3
ನಿನ್ನೆಯಿಂದ ಮುಂದುವರಿದದ್ದು…
ಪ್ರಯತ್ನಿಸುವುದಾಗಿ ಹೇಳಿ ಅಲ್ಲಿಂದ ಮರಳಿದರು. ಕೆಲವು ದಿವಸಗಳವರೆಗೆ ಅದೇ ಗುಂಗಿನಲ್ಲಿದ್ದರು. ಮೇಲಿಂದ ಮೇಲೆ ರಾಜ್ಯಪಾಲರು ಏನು ಮಾಡಿದಿರಿ ಎಂದು ಕೇಳುತ್ತಲೇ ಇದ್ದರು. ಆ ದಿವಸ ಸಹೋದ್ಯೋಗಿಗಳು ಸಂಪುಟದರ್ಜೆ ಅಧಿಕಾರಗಳ ಹಾಗೂ ವಿರೋಧಪಕ್ಷಗಳ ಧುರೀಣರ ಸಭೆ ಕರೆದರು. ಮಹರ್ಷಿ ಮೇಳಂಬ ಉತ್ಕರ್ರ ಘನವೆತ್ತರ ಮತ್ತು ಅವರ ಅಳಿಯ ಅಪೋಶಕರ್ ಮೇಹು ಕುರಿತು ಪ್ರಸ್ತಾಪಿಸಿದರು. ಸಮಾಲೋಚಿಸಿದರು. ಅದಕ್ಕೆ ಮಿಶ್ರಪ್ರತಿಕ್ರಿಯೆ ಲಭಿಸಿತು. ಹರಿತ ಮಾತುಗಾರಿಕೆಯ ಕ್ಷೇತ್ರಪಾಲ್ ಉಕ್ಕಡ್ ಕೆರಳಿದರು. ಎದ್ದು ನಿಂತು ಟೇಬಲ್ ಮೇಲೆ ಗುದ್ದಿದರು.
ಇಂಥ ಅಪಾಯಕಾರಿ ಸಲಹೆ ನೀಡಿದ್ದು ಯಾವ ಲೋಫರ್ ಮುಖ್ಯಮಂತ್ರಿಗಳೆ, ಅವನ ಮೇಲೆ ಎಫ್ಐಆರ್ ದಾಖಲಿಸಿ, ಜೈಲಿಗೆ ಕಳಿಸಿ, ಅದು ಬಿಟ್ಟು ನೀವು! ಎಂದು ಘರ್ಜಿಸಿದರು. ಅಲ್ಲದೆ ಮಾಧ್ಯಮಗಳು ಸಹ ನಿಷ್ಪತ್ತಿಯವರ ಈ ಯೋಜನೆಯನ್ನು ಟೀಕಿಸಿದವು.
ರಾಜ್ಯಪಾಲರ ಸಲಹೆಯನ್ನು ಈಡೇರಿಸುವಲ್ಲಿ ತಾವು ಅಸಮರ್ಥರಾದೆವಲ್ಲ ಎಂಬ ಪಾಪಪ್ರಜ್ಞೆ ಶ್ರೀಯುತರನ್ನು ಬಾಧಿಸಲಾರಂಭಿಸಿತು. ಎಲ್ಲಿಗೆ ಬಂತು ಯೋಜನೆ ಎಂದು ಘನವೆತ್ತರು ಕೇಳಿದರು. ಅದಕ್ಕೆ ಇವರು ಸಹೋದ್ಯೋಗಿಗಳ ಹಾಗೂ ವಿರೋಧ ಪಕ್ಷಗಳ ಧುರೀಣರ ಅಸಹಕಾರವನ್ನು ಹೃದಯವಿದ್ರಾವಕವಾಗಿ ವಿವರಿಸಿದರು. ಅವರ ಮಾತುಗಳಿಂದ ಘನವೆತ್ತರು ಬೇಸರಗೊಂಡರು. ಈಗಾಗಲೇ ತಮ್ಮ ಅಳಿಯನಿಗೆ ಮಾತು ಕೊಟ್ಟಿರುವುದಾಗಿ ಹೇಳಿದರು. ಆತ ಲಕ್ಷಾಂತರ ವ್ಯಯಿಸಿ ನೀಲನಕ್ಷೆ ತಯಾರಿಸಿಟ್ಟುಕೊಂಡಿರುವನು. ಅಲ್ಲದೆ ಮಹರ್ಷಿಗಳು ಹಿಮಾಲಯಕ್ಕೆ ತೆರಳದೆ ಇಲ್ಲಿಯೇ ಉಳಿದಿರುವರು. ಈಗ ನೀವು ಇಂಥ ಮಾತು ಹೇಳುತ್ತಿರುವಿರಲ್ಲ ಎಂದು ಹೇಳಿದರು. ತಾವೇ ಪುನಃ ಆತನನ್ನು ಸಂತೃಪ್ತಿ ಪಡಿಸುವುದು ನಿಮ್ಮ ನೈತಿಕ ಹೊಣೆ ಎಂದು ಹೇಳುವುದನ್ನು ಮರೆಯಲಿಲ್ಲ. ಅದಕ್ಕೆ ಪ್ರತಿಯಾಗಿ ಮೇಹುರವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಲೇಬೇಕೆಂದು ಷರತ್ತು ವಿಧಿಸಿದರು. ಘನವೆತ್ತರ ಮಾತೆಂದರೆ ಮಾತು. ಬಿಸಿತುಪ್ಪವನ್ನು ಎಷ್ಟು ದಿವಸಗಳ ಕಾಲ ಗಂಟಲಲ್ಲಿರಿಸಿಕೊಂಡಿರಲಾದೀತು! ನಾನಾ ಅವಸ್ಥೆ ಅನುಭವಿಸಿ ಆಪೋಶಕರ್ ಮೇಹು ಅವರನ್ನು ರಾಜ್ಯಸಭಾಸದಸ್ಯರನ್ನಾಗಿ ಆಯ್ಕೆ ಮಾಡಿ ಪಾಣಿಪತ್ತಿಗೆ ಕಳಿಸುವಲ್ಲಿ ಸಫಲರಾದರು. ಆತ ಅಲ್ಲಿ ತನ್ನ ಅಧಿಕಾರದವಧಿ ಪೂರೈಸಿದ, ನಂತರ ಮಹಿಷ್ಮತಿರಾಜ್ಯಕ್ಕೆ ಮರಳಿ ನಿರಂತರ ಕಾಡುತ್ತಿರುವುದು ಯಾವ ನ್ಯಾಯ!
ತಮ್ಮ ಅಧಿಕಾರ ಮೊಟಕುಗೊಳ್ಳುವಲ್ಲಿ ಘನವೆತ್ತ ಮಾವ ಮತ್ತು ಅವರ ಅಳಿಯಂದಿರು ಮುಖ್ಯಪಾತ್ರ ವಹಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಈ ಅಸಂದಿಗ್ದತೆಯನ್ನು ಮುಖದ ಭಾವನೆಗಳ ಮೂಲಕ ಪ್ರಕಟಿಸುತ್ತ ಪ್ರವೇಶಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಕಂಡೊಡನೆ ಘನವೆತ್ತರು ಭಾವಪರವಶರಾದರು. ಮರ್ಯಾದಾಪುರುಷೋತ್ತಮನ ನಾಮಸ್ಮರಣೆ ಮಾಡಿದರು. ಘನವೆತ್ತರು ಮುಖ್ಯಮಂತ್ರಿಗಳ ಎರಡೂ ಕೈಗಳನ್ನು ಹಿಡಿದು ಗೌರವಪೂರ್ವಕವಾಗಿ ಕರೆದೊಯ್ದರು, ತಮ್ಮ ಪಕ್ಕದಲ್ಲಿದ್ದ ಶ್ರೀಗಂಧದ ಕುರ್ಚಿಯಲ್ಲಿ ಕುಳ್ಳಿರಿಸಿದರು. ನೋಡಿದ ಪ್ರತಿಸಲವೂ ರಾಮಾಯಣಕಾವ್ಯದ ಪಾತ್ರಗಳಂತೆ ವಿಭಿನ್ನರೀತಿಯಲ್ಲಿ ಗೋಚರಿಸುತ್ತಿರುವಿರಿ ಎಂದೂ ಮನದುಂಬಿ ಶ್ಲಾಘಿಸಿದರು. ಆಹಾರ ಪಾನೀಯಗಳಿಂದ ಸತ್ಕರಿಸಿದ ಬಳಿಕ..
ಓಘವಂತ್ ಸಿವಂಗಿ ಅಲ್ಲಿದ್ದವರನ್ನು ಒಬ್ಬೊಬ್ಬರಂತೆ ಹೊರಗೆ ಕಳಿಸಿದರು. ತಾವು ಕಿವಿಯಳತೆಯಲ್ಲಿ ಸವಿನಯವೇ ಮೈವೆತ್ತಂತೆ ನಿಂತರು, ಮೈ ಎಲ್ಲ ಪಂಚೇಂದ್ರಿಯಗಳನ್ನು ಧರಿಸಿ. ಶ್ರವಣದೋಷದಿಂದಾಗಿ ಘನವೆತ್ತರು ತಾವಿದ್ದ ಕುರ್ಚಿಯನ್ನು ಮುಖ್ಯಮಂತ್ರಿಗಳ ಸನಿಹಕ್ಕೆ ಎಳೆದು ಕೂತರು. ಗೂಢಾಚಾರ ಇಲಾಖೆ ಸಂಗ್ರಹಿಸಿ ನೀಡಿರುವ ಮಾಹಿತಿಯಂತೆ! ಹೌದೇನು ಎಂದು ಪ್ರಶ್ನಾರ್ಥಕ ಪದದ ಪಲ್ಲವಿಯಿಂದ ಚರ್ಚೆ ಆರಂಭಿಸಿದರು. ರಾಜ್ಯರಾಜಕಾರಣದ ಸದ್ಯದ ಪರಿಸ್ಥಿತಿ ಕುರಿತು ಮಾತುಕತೆ ನಡೆಸಿದರು. ನಡುನಡುವೆ ಕೆಲವು ವೈಯಕ್ತಿಕ ಹಿತಾಸಕ್ತಿಯ ರಹಸ್ಯಕಡತಗಳಿಗೆ ಮುಖ್ಯಮಂತ್ರಿಗಳ ಸಹಿ ಪಡೆಯುವುದನ್ನು ಘನವೆತ್ತರು ಮರೆಯಲಿಲ್ಲ. ರಾಜಿನಾಮೆ ಸಲ್ಲಿಸಲೆಂದು ತಾವಿಲ್ಲಿಗೆ ಆಗಮಿಸಿರುವುದಾಗಿ ನಿಷ್ಪತ್ತಿಯವರು ನುಡಿದೊಡನೆ ಕಾಲ್ಗೊದ್ ಹ್ಹಾ ಎಂದು ಬೆಚ್ಚಿದರು. ಮರ್ಯಾದಾಪುರುಷೋತ್ತಮನ ನಾಮಸ್ಮರಣೆ ಪುನರುಚ್ಚರಿಸಿದರು, ಆದ ಸಂತೋಷವನ್ನು ಅಂತರಂಗದಲ್ಲಿ ಅಡಗಿಸಿಟ್ಟುಕೊಂಡರು. ಮಗಳ ಗಂಡ ಆಪೋಶಕರ್ ಮೇಹೂನ ರಾಜನೀತಿಜ್ಞತನವನ್ನು ಒಳಗೊಳಗೆ ಶ್ಲಾಘಿಸುವುದನ್ನು ಘನವೆತ್ತರು ಮರೆಯಲಿಲ್ಲ. ಆದರೂ ಅಸಂಖ್ಯಾತ ನಿರಿಗೆಗಳಿದ್ದ ಮುಖವನ್ನು ದುಃಖದಿಂದ ಹ್ರಸ್ವಗೊಳಿಸಿದರು. ಎಲ್ಲ ವಿಧಿವಿಲಾಸ ಎಂದು ನುಡಿದರು ಶ್ರೀಯುತರಿಗೆ ಕೇಳಿಸುವಂತೆ!
ಸಚಿವ ಸಂಪುಟದ ಸಹೋದ್ಯೋಗಿಗಳಲ್ಲಿ ಕೆಲವರಿಗೆ, ಮಾಧ್ಯಮಗಳಿಗೆ ಸಂಬಂಧಿಸಿದ ಕೆಲವರಿಗೆ ರಾಜಭವನದ ಸಭಾಂಗಣ ಪ್ರವೇಶಿಸಲು ಅನುಮತಿ ದಯಪಾಲಿಸಲಾಯಿತು. ಅವರೆಲ್ಲರ ಸಮಕ್ಷಮ ಸನ್ಮಾನ್ಯ ಜಗದುದರ ನಿಷ್ಪತ್ತಿಯವರು ಘನವೆತ್ತ ರಾಜ್ಯಪಾಲ ಗುಣಧಾಮ ಕಾಲ್ಗೋದ್ ಅವರಿಗೆ ವಿದ್ಯುಕ್ತವಾಗಿ ತಮ್ಮ ಸಚಿವ ಸಂಪುಟದ ರಾಜಿನಾಮೆ ಪತ್ರವನ್ನು ಹಸ್ತಾಂತರಿಸಿದರು. ಮಾಧ್ಯಮ ಸಲಹೆಗಾರ ಡಾ ನೈಮಿತ್ತಿಕ ಇಂದಗಿ ಸಿದ್ದಪಡಿಸಿದ್ದ ಅರ್ಧಪುಟದ ಉಪನ್ಯಾಸವನ್ನು ಸಾದರ ಪಡಿಸುವಾಗ ತಡವರಿಸಿದರು, ಗದ್ಗದಿತರಾದರು. ಸಿವಂಗಿಯವರು ಆಗಾಗ್ಗೆ ನೀಡಿದ ಕರವಸ್ತ್ರದ ನೆರವಿನಿಂದ ಕಣ್ಣುಗಳನ್ನು ಮರೆಮಾಚಿದರು. ಶ್ರೋತೃಗಳು ಸಹ ದುಃಖಪರವಶರಾದರು. ಅದಾದ ನಂತರ ನಿಷ್ಪತ್ತಿಯವರು ಘನವೆತ್ತರ ಕಡೆ ತೀಕ್ಷ್ಣನೋಟ ಬೀರುವ ವಿಫಲ ಪ್ರಯತ್ನ ನಡೆಸಿದರು. ಎಲಾ ನೀಚನೆ ಎಂದು ಅವರನ್ನು ಜರಿಯಲು ಪ್ರಯತ್ನಿಸಿದರು, ಉಪ್ಪು ನೀಡಿ ಸತ್ಕರಿಸಿದ ಮನೆಯನ್ನೇ ಆಪೋಶನ ತೆಗೆದುಕೊಂಡ ನಿನ್ನ ಅಳಿಯ ಮೇಹು ಎಲ್ಲಿರುವನೆಂದು ಬೊಗಳು ಎಂದು ಕೇಳಲು ಪ್ರಯತ್ನಿಸಿದರು. ಅಂಥ ನಿಷ್ಫಲ ಪ್ರಯತ್ನಗಳಿಂದ ಸೋತು ಬಸವಳಿದರು. ಮಾಧ್ಯಮದವರು ಕೆಮೆರಾಗಳನ್ನು ಶ್ರೀಯುತರ ಕಂಪಿಸುತ್ತಿದ್ದ ಕೈಗಳ ಕಡೆ ಮ್ಲಾನವದನದ ಕಡೆ ನೆಟ್ಟಿದ್ದವು. ಈ ಪಿತಾಮಹನ ಮುಂದಿನ ನಡೆ ಏನಿರಬಹುದೆಂಬ ಕುತೂಹಲ ಎಲ್ಲರ ಉಸಿರಾಟವನ್ನು ಸ್ಥಗಿತಗೊಳಿಸಿತು. ಸಂಪುಟ ದರ್ಜೆ ಸಚಿವರೂ ಮುಖ್ಯಮಂತ್ರಿಸ್ಥಾನದ ಆಕಾಂಕ್ಷಿಗಳೂ ಆದ ಕಾಕಬಲಿ, ಧರ್ಮದತ್ ಅವಿಕ್ಷಿತ್ ಪರಸ್ಪರ ಮುಖಗಳನ್ನು ದರ್ಶಿಸಿದರು. ರಾಜಿನಾಮೆ ಸಲ್ಲಿಸಿದ ನಂತರವೂ ನಿಂತಿರುವಿ ಏಕೆ? ಋಷ್ಯಮೂಕಾಶ್ರಮ ನಿನ್ನ ನಿರೀಕ್ಷೆಯಲ್ಲಿರುವುದು ಎನ್ನುವುದನ್ನು ಮರೆಯದಿರು ಎಂದು ಕೂಗಿ ಹೇಳಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ.
ಆಧ್ಯಾತ್ಮಿಕಜೀವಿಯಾಗಿದ್ದರೂ ನಿಷ್ಪತ್ತಿ ಓರ್ವ ರಾಜಕಾರಣಿ! ಎಡಹೃತ್ಕರ್ಣದಲ್ಲಿನ ರಹಸ್ಯ ಬಲಹೃತ್ಕರ್ಣಕ್ಕೆ ತಿಳಿಸುವಂಥ ಸ್ವಭಾವ ಅವರಿಗೆ ಇರಲಿಲ್ಲ. ಅಂದ ಮೇಲೆ ಕಾಕಬಲಿ ಅವಿಕ್ಷಿತ್ ಧರ್ಮದತ್ರಂಥ ಸಚಿವ ಸಂಪುಟದ ಕಪಟಿಗಳಿಗೆ ತಿಳಿಯುವುದು ಸಾಧ್ಯವೆ! ಅಸದಳ ಮೌನ ಆವರಿಸಿತು. ಅದನ್ನು ಮುರಿಯಲು ನಿರ್ಧರಿಸಿದ ಘನವೆತ್ತರು ಮೆಲ್ಲಗೆ ಎದ್ದು ನಿಂತರು. ಮಹಿಷ್ಮತಿರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿಗಳು ನಮ್ಮ ಜಗದುದರ ನಿಷ್ಪತ್ತಿಯವರು. ಇಂಥ ಜನಾನುರಾಗಿ ರಾಜಕಾರಣಿ ದೇಶದಲ್ಲಿ ಎಲ್ಲೂ ಇಲ್ಲ. ಸನ್ಮಾನ್ಯರು ಸಲ್ಲಿಸಿರುವ ರಾಜಿನಾಮೆ ಪತ್ರಕ್ಕೆ ದೇವರ ದಯೆಯಿಂದ ನಾವಿನ್ನೂ ಅಂಗೀಕಾರ ಮುದ್ರೆ ಒತ್ತಿಲ್ಲ, ಇದಕ್ಕೆ ಸಂವಿದಾನತಜ್ಞರ ಅಭಿಪ್ರಾಯ ಪಡೆಯುವ ಅಗತ್ಯವಿದೆ. ಶ್ರೀಯುತರು ತಮ್ಮ ನಿರ್ಧಾರವನ್ನು ಬದಲಿಸಿ ಮುಖ್ಯಮಂತ್ರಿಗಳಾಗಿ ಮುಂದುವರೆಯಬೇಕೆನ್ನುವುದು ನಮ್ಮ ಅಭಿಲಾಷೆ ಎಂದು ಸೌಜನ್ಯದ ನುಡಿಗಳನ್ನು ಆಡಿದರು. ಅದಕ್ಕೆ ಅಭಿಮಾನಿಗಳಲ್ಲಿ ಕೆಲವರು ಮಾತ್ರ ಕರತಾಡನ ಮಾಡಿದರು. ಅದಕ್ಕೆ ನಿಷ್ಪತ್ತಿಯವರು ಬಲಗೈಯನ್ನು ಎಡಬಲಕ್ಕೆ ಅಲುಗಾಡಿಸಿದರು. ಪುನಃ ರಾಜ್ಯಪಾಲರು ನಿಷ್ಪತ್ತಿಯವರು ನಿಷ್ಕಾಮಕರ್ಮಯೋಗಿಗಳು. ಸನ್ಮಿತ್ರರು ರಾಯಭಾರಿಗಳಾಗಿ ಸೇವೆ ಸಲ್ಲಿಸಲು ಇಚ್ಚಿಸಿದರೆ ಇನ್ನೂ ಒಳ್ಳೆಯದು. ಶ್ರೀಯುತರು ಸೇವೆ ಸಲ್ಲಿಸಲು ಇಥಿಯೋಪಿಯಾದಲ್ಲಿ ವಿಪುಲ ಅವಕಾಶಗಳಿವೆ, ತಮ್ಮ ಆಭಿಪ್ರಾಯವೇನು ಸನ್ಮಿತ್ರರೇ ಎಂದು ಕೇಳಿದರು ಕತ್ತು ಹೊರಳಿಸಿ. ಅದಕ್ಕೆ ಶೀಯುತರು..
ಘನವೆತ್ತ ರಾಜ್ಯಪಾಲರ ಸದಾಶಯಗಳಿಗೆ ಚಿರಋಣಿ. ನನಗೆ ಅಧಿಕಾರ ದಾಹವಿಲ್ಲ. ರಾಮನಾಮ ಸ್ಮರಣೆ ಮಾಡುತ್ತ ಋಷ್ಯಮೂಕಾಶ್ರಮದಲ್ಲಿ ಶೇಷಾಯುಷ್ಯ ಕಳೆಯಲು ನಿರ್ಧರಿಸಿರುವೆ. ಹ್ಹಾ ಅಂದಹಾಗೆ ಘನವೆತ್ತರು ನನ್ನ ಇನ್ನೊಂದು ಮನವಿಯನ್ನು ಸಂವಿದಾನಿಕವಾಗಿ ಪರಿಶೀಲಿಸಿ ಪುರಸ್ಕರಿಸಬೇಕು ಎಂದು ಸವಿನಯಪೂರ್ವಕವಾಗಿ ನುಡಿದರು. ಅದಕ್ಕೆ ಘನವೆತ್ತರು ಶಿರಸಾವಹಿಸಿ ನಡೆಸಿಕೊಡುವೆವು, ದಯವಿಟ್ಟು ಹೇಳಿ ಎಂದು ಆಪೇಕ್ಷಿಸಿದರು, ಕುತೂಹಲವಂದಿಗರಾಗಿ.
ರಾಜಕೀಯ ಸಂದಿಗ್ದ ಪರಿಸ್ಥಿತಿಯಲ್ಲಿ ಹಿಂದಿನ ಮುಖ್ಯಮಂತ್ರಿಗಳು ಮಾಡಿರುವ ಪವಿತ್ರ ಕೃತ್ಯವನ್ನು ನಾನೂ ಮಾಡುತ್ತಿರುವೆ. ಚುನಾಯಿತ ಜನಪ್ರತಿನಿಧಿಗಳಲ್ಲಿ ಹೆಚ್ಚಿರುವ ಅಧಿಕಾರ ದಾಹ ಅಕ್ಷಮ್ಯ. ವಿರೋಧಪಕ್ಷಗಳು ಸಹ ಇದಕ್ಕೆ ಹೊರತಿಲ್ಲ, ಆದ್ದರಿಂದ ಶಾಸಕಾಂಗ ಅತಂತ್ರ ಸ್ಥಿತಿಯಲ್ಲಿದೆ. ಇದು ಹೀಗೆ ಮುಂದುವರೆದರೆ ಮಹಿಷ್ಮತಿರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗುವ ಸಂಭವವಿದೆ. ಇದರಿಂದಾಗಿ ನನ್ನ ಮನಸ್ಸಿಗೆ ತುಂಬಾ ಬೇಸರವಾಗಿದೆ. ಇದಕ್ಕೆ ಪರಿಹಾರವೆಂದರೆ ಮಧ್ಯಂತರ ಚುನಾವಣೆ. ರಾಜ್ಯದ ಗೌರವಾನ್ವಿತ ಮತದಾರ ಸುಭದ್ರ ಸರ್ಕಾರ ರಚಿಸುವ ಪಕ್ಷವನ್ನು ಆಯ್ಕೆ ಮಾಡಬೇಕು. ಈ ಎಲ್ಲವನ್ನೂ ಪರಾಮರ್ಶಿಸಿ ಶಾಸಕಾಂಗಸಭೆಯನ್ನು ವಿಸರ್ಜಿಸಲು ನಿರ್ಧರಿಸಿರುವೆ ಎಂದು ಹೇಳಿ ಮನವಿ ಪತ್ರವನ್ನು ರಾಜ್ಯಪಾಲರಿಗೆ ಹಸ್ತಾಂತರಿಸಿದರು. ಅದರಿಂದ ರಾಜ್ಯಪಾಲರು ದಿಗ್ಭ್ರಮಿತರಾದರು. ಎಲಾ ದುಷ್ಟನೇ ಎಂದು ಅಂತರಂಗದಲ್ಲಿ ಶಪಿಸಿದರು. ಆದರೂ ಹಸನ್ಮುಖರಾಗಿ ಅದನ್ನು ಎರಡೂ ಕೈಗಳಿಂದ ಸ್ವೀಕರಿಸಿದರು. ಅದನ್ನು ತಮ್ಮ ಕಾರ್ಯದರ್ಶಿಗಳಿಗೆ ವರ್ಗಾಯಿಸಿದರು. ಸಂವಿದಾನತಜ್ಞರೊಂದಿಗೆ ರಾಷ್ಟ್ರಪತಿಭವನದೊಂದಿಗೆ ಸಮಾಲೋಚಿಸಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು. ಮುಖ್ಯಮಂತ್ರಿ ಸ್ಥಾನದಲ್ಲಿ ತಾತ್ಕಾಲಿಕವಾಗಿ ಮುಂದುವರೆಯುವಂತೆ ನಿಷ್ಪತ್ತಿ ಅವರಿಗೆ ಮನವಿ ಮಾಡಿಕೊಂಡರು.
ಸಭೆಯಲ್ಲಿ ಉಪಸ್ಥಿತರಿದ್ದ ಸಚಿವರು ನಿಷ್ಪತ್ತಿವರ ನಿಧರ್ಾರವನ್ನು ಖಂಡಿಸಿದರು. ಇದು ಪ್ರಜಾಪ್ರಭುತ್ವಕ್ಕೆ ಶ್ರೀಯುತರು ಅಪಚಾರ ಮಾಡಿರುವರು ಎಂದು ಗೊಣಗಿದರು. ಬಳಿಕ ಅಲ್ಲಿಂದ ಚಿಂತಾಕ್ರಾಂತರಾಗಿ ನಿರ್ಗಮಿಸಿದರು.
***
ಮುಖ್ಯಮಂತ್ರಿ ಸ್ಥಾನದಿಂದ ಜಗದುದರ ನಿಷ್ಪತ್ತಿಯವರ ನಿರ್ಗಮನ! ಶಾಸನಸಭೆಯನ್ನು ವಿಸರ್ಜಿಸುವಂತೆ ಶಿಪಾರಸ್!
ರಾಜ್ಯದ ಹಾಗೂ ದೇಶದ ದೈನಿಕಗಳು ವಾರ್ತೆಯನ್ನು ಮುಖಪುಟಗಳಲ್ಲಿ ಪ್ರಕಟಿಸಿದವು. ವಿದ್ಯುನ್ಮಾನ ಮಾಧ್ಯಮಗಳು ನಿಷ್ಪತ್ತಿಯವರ, ವಿರೋಧಪಕ್ಷಗಳ ಮುಖಂಡರ ಸಂದರ್ಶನ ಅಭಿಪ್ರಾಯ ಪ್ರತಿಕ್ರಿಯೆಗಳನ್ನು ಪ್ರಸಾರ ಮಾಡಲಾರಂಭಿಸಿದವು. ರಾಜ್ಯದ ಹಲವು ನಿಯತಕಾಲಿಕಗಳಲ್ಲಿನ ತಮ್ಮತಮ್ಮ ಅಂಕಣಗಳಲ್ಲಿ ಪ್ರೊ ದಕ್ಷಾರಿ, ಪ್ರೊ ಪುಣ್ಯಾಂಗನ್ ಅಕುಲ್, ಹಸನ್ಮುಖ್ ಬಂಚ್ ಸೇರಿದಂತೆ ಹಲವರು ರಾಜ್ಯದ ರಾಜಕೀಯ ವಿದ್ಯಾಮಾನಗಳನ್ನು ವಿಶ್ಲೇಷಿಸಿದರು. ರಾಜ್ಯದ ಉತ್ತರಭಾಗದ ಬಡೇಲಡಕು, ಯಾಲಪಿ, ಸಿರವಾರ, ನಿಚ್ಚಾಪುರ, ಹಲಕುಂದಿ ಜಿಲ್ಲೆಗಳಲ್ಲಿ ವಿರೋಧಪಕ್ಷದ ನಾಯಕ ಕ್ಷೇತ್ರಪಾಲ ಉಕ್ಕಡ ಅವರ ಪ್ರತಿಕೃತಿಯನ್ನು ದಹಿಸಲಾಯಿತು. ರಾಜ್ಯದ ದಕ್ಷಿಣಭಾಗದ ಐತರೇಯ, ಕಂಡಪರೀಯ, ಸಸಿನೆ, ದಿವಿಜಾಪಗೆ ಜಿಲ್ಲೆಗಳಲ್ಲಿ ನಿಷ್ಪತ್ತಿಯವರ ಪ್ರತಿಕೃತಿಯನ್ನು ದಹಿಸಲಾಯಿತು. ಕೆಲವು ರಾಜಕಾರಣಿಗಳು ಮಧ್ಯಂತರ ಚುನಾವಣೆಯನ್ನು ಸ್ವಾಗತಿಸಿದರು, ಇನ್ನೂ ಹಲವರು ಖೇದ ವ್ಯಕ್ತಪಡಿಸಿದರು.
ಉಪಸರ್ಜಪಕ್ಷದ ಧುರೀಣ ಛಲದಂಕ ಕಿರುಕುಳ್, ಇಷುಧಿಪಕ್ಷದ ಮುಖಂಡ ಉನ್ಮಾದ್ ಕುತ್ಕೀಲ, ವಾತಾಶನಪಕ್ಷದ ನೇತಾರ ಅಣುರಥ್ ಶುಲ್ವ, ಜ್ಞಾನಕಾರಣಪಕ್ಷ ಸಂಸ್ಥಾಪಕ ಶ್ರೀಉಪದ್ರವಾನಂದಸ್ವಾಮಿ ಎಲ್ಲೆಲ್ಲೆಂ ಪರಸ್ಪರ ದೂರವಾಣಿಗಳ ಮೂಲಕ ಮಾತಕತೆ ನಡೆಸಿದರು. ಜಗದುದರ ನಿಷ್ಪತ್ತಿಯವರನ್ನು ಅಶ್ಲೀಲಪದಗಳ ಗುಚ್ಚದಿಂದ ಘಾಸಿಗೊಳಿಸಿದರು. ಅವರ ಅಸಮಾಧಾನ ಸಕಾರಣವಾಗಿತ್ತು. ಕಳೆದ ಸಲದ ಚುನಾವಣೆಯಲ್ಲಿ ರಾಷ್ಟೀಯ ಪಕ್ಷಗಳೊಂದೇ ಅಲ್ಲದೆ ಹತ್ತಾರು ಪ್ರಾದೇಶಿಕ ಪಕ್ಷಗಳು ಸ್ಪರ್ಧಿಸಿದ್ದವು, ಅದೂ ಮಹಿಷ್ಮತಿರಾಜ್ಯದ ಮೂರುನೂರಾ ಐವತ್ತೆರಡು ಕ್ಷೇತ್ರಗಳಲ್ಲಿ! ಅನೈತಿಕ ಮಾರ್ಗದಿಂದ ಶೇಖರಿಸಿಟ್ಟಿದ್ದ ಕಪ್ಪುಹಣದ ಹೊಳೆಯನ್ನೇ ಹರಿಸಿದವು. ಅಸಂವಿದಾನಿಕ ಪದಗಳನ್ನು ಓತೋಪ್ರೋತವಾಗಿ ಪ್ರಯೋಗಿಸಿದವು. ಆದರೆ ರಾಜ್ಯದ ಮತದಾರ ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ದಯಪಾಲಿಸಲಿಲ್ಲ. ರಾಷ್ಟ್ರೀಯಪಕ್ಷಗಳಾದ ಅನಾಹತ, ಯಜ್ಞೋಪವೀತ, ಋಣಾನುಬಂಧಗಳಂಥ ರಾಷ್ಟ್ರೀಯಪಕ್ಷಗಳಿಂದ ಸ್ಪರ್ಧಿಸಿದ್ದ ಕೆಲವರು ಮಾತ್ರ ಜಯಶಾಲಿಗಳಾದರು. ಪ್ರಾದೇಶಿಕಪಕ್ಷಗಳವತಿಯಿಂದ ಸ್ಪರ್ಧಿಸಿದ್ದ ಕೆಲವರು ಠೇವಣಿ ಕಳೆದುಕೊಂಡರೆ ಇನ್ನು ಕೆಲವರು ನೂರಿನ್ನೂರು ಮತಗಳ ಅಂತರದಿಂದ ಗೆಲುವು ಸಾಧಿಸಿದರು. ರಾಜಕಾರಣಶಾಸ್ತ್ರಜ್ಞರು ಚುನಾವಣ ವಿಶ್ಲೇಷಕರು ಎಲ್ಲಾಪಕ್ಷಗಳು ಮತದಾರನ ವಿಶ್ವಾಸವನ್ನು ಕಳೆದುಕೊಂಡಿವೆ, ಆದ್ದರಿಂದ ಪುನಃ ಚುನಾವಣೆ ನಡೆಸುವುದರ ಮೂಲಕ ಪ್ರಜಾಪ್ರಭುತ್ವವನ್ನು ಸುಸ್ಥಿರಗೊಳಿಸಲು ರಾಷ್ಟ್ರಪತಿಗಳು ಸೂಕ್ತನಿರ್ಧಾರ ತೆಗೆದುಕೊಳ್ಳಬೇಕೆಂದು ಲೇಖನಗಳನ್ನು ಬರೆದರು.
ರಾಷ್ಟ್ರಪತಿಗಳು ಮಹಿಷ್ಮತಿರಾಜ್ಯದ ರಾಜಕೀಯ ವಿದ್ಯಾಮಾನಗಳ ಕಡೆ ಗಮನ ಕೇಂದ್ರೀಕರಿಸಿದರು. ಅತಂತ್ರಸ್ಥಿತಿ ಕೇವಲ ಒಂದು ರಾಜ್ಯಕ್ಕೆ ಮಾತ್ರ ಅನ್ವಯವಾಗಿರಲಿಲ್ಲ. ದೇಶದ ಎಲ್ಲಾ ರಾಜ್ಯಗಳಲ್ಲೂ ಅತಂತ್ರಸ್ಥಿತಿ ಇತ್ತು. ಆದ್ದರಿಂದ ವಿಸರ್ಜನೆ ಎಂಬ ಪದವನ್ನು ರಾಷ್ಟ್ರಪತಿಭವನದಲ್ಲಿ ಅಮಾನತ್ತಿನಲ್ಲಿರಿಸಲಾಗಿತ್ತು. ಆದ್ದರಿಂದ ರಾಷ್ಟ್ರಪತಿಗಳು ತಮ್ಮ ಮಾಜಿ ಸಹೋದ್ಯೋಗಿಗಳೂ ಸಹವರ್ತಿಗಳೂ ಆದಂಥ ಸನ್ಮಾನ್ಯ ಗುಣಧಾಮ ಕಲ್ಗೋಧ್ ಅವರನ್ನು ಉದ್ದೇಶಿಸಿ..
ರಾಜಭವನ ಕಪಿತ್ಥನಗರದಲ್ಲಿನ ರಾಜಕೀಯ ವಿದ್ಯಾಮಾನಗಳನ್ನು ಎಚ್ಚರದಿಂದ ಗಮನಿಸತೊಡಗಿತು. ಶೀಘ್ರ ನಿಮ್ಮ ಪಕ್ಷದ ಬಹುಮತವನ್ನು ಸಾಬೀತುಪಡಿಸಿ, ಸರ್ಕಾರವನ್ನು ರಚಿಸಿ ಎಂದು ಕೇಳಲಾರಂಭಿಸಿತು. ಪಕ್ಷಗಳು ರಾಜಭವನದ ನೆಮ್ಮದಿಯನ್ನು ಕದಡಿದವು. ಅಬಕಾರಿ ರಿಯಲ್ ಎಸ್ಟೇಟ್ ಮಾಫಿಯಾ ಮತ್ತಿತರ ಭೂಗತ ಪ್ರಪಂಚ ತಮ್ಮತಮ್ಮ ಫಲಾನುಭವ್ಯ ಪಕ್ಷಗಳನ್ನು ಕೀಲುಗೊಂಬೆಗಳನ್ನಾಗಿ ಪರಿವರ್ತಿಸತೊಡಗಿತು. ಅಧಿಕಾರವನ್ನು ಕೈವಶಮಾಡಿಕೊಳ್ಳುವಂತೆ ಪುಸಲಾಯಿಸಲಾರಂಭಿಸಿತು. ತನ್ಮೂಲಕ ತಾನು ಸಕ್ರಿಯಗೊಂಡಿತು. ಅದರಿಂದ ರಾಜಕೀಯಪಕ್ಷಗಳ ಮನೋಭೂಮಿಕೆ ಬದಲಾಯಿತು. ನವಶಾಸಕರಿಗೆ ಆಸೆಆಮಿಷಗಳನ್ನು ತೋರಿಸತೊಡಗಿದವು. ಭಾರಿಮೊತ್ತ ನೀಡಿ ಖರೀದಿಸಲಾರಂಭಿಸಿದವು. ಕೆಲವು ಶಾಸಕರನ್ನು ಅಪಹರಿಸಿ ವೈಭವೋಪೇತ ಹೋಟಲುಗಳಲ್ಲಿ ಅಡಗಿಸಿಡಲಾರಂಭಿಸಿದವು. ಪಕ್ಷಾಂತರ ಚಟವಟಿಕೆಗಳನ್ನು ನಿರ್ಬಂಧಿಸಲು ತಮ್ಮ ಪಕ್ಷಗಳ ಶಾಸಕರನ್ನು ಮಾಫಿಯಾ ಗೂಂಡಾಗಳ ಸುಪಧರ್ಿಗೆ ಒಪ್ಪಿಸಲಾರಂಭಿಸಿದವು. ಆದರೂ ಬಹುಮತ ಸಾಬೀತು ಪಡಿಸಲು ಪಕ್ಷಗಳಿಗೆ ಸಾಧ್ಯವಾಗಲಿಲ್ಲ. ಆದರೆ..
ಉಳಿದೆಲ್ಲ ಪಕ್ಷಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಋಣಾನುಬಂಧಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ರಾಜ್ಯಾಧ್ಯಕ್ಷ ಈರ್ಮ ಪಕ್ಷದ ವರಿಷ್ಠರ ಸಂಪರ್ಕದಲ್ಲಿದ್ದರು. ರಾಜ್ಯದ ರಾಜಕೀಯ ವಿದ್ಯಾಮಾನಗಳನ್ನು ವೀಕ್ಷಕವಿವರಣಕಾರನಂತೆ ವರಿಷ್ಠರ ನಿಕಟವರ್ತಿಯಾಗಿದ್ದರು. ಈರ್ಮ ಋಣಾನುಬಂಧಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅರಣ್ಯಕ್ ಬರಾಟಿಯವರ ರಕ್ತ ಸಂಬಂಧಿ. ಅವರ ಆಹ್ವಾನವನ್ನು ಪುರಸ್ಕರಿಸಿ ಇವರು ಪಾಣಿಪತ್ ತಲುಪಿದರು. ಪಕ್ಷದ ಕೇಂದ್ರ ಕಛೇರಿಯ ಹೆಸರು ತಾಪತ್ರಯ. ಅದು ಇದ್ದದ್ದು ಗಂಡಾಂತರ ನದಿಯ ದಡದಲ್ಲಿ. ವಿಮಾನ ನಿಲ್ದಾಣದಿಂದ ಏಳೆಂಟು ಕಿಲೋಮೀಟರ್ ದೂರದಲ್ಲಿ. ಇವರು ಅಲ್ಲಿ ತಲುಪಲು ಹಿಡಿದ ಸಮಯ ಕೇವಲ ಅರ್ಧತಾಸು. ಹಿಂದಿನ ದಿವಸವೇ ಆಗಮಿಸಿದ್ದ ಜಗದುದರ ನಿಷ್ಪತ್ತಿ, ಕಾಕಬಲಿ, ಅವಿಕ್ಷಿತ್ ಒಳಗೊಂಡಂತೆ ಹಲವು ಶಾಸಕರು ಅಲ್ಲಿ ಹಾಜರಿದ್ದರು. ತಮ್ಮತಮ್ಮ ನೂರಾರು ಸಂಖ್ಯೆಯ ಅಭಿಮಾನಿಗಳ ಸಂಗಡ. ಅದೂ ಪಕ್ಷದ ನೇತಾರರಾದ ತಮಗೆ ಸುಳಿವು ನೀಡದಂತೆ! ಇವರನ್ನು ಕಂಡ ಅವರೂ, ಅವರನ್ನು ಕಂಡ ಇವರೂ ಆಶ್ಚರ್ಯಚಕಿತರಾದರು. ಪರಸ್ಪರ ಕೈಕುಲುಕಿದರು, ಸೌಜನ್ಯಯುತ ಮಾತುಗಳ ವಿನಿಮಯ ನಡೆಸಿದರು, ಮಾಧ್ಯಮಗಳ ಛಾಯಾಚಿತ್ರಗ್ರಾಹಕರ ಮಂದಹಾಸಕ್ಕೆ ಬಲಿಯಾದರು. ಋಣೇಶ್ವರಿದೇವಿಯ ದರ್ಶನ ಪಡೆಯಲೆಂದು ನದಿಯ ಕಡೆ ಹೋದರು. ದರ್ಶನ ಪಡೆದ ಬಳಿಕ ಅಲ್ಲಿಯೇ ವಿವಿಧಭಂಗಿಗಳಲ್ಲಿ ಕುಳಿತರು. ಪ್ರಧಾನವಾಗಿ ಪ್ರಾದೇಶಿಕ ಪಕ್ಷಗಳ ಅನುಚಿತ ನಡೆ ಕುರಿತು ಚರ್ಚಿಸಿದರು. ವಿರೋಧಿಗಳನ್ನು ಮನಸೇಚ್ಛೆ ಟೀಕಿಸಿದರು, ಮಿತ್ರರನ್ನು ಹೃದಯ ತುಂಬಿ ಶ್ಲಾಘಿಸಿದರು. ಬಳಿಕ ರಾಷ್ಟ್ರೀಯ ಅಧ್ಯಕ್ಷ ಬರಾಟೆಯವರೊಂದಿಗೆ ಯಾವ ಯಾವ ಮಾತುಗಳನ್ನು ಯಾವ ಯಾವ ಪ್ರಮಾಣದಲ್ಲಿ ಯಾರು ಯಾರು ಆಡಬೇಕೆಂಬುದರ ಬಗೆಗೂ ಒಮ್ಮತಕ್ಕೆ ಬಂದರು.
ಹತ್ತುಗಂಟೆಗೆ ಸರಿಯಾಗಿ ತಾಪತ್ರಯವನ್ನು ಸಮೀಪಿಸಿದರು. ತಲೆ ಎತ್ತರಿಸಿ ಕಣ್ಣರಳಿಸಿ ನೋಡಿದರು. ವಿಸ್ಮಿತರಾದರು. ಮೂರು ನೂರು ವರ್ಷಗಳ ಹಿಂದೆ ಕುಂಜರಾರಿ ಮಹರಾಜನು ಮರಣೋಪಾಸಕರಿಗೆಂದೇ ಅದನ್ನು ನಿರ್ಮಿಸಿದ್ದನು. ಬದುಕಿರಬೇಕಾದವರು ಅಲ್ಲಿ ಸತ್ತಿದ್ದರು. ಸಾಯಬೇಕಿದ್ದವರು ಬದುಕಿ ಮರಳಿದ್ದರು. ಸ್ವಾತಂತ್ರ್ಯ ಲಭಿಸುವವರೆಗೆ ಅದು ಮರಣಾಭಿಲಾಷಿಗಳ ಸ್ವರ್ಗವೆನಿಸಿತ್ತು. ಬರಾಟಿಯವರ ಪಿತಾಮಹ ರಾವಬಹದ್ದೂರ್ ಕೌಸ್ತುಂಬರ್ ಬರಾಟಿ ವಿಷಯಾಸಕ್ತ ಆಂಗ್ಲಾಧಿಕಾರಿಗಳಿಂದ ಅದನ್ನು ಕಾಣಿಕೆ ರೂಪದಲ್ಲಿ ಪಡೆದಿದ್ದರು. ಬಳಿಕ ಆ ಭವನವನ್ನು ಋಣಾನುಬಂಧಪಕ್ಷಕ್ಕೆ ಹಸ್ತಾಂತರಿಸಿ ಅಲ್ಲಿಯೇ ಕೊನೆಯುಸಿರೆಳೆದರು. ಇಂಥ ಕಾರಣಗಳಿಂದ ತಾಪತ್ರಯ ಪ್ರೇಕ್ಷಣೀಯವೂ ಹೌದು, ಪ್ರಾಯಶ್ಚಿತ್ತ ಕ್ರಿಯಾಕಲಾಪಗಳಿಗೆ ಹೇಳಿಮಾಡಿಸಿದಂಥ ಪವಿತ್ರತಾಣವೂ ಹೌದು. ಋಣೇಶ್ವರಿದೇವಿಯ ಭಕ್ತಾದಿಗಳು ಅದರತ್ತ ನೋಡಿ ನಿಡುಸುಯ್ದು ಮರಳುವುದುಂಟು. ಈ ಹಿನ್ನಲೆಯ ತಾಪತ್ರಯ ಕಟ್ಟಡ ಹಳೆಯದಿದ್ದರೂ ಬಹುವಿಶಾಲವಾಗಿತ್ತು. ಅಲ್ಪಸ್ವಲ್ಪ ಮಳೆಗೆ ಸೋರುತಿತ್ತು, ಮಳೆಗಾಲ ಬೇಸಿಗೆ ದಿವಸಗಳಲ್ಲಿ ವಿವರ್ಣಗೊಳ್ಳುತ್ತಿತ್ತು. ಆದರೂ ಪ್ರಾಚೀನ ಸೊಬಗನ್ನು ಉಳಿಸಿಕೊಂಡಿತ್ತು. ವರ್ಷವಿಡೀ ಪಕ್ಷದ ಹಿರಿಕಿರಿಯ ಕಾರ್ಯಕರ್ತರಿಂದ ತುಂಬಿ ತುಳುಕುತ್ತಿತ್ತು.
ಅಂಗ ವಂಗ ಕಳಿಂಗ ಗುರ್ಜರ ರಾಜ್ಯಗಳ ಚುನಾವಣೆ ಹತ್ತಿರವಿದ್ದುದರಿಂದ ಆಯಾ ರಾಜ್ಯಗಳ ಪಕ್ಷದ ರಾಜಕಾರಣಿಗಳು ಅಲ್ಲಿ ಕಳೆದುಕೊಂಡಿರದ ವಸ್ತುವಿನ ಹುಡುಕಾಟ ಆರಂಭಿಸಿದ್ದರು. ಉಸಿರು ಬಿಗಿಹಿಡಿದು ಕಾದ ನಂತರ ಸ್ವಯಂಸೇವಕ ಆಗಮಿಸಿ ರಾಜ್ಯದ ಗಣ್ಯರನ್ನು ಒಳಗೆ ಕರೆದೊಯ್ದನು. ಇಡೀ ಸಭಾಂಗಣ ಅಪರಕರ್ಮ ಕ್ರಿಯಾಕಲಾಪಕ್ಕೆ ಹೇಳಿ ಮಾಡಿಸಿದಂತಿತ್ತು. ಅಧ್ಯಕ್ಷ ಮಹೋದಯ್ ವಾಸ್ತುಪ್ರಕಾರ ಪೂರ್ವಾಭಿಮುಖರಾಗಿ ದಿಂಬಿಗಾತು ವಿರಾಜಮಾನರಾಗಿದ್ದರು. ಅವರು ಅದೇ ತಾನೆ ಉಪಹಾರ ಸೇವಿಸಿದ್ದರಲ್ಲದೆ ತಾಂಬೂಲವಿದ್ದ ಬೆಳ್ಳಿ ಕರಂಡಕ ಹಾಗೂ ಪಿಕದಾನಿಯನ್ನು ಎಡಬಲ ಇರಿಸಿಕೊಂಡಿದ್ದರು. ಪ್ರತ್ಯೇಕ ವಸ್ತ್ರದಿಂದ ತುಟಿ ಅಂಚುಗಳಿಂದ ಸ್ರವಿಸುತ್ತಿದ್ದ ಕೆಂಪುರಸವನ್ನು ಪ್ರತಿಕ್ಷಣ ನಿವಾರಿಸಿಕೊಳ್ಳುತ್ತಿದ್ದರು. ಒಟ್ಟಾರೆ ಹೇಳುವುದಾದರೆ ಶ್ರೀಯುತರು ಏಕಕಾಲಕ್ಕೆ ಹಲವು ರೂಪಗಳನ್ನು ಪ್ರತಿನಿಧಿಸುತ್ತಿದ್ದರು.
ಮಹಿಷ್ಮತಿರಾಜ್ಯದ ಚುನಾಯಿತ ಗಣ್ಯ ರಾಜಕಾರಣಿಗಳನ್ನು ನೋಟದಿಂದ ಸ್ವಾಗತಿಸಿದರು. ತಾಂಬೂಲ ರಸ ಇನುಕಿ ಉಡುಪು ಮಲಿನವಾದೀತೆಂಬ ಮುಂಜಾಗ್ರತೆಯಿಂದ ಶ್ರೀಯುತರು ತುಟಿ ಬಿರಿದು ನಗಲಿಲ್ಲ. ಈರ್ಮರವರ ಸೂಚನೆಯಂತೆ ಸಂಗಡಿಗರು ಶ್ರೀಯುತರ ಪಾದಗಳಿಗೆ ಬಾಗಿ ವಂದಿಸಿದರು. ತಮ್ಮ ಸೌಜನ್ಯದಿಂದ ಅಧ್ಯಕ್ಷರು ಪ್ರಸನ್ನರಾದರೆ ಎಂದು ಅವರ ಮುಖವನ್ನು ನೋಡಿದರು, ಬಳಿಕ ಕುಳಿತರು. ಶ್ರೀಯುತ ಬರಾಟಿ ಅವರಿಗೆ ಅವರಲ್ಲಿ ಯಾರೊಬ್ಬರು ಅಪರಿಚಿತರಿರಲಿಲ್ಲ. ಚುನಾವಣೆ ಪ್ರಚಾರಾರ್ಥವಾಗಿ ಮಹಿಷ್ಮತಿರಾಜ್ಯಕ್ಕೆ ಹೋಗಿದ್ದಾಗ ಅವರನ್ನು ವಿವಿಧ ಅಂತರದಿಂದ ನೋಡಿದ್ದರು. ಆದ್ದರಿಂದ ಅವರನ್ನು ಅವರೇ ಎಂದು ಇವರು, ಇವರನ್ನು ಇವರೇ ಎಂದು ಅವರು ಗರುತಿಸುವಲ್ಲಿ ವಿಫಲರಾದರು. ಈರ್ಮ ತಮ್ಮ ಸಂಗಡಿಗರನ್ನು ಇಂಥಿಂಥವರು ಎಂದು ಪರಿಚಯಿಸಿದರು.
ವಿದ್ಯುಕ್ತವಾಗಿ ಋಣೇಶ್ವರಿದೇವಿ ಪ್ರಸಾದ ವಿತರಣೆ ನಡೆಯಿತು. ಕೈಯನ್ನು ತಮ್ಮತಮ್ಮ ಕರವಸ್ತ್ರಗಳಿಂದ ಶುಚಿಗೊಳಿಸಿಕೊಂಡರು. ಅಷ್ಟರಲ್ಲಿ ಚರ್ಚೆ ಆರಂಭಿಸಿದವರು ಅರಣ್ಯಕ್ ಬರಾಟಿ. ಪಕ್ಷದ ಗೂಢಾಚಾರರು ಕಳಿಸಿದ್ದ ಮಾಹಿತಿಯನ್ನು ಸೂಚ್ಯವಾಗಿ ಪ್ರಸ್ತಾಪಿಸಿದರು. ನೇರಮಾತಿನಲ್ಲಿ ಮುಖ್ಯಮಂತ್ರಿ ಸ್ಥಾನಾಕಾಂಕ್ಷಿಗಳ ಆರ್ಥಿಕ ಸ್ಥಿತಿಗತಿ ಹೇಗಿರಬೇಕೆಂದು ತಿಳಿಸಿದರು. ಯಾವ ಯಾವ ಪಕ್ಷದ ಯಾವ ಯಾವ ಶಾಸಕರ ನಾಸಿಕಕ್ಕೆ ಎಷ್ಟೆಷ್ಟು ಪ್ರಮಾಣದ ಘೃತವನ್ನು ಲೇಪಿಸಿದರೆ ಆಗುವ ಖರ್ಚು ಬಾಬತ್ತು! ಯಾವ ಪಕ್ಷಗಳನ್ನು ತಮ್ಮ ಪಕ್ಷದ ಸಂಗಡ ಅಧಿಕಾರ ಹಂಚಿಕೊಳ್ಳುವವು, ಅಧಿಕಾರದಲ್ಲಿ ಭಾಗಿಯಾಗದೆ ಬೇಷರತ್ ಬೆಂಬಲ ಸೂಚಿಸುವ ಪಕ್ಷಗಳಿಂದ ಸಂಭವಿಸುವ ಆಪತ್ತನ್ನೂ ವಿವರಿಸಿದರು. ತ್ರಿಕಾಲಜ್ಞಾನಿಯಂತೆ ಎಲ್ಲವನ್ನೂ ವಿವರಿಸಿದರೆ ಹೇಳುವುದಕ್ಕೆ ಕೇಳುವುದಕ್ಕೆ ಅವಕಾಶ ಎಲ್ಲಿ? ಮಾತು ಅರಿಯದವರಂತೆ ಕೇಳಿಸಿಕೊಂಡರು. ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳಿಗಿರುವ ಅಧಿಕಾರ ದಾಹವನ್ನು ಸಂದರ್ಭಾನುಸಾರ ಉಪಯೋಗಿಸಿಕೊಳ್ಳುವುದು ರಾಜಕೀಯ ಚಾಣಾಕ್ಷತನ ಎಂದು ಒತ್ತಿ ಹೇಳುವುದನ್ನು ಶ್ರೀಬರಾಟಿ ಮರೆಯಲಿಲ್ಲ. ತುಸು ಹೊತ್ತು ಮೌನ ಆವರಿಸಿತು. ಬರಾಟಿ ಎಲ್ಲರ ಮುಖಗಳನ್ನು ತೀಕ್ಷ್ಣವಾಗಿ ನೋಡಿದರು. ಬಳಿಕ ತಮ್ಮ ಖಾಸಗಿ ಕೋಣೆಗೆ ಒಬ್ಬೊಬ್ಬರನ್ನು ಪ್ರತ್ಯೇಕವಾಗಿ ಬರಮಾಡಿಕೊಂಡರು, ಗೌಪ್ಯವಾಗಿ ಚರ್ಚಿಸಿದರು, ಅವರವರ ಸಿರಿತನದ ವಿಸ್ತೀರ್ಣ ಅರಿತರು. ಏಕಾಂತವಾಗಿ ಪಕ್ಷದ ಇತರೇ ವರಿಷ್ಠರೊಂದಿಗೆ ಡೊಕೊಮಾದಲ್ಲಿ ಗೌಪ್ಯ ಚಚರ್ೆ ನಡೆಸಿದರು. ನಂತರ ಕೋಣೆಯಿಂದ ಬಂದು ಕಾಣಿಸಿಕೊಂಡರು. ಅವರ ಗಾತ್ರಕಛೇರಿ ಸದೃಶ ಮುಖದಲ್ಲಿ ಪ್ರಸನ್ನತೆ ಇತ್ತು. ಅದರಿಂದ ಆಕಾಂಕ್ಷಿಗಳಲ್ಲಿ ಸಂತೋಷ ಕುತೂಹಲ ಸಮಪ್ರಮಾಣದಲ್ಲಿ ಕಾಣಿಸಿಕೊಂಡವು. ಐದು ನಿಮಿಷಗಳ ನಂತರ ಶ್ರೀಯುತ ಬರಾಟಿ ಮಹೋದಯ್..
ಈಗ ನಮ್ಮ ಪಕ್ಷದ ವರಿಷ್ಠರು ಒಂದು ನಿರ್ಧಾರಕ್ಕೆ ಬಂದಿರುವರು. ನಮ್ಮ ಪಕ್ಷಕ್ಕೆ ಚಾಣಾಕ್ಷರ ಬುದ್ದಿವಂತರ ಅಗತ್ಯವಿಲ್ಲವೆಂದು ಹೇಳಲಾರೆ. ಅಂಥವರು ಪಕ್ಷದ ಸಂಘಟನೆಗೆ ಅರ್ಹರು, ಆದರೆ ಮುಖ್ಯಮಂತ್ರಿಸ್ಥಾನಕ್ಕಲ್ಲ. ಮಹಿಷ್ಮತಿರಾಜ್ಯವು ಆಧ್ಯಾತ್ಮದ ನೆಲವೀಡು. ಅಲ್ಲಿನ ಪ್ರಜಾನಿಕ ಭೂತಕಾಲವನ್ನು ಆರಾಧಿಸುತ್ತಿರುವುದು, ಆದರೆ ವರ್ತಮಾನವನ್ನಲ್ಲ. ಅಂಥ ರಾಜ್ಯಕ್ಕೆ ಮುಗ್ದರೂ ಅಮಾಯಕರೂ ಆದಂಥ ಮುಖ್ಯಮಂತ್ರಿಯ ಅಗತ್ಯವಿರುವುದು. ಪ್ರಸ್ತಾಪಿತ ಸುಗುಣ ಸಂಪನ್ನರು ಸನ್ಮಾನ್ಯ ಜಗದುದರ ನಿಷ್ಪತ್ತಿಯವರು ಎಂದು ನಮ್ಮ ಪಕ್ಷ ತೀರ್ಮಾನಿಸಿರುವುದು. ಇದನ್ನು ಪಕ್ಷದ ಎಲ್ಲಾ ಕಾರ್ಯಕರ್ತರು ಗೌರವಿಸಬೇಕು. ಅಧಿಕಾರಾರೂಢರಾದ ಬಳಿಕ ನೀವೆಲ್ಲರೂ ಶ್ರೀಯುತರ ಆಡಳಿತಕ್ಕೆ ಸಹಕಾರ ನೀಡಬೇಕು. ಅಸಹಕಾರಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ವರಿಷ್ಠರು ಗುರಿಪಡಿಸುವರು ಎನ್ನುವುದನ್ನು ಯಾರು ಮರೆಯಬಾರದು. ಏಕೆಂದರೆ ನಮ್ಮದು ಶಿಸ್ತಿನ ಸಿಪಾಯಿಗಳ ಪಕ್ಷ. ವರ್ತಮಾನದ ಸಿಂಹಾಸನದ ಮೇಲೆ ಭೂತಕಾಲವನ್ನು ಪ್ರತಿಷ್ಠಾಪಿಸುವುದು ನಮ್ಮ ಧ್ಯೇಯ ಎಂದು ಸನಾತನಿಯಂತೆ ವಿವರಿಸಿದರು.
ಶ್ರೀಯುತ ಅರಣ್ಯಕ್ ಬರಾಟಿ ಎದ್ದು ನಿಂತರು, ತಾವು ಅಜಾನುಬಾಹು ಎನ್ನುವುದನ್ನು ಸಾಬೀತುಪಡಿಸಿದರು. ತಮ್ಮ ಕೊರಳಲ್ಲಿದ್ದ ನಾನಾವಿಧದ ಮಾಲೆಗಳನ್ನು ಪ್ರದಶರ್ಿಸಿ ತಾವು ಅಪ್ಪಟ ಸನಾತನಿಗಳೆಂದು ಮನವರಿಕೆ ಮಾಡಿಕೊಟ್ಟರು. ಅದೇ ಸಮಯಕ್ಕೆ ಸರಿಯಾಗಿ ಎರಡು ಜನ ವರಿಷ್ಠರು ಸ್ರಕ್ಚಂದನ ಧರಿಸಿ ಆಗಮಿಸಿದರು. ಈರ್ಮ ಮತ್ತಿತರ ಸಂಗಡಿಗರು ಪರಸ್ಪರ ಮುಖ ನೋಡಿಕೊಂಡರು. ಅವರು ಬಿಟ್ಟ ನಿಟ್ಟುಸಿರನ್ನು ಗ್ರಹಿಸಿದ ಬರಾಟಿಜೀ ಹ್ಹಾಂ ಇನ್ನೊಂದು ಸಿಹಿ ಸುದ್ದಿ, ಅದೆಂದರೆ ಶ್ರೀ ನಿಷ್ಪತ್ತಿಯವರ ಅಧಿಕಾರದ ಅವಧಿ ಕೇವಲ ಎರಡುವರೆ ವರ್ಷ ಮಾತ್ರ. ಮುಂದಿನ ಅವಧಿಗೆ ನಿಮ್ಮಲ್ಲಿ ಯಾರಾದರೂ ಮುಖ್ಯಮಂತ್ರಿಸ್ಥಾನ ಅಲಂಕರಿಸಬಹುದು ಎಂಬ ಭರವಸೆ ಮಾತು ಹೇಳಿ ನಿರಾಸೆವಂದಿಗರ ಅತೃಪ್ತಿಯನ್ನು ತಾತ್ಕಾಲಿಕವಾಗಿ ಶಮನಗೊಳಿಸಿದರು. ಕರತಾಡನದೊಂದಿಗೆ ಅಪಾದಮಸ್ತಕ ಕಂಪಿಸುತ್ತಿದ್ದ ಶ್ರೀನಿಷ್ಪತ್ತಿಯವರನ್ನು ಸನಿಹಕ್ಕೆ ಬರಮಾಡಿಕೊಂಡರು. ಕೈಕುಲುಕಿದರು, ಆಲಂಗಿಸಿಕೊಂಡರು. ಒಂದೆರಡು ತುಲಸಿ ಮಿಶ್ರಿತ ರುದ್ರಾಕ್ಷಿ ಮಾಲೆಗಳನ್ನು ಅವರ ಕೊರಳಿಗೆ ಹಾಕಿದರು, ಶ್ರೀಕೃಷ್ಣಚರಿತಾಮೃತವನ್ನು ತುಲಸಿದಾಸ ವಿರಚಿತ ರಾಮಾಯಣದ ಪ್ರತಿಯನ್ನು, ತಮ್ಮ ಪಕ್ಷದ ಧ್ಯೇಯೋದ್ದೇಶಗಳು ಹಾಗೂ ಮಾರ್ಗದರ್ಶಕ ಸೂತ್ರಗಳಿದ್ದ ಕೇಸರಿವರ್ಣದ ಹೆಬ್ಬೊತ್ತಿಗೆಯನ್ನು ಪಾರಿತೋಷಕ ರೂಪದಲ್ಲಿ ಹಸ್ತಾಂತರಿಸಿದರು. ಬಳಿಕ ಹೇಳುವುದನ್ನು ಹೇಳಿದರು, ಕೇಳುವುದನ್ನು ಕೇಳಿದರು.
***
ಮಹಿಷ್ಮತಿರಾಜ್ಯದ ಇಪ್ಪತ್ತೆರಡನೆ ಮುಖ್ಯಮಂತ್ರಿ ಜಗದುದರ ನಿಷ್ಪತ್ತಿ?
ರಾಜ್ಯದ ದಿನಪತ್ರಿಕೆಗಳು ಮುಖಪುಟದಲ್ಲೂ, ದೇಶದ ದೈನಿಕಗಳು ಒಳಪುಟಗಳಲ್ಲೂ ಪ್ರಕಟಿಸಿದವು. ಪತ್ರಕರ್ತರು ಋಣಾನುಬಂಧಪಕ್ಷದ ಅಧ್ಯಕ್ಷರನ್ನು ಕೇಳಿದ ಪ್ರಶ್ನೆ ಮಹಾಭಾರತದಲ್ಲಿ ಧರ್ಮರಾಯನಿಗೆ ಯಕ್ಷ ಕೇಳಿದ ಪ್ರಶ್ನೆಗೆ ಸಮನಾಗಿತ್ತು. ಈರ್ಮ ಇದು ವರಿಷ್ಠರ ನಿರ್ಧಾರ! ಶಾಸಕಾಂಗ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದರು ಬಿಡುವಿಲ್ಲದ ಕಾರಣಕ್ಕೆ. ಕುಂಕುಮ! ಇದು ಪಕ್ಷದ ಕಛೇರಿ. ಕಪಿತ್ಥನಗರದ ಅನಾಕುಳ ರಸ್ತೆಯ ಕೊನೆ ಅಂಚಿನಲ್ಲಿರುವುದು. ಅಲ್ಲಿ ಪಕ್ಚದ ಕಾರ್ಯಕರ್ತರ ಚನಾಯಿತ ಪ್ರತಿನಿಧಿಗಳ ಆಗಮನ ನಿರ್ಗಮನ ಹೆಚ್ಚಿತು. ಕಡವಳ! ಇದು ಸಂಭವನೀಯ ಮುಖ್ಯಮಂತ್ರಿಗಳ ಸ್ವಯಾರ್ಜಿತ ಆಸ್ತಿಗಳಲ್ಲಿ ಒಂದು ಮಾತ್ರ. ವಾಸ್ತುಪ್ರಕಾರ ಸಿಂಹಾಯ! ಪೂರ್ವಾಭಿಮುಖವಿರುವ ನಿವಾಸದ ದ್ವಾರ ಶ್ರೀಗಂಧ ಸೇರಿದಂತೆ ಪಂಚಕಾಷ್ಠಗಳಿಂದ ನಿರ್ಮಿಸಲ್ಪಟ್ಟಿರುವುದು. ಅದರ ಇಂಚಂಚಲ್ಲಿ ಕಾಷ್ಠಶಿಲ್ಪಿಯ ಕೌಶಲ್ಯ ಮೇಳೈಸಿರುವುದು. ಅದರ ಮೇಲ್ಭಾಗದಲ್ಲಿ ತರಾವರಿ ಅಂತ್ರತಂತ್ರಗಳಿರುವವು. ಅವೆಲ್ಲ ಸಾಧುಸಂತರ ಹಾಗೂ ವಾಮಾಚಾರಿಗಳಿಂದ ಅಭಿಮಂತ್ರಿಸಲ್ಪಟ್ಟಿರುವವು. ಒಳಪ್ರವೇಶಿಸುವವರಲ್ಲಿರಬಹುದಾದ ತಾಮಸತ್ವ ಸಾತ್ವಿಕತ್ವವಾಗಿ ಬದಲಾಗಲಿ ಎಂಬ ದೂರದೃಷ್ಟಿಯ ಸಂಕೇತಗಳು ಅವು.
ವಾರ್ತೆ ತಿಳಿದು ಕಡವಳದಲ್ಲಿನ ಅಧಿಕೃತ ಸದಸ್ಯರು ಸಂಭ್ರಮಿಸಿದರು. ವಿಮಾನದಿಂದ ಇಳಿದ ಶ್ರೀಯುತರನ್ನು ನೀವಳಿಸಿದರು. ಹೂವಿನ ಮಾಲೆಗಳಿಂದ ಅಲಂಕರಿಸಿ ಸ್ವಾಗತಿಸಿದರು. ವಿಶೇಷ ವಾಹನದಲ್ಲಿ ಕಡವಳಕ್ಕೆ ಕರೆದೊಯ್ದರು. ಅವರ ದೇಹದ ಮೇಲ್ಮೈಲಕ್ಷಣವನ್ನು ಅಮೂಲಾಗ್ರವಾಗಿ ಬದಲಾಯಿಸಲು ಕಂಕಣಬದ್ದರಾದರು. ಸ್ಥಳೀಯ ಜ್ಯೋತಿಷಿಗಳ ವಾಮಾಚಾರಿಗಳ ನೆರವಿನಿಂದ ಅವರಲ್ಲಿನ ಹಿಂಜರಿಕೆ ಮಜುಗರ ಮತ್ತಿತರ ಭಯಾವಹ ಮೂಲಭೂತ ಗುಣಗಳನ್ನು ಮಾರ್ಪಡಿಸುವ ಸನ್ನಾಹ ಆರಂಭಿಸಿದರು. ಕಡವಳದ ನಿವಾಸಿಗಳು ಸಂಬಂಧಿಗಳು ಮೂಲತಃ ಅಪರ ಕುಬೇರರು. ಸ್ವಯಾರ್ಜಿತ ಪಿತ್ರಾರ್ಜಿತ ಸಂಪತ್ತಿನ ಮೌಲ್ಯ ನೂರಾರು ಕೋಟಿ! ಶ್ರೀಯುತರ ಗಂಡುಸಂತಾನ ಅದನ್ನು ದ್ವಿಗುಣಗೊಳಿಸಿಕೊಳ್ಳುವಂಥ, ಶಾಶ್ವತೀಕರಿಸುವಂಥ ಯೋಚನೆಯಲ್ಲಿ ಮೈಮರೆತರು. ಅದಕ್ಕೆಂದು ಅವರು ನಗರದಲ್ಲಿನ ಯಾವ ಯಾವ ಚಾರ್ಟರ್ಡ್ ಅಕೌಂಟೆಂಟುಗಳನ್ನು ಸಂಪರ್ಕಿಸುವುದೆಂದು ಚಿಂತಿಸಲಾರಂಭಿಸಿದರು. ಇಂಥ ತಾಮಸ ಹಾಗೂ ಸಾತ್ವಿಕ ಚಟವಟಿಕೆಗಳಿಂದ ಕಡವಳ ಆರ್ಥಿಕ ಪ್ರಭಾವಳಿಂದ ಶೋಭಿಸಲಾರಂಭಿಸಿತು. ಇನ್ನು ಸ್ನೇಹಿತರು ಆತ್ಮೀಯರಾಗಲು ಶತ್ರುಗಳು ಮಿತ್ರರಾಗಲು ದೂರದ ನೆಂಟರು ಹತ್ತಿರದ ನೆಂಟರಾಗಲು ತಮ್ಮತಮ್ಮ ಕಾರ್ಯವ್ಯಾಪ್ತಿಯಲ್ಲಿ ತಾಲೀಮು ಆರಂಭಿಸಿದರು.
ಅದೇ ದಿವಸ ಪಾಣಿಪತ್ನಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಪಕ್ಷದ ವರಿಷ್ಠರ ಪ್ರತಿನಿಧಿಗಳೆಂದರೆ ಶ್ರೀಯುತ ದರ್ಭಶಯನ್ವ್ಯೂಹ ಮತ್ತು ಏಕಚಕ್ರಿಕಾಹು! ಅವರೀರ್ವರು ಸಮ್ಮೋಹನಶಾಸ್ತ್ರ, ಮನಸ್ಶಾಸ್ತ್ರ, ಚಾಣಕ್ಯವಿರಚಿತ ಅರ್ಥಶಾಸ್ತ್ರ, ಅಪರಕರ್ಮಶಾಸ್ತ್ರ ಸೇರಿದಂತೆ ಹತ್ತು ಹಲವು ಶಾಸ್ತ್ರಗಳನ್ನು ಜೀರ್ಣಿಸಿಕೊಂಡಿದ್ದರು. ಅವರಿಬ್ಬರು ಅಜಾನುಬಾಹುಗಳಿದ್ದರು, ಅವರ ಶಾರೀರ ಗಾತ್ರಕಛೇರಿಗೆ ಹೇಳಿ ಮಾಡಿಸಿದಂತಿತ್ತು.
ಈರ್ಮ ಮತ್ತವರ ಸಂಗಡಿಗರು ಅವರನ್ನು ಜ್ಯೋತಿಷಿಗಳ ಮಂತ್ರೋಚ್ಚಾರಣೆಗಳ ನೆರವಿನಿಂದ ಕುಂಕುಮಕ್ಕೆ ಬರಮಾಡಿಕೊಂಡರು. ಅವರೊಂದಿಗಿದ್ದ ಉತ್ತರಾತ್ಯ ಮೂಲದ ವಾಸ್ತುತಜ್ಞರು ಹಾಗೂ ಜ್ಯೋತಿಷಿಗಳು ಮಂತ್ರತಂತ್ರಗಳಿಂದ ಕುಂಕುಮದ ವಾಸ್ತು ಸರಿಪಡಿಸಿದರು ರಾಜಕೀಯ ಉದ್ದೇಶಗಳಿಗೆ ಅನುಸಾರವಾಗಿ. ಆ ಕ್ಷಣದಿಂದ ರಾಜಕೀಯ ಚಟವಟಿಕೆಗಳು ಹೊಸಸ್ವರೂಪ ಪಡೆಯತೊಡಗಿದವು. ವ್ಯೂಹ, ಸಾಹುರವರ ಭೌತಿಕ ಲಕ್ಷಣಗಳು ಸನಾತನತೆಗೆ ಪೂರಕವಾಗಿದ್ದವು. ಎಂಥವರನ್ನು ಪರವಶಗೊಳಿಸುವ ಚಾಕಚಕ್ಯತೆ ಅವರಲ್ಲಿ ರಕ್ತಗತವಾಗಿತ್ತು. ಮುಗುಳ್ನಗೆಯನ್ನು ಶಸ್ತ್ರಾಸ್ತ್ರಗಳನ್ನಾಗಿ ಪರಿವರ್ತಿಸುವ ಅಭಿಜಾತ ಕಲೆಯಲ್ಲಿ ಅವರು ನಿಷ್ಣಾತರಿದ್ದರು. ತಮ್ಮಲ್ಲಿದ್ದ ಹತ್ತಾರು ಮೊಬೈಲುಗಳ ನೆರವಿನಿಂದ ದೇಶದ ಹತ್ತಾರು ದಿಕ್ಕುಗಳನ್ನು ಬೆಸೆಯಲಾರಂಭಿಸಿದರು. ಸಂಭಾಷಣೆಯಲ್ಲಿ ಸಾಂದರ್ಭಿಕವಾಗಿ ವೇದೋಪನಿಷದ್ ಪುರಾಣಗಳಲ್ಲಿನ ಸಂಸ್ಕೃತ ಶ್ಲೋಕಗಳನ್ನು ಬಳಸಿ ಕೇಳುಗರನ್ನು ಮಂತ್ರಮುಗ್ದರನ್ನಾಗಿಸತೊಡಗಿದರು. ಕುಂಕುಮ ಸಭಾಂಗಣದಲ್ಲಿ ಚುನಾಯಿತ, ಪರಾಜಿತ ಅಭ್ಯರ್ಥಿಗಳ, ಹಾಗೂ ಪಕ್ಷದ ನಿಷ್ಠಾವಂಥ ಕಾರ್ಯಕರ್ತರ ಸಂಗಡ ಸಮಾಲೋಚಿಸತ್ತಿದ್ದರು. ಅದಕ್ಕೂ ಮೊದಲು ಅವರೆಲ್ಲರಿಂದ ಕಸರತ್ತು ಯೋಗಾಸನ ಪ್ರಾಣಾಯಾಮ ಮತ್ತಿತರ ಅಲೌಕಿಕ ಕಸರತ್ತುಗಳನ್ನು ಮಾಡಿಸಿದರು. ಧ್ಯಾನಕ್ಕೆ ಅಣಿಯಾದರೆನ್ನುವಷ್ಟರಲ್ಲಿ!
ಘನವೆತ್ತರನ್ನು ಜ್ಞಾಪಿಸಿಕೊಂಡರು. ರಾಜ್ಯಪಾಲರನ್ನು ನೆನಪಿಸಿಕೊಂಡರು. ಸನ್ಮಾನ್ಯ ಗುಣಧಾಮ ಕಾಲ್ಗೋದ್ ಋಣಾನುಬಂಧಪಕ್ಷದ ದ್ರುವತಾರೆ ಎಂದೇ ಹೆಸರಾಗಿದ್ದರು. ಸನಾತನ ಧರ್ಮದ ಉಗ್ರಪ್ರತಿಪಾದಕರು. ಅಶ್ವವನ್ನು ಶ್ಯಾಮಲ ವರ್ಣದ ಶ್ವಾನವನ್ನು ಶ್ವೇತವರ್ಣದ ಶುನಕವನ್ನಾಗಿಯೂ, ಶ್ವೇತವರ್ಣದ ಶುನಕವನ್ನು ಶ್ಯಾಮಲವರ್ಣದ ಶುನಕವನ್ನಾಗಿಯೂ ಪರಿವರ್ತಿಸಬಲ್ಲ ಚಾಣಾಕ್ಷರು. ಪಕ್ಷದ ಅಧಿಕಾರ ಗ್ರಹಣಕ್ಕೆ ಶ್ರೀಯುತರ ಸಹಕಾರ ಸಲಹೆ ಮಾರ್ಗದರ್ಶನ ಅತ್ಯಮೂಲ್ಯ. ಅರಣ್ಯಕ್ ಬರಾಟಿ ಮಹೋದಯ್ ಅವರ ಸಂಗಡ ಉಪಯುಕ್ತ ಚರ್ಚೆ ನಡೆಸಿರಲೂಬಹುದು. ಅವರು ಈಗಾಗಲೆ ಪ್ರಾದೇಶಿಕ ಪಕ್ಷಗಳ ಮುಖಂಡರೊಂದಿಗೆ ಒಂದು ಸುತ್ತು ಮಾತುಕತೆ ನಡೆಸಿ ಅವರಲ್ಲಿ ಭಯ ಹುಟ್ಟಿಸುವಲ್ಲಿ ಯಶಸ್ವಿಯಾಗಿರಲೂಬಹುದು. ಶ್ರೀಯುತರ ಅಜಾನುಬಾಹುವ್ಯಕ್ತಿತ್ವ ಹೀಗೆ ಇರಬಹುದೆಂದು ಊಹಿಸಿಕೊಂಡರು. ಅವರೆಲ್ಲ ಧ್ಯಾನಸ್ಥರಾಗಿದ್ದ ಹೊತ್ತಿನಲ್ಲಿ ಹೊರಟರು. ರಾಜಭವನ ತಲುಪಿದರು. ಬ್ಯುಜಿ ಇದ್ದರೂ ಏಣಧರ್ ಸುತಲ್ ಆಗಮಿಸಿ ಸ್ವಾಗತಿಸಿದರು. ಉತ್ತರಾತ್ಯದ ರಾಜಕೀಯ ವಿದ್ಯಮಾನಗಳು ಕುರಿತಂತೆ ಮಾತಾಡುತ್ತ ರಾಜಭವನವನ್ನು ಪ್ರವೇಶಿಸಿದರು. ತಮ್ಮ ಕಡೆಯವರು, ತಮ್ಮ ಹಿತೋಭಿಲಾಷಿಗಳು ಎಂದ ಮೇಲೆ!
ಘನವೆತ್ತ ಗುಣಧಾಮ ಕಲ್ಗೋದ್ ಜೊತೆಗೂಡಿ ಉಪಹಾರ ಸೇವಿಸಿದರು. ಶ್ರೀಮತಿ ದಾಂತೇದೇವಿ ಸೆರಗಿನಲ್ಲಿ ಮುಂದಲೆ ಮಾರುಚುತ್ತ ಆಗಮಿಸಿ ಕುಶಲ ಸಂಭಾಷಣೆ ನಡೆಸಿದರು. ದಾಂತೇವಾಡದಲ್ಲಿನ ಸಾಮಾಜಿಕ ಪರಿಸ್ಥಿತಿ ವಿಚಾರಿಸಿದರು. ಅಲ್ಲಿನ ನಕ್ಸಲೈಟುಗಳ ಉಪಟಳ ನಿವಾರಿಸಲು ಸರ್ಕಾರ ಕಠಿಣಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು. ಅದು ತಮ್ಮ ತವರು ಎಂಬ ಕಾರಣದಿಂದ. ಕೆಲವು ವರ್ಷಗಳ ಹಿಂದೆ ಅಲ್ಲಿಗೆ ಹೋಗಿದ್ದ ತಮ್ಮನ್ನು ಅಪಹರಿಸುವ ಸಂಚು ನಡೆದಿತ್ತು ಎಂಬ ಕಾರಣದಿಂದ. ಅಲ್ಲಿನ ಕಾನೂನು ಭಂಜಕರನ್ನು ಕೊಲೆಗೈದು ಪುಣ್ಯಕ್ಕೆ ಭಾಜನರಾಗಬೇಕೆಂದು ಖತಿಯಿಂದ ಪ್ರತಿಕ್ರಿಯಿಸಿದರು. ಪೋಲಿಸ್ ಭದ್ರತೆಯಲ್ಲಿ ತಮ್ಮನ್ನಲ್ಲಿಗೆ ಎಂದು ಕರೆದೊಯ್ಯುವಿರೋ ಎಂದು ಘನವೆತ್ತರಿಗೆ ಕೇಳಿಸುವಂತೆ ಹೇಳಿದರು. ಇನ್ನೂ ಯಾವ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದರೋ! ಅಷ್ಟರಲ್ಲಿ..
ಘನವೆತ್ತರು ಮಹಿಷ್ಮತಿರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಸೂಕ್ತ ಮಾತುಗಳಲ್ಲಿ ವಿವರಿಸಿದರು. ಹಿಂದಿನ ದಿವಸ ಪ್ರಾದೇಶಿಕ ಪಕ್ಷಗಳ ಮುಖಂಡರನೂ, ಆಯಾ ಪಕ್ಷಗಳ ಚುನಾಯಿತ ಶಾಸಕರನ್ನೂ ರಾಜಭವನಕ್ಕೆ ಬರಮಾಡಿಕೊಂಡು ಪಳಗಿಸಿರುವುದಾಗಿ ಹೇಳಿದರು. ಪುನಃ ತಾವು ಹೀಗೆಂದು ನುಡಿದರು!
ವ್ಯೂಹ ಕಾಹುರವರೆ, ಮಹಿಷ್ಮತಿರಾಜ್ಯದ ರಾಜಕಾರಣಿಗಳ ದುರಾಸೆ ಹೇಳತೀರದು, ಆದರೆ ಅಲ್ಪ ತೃಪ್ತರು, ಉತ್ತರಾತ್ಯದವರಾದ ನಾವು ಇಲ್ಲಿನವರನ್ನು ಸುಲಭ ರೀತಿಯಲ್ಲಿ ಮೋಸ ಮಾಡಬಹುದು. ಮಹಾಚಾಣಾಕ್ಷರೂ ಬುದ್ದಿವಂತರೂ ಆದ ನಿಮಗೆ ಈಗಾಗಲೆ ನಮ್ಮ ಮಾತಿನ ಮರ್ಮ ಅರ್ಥಆಗಿರಬಹುದೆಂದು ಭಾವಿಸುವೆ. ಸಜ್ಜನಿಕೆಯುಳ್ಳ ಜಗದುದರ ನಿಷ್ಪತ್ತಿಯವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಒಳ್ಳೆಯ ನಿರ್ಧಾರ. ಸನ್ಮಿತ್ರರಾದ ಅರಣ್ಯಕ್ ಬರಾಟಿ ಅವರಿಗೆ ಅಭಿನಂದನೆ ತಿಳಿಸಿ ಸಂದೇಶ ಕಳಿಸಿರುವೆ. ನಮಗೆ ಬಂದ ಮಾಹಿತಿ ಪ್ರಕಾರ ನಿಷ್ಪತ್ತಿ ಅಗರ್ಭ ಶ್ರೀಮಂತರು, ಅಲ್ಲದೆ ಅಮಾಯಕರು. ವರಿಷ್ಠರು ಅವರನ್ನು ಸದುಪಯೋಗ ಪಡಿಸಿಕೊಳ್ಳಬಹುದು, ಎಲ್ಲಾ ಅರ್ಥದಲ್ಲಿ
ನಮ್ಮ ಪಕ್ಷದ ವರ್ಚಸ್ಸು ಅವಲಂಭಿಸಿರುವುದು ಇಂಥವರನ್ನೆ ಎಂದರು ವ್ಯೂಹ.
ನಮ್ಮ ದಾರಿಯನ್ನು ಸುಗಮಗೊಳಿಸಿರುವ ನಿಮಗೆ ಋಣಾನುಬಂಧ ಪಕ್ಷ ಚಿರಋಣಿಯಾಗಿದೆ ಘನವೆತ್ತರೆ, ಆಗಾಗ್ಗೆ ಸಂಭವನೀಯ ಮುಖ್ಯಮಂತ್ರಿಗಳ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿರಿ ಎಂದರು ಕಾಹು.
ಅಲ್ಲಿಂದ ಅವರು!
**
ಐಸಿರಿ ಪಟ್ಟಣದ ನ್ಯಾಯಾಲಯ ಹೊರಡಿಸಿದ ದೈಹಿಕ ವಾರಂಟ್ ಸಂಚಲನ ಸೃಷ್ಠಿಸಿತು. ಮಿಡುಕುನಲ್ಲಿ ನಡೆದಿದ್ದ ದೊಂಬೆ ಸುಲಿಗೆ ಕೊಲೆಗಳಿಗೆ ಸಂಬಂಧಿಸಿದ್ದು. ಖಟ್ಲೆಯನ್ನು ಗಂಭೀರವಾಗಿ ಪರಿಗಣಿಸಿತ್ತು. ಉಪಸರ್ಜಪಕ್ಷದ ಸಂಸ್ಥಾಪಕ ಹಾಗೂ ವಸೂಲು ಹೆಸರಿನ ಟ್ಯಾಬ್ಲಾಯ್ಡ್ ಪತ್ರಿಕೆಯ ಸಂಪಾದಕ ಮತ್ತು ಮಹಿಷ್ಮತಿರಾಜ್ಯ ಕಲ್ಯಾಣ ವೇದಿಕೆ ಅಧ್ಯಕ್ಷರಾದ ದುಮಂಗಲ ಹಾಗೂ ಆತನ ಕಾರ್ಯಕರ್ತರು ಅದರಲ್ಲಿ ನೇರವಾಗಿ ಭಾಗವಹಿಸಿದ್ದರು. ಮಿಡುಕುನಗರದ ಡಿವೈಎಸ್ಪಿ ಪ್ರಲಾಪ್ ಬೆನ್ನೀರೆ ಎಫ್ಐಅರ್ ದಾಖಲಿಸಿದ್ದರು. ವಿಚಾರಣೆಯು ಪ್ರಾಥಮಿಕಹಂತದಲ್ಲಿದ್ದಾಗ ಅವರು ಹರಗೋಲು ಜಿಲ್ಲೆಯ ತಾಲ್ಲೂಕು ಕೇಂದ್ರ ಸಲುವಳಿಗೆ ವರ್ಗವಾಗಿದ್ದರು. ನಂತರ ಅಧಿಕಾರ ವಹಿಸಿಕೊಂಡ ಪೋಲಿಸ್ ಅಧಿಕಾರಿಗಳು ಸ್ಥಳೀಯ ರಾಜಕಾರಣಿಗಳ ಒತ್ತಡದಿಂದಾಗಿ ಮಿಡುಕು ಘಟನೆಯನ್ನು ಅಲಕ್ಷಿಸಿದ್ದರು. ಆದರೆ ಸಾಮಾಜಿಕ ಎಚ್ಚರ ಸಂಘಟನೆಯ ಕಾರ್ಯಕರ್ತರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದನ್ನು ಐಸಿರಿಪಟ್ಟಣದ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. ಪೋಲಿಸ್ ಇಲಾಖೆಯ ಶ್ರವಣೇಂದ್ರಿಯ ಹಿಂಡಿ ಎಚ್ಚರಿಸಿತು. ಅದರ ಪರಿಣಾಮವಾಗಿ ಮಕವೇಯ ಕೆಲವು ಸದಸ್ಯರು ಬಂಧನಕ್ಕೊಳಗಾದರು. ಆದರೆ ಅಧ್ಯಕ್ಷ ಸಮನ್ಸುಗಳನ್ನು ತಿರಸ್ಕರಿಸಿ ನ್ಯಾಯಾಲಯದ ಅವಕೃಪೆಗೆ ತುತ್ತಾದ. ಈ ವರ್ತನೆಯನ್ನು ನ್ಯಾಯಾಂಗ ನಿಂದನೆ ಎಂದು ನ್ಯಾಯಾಲಯ ತೀರ್ಮಾನಿಸಿತು. ನ್ಯಾಯಾಧೀಶರು ಬಾಡಿ ವಾರಂಟ್ ಹೊರಡಿಸಿದರು. ಅವನನ್ನು ಹಾಜರು ಪಡಿಸದಿದ್ದಲ್ಲಿ ಪೋಲಿಸ್ ಅಧಿಕಾರಿಗಳ ಮೇಲೆ ಸ್ವಇಚ್ಚೆಯಿಂದ ಕೇಸ್ ದಾಖಲಿಸಿ ವಿಚಾರಣೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಅದರಿಂದ ಅವನನ್ನು ಬಂಧಿಸುವುದು ಪೋಲಿಸ್ ಇಲಾಖೆಗೆ ಅನಿವಾರ್ಯವಾಯಿತು. ವಿಷಯ ತಿಳಿದ ದುಮಂಗಲ ಹಿಂದಿನ ದಿವಸದಿಂದ ಭೂಗತನಾದ. ತೆರೆಮರೆಯಲ್ಲಿದ್ದು ಉಪಸರ್ಜಪಕ್ಷದ ಚುನಾಯಿತ ಶಾಸಕರ ತಲೆಯ ಶಿಖೆಯನ್ನು ತನ್ನ ಕೈಯಲ್ಲಿ ಭದ್ರವಾಗಿ ಹಿಡಿದುಕೊಂಡ. ಮುಖ್ಯವಾಗಿ ಶಾಸಕ ಛಲದಂಕ ಕಿರುಕುಳ್ರನ್ನುದ್ದೇಶಿಸಿ ನೀನು ಉಪಮುಖ್ಯಮಂತ್ರಿಯಾಗಲೇಬೇಕು. ಅದು ಲಭಿಸದಿದ್ದರೆ ಗೃಹಖಾತೆಯನ್ನು ಕಿತ್ತುಕೊಳ್ಳಬೇಕು. ಗೃಹಮಂತ್ರಿಯಾಗಿ ನಾನು ಸೂಚಿಸಿದ ಪೋಲಿಸ್ ಅಧಿಕಾರಿಗಳನ್ನು ವರ್ಗಮಾಡಿಸಬೇಕು. ನನ್ನ ಮೇಲಿರುವ ಖಟ್ಲೆಗಳನ್ನು ನಿಷ್ಕ್ರಿಯೆಗೊಳಿಸಬೇಕು ಎಂದು ಷರತ್ತುಗಳನ್ನು ವಿಧಿಸಿದ. ಆತನ ಸಂವಿಧಾನದತ್ತ ಸ್ವಾತಂತ್ರ್ಯ ನಿರ್ಬಂಧಿಸಿದ. ಅದರಿಂದ.
ಆ ಕ್ಷಣದಿಂದ ಕಿರುಕುಳ್ ಉಭಯಸಂಕಟಕ್ಕೆ ಸಿಲುಕಿದರು. ತಮ್ಮ ಪಕ್ಷದ ಚುನಾಯಿತ ಶಾಸಕರ ಸಂಗಡ ಕುಂಕುಮದಲ್ಲಿ ಹಾಜರಾದರು. ತಮಗೆ ತಮ್ಮ ಪಕ್ಷದ ಶಾಸಕರಿಗೆ ಇಂಥಿಂಥ ಖಾತೆಗಳು ಬೇಕೆಂದು ಪಟ್ಟು ಹಿಡಿದರು. ಜ್ಞಾನಕಾರಣಪಕ್ಷದ ಏಕೈಕ ಶಾಸಕ ಶ್ರೀ ಉಪದ್ರವಾನಂದಸ್ವಾಮೀಜಿಯವರು ಮಾತ್ರ ಬೇಷರತ್ ಬೆಂಬಲ ಪ್ರಕಟಿಸಿದರು. ಆದರೆ ಇಷುಧಿಪಕ್ಷದ ಉನ್ನಾದ ಕುತ್ಕೀಲ್, ವಾತಾಶನಪಕ್ಷದ ಅಂಬರಥ್ ಶುಲ್ವ ಹಣಕಾಸು ಸಣ್ಣನೀರಾವರಿ ಭಾರೀ ಕೈಗಾರಿಕೆ ಗೃಹಖಾತೆಗಳು ಬೇಕೆಂದು ಪಟ್ಟು ಹಿಡಿದರು. ಋಣಾನಂದಪಕ್ಷದಿಂದ ಅತ್ಯಧಿಕ ಸಂಖ್ಯೆಯಲ್ಲಿ ಆರಿಸಿ ಬಂದಿದ್ದ ಶಾಸಕರು ತಮ್ಮ ಬೇಡಿಕೆಗಳನ್ನು ಅಲಕ್ಷಿಸಿದಲ್ಲಿ ತಾವು ಸಾಮೂಹಿಕವಾಗಿ ಅನಾಹತಪಕ್ಷಕ್ಕೆ ವಲಸೆ ಹೋಗುವುದಾಗಿ ಎಚ್ಚರಿಸಿದರು. ಆ ಪಕ್ಷದಿಂದ ಆಯ್ಕೆಯಾಗಿದ್ದ ಕ್ಷೇತ್ರಪಾಲ್ ಉಕ್ಕಡ್ ಕುಂಕುಮದಲ್ಲಿನ ವಿದ್ಯಾಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಆದರೆ ಸಂಭವನೀಯ ಮುಖ್ಯಮಂತ್ರಿ ನಿಷ್ಪತ್ತಿಯವರು ಮಾತ್ರ ತಮ್ಮ ಪಂಚೇಂದ್ರಿಯಗಳ ಕ್ರಿಯಾಕಲಾಪವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಮೌನಕ್ಕೆ ಶರಣಾಗಿದ್ದರು. ಚೌಕಾಸಿ ಅತಂತ್ರಸ್ಥಿತಿ ಎರಡು ದಿವಸಗಳ ಕಾಲ ನಡೆದು ಮೂರನೆ ದಿವಸ ನಿರ್ಣಾಯಕ ಹಂತ ತಲುಪಿತು. ಸಮಸ್ಯೆ ಅಂತಿಮವಾಗಿ ರಾಜಭವನ ಪ್ರವೇಶಿಸಿತು.
ಸನ್ಮಾನ್ಯ ಘನವೆತ್ತರು ಎಲ್ಲಾ ಪಕ್ಷದ ಶಾಸಕರನ್ನು ತಮ್ಮ ಕೈಯಿಂದ ಸ್ಪರ್ಶಿಸಿದರು. ವಿಶೇಷ ಆಹಾರ ಪಾನೀಯ ನೀಡಿ ಸತ್ಕರಿಸಿದರು. ಪ್ರತಿಯೋರ್ವ ಗಣ್ಯಶಾಸಕರೊಂದಿಗೆ ಪ್ರತ್ಯೇಕವಾಗಿ ಮಾತಾಡಬೇಕೆಂಬುದು ಭಗವಂತನ ಇಚ್ಚೆ, ದಯವಿಟ್ಟು ಸಹಕರಿಸುವಿರಿ ತಾನೆ! ಎಂದು ನುಡಿದರು. ಆತಂಕ ಕುತೂಹಲ ಹೆಚ್ಚಿಸಿದರು. ಎಲ್ಲಾ ಚುನಾಯಿತರ ಕಡೆ ಅರ್ಥಗರ್ಭಿತ ನೋಟ ಬೀರಿದರು. ಮೆಲ್ಲಗೆ ನಡೆದು ಕೋಣೆ ಸೇರಿದರು. ಸಜ್ಞೆಗಾಗಿ ಕಾದರು. ನಾಲ್ಕು ನಿಮಿಷ ದಾಟಿ ಇನ್ನೇನು ಐದನೇ ನಿಮಿಷ ಆರಂಭವಾಗಿಯಿತೆನ್ನುಷ್ಟರಲ್ಲಿ ರಾಜ್ಯಪಾಲರ ಕಾರ್ಯದರ್ಶಿ ಪ್ರೊ ನಾಮಘರ್ ಆಣವ್ ಬಾಗಿಲಲ್ಲಿ ಕಾಣಿಸಿಕೊಂಡರು. ಹಸನ್ಮುಖಿ ಅಣವ್ ಬಲಗೈಯ ತುದಿಬೆರಳುಗಳನ್ನು ಮೀಟಿ ಸನ್ನೆ ಮಾಡಿದರು. ಪ್ರಾದೇಶಿಕಪಕ್ಷಗಳು ಮುಖಂಡರು ಮಾತ್ರ ಆಗಮಿಸುವಂತೆ. ಉಪಸರ್ಜಪಕ್ಷದ ಕಿರುಕುಳ್, ಇಷುಧಿಪಕ್ಷದ ಉನ್ಮಾದ್ ಕುತ್ಕೀಲ್, ವಾತಾಶನಪಕ್ಷದ ಅಂಬರದ್ ಶುಲ್ವ ಪರಸ್ಪರ ಮುಖ ನೋಡಿಕೊಳ್ಳುತ್ತ ಮೆಲ್ಲಗೆ ಎದ್ದರು. ತಮ್ಮತಮ್ಮ ಪಕ್ಷಗಳ ಶಾಸಕರ ಕಡೆ ದೈನ್ಯಾತಿದೈನ್ಯ ನೋಟ ಬೀರಿದರು. ಕಣ್ಣುಮಿಟುಕಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬಿದರು. ತಮ್ಮತಮ್ಮ ಇಷ್ಟದೇವತೆಗಳ ನಾಮಸ್ಮರಣೆ ಮಾಡಿದರು ಮನಸ್ಸಿನಲ್ಲಿ. ನಿಟ್ಟುಸಿರು ಬಿಡುತ್ತ ಹಗುರನೆ ಹೆಜ್ಜೆಗಳನ್ನು ಕ್ರಮಿಸುತ್ತ ನಿರ್ಧರಿತ ಕೋಣೆಯ ಹೊಸ್ತಿಲು ದಾಟಿದರು. ಕಣ್ಣುಗಳನ್ನು ಅರಳಿಸಿದ ಸುತ್ತ ನೋಡಿದರು. ತಮ್ಮ ಜೀವಿತಾವಧಿಯಲ್ಲಿ ನೋಡಿರದ ಪ್ರಪಂಚ ಅದಾಗಿತ್ತು. ಸ್ವರ್ಗದ ಪ್ರತಿಕೃತಿಯಂತೆ ಭಾಸವಾಯಿತು. ಬಳಿಕ ನೇರವಾಗಿ ನೋಡಿದರು. ಸಿಂಹಾಸನ ಸದೃಶ ಕುರ್ಚಿಯ ಮೇಲೆ ಘನವೆತ್ತರು ಮಹಾರಾಜರನ್ನು ನೆನಪಿಸುವ ರೀತಿಯಲ್ಲಿ ಆಸೀನರಾಗಿದ್ದರು. ಅವರ ಎಡಭಾಗದಲ್ಲಿ ಪೋಲಿಸ್ ಕಮಿಷನರ್ ಕಾಕಬಲಿ ಮಿಲಿಟರಿ ಸಿಪಾಯಿಯಂತೆ ನಿಂತಿದ್ದರು. ಅವರ ಕಂಕುಳಲ್ಲಿ ಹತ್ತಾರು ಫೈಲುಗಳಿದ್ದವು. ಅವರ ಬಲಭಾಗದಲ್ಲಿ ಪಕ್ಷದ ಪ್ರತನಿಧಿಗಳಾದ ವ್ಯೂಹ ಕಾಹು ಕುಚರ್ಿಗಳಲ್ಲಿ ವಿರಾಜಮಾನರಾಗಿದ್ದರು. ಅವರಿಗೆ ಅಭಿಮುಖವಿದ್ದ ಕುರ್ಚಿಗಳನ್ನು ತೋರಿಸಿದರು ಕುಳಿತುಕೊಳ್ಳಲು. ಪಂಚೇಂದ್ರಿಯಗಳನ್ನು ಜಾಗೃತಗೊಳಿಸಿ ಸಚಿವ ಸ್ಥಾನಾಪೇಕ್ಷಿತರು ಕುಳಿತರು. ಘನವೆತ್ತರು ಅವರನ್ನು ಉದ್ದೇಶಿಸಿ.
ಗೌರೌವಾನ್ವಿತ ಶಾಸಕರೆ, ನಮಗೆ ಲಭಿಸಿದ ಮಾಹಿತಿಯಂತೆ ರಾಜ್ಯಕ್ಕೆ ಹಲವು ಸಮಸ್ಯೆಗಳು ಆವರಿಸಿವೆ. ಬಹುಪಾಲು ನಗರಪಟ್ಟಣಗಳಲ್ಲಿ ಇಲಿಹೆಗ್ಗಣಗಳೊಂದೇ ಅಲ್ಲದೆ ಕ್ರಿಮಿಕೀಟಗಳ ಉಪಟಳ ಕಾಣಿಸಿಕೊಂಡಿದೆ. ಕ್ರಿಮಿನಾಶಕಗಳ ಕಾರ್ಯಕ್ಷಮತೆ ಕ್ಷೀಣಿಸಿದೆ. ವಿದ್ವಂಸಕ ಕೃತ್ಯದ ಪರಿಣಾಮದಿಂದ ಕೃಷಿಕರು ಸಾವಿನ ಮೊರೆ ಹೋಗುತ್ತಿರುವರು. ಅದಲ್ಲದೆ ಒಂದುಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇರುವ ನಗರಗಳಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಈ ವಿಷಮ ಸಂದರ್ಭದಲ್ಲಿ ಮಧ್ಯಂತರ ಚುನಾವಣೆ ಸಂಭವಿಸಿದೆ. ಹತಾಶ ಮತದಾರ ಎಸಗಿರುವ ಪ್ರಮಾದವೆಂದರೆ ಯಾವುದೇ ಪಕ್ಷಕ್ಕೆ ಬಹುಮತ ದಯಪಾಲಿಸದೆ ಇರುವುದು. ಇದರಿಂದ ಸಾಂವಿದಾನಿಕ ಬಿಕ್ಕಟ್ಟು ತಲೆದೋರಿದೆ. ಚುನಾಯಿತ ಶಾಸಕರು ಭಿನ್ನಭೇದ ಸ್ವಹಿತಾಸಕ್ತಿ ಅಧಿಕಾರ ದಾಹ ಬದಿಗಿಡುವುದು ರಾಜ್ಯದ ಹಿತ ದೃಷ್ಟಿಯಿಂದ ತುಂಬ ಮುಖ್ಯ. ಆದರೆ ತಾವುಗಳು ಪರಸ್ಪರ ವೈಷಮ್ಯ ಸಾಧಿಸುತ್ತಿರುವಿರಿ. ಅದೇ ಬೇಕು. ಇದೇ ಬೇಕು ಎಂದು ವಾದಿಸುತ್ತಿರುವಿರಿ. ಇದು ಸರಿಯೆ! ಆತ್ಮಸಾಕ್ಷಿಯ ಮೊರೆಯನ್ನು ದಯವಿಟ್ಟು ಆಲಿಸಿರಿ. ಋಣಾನುಬಂಧಪಕ್ಷದ ವರಿಷ್ಠರು ತೆಗೆದುಕೊಂಡಿರುವ ತೀರ್ಮಾನವನ್ನು ಅನುಷ್ಠಾನಗೊಳಿಸಿರಿ. ರಾಜ್ಯಪಾಲರಾದವರಿಗೆ ರಾಜ್ಯದ ಹಿತ ಮುಖ್ಯವೇ ಹೊರತು ರಾಜಕೀಯ ಪಕ್ಷಗಳಲ್ಲ. ಅತಂತ್ರಸ್ಥಿತಿ ಮುಂದುವರಿದರೆ ನಾವು ರಾಷ್ಟ್ರಪತಿ ಆಡಳಿತಕ್ಕೆ ಶಿಪಾರಸ್ ಮಾಡುವುದು ಅನಿವಾರ್ಯವಾಗುವುದು. ಆ ನಂತರ ತೆಗೆದುಕೊಳ್ಳುವ ಮೊದಲ ಕ್ರಮವೆಂದರೆ ಕ್ರಿಮಿನಲ್ ಹಿನ್ನಲೆಯುಳ್ಳವರನ್ನು ರಾಜಕಾರಣದಿಂದ ಅನರ್ಹಗೊಳಿಸುವುದು, ಕಾನೂನು ರೀತ್ಯಾ ಶಿಕ್ಷೆಗೊಳಪಡಿಸುವುದು. ದ್ವಿತೀಯ ಪ್ರಾಶಸ್ತ್ಯವೆಂದರೆ ಪ್ರಾಣಿ ಕ್ರಿಮಿಕೀಟಗಳ ವಿದ್ವಂಸಕ ಕೃತ್ಯವನ್ನು ನಿವಾರಿಸುವುದು. ಭುವನವಿಜಯದ ಪಾವಿತ್ರ್ಯತೆ ರಕ್ಷಿಸುವುದು. ನಮ್ಮ ಈ ಮಾತುಗಳು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪುಗಳನ್ನು ಆಧರಿಸಿವೆ ಎನ್ನುವುದನ್ನು ಮರೆಯದಿರಿ ಗೌರವಾನ್ವಿತರೆ ಎಂದು ನುಡಿದರು. ಭಾವನೆಗಳನ್ನು ಗ್ರಹಿಸಲು ಮುಖಂಡರ ಮುಖಗಳನ್ನು ತೀಕ್ಷ್ಣವಾಗಿ ನೋಡಿದರು. ನೀರು ಸೇವಿಸಿ ತಮ್ಮ ನಾಲಗೆಯನ್ನು ಚೈತನ್ಯಗೊಳಿಸಿದರು. ಪುನಃ ತಾವು..
ನಮ್ಮ ಮಾತುಗಳು ನಿಮ್ಮನ್ನು ಪ್ರಭಾವಗೊಳಿಸಲಿಲ್ಲವೆಂದು ಭಾವಿಸುವೆ. ಬಹುಮತ ತೋರಿಸುವ ಸಾಮಥ್ರ್ಯ ನಿಮಗೂ ಇಲ್ಲ, ಸಾಮಥ್ರ್ಯ ತೋರಿಸುವವರನ್ನು ನೀವು ಬೆಂಬಲಿಸುತ್ತಿಲ್ಲವೆಂದರೆ ಹೇಗೆ? ತಾತ್ಕಾಲಿಕವಾಗಿ ಜಗದುದರ ನಿಷ್ಪತ್ತಿಯವರ ನಾಯಕ್ವವನ್ನು ಬೆಂಬಲಿಸಿ, ಅವರ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹುದ್ದೆಗಳ ಸಾಧಕಬಾಧಕ ಕುರಿತು ಯೋಚಿಸೋಣ. ಇದಕ್ಕೆ ತಮ್ಮ ಸಹಮತವಿರುವುದೆ! ಎಂದು ನುಡಿದು ಪ್ರತಿಕ್ರಿಯೆಯನ್ನು ನಿರೀಕ್ಷಿಸಿದರು.
ಮೊದಲು ಖಾತೆಗಳ ಹಂಚಿಕೆಯಾಗಲಿ, ಆ ಬಳಿಕ ಬೆಂಬಲ ಇತ್ಯಾದಿ! ಯಾರೋ ಕುಳಿತಲ್ಲಿಂದ ಗೊಣಗಿದರು. ಅದನ್ನು ಆಲಿಸಿದ ಘನವೆತ್ತರು..
ರಾಜ್ಯದ ಕರ್ಮ! ನಾವು ರಾಷ್ಟ್ರಪತಿಗಳಿಗೆ ಸಾಂವಿದಾನಿಕ ಬಿಕ್ಕಟ್ಟು ವಿವರಿಸುತ್ತೇವೆ. ಅವರ ಮನವೊಲಿಸಿ ರಾಷ್ಟ್ರಪತಿ ಆಡಳಿತ ಜಾರಿಯಾಗುವಂತೆ ಶ್ರಮಿಸುವೆವು. ಆ ಬಳಿಕ ಕಾನೂನಿನ ನೇಪಥ್ಯದಲ್ಲಿನ ಕಡತಗಳನ್ನು ಒಂದೊಂದಾಗಿ ಗಂಭೀರತೆಯಿಂದ ಪರಿಶೀಲಿಸುವೆವು. ಈಗ ನಿಮ್ಮಲ್ಲಿ ಯಾರು ಯಾರ ಮೇಲೆ ಯಾವ ಯಾವ ಕ್ರಿಮಿನಲ್ ಖಟ್ಲೆಗಳು ಬಾಕಿ ಇರುವವು ಎನ್ನುವುದನ್ನು ನೋಡೋಣ ಎಂದು ನುಡಿದು ಆಯುಕ್ತರತ್ತ ನೋಡಿದರು. ಅವರು ತಮ್ಮಲ್ಲಿದ್ದ ಕಡತಗಳನ್ನು ಒಂದೊಂದಾಗಿ ಘನವೆತ್ತರಿಗೆ ಹಸ್ತಾಂತರಿಸಿದರು. ಅವುಗಳಲ್ಲಿ ಒಂದನ್ನು ಕೈಗೆತ್ತಿಕೊಂಡ ಘನವೆತ್ತರು..
ಗೌರವಾನ್ವತರೂ ಉಪಸರ್ಜಪಕ್ಷದ ಪ್ರಶ್ನಾತೀತ ನಾಯಕರೂ ಆದ ಶ್ರೀಯುತ ಛಲಂದಂಕ ಕಿರುಕುಳ್ ಅವರ ಮೇಲಿರುವ ಕ್ರಿಮಿನಲ್ ಖಟ್ಲೆಗಳು ಇಪ್ಪಕ್ಕಿಂತ ಅಧಿಕ, ಅವು ಯಾವುವೆಂದರೆ! ಎಂದು ಹೇಳಿ ಅವರವರ ಪಾಪಕೃತ್ಯಗಳನ್ನು ಜಾಗೃತಗೊಳಿಸಿದರು. ಛಲದಂಕ ಕಿರುಕುಳ್ ಅಪಾದಮಸ್ತಕ ಕಂಪನಕ್ಕೀಡಾದುದನ್ನು ಗ್ರಹಿಸಿದರು. ಚೇತರಿಸಿಕೊಂಡ ಬಳಿಕ ಕಿರುಕುಳ್ ಎದ್ದು ನಿಂತರು, ಅಂಜಲೀಬದ್ದರಾದರು. ಈಗವೆಲ್ಲ ಯಾಕೆ ಬುದ್ದಿ, ನಮ್ಮ ಕೃತ್ಯಗಳನ್ನು ಕ್ಷಮಿಸಿ, ನಿಮ್ಮ ಸಲಹೆ ಪಾಲಿಸಲು ನಮ್ಮ ಪಕ್ಷ ಸಿದ್ದವಿದೆ ಎನ್ನುತ್ತ ಸನಿಹಕ್ಕೆ ಧಾವಿಸಿದರು. ಬಾಗಿ ಘನವೆತ್ತರ ಪಾದಗಳನ್ನು ಸ್ಪರ್ಶಿಸಿದರು. ಘನವೆತ್ತರು ಶ್ರೀಯುತರ ಭುಜದ ಮೇಲೆ ತಮ್ಮ ಎಡಗೈಯನ್ನಿರಿಸಿ ನಿಮ್ಮ ಮೇಲೆ ಮಾತ್ರವಲ್ಲದೆ ನಿಮ್ಮ ಶಾಸಕರ ಮೇಲೂ ಗುರುತರ ಆಪಾದನೆಗಳಿವೆ, ಆದ್ದರಿಂದ ನೀವು ನಮ್ಮ ಸಲಹೆಯನ್ನು ಪುರಸ್ಕರಿಸಬೇಕೆಂಬ ನಿರ್ಬಂಧವಿಲ್ಲ, ಸೌಜನ್ಯವನ್ನು ಪುನರ್ ಪರಿಶೀಲಿಸಿ ಸನ್ಮಿತ್ರ ಕಿರುಕುಳ್ಜೀ ಎಂದರು ಸಹಜತೆಯಿಂದ. ಅದರಿಂದ ಕರುಳುಗಳು ಶಾಸಕರ ಶ್ರೀಕಂಠಕ್ಕೆ ವರ್ಗಾಯಿಸಲ್ಪಟ್ಟವು. ಅವರು ಶರಣಾಗತಭಾವ ಪ್ರಕಟಿಸಿದರು.
ಉಳಿದ ಪ್ರಾದೇಶಿಕ ಪಕ್ಷಗಳ ಪ್ರಶ್ನಾತೀತ ನಾಯಕರು ತಮ್ಮತಮ್ಮ ಪಾಪಕೃತ್ಯಗಳನ್ನು ಒಂದೊಂದಾಗಿ ಸ್ಮರಣೆಗೆ ತಂದುಕೊಂಡರು. ತಮಗೆ ಸಂಬಂಧಿಸಿದ ಕಡತಗಳನ್ನು ಘನವೆತ್ತರಿಗೆ ಹಸ್ತಾಂತರಿಸದಂತೆ ನೋಟದ ಮೂಲಕ ಆಯುಕ್ತರನ್ನು ಪ್ರಾರ್ಥಿಸಿದರು. ವ್ಯೂಹ ಕಾಹು ನೆಮ್ಮದಿಯ ಉಸಿರುಬಿಟ್ಟರು. ಎಲ್ಲ ಪಕ್ಷಗಳ ಪರವಾಗಿ ಕಿರುಕುಳ್ ಕರಜೋಡಿಸಿ
ಬುದ್ದಿಯವರ ಮಾತು ಪಂಚಮವೇದವೆಂದು ಭಾವಿಸುತ್ತೇವೆ. ಆದರೆ ಕರುಣಾಮೂರ್ತಿಯಾದ ತಾವು ನಮಗೆ ನಮ್ಮ ಶಾಸಕರಿಗೆ ಮುಂದಿನ ದಿವಸಗಳಲ್ಲಿ ಅನ್ಯಾಯ ಆಗದಂತೆ ಎಚ್ಚರವಹಿಸಿ. ನ್ಯಾಯಯುತವಾದುದನ್ನು ಹಂಚಿಕೆ ಮಾಡಿ. ನಿಷ್ಪತ್ತಿಯವರಿಗಿರುವಂತೆ ನಮಗೂ ಕುಟುಂಬಗಳಿವೆ, ಬೆಂಬಲಿಗರಿದ್ದಾರೆ. ಆದ್ದರಿಂದ ನಮ್ಮೆಲ್ಲರಿಗೂ ಸಚಿವ ಸಂಪುಟ ದರ್ಜಿ ಸ್ಥಾನಮಾನ ಕೊಡಿಸಿ ಬುದ್ದಿ ಎನ್ನುತ್ತ ಕಣ್ಣಲ್ಲಿನ ಗಂಗಾಜಲವನ್ನು ಖಾದಿ ಉತ್ತರೀಯದಿಂದ ನಿವಾರಿಸಿದರು
ತಮ್ಮ ಪಕ್ಷದ ಹಾದಿ ಅಂತೂ ನಿರ್ಣಾಯಕ ಘಟ್ಟ ತಲುಪಿತು! ಅಧಿಕಾರಾರೂಢವಾಗುವುದು ಮಾತ್ರ ಬಾಕಿ ಉಳಿದಿರುವುದು! ದರ್ಭಶಯನ್ ವ್ಯೂಹ, ಏಕಚಕ್ರಿ ಕಾಹು ಸಮಾಧಾನದ ಉಸಿರುಬಿಟ್ಟರು. ಬಳಿಕ ಪ್ರೊ ನಾಮಘರ್ ಅಣವ್ ಅವರ ಹಾಗೂ ಆಯಾಪಕ್ಷಗಳ ಶಾಸಕರಿಂದ ಬಹುಮುಖ್ಯ ಕಡತಗಳಿಗೆ ಸಹಿ ಪಡೆದರು. ಬಳಿಕ ಘನವೆತ್ತರು ಅವರೆಲ್ಲರನ್ನು ಉದ್ದೇಶಿಸಿ..
ಗಣ್ಯ ಶಾಸಕರೆ, ನಮ್ಮ ಕಾಠಿಣ್ಯಾತಿ ಕಠಿಣ ಮಾತುಗಳನ್ನು ನೀವೆಲ್ಲರೂ ಜೀರ್ಣಿಸಿಕೊಂಡಿರುವುದಾಗಿ ಭಾವಿಸುತ್ತೇನೆ. ನಮ್ಮ ಮಾತುಗಳು ನಮ್ಮವಾಗಿರಲಿಲ್ಲ, ಆ ಭಗವಂತ ನಮ್ಮಿಂದ ನುಡಿಸಿದ ಮಾತುಗಳವು. ಮನಸ್ಸಿರದಿದ್ದರೂ ಮಾತಾಡಿದೆವು. ರಾಜಕಾರಣದಲ್ಲಿ ಸರಿತಪ್ಪು ಪಾಪಪುಣ್ಯವಿರುವುದಿಲ್ಲ. ಆ ಸಂವೇದನೆಗಳು ಕತೃಗಳ ಸಂಸ್ಕಾರಕ್ಕೆ ಸಂಬಂಧಿಸಿದವುಗಳು. ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಅಪ್ಪಣೆ ಕೊಡಿಸಿರುವಂತೆ ನಡೆದುಕೊಂಡಿರುವಿರಿ. ಆದ್ದರಿಂದ ಪಾಪಪ್ರಜ್ಞೆ ನಿಮ್ಮನ್ನು ಕಾಡದಿರಲಿ. ನಿಮ್ಮ ರಾಜಕೀಯ ಭವಿಷ್ಯ ಉಜ್ವಲಗೊಳಿಸುವ ಹೊಣೆ ಈ ರಾಜಭವನದ ಹೆಗಲ ಮೇಲಿರುವುದು. ಸಾಂದರ್ಭಿಕವಾಗಿ ಅದನ್ನು ನಾವು ನಿಭಾಯಿಸುವೆವು. ಮುಂದಿನ ದಿನಗಳಲ್ಲಿ ನೀವೆಲ್ಲರೂ ನಿಶ್ಚಿಂತೆಯಿಂದಿರಿ. ಆ ಸರ್ವಂತರ್ಯಾಮಿಯ ಕೃಪಾಶೀರ್ವಾದ ನಿಮ್ಮ ಮೇಲಿರಲಿ ಎಂದು ಮುತ್ತುಗಳಂಥ ಮಾತುಗಳನ್ನಾಡಿದರು.
ಶಾಸಕರು ಒಬ್ಬೊಬ್ಬರಂತೆ ಸಮೀಪಿಸಿ ಘನವೆತ್ತರ ಪಾದಗಳಿಗೆ ನಮಸ್ಕರಿಸಿದರು. ಶ್ರೀಯುತರು ಕಲ್ಯಾಣಮಸ್ತು ಎಂದು ಆಶೀರ್ವದಿಸಿದರು. ಸಂಭವನೀಯ ಮುಖ್ಯಮಂತ್ರಿ ಜಗದುದರ ನಿಷ್ಪತ್ತಿಯವರು ಶಿರಬಾಗಿ ನಮಸ್ಕರಿಸಿದ ಬಳಿಕ ಸನ್ಮಾನ್ಯರೆ ತಾವು ಬೌದ್ದಿಕವಾಗಿಯೂ ಅಜಾನುಬಾಹುಗಳು. ಮನೆಗೆ ತೆರಳಿ ಪ್ರಮಾಣ ವಚನ ಬಾಯಿಪಾಠ ಮಾಡಬೇಕಿದೆ, ಜೊತೆಗೆ ಉಳಿದೆಲ್ಲ ಕಾರ್ಯಗಳನ್ನು ನಿಭಾಯಿಸುವುದಿದೆ. ತಮ್ಮ ಸಲಹೆ ಸೂಚನೆಯೇ ನಮ್ಮ ಸರ್ಕಾರದ ಸಂವಿಧಾನ ಎಂಬ ವಿನಯಪೂರ್ವಕ ಮಾತುಗಳನ್ನಾಡಿದರು. ಶವಸಂಸ್ಕಾರ ಮುಗಿಸಿದವರಂತೆ ಅವರೆಲ್ಲ ಅಲ್ಲಿಂದ ನಿಧಾನವಾಗಿ ಹೊರಟರು. ಸೂತಕದ ಕಳೆ ಮಾಧ್ಯಮದವರಿಗೆ ಕಾಣಿಸದಿರಲೆಂದು ತಮ್ಮತಮ್ಮ ಮುಖಗಳನ್ನು ಉತ್ತರೀಯಗಳಿಂದ ಮರೆಮಾಚಿಕೊಳ್ಳುವುದನ್ನು ಮರೆಯಲಿಲ್ಲ.
ಇನ್ನು ನಾಳೆಗೆ ..




0 Comments