಗೆ ಕರೆ ಮಾಡಿ ಮಾತನಾಡಿದಾಗ, ಕಂದಾಟಿಯವರು ತಮ್ಮ ಮಗನನ್ನು ಕಾಲೇಜಿಗೆ ಸೇರಿಸಲು ಮೈಸೂರಿಗೆ ಹೋಗಿರುವುದು ಗೊತ್ತಾಯಿತು. ಕಂದಾಟಿಯವರಿಗೆ ಕರೆಮಾಡಿ ನಾನು ರಾಣೆಬೆನ್ನೂರಿಗೆ ಬಂದಿರುವುದಾಗಿ ಹೇಳಿ, ಅಲ್ಲಿಂದ ಬಂದ ಮೇಲೆ ನನ್ನನ್ನು ಭೇಟಿ ಮಾಡುವಂತೆ ವಿನಂತಿಸಿ ನಾನು ಉಳಿದಿದ್ದ ಹೋಟೆಲಿನ ವಿಳಾಸ ಕೊಟ್ಟೆ.
ಸಂಜೆಯ ತನಕ ವಿಶ್ರಾಂತಿ ಪಡೆದಿದ್ದೇ ಆಯಿತು. ಕಂದಾಟಿಯವರಿಗೆ ಸಂಜೆಯ ತನಕ ಕಾಯ್ದು, ನಂತರ ಉಳಿದಿದ್ದ ಕೋಣೆಗೆ ಮತ್ತೊಂದು ದಿನ ಬಾಡಿಗೆ ಉಳಿಸಲು ಹೋಟೆಲ್‍ನ ಮಾಲಿಕರಿಗೆ ನನ್ನ ಕಥೆಯನೆಲ್ಲಾ ಹೇಳಿದೆ. ನನ್ನ ಕಥೆಯನೆಲ್ಲಾ ಕೇಳಿ, ಸಂವಾದ ನಡೆಸಿ, ಪ್ರಶಂಸಿಸಿ ನಂತರ ಕೋಣೆಯ ಬಾಡಿಗೆ ಪಡೆದರು. ಇಂತಹ ಕೆಲಸಗಳಿಗೆ ತೊಡಗಿರುವವರಿಗೆ ಸ್ವಲ್ಪವಾದರೂ ರಿಯಾಯಿತಿ ಕೊಟ್ಟು ಆತಿಥ್ಯ ವಹಿಸಿ ಪ್ರೋತ್ಸಾಹಿಸಬೇಕೆಂಬ ಸೂಕ್ಷ್ಮವನ್ನು ಸುಶಿಕ್ಷಿತರಾದವರು ಅರಿಯಲೇ ಇಲ್ಲ. ಆ ದಿನ ಹಲವು ಶಾಲೆಗಳು ತೆರೆದು ಎಂದಿನಂತೆ ಕೆಲಸ ಮಾಡಿದವು ಎಂದು ಕೇಳಿ, ಒಂದು ಪೂರ್ತಿ ದಿನ ಸುಖಾ ಸುಮ್ಮನೆ ವ್ಯರ್ಥ ಮಾಡಿದೆನೆಲ್ಲಾ ಎಂಬ ಬೇಜಾರಿನ ಜೊತೆಗೆ ಕಲಾಂರವರ ಅಗಲಿಕೆಯ ನೋವು ಸೇರಿಕೊಂಡು ಮನಸ್ಸು ಮರುಕ ಪಡುತ್ತಿತ್ತು.
[ಇಲ್ಲಿಯತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 158 ಮೈಲುಗಳು]





ಒಂದು ಗುಂಪಿಗೆ ಒಬ್ಬ ಹೋಗಿ ಸಾವಿರ ರೂಪಾಯಿ ನೋಟಿನ ಕಟ್ಟು ಎಸೆದ್ರ ಏನಾಗುತ್ತೆ..
ಎಲ್ಲ ಮುಗಿ ಬಿದ್ದು.. ಅವರ ಶಕ್ತಿಗೆ ಅನುಸಾರ ಆರಿಸ್ಕೊತಾರೆ..
ಅವರ ಬಗ್ಗೆ ನಮಗೆ ಅನಿಸೋದು.. ಏನು ಜನನಪ್ಪ.. ಏನು ಬರಗೆಟ್ಟೋರು ಅನಸುತ್ತೆ ..
ಈಗ ನಮ್ಮ ಮೇಲೆ ಚೀನಾ , ಬೇರೆ ದೇಶದ್ದು, ಮೊಬೈಲು .. ಅದು ಇದು ಎಸಿತಾ ಇದ್ದಾರೆ.. ನಮ್ ಶಕ್ತಿ ಮೀರಿ ಆರಿಸ್ಕೊತಾ ಇದ್ದಿವಿ..
ಅವರು mostly ನಮ್ಮ ಬಗ್ಗೆ ಬರಗೆಟ್ಟೋರು ಅಂತ ಇರಬಹುದಾ…
ನಿಮ್ಮ ಫೋನ್ ಬಗ್ಗೆ ಬರೆದಿದ್ದು ಓದಿ ಅನಿಸಿದ್ದು ..
ಮೊಬೈಲ್ ಯಾವ ದೇಶದ್ದು? ಅಥವಾ ಮೊಬೈಲ್ ಅವಶ್ಯವೋ, ಇಲ್ಲವೋ? ಎನ್ನುವ ಜಿಜ್ಞಾಸೆ ನನಗಿಲ್ಲ. ಸಾಮೂಹಿವಾಗಿ ಜಗತ್ತೇ ಅದನ್ನು ಬಿಗಿದಪ್ಪಿರುವಾಗ ಅದರಿಂದ ಅವಶ್ಯವಾಗಿ ಒಳ್ಳೆಯ ರೀತಿಯ ಉಪಯೋಗಗಳು ಇರಲೇಬೇಕಲ್ಲವೇ?
ನನ್ನ ಪ್ರಶ್ನೆ, ಯಾವುದೇ ಕಾರಣಕ್ಕಾಗಿ ಮೊಬೈಲಿನಿಂದ ದೂರವಿರುವ ನಾಗರೀಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಇಲ್ಲದಿದ್ದರೆ, ಹಿತ್ತಲ ಬಾಗಿಲಿನಿಂದ ಮೊಬೈಲಿನ ಬಳಕೆಯನ್ನು ಸಾರ್ವಜನಿಕರ ಮೇಲೆ ಹೇರಿದಂತಾಗುತ್ತದೆ ಎಂಬುದು ನನ್ನ ಆತಂಕ.