
ಹರ್ಷಕುಮಾರ್ ಕುಗ್ವೆ
ನನ್ನ ಬಾಲ್ಯದ ಗೆಳೆಯ ಸುಬ್ಬು- ಸುಭಾಶ್ ಸಿ ತೇಜಸ್ವಿ ಸಿಯಾಚಿನ್ ನಿಂದ ಇಂದು ರಜೆಯ ಮೇಲೆ ಊರಿಗೆ ಬರುತ್ತಿದ್ದಾನೆ.
ಸಿಯಾಚಿನ್ ಹಿಮಬಂಡೆ ಕುಸಿತ ದುರಂತದಲ್ಲಿ ೮ ಯೋಧರು ಸಿಲುಕಿದ್ದರು. ಅದರಲ್ಲಿ ಮೂವರು ನಾಡಿನ ಯೋಧರು. ನನ್ನ ಬಾಲ್ಯದ ಗೆಳೆಯ ಸುಬ್ಬು ದುರಂತ ನಡೆದ ಜಾಗದಿಂದ ಕೊಂಚ ದೂರದಲ್ಲಿದ್ದ ಕಾರಣ ಅದೃಷ್ಟವಶಾತ್ ಬದುಕಿ ಉಳಿದ. ಸಿಯಾಚಿನ್ ನಿಂದ ಇಂದು ರಜೆಯ ಮೇಲೆ ಊರಿಗೆ ಬರುತ್ತಿದ್ದಾನೆ.
ನಮ್ಮ ಸಮಾಜದ ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ, ನಾನಾ ಬಗೆಯ ಸಂಕಷ್ಟಗಳಿಗೆ ಒಳಗಾದ ಅಸಂಖ್ಯ ಕುಟುಂಬಗಳಲ್ಲಿ ಈ ಸುಬ್ಬು ಅವರ ತಂದೆ ವಸಂತರಾವ್ ಕುಗ್ವೆ ಮತ್ತೆ ಲಕ್ಷ್ಮಿ ದಂಪತಿಗಳ ಕುಟುಂಬವೂ ಒಂದು.
35 ವರ್ಷಗಳ ಹಿಂದೆ ದೀವರು ಸಮುದಾಯಕ್ಕೆ ಸೇರಿದ ತಳಸಮುದಾಯದ, ಕೂಲಿ ಮಾಡುವ ಹುಡುಗಿಯನ್ನು ಪ್ರೀತಿಸಿದ ಕಾರಣಕ್ಕೆ ವಸಂತಣ್ಣ ನಮ್ಮೂರಿನ ಬ್ರಾಹ್ಮಣರ ಕೇರಿಯಿಂದ ಬಹಿಷ್ಕಾರಗೊಂಡು ಕೊಲೆ ಬೆದರಿಕೆಗೊಳಗಾದರು. ಅಂದು ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿದ್ದ ನನ್ನಪ್ಪ ಶಿವಾನಂದ ಕುಗ್ವೆ ಮತ್ತು ಇತರ ಹೋರಾಟಗಾರರು ಈ ದಂಪತಿಗಳ ಬೆಂಬಲಕ್ಕೆ ನಿಂತು, ಮದುವೆ ಮಾಡಿಸಿದರು.
ಆ ನಂತರ, ಈ ವಸಂತಣ್ಣ, ಲಕ್ಷ್ಮಕ್ಕ ಆರ್ಥಿಕ ಕಷ್ಟಗಳ ನಡುವೆಯೇ ಸ್ವಾಭಿಮಾನದಿಂದ ಬದುಕಿ, ಸುಭಾಷ್ ಚಂದ್ರ ತೇಜಸ್ವಿ ಮತ್ತು ಸರಿತಾ ತಪಸ್ವಿ ಎಂಬಿಬ್ಬರು ಮಕ್ಕಳನ್ನು ಪಡೆದು ಅವರನ್ನು ಬೆಳೆಸಿದರು. ಈಗ ಅದೆಲ್ಲಾ ಹಳೆಯ ಕತೆ. ಅಂದಹಾಗೆ ನಾನು ಮೊತ್ತಮೊದಲು ಜೀವನದಲ್ಲಿ ದಲಿತ ಗೀತೆಗಳನ್ನು, ಕ್ರಾಂತಿ ಗೀತೆಗಳನ್ನು ಕೇಳಿದ್ದು ವಸಂತಣ್ಣ ಅವರ ಬಾಯಿಂದಲೇ.
ಸುಬ್ಬು ಸೈನ್ಯಕ್ಕೆ ಸೇರಿದ ಮೇಲೆ ವಸಂತಣ್ಣ ಆರ್ಥಿಕವಾಗಿ ಒಂದು ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿತ್ತು.
ಆದರೆ ಸಿಯಾಚಿನ್ ದುರಂತವಾದಾಗ, ವಾರಗಳ ಕಾಲ ಮಗನ ಸುಳಿವೇ ಸಿಗದಾದಾಗ ಆತಂಕದ ಪರಿಸ್ಥಿತಿ ಏರ್ಪಟ್ಟಿತ್ತು. ಕೊನೆಗೆ ಸುಬ್ಬು ಸುರಕ್ಷಿತವಾಗಿದ್ದಾನೆ ಎಂದು ತಿಳಿದಾಗ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ಅತ್ಯಂತ ದುರ್ಗಮವಾದ ಸಿಯಾಚಿನ್ ಕಣಿವೆಯಲ್ಲಿ ಅತ್ಯಂತ ಕಠಿಣ ದಿನಗಳನ್ನು ಕಳೆದು ಇಂದು ಊರಿಗೆ ಮರಳುತ್ತಿರುವ ನಮ್ಮೂರಿನ ಈ ಹೆಮ್ಮೆಯ ಪುತ್ರನಿಗೆ ಭವ್ಯ ಸ್ವಾಗತಕ್ಕಾಗಿ ಸಾಗರ ಮತ್ತು ಕುಗ್ವೆಯ ಜನರು ಕಾದಿದ್ದಾರೆ.
A Hearty Welcome and proud of you Subbu.





0 Comments