ಕೃಪೆ : ವಾರ್ತಾ ಭಾರತಿ ವಿಶೇಷಾಂಕ
ಮಹಾಶ್ವೇತಾ ದೇವಿ ಈ ದೇಶ ಕಂಡ ಅಪರೂಪದ ಚಿಂತಕಿ. ಲೇಖಕಿ. ಹೊತ್ತಿ ಉರಿಯುತ್ತಿರುವ ಈಶಾನ್ಯ ಭಾರತದ ಆತ್ಮಸಾಕ್ಷಿ ಆಕೆ. ‘ವಾರ್ತಾಭಾರತಿ’ಯ ವಿಶೇಷಾಂಕಕ್ಕಾಗಿಯೇ ಕೊಲ್ಕತಾದ ಪತ್ರಕರ್ತೆ ಸೋನಿಯಾ ಗುಪ್ತಾ ಅವರು ಮಹಾಶ್ವೇತಾದೇವಿಯರ ಸಂದರ್ಶನವನ್ನು ಮಾಡಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿಗೆ ಈಗ 87ರ ಇಳಿ ವಯಸ್ಸು. ಅನಾರೋಗ್ಯದಿಂದ ಬಳಲುತ್ತಿರುವ ಅವರು ಕೆಲ ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಮರಳಿ ಬಂದಿದ್ದರು. ಆದರೆ ವೃದ್ಧಾಪ್ಯ, ಅನಾರೋಗ್ಯ ಇವ್ಯಾವುದಕ್ಕೂ ಅವರಲ್ಲಿರುವ ಅದಮ್ಯ ಚೇತನವನ್ನು ಬತ್ತಿಸಲು ಸಾಧ್ಯವಾಗಿಲ್ಲ. ಬರಹಗಾರ್ತಿ ಸೋನಿಯಾ ಗುಪ್ತಾಗೆ ನೀಡಿದ ಸಂದರ್ಶನದಲ್ಲಿ ಅವರು ಬುಡಕಟ್ಟು ಜನತೆ, ಅವರ ಬದುಕು, ಅವರ ಹೋರಾಟ ಹಾಗೂ ಅವರಿಗಾಗುತ್ತಿರುವ ಅನ್ಯಾಯ ಮತ್ತು ಸಮಾಜದ ಈ ಶೋಷಿತ ವರ್ಗದ ಬಗ್ಗೆ ಸರಕಾರ ತಾಳುತ್ತಿರುವ ನಿರ್ಲಕ್ಷ ಧೋರಣೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಇಂಗ್ಲಿಷ್ ಸಾಹಿತ್ಯದ ಮಾಜಿ ಉಪನ್ಯಾಸಕಿಯಾದ ಮಹಾಶ್ವೇತಾದೇವಿ, ಜನಸಾಮಾನ್ಯರ ಬದುಕನ್ನು ತೀರಾ ಹತ್ತಿರದಿಂದ ಕಂಡವರು. ಪಶ್ಚಿಮ ಬಂಗಾಳದ ಪುರುಲಿಯಾ ಹಾಗೂ ಬಂಕುರಾ ಜಿಲ್ಲೆಗಳಲ್ಲಿ ಖೇರಿಯಾ-ಶಬರ್ ಬುಡಕಟ್ಟು ಜನರೊಂದಿಗೆ ನೆಲೆಸಿ, ಅವರ ಏಳಿಗೆಗಾಗಿ ಸುಮಾರು 25 ವರ್ಷಗಳ ಕಾಲ ದುಡಿದಿರುವ ಮಹಾಶ್ವೇತಾದೇವಿ ಇವತ್ತಿಗೂ ಆ ಮುಗ್ಧ ಜನರ ಬಗ್ಗೆ ಮಾತನಾಡುವಾಗ ಭಾವುಕರಾಗುತ್ತಾರೆ.
ಸಾಹಿತ್ಯ ಅಕಾಡಮಿ, ಜ್ಞಾನಪೀಠ ಪ್ರಶಸ್ತಿ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಕಾದಂಬರಿಗಾರ್ತಿ ಮಹಾಶ್ವೇತಾದೇವಿ ಸುಮಾರು ಒಂದು ತಾಸು ಕಾಲ ನೀಡಿದ ಸಂದರ್ಶನದಲ್ಲಿ ರಾಜ್ಯದ ಹಾಗೂ ದೇಶದ ರಾಜಕೀಯ ಬೆಳವಣಿಗೆಗಳು, ನಕ್ಸಲ್ ಚಳವಳಿ, ಸರಕಾರದ ಬೇಜವಾಬ್ದಾರಿ ಪ್ರವೃತ್ತಿ ಹಾಗೂ ತೀರಾ ಇತ್ತೀಚೆಗೆ ಮಮತಾ ಬ್ಯಾನರ್ಜಿ ಜೊತೆಗೆ ತನ್ನ ವಾಗ್ವಾದ ಇವೆಲ್ಲವುಗಳ ಬಗ್ಗೆ ನಿರರ್ಗಳವಾಗಿ ಮಾತನಾಡಿದರು.ಪಶ್ಚಿಮ ಬಂಗಾಳದಲ್ಲಿ ಎಡರಂಗದ 34 ವರ್ಷಗಳ ಆಳ್ವಿಕೆಯ ಅಂತ್ಯ ಹಾಡಿದ ಮಮತಾರ ಮಾರ್ಗದರ್ಶಕಿಯೆಂದೇ ಪರಿಗಣಿಸಲ್ಪಟ್ಟಿದ್ದ ಮಹಾಶ್ವೇತಾದೇವಿ ಈಗ ತೃಣಮೂಲ ಕಾಂಗ್ರೆಸ್ ಸರಕಾರವನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.
ಈ ಧೀಮಂತ ಸಾಹಿತಿ, ಹೋರಾಟಗಾರ್ತಿಯ ಜೊತೆ ನಡೆಸಿದ ಸಂದರ್ಶನವನ್ನು ಇಲ್ಲಿ ನೀಡಲಾಗಿದೆ.
ಪ್ರಶ್ನೆ: ಬುಡಕಟ್ಟು ಜನರ ಅಭ್ಯುದಯ ಚಟುವ ಟಿಕೆಗಳಲ್ಲಿ ನೀವು ಹೇಗೆ ತೊಡಗಿಸಿಕೊಂಡಿರಿ?, ಆರಂಭದಲ್ಲಿ ಬುಡಕಟ್ಟು ಜನರ ವಿಶ್ವಾಸವನ್ನು ಗಳಿಸಲು ಕಷ್ಟವಾಗಿತ್ತೇ?
ಮಹಾಶ್ವೇತಾ ದೇವಿ: ಇದು ಅತ್ಯಂತ ಸಹಜವಾಗಿ ಸಂಭವಿಸಿತು… ಬಿರ್ಸಾ ಮುಂಡಾರ ಬಂಡಾಯ ಘಟನೆಯನ್ನು ಹಿನ್ನೆಲೆಯಾಗಿಟ್ಟು ಬರೆದ ನನ್ನ ಕೃತಿ ‘ಜಂಗಲ್ ಕೆ ದಾವೆದಾರ್ – ಅರಣ್ಯೇರ್ ಅಧಿಕಾರ್’ ಸಾಹಿತ್ಯ ಅಕಾಡಮಿ ಪ್ರಶಸ್ತಿ ಗಳಿಸಿತ್ತು. ಆ ಸಮಯದಲ್ಲಿ ವಿಶೇಷವಾಗಿ ಪಶ್ಚಿಮ ಬಂಗಾಳದ ಬುಡಕಟ್ಟು ಜನರು ಹಾಗೂ ಆನಂತರ ಅದು ಇತರ ಭಾಷೆಗಳಿಗೆ ಅನುವಾದಗೊಂಡಾಗ, ಇತರ ರಾಜ್ಯಗಳವರೂ ಮೊದಲ ಬಾರಿಗೆ ಪ್ರಭಾವಿತರಾದರು….
ಸ್ವಾತಂತ್ರ ಹೋರಾಟದ ಇತಿಹಾಸದಲ್ಲಿ ಬುಡ ಕಟ್ಟು ಬಂಡಾಯಗಾರರ ಪ್ರಸ್ತಾಪವೇ ಇಲ್ಲದಿರುವುದನ್ನು ನೀವು ನೋಡಿದ್ದೀರಿ. ಈ ಕೃತಿಯಿಂದಾಗಿ ಮುಖ್ಯವಾಹಿನಿಗೆ ಬುಡಕಟ್ಟು ನಾಯಕರು, ಅವರ ಬಂಡಾಯಗಳ ಬಗ್ಗೆ ತಿಳಿಯಿತು. ಇದು ಅವರಲ್ಲಿ ಆನಂದದ ಪ್ರಜ್ಞೆಯನ್ನು ಮೂಡಿಸಿತು. ಅವರಲ್ಲಿಯೇ ಹೆಮ್ಮೆಯ ಭಾವನೆ ಮೂಡಿತು.
ಆನಂತರ ನನಗದು ತೀರಾ ಸುಲಭವಾಯಿತು. ಅವರು ನನ್ನಲ್ಲಿಗೆ ಬರುತ್ತಿದ್ದರು… ನಾನು ಅವರ ಬಳಿ ಹೋಗುತ್ತಿದ್ದೆ…
ಪ್ರಶ್ನೆ: ಈವರೆಗೆ ಅವರಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಕಂಡಿದ್ದೀರಿ…
ಮಹಾಶ್ವೇತಾದೇವಿ: ನಾವು ಅವರಿಗೆ ಯಾವೆಲ್ಲಾ ತರಬೇತಿ ನೀಡಿದ್ದೇವೋ ಅವೆಲ್ಲ ದರಲ್ಲೂ… ಪರ್ಯಾಯ ಪಶು ಸಂಗೋಪನಾ ತರಬೇತಿಯನ್ನು ಅವರು ತುಂಬಾ ಪಡೆದು ಕೊಂಡಿದ್ದಾರೆ. ಮಹಿಳೆಯರಿಗೆ ನಾವು ಮಿಡ್ ವೈಫ್ ತರಬೇತಿಯನ್ನು ನೀಡಿದ್ದೇವೆ. ಅವರು ಕೂಡಾ ಅದನ್ನು ಚೆನ್ನಾಗಿ ಕಲಿತುಕೊಂಡಿದ್ದಾರೆ. ಸಾಕ್ಷರತೆಯ ಮಹತ್ವವನ್ನು ಕೂಡಾ ಅವರು ಅರಿತುಕೊಂಡಿದ್ದಾರೆ. ಈಗ ಮೀನುಗಾರಿಕೆಯನ್ನು ಅವರು ಅತ್ಯಂತ ವೈಜ್ಞಾನಿಕವಾಗಿ ನಡೆಸುತ್ತಿದ್ದಾರೆ.
ಕೆಲವು ಬುಡಕಟ್ಟು ಜನರಿಗೆ ಜಮೀನಿದ್ದು, ಈ ಹಿಂದೆ ಏಕ ಬೆಳೆಯನ್ನು ಬೆಳೆಯುತ್ತಿದ್ದ ಪ್ರದೇಶದಲ್ಲಿ ಅವರೀಗ ಎರಡು ಅಥವಾ ಮೂರು ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯುುತ್ತಿದ್ದಾರೆ. ಎರೆಹುಳು ಕೃಷಿಯನ್ನೂ ಅವರು ಕಲಿತಿದ್ದಾರೆ.
ತುಂತುರು ನೀರಾವರಿ ಯೋಜನೆಯಿರುವ ಪ್ರದೇಶಗಳಲ್ಲಿ ನಾವು ಬುಡಕಟ್ಟು ಹುಡುಗರಿಗೆ ಅದರ ನಿರ್ವಹಣೆಯ ಬಗ್ಗೆ ಚೆನ್ನಾಗಿ ತರಬೇತಿ ನೀಡಿದ್ದೆವು. ಈಗ ಅವರು ಅದನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. ತಾವು ಏನನ್ನಾದರೂ ಸಾಧಿಸ ಬಲ್ಲವೆಂಬುದನ್ನು ಅವರು ಸಾಬೀತುಪಡಿಸಿದ್ದಾರೆ.
ಸುಮಾರು 500ರಿಂದ 600 ಬುಡಕಟ್ಟು ಕುಟುಂಬಗಳು ಸುಂದರವಾದ ಕರಕುಶಲ ಸಾಮಗ್ರಿ ಗಳನ್ನು ತಯಾರಿಸಿ ಜೀವನ ಸಾಗಿಸುತ್ತಿದ್ದಾರೆ. ಅವ ರಿಗೆ ಮೊದಲು ನಾವು ತರಬೇತಿ ನೀಡಿದೆವು. ಈಗ ಅವರು ಸುಂದರವಾದ ವಿನ್ಯಾಸಗಳನ್ನು ರಚಿಸುತ್ತಿದ್ದಾರೆ. ಕಾಡು ಖರ್ಜೂರದ ಮರದ ಎಲೆಗಳು ಹಾಗೂ ಕಾಡು ಹುಲ್ಲಿನಿಂದ ಅವರದನ್ನು ರಚಿಸುತ್ತಿದ್ದಾರೆ.
ಪ್ರಶ್ನೆ: ಭಾರತದಲ್ಲಿ ಬುಡಕಟ್ಟು ಜನರ ಜೊತೆ ಸುದೀರ್ಘ ಸಮಯದ ಒಡನಾಟದ ಬಳಿಕ, ಪ್ರಸಕ್ತ ಪರಿಸ್ಥಿತಿಯನ್ನು ಹೇಗೆ ನೋಡುವಿರಿ?
ಮಹಾಶ್ವೇತಾದೇವಿ: ಭಾರತದಲ್ಲಿ ಅನುಸೂಚಿತವಲ್ಲದ ಬುಡಕಟ್ಟು ಜನರ ಪರಿಸ್ಥಿತಿ ನಿಜಕ್ಕೂ ಅತ್ಯಂತ ಕೆಟ್ಟದಾಗಿದೆ. ಕೆಲವೇ ದಿನಗಳ ಹಿಂದೆಯಷ್ಟೇ ಮುಂಬೈಯಲ್ಲಿ ಪರ್ದಿ ಬುಡಕಟ್ಟಿನ ವ್ಯಕ್ತಿಯೊಬ್ಬ ಕೊಲೆ ಮಾಡಿದ್ದ. ಪರ್ದಿ ಬುಡಕಟ್ಟು ಒಂದು ಕಾಲದಲ್ಲಿ ಕ್ರಿಮಿನಲ್ ಪಂಗಡವೆಂದೇ ಅಧಿಸೂಚಿತವಾಗಿತ್ತು. ಆನಂತರ ಭಾರತ ಸರಕಾರವು ಅದನ್ನು ಅನುಸೂಚಿತ ಬುಡಕಟ್ಟು ಪಂಗಡಗಳ ಪಟ್ಟಿಯಿಂದ ತೆಗೆದುಹಾಕಿತ್ತು. ಅವರ ಪರಿಸ್ಥಿತಿ ಇಡೀ ಭಾರತದಲ್ಲಿ ಅತ್ಯಂತ ಶೋಚನೀಯವಾಗಿದೆ.
ಪ್ರಶ್ನೆ: ಭಾರತ ಸರಕಾರವು ತನ್ನ ಬುಡಕಟ್ಟು ಜನರ ಅಭ್ಯುದಯಕ್ಕಾಗಿ ಸಾಕಷ್ಟು ಕೆಲಸ ಮಾಡಿದೆಯೆಂದು ನೀವು ಭಾವಿಸುವಿರಾ?
ಮಹಾಶ್ವೇತಾದೇವಿ: ಬುಡಕಟ್ಟು ಜನರಿಗಾಗಿ ಸರಕಾರ ಏನನ್ನೂ ಮಾಡಿಲ್ಲ.
ಪ್ರಶ್ನೆ: ಸರಕಾರವು ಅದರಲ್ಲೂ ವಿಶೇಷವಾಗಿ ಕೆಳ ಸ್ತರಗಳಲ್ಲಿ ಬುಡಕಟ್ಟು ಜನರನ್ನು ಯಾಕೆ ಅಷ್ಟೊಂದು ಕಡೆಗಣಿಸುತ್ತಿದೆಯೆಂದು ನೀವು ಯಾಕೆ ಭಾವಿಸುತ್ತೀರಿ?
ಮಹಾಶ್ವೇತಾದೇವಿ: ಅದು ನನಗೆ ಗೊತ್ತಿಲ್ಲ. ಅದನ್ನು ನೀವು ಭಾರತ ಸರಕಾರದ ಅಧಿಕಾರಿಗಳಲ್ಲಿ ಕೇಳಿ. ನನಗೆ ಹೇಗೆ ಗೊತ್ತಾಗಬೇಕು?
ಪ್ರಶ್ನೆ: ಮಾವೋವಾದಿ ಚಳವಳಿಯನ್ನು ಹತ್ತಿಕ್ಕುವ ನೆಪದಲ್ಲಿ ಸರಕಾರವು ಬುಡಕಟ್ಟು ಜನತೆಯನ್ನು ಗುರಿಯಿಡುತ್ತಿದೆಯೇ?
ಮಹಾಶ್ವೇತಾದೇವಿ: ಮಾವೋವಾದಿ ಸಮಸ್ಯೆಯೆಂದರೇನು?. ನನಗೆ ಗೊತ್ತಿಲ್ಲ. ಕುಡಿಯುವ ನೀರನ್ನು ಕೇಳುವುದು ಅಥವಾ ನೀರಾವರಿಗಾಗಿ ನೀರು ಕೇಳುವುದು ಮಾವೋವಾದಿ ಸಮಸ್ಯೆಯೇ? ಸರಕಾರ ಆ ರೀತಿಯಾಗಿ ಯೋಚಿಸುತ್ತಿರಬಹುದು. ಕ್ಷಮಿಸಿ. ನಾನು ಹಾಗೆ ಯೋಚಿಸಲಾರೆ. ಅದು ಅವರ ನ್ಯಾಯಯುತ ಬೇಡಿಕೆಯಾಗಿದೆ. ಸರಳವಾದ ಬದುಕನ್ನು ಸಾಗಿಸುವ ಹಳ್ಳಿಗರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಇದು ಮಾವೋವಾದಿ ಚಳವಳಿಯೇ?. ಒಂದು ವೇಳೆ ಇದು ಮಾವೋವಾದಿ ಚಳವಳಿಯೇ ಆಗಿದ್ದರೆ, ಸ್ವಾತಂತ್ರ ದೊರೆತು 65 ವರ್ಷಗಳಾದರೂ ಈ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದುದಕ್ಕಾಗಿ ಸರಕಾರವು ನಾಚಿಕೆಪಡಬೇಕಾಗುತ್ತದೆ.
ಪ್ರಶ್ನೆ: ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಬಂಗಾಳವು ಬಹು ದೊಡ್ಡ ರಾಜಕೀಯ ಬದಲಾವಣೆಯನ್ನು ಕಂಡಿದೆ. 34 ವರ್ಷಗಳ ಎಡರಂಗದ ಆಳ್ವಿಕೆ ಕೊನೆಗೊಂಡು ಮಮತಾ ಬ್ಯಾನರ್ಜಿ ಆ ರಾಜ್ಯದ ಅತ್ಯಂತ ಕಿರಿಯ ಹಾಗೂ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿಯಾಗಲು ದಾರಿಮಾಡಿಕೊಟ್ಟಿತು. ಈ ಬದಲಾವಣೆಯಿಂದ ನಿಜಕ್ಕೂ ಸಮಾಜದ ಕೆಳಸ್ತರವು ಅದರಲ್ಲೂ ವಿಶೇಷವಾಗಿ ಅವಕಾಶ ವಂಚಿತ ಬುಡಕಟ್ಟು ಸಮುದಾಯಕ್ಕೆ ಪ್ರಯೋಜನವಾಗಲಿದೆಯೇ?
ಮಹಾಶ್ವೇತಾದೇವಿ: ವಾಸ್ತವವಾಗಿ ಯಾವುದೇ ಬದಲಾವಣೆಯಾಗಿಲ್ಲ. ಚುನಾವಣೆಗೆ ಮೊದಲು ಹೇರಳ ವಾದ ಭರವಸೆಗಳು ಮೂಡಿದ್ದವು. ಆದರೆ ನಿಜವಾಗಿಯೂ ಪರಿಸ್ಥಿತಿಯು ಮೊದಲಿನಂತೆಯೇ ಇದೆ. ಪುರುಲಿಯಾ, ಬಂಕುರಾ ಹಾಗೂ ಪಶ್ಚಿಮ ಮಿಡ್ನಾಪುರದ ಕಾಡುಪ್ರದೇಶಗಳಲ್ಲಿ ವಾಸಿಸುವ ಬಡಜನರು ಜೀವನದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಪ್ರಶ್ನೆ: ಎಡರಂಗದ ಆಳ್ವಿಕೆಯ ವಿರುದ್ಧ ನೀವು ನಡೆಸಿದ ಆಂದೋಲನವು, ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬರಲು ನೆರವಾಯಿತು. ಈಗ ನೀವು ಅದೇ ಹಳೆಯ ಕಥೆಯನ್ನು ನೋಡುತ್ತಿರುವಿರಿ, ನೀವು ಈಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದೀರಾ?
ಮಹಾಶ್ವೇತಾದೇವಿ: ನಾನು ಯಾವುದೇ ತಪ್ಪು ಮಾಡಿಲ್ಲ, ಹೀಗಿರುವಾಗ ನಾನ್ಯಾಕೆ ಪಶ್ಚಾತ್ತಾಪ ಪಡಬೇಕು. ಹಿಂದಿನ ಸರಕಾರವು ಎಲ್ಲ ವಿಧದ ಜನ ವಿರೋಧಿ ಚಟುವಟಿಕೆಗಳಲ್ಲಿ ನಿರತವಾಗಿತ್ತು. ಹಾಗಾಗಿ ನಾನದನ್ನು ಪ್ರತಿಭಟಿಸಿದೆ. ಪ್ರಜಾಪ್ರಭುತ್ವ ವಾದಿ ದೇಶವೊಂದರಲ್ಲಿ ಜನರಿಗೆ ಪ್ರತಿಭಟಿಸಲು ಹಕ್ಕಿದೆ ಹಾಗೂ ಆ ಹಕ್ಕನ್ನು ಯಾರಿಗೂ ಕಸಿದು ಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಈ ಸರಕಾರ ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಲ್ಲಿ ಮತ್ತು ಜನವಿರೋಧಿ ನಿಲುವನ್ನು ತಾಳಿದಲ್ಲಿ, ಅದನ್ನು ಕೂಡಾ ಕಿತ್ತೊಗೆಯಲಾಗುವುದು. ನಾನು ಬದುಕಿರುವ ತನಕ ಸಮಾಜದಲ್ಲಿ ಅನ್ಯಾಯ ನಡೆಯುತ್ತಿರುವುದನ್ನು ಕಂಡಾಗಲೆಲ್ಲಾ ಧ್ವನಿಯೆತ್ತುವೆನು.
ಪ್ರಶ್ನೆ: ಮಮತಾ ಬ್ಯಾನರ್ಜಿ ಸರಕಾರವು ಒಂದು ವರ್ಷ ಪೂರ್ಣಗೊಳಿಸಿದೆ. ಆ ಬಗ್ಗೆ ನಿಮ್ಮ ಅನಿಸಿಕೆ?.
ಮಹಾಶ್ವೇತಾದೇವಿ: ಈ ಬಗ್ಗೆ ಅಭಿಪ್ರಾಯ ನೀಡಲು ಅವರು ಇನ್ನೂ ಒಂದು ಸ್ಥಿತಿಗೆ ಬರಬೇಕಾಗಿದೆ. ಆದರೆ ಒಂದು ವಿಷಯವನ್ನು ಮಾತ್ರ ನಾನು ನಿಮಗೆ ಹೇಳಬಲ್ಲೆ. ಅವರು ಜನತೆಯ ಆಶೋತ್ತರಗಳನ್ನು ಹಾಗೂ ಚುನಾವಣೆಗೆ ಮೊದಲು ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ.
ಪ್ರಶ್ನೆ: ನೀವದನ್ನು ಸ್ವಲ್ಪ ವಿವರಿಸುವಿರಾ?
ಮಹಾಶ್ವೇತಾದೇವಿ: ಪುರುಲಿಯಾ ಬಂಕುರಾ ಹಾಗೂ ಪಶ್ಚಿಮ ಮಿಡ್ನಾಪುರ ಜಿಲ್ಲೆಗಳ ಅರಣ್ಯಗಳಲ್ಲಿರುವ ಜಂಗಲ್ಮಹಲ್ ಪ್ರದೇಶದಿಂದ ಜಂಟಿ ಪಡೆಗಳನ್ನು ಹಿಂದಕ್ಕೆ ಕರೆಸುವುದಾಗಿ ಅವರು ಭರವಸೆ ನೀಡಿದ್ದರು. ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಯ ನಡೆಸುವ ಹೆಸರಿನಲ್ಲಿ, ಅಮಾಯಕ ಗ್ರಾಮಸ್ಥರನ್ನು ಗುರಿಯಿಡಲಾಗುತ್ತಿದೆ. ಅವರಿಗೆ ಕಿರುಕುಳ ನೀಡಲಾಗುತ್ತಿದೆ ಹಾಗೂ ಹಿಂಸಿಸಲಾಗುತ್ತಿದೆ. ಆದರೆ ಸರಕಾರಕ್ಕೆ ಇದೆಲ್ಲಾ ತಿಳಿದಿದ್ದರೂ, ಅದು ಏನೂ ಮಾಡದೆ ಸುಮ್ಮನೆ ಕುಳಿತಿದೆ.
ಅವರು ಸಿಂಗೂರಿನ ರೈತರಿಗೆ ಜಮೀನು ಹಿಂದಿರುಗಿಸುವ ವಾಗ್ದಾನ ನೀಡಿದ್ದರು. ಆದರೆ ಈತನಕ ಅವರಿಗೆ ಒಂದೇ ಒಂದು ಇಂಚು ಜಮೀನು ಕೂಡಾ ನೀಡಲಾಗಿಲ್ಲ. ಜನತೆಯ ಚಳವಳಿಗಾಗಿ ಸರ್ವಸ್ವವನ್ನೂ ತ್ಯಾಗಮಾಡಿದ ರೈತರು ಈಗ ದಟ್ಟದಾರಿದ್ರದಲ್ಲಿ ಬದುಕುತ್ತಿದ್ದಾರೆ. ಸರಕಾರದ ನಿಷ್ಕಾಳಜಿಯ ವರ್ತನೆಯು ನನಗೆ ನೋವುಂಟು ಮಾಡುತ್ತಿದೆ.
ಪ್ರಶ್ನೆ: ಎಡರಂಗ ಸರಕಾರವು ತನ್ನ ಕೊನೆಯ ವರ್ಷಗಳಲ್ಲಿ ಮಾಡಿದ್ದನ್ನೇ, ಮಮತಾ ಬ್ಯಾನರ್ಜಿ ಸರಕಾರವು ಈಗ ಮಾಡುತ್ತಿದೆಯೆಂದು ನೀವು ಹೇಳುತ್ತೀರಾ?
ಮಹಾಶ್ವೇತಾದೇವಿ: ಅದು ವಿವಾದಾತ್ಮಕವಾಗಿದೆ ಹಾಗೂ ನಾನು ರಾಜಕೀಯ ಪ್ರತಿಕ್ರಿಯೆ ನೀಡಲಾರೆ. ಆದರೆ ಭಾರತದ ಪ್ರಜೆಯಾಗಿ ನನಗೆ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದಷ್ಟೇ ಹೇಳಬಲ್ಲೆ.







ಎಷ್ಟು ನಿಖರ ಮಾತು
ಸ್ವರ್ಣಾ