4
ನಿನ್ನೆಯಿಂದ ಮುಂದುವರಿದದ್ದು…
ಕಡವಳ!
ಮಾಧ್ಯಮಗಳ ಛಾಯಾಗ್ರಾಹಕರು ಪತ್ರಕರ್ತರು ನೆಂಟರಿಷ್ಟರು ಅಭಿಮಾನಿಗಳಿಂದ ಕಿಕ್ಕಿರಿಯಿತು. ಪ್ರಶ್ನೆಗಳ ಮೇಲೆ ಪ್ರಶ್ನೆಗಳು! ಉತ್ತರ ಕೊಟ್ಟೂ ಕೊಟ್ಟು ಸುಸ್ತಾದರು. ಫೋಟೋಗಳ ಮೇಲೆ ಫೋಟೋಗಳು! ತೆಗೆಸಿಕೊಂಡೂ ತೆಗೆಸಿಕೊಂಡು ಬಸವಳಿದರು. ಈ ಕ್ಷಣ ಈ ಡ್ರೆಸ್, ಆ ಕ್ಷಣ ಆ ಡ್ರೆಸ್! ಧರಿಸೀ ಧರಿಸಿ ಆಯಾಸ ಅನುಭವಿಸಿದರು. ಅಂಗಳದ ರಸ್ತೆಯಲ್ಲೆಲ್ಲ ಪಟಾಕಿ ಸಿಡಿಮದ್ದುಗಳ ಸ್ಪೋಟ! ಮೂಸೀ ಮೂಸಿ ಮೂಗನ್ನು ತುರಿಸಿಕೊಳ್ಳಲಾರಂಭಿಸಿದರು. ಶ್ರೀಯುತ ನಿಷ್ಪತ್ತಿಯವರು ಸ್ವಭಾವತಃ ಸರಳ ಸಜ್ಜನಿಕೆಗೆ ಹೆಸರಾದವರು. ಒಂದು ಕ್ಷಣ ಕಿರಿಕಿರಿ ಇನ್ನೊಂದು ಕ್ಷಣ ಸಂಭ್ರಮ! ಒಂದೇ ಒಂದು ನಿಮಿಷ ವಿಶ್ರಮಿಸಿಕೊಳ್ಳವುದು ಶ್ರೀಯುತರಿಗೆ ಸಾಧ್ಯವಾಗಲಿಲ್ಲ. ಇನ್ನೊಂದು ಅಹಿತಕರ ಸಂಗತಿ ಎಂದರೆ ಸನ್ಮಾನ್ಯರ ದೇಹವು ವಾಸಿಯಾಗದ ಖಾಯಿಲೆಗಳ ಅವಾಸಸ್ಥಾನವಾಗಿತ್ತು. ಥ್ಯಾಯ್ರಾಯ್ಡ್ ಮತ್ತು ಪಿಟ್ಯೂಟರಿ ಗ್ರಂಥಿಗಳ ಕಾರ್ಯಕ್ಷಮತೆ ಕ್ಷೀಣಿಸಿತ್ತು. ಅವುಗಳ ಆರೋಗ್ಯ ಕಾಪಾಡಲು ಶ್ರೀಯುತರು ಸಮಾಧಾನ ಚಿತ್ತರಾಗಿರುವುದು ಅತ್ಯವಶ್ಯವಿತ್ತು. ಆದ್ದರಿಂದ ಅವರು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಹೆಣಗುತ್ತಿದ್ದರು. ಕಳೆದ ಹತ್ತುವರ್ಷಗಳಿಂದ ಸೂಕ್ತಚಿಕಿತ್ಸೆ ನೀಡುತ್ತಿದ್ದ ಡಾ ನಿಷ್ಕಾಮ್ ಕಾಪಾಲಿಕ್ ಅವರ ನೆರಳಲ್ಲಿ ನೆರಳಾಗಿದ್ದರು. ಹೆಜ್ಜೆಹೆಜ್ಜೆಗೊಂದೊಂದು ಸಲಹೆ ನೀಡುತ್ತಿದ್ದರು. ಪ್ರಶ್ನೆಗಳ ಭರಾಟೆಯಿಂದ ಸಲಹೆಗಳು ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ಇಷ್ಟೆಲ್ಲ ಇದ್ದಾಗ್ಯೂ ಶ್ರೀಯುತರ ಆರೋಗ್ಯದಲ್ಲಿ ಏರುಪೇರಾಗಲಿಲ್ಲ. ಅದಕ್ಕೆ ಕಾರಣ ಅವರಲ್ಲಿದ್ದ ಅಗಾಧ ಆತ್ಮವಿಶ್ವಾಸ. ಅಲ್ಲದೆ ಶ್ರೀಯುತರ ಖಾಸಾ ಹಾಗೂ ಅಶರೀರಿ ಜ್ಯೋತಿಷಿಗಳು! ಕಡವಳದ ಒಡಲಲ್ಲಿ ಎಲ್ಲೋ ಹೇಳುತ್ತಿದ್ದ ಮಂತ್ರಗಳು ಅವರಲ್ಲಿ ಅಲೌಕಿಕ ಶಕ್ತಿಯನ್ನು ಪ್ರಸಾದಿಸುತ್ತಿದ್ದವು.
ತಮಗರಿವಿಲ್ಲದಂತೆ ಅಚಾತುರ್ಯ ಸಂಭವಿಸಿ ತಾವೆಲ್ಲಿ ಸಂಭವನೀಯ ಮುಖ್ಯಮಂತ್ರಿಗಳ ವಿಶ್ವಾಸ ಕಳೆದುಕೊಳ್ಳುವೆವೋ ಎಂಬ ಒಂದೇ ಒಂದು ಕಾರಣದಿಂದ ಕಿರುಕುಳ್ ಕುತ್ಕೀಲ್ ಶುಲ್ವ ಮತ್ತಿತರ ಮುಖಂಡರು ಚರ್ಮವ್ಯಾಧಿ ಪೀಡಿತ ಶುನಕಗಳಂತೆ ಅವರ ಹಿಂದೆ ಹಿಂದೆ ಸುತ್ತುತ್ತಿದ್ದರು. ಅವರ ಚಲನವಲನಗಳನ್ನು ನಿಯಂತ್ರಿಸುತ್ತಿದ್ದುದು ತಮಗೆ ಪುಂಖಾನುಪುಂಖವಾಗಿ ಬರುತ್ತಿದ್ದ ಕರೆಗಳು. ಅವು ದುಮಂಗಲ, ಮೇಹು, ಚಚ್ಚಕಾರ ಇನ್ನಿತರರಿಂದ. ಪ್ರಸ್ತಾಪಿಸಲೇಬೇಕಾದ ಮಹತ್ವದ ಸಂಗತಿ ಎಂದರೆ..
ಭುವನವಿಜಯ ನವವಧುವಿನಂತೆ ಶೃಂಗಾರಗೊಂಡಿತ್ತು. ಅದರ ಭೌತಿಕ ಸೌಂದರ್ಯ ದ್ವಿಗುಣವಹಿಸುವಲ್ಲಿ ಸಹಸ್ರಾರು ವಿವಿಧ ದಜರ್ೆಯ ಸಕರ್ಾರಿ ನೌಕರರು ಶ್ರಮಿಸಿದ್ದರು. ಮುಂಜಾಗ್ರತಾ ಕ್ರಮದಿಂದಾಗಿ ಐತಿಹಾಸಿಕ ಕಟ್ಟಡಕ್ಕೆ ಅಭಿಮುಖವಿದ್ದ ಉದ್ಯಾನದಲ್ಲಿದ್ದ ಬಹುತೇಕ ತರುಲತೆಗಳು ನಿನರ್ಾಮವಾಗಿದ್ದವು. ಇಲ್ಲಿಂದ ಅಲ್ಲಿಯವರೆಗೆ, ಅಲ್ಲಿಂದ ಇಲ್ಲಿಯವರೆಗೆ ಶಾಮಿಯಾನ! ಅದರ ತುಂಬ ವಿದ್ಯುತ್ ದೀಪಗಳು, ಸಹಸ್ರ ಚದರ ವಿಸ್ತೀರ್ಣದ ವೇದಿಕೆ. ನೂರಾರು ಅಶ್ವಶಕ್ತಿಯ ಧ್ವನಿವರ್ಧಕಗಳು. ನಾನಾವಿಧದ ವಾದ್ಯ ಪರಿಕರಗಳು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಜಾನಪದ ನೃತ್ಯ ಸಂಗೀತ, ಕಳಸಪ್ರಾಯವಾಗಿ ಸಹಸ್ರಾರು ವಾಹನಗಳ ಹಾರ್ರ್ನ ಸದ್ದು! ಕಾಲಳತೆ ದೂರದಲ್ಲಿದ್ದ ನ್ಯಾಯಾಲಯ ಕೆರಳದೆ ಇರಲಾದೀತೆ! ಅದೇ ಸಮಯಕ್ಕೆ ಸರಿಯಾಗಿ ದುಮಂಗಲನ ಜಾಮೀನು ವಿಚಾರಣೆ ನಡೆಯುತ್ತಿತ್ತು. ಖುದ್ದ ಅನಾಹತಪಕ್ಷದ ಮುಖಂಡ ಕ್ಷೇತ್ರಪಾಲ್ ಉಕ್ಕಡ್ ಆತನ ಪರವಾಗಿ ವಕಾಲತ್ತು ವಹಿಸಿದ್ದರು. ಆ ಸದ್ದು ನ್ಯಾಯಾಲಯದ ಕ್ರಿಯಾಕಲಾಪಕ್ಕೆ ಅಡ್ಡಿಪಡಿಸಿತು. ಶೀಘ್ರಕೋಪಿಗಳೆಂದೇ ಹೆಸರಾಗಿದ್ದ ನ್ಯಾಯಮೂರ್ತಿ ಶ್ರೀ ಆದಿತ್ಯೋಪಾಸಕ್ ಕದ್ರು ಅವರ ಕಣ್ಣುಗಳು ಕೆಂಪಾದವು. ರಕ್ತದ ಒತ್ತಡವೂ ಹೆಚ್ಚಿತು. ಕತ್ತೊರಳಿಸಿ ನೋಡಿದರು. ಅದಕ್ಕು ಮೊದಲು ಜಾಮೀನು ಮಂಜೂರು ಮಾಡಬಾರದೆಂದು ನಿರ್ಧರಿಸಿದ್ದರು. ಕೆರಳಿ ನಿಧರ್ಾರವನ್ನು ಬದಲಿಸಿದರು. ಕಟಕಟೆಯಲ್ಲಿ ಅಂಜಲೀಬದ್ದನಾಗಿ ನಿಂತಿದ್ದ ದುಮಂಗಲನ ಕಡೆ ಕೃಪಾದೃಷ್ಟಿ ಬೀರಿದರು. ನಿರೀಕ್ಷಣಾ ಜಾಮೀನು ಮುಂಜೂರು ಮಾಡಿಯೇಬಿಟ್ಟರು. ಕೆಲವು ಷರತ್ತುಗಳನ್ನು ವಿಧಿಸಿ. ದುಮಂಗಲ ಮನಸ್ಸಿನಲ್ಲಿ ಮೀಸೆ ಹುರಿಗೊಳಿಸಿದ. ನ್ಯಾಯಧೀಶರಿಗೆ ನಿಂತಲ್ಲಿ ಕೃತಜ್ಞತೆ ಅರ್ಪಿಸಿದ. ಮೆಲ್ಲಗೆ ಕಟಕಟೆ ದಾಟಿದ. ಕ್ಷೇತ್ರಪಾಲರನ್ನು ಸಮೀಪಿಸಿದ. ಅವನು ಕ್ರಿಮಿನಲ್ ವಕೀಲರೂ, ಚಾಣಾಕ್ಷ ರಾಜಕಾರಣಿಯೂ ಆದ ಉಕ್ಕಡ್ ಅವರ ಪಾದಗಳಿಗೆ ಎರಗುತ್ತಿದ್ದನೋ! ನಿಮ್ಮ ಋಣವನ್ನು ತೀರಿಸುವ ಬಗೆ ಯಾವುದು ಎಂದು ಕೇಳುತ್ತಿದ್ದನೋ! ಶ್ರೀಕದ್ರು ಭುವನವಿಜಯದ ಆಡಳಿತಾಧಿಕಾರಿ ನಿಷ್ಪಂದ್ದಬರಿ ಅವರಿಗೆ ಮೌಖಿಕ ಎಚ್ಚರಿಕೆಯನ್ನು ದೂರವಾಣಿ ಮೂಲಕ ರವಾನಿಸಿದರು. ಕೇವಲ ಒಂದೆರಡು ನಿಮಿಷಗಳಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸದ್ದು ಸ್ತಬ್ಧವಾಯಿತು. ಆದರೆ ಜ್ಯೋತಿಷಿಗಳ ಮಂತ್ರೋಚ್ಚಾರ ಅಡೆತಡೆ ಇಲ್ಲದೆ ಮುಂದುವರೆದಿತ್ತು.
ವಿಶೇಷ ಉಡುಪು ಧರಿಸಿದ್ದ ಜಗದುದರ ನಿಷ್ಪತ್ತಿಯವರು ತಮ್ಮ ಬೆಂಬಲಿಗರ ಸಂಗಡ ಆ ಕಡೆಯಿಂದ ಆಗಮಿಸಿದರೆ, ಸನ್ಮಾನ್ಯ ರಾಜ್ಯಪಾಲರು ಅಧಿಕಾರಿಗಳ ಸಂಗಡ ಈ ಕಡೆಯಿಂದ ಆಗಮಿಸಿದರು. ಪರಸ್ಪರ ಕೈಕುಲುಕಿದರು. ಶ್ರೀ ದಬರಿ ವೇಗವಾಗಿ ಆಗಮಿಸಿ ಗಣ್ಯರೀರ್ವರ ಕಿವಿಯಲ್ಲಿ ಪಿಸುಗುಟ್ಟುವಾಗ ಎಡಗೈಯನ್ನು ಬಾಯಿಗೆ ಅಡ್ಡವಿರಿಸುವುದನ್ನು ಮರೆಯಲಿಲ್ಲ. ಅವರೀರ್ವರು ಏಕಕಾಲಕ್ಕೆ ಓಹೋ ಎಂದು ಉದ್ಗರಿಸಿದರು. ಅವರು ಒಟ್ಟಾಗಿ ವೇದಿಕೆ ಏರುವಾಗ ಸಹಾಯಕರ ನೆರವು ಪಡೆದರು. ಪ್ರತಿಮೆಟ್ಟಿಲು ನೂರು ಮೆಟ್ಟಿಲಿಗೆ ಸರಿಸಮವಿರುವುದಾಗಿ ಭಾವಿಸಿದರು. ವೇದಿಕೆ ಏರಿದೊಡನೆ ಸುಸ್ತಾಗಿರುವವರಂತೆ ಅತಿಥಿಮಾನ್ಯರಿಗೆ ಗೋಚರಿಸಿದರು. ತಂಪನ್ನು ಬಿಸಿಯನ್ನಾಗಿ, ಬಿಸಿಯನ್ನು ತಂಪಾಗಿಸುವ ಆಧುನಿಕ ತಂತ್ರಜ್ಞಾನದ ಫ್ಯಾನುಗಳು ಸಕ್ರಿಯವಾಗಿದ್ದರೂ ಅವರು ಅಸದಳ ಸೆಕೆ ಅನುಭವಿಸಿದರು. ಬೆವರು ನಿವಾರಿಸಿಕೊಳ್ಳಲು ಕರವಸ್ತ್ರಗಳಿಗಾಗಿ ತಡಕಾಡಿದರು. ಜ್ಯೋತಿಷಿಗಳ ಸಮುದಾಯದ ಕಡೆ ಪ್ರಶ್ನಾರ್ಥಕ ನೋಟ ಬೀರಿದರು. ಮಂಗಳಶ್ಲೋಕಗಳನ್ನು ಉಚ್ಚರಿಸಲೆಂದು ಕೊಂಗನಾಡಿನ ವೈಜೇಶ್ವರಿಕೋಯಲ್ನಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ್ದ ಜ್ಯೋತಿಷ್ಯ ಮಾರ್ತಾಂಡ ಪಂಡಿತ್ ಅವೃಜಿನ್ ಅಯ್ಯರ್ ಮುಂಗೈಗಂಟಿದ್ದ ರೋಲೆಕ್ಸ್ ನೋಡಿಕೊಂಡರು. ಚಿನ್ನಮಿಶ್ರಿತ ಯಜ್ಞೋಪವೀತದ ನೆರವಿನಿಂದ ಬೆನ್ನತುರಿಯನ್ನು ನಿವಾರಿಸಿಕೊಂಡರು. ಒಟ್ಟಾರೆ ಹೇಳುವುದಾದರೆ ಆವರಿಸಿದ ಮೌನ ಕಳವಳಕಾರಿಯಾಗಿತ್ತು. ಆತಂಕ ತೊಡೆಯಲು ನಿರ್ಧರಿಸಿ ದಬರಿ ಸಮೀಪಿಸಿದರು. ನ್ಯಾಯಮೂರ್ತಿ ಶ್ರೀಕದ್ರು ಸಾಹೇಬರು ಅಗೋ ಅಲ್ಲಿ ಆಗಮಿಸುತ್ತಿರುವರು ಎಂದು ಎಡಗೈಚಾಚಿ ಮಧ್ಯ ಬೆರಳನ್ನು ಸಾಧ್ಯವಾದಷ್ಟು ಉದ್ದ ಮಾಡಿ ತೋರಿಸಿದರು.
ತಮ್ಮನ್ನು ಸ್ವಾಗತಿಸಲೆಂದು ಬಂದವರಿಗೆ ನ್ಯೂಸೆನ್ಸ್ ನಾನ್ಸೆನ್ಸ್ ಎಂಬ ಪದಗಳಿಂದ ಪ್ರತಿಕ್ರಿಯಿಸುತ್ತಿದ್ದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀಆದಿತ್ಯೋಪಾಸಕ್ ಕದ್ರು ಕಾನೂನು ವ್ಯಾಸಂಗ ಮಾಡುತ್ತಿದ್ದ ದಿವಸಗಳಲ್ಲಿ ರಾಜ್ಯಮಟ್ಟದ ಕ್ರೀಡಾಪಟುಗಳೆಂದು ಹೆಸರು ಮಾಡಿದ್ದರು. ವ್ಯಾಸಂಗ ಮುಂದುವರೆದಂತೆ ಕಬಡ್ಡಿ ಕೊಕ್ಕೋ ಹೈಜಂಪ್ ಲಾಂಗ್ಜಂಪುಗಳಂಥ ಔಟ್ಡೋರ್ ಆಟಗಳಿಂದ ಟೇಬಲ್ಟೆನ್ನಿಸ್ ಬ್ರೀಲಿಯಡ್ಸ್ ಇಸ್ಪೀಟ್ ಕೇರಂಬೋರ್ಡ್ ಗಳಂಥ ಇನ್ಡೋರ್ ಆಟಗಳಿಗೆ ವರ್ಗವಾಗಿದ್ದರು. ನ್ಯಾಯಾಧೀಶರಾದ ಬಳಿಕ ಆಡುವುದು ಒತ್ತಟ್ಟಿಗಿರಲಿ, ಆಡುವ ಆಟಗಳನ್ನು ಹತ್ತಿರದಿಂದ ನೋಡುವ ಅವಕಾಶದಿಂದ ವಂಚಿತರಾದರು. ಮಿಲಿಟರಿ ಸೇವೆಯ ಕನಸು ಕಾಣುತ್ತಿದ್ದ ಅವರು ನ್ಯಾಯಾಧೀಶರಾದದ್ದು ದೈವಸಂಕಲ್ಪ. ಆದರೂ ಶ್ರೀಯುತರ ಮನಸ್ಸಿನ ಸುಪ್ತಾವಸ್ಥೆಯಲ್ಲಿ ಕ್ರೀಡಾಚಟವಟಿಕೆಗಳು ನಡೆಯುತ್ತಿರುವುದುಂಟು. ಆ ಕ್ರೀಡಾಮನೋಭಾವದಿಂದಾಗಿಯೇ ಶ್ರೀಯುತರು ಇಳಿವಯಸ್ಸಿನಲ್ಲೂ ಯುವಕರಂತೆ ಕಾಣಲು ಪ್ರಯತ್ನ ಮುಂದುವರೆಸಿದರು. ಅವರು ಕ್ರೀಡಾಕಾರನ ಗತ್ತಲ್ಲಿ ಶಾಮಿಯಾನ ಪ್ರವೇಶಿಸಿದರು. ಒಲಂಪಿಕ್ ಪದಕವಿಜೇತನಂತೆ ರೆಪ್ಪೆ ತೆರೆದು ಮುಚ್ಚುವಷ್ಟರಲ್ಲಿ ವೇದಿಕೆ ಏರಿದರು. ಕುಲುಕುವ ನೆಪದಲ್ಲಿ ಗಣ್ಯರ ಕೈಗಳನ್ನು ಗಟ್ಟಿಯಾಗಿ ಅಮುಕಿ ತಾವು ಬಲಿಷ್ಠರೆಂದು ನಿರೂಪಿಸಿದರು.
ಜ್ಯೋತಿಷಿ ಪಂ ಅವೃಜಿನ್ ಅಯ್ಯರ್ ಸನ್ನೆಯಂತೆ ಸಹ ಋತ್ವಿಕ್ಕುಗಳು ಮಂತ್ರೋಚ್ಚಾರಣೆ ಆರಂಭಿಸಿದರು. ಪ್ರಮಾಣ ವಚನದ ವಿಧಿವಿಧಾನ ಶಾಸ್ತ್ರೋಕ್ತ ರೀತಿಯಲ್ಲಿ ಆರಂಭವಾಯಿತು. ಸಿಂಹಾಸನ ಸದೃಶ ಕುಚರ್ಿಗಳು ಅತ್ಯಾಕರ್ಷಕವಾಗಿದ್ದವು. ಅತ್ತ ಘನವೆತ್ತ ರಾಜ್ಯಪಾಲ ಗುಣಧಾಮ ಕಲ್ಗೋದ್, ಇತ್ತ ನ್ಯಾ. ಶ್ರೀ ಆದಿತ್ಯೋಪಾಸಕ್ ಕದ್ರು! ಅವರೀರ್ವರ ನಟ್ಟನಡುವೆ ನವವಧುವಿನಂಥ ಗೌರವಾನ್ವಿತ ಶ್ರೀ ಜಗದುದರ ನಿಷ್ಪತ್ತಿ! ರಾಷ್ಟ್ರಗೀತೆ ಮುಗಿದ ಬಳಿಕ ನ್ಯಾ ಕದ್ರು ಪ್ರಮಾಣ ವಚನ ಬೋಧಿಸಿದರು. ಶ್ರೀ ನಿಷ್ಪತ್ತಿಯವರು ಅದನ್ನು ಹಗಲಿರುಳು ಕಂಠಸ್ಥವಾಗಿಸಿಕೊಂಡಿದ್ದರಷ್ಟೆ! ಪಕ್ಷದ ವರಿಷ್ಠರ ಆಶೋತ್ತರಗಳಿಗನುಸಾರವಾಗಿ ಋಣೇಶ್ವರಿದೇವಿ ಹೆಸರಿನಲ್ಲೂ, ಕುಟುಂಬ ಸದಸ್ಯರನ್ನು ಮೆಚ್ಚಿಸಲೆಂದು ಶ್ರೀ ಕುಂಭಕರ್ಣಾನಂದಸ್ವಾಮೀಜಿ ಹೆಸರಿನಲ್ಲೂ ಪ್ರಮಾಣವಚನ ಸ್ವೀಕರಿಸಿದರು. ಶ್ರೀಯುತರಾದ ಕಾಕಬಲಿ ದರ್ಮದತ್, ಅವಿಕ್ಷಿತ್ ಸಚಿವರೆಂದು ಪ್ರಮಾಣ ವಚನ ಸ್ವೀಕರಿಸಿದರು. ತಮ್ಮ ಆಡಳಿತದ ವೈಖರಿ ಕುರಿತು ಏನನ್ನೋ ನುಡಿಯಲೆಂದು ಧ್ವನಿವರ್ಧಕದ ಮುಂದೆ ನಿಂತರು. ಪಕ್ಷದ ವರಿಷ್ಠರೊಂದಿಗೆ ಸಮಾಲೋಚಿಸಿ ಸಂಪುಟವನ್ನು ವಿಸ್ತರಿಸುವುದಾಗಿ ಹೇಳಿದರು. ಅಕಸ್ಮಿಕವೆಂಬಂತೆ ಪ್ರೇಕ್ಷಕರ ಕಡೆ ದೃಷ್ಟಿ ಹರಿಸಿದರು. ಮುಂದಿನ ಸಾಲಲ್ಲಿ ಮಾಫಿಯಾ ದೊರೆ ದುಮಂಗಲನನ್ನು ಗುರುತಿಸಿದರು, ತಮ್ಮ ಕಡೆ ವಕ್ರವಾಗಿ ನೋಡುತ್ತಿದ್ದ, ಎಡಗೈಯ ತುದಿಬೆರಳುಗಳಿಂದ ಮೀಸೆ ನೇವರಿಸಿಕೊಳ್ಳುತ್ತಿದ್ದ. ಅವನ ಅನುಚಿತ ವರ್ತನೆ ಹಿಂದೆ ಇರುವ ರಾಜಕೀಯ ಕೈಗಳ ಸಾಧಕ ಬಾಧಕ ಕುರಿತಂತೆ ಯೋಚಿಸುತ್ತ ಶ್ರೀಯುತರು ತಮ್ಮ ಭಾಷಣವನ್ನು ಮೊಟಕುಗೊಳಿಸಿದರು. ನಂತರ ನ್ಯಾ ಕದ್ರು ಧ್ವನಿವರ್ಧಕದ ಎದುರು ಪ್ರಶಸ್ತಿ ವಿಜೇತ ಕ್ರೀಡಾಪಟುವಿನಂತೆ ನಿಂತರು. ರಾಜಕಾರಣಿಗಳನ್ನು ಅಪರಾಜಿತರೆಂದೇ ಭಾವಿಸಿದರು. ಅವರು ಹದಿನೇಳು ನಿಮಿಷಗಳ ಕಾಲ ಮಾತಾಡಿದರು. ಭುವನವಿಜವನ್ನು ಒಳಕ್ರೀಡಾಂಗಣಕ್ಕೂ, ಶಾಸಕರನ್ನು ಕ್ರೀಡಾಪಟುಗಳಿಗೂ ಹೋಲಿಸಿದರು. ಹಾಗೆಯೇ ಮುಖ್ಯಮಂತ್ರಿ ರೆಫರಿ ಎಂದೂ, ರಾಜ್ಯಪಾಲರನ್ನು ನಿರ್ಣಾಯಕ ಅಂಫೈರ್ ಎಂದು ಕರೆದರು. ಶಾಸಕರು ಸ್ಥಿರಚರಾಸ್ತಿಯನ್ನು ಘೋಷಿಸುವಂತೆ ತಮ್ಮತಮ್ಮ ಜಠರದ ಸುತ್ತಳತೆಯನ್ನು ಘೋಷಿಸುವಂತೆ ಒತ್ತಾಯಿಸಿದರು. ಸಂಪುಟ ದರ್ಜಿ ಸಚಿವರು ದಿನಂಪ್ರತಿ ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಹಿತನುಡಿಗಳನ್ನು ಆಡಿದರು. ಪ್ರೇಕ್ಷಕರ ಕರತಾಡನ ಕೇಳಿಸಿಕೊಂಡು ಸಂಪ್ರೀತರಾದರು.
ಏನೆಲ್ಲ ಕಿರುಕುಳ ಅವಘಡಗಳ ನಡುವೆ ಸನ್ಮಾನ್ಯ ಮುಖ್ಯಮಂತ್ರಿ ಜಗದುದರ ನಿಷ್ಪತ್ತಿಯವರು ಎರಡೂವರೆ ವರ್ಷಗಳನ್ನು ಪೂರೈಸಿದ್ದು ಪವಾಡವೇ ಸರಿ. ಅವರು ಎಂದೂ ಸಹನೆ ಕಳೆದುಕೊಳ್ಳಲಿಲ್ಲ. ಪಕ್ಷದ ವರಿಷ್ಠ ಅರಣ್ಯಕ್ ಬರಾಟಿ ಸಂಪುಟ ವಿಸ್ತರಣೆಗೆ ಸಮ್ಮತಿಸಿದರೆ ತಾನೆ! ಸಚಿವಸ್ಥಾನ ನಿಗಮ ಮಂಡಳಿಗಳಿಗೆ ಯಾರನ್ನೂ ನೇಮಿಸದೆ ಆಕಾಂಕ್ಷಿಗಳನ್ನು ನಿರಾಸೆಗೊಳಿಸಿದರು. ಛಲದಂಕ ಕಿರುಕುಳ್ ಎರಡೇ ಎರಡು ದಿವಸ ಮುಖ್ಯಮಂತ್ರಿಸ್ಥಾನದಲ್ಲಿದ್ದರೆ ತನ್ನೆಲ್ಲ ಕಾನೂನುಬಾಹಿರ ಅಕ್ರಮಗಳನ್ನು ಸಕ್ರಮಗೊಳಿಸಿಕೊಳ್ಳಬಹುದೆಂದು ಕನಸು ಕಾಣುತ್ತಿದ್ದ ದುಮಂಗಲ! ಘನವೆತ್ತರ ಅಳಿಯ ಆಪೋಶಕರ್ ಮೇಹು ಅವರ ಜೊತೆ ಕೈಜೋಡಿಸಿದ. ಮೇಹು ಅವರ ಬಲಗೈಯ ಧನರೇಖೆಯನ್ನು ಸ್ಪಶರ್ಿಸಿದದ್ದು ಅರಗೀಲ್ ನಿಷಾದ್, ನಿಷಾದರ ಬಲಗೈಯ ಆಯುಷ್ಯರೇಖೆಯನ್ನು ಸ್ಪರ್ಶಿಸಿದ್ದು ಚಚ್ಚಕಾರ! ಉಪಟಳಕ್ಕೆ ಹೆಸರಾದ ಈ ಎಲ್ಲಾ ಗ್ರಹಗಳು ಒಟ್ಟಾದವೆಂದರೆ ಕೇಳುವುದೇನಿದೆ! ಋಣಾನುಬಂಧಪಕ್ಷದ ಶಾಸಕರಲ್ಲಿದ್ದ ಅತೃಪ್ತಿಯನ್ನು ಜಾಗೃತಗೊಳಿಸಿದವು. ಅವರನ್ನು ಭಿನ್ನಮತೀಯರನ್ನಾಗಿ ಪರಿವರ್ತಿಸುವಲ್ಲಿ ಯಶಸ್ಸು ಸಾಧಿಸಿದವು. ಉಪಸರ್ಜ ಇಷುಧಿ ವಾತಾಶನ ಯಜ್ಞೋಪವೀತ್ ಜ್ಞಾನಕಾರಣ ಪಕ್ಷಗಳ ಮುಖಂಡರು ಶ್ರೀನಿಷ್ಪತ್ತಿಯವರ ಸಕರ್ಾರ ಉರುಳಿಸಲು ಎರಡು ವರ್ಷಗಳಿಂದ ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದರಷ್ಟೆ. ಮುಖ್ಯಮಂತ್ರಿಗಳನ್ನು ನಿಷ್ಪ್ರಯೋಜಕರೆಂದು ಸಾರ್ವಜನಿಕವಾಗಿ ಜರಿಯುತ್ತಿದ್ದರಷ್ಟೆ. ಆಡಳಿತದ ಹಗರಣಗಳನ್ನು ಒಂದೊಂದಾಗಿ ಬಯಲಿಗೆಳೆದಿದ್ದರೂ ಪ್ರಯೋಜನವಾಗಿರಲಿಲ್ಲ. ವಿರೋಧಪಕ್ಷದ ನಾಯಕ ಕ್ಷೇತ್ರಪಾಲ್ ಉಕ್ಕಡ ದುಮಂಗಲನನ್ನೂ, ಆತನ ಮೂಲಕ ಇತರರನ್ನೂ ಸಂಪರ್ಕಿಸಿದರು. ಭಿನ್ನಮತೀಯ ಚಟವಟಿಕೆಗಳನ್ನು ಪ್ರೋತ್ಸಾಹಿಸಲಾರಂಭಿಸಿದರು. ಅವರನ್ನು ಹಲವು ಗುಂಪುಗಳನ್ನಾಗಿ ವಿಂಗಡಿಸಿ ರಾಜ್ಯದ ಮೂಲೆಮೂಲೆಗಳಲ್ಲಿದ್ದ ರೆಸಾರ್ಟ್ ಗಳಿಗೆ ರವಾನಿಸಲಾರಂಭಿಸಿದರು. ಸನ್ಮಾನ್ಯ ನಿಷ್ಪತ್ತಿಯವರು ಅಧಿಕಾರ ತ್ಯಜಿಸಬೇಕು ಎಂದು ಒತ್ತಾಯಿಸತೊಡಗಿದರು. ಇಲ್ಲವಾದಲ್ಲಿ ಅವಿಶ್ವಾಸ ಗೊತ್ತವಳಿ ಮಂಡಿಸುವುದಾಗಿ ಎಚ್ಚರಿಸಲಾರಂಭಿಸಿದರು. ಶಾಸಕರ ಸಹಿಪಟ್ಟಿ ಹಿಡಿದು ರಾಜಭವನದ ಹಾದಿ ಸವೆಸಿದರು. ಹೇಷಾರವ ಸದೃಶ ಮುಗುಳ್ನಗೆಯಿಂದ ಭಯ ಹುಟ್ಟಿಸಿದರು. ಭಿನ್ನಮತೀಯರಿಂದ ತಮ್ಮ ಪಕ್ಷ ಇಬ್ಭಾಗವಾದರೆ! ಅವರೆಲ್ಲ ಒಟ್ಟಾಗಿ ಅನಾಹತಪಕ್ಷಕ್ಕೆ ವಲಸೆ ಹೋದರೆ! ಪಕ್ಷದೊಳಗಿನ ಅಶಿಸ್ತು ಶಿಕ್ಷೆಗೆ ಅರ್ಹವೋ! ಕ್ಷಮೆಗೆ ಅರ್ಹವೋ! ವರಿಷ್ಠರಲ್ಲಿ ಗೊಂದಲ ಹುಟ್ಟಿಸಿತು. ಶ್ರೀಯುತ ಬರಾಟಿ ಅಧಿಕಾರ ಹಸ್ತಾಂತರಿಸುವಂತೆ ಸಂದೇಶ ಕಳಿಸಿದರು. ಅದನ್ನು ಗೌರವಿಸುವುದು ನಿಷ್ಠಾವಂತ ಕಾರ್ಯಕರ್ತನ ಪರಮ ಕರ್ತವ್ಯವೆಂದು ನಿಷ್ಪತ್ತಿ ನಿರ್ಧರಿಸಿದರು. ಕೆಲವು ದಿವಸಗಳಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸುವುದಾಗಿಯೂ, ಅದಕ್ಕೆ ತಮ್ಮ ಪಕ್ಷದ ಶಾಸಕರಲ್ಲಿ ಒಬ್ಬರನ್ನು (ಛಲದಂಕ ಕಿರುಕುಳ್ ಅವರತ್ತ ನೋಡಿ ಮುಗುಳ್ನಕ್ಕು) ಉತ್ತರಾಧಿಕಾರಿಯನ್ನಾಗಿ ಘೋಷಿಸುವುದಾಗಿ ಹೇಳಿದರು. ಆದರೆ ಶ್ರೀಯುತ ಜಗದುದರ ನಿಷ್ಪತ್ತಿ ಮಾಡಿದ್ದು!
ಛಲದಂಕ ಕಿರುಕುಳ್ ದುಮಂಗಲ ಅವರ ಪಾದದ ಬಳಿ ಕುಸಿದು ಕೂತರು. ತಮ್ಮ ಅಸಹಾಯಕತೆಯನ್ನು ಸೂಕ್ತ ಮಾತುಗಳಲ್ಲಿ ವಿವರಿಸಿದರು. ಅದಾದ ಕೆಲವೇ ದಿವಸಗಳಲ್ಲಿ ರಾಷ್ಟ್ರಪತಿಯವರು ಮಹಿಷ್ಮತಿರಾಜ್ಯದ ರಾಜಕೀಯ ವಿದ್ಯಮಾನಗಳಿಗೆ ಸಂಬಂಧಿಸಿದ ವಿವರಗಳನ್ನು ಗೋಪ್ಯವಾಗಿ ತರಿಸಿಕೊಂಡರು. ರಾಜ್ಯಪಾಲರನ್ನು ಪಾಣಿಪತ್ತಿಗೆ ಕರೆಸಿಕೊಂಡು ಸುದೀರ್ಘವಾಗಿ ಚಚರ್ಿಸಿದರು. ಅವರು ಹೇಳಿದ್ದೇನು? ಇವರು ಮಾಡಿದ್ದೇನು? ಶಾಸಕಾಂಗ ಸಭೆ ವಿಸರ್ಜಿಸಿದರು. ಚುನಾವಣೆ ನಡೆಸುವಂತೆ ಚುನಾವಣಾ ಆಯುಕ್ತರನ್ನು ಆದೇಶಿಸಿದರು.
ರಾಷ್ಟ್ರೀಯ ಚುನಾವಣಾ ಆಯೋಗ ದಿನಾಂಕಗಳನ್ನು ಪ್ರಕಟಿಸಿತು. ರಾಜ್ಯದಲ್ಲಿ ಐದುಹಂತಗಳಲ್ಲಿ ಚುನಾವಣೆ ನಡೆಸುವುದೆಂದು ನಿರ್ಧರಿಸಿತು. ಉಸ್ತುವಾರಿ ಮುಖ್ಯಮಂತ್ರಿಯವರ ಆಡಳಿತಕ್ಕೆ ಕಡಿವಾಣ ಹಾಕಿತು. ಐಎಎಸ್ ಐಪಿಎಸ್ ಮಟ್ಟದ ಅಧಿಕಾರಿಗಳನ್ನು ಪಾಣಿಪತ್ನಲ್ಲಿನ ಕೇಂದ್ರಕಛೇರಿಗೆ ಆಮಂತ್ರಿಸಿತು. ಏನು ಮಾಡಬೇಕು ಎನು ಮಾಡಬಾರದೆಂದು ಸೂಚಿಸಿತು. ಚುನಾವಣ ಅಕ್ರಮಣಗಳು ನಡೆಯದಂತೆ ಎಚ್ಚರವಹಿಸಬೇಕೆಂದು ಕಟ್ಟುನಿಟ್ಟಾಗಿ ಆಜ್ಞಾಪಿಸಿತು. ಅಲ್ಲಿಂದ ಅವರನ್ನು ಸನ್ನದ್ಧರನ್ನಾಗಿಸಿ ರಾಜ್ಯಕ್ಕೆ ಮರಳಿಸಿತು. ಅವರು ಅಲ್ಲಿಂದ ಮರಳಿದೊಡನೆ..
***
ಮಹಿಷ್ಮತಿರಾಜ್ಯದಲ್ಲಿನ ರಾಷ್ಟ್ರೀಯ ಹಾಗೂ ಪ್ರಾದೇಶಿಕಪಕ್ಷಗಳು ಚುರುಕಾದವು. ಏನೇನು ಮಾಡಬಾರದೊ ಅದೆಲ್ಲವನ್ನು ಮಾಡಲು ನಿರ್ಧರಿಸಿದವು. ಗೆಲುವು ಸಾಧಿಸಲು ಏನೇನು ಮಾಡಬೇಕೋ ಅದೆಲ್ಲವನ್ನು ಮಾಡಲು ಕಂಕಣಬದ್ದವಾದವು. ಮಾಜಿಶಾಸಕರು ನುರಿತಕ್ರೀಡಾಪಟುಗಳಂತೆ ಆ ಪಕ್ಷದಿಂದ ಈ ಪಕ್ಷಕ್ಕೆ, ಈ ಪಕ್ಷದಿಂದ ಆ ಪಕ್ಷಕ್ಕೆ ವಲಸೆ ಅರಂಭಿಸಿದರು. ರಾಷ್ಟ್ರೀಯ ಹಾಗೂ ರಾಜ್ಯದಲ್ಲಿ ಮಾಧ್ಯಮಗಳು ದೈನಿಕಗಳು ಚುನಾವಣಾಪೂರ್ವ ಸಮೀಕ್ಷೆ ನಡೆಸಿದವು. ಅನಾಹತಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗಳಿಸುವುದಾಗಿ ಪ್ರಕಟಿಸಿದವು. ವಿರೋಧಪಕ್ಷದ ನಾಯಕ ಶ್ರೀಯುತ ಕ್ಷೇತ್ರಪಾಲ ಉಕ್ಕಡ್ ಅವರಿಗೆ ಮತದಾರನ ಅಲ್ಪಸ್ವಲ್ಪ ಒಲುವು ಇರುವುದೆಂದು ಮಾಧ್ಯಮಗಳು ಬಿಂಬಿಸಿದವು. ಅದರ ಪರಿಣಾಮ ಕುರುಕ್ಷೇತ್ರದ ತರುಣಾತಪ್ ಅನಾಹತಪಕ್ಷದ ಕೇಂದ್ರ ಕಛೇರಿ ಮುಂದೆ ಟಿಕೆಟ್ ಆಕಾಂಕ್ಷಿಗಳ ಸರತಿಸಾಲು ಏರ್ಪಟ್ಟಿತು. ರಾಜ್ಯದ ಭೂಗತಜಗತ್ತು ಮಾತ್ರವಲ್ಲದೆ ಪ್ರಥಮದರ್ಜೆ ಗುತ್ತಿಗೆದಾರರು, ಅಬಕಾರಿ ದೊರೆಗಳು, ರಿಯಲ್ ಎಸ್ಟೇಟ್ ದಂಧೆಕೋರರು, ಪ್ರಮುಖ ಉದ್ಯಮಿಗಳು ನೂರಾರು ಅಭ್ಯರ್ಥಿಗಳ ಪ್ರಾಯೋಜಕತ್ವ ವಹಿಸಿದವು. ಅದೂ ತೆರೆಮರೆಯಲ್ಲಿದ್ದ ಕಡದುಕ್ಷ್ ಸಯ್ಗೆ ನಿರ್ದೇಶನದಂತೆ! ಯಾರಿಗೆ ಬಿಫಾರಮ್ ನೀಡುವುದು! ಪಕ್ಷದ ವರಿಷ್ಠರು ಗೊಂದಲ ಅನುಭವಿಸಿದರು. ಕೊನೆಗೆ ಟಿಕೆಟ್ಗಳ ಹರಾಜು ಪ್ರಕ್ರಿಯೆ ಆರಂಭಿಸಿದರು. ಇದರ ಪರಿಣಾಮವಾಗಿ ರಾಜ್ಯದ ಬಂಡವಾಳಶಾಹಿ ವ್ಯವಸ್ಥೆ ಪ್ರಜಾಪ್ರಭುತ್ವದ ಮುಖವಾಡ ಧರಿಸಿತು. ಅಭ್ಯರ್ಥಿಗಳನ್ನು ಜೂಜುಕುದುರೆಗಳನ್ನಾಗಿ ಪರಿವರ್ತಿಸಿತು. ಚುನಾವಣೆಯಲ್ಲಿ ಸಹಸ್ರಾರು ಕೋಟಿಗಳನ್ನು ತೊಡಗಿಸಿತು. ಹಣ ನೈತಿಕಮೌಲ್ಯಗಳ ಸ್ಥಾನವನ್ನು ಆಕ್ರಮಿಸಿತು. ಮತದಾರನನ್ನು ಮಾರಾಟದ ಸರಕನ್ನಾಗಿಸಿತು. ಯಾರ ಕೈಯಲ್ಲಿ ಕೋಲಿರುವುದೋ ಅವರದೇ ಕೋಣ! ಈ ತತ್ವವನ್ನು ಉಳಿದ ರಾಜಕೀಯಪಕ್ಷಗಳು ಅವಲಂಭಿಸಿದವು. ನೀನೆನಗಿದ್ದರೆ ನಾನಿನಗೆ! ಈ ಸಹಕಾರ ತತ್ವದಿಂದ ಪರಸ್ಪರ ಕೈ ಮಿಲಾಯಿಸಿದವು. ಬಹಮನಿ ಸುಲ್ತಾನರು ಒಟ್ಟಾಗಿ ವಿಜಯನಗರದ ಮೇಲೆ ಎರಗಿದಕ್ಕಿಂತ ಮಿಗಿಲಾಗಿತ್ತು ರಾಜಕೀಯಪಕ್ಷಗಳ ಸಮೀಕರಣ. ಕೋಟ್ಯಾಂತರ ಹಣ ನೀಡಿ ಮಾಧ್ಯಮಗಳನ್ನು ಖರೀದಿಸುವ ಪ್ರಯತ್ನ ನಡೆಸಿದವು. ಮಠಗಳ ಧರ್ಮಗುರುಗಳ ಮುಂದೆ ಸಾಲುಗಟ್ಟಿದರು. ದೇಶದ ಆರ್ಥಿಕ ದುಃಸ್ಥಿತಿಯನ್ನು ಲೆಕ್ಕಿಸದೆ ತಮ್ಮತಮ್ಮ ಪಕ್ಷಗಳ ಪ್ರಣಾಳಿಕೆಗಳಲ್ಲಿ ಹಲವು ವಿಧದ ಭಾಗ್ಯಗಳನ್ನು ಘೋಷಿಸಿದವು. ಅಧಿಕಾರ ದಾಹದಿಂದ ದೃಷ್ಟಿ ದೋಷಕ್ಕೀಡಾದವು. ಸದ್ವಿವೇಕ ಕಳೆದುಕೊಂಡವು. ಸರಿತಪ್ಪುಗಳ ನಡುವಿನ ಪವಿತ್ರ ಗೆರೆಯನ್ನು ಅಳಿಸಿ ಹಾಕಿದವು. ಮದ್ಯದ ಹೊಳೆಯನ್ನು ಹರಿಸಿದವು. ಹಳ್ಳಿಗಳ ಮುಗ್ದತೆಯನ್ನು ದುರುಪಯೋಗಪಡಿಸಿಕೊಂಡವು. ಹಣದ ಆಮಿಷವೊಡ್ಡಿ ಮತದಾರನ ಅಸಹಾಯಕತೆಯನ್ನು ಕೊಳ್ಳೆ ಹೊಡೆದವು. ದುಮಂಗಲನ ಮಾಫಿಯಾ ಸಹಾಯ ಪಡೆದು ಮತಗಟ್ಟೆಗಳನ್ನು ಕಬ್ಜಾ ಮಾಡಲು ಹಿಂಜರಿಯಲಿಲ್ಲ. ಶಿಶುಪಾಲ ಹರಿಕೇನ್ ಬಾಡಿಗೆ ಗೂಂಡಾಗಳ ನೆರವಿನಿಂದ ಮತದಾರರಲ್ಲಿ ಅಭ್ಯರ್ಥಿಗಳಲ್ಲಿ ಭಯ ಹುಟ್ಟಿಸಲು ಹಿಂಜರಿಯಲಿಲ್ಲ. ಕೌಶಿಕ್ ಉದಗ್ರ ಪ್ರಳಯಾಂತಕ ಸಲಹೆಗಳನ್ನು ನೀಡಿ ಒಳ್ಳೆಯ ಅಭ್ಯರ್ಥಿಗಳನ್ನು ಕೆಟ್ಟವರನ್ನಾಗಿಸಿದ, ಕೆಟ್ಟವರನ್ನು ಇನ್ನೂ ಕೆಟ್ಟವರನ್ನಾಗಿಸಿದ. ಅವರನ್ನು ಇವರ ವಿರುದ್ಧ, ಇವರನ್ನು ಅವರ ವಿರುದ್ಧ ಎತ್ತಿ ಕಟ್ಟುವಲ್ಲಿ ಯಶಸ್ವಿಯಾದ.
ನಿಗಧಿತ ದಿನಾಂಕಗಳಂದು ಮಹಿಷ್ಮತಿರಾಜ್ಯದಾದ್ಯಂತ ಮತದಾನ ನಡೆಯಿತು. ಕೆಲವು ಕಡೆ ಮತಪೆಟ್ಟಿಗೆಗಳ ಅಪರಹಣ ನಡೆಯಿತು. ಕೆಲವು ಕೇಂದ್ರಗಳಲ್ಲಿ ದೊಂಬೆ ಗಲಾಟೆಗಳು ಸಂಭವಿಸಿದವು. ಒಂದೆರಡು ಕಡೆ ಋಣಾನುಬಂಧಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯಿತು. ಅಪಸ್ಮಾರ ಜಿಲ್ಲೆಯಲ್ಲಿನ ಬಹುತೇಕ ಕೇಂದ್ರಗಳಲ್ಲಿ ಮರುಮತದಾನ ನಡೆಯಿತು. ಒಟ್ಟಿನಲ್ಲಿ ರಾಜ್ಯದಲ್ಲಿ ನಡೆದ ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ಆರಂಭಗೊಂಡು ಅಶಾಂತಿಯುತವಾಗಿ ಮುಕ್ತಾಯವಾಯಿತು. ರಾಜ್ಯದ ಎರಡು ನೂರಾ ಐವತ್ತಾರು ಕ್ಷೇತ್ರಗಳಲ್ಲಿ ಮತಗಳ ಎಣೆಕೆಕಾರ್ಯ ಬೆಳೆಗ್ಗೆ ಎಂಟಕ್ಕೆ ಆರಂಭವಾಗಿ ಸಂಜೆ ಐದುಕಾಲಿಗೆ ಮುಕ್ತಾಯವಾಯಿತು. ಅನಾಹತಪಕ್ಷದ ನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಜಯಶಾಲಿಗಳಾದರು. ಋಣಾನುಬಂಧಪಕ್ಷವನ್ನು ಹೊರತುಪಡಿಸಿದರೆ ಉಳಿದ ಪಕ್ಷದ ಅಭ್ಯರ್ಥಿಗಳ ಗೆಲುವು ಎರಡು ಅಂಕೆಯನ್ನು ದಾಟಲಿಲ್ಲ. ಒಟ್ಟಿನಲ್ಲಿ ಯಾವುದೇ ಪಕ್ಷಕ್ಕೆ ನಿಚ್ಚಳ ಬಹುಮತ ಲಭಿಸಲಿಲ್ಲ. ಋಣಾನುಬಂಧ ಹೊರತುಪಡಿಸಿ ಉಳಿದ ಪಕ್ಷಗಳು ಅನಾಹತಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದವು. ಅವುಗಳ ನೆರವಿನಿಂದ ಅನಾಹತಪಕ್ಷ ಅಧಿಕಾರದ ಗದ್ದುಗೆ ಏರಲು ನಿರ್ಧರಿಸಿತು.
ಆದರೆ ಶಾಸಕಾಂಗದ ಪಕ್ಷದ ನಾಯಕರು ಯಾರು?
ಈ ಪ್ರಶ್ನೆ ವರಿಷ್ಠರಲ್ಲಿ ಕಾಣಿಸಿಕೊಂಡಿತು. ಕ್ಷೇತ್ರಪಾಲ ಉಕ್ಕಡ ಪರವಾಗಿ ಕೆಲವರು ವಾದಿಸಿದರು, ಅವರು ವಿರೋಧಪಕ್ಷದ ನಾಯಕರಾಗಿ ಜಗದುದರ ನಿಷ್ಪತ್ತಿಯವರ ಆಡಳಿತವನ್ನು ತಮ್ಮ ನಿಶಿತ ಮಾತುಗಾರಿಕೆಯಿಂದ ದುರ್ಬಲಗೊಳಿಸಿದವರು ಎಂಬ ಕಾರಣಕ್ಕಾಗಿ. ತಮ್ಮ ವಾಗ್ವೈಖರಿಯಿಂದ ಗಾರ್ದಭವನ್ನು ಜಾತ್ಯಾಶ್ವವನ್ನಾಗಿಯೂ, ಜಾತ್ಯಾಶ್ವವನ್ನು ಗಾರ್ದಭವನ್ನಾಗಿಯೂ ಪರಿವರ್ತಿಸುವಂಥ ಚಾಣಾಕ್ಷರು ಎಂಬ ಕಾರಣಕ್ಕಾಗಿ. ತಮಗೆ ನೆರವು ನೀಡುವ ಪಕ್ಷಗಳನ್ನು ಯಾಮಾರಿಸುವುದರಲ್ಲಿ ನಿಸ್ಸೀಮರು, ಮಹಾನ್ ಉಪದ್ರವಿಗಳು ಎಂಬ ಕಾರಣಕ್ಕಾಗಿ.
ಇನ್ನೂ ಕೆಲವರು ಅಲಾಯುಧರ ಪರವಾಗಿ ವಕಾಲತ್ತು ಮಂಡಿಸಿದರು. ಅವರಿಗೆ ಹೋಲಿಸಿದರೆ ಇವರು ವಯಸ್ಸಿನಲ್ಲಿ ಹಿರಿಯರು, ಐದು ಸಲ ಶಾಸಕರಾಗಿದ್ದಂಥವರು, ಪಕ್ಷದ ಏಳಿಗೆಗಾಗಿ ದುಡಿದವರು, ಮೇಲಾಗಿ ಹೃದಯಕ್ಕೆ ಸಂಬಂಧಿಸಿದ ವ್ಯಾಧಿಯಿಂದ ನರಳುತ್ತಿರುವವರು. ಇವರು ನಾಲ್ಕು ವರ್ಷದ ಬದುಕಿದ್ದರೆ ಹೆಚ್ಚು, ಎರಡು ವರ್ಷ ಬದುಕಿದ್ದರೆ ಕಡಿಮೆ. ಇವರು ಅಕಾಲಿಕ ಮರಣಕ್ಕೆ ತುತ್ತಾಗುವ ಸಂದರ್ಭದಲ್ಲಿ ಅನಾಹತಪಕ್ಷವನ್ನು ಶಪಿಸಿ ಕೊನೆಯುಸಿರು ಬಿಡುವುದರಲ್ಲಿ ಸಂದೇಹವಿಲ್ಲ. ಇದು ಇವರ ಸಮರ್ಥಕರು ಮಂಡಿಸಿದ ವಾದ.
ಆದರೆ ಚುನಾಯಿತ ಬಹುಪಾಲು ಶಾಸಕರಿಗೆ ಇವರ ಕುರಿತು ಅತೃಪ್ತಿ ಇರುವುದು. ಅಲಾಯುಧರು ಸರಳ ಸಜ್ಜನರು, ಆದರೆ ದುರ್ಬಲ ವ್ಯಕ್ತಿ. ಅನಕ್ಷರಸ್ಥರಾದ ಶ್ರೀಯುತರು ಐಎಎಸ್ ಅಧಿಕಾರಿಗಳ ವಿರೋಧಪಕ್ಷಗಳ ಸೂತ್ರದಗೊಂಬೆಯಾಗುವ ಅಪಾಯವಿರುವುದು. ಅಲ್ಲದೆ ಗುಣವಾಗದ ಖಾಯಿಲೆಗಳಿಂದ ನರಳುತ್ತಿರುವ ಶ್ರೀಯುತರು ಭುವನವಿಜಯವನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಿಸಲೂಬಹುದು. ತಮ್ಮ ಸಮಕಾಲೀನ ಸ್ವಾತಂತ್ರ್ಯ ಹೋರಾಟಗಾರರಂತೆ ಇವರು ಸಹ ಅಹಿಂಸಾವಾದಿಗಳು. ಭುವನವಿಜಯದಲ್ಲಿನ ವಿದ್ವಂಸಕ ಪ್ರಾಣಿಗಳನ್ನಾಗಲೀ, ಕೆರಳುತ್ತಲೇ ಇರುವ ಕಪಿತ್ಥನಗರದ ಒಳಚರಂಡಿಯನ್ನಾಗಲೀ ನಿಯಂತ್ರಿಸುವುದು ಇಂಥವರಿಂದ ಅಸಂಭವ. ತಮ್ಮ ಪಕ್ಷವನ್ನು ಉಕ್ಕಡ್ರಂಥ ಉಪದ್ರವಿಗಳು ಮಾಂಸಾಹಾರಿಗಳು ಮುನ್ನಡೆಸಬಲ್ಲರೆ ವಿನಃ ಅಲಾಯುಧರಂಥ ನಿರುಪದ್ರವಿಗಳು ಸಸ್ಯಾಹಾರಿಗಳು ಮುನ್ನಡೆಸಲಾರರು ಎನ್ನುವುದು ಬಹುತೇಕ ಶಾಸಕರ ವಾದ. ಅದಲ್ಲದೆ ಅಲಾಯುಧರು…
ವರಿಷ್ಠರನ್ನು ಖುದ್ದ ಕಂಡು ಮಹನೀಯರೆ ನಮ್ಮನ್ನು ಎರಡು ವರ್ಷದ ಅವಧಿಗೆ ರಾಜ್ಯದ ಮುಖ್ಯಮಂತ್ರಿಯನ್ನಾಗಿಸಿ, ಅಥವಾ ಉಪಮುಖ್ಯಮಂತ್ರಿಸ್ಥಾನ ನೀಡಿ, ಅದೂ ಆಗದಿದ್ದರೆ ಗೃಹಖಾತೆ ಹಣಕಾಸು ಲೋಕೋಪಯೋಗಿ ಖಾತೆಗಳನ್ನಾದರೂ ನೀಡಿ ಎಂದು ಪಟ್ಟು ಹಿಡಿದರು. ವರಿಷ್ಠರು ಕೇಳಿದ್ದಕ್ಕೆ ಉಕ್ಕಡ್ ಇಂಗ್ಲೀಷಿನಲ್ಲಿ ಒಂದೇ ಒಂದು ವಾಕ್ಯವನ್ನು ಬರೆವರೇನೋ ಕೇಳಿ, ಪ್ರತಿಯೊಂದು ಕೆಲಸಕಾರ್ಯಗಳಿಗೆ ಬಲಗೈಯ ಹೆಬ್ಬೆರಳನ್ನು ಅವಲಂಭಿಸಿರುವ ಶ್ರೀಯುತರು ಪ್ರಮುಖ ಖಾತೆಗಳನ್ನು ನಿರ್ವಹಿಸುವುದು ಸಾಧ್ಯವೆ! ನೀವೇ ಯೋಚಿಸಿ ನಿರ್ಧರಿಸಿ ಸನ್ಮಾನ್ಯರೆ ಎಂದು ಪ್ರತಿಕ್ರಿಯಿಸಿದರು. ಮೌನಕ್ಕೆ ಶರಣು ಹೋದ ಶ್ರೀಯುತ ದರ್ಭಶಯನ್ ಗುಲಾಲ್ ಅವರಂಥ ವರಿಷ್ಠರನ್ನು ಉದ್ದೇಶಿಸಿ ಪುನಃ ಉಕ್ಕಡ್ ಒಳ್ಳೆಯತನ ಅಮಾಯಕತೆಗೆ ಹೆಸರಾಗಿರುವ ಅಲಾಯುಧರ ರಾಜಕೀಯ ಭವಿಷ್ಯ ನಿರ್ಧರಿಸುವ ಹೊಣೆ ನಮಗೆ ಒಪ್ಪಿಸಿ ನಿಶ್ಚಿಂತೆಯಿಂದಿರಿ ಮಹಾನುಭಾವರೆ ಎಂದು ಮಂದ್ರಸ್ಥಾಯಿಯಲ್ಲಿ ಪಿಸುನುಡಿದರು. ಇದರಿಂದ ವರಿಷ್ಠರು ತೇಲಲೀಯದ ಕಲ್ಲುಗುಂಡುಗಳಂತಾದರು. ಮುಳುಗಲೀಯದ ಬೆಂಡುಗಳಂತಾದರು.
ಕುರುಕ್ಷೇತ್ರದಲ್ಲಿನ ತರುಣಾತಪ್ಭವನದತ್ತ ಸಯ್ಗೆ ನೇತೃತ್ವದ ಅಂತರ್ರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳು ದೃಷ್ಟಿಯನ್ನು ಕೇಂದ್ರೀಕರಿಸಿದ್ದವು. ಅಲ್ಲಿನ ರಾಜಕೀಯ ವಿದ್ಯಮಾನಗಳನ್ನು ಗೂಢಾಚಾರರಿಂದ ಸಂಗ್ರಹಿಸಿ ಪರಿಶೀಲಿಸುತ್ತಿದ್ದವು. ವಿಳಂಬವನ್ನು ಪ್ರಶ್ನಿಸುತ್ತಿದ್ದವು. ಸಂಭವನೀಯ ಮುಖ್ಯಮಂತ್ರಿಗಳ ಆಯ್ಕೆಯ ಸಾಧಕ ಬಾಧಕ ಕುರಿತು ವರಿಷ್ಠರಿಗೆ ಸೂಕ್ತ ಸಲಹೆ ಸೂಚನೆ ನೀಡುತ್ತಿದ್ದವು. ಇನ್ನೂ ವಿಳಂಬವಾದಲ್ಲಿ ತಮ್ಮ ಹಸ್ತಕ್ಷೇಪ ಅನಿವಾರ್ಯವೆಂದು ಎಚ್ಚರಿಸುತ್ತಿದ್ದವು. ಅನಾಹತಪಕ್ಷದ ಅದೃಷ್ಟವೋ ಎಂಬಂತೆ ಮಹಿಷ್ಮತಿರಾಜ್ಯದ ರಾಜ್ಯಪಾಲ ಗುಣಾಧಮ ಕಾಲ್ಗೊದ್ ಮತಗಳ ಎಣಕೆಯ ದಿವಸದಂದು ಪಾಶ್ರ್ವವಾಯು ಪೀಡಿತರಾದರು. ರಾಷ್ಟ್ರಪತಿಗಳು ರಾಜಿನಾಮೆ ಸಲ್ಲಿಸುವಂತೆ ಸೂಚಿಸಿದರು. ಆದರೆ ಅಪ್ಪಟ ಸಸ್ಯಾಹಾರಿಗಳಾದ ಘನವೆತ್ತರು ರಾಜಿನಾಮೆ ಸಲ್ಲಿಸುವಂಥ ದುಡುಕು ನಿರ್ಧಾರ ಕೈಗೊಳ್ಳಲಿಲ್ಲ. ಮಹಿಷ್ಮತಿರಾಜ್ಯದ ಸರ್ಕಾರಿ ವೆಚ್ಚದಲ್ಲಿ ವ್ಯಾಧಿಗೆ ಸೂಕ್ತಚಿಕಿತ್ಸೆ ಪಡೆಯುವುದೆಂದು ನಿಶ್ಚಯಿಸಿದರು. ಕುಟುಂಬ ಸದಸ್ಯರೊಡನೆ ವಿಶೇಷ ವಿಮಾನದಲ್ಲಿ ಅಮೇರಿಕಾಕ್ಕೆ ಪ್ರಯಾಣ ಬೆಳೆಸಿದರು. ಕಾಲ್ಗೊದ್ ಅವರ ಸಮಯೋಚಿತ ವರ್ತನೆ ರಾಷ್ಟ್ರಪತಿಗಳಿಗೆ ಹಿಡಿಸಿತು. ಅವರು ಬೇಸರ ಮಾಡಿಕೊಳ್ಳಲಿಲ್ಲ. ಅರವರಾಜ್ಯದ ಶ್ರೀ ಪರಜಾತ್ ನಿರಾಕಾರ್ ಅವರನ್ನು ಮಹಿಷ್ಮತಿರಾಜ್ಯದ ಪ್ರಭಾರ ರಾಜ್ಯಪಾಲರನ್ನಾಗಿ ನೇಮಿಸಿದರು. ಘನವೆತ್ತರು ರಾಜಭವನದ ವೈಭವವನ್ನು ಅರ್ಥ ಮಾಡಿಕೊಳ್ಳಲು, ರಾಜ್ಯದ ರಾಜಕೀಯದ ಪೂರ್ವಾಪರ ಅಧ್ಯಯನ ಮಾಡಲು ತಮ್ಮ ಅಮೂಲ್ಯ ಸಮಯವನ್ನು ಮೀಸಲಿರಿಸಿದರು. ಆದರೆ ಕುರುಕ್ಷೇತ್ರದಲ್ಲಿನ ವಿದ್ಯಾಮಾನಗಳನ್ನು ಅರಿಯಲು ವಿಳಂಬ ನೀತಿಯನ್ನು ಅನುಸರಿಸಿದರು.
ಒಂದೆರಡು ದಿವಸಗಳಿಂದ ರಾಜ್ಯದ ದೇಶದ ವಿದೇಶಗಳ ಮಾಧ್ಯಮಗಳ ಪತ್ರಿಕೆಗಳ ವರದಿಗಾರರು ಕುರುಕ್ಷೇತ್ರದಲ್ಲಿ ಬೀಡುಬಿಟ್ಟಿದ್ದರು. ತರುಣಾತಪ್ಭವನವನ್ನು ಸುತ್ತುವರಿದಿದ್ದರು. ಒಳಗಿನ ಗೋಪ್ಯತೆಯನ್ನು ಅರ್ಥ ಮಾಡಿಕೊಳ್ಳಲು ಹೆಣಗುತ್ತಿದ್ದರು. ಅವರಿವರು ಹೇಳಿದ್ದನ್ನು ದಾಖಲಿಸಿಕೊಳ್ಳುತ್ತಿದ್ದರು. ವಾರ್ತೆಗಳನ್ನು ಪತ್ರಿಕೆಗಳಿಗೆ ಮಾಧ್ಯಮಗಳಿಗೆ ರವಾನಿಸುತ್ತಿದ್ದರು. ಆಯಾ ಪತ್ರಿಕೆಗಳ ಸಂಪಾದಕರು ವಾರ್ತೆಗಳನ್ನು ಆಶ್ಚರ್ಯಚಕಿತ ಹಾಗೂ ಪ್ರಶ್ನಾರ್ಥಕ ಚಿಹ್ನೆಗಳಿಂದ ಅಲಂಕರಿಸಿ ಪ್ರಕಟಿಸುತ್ತಿದ್ದರು. ಮುಖ್ಯವಾಗಿ ಮಹಿಷ್ಮತಿರಾಜ್ಯದ ಮುಗ್ದ ಪ್ರಜಾನಿಕ ಅವುಗಳನ್ನು ಓದಿ ಪುಳಕಗೊಳ್ಳುತ್ತಿದ್ದರು. ಕ್ಷೇತ್ರಪಾಲ್ ಅಭಿಮಾನಿಗಳೂ ಅಲಾಯುಧ ಅಭಿಮಾನಿಗಳೂ ಅಲ್ಲಲ್ಲಿ ಪಟಾಕಿ ಸ್ಪೋಟಿಸಿ ಸಂಭ್ರಮಿಸುತ್ತಿದ್ದರು. ಅವರು ಎಂದು ಇವರೂ ಇವರು ಎಂದು ಅವರೂ ಪಂದ್ಯಾಟಗಳನ್ನು ಆಡುತ್ತ ತಮ್ಮತಮ್ಮ ಮನಸ್ಸನ್ನು ರಂಜಿಸಿಕೊಳ್ಳುತ್ತಿದ್ದರು. ಆ ಪಂದ್ಯಾಟ ಜೂಜಾಟವಾಗಿ ಮಾರ್ಪಟ್ಟಿತು, ಅದರಲ್ಲಿ ಕೋಟ್ಯಾಂತರ ಹಣದ ವಹಿವಾಟು ಆರಂಭವಾಯಿತು.
ಇದಕ್ಕೆ ಕಳಸಪ್ರಾಯವಾಗಿ ಕುಮಾರಿ ನಮುಚಿ ಕ್ಷೇತ್ರಪಾಲ್ ಮುಖ್ಯಮಂತ್ರಿಸ್ಥಾನ ಅಲಂಕರಿಸಬೇಕೆಂದು ಕನಸು ಕಾಣುತ್ತಿದ್ದಳು. ಕಾರಣ ಸನ್ಮಾನ್ಯ ಉಕ್ಕಡ್ ತಾವು ಮುಂದೆ ಮುಖ್ಯಮಂತ್ರಿಯಾದಲ್ಲಿ ಕಪಿತ್ಥನಗರದಲ್ಲಿ ವಿಶ್ವಸುಂದರಿಯರ ಸ್ಪರ್ಧಿ ಆಯೋಜಿಸುವುದಾಗಿ ಆಕೆಗೆ ವಾಗ್ದಾನ ನೀಡಿದ್ದರು. ಹ್ಹಾಂ! ನಮುಚಿ! ಮುವ್ವತ್ತೈದರ ಹೊಸ್ತಿಲಲ್ಲಿರುವ ಆಕೆ ಚೆಲುವೆ ಅಲ್ಲದಿದ್ದರೂ ಕುರೂಪಿಯಂತೂ ಖಂಡಿತ ಅಲ್ಲ. ಉದನ್ವತ್ ನಗರದಲ್ಲಿ ನಡೆದ ಕ್ರೀಡಾಕೂಟದಲ್ಲಿನ ಕುಸ್ತಿಪಂದ್ಯದಲ್ಲಿ ರಜತಪದಕ ಗಳಿಸಿದ್ದಳು. ಯಾಲಪಿಯಲ್ಲಿ ನಡೆದ ದೇಹದಾಡ್ರ್ಯಸ್ಪರ್ಧಿಯಲ್ಲಿ ಕಂಚಿನ ಪದಕ ಗಳಿಸಿದ್ದಳು. ರಾಷ್ಟ್ರದ ಕೀರ್ತಿಪತಾಕೆಯನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಳು. ಕೇಂದ್ರ ಸಕರ್ಾರ ಸಾಲಿಯಾನ ನೀಡುವ ಪ್ರತಿಷ್ಠಿತ ಗಾಂಢೀವಿ ಪ್ರಶಸ್ತಿಗೆ ಭಾಜನಳಾಗಿದ್ದಳು. ದೇಶದ ಪ್ರತಿಷ್ಠಿತ ರಾಜಕಾರಣಿಗಳ ಉದ್ಯಮಿಗಳ ಪ್ರೀತಿ ವಿಶ್ವಾಸ ಸಂಪಾದಿಸಿದ್ದಳು. ಕೆಲವು ಕಾರ್ಪೊರೇಟ್ ಕಂಪನಿಗಳ ರಾಯಭಾರಿಯಾಗಿದ್ದಳು. ದೇಶ ವಿದೇಶಗಳಲ್ಲಿ ಮಿಂಚಿನಂತೆ ಸುಳಿದಾಡುತ್ತಿದ್ದಳು. ಕೆಲವು ಕಡೆ ತಾಲ್ಲೂಕು ಮಟ್ಟದ ಜಿಲ್ಲಾ ಮಟ್ಟದ ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆ ಏರ್ಪಡಿಸಿ ಋಣಾನುಬಂಧ ಯಜ್ಞೋಪವೀತ ಜ್ಞಾನಕಾರಣ ಪಕ್ಷಗಳ ಕೆಂಗಣ್ಣುಗಳನ್ನು ಜೀರ್ಣಿಸಿಕೊಂಡಿದ್ದಳು. ವಿಶ್ವಸುಂದರಿಯರ ಸ್ಪರ್ಧೆ ಏರ್ಪಡಿಸಿ ಮಹಿಷ್ಮತಿರಾಜ್ಯದ ಪ್ರವಾಸೋದ್ಯಮವನ್ನು ಅಂತರ್ರಾಷ್ಟ್ರೀಯವಾಗಿ ವಿಸ್ತರಿಸಬೇಕೆಂದು ಕನಸು ಕಾಣುತ್ತಿದ್ದಳು. ತನ್ನ ತಾಯಿ ಕುಮಾರಿ ತನೂದರಿ ಸುವಿಖ್ಯಾತ ಕಿಕ್ ಬಾಕ್ಸರ್! ಏಷ್ಯನ್ ಹಾಗೂ ಕಾಮನ್ವೆಲ್ತ್ ಕ್ರೀಡೋತ್ಸವಗಳಲ್ಲಿ ಪದಕಗಳನ್ನು ಗಳಿಸಿದ್ದರು. ಬಾಕ್ಸಿಂಗ್ ಪಂದ್ಯಾವಳಿ ಉದ್ಘಾಟಿಸಲೆಂದು ಕಪಿತ್ಥನಗರದ ಹೊರವಲಯದಲ್ಲಿರುವ ಕಿನಾಶನಗರಿಗೆ ಬಂದಿದ್ದರು. ಧ್ವನಿವರ್ಧಕದ ಸದ್ದಿಗೆ ಹೃದಯಸ್ತಂಭಿಸಿ ಇಹಲೋಕ ತ್ಯಜಿಸಿದರು. ಕಿನಾಶನಗರಿಯ ಹೃದಯಭಾಗದಲ್ಲಿರುವ ರಸ್ತೆಗೆ ತನೂದರಿ ಮಾರ್ಗ ಎಂದು ನಾಮಕರಣ ಮಾಡಲಾಗಿರುವುದು. ಪ್ರತಿವರ್ಷ ಆಕೆಯ ಹೆಸರಿನಲ್ಲಿ ಬಾಕ್ಸಿಂಗ್ ಪಂದ್ಯಾವಳಿಯನ್ನು ಸರ್ಕಾರದ ಕ್ರೀಡಾಇಲಾಖೆ ಏರ್ಪಡಿಸುತ್ತಿರುವುದು. ಇದಕ್ಕೆಲ್ಲ ಕಾರಣ ಶ್ರೀಯುತ ಉಕ್ಕಡ್ ಅವರು. ಅಂಥ ಕ್ರೀಡಾಪ್ರೇಮಿಗಳು ಸೌಂದರ್ಯೋಪಾಸಕರು ಮಹಿಷ್ಮತಿರಾಜ್ಯದ ಮುಖ್ಯಮಂತ್ರಿಸ್ಥಾನವನ್ನು ಅಲಂಕರಿಸಿದರೆಂದರೆ! ಕಪಿತ್ಥನಗರದಲ್ಲಿ ವಿಶ್ವಸುಂದರಿಯರ ಸ್ಪರ್ಧಿ ಏರ್ಪಡಿಸಿದರೆಂದರೆ! ಅದಕ್ಕೆ ಪ್ರಪಂಚದ ನಾನಾ ಮೂಲೆಗಳಲ್ಲಿರುವ ಕಾರ್ಪೊರೇಟ್ ಕಂಪನಿಗಳು ತನ್ನನ್ನು ಸಂಪರ್ಕಿಸುವುದೆಂದರೆ! ಹಲವು ದೇಶಗಳಲ್ಲಿನ ಸುಂದರಿಯರ ನಿಕಟ ಪರಿಚಯ ತನಗಾವುದೆಂದರೆ! ಓಹ್ ತನ್ನ ಇಮೇಜ್ ಜಗತ್ತಿನಾದ್ಯಂತ ವ್ಯಾಪಿಸುವುದರಲ್ಲಿ ಸಂದೇಹವಿಲ್ಲ! ಬುದ್ದ ಭಗವಾನ್ ನಿನ್ನ ದಯೆ ನಮ್ಮ ಕ್ಷೇಪ್ರಪಾಲ್ ಉಕ್ಕಡ್ ಮೇಲಿರಲಿ, ಅವರು ಮುಖ್ಯಮಂತ್ರಿಸ್ಥಾನವನ್ನು ಶೀಘ್ರ ಅಲಂಕರಿಸಲಿ ಎಂದು ಬೇಡಿಕೊಂಡಳು.
ಆಕೆಯ ಮನೋಭಿಲಾಷೆಯನ್ನು ಮಾಧ್ಯಮದವರು ಸೂಕ್ಷ್ಮವಾಗಿ ಗ್ರಹಿಸಿದರು. ಮೆಲ್ಲಗೆ ಸಮೀಪಿಸಿದರು. ಅದೃಷ್ಟವಶಾತ್ ಉಕ್ಕಡ್ ಮುಖ್ಯಮಂತ್ರಿಯಾದರೆ ನಿಮ್ಮ ಸಂತೋಷವನ್ನು ಹೇಗೆ ಅಭಿವ್ಯಕ್ತಿಸುವಿರಿ? ಎಂದು ಕೇಳಿದರು. ಅದಕ್ಕೆ ಕು ನಮುಚಿ ಪರಾವರ್ತಿತ ಪ್ರತಿಕ್ರಿಯೆಗೆ ಒಳಪಟ್ಟು ಓಹ್ ವಂಡರ್ಫುಲ್! ಆ ಗ್ರೇಟ್ಮ್ಯಾನ್ ಛೀಫ್ ಮಿನಿಸ್ಟರ್ ಆದರೆ ನಾನು ನಗ್ನಳಾಗಿ ಕಪಿತ್ಥನಗರದಲ್ಲಿರುವ ಬ್ರಹ್ಮಚರ್ಯಾಣುವ್ರತ ರಸ್ತೆಯಲ್ಲಿ ಓಡುವೆನು ಎಂದು ಹೇಳಿದಳು. ತರುಣ ಪತ್ರಕರ್ತರು ಆಕೆಯ ಮಾತನ್ನು ಹಷರ್ೋದ್ಗಾರ ಸಹಿತ ಸ್ವಾಗತಿಸಿದರು ಓಹ್! ವೆರ್ರಿ ನೈಸ್ ಡಿಸಿಷನ್! ಬಟ್ ಡೇ ಟೈಮ್ನಲ್ಲೋ ನೈಟ್ ಟೈಮ್ನಲ್ಲೋ ಎಂದು ಕೇಳಿದರು. ಅದಕ್ಕೆ ಆಕೆ ಅಫ್ ಕೋರ್ಸ್ ಡೇ ಟೈಮ್ನಲ್ಲಿ ಎಂದಳು. ಆಕೆಯ ಪ್ರೋತ್ಸಾಹದಾಯಕ ನಿರ್ಧಾರ ಮಾರನೆ ದಿವಸ ಎಲ್ಲಾ ಪತ್ರಿಕೆಗಳ ಮುಖಪುಟಗಳಲ್ಲಿ ಪ್ರಕಟವಾಯಿತು. ಎಂದಿನಂತೆ ಯಜ್ಞೋಪವೀತ ಋಣಾನುಬಂಧ ಜ್ಞಾನಕಾರಣಗಳಂಥ ಸನಾತನ ಪಕ್ಷಗಳು ಮನನೊಂದು ಕಠಿಣಮಾತುಗಳಲ್ಲಿ ಖಂಡಿಸಿದವು. ಬ್ರಹ್ಮಚರ್ಯಾಣುವ್ರತ ಬಡಾವಣೆವಾಸಿಗಳಲ್ಲಿನ ಮಹಿಳೆಯರು ಕನಲಿದರು. ಇಂಥವರಿಂದ ಸನಾತನ ಧರ್ಮ ರಕ್ಷಿಸಲು ಆ ಭಗವಂತನು ಪಾಂಚಜನ್ಯ ಮೊಳಗಿಸಬಾರದೆ, ಸುದರ್ಶನಚಕ್ರ ಪ್ರಯೋಗಿಸಬಾರದೆ ಎಂದು ಮೊರೆ ಇಟ್ಟರು. ಈ ಹೇಳಿಕೆ ನಗರದ ಸಾಹಿತ್ಯಿಕ ಸಾಂಸ್ಕೃತಿಕ ವಲಯದಲ್ಲೂ ಸಂಚಲನ ಸೃಷ್ಠಿಸಿತು. ನಗರದಲ್ಲಿನ ಸ್ಥಳೀಯ ಉದಯೋನ್ಮುಖ ಕವಿ ಹೆಡ್ ಲೈಟ್ಸ್ ಮಡ್ ಗಾರ್ಡ್ ಇಲ್ಲದ ವಾಹನವೆ ಎಂಬ ಹೆಸರಿನ ಕವಿತೆ ರಚಿಸಿದ, ಇನ್ನೇನು ಅದು ಭೃಂಗಾರ ಮಾಸಪತ್ರಿಕೆಯಲ್ಲಿ ಪ್ರಕಟವಾಗುಷ್ಟರಲ್ಲಿ!
ಅನಾಹತಪಕ್ಷದ ರಾಷ್ಟ್ರೀಯ ವರಿಷ್ಠರು ಪರಸ್ಪರ ಮುಖಗಳನ್ನು ನೋಡಿಕೊಳ್ಳುತ್ತ ಕಾಲಹರಣ ಎಲ್ಲಿಯವರೆಗೆ ಮಾಡುತ್ತ ಇರಲಾದೀತು! ಕ್ಷೇತ್ರಪಾಲ್ ಅಲಾಯುಧರು ಪರಸ್ಪರ ಸಮಾಲೋಚಿಸಿದರು. ತಮ್ಮ ನಿರ್ಧಾರವನ್ನು ಗೋಪ್ಯವಾಗಿ ಇರಿಸಿದರು. ಅಲಾಯುಧರ ಮಾತಿನಿಂದ ವರಿಷ್ಠರು ಸಂಪ್ರೀತರಾದರು. ತಮ್ಮ ಪಕ್ಷದಿಂದ ಚುನಾಯಿತ ಸದಸ್ಯರನ್ನು ಬೀಳ್ಕೊಡುವ ಮುನ್ನ ಮೌಲಿಕ ಮಾತುಗಳನ್ನು ನುಡಿದರು. ಕ್ಷೇತ್ರಪಾಲರನ್ನು ಹತ್ತಿರ ಕರೆದು ನಮುಚಿ ನಗ್ನಳಾಗಿ ಓಡದಂತೆ ಎಚ್ಚರ ವಹಿಸಿ, ಆಕೆಯ ಸೌಕುಮಾರ್ಯ ವರ್ತನೆಯಿಂದ ಪಕ್ಷದ ಇಮೇಜ್ ಹಾಳಾಗುವುದು ಎಂದು ಸೂಚಿಸಿದರು. ಕಿಕ್ಕಿರಿದ ಮಾಧ್ಯಮಗಳನ್ನು ಉದ್ದೇಶಿಸಿ ಶ್ರೀಕ್ಷೇತ್ರಪಾಲ್ ಉಕ್ಕಡ ಮಹಿಷ್ಮತಿರಾಜ್ಯದ ಮುಖ್ಯಮಂತ್ರಿ ಎಂದೂ ಘೋಷಿಸಿದರು. ಅಲಾಯುಧ ಅದನ್ನು ಅನುಮೋದಿಸಿದರು. ಕಾರ್ಪೊರೇಟ್ ಕಂಪನಿಗಳು ವರಿಷ್ಠರ ನಿರ್ಧಾರವನ್ನು ಅಂಗೀಕರಿಸಿದವು. ರಾಜ್ಯದ ದೇಶದ ಪ್ರಮುಖ ದೈನಿಕಗಳು ಮುಖಪುಟಗಳಲ್ಲಿ ಸುದ್ದಿ ಪ್ರಕಟಿಸಿದವು. ರಾಜಕೀಯ ವಿಶ್ಲೇಷಕರು ಎಂದಿನಂತೆ ಅಂಕಣಗಳಲ್ಲಿ ತಮ್ಮತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಿಸಿದರು.
ಶಾಸಕರೊಂದಿಗೆ ಶ್ರೀ ಕ್ಷೇತ್ರಪಾಲ ವಿಶೇಷ ವಿಮಾನದಲ್ಲಿ ಕುರುಕ್ಷೇತ್ರದಿಂದ ನಿರ್ಗಮಿಸಿ ಕಪಿತ್ಥನಗರದ ಅಭಿಸಾರ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಪಕ್ಷದ ಕಾರ್ಯಕರ್ತರು ಅವರನ್ನು ಅಭಿಮಾನಪೂರ್ವಕವಾಗಿ ಸ್ವಾಗತಿಸಿದರು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳು ವಾದ್ಯ ಪರಿಕರಗಳನ್ನು ನುಡಿಸಿದವು ನರ್ತಿಸಿದವು. ಉಕ್ಕಡ್ರವರ ಕೌಟುಂಬಿಕ ಗ್ರಾಮೀಣ ಪರಿಸರವನ್ನು ನೆನಪಿಸಿದವು. ಪ್ರಭಾವಿತರಾದ ಶ್ರೀಯುತರು ಕಾರ್ಯದರ್ಶಿಗಳ ಮನವಿಯನ್ನು ಲೆಕ್ಕಿಸದೆ ವಾಹನದಿಂದ ಕೆಳಗೆ ಧುಮುಕಿದರು. ಭದ್ರತಾ ಪಡೆಯಿಂದ ಬೇರ್ಪಟ್ಟರು. ತಲೆಗೆ ಬಹುವರ್ಣದ ವಲ್ಲಿ ಸುತ್ತಿದರು. ಜಾನಪದ ಕಲಾವಿದರೊಂದಿಗೆ ಬೆರೆತರು. ಮದ್ದಳೆ ಡೊಳ್ಳು ಬಾಜಾ ಭಜಂತ್ರಿಗಳ ನಿನಾದ ತಾರಕಕ್ಕೇರಿತು. ಪಟಾಕಿಗಳ ಸದ್ದು ಮುಗಿಲಿಗೆ ಆವರಿಸಿತು. ಬಣ್ಣಗಳ ಎರಚಾಟ ಅವ್ಯಾಹತವಾಗಿ ನಡೆಯಿತು. ಹೋಳಿವೋಕಳಿಗೆ ಪುನರ್ಜನ್ಮ ನೀಡಿತು. ಬಣ್ಣಗಳ ಸಿಂಪರಣೆ ಸಂಭವನೀಯ ಮುಖ್ಯಮಂತ್ರಿಗಳ ಮೂಲ ಚಹರೆಯನ್ನು ಬದಲಿಸಿತು. ನಿನಾದ ಬಣ್ಣಗಳಿಂದ ಸ್ಪೂರ್ತರಾದ ಉಕ್ಕಡ ಕಲಾವಿದನೋರ್ವನ ಕೈಯಲ್ಲಿದ್ದ ತಮಟೆಯನ್ನು ಕಸಿದುಕೊಂಡರು. ಮೈಮರೆತು ನುಡಿಸಲಾರಂಭಿಸಿದರು, ನುಡಿಸುತ್ತ ನರ್ತಿಸಲಾರಂಭಿಸಿದರು. ಮಾಧ್ಯಮಲೋಕದ ಛಾಯಾಗ್ರಾಹಕರು ಅವರ ನರ್ತನದ ವಿವಿಧ ಭಂಗಿಗಳನ್ನು ಸೆರೆಹಿಡಿಯಲಾರಂಭಿಸಿದರು, ಜೊತೆಗೆ ತಮ್ಮತಮ್ಮ ವಾಹಿನಿಗಳಿಗೆ ರವಾನಿಸಲಾರಂಭಿಸಿದರು. ಆ ಟೀವಿ, ಈ ಟೀವಿ, ಓಹೋ ಟೀವಿಗಳು ಸೇರಿದಂತೆ ಹಲವು ವಾಹಿನಿಗಳು ಆ ದೃಶ್ಯಾವಳಿಯನ್ನು ಪ್ರಸಾರ ಮಾಡಲಾರಂಭಿಸಿದವು.
ಅದೇ ಸಂದರ್ಭದಲ್ಲಿ ನಮುಚಿ ಕಪಿತ್ಥನಗರದ ಕೀಟಾಲಯ್ ಹೆಸರಿನ ಪ್ರತಿಷ್ಠಿತ ಪಂಚತಾರ ಹೋಟಲ್ನಲ್ಲಿ ವಾಸ್ತವ್ಯ ಹೂಡಿದ್ದಳು. ಕೇವಲ ಒಂದೆರಡು ಪಾರದರ್ಶಕ ಒಳಉಡುಪುಗಳನ್ನು ಧರಿಸಿ ಅತ್ಯಾಧುನಿಕ ಶೈಲಿಯ ವ್ಯಾಯಾಮಗಳನ್ನು ಮಾಡುವುದರಲ್ಲಿ ನಿರತಳಾಗಿದ್ದಳು. ಇನ್ನೊಂದು ಕಡೆ ಕಸರತ್ತಿಗೆ ಸಂಬಂಧಿಸಿದ ಸಂಗೀತವನ್ನು ಆಸ್ವಾದಿಸುತ್ತಿದ್ದಳು, ಇನ್ನೊಂದು ಕಡೆ ಬ್ರೇವಿಯಾ ಟೀವಿ ಪ್ರಸಾರ ಮಾಡುತ್ತಿದ್ದ ದೃಶ್ಯಾವಳಿಗಳನ್ನು ವಾರೆನೋಟದಿಂದ ಈಕ್ಷಿಸುತ್ತಿದ್ದಳು. ತನ್ನ ಎಡಗಾಲನ್ನು ಲಂಬವಾಗಿ ಮೇಲೆತ್ತಿದ್ದಳು, ಅಲ್ಲದೆ ಬಲಗಾಲ ಸಂದಿಯಿಂದ ಎರಡೂ ಕೈಗಳನ್ನು ಪೋಣಿಸಿ ವಿಶಿಷ್ಟ ನಮಸ್ಕಾರ ಭಂಗಿಯಲ್ಲಿ ನಿಂತಿದ್ದಳು, ಪತಂಜಲಿ ಪಾಣಿನಿಯರನ್ನು ಹಿಂದಿಕ್ಕಲೆಂದು ಆ ಹೊಸ ಆಸನವನ್ನು ಸಂಶೋಧಿಸಿದ್ದಳು, ಅದನ್ನು ಅಶಾಸ್ತ್ರೋಕ್ತ ರೀತಿಯಲ್ಲಿ ಅಭ್ಯಾಸ ಮಾಡುತ್ತಿದ್ದಳು, ಅದೂ ಟೀವಿಗೆ ಅಭಿಮುಖಳಾಗಿ. ಆ ದೃಶ್ಯಾವಳಿ ತನ್ನ ಏಕಾಗ್ರತೆಯನ್ನು ಕದಡಿತು, ಪರವಶಗೊಳಿಸಿತು. ಅರೆ ಕ್ಷೇತ್ರಪಾಲ್ ಉಕ್ಕಡ್! ಎಂದು ಉದ್ಗರಿಸಿದಳು. ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ನಿರ್ಧರಿಸಿದಳು. ಲಗುಬಗೆಯಿಂದ ಸಡಿಲ ಉಡುಪುಗಳನ್ನು ಧರಿಸಿದಳು ಅಸ್ತವ್ಯಸ್ತವಾಗಿ. ಅರು ಅಡಿ ವಿಸ್ತೀರ್ಣ ದೇಹದ ಆ ಚೆಲುವೆ ಕೋಣೆಯಿಂದ ಹೊರಟಿದ್ದಾಗಲೀ, ಹೋಟಲ್ನ ಪಾರ್ಕಿಂಗ್ ಏರಿಯಾ ಸೇರಿದ್ದಾಗಲೀ, ತನ್ನ ಸ್ಕೋಡಾ ಗುರುತಿಸಿದ್ದಾಗಲೀ ವಿಳಂಬವಾಗಲಿಲ್ಲ. ರಸ್ತೆಯ ನೀತಿನಿಯಮಾವಳಿಗಳನ್ನು ಅನುಕ್ರಮವಾಗಿ ಉಲ್ಲಂಘಿಸುತ್ತಲೂ, ನೂರೆಂಭತ್ತು ಕಿಲೋಮೀಟರ್ ವೇಗದಲ್ಲಿ ಸ್ಕೋಡಾ ಚಲಿಸುತ್ತಲೂ..
ಓಹ್ ನಮುಚಿ! ಮಾಧ್ಯಮದವರು ಉದ್ಗರಿಸಿದರು. ಕಾರ್ಯಕರ್ತರು ಆಕೆಯತ್ತ ಹೂವುಗಳನ್ನೊಂದೇ ಅಲ್ಲದೆ ಬಣ್ಣಗಳನ್ನು ಎರಚಿ ಸ್ವಾಗತಿಸಿದರು. ಮೆರವಣಿಗೆಯ ಸಮ್ಮೋಹಕ ವಾತಾವರಣದಿಂದ ಪ್ರಭಾವಿತಳಾದ ಕುಮಾರಿ ಮುಖ್ಯಮಂತ್ರಿಗಳ ಸಂಗಡ ಏರೋಬಿಕ್ ವ್ಯಾಯಾಮ ಆರಂಭಿಸಿದಳು. ಅದರಿಂದ ಕಾರ್ಯಕರ್ತರ ಉತ್ಸಾಹ ರಣಕೇಕೆಯಾಗಿ ಮಾರ್ಪಟ್ಟಿತು. ಆ ದೃಶ್ಯಾವಳಿ ಸಜೀವವಾಗಿ ಪ್ರಸಾರ ಮಾಡುತ್ತ ವಾಹಿನಿಗಳು ತಮ್ಮತಮ್ಮ ಟಿಆರ್ಪಿ ರೇಟ್ ಹೆಚ್ಚಿಸಿಕೊಂಡವು. ಅ ಶೋಭಾಯಾತ್ರೆ ಎಷ್ಟೊಂದು ಪ್ರಭಾವಶಾಲಿಯಾಗಿತ್ತೆಂದರೆ! ಅದೇ ಸಮಯಕ್ಕೆ ಸರಿಯಾಗಿ ನ್ಯಾ ಆದಿತ್ಯೋಪಾಸಕ್ಕದ್ರು ಸರ್ವೋಚ್ಚನ್ಯಾಯಾಲಯಕ್ಕೆ ವರ್ಗವಾಗಿದ್ದರು. ಹೊಸದಾಗಿ ನೇಮಕವಾಗಿದ್ದ ನ್ಯಾಯಮೂರ್ತಿ ಪಿಂಗಾಕ್ಷ ಶ್ರಾವಸ್ಥಿ ಅವರಿಗೆ ಅಧಿಕಾರವನ್ನು ಹಸ್ತಾಂತರಿಸುವ ಕಾರ್ಯ ಆರಂಭಿಸಿದ್ದರು. ಶೋಭಾಯಾತ್ರೆಯ ದೃಶ್ಯಾವಳಿಯಿಂದ ಪ್ರಭಾವಿತರಾಗಿ ತಾವೂ ಯಾವುದೋ ಜಾನಪದ ಗೀತೆಯನ್ನು ಸ್ಮರಿಸಿಕೊಂಡು ಮೆಲ್ಲಗೆ ಗೊಣಗುತ್ತಿದ್ದರು, ಅಲ್ಲದೆ ತಮಗರಿವಿಲ್ಲದ ರೀತಿಯಲ್ಲಿ ನರ್ತಿಸುತ್ತಿದ್ದರು.
ಹ್ಹಾಂ! ಅಂದಹಾಗೆ ಅದೇ ವಿಮಾನ ನಿಲ್ದಾಣದ ರಸ್ತೆಯ ಎಡಪಕ್ಕ ಕಲ್ಯಾಣ ಮಂಟಪವಿತ್ತು. ಹೆಸರು ಮಾಂಗಲ್ಯ. ಅಲ್ಲಿ ವಿವಾಹ ಸಮಾರಂಭಗಳು ನಡೆಯುತ್ತಿದ್ದುದೇ ಅಪರೂಪ. ಆ ಏರಿಯಾದ ದಾದಾ ಪುಣ್ಯಚರಣ್ ಪಿಂಡಾರಿ ಅದರ ಮಾಲಕ. ಅವನ ಅನುಯಾಯಿಗಳು ಸಭ್ಯ ನಾಗರಿಕರಲ್ಲ. ಅತ್ಯಾಚಾರ ಮಾನಭಂಗ ಸರಗಳ್ಳತನ ಸುಲಿಗೆ ಅವರ ದೈನಂದಿನ ಕಸುಬು. ಹೊಸ ಡಿವೈಎಸ್ಪಿ ಡಾ ಜುಂಜೂಟಿಯ ಭಯದಿಂದ ಅವರೆಲ್ಲರು ಅದೇ ಮಾಂಗಲ್ಯದ ನೆಲಮಹಡಿಯನ್ನು ತಮ್ಮ ಅಡಗುದಾಣವನ್ನಾಗಿಸಿಕೊಂಡಿದ್ದರು, ಅದೂ ಬಾಸ್ ಪಿಂಡಾರಿ ಸಲಹೆಯಂತೆ. ತಮ್ಮಟೆಗಳ ಸದ್ದು ಕೇಳಿಸಿಕೊಂಡವರೆ ಪುಳಕಿತರಾದರು, ಕಾರಣ ಒಂದು ಕಾಲದಲ್ಲಿ ತಾವು ಚರ್ಮವಾದ್ಯಗಳನ್ನು ನುಡಿಸುತ್ತಿದ್ದವರೆ. ತಾವಿದ್ದಲ್ಲಿಯೇ ಕುಣಿದು ಕಪ್ಪಳಿಸಿದರು. ಜುಂಜೂಟಿ ಮುಖ್ಯಮಂತ್ರಿಗಳ ಶೋಭಾಯಾತ್ರೆಯಲ್ಲಿ ಪಾಲ್ಗೊಂಡವರನ್ನು ಉದಾರತೆಯಿಂದ ಕ್ಷಮಿಸಬಹುದೆಂದು ಭಾವಿಸಿದರು. ಇಲಿಹೆಗ್ಗಣಗಳು ಬೋನುಗಳಿಂದ ಹೊರಬರುವ ರೀತಿಯಲ್ಲಿ ಅವರೆಲ್ಲರೂ ಒಬ್ಬೊಬ್ಬರಾಗಿ ಮಾಂಗಲ್ಯಭವನದಿಂದ ಹೊರಗೆ ಕಾಣಿಸಿಕೊಂಡರು. ಕ್ಷೇತ್ರಪಾಲರ ತಮಟೆ ಸದ್ದಿಗೆ ಲಯಬದ್ದವಾಗಿ ನರ್ತಿಸಲಾರಂಭಿಸಿದರು. ಅದೂ ಜುಂಜೂಟಿ ಸಮಕ್ಷಮದಲ್ಲಿ. ಪಾತಕಿಗಳು ಮುಖ್ಯಮಂತ್ರಿಗಳ ಅಭಿಮಾನಿಗಳೋ! ಬಂಧುವರ್ಗದವರೋ! ಅನುಮಾನಿಸಿ ಪೋಲಿಸ್ ಅಧಿಕಾರಿ ಅವರನ್ನು ನೋಡಿಯೂ ನೋಡದವರಂತೆ ಮೌನವಾಗಿದ್ದರು. ಹಾಗೆಯೇ ನಾನಾ ಅಪರಾಧಿಗಳು ಆರೋಪಿಗಳು ಕಾರುಣ್ಯ ಪರಿಕರ್ಮ ಹವೀಕ ಸೇರಿದಂತೆ ಹಲವು ಅಡಗುದಾಣಗಳಿಂದ ಹೊರಬಂದರಲ್ಲದೆ ಶೋಭಾಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅವರೆಲ್ಲರಿಂದಾಗಿ ಶೋಭಾಯಾತ್ರೆ ಸಮ್ಮೋಹಕವಾಯಿತು. ಸ್ಪೂರ್ತಿಯ ಚಿಲುಮೆಯಾಯಿತು. ಅದು ರಾಜಕಾರಣಿಗಳ ಸಾಮಾಜಿಕ ಅಂತಸ್ತುಗಳನ್ನು ಮರೆಮಾಚಿತು. ಅದರ ಪರಿಣಾಮವಾಗಿ ಬಹುಪಾಲು ಶಾಸಕರು ಮೈಚಳಿಬಿಟ್ಟು ಕುಣಿಯತೊಡಗಿದರು. ಇನ್ನು ಉಳಿದವರೆಂದರೆ ಅಲಾಯುಧರು!
ಆ ಹಿರಿಯರು ಹಲವು ಕುಣಿತಗಳನ್ನು ದೇಶೀಯ ನರ್ತನಗಳನ್ನು ನೋಡಿದ್ದವರೆ. ಕನಸಿನಲ್ಲಿ ಕುಣಿಯುತ್ತಿದ್ದವರೆ. ಸಹಚರರು ತಮ್ಮನ್ನು ಒತ್ತಾಯಿಸಬಾರದೆ ಎಂದುಕೊಂಡರು. ಅವರ ಆಸೆ ಫಲಿಸಿತು. ಮೊದಮೊದಲು ಹಿಂಜರಿದರು. ಕೊನೆಗೂ ಹಿತಚಿಂತಕರು ಒತ್ತಾಯಿಸಿದರು. ಅದರಿಂದ ಪ್ರಸನ್ನವದನರಾದರು. ಕಚ್ಚೆಪಂಚೆಯನ್ನು ಮೇಲೆ ಕಟ್ಟಿದರು. ಗಾಂಧಿಟೊಪ್ಪಿಗೆಯನ್ನು ಜೇಬಿಗೆ ತುಂಬಿದರು. ನರ್ತಕರ ಸಮೂಹ ಪ್ರವೇಶಿಸಿದರು. ತಮ್ಮ ಆರೋಗ್ಯವನ್ನು ರಕ್ಷಿಸುವಂತೆ ದೇವರಲ್ಲಿ ಮೊರೆ ಹೋದರು. ಕಾಲು ಕೈಯಿಗಳಿಗೆ ಸಂಬಂಧಿಸಿದ ಲಘುವ್ಯಾಯಾಮ ಮಾಡಿದರು. ಬಳಿಕ ಎಲ್ಲರ ಸಂಗಡ ಅಂಕುಡೊಂಕಾಗಿ ನತರ್ಿಸಲಾರಂಭಿಸಿದರು. ಉತ್ಸಾಹಿತರಾಗಿ ಉಕ್ಕಡ್ ಅವರ ಸಮ್ಮುಖದಲ್ಲಿ ನಿಂತು ನರ್ತಿಸತೊಡಗಿದರು. ಅದರಿಂದ ಡೊಳ್ಳು ತಮಟೆ ಸಮಾಳ ಸೇರಿದಂತೆ ನೂರಾರು ಜಾನಪದ ವಾದ್ಯ ಪರಿಕರಗಳು ಕವಿಗಡಚಿಕ್ಕವಂತೆ ನುಡಿಯತೊಡಗಿದವು. ನಂದಿಕೋಲುಗಳ ಕುಣಿತ ನೂರ್ಮಡಿಗೊಂಡಿತು. ಅದಕ್ಕೆಲ್ಲ ಕಳಸವಿರಿಸಿದಂತೆ ಶಿಳ್ಳೆ ಚಪ್ಪಾಳೆ ಜಯಘೋಷ ಬೇರೆ. ಇಂಥ ಭಯಸದೃಶ ಸದ್ದಿನಿಂದಾಗಿ ಕುಣಿತದ ಆಯಾಸದಿಂದಾಗಿ..
***
ಶ್ರೀಯುತ ಅಲಾಯುಧರು ಕುಸಿದರು ನೆಲಕ್ಕೆ. ಅದೂ ತಮ್ಮೆರಡೂ ಕೈಗಳನ್ನು ಹೃದಯಭಾಗದ ಮೇಲಿರಿಸಿಕೊಂಡು. ಅದೂ ಕೆಳಗಣ್ಣು ಮೇಲುಗಣ್ಣು ಮಾಡುತ್ತ. ಅದೂ ಅಯ್ಯೋ ಎಂದು ಚೀರುತ್ತ. ಮುಖ್ಯಮಂತ್ರಿಗಳು ದಿಗ್ಭ್ರಮಿತರಾದರು. ಸದ್ದಡಗಿತು. ಆತಂಕ ಸೃಷ್ಠಿಸಿತು. ಅದೃಷ್ಟಕ್ಕೆ ವೈದ್ಯರು ಸನಿಹದಲ್ಲಿದ್ದರು. ಧಾವಿಸಿದರು. ಹಿರಿಯರ ನಾಡಿ ಹೃದಯ ಬಡಿತ ಪರೀಕ್ಷಿಸಿದರು. ಹಾರ್ಟ್ ಅಟ್ಯಾಕ್ ಎಂದು ಉದ್ಗರಿಸಿದರು. ಅಂಬುಲೆನ್ಸ್ ಹತ್ತಿರದಲ್ಲಿತ್ತು. ಆಗಮಿಸಿತು. ಶ್ರೀ ಉಕ್ಕಡ್ ಸಲೀಸಾಗಿ ಅಲಾಯುಧರನ್ನು ಎರಡೂ ಕೈಗಳಿಂದ ಎತ್ತಿದರು. ಅವರು ಬಣ್ಣಮಿಶ್ರಿತ ಕಣ್ಣೀರನ್ನು ಒರೆಸಿಕೊಳ್ಳಲಿಲ್ಲ. ವ್ಯಾಧಿಗ್ರಸ್ತರ ಸಹಿತ ತಾವೂ ವಾಹನವನ್ನು ಪ್ರವೇಶಿಸಿದರು. ಭುವನವಿಜಯದ ಆಡಳಿತಾಧಿಕಾರಿ ನಿಷ್ಪಂದ್ ದಬರಿ ಸಾರ್ ತಾವು ಆಸ್ಪತ್ರೆವರೆಗೆ ಬರುವುದು ಬೇಡ. ಪ್ರಮಾಣವಚನ ಸ್ವೀಕರಿಸಲು ಅರ್ಧಗಂಟೆ ಸಮಯ ಬಾಕಿ ಉಳಿದಿದೆ. ಅಲ್ಲಿ ಗಣ್ಯರು ತಮ್ಮ ನಿರೀಕ್ಷೆಯಲ್ಲಿರುವರು. ಇವರ ಯೋಗಕ್ಷೇಮದ ಹೊಣೆ ನಮಗೆ ಬಿಡಿ ಎಂದರು. ಅದಕ್ಕೆ ಉಕ್ಕಡ್ ತಮ್ಮ ತೊಡೆ ಮೇಲಿದ್ದ ಅಲಾಯುಧರ ಮುಂದಲೆ ನೇವರಿಸುತ್ತ ನಮ್ಮ ಮಾತನ್ನು ದಯವಿಟ್ಟು ಆಲಿಸಿ ನಿಷ್ಪಂದ್, ಮುಖ್ಯಮಂತ್ರಿ ಸ್ಥಾನಕ್ಕಿಂತ ಅಲಾಯುಧರ ಆರೋಗ್ಯ ತುಂಬಾ ಮುಖ್ಯ. ಈ ಸನ್ಮಾನ್ಯರ ಅನುಪಸ್ಥಿತಿಯಲ್ಲಿ ನಾವು ಖಂಡಿತ ಪ್ರಮಾಣ ವಚನ ಸ್ವೀಕರಿಸುವುದಿಲ್ಲ. ಸಮಾರಂಭವನ್ನು ಅಲ್ಲಿಯ ತನಕ ಮುಂದೂಡಿ ಎಂದರು. ಅರೆ ಪ್ರಜ್ಞಾವಸ್ಥೆಯಲ್ಲಿರುವ ಹಿರಿಯರು ಕೇಳಿಸಿಕೊಳ್ಳಲಿ ಎಂಬ ಸದುದ್ಧೇಶದಿಂದ. ಹೌದು! ಆ ಅವಸ್ಥೆಯಲ್ಲೂ ಹಿರಿಯರು ಕೇಳಿಸಿಕೊಂಡರು. ಅದರಿಂದ ಬಲ ಆವಹಿಸಿಕೊಂಡರು. ಉಕ್ಕಡ್ ಅವರ ಬಲಗೈಯನ್ನು ಮೆಲ್ಲಗೆ ಸ್ಪರ್ಶಿಸಿದರು. ಅದನ್ನು ತಮ್ಮ ದುರ್ಬಲ ಹೃದಯದ ಮೇಲಿರಿಸಿಕೊಂಡರು. ಆ ಸ್ಪರ್ಶದಿಂದ ತಮ್ಮ ಹೃದಯ ಚೇತರಿಸಿಕೊಂಡಿತೆಂದೇ ಭಾವಿಸಿದರು. ಇಂಥ ಕರುಣಾಮಯಿ ಮುಖ್ಯಮಂತ್ರಿಯಾಗಲು ತಾವು ಅಡ್ಡಿಪಡಿಸಿ ತಪ್ಪು ಮಾಡಿದೆವು! ಮನಸ್ಸಿನಲ್ಲಿ ಪಶ್ಚಾತ್ತಾಪ ಅನುಭವಿಸಿದರು. ಒಂದು ಕ್ಷಣ ಗದ್ಗದಿತರಾದರು. ಪ್ರಯಾಸದಿಂದ ನಮ್ಮ ಆರೋಗ್ಯ ಕುರಿತು ಕಾಳಜಿ ಬೇಡ ಉಕ್ಕಡ್, ಹೊತ್ತಾಗುತ್ತೆ, ನೀವು ಹೊರಡಿ. ನನ್ನನ್ನು ದೇವರು ನೋಡಿಕೊಳ್ಳುವನು. ಹೇಗೋ! ಎಂದು ಮೆಲ್ಲಗೆ ಕತ್ತು ಹೊರಳಿಸಿ ನೋಡಿ ನೀವು ನಮ್ಮ ಡಾಕ್ಟರ್ ಅಶ್ವಿನೇಯ್ ತಸಕ್ ಅಲ್ವೇನಪ್ಪಾ ಎಂದು ಸಂದೇಹಿಸಿದರು. ಎಡಗೈಯಲ್ಲಿ ರಕ್ತದೊತ್ತಡ ಅಳೆಯುವ ಸಾಧನವನ್ನು, ಬಲಗೈಯಲ್ಲಿ ಹೃದಯಬಡಿತ ಅಳೆಯುವ ಸಾಧನವನ್ನು ಆಭರಣಗಳಂತೆ ಧರಿಸಿದ್ದ ಅವರು ನಾನು ಡಾಕ್ಟರ್ ನಿಷ್ಕಾಮ್ ಕಾಪಾಲಿಕ್ ಸಾರ್, ನಿಷ್ಪತ್ತಿಯವರ ಪರ್ಸನಲ್ ಡಾಕ್ಟರ್, ಒಮ್ಮೆ ನಿಮ್ಮ ಹಾರ್ಟನ್ನ ಚೆಕ್ ಮಾಡಿದ್ದೆ, ನೆನಪಿದೆ ಎಂದು ಭಾವಿಸುವೆ ಎಂದು ಸ್ವಪರಿಚಯ ಪ್ರಸ್ತಾಪಿಸಿದರು. ಉಕ್ಕಡ್ ನೀವು ಭವಿಷ್ಯದ ಮುಖ್ಯಮಂತ್ರಿ, ನಮ್ಮ ಮಾರ್ಗದರ್ಶಕರು. ನಿಮ್ಮಂಥ ಹಿರಿಯರು ಆರೋಗ್ಯವಾಗಿರಬೇಕು. ಅದಕ್ಕೆಂದೇ ಈ ಹಾರ್ಟ್ ಸ್ಪೆಷಲಿಷ್ಟ್ ಡಾ ಕಾಪಾಲಿಕ್ರನ್ನು ಅಪಾಯಿಂಟ್ ಮಾಡಿದ್ದೀವಿ, ಮುಂದೆ ಸಚಿವ ಸಂಪುಟದ ಆರೋಗ್ಯ ತಪಾಸಣೆ ಮಾಡುವುದು ಇವರೆ, ಕಾಪಾಲಿಕ್ ಇರುವಲ್ಲಿ ಅರೋಗ್ಯ ಸಮಸ್ಯೆ ಇರುವುದಿಲ್ಲ, ಈಗ ನೋಡಿ ಎಷ್ಟೊಂದು ಗೆಲುವಾಗಿದ್ದೀರಿ ನೀವು ಎಂದು ಭರವಸೆಯ ಮಾತುಗಳನ್ನು ಆಡಿದರು. ಡಾ ಕಾಪಾಲಿಕ್ ಉಕ್ಕಡ್ ಕಡೆ ಕೃತಜ್ಞತಾಪೂರ್ವಕವಾಗಿ ನೋಡಿದರು. ಅಲಾಯುಧರ ಬಲ ಭುಜಕ್ಕೆ ಇಂಜಕ್ಷನ್ ನೀಡಿದರು. ಅದೂ ಎರಡೇ ಎರಡು ಕೆಂಪು ದ್ರವ! ಪರಿಣಾಮವಾಗಿ ಹಿರಿಯರು ರೆಪ್ಪೆಗಳನ್ನು ಮೆಲ್ಲಗೆ ಮುಚ್ಚಿ ನಿದ್ದೆ ಹೋದರು. ಉಕ್ಕಡ್ ಅವರ ಕಣ್ಸನ್ನೆಯಂತೆ ದಬರಿ ನಿರ್ಗಮಿಸುವ ಮುನ್ನ ನಿಟ್ಟುಸಿರನ್ನು ತಡೆದರು ಜಾಣತನದಿಂದ. ಬಳಿಕ ವಾಹನ ಚಲಿಸಲಾರಂಭಿಸಿತು.
ಉಕ್ಕಡ್ ಮುಗುಳ್ನಕ್ಕರು. ವಿಷಾದದ ಉಸಿರು ಚೆಲ್ಲಿದರು. ಏನೋ ಹೇಳಲು ತಡವರಿಸುತ್ತಿದ್ದ ಕಾಪಾಲಿಕ್ ಕಡೆ ಅಭಿಮಾನದಿಂದ ನೋಡಿದರು. ಋಣ ತೀರಿಸುವ ಪರಿ ಕುರಿತು ಯೋಚಿಸಬೇಡ. ನಿಷ್ಪತ್ತಿಯವರನ್ನು ಹೇಗೆ ನೋಡಿಕೊಂಡಿರುವಿಯೋ ಅದಕ್ಕಿಂತ ಹೆಚ್ಚಾಗಿ ಇವರನ್ನು ನೋಡಿಕೊ. ಅವರಿಗಿಂತ ಇವರು ತುಸು ಹೆಚ್ಚು ಎಂದೇ ಭಾವಿಸು. ನಮ್ಮ ಸರ್ಕಾರದ ಭವಿಷ್ಯ ಇವರ ಅನಾರೋಗ್ಯವನ್ನು ಅವಲಂಭಿಸಿದೆ, ಈ ರಾಜರಹಸ್ಯ ಅರ್ಥ ಆಯ್ತು ತಾನೆ! ಎಂದರು. ಅದಕ್ಕೆ ಡಾಕ್ಟರ್ ಸಹಮತ ವ್ಯಕ್ತಪಡಿಸಿದರು.
ಅಂಬುಲೆನ್ಸ್ ರೋಗಿಗಳ ಒಡಲ ಉದಕ ಕಂಪನಗೊಳ್ಳದ ರೀತಿಯಲ್ಲಿ ಚಲಿಸಲು ಸಾಧ್ಯವಾಗಲಿಲ್ಲ. ವಿಮಾನ ನಿಲ್ದಾಣದ ಮುಖ್ಯರಸ್ತೆಯಂತೆ ಅದರ ಅನುಬಂಧ ರಸ್ತೆಗಳಿರಲಿಲ್ಲ. ಕೆರಳಿದ್ದ ಒಳಚರಂಡಿಗಳು ರಸ್ತೆಗಳ ಮೂಲ ಚೆಹರೆ ಬದಲಿಸಿದ್ದವು. ರಸ್ತೆಯ ಕಂದಕಗಳಲ್ಲಿ ಮಲಿನ ನೀರು ತುಂಬಿತ್ತು. ರಸ್ತೆ ಇಕ್ಕೆಲದಲ್ಲಿದ್ದ ಕಸ ತ್ಯಾಜ್ಯ ವಿಲೇವಾರಿಯಾಗಿರಲಿಲ್ಲ. ಅಲ್ಲಲ್ಲಿ ಇಲಿ ಹೆಗ್ಗಣಗಳ ಕಳೇಬರಗಳು ರಾರಾಜಿಸುತ್ತಿದ್ದವು. ಅವುಗಳನ್ನು ತಿಂದು ತಮ್ಮ ಕ್ಷುದ್ಬಾಧೆ ತಣಿಸಿಕೊಳ್ಳಲು ಕಾಗೆಗಳು ಅರಚುತ್ತ ತೀರಾ ಹತ್ತಿರದಲ್ಲಿ ಹಾರಾಡುತ್ತಿದ್ದವು. ಅಲ್ಲಲ್ಲಿ ಜನರು ತಮ್ಮತಮ್ಮ ನಾಸಿಕಾಗ್ರಗಳನ್ನು ಅಂಗೈ ಸಹಾಯದಿಂದ ಭದ್ರಪಡಿಸಿಕೊಂಡು ತಿರುಗಾಡುತ್ತಿದ್ದರು. ಅದಕ್ಕೆ ಕಾರಣಗಳಿದ್ದವು. ಪ್ರಮುಖವಾಗಿ ಕಪಿತ್ಥನಗರದ ಪೌರಕಾರ್ಮಿಕರು ಕಳೆದೆರಡು ದಿವಸಗಳಿಂದ ಮುಷ್ಕರ ನಿರತರಾಗಿದ್ದರು, ತಮ್ಮ ಬಹುಕಾಲದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲೆಂದು.
ಅಂಬುಲೆನ್ಸ್ ಚಾಲಕ ಅನುಭವಿ ಇದ್ದ. ಸಾಮಾನ್ಯ ರೋಗಿಯಾಗಿದ್ದಲ್ಲಿ ಚಾಲಕ ವೇಗವಾಗಿ ಚಲಿಸುತ್ತಿದ್ದನೇನೋ! ಚಲಿಸಿ ರೋಗಿಯನ್ನು ಅಕಾಲಿಕ ಮರಣಕ್ಕೆ ತುತ್ತುಮಾಡುತ್ತಿದ್ದನೇನೊ! ಆದರೆ ಹೃದಯ ವ್ಯಾಧಿಯಿಂದ ನರಳುತ್ತಿರುವುದು ರಾಜ್ಯದ ಅತಿಗಣ್ಯ ವ್ಯಕ್ತಿ! ಅವರಲ್ಲಿನ ವ್ಯಾಧಿ ಅಲ್ಪಸ್ವಲ್ಪ ಉಲ್ಬಣಿಸುವುದನ್ನೇ ಸಂಭನೀಯ ಮುಖ್ಯಮಂತ್ರಿಗಳು ನಿರೀಕ್ಷಿಸುತ್ತಿರುವಂತಿದೆ, ಅದು ತನ್ನ ಪುಣ್ಯ. ಹೃದಯ ವೇದನೆ ಉಲ್ಬಣಿಸಿ ಶ್ರೀಯುತರು ಚೀರಿಕೊಳ್ಳದಿರುವುದು ತನ್ನ ಅದೃಷ್ಟ. ಹೀಗೆ ಯೋಚಿಸುತ್ತ ಚಾಲಕ ತುಂಬ ಜಾಣ್ಮೆಯಿಂದ ವಾಹನವನ್ನು ಚಲಿಸಿ ನಿರ್ಧರಿತ ಗುರಿ ತಲುಪುವಲ್ಲಿ ಯಶಸ್ವಿಯಾದ. ಅಂಬುಲೆನ್ಸು ನಾಂತರೀಯಕ್ ಆಸ್ಪತ್ರೆಯ..
ಪೋರ್ಟಿಕೋ ಪ್ರವೇಶಿಸಿತು ಮೆಲ್ಲಗೆ. ವಾಹನ ನಿಂತ ದ್ವಾರದ ವಿಸ್ತೀರ್ಣ! ಏಕಕಾಲಕ್ಕೆ ಎರಡಕ್ಕೂ ಹೆಚ್ಚು ವಾಹನಗಳು ಪ್ರವೇಶಿಸುವಷ್ಟು ಅಗಲವಿತ್ತು. ಮಹಿಷ್ಮತಿರಾಜ್ಯವೊಂದೇ ಅಲ್ಲದೆ ನೆರೆಹೊರೆಯ ರಾಜ್ಯಗಳ ರೋಗಿಗಳನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿತ್ತು. ಹಗಲಿರುಳು ಸ್ವಾಗತಿಸುತ್ತಿತ್ತು. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಜ್ಞವೈದ್ಯರು ಪ್ರಭಾವಶಾಲಿಗಳಿದ್ದರು. ಆರೋಗ್ಯವಂತರಲ್ಲೂ ವ್ಯಾಧಿಗಳನ್ನು ಹೆಕ್ಕಿ ತೆಗೆಯುತ್ತಿದ್ದರು. ರೋಗಿಗಳ ಸಂಗಡ ಅರ್ಥವಾಗದ ಭಾಷೆಯಲ್ಲಿ ಸಂವಾದಿಸುತ್ತಿದ್ದರು. ರೋಗಿಗಳನ್ನು ನೂರಾರು ಪರೀಕ್ಷೆಗಳಿಗೆ ಗುರಿಪಡಿಸುತ್ತಿದ್ದರು. ಸಹಸ್ರಾರು ಮೌಲ್ಯದ ಮಾತ್ರೆ ಔಷಧಿಗಳನ್ನು ಸೇವಿಸುವಂತೆ ಸೌಜನ್ಯಯುತವಾಗಿ ಸೂಚಿಸುತ್ತಿದ್ದರು. ಅತ್ಯಾಕರ್ಷಕ ನರ್ಸ್ ಗಳು ಸಮ್ಮೋಹಕ ನಗೆಯಿಂದ ರೋಗಿಗಳನ್ನು ಪರವಶಗೊಳಿಸುತ್ತಿದ್ದರು. ಇಂಥ ಹಲವು ಕಾರಣಗಳಿಂದ ನಾಂತರೀಯಕ್ ಆಸ್ಪತ್ರೆ ಸುಪ್ರಸಿದ್ದವೆನಿಸಿತ್ತು. ಹ್ಹಾಂ ಇನ್ನೊಂದು ಸಂಗತಿ ಎಂದರೆ ಸನ್ಮಾನ್ಯ ಕ್ಷೇತ್ರಪಾಲ್ ಉಕ್ಕಡ್ ಅವರ ಸೋದರ ಅಳಿಯ ಡಾ ಸುಧಾಂಶು ಹನನ್ ಅದರ ಮ್ಯಾನೆಂಜಿಂಗ್ ಡೈರೆಕ್ಟರ್. ಅದರಲ್ಲಿ ಹಣತೊಡಗಿಸಿರುವವರು ದೇಶವಿದೇಶಗಳಲ್ಲಿ ನೆಲಸಿರುವರು. ಹೃದಯವ್ಯಾಧಿ ಅಲಾಯುಧರ ಪಿತ್ರಾರ್ಜಿತ ಆಸ್ತಿ. ಅವರ ಪೂರ್ವಿಕರು ಆ ಖಾಯಿಲೆಯಿಂದ ಅಕಾಲ ಮರಣಕ್ಕೆ ತುತ್ತಾಗಿದ್ದರು. ಅಲಾಯುಧರು ತಾಯಿ ಗರ್ಭದಲ್ಲಿರುವಾಗಲೇ ಹೃದಯದ ಕಾರ್ಯಕ್ಷಮತೆ ಕ್ಷೀಣಿಸಿತ್ತು. ವಂಶದ ಪೂರ್ವಿಕರ ಪುಣ್ಯದ ಫಲವಾಗಿ ಅಕಾಲ ಮರಣ ಸಂಭವಿಸದೆ ಉಳಿದಿರುವರು. ಮಾತ್ರೆ ಔಷಧ ಸೇವನೆಯಿಂದ ದೈಹಿಕವಾಗಿ ದುರ್ಬಲಗೊಂಡಿರುವರು. ಆತ್ಮಬಲ ಇಚ್ಛಾಶಕ್ತಿಯಿಂದಾಗಿ ಯಶಸ್ವಿ ರಾಜಕಾರಣಿಯಾಗಿರುವರು. ಅವರಿಗೆ ಅಂಥ ನಾಂತರೀಯಕ್ ಆಸ್ಪತ್ರೆಯಲ್ಲಿ ತಮ್ಮ ಸೂಕ್ಷ್ಮ ಹೃದಯವನ್ನು ತಪಾಸಣೆ ಮಾಡಿಸಿಕೊಳ್ಳುವ ಬಯಕೆ ಎಂದೋ ಇತ್ತು, ಸಾಧ್ಯವಾಗಿರಲಿಲ್ಲ. ಆದರೆ ಅದು ಈಗ ನೆರವೇರಿದೆ. ಶ್ರೀಯುತ ಉಕ್ಕಡ್ ಸಹಕಾರದಿಂದಾಗಿ. ಅವರ ಸಲಹೆಯಂತೆ.
ಅಲಾಯುಧರನ್ನು ವಿಶೇಷ ವಾರ್ಡ್ ಗೆ ಕರೆದೊಯ್ದರು. ವಾತಾನುಕೂಲಿತ ಕೋಣೆಯಲ್ಲಿ ದಾಖಲಿಸಿದರು. ವಿಶ್ವಸುಂದರಿಯಾಗುವ ಕನಸು ಕಾಣುತ್ತಿದ್ದ ಹಾಗೂ ಅದೇ ತಾನೇ ಇಪ್ಪತ್ತು ಪೂರೈಸಿದ್ದ ಸುಶಿಕ್ಷಿತ ನರ್ಸ್ ಗಳ ಸುಪರ್ಧಿಗೆ ಶ್ರೀಯುತರನ್ನು ಸಜೀವವಾಗಿ ನೈವೇದ್ಯ ಮಾಡಿದರು. ತಜ್ಞವೈದ್ಯರು ಶ್ರೀಯುತರ ಹೃದಯವನ್ನು ಕೂಲಂಕಷ ಪರಿಶೀಲಿಸಿದರು. ಹಲವು ಪರೀಕ್ಷೆಗಳಿಗೆ ಒಳಪಡಿಸಿದರು. ರಕ್ತನಾಳಗಳಲ್ಲಿನ ರಂದ್ರಗಳನ್ನು ಬ್ಲಾಕುಗಳನ್ನು ಅಗೋ ಅಲ್ಲಿ ಇಗೋ ಇಲ್ಲಿ ಎಂದು ಪತ್ತೆ ಮಾಡಿದರು. ಉಕ್ಕಡ್ ತಮ್ಮ ಅಳಿಯಂದಿರ ಸಂಗಡ ಪ್ರತ್ಯೇಕವಾಗಿ ಸಮಾಲೋಚಿಸಿದರು. ಸಾಧ್ಯವಾದಷ್ಟು ದೀರ್ಘಕಾಲ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಅವರಿಗೆ ಪ್ರಾಣಾಪಾಯ ಸಂಭವಿಸದಂತೆ ಜಾಗ್ರತೆವಹಿಸಬೇಕೆಂದು ಎಚ್ಚರಿಸಿದರು.
ಅಲಾಯುಧರಿಗೆ ಪ್ರಜ್ಞೆ ಬರಲು ತುಸು ಸಮಯ ಹಿಡಿಯಿತು. ತಮ್ಮ ಸನಿಹದಲ್ಲಿ ನಿಂತ ಇವರನ್ನು ಅವರು ನೋಡುವ ಮೊದಲು ಪ್ರಯಾಸದಿಂದ ರೆಪ್ಪೆಗಳನ್ನು ನಿಧಾನವಾಗಿ ತೆರೆದರು, ನೋಡಿದರು. ಉಕ್ಕಡ್ ವಾತ್ಯಲ್ಯಮೂರ್ತಿಯಂತೆ ಗತಿಸಿದ ತಾಯಿಯ ಪ್ರತಿರೂಪದಂತೆ ಕಂಗೊಳಿಸಿದರು. ದುರ್ಬಲ ಎಡಗೈಯನ್ನು ಅವರತ್ತ ಚಾಚಿದರು, ಅಂಗೈ ಅರಳಿಸಿದರು. ಇವರು ಅದನ್ನು ಮೆಲ್ಲಗೆ ಸ್ಪರ್ಶಿಸಿ ಮರ್ಧಿಸಿದರು. ಅವರತ್ತ ತುಸು ಬಾಗಿ ಅಣ್ಣಾ ಆಯಾಸ ಬೇಡ, ಈಗ ಆರಾಮ ಅನ್ನಿಸ್ತಿದೆ ತಾನೆ! ಎಂದು ಪರಾಮರ್ಶಿಸಿದರು. ಅದಕ್ಕೆ ಅಲಾಯುಧ ಆರಾಮಾಗಿರುವೆ ಉಕ್ಕಡ್, ಇನ್ನು ಹೊರಡಿ, ಎಲ್ಲರೂ ನಿಮ್ಮ ನಿರೀಕ್ಷೆಯಲ್ಲಿರಬಹುದು ಎಂದರು ತೊದಲುತ್ತ. ಅದಕ್ಕೆ ಇವರು ಈ ಸ್ಥಿತಿಯಲ್ಲಿ ನಿಮ್ಮನ್ನು ಬಿಟ್ಟು ಹೊರಡಲು ಮನಸ್ಸು ಒಪ್ಪುತ್ತಿಲ್ಲ, ನಮ್ಮ ಸಂಗಡ ನೀವೂ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬೇಕೆಂಬುದು ನಮ್ಮೆಲ್ಲರ ಇಚ್ಚೆಯಾಗಿತ್ತು, ಆದರೆ ದೈವ ಸಂಕಲ್ಪ! ಎನ್ನುತ್ತ ತಾವೂ ಕಣ್ಣಲ್ಲಿ ನೀರು ತಂದುಕೊಂಡರು. ಇವರ ಮಾತಿನಿಂದ ಅವರ ಹೃದಯ ಆದ್ರತೆಯಿಂದ ಕಂಪಿಸಿತು. ನಿಮ್ಮ ಸದಾಶಯಕ್ಕೆ ಧನ್ಯವಾದಗಳು ಎಂದರು, ಅಲ್ಪಕಾಲ ಯೋಚಿಸಿದರು, ಡಾಕ್ಟರ್ ಕಡೆ ಮುಖ ಹೊರಳಿಸಿ ಪ್ರಮಾಣ ವಚನ ಸ್ವೀಕರಿಸಿ ಪುನಃ ಆಸ್ಪತ್ರೆ ಸೇರಲು ಅವಕಾಶವಿದೆಯೆ! ಎಂದು ಆಘಾತಕಾರಿ ಪ್ರಶ್ನೆ ಕೇಳಿದರು. ಅದರಿಂದ ಉಕ್ಕಡ್ ಕಸಿವಿಸಿ ಅನುಭವಿಸಿದರು, ಅವರ ಕಣ್ಸನ್ನೆ ಅರ್ಥ ಮಾಡಿಕೊಂಡ ಡಾ ಹನನ್ ಅದು ಹೇಗೆ ಸಾಧ್ಯ ಅಂಕಲ್! ಹಾಗೆ ಮಾಡಿದಲ್ಲಿ ಸ್ಟ್ರೋಕ್ ಹೊಡೆಯಲೂಬಹುದು. ಉದ್ವೇಗದಿಂದ ಸಾವು ಸಂಭವಿಸಬಹುದು. ಆಂಜಿಯೋಪ್ಲಾಸ್ಟಿ ಮಾಡಲು ತಯ್ಯಾರಿ ನಡೀತಿದೆ, ಅದಲ್ಲದೆ ಇನ್ನೂ ಹತ್ತಾರು ಕ್ಲಿಷ್ಟಕರ ಪರೀಕ್ಷೆಗಳನ್ನು ಮಾಡಬೇಕಿದೆ ಎಂದರು. ಅದಕ್ಕೆ ಉಕ್ಕಡ್ ಅವನ್ನೆಲ್ಲ ಈ ದಿವಸವೇ ಪೂರೈಸಿದರೆ ಹೇಗೆ! ನಾಳೆಗೆ ಪ್ರಮಾಣ ವಚನ ಸಮಾರಂಭ ಇಟ್ಟುಕೊಂಡರಾಯಿತು ಎಂದರು. ಹನನ್ ನೋಟ ಅರ್ಥ ಮಾಡಿಕೊಂಡ ಡಾ ಗತಾಗತ್ ಇವರ ಹಾರ್ಟ್ ನಮ್ಮ ಟ್ರೀಟ್ಮೆಂಟಿಗೆ ಸರಿಯಾಗಿ ರಿಯಾಕ್ಟ್ ಮಾಡ್ತಾಯಿಲ್ಲ, ಸ್ವಲ್ಪ ಲೇಟ್ ಮಾಡಿದರೆ ಮರಣ ಸಂಭವಿಸಲೂಬಹುದು. ಅಧಿಕಾರ ಅನುಭವಿಸುವುದಕ್ಕೆ ಹೃದಯ ಆರೋಗ್ಯದಿಂದಿರುವುದು ಮುಖ್ಯ ಅಲ್ಲವೆ! ಓಪನ್ ಹಾರ್ಟ್ ಸರ್ಜರಿ ಮಾಡಲೂಬಹುದು, ಅದನ್ನು ಮಾಡೋದು ಡಾ ರಿಚರ್ಡ್ ಕ್ರೂಯಲ್! ಅವರು ಅಮೇರಿಕಾದ ಗ್ರೇವ್ಯಾರ್ಡ್ ಸಿಟಿಯಿಂದ ಬರಬೇಕಿದೆ ಎಂದರು.
ಅವರ ಮಾತಿನಿಂದ ಅಲಾಯುಧರ ಹೃದಯ ತತ್ತರಿಸಿತು. ಬಾಯಿ ಒಣಗಿತು. ಉಕ್ಕಡ್ ಡಾ ಕ್ರೂಯಲ್ ಸ್ಪೆಷಲ್ ಏರೋಪ್ಲೇನಲ್ಲಿ ಇವತ್ತು ಹೊರಟು ನಾಳೆ ತಲುಪುವಂತೆ ಮಾಡಿ ದಯವಿಟ್ಟು ಎಂದರು. ಡಾ ಗತಾಗತ್ ಅದು ಹೇಗೆ ಸಾಧ್ಯ ಸಾರ್. ಜರ್ಮನ್ ಆಸ್ಟ್ರೀಯಾ ಚಿಲಿ ಬ್ರೆಜಿಲ್ ಅಫಘಾನಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿನ ಪೇಷಂಟ್ಸ್ ಆರು ತಿಂಗಳಿಂದ ಅವರ ನಿರೀಕ್ಷೆಯಲ್ಲಿದ್ದಾರೆ. ಆದರೆ ಅಷ್ಟು ಲೇಟಾಗಲಿಕ್ಕಿಲ್ಲ, ಮೆಸೆಜ್ ಕಳಿಸಿದ್ದೀವಿ, ಅವರ ರಿಪ್ಲೆಗಾಗಿ ಕಾಯ್ತಿದ್ದೀವಿ, ಮಿನಿಮಮ್ ಮೂರು ತಿಂಗಳ ಬಳಿಕ ಅವರು ಬರಬಹುದು ಎಂದರು. ಉಕ್ಕಡ್ ಅಸಹಾಯಕರಾಗಿ ಹಿರಿಯರ ಕಡೆ ನೋಡಿದರು.! ನಮ್ಮ ಅಣ್ಣನವರ ಆರೋಗ್ಯಕ್ಕಿಂತ ಮುಖ್ಯಮಂತ್ರಿಸ್ಥಾನ ದೊಡ್ಡದಲ್ಲ, ಅಲ್ಲಿಯವರೆಗೆ ನಾವು ಇಲ್ಲೇ ಇರ್ತೀವಿ, ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡುವಂತೆ ಪ್ರಜೆಗಳಿಗೆ ತಿಳಿಸುವೆವು ಉಕ್ಕಡ್ ಅವರ ಮಾತಿನಿಂದ ಅಲಾಯುಧ ಭಾವಪರವಶರಾದರು, ಗದ್ಗದಿತರಾದರು.
ಮೇಲಿಂದ ಮೇಲೆ ದೂರವಾಣಿ ಕರೆಗಳು! ಜನಪ್ರತಿನಿಧಿಗಳ ವರಿಷ್ಠ ಅಧಿಕಾರಿಗಳ ನೆರಳು ಕಾಣಿಸಿಕೊಂಡು ಮರೆಯಾದವು. ಪರಿಸ್ಥಿತಿ ಅರ್ಥಮಾಡಿಕೊಂಡ ಹಿರಿಯರು ನಾವು ನಿರೀಕ್ಷಿಸಿದಕ್ಕಿಂತ ನೀವು ದೊಡ್ಡ ಮನುಷ್ಯರಿರುವಿರಿ. ನಿಮ್ಮ ಅಗತ್ಯ ರಾಜ್ಯಕ್ಕಿದೆ, ಇನ್ನು ಹೊರಡಿ, ದಯವಿಟ್ಟು ಹೊರಡಿ, ನಮಗೆ ಆ ಅದೃಷ್ಟವಿಲ್ಲ ಎಂದು ಒತ್ತಾಯಿಸಿದರು. ಉಕ್ಕಡ್ ತಾವೂ ಭಾವಪರವಶರಾದರು. ನೀರಿದ್ದ ಕಣ್ಣುಗಳನ್ನು ಒರೆಸಿಕೊಂಡರು. ಅಲಾಯುಧರ ಪಾದಗಳತ್ತ ಶಿರಭಾಗಿ ನಮಸ್ಕರಿಸಿದರು. ಅಣ್ಣಾ ಈ ತಮ್ಮನನ್ನು ಆಶೀರ್ವದಿಸಿ, ಇಲ್ಲೇ ಇದ್ದು ಮಾರ್ಗದರ್ಶನ ನೀಡುತ್ತಿರಿ, ಈ ಆಸ್ಪತ್ರೆಯನ್ನು ನಿಮ್ಮ ಮನೆ ಎಂದೇ ಭಾವಿಸಿ, ಚಿನಕುಬಿ ಮೇಡಂ ಪಕ್ಕದಲ್ಲಿದ್ದರೆ ನಿಮ್ಮ ಹೃದಯಕ್ಕೆ ಇನ್ನೂ ಒಳ್ಳೆಯದು ಎಂದು ಸೌಖ್ಯದ ಸುಳಿವು ನೀಡಿದರು. ಆವರ ಪಾದಗಳ ಬೆರಳುಗಳಿಗೆ ನೊಸಲು ತಾಕಿಸಿ ಕೋಣೆಯಿಂದ ನಿರ್ಗಮಿಸಿದರು.
ಆಸ್ಪತ್ರೆಯ ಏಳನೆ ವಾರ್ಡ್ ದಾಟಿದ ನಂತರ ರೆಸೆಪ್ಷನ್ ಕೌಂಟರ್ ಇತ್ತು. ಅದರ ಹಿಂಬದಿಯಲ್ಲಿ ಗ್ಲಾಸುಗಳಿಂದಾವೃತ ಕೋಣೆ ಇತ್ತು, ಅದರಲ್ಲಿ ಕುಳಿತಿದ್ದ ವೈದ್ಯರು ತಮ್ಮನ್ನು ನೋಡಿದೊಡನೆ ಎದ್ದು ಗೌರವ ತೋರಿಸಿದರು. ಡಾ ಹನನ್, ಡಾ ಗತಾಗತ್ ಹಿಂದೆಯೇ ಬಂದರಲ್ಲದೆ ತಮ್ಮನ್ನು ಅಲ್ಲಿಗೆ ಕರೆದೊಯ್ದರು. ಎಂಡಿ ಛೇರಿನಲ್ಲಿ ಕುಳ್ಳಿರಿಸಿ ಬೊಕ್ಕೆಗಳನ್ನು ನೀಡಿ ಅಭಿನಂದಿಸಿದರು. ನಾಂತರೀಯಕ್ ಆಸ್ಪತ್ರೆ ಎದುರಿಸುತ್ತಿರುವ ಕಾನೂನು ಸಮಸ್ಯೆಗಳನ್ನು ಸೌಜನ್ಯಯುತ ಭಾಷೆಯಲ್ಲಿ ಬಿಡಿಸಿ ನಿವೇದಿಸಿಕೊಂಡರು. ಉಕ್ಕಡ್ ಸಾದ್ಯಂತ ಆಲಿಸಿದರು. ಕಾನೂನು ತೊಡಕುಗಳನ್ನು ನಿವಾರಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ಆಸ್ಪತ್ರೆಯ ಕಟ್ಟಡದ ದಕ್ಷಿಣ ದಿಕ್ಕಿನಲ್ಲಿರುವ ಕೆರೆಯ ಅಂಗಳವನ್ನು ಡಿನೋಟಿಫೈ ಮಾಡಿ ನಾಂತರೀಯಕ್ ಆಡಳಿತ ಮಂಡಳಿಗೆ ಒಪ್ಪಿಸುವುದಾಗಿ ಹೇಳುವುದನ್ನು ಶ್ರೀಯುತರು ಮರೆಯಲಿಲ್ಲ.
ಶ್ರೀಯುತ ಅಲಾಯುಧ ಎದುರಿಸುತ್ತಿರುವ ಹೃದಯ ಸಂಬಂಧೀ ಖಾಯಿಲೆಯ ಸ್ವರೂಪ ಕುರಿತಂತೆ ಕೇಳಿ ವಿವರ ಸಂಗ್ರಹಿಸಿದರು. ಡಾ ಗತಾಗತ್ ಹಿರಿಯರ ಹೃದಯದ ಹೃತ್ಕವಾಟ ಅನಿಯಂತ್ರಿತವಾಗಿ ತೆರೆದುಕೊಳ್ಳುವುದರಿಂದ ಅದರ ಕ್ರಿಯಾಕಲಾಪ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದಾಗಿ ಸಚಿತ್ರ ಸಹಿತ ವಿವರಿಸಿದರು.
ಸಾರ್ ಅಲಾಯುಧರ ಹೃದಯ ವೈದ್ಯವಿಜ್ಞಾನ ಲೋಕದ ವಿಸ್ಮಯ. ಆ ಹಿರಿಯರು ಇಷ್ಟು ವರ್ಷಗಳವರೆಗೆ ಜೀವಂತವಿರುವುದು ಪವಾಡವೇ ಸರಿ. ಬೇರೆ ದೇಶಗಳಲ್ಲಿದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲವೇನೊ! ಅವರಲ್ಲಿನ ವಿಲ್ಫವರ್ ಗ್ರೇಟ್ ಸಾರ್. ಅವರು ಇನ್ನೂ ಹತ್ತು ವರ್ಷಗಳವರೆಗೆ ಬದುಕಬಹುದು, ಅಥವಾ ನಾಳೆಯೇ ಅವರ ಹೃದಯ ಸ್ತಂಭಿಸಲೂಬಹುದು. ಇದಕ್ಕಿರುವ ಏಕೈಕ ಪರಿಹಾರ, ಆರೋಗ್ಯವಂತ ವ್ಯಕ್ತಿಯ ಅಥವಾ ಪ್ರಾಣಿ, ಅಂದರೆ ಚಿಂಪಾಜಿ ದೇಹದಿಂದ ಹೃದಯವನ್ನು ತೆಗೆದು ಇವರ ದೇಹದಲ್ಲಿ ಅಳವಡಿಸುವುದು. ಮರಣ ದಂಡನೆ ಶಿಕ್ಷೆಗೆ ಒಳಗಾಗಿರುವ ಯಾರಾದರು ಭಯೋತ್ಪಾದಕರು ತಮ್ಮ ಹೃದಯವನ್ನು ಇವರಿಗೆ ಡೊನೇಟ್ ಮಾಡಿದರೆ ಇನ್ನೂ ಕ್ಷೇಮ. ಕಾರಣ ಅಂಥವರ ಹೃದಯಗಳಿಗೆ ಸ್ಥಿತಿಸ್ಥಾಪಕ ಶಕ್ತಿ ಇರುತ್ತೆ, ಇನ್ನೊಂದು ದೇಹಕ್ಕೆ ಬೇಗನೆ ಹೊಂದಿಕೊಳ್ಳುತ್ತೆ. ಆದರೆ ಇದೆಲ್ಲ ಹೇಳಲು ಕೇಳಲು ಚಂದ ಎಂದರು. ಅದನ್ನು ಆಲಿಸಿ ಉಕ್ಕಡ್ ಸಮಾಧಾನದ ಉಸಿರುಬಿಟ್ಟರು.
ಶ್ರೀಯುತರ ಹೃದಯದ ಪೂರ್ವಾಪರ ಕೇಳಿದರೆ ಮನಸ್ಸಿಗೆ ದುಃಖವಾಗುತ್ತೆ ಗತಾಗತ್. ಅಂಥ ಹೃದಯವಿರುವುದು ಟೈಗರ್ ಮೆಮೊನ್ ದೇಹದಲ್ಲಿ! ಒಂದು ಪಕ್ಷ ಅವನು ಒಪ್ಪಿದರೂ ದಾವೂದ್ ಇಬ್ರಾಹಿಂ ಒಪ್ಪುವುದಿಲ್ಲ. ಇದೆಲ್ಲ ರೋಚಕ ಕಥೆಕಾದಂಬರಿಗಳಲ್ಲಿ ಮಾತ್ರ, ಶ್ರೀಯುತರು ಇಲ್ಲಿ ಆರಾಮಾಗಿರಲಿ. ಟ್ರೀಟ್ಮೆಂಟ್ ನೆಪದಲ್ಲಿ ಅವರನ್ನು ಸುದೀರ್ಘಕಾಲ ಇಲ್ಲಿ ಇಟ್ಟುಕೊಳ್ಳಿ. ಇದರಿಂದ ಅವರೂ ಕ್ಷೇಮ ರಾಜ್ಯಕ್ಕೂ ಕ್ಷೇಮ. ಕೆಲವು ದಿವಸಗಳ ಬಳಿಕ ಶ್ರೀ ಊಧ್ರ್ವರೇತಸ್ಸಾನಂದಸ್ವಾಮೀಜಿಯವರನ್ನು ಕಳಿಸಿಕೊಡುವೆ, ಅವರು ಅಷ್ಟಾಂಗಯೋಗ ಪ್ರಾಣಾಯಾಮ ಧ್ಯಾನಗಳಂಥ ಅಲೌಕಿಕ ವಿದ್ಯೆಗಳಲ್ಲಿ ಪಾರಂಗತರು. ಇವರು ಅವರ ಶಿಷ್ಯರಾಗಿದ್ದು ಹೃದಯದ ಆರೋಗ್ಯ ಕಾಪಾಡಿಕೊಳ್ಳಲಿ ಎಂದು ಹೇಳುತ್ತ ನಿರ್ಗಮಿಸಲು ಮೇಲೆದ್ದರು.
***
ಸಮಕಾಲೀನ ರಾಜಕಾರಣದ ವಿಶೇಷವೆಂದರೆ ಜನಪ್ರತಿನಿಧಿಗಳ ನಾಮವಾಚಕಗಳನ್ನು ವಿಶೇಷಣಗಳಿಂದ ಅಲಂಕರಿಸುವುದು ಸಾಮಾನ್ಯ. ಕೆಲವು ರಾಜಕಾರಣಿಗಳ ನಾಮವಾಚಕಗಳ ಪೂರ್ವಾರ್ಧದಲ್ಲಿ ನರಿ ತೋಳ ಕತ್ತೆ ಕುದುರೆ ಕಾಗೆ ಗೂಬೆಗಳಂಥ ಪ್ರಾಣಿಪಕ್ಷಿಗಳ ಹೆಸರುಗಳನ್ನು ಅಂಟಿಸಿದರೆ, ಇನ್ನೂ ಕೆಲವು ರಾಜಕಾರಣಿಗಳ ನಾಮವಾಚಕಗಳ ಪೂವರ್ಾರ್ಧದಲ್ಲಿ ಶಕುನಿ ದುಶ್ಯಾಸನ ದುರ್ಯೋಧನ ರಾವಣ ಕುಂಭಕರ್ಣ ಧರ್ಮರಾಯಗಳಂಥ ಪೌರಾಣಿಕ ವ್ಯಕ್ತಿಗಳ ನಾಮವಾಚಕಗಳಿಂದ ಅಲಂಕರಿಸಿರುವರು. ಇದರ ಹಿಂದೆ ಸಾಮಾನ್ಯ ಪ್ರಜೆಗಳ ಕೈವಾಡವಿರುವುದೋ! ಮಾಧ್ಯಮಗಳ ಸಂಚಿರುವುದೋ! ಈ ನಿಗೂಢತೆ ಕಗ್ಗಂಟಾಗಿ ಉಳಿದಿರುವುದು. ಶ್ರೀಯುತ ಕ್ಷೇತ್ರಪಾಲ್ ಉಕ್ಕಡ್ ಇಂಥ ವಿಶೇಷಣಗಳಿಂದ ತಮ್ಮ ನಾಮವಾಚಕ ಮಲಿನಗೊಳ್ಳದಂತೆ ಮೊನ್ನೆಮೊನ್ನೆವರೆಗೆ ಜಾಗ್ರತೆ ವಹಿಸಿದ್ದರು. ಶ್ರೀಯುತರು ಆರಂಭದಲ್ಲಿ ಚಾಣಾಕ್ಷ ಎಂಬ ಉಪಾದಿಗೆ ಪಾತ್ರರಾಗಿದ್ದರು. ಆದರೆ ಇತ್ತೀಚಿನ ದಿವಸಗಳಲ್ಲಿ ಅಪರ ಔರಂಗಜೇಬ ಎಂಬ ಐತಿಹಾಸಿಕ ವ್ಯಕ್ತಿಯ ನಾಮವಾಚಕದ ಗೌರವಕ್ಕೆ ಪಾತ್ರರಾಗಿರುವರು. ಆ ಉಪಾದಿಯನ್ನು ಕಳಚಿಕೊಳ್ಳಲು ಸನ್ಮಾನ್ಯರು ಅಹರ್ನಿಶಿ ಶ್ರಮಿಸುತ್ತಿರುವರು. ತಮ್ಮ ನಡೆನುಡಿ ನಯನಾಜೂಕಾಗಿರುವಂತೆ ಪ್ರಯತ್ನಿಸುತ್ತಿರುವರು. ಅದಕ್ಕೆ ನಿದರ್ಶನವೆಂದರೆ..
ಶ್ರೀಯುತರು ನಾಂತರೀಯಕ್ ಆಸ್ಪತ್ರೆಯಿಂದ ಹೊರಬರುವ ಮೊದಲು ಸಂತರಂತೆ ಮುಖವಾಡ ಧರಿಸಿದರು. ಅಗತ್ಯಕ್ಕಿಂತ ಹೆಚ್ಚು ನಿಟ್ಟುಸಿರುಗಳನ್ನು ಬಿಡಲಾರಂಭಿಸಿದರು. ಮುಖದ ಮೇಲೆ ಸೂತಕ ಮುದ್ರೆಯನ್ನು ಸ್ಥಾಪಿಸಿಕೊಳ್ಳುವುದನ್ನು ಮರೆಯಲಿಲ್ಲ. ಅಲಾಯುಧರ ಅನಾರೋಗ್ಯ ಕುರಿತಂತೆ ಮಾಧ್ಯಮಗಳ ಸಮಕ್ಷಮ ಅತ್ಯಂತ ಮಾನವೀಯ ಪದಗಳನ್ನು ಪುಂಖಾನುಪುಂಖವಾಗಿ ಪ್ರಯೋಗಿಸಿದರು. ಸ್ವಭಾವತಃ ಕಟ್ಟಾ ನಾಸ್ತಿಕರಾದ ಅವರು ಆಸ್ತಿಕತೆಯ ಮುಖವಾಡ ಧರಿಸಿದರು. ಆ ಹಿರಿಯರು ಗುಣಮುಖರಾಗುವವರೆಗೆ ತಾವು ಮುಖಕ್ಷೌರ ಮಾಡಿಸಿಕೊಳ್ಳುವುದಿಲ್ಲ, ಮಾಂಸಾಹಾರ ಸೇವಿಸುವುದಿಲ್ಲ, ಅಶ್ಲೀಲಪದಗಳನ್ನು ಪ್ರಯೋಗಿಸುವುದಿಲ್ಲ, ಹಾಗೂ ಯಾವುದೇ ಮನೋರಂಜನ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಘೋಷಿಸಿದರು. ಮಹಿಷ್ಮತಿರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಒಂದುವಾರ ಅಲಾಯುಧರ ಹೆಸರಿನಲ್ಲಿ ವಿಶೇಷ ಪೂಜೆ ಮೂರು ಹೊತ್ತು ನಡೆಯುವಂತೆ ಆದೇಶಿಸಿದರು. ಅಲಾಯುಧರ ಹೃದಯ ಸ್ತಂಭಿಸಿದಂತೆ ಧರ್ಮಗುರುಗಳು ದೇವರಲ್ಲಿ ಅಹರ್ನಿಶಿ ಪ್ರಾರ್ಥಿಸಬೇಕೆಂದು ಕರೆಕೊಟ್ಟರು. ಆಸ್ಪತ್ರೆಗೆ ದಾಖಲಾಗಿರುವ ಶ್ರೀಯುತರ ಗ್ರಹಗತಿಗಳನ್ನು ಪರಿಶೀಲಿಸುವಂತೆ ಜ್ಯೋತಿಷಿಗಳಲ್ಲಿ ಮನವಿ ಮಾಡಿಕೊಂಡರು. ಭೂತಪ್ರೇತ ಪಿಶಾಚಿಗಳು ನಾಂತರೀಯಕ್ ಆಸ್ಪತ್ರೆ ಬಳಿ ಸುಳಿಯದಂತೆ ದಿಗ್ಬಂಧನ ವಿಧಿಸಬೇಕೆಂದು ವಾಮಾಚಾರಿಗಳಲ್ಲಿ ಮಂತ್ರವಾದಿಗಳಲ್ಲಿ ಕೇಳಿಕೊಂಡರು.
ಇಂಥ ಆದೇಶಗಳನ್ನು ಹೊರಡಿಸುತ್ತಲೂ, ಮನವಿಗಳನ್ನು ಸಲ್ಲಿಸುತ್ತಲೂ, ಹೆಜ್ಜೆಹೆಜ್ಜೆಗೆ ಶಿವನಾಮಸ್ಮರಣೆ ಮಾಡುತ್ತಲೂ ನಾಂತರೀಯಕ್ ಆಸ್ಪತ್ರೆಯಿಂದ ಕಾಲ್ನಡೆಗೆಯಲ್ಲಿ ಹೊರಟರು. ರಸ್ತೆ ಎಡಬಲದಲ್ಲಿ ಫ್ಲೆಕ್ಸ್ಬೋಡರ್ುಗಳು ಆಳೆತ್ತರದ ಕಟೌಟುಗಳು! ಮಾಧ್ತಮಗಳಿಂದಾಗಿ ಅವರ ಪಾದಯಾತ್ರೆ ತಕ್ಕ ವೀಕ್ಷಕವಿವರಣೆ ಸಹಿತ ನೇರ ಪ್ರಸಾರವಾಗಲಾರಂಭಿಸಿತು. ಅರೆ ಹೊಸ ಮುಖ್ಯಮಂತ್ರಿಗಳು ನಡೆಯುತ್ತಿರುವುದೆಂದರೇನು? ಅವರು ಹಾಗಿರುವರೋ ಹೀಗಿರುವರೋ! ಅವರು ಗಂಟೆಗೆ ಎಷ್ಟು ಮೈಲಿ ವೇಗದಲ್ಲಿ ನಡೆಯುತ್ತಿರಬಹುದು! ಅವರ ಬೆನ್ನ ಮರೆಯಲ್ಲಿ ಯಾರಾದರೂ ಜನಪ್ರಿಯ ನಟರಿರಬಹುದೆ! ಈ ತೆರನ ಕುತೂಹಲದಿಂದಾಗಿ ಜನ ಅವರನ್ನು ತಲುಪಲು ದರ್ಶನ ಪಡೆಯಲು ಪ್ರಯತ್ನಿಸಿದರು.
ಆದರೆ ಆ ಅದೃಷ್ಟು ನಾತಂರೀಯಕ್ ಬಡಾವಣೆ ನಿವಾಸಿಗಳಿಗೆ ಮಾತ್ರ ಲಭಿಸಿತು ಅವರು ತಮ್ಮತಮ್ಮ ನಿವಾಸಗಳಲ್ಲಿದ್ದ ಹೂಮಾಲೆಗಳೊಂದಿಗೆ ರಸ್ತೆ ಕಡೆ ಧಾವಿಸಿದರು. ತಡೆಯಲು ಬಂದ ಪೋಲಿಸರನ್ನು ಕೊಸರಿ ಶ್ರೀಯುತರ ಕೊರಳಿಗೆ ಮಾಲೆಗಳನ್ನು ಹಾಕತೊಡಗಿದರು. ಅದೇ ಸಮಯಕ್ಕೆ ಸರಿಯಾಗಿ ರಸ್ತೆಯ ಇನ್ನೊಂದು ಪಾಶ್ರ್ವದಿಂದ ಮುಖ್ಯಮಂತ್ರಿ ಡೌನ್ ಡೌನ್, ಕಾರ್ಪೊರೇಟ್ ಕಂಪನಿಗಳ ಕೈಗೊಂಬೆಗೆ ಧಿಕ್ಕಾರ ಎಂದು ಕೂಗುತ್ತ ಮಾವೋವಾದಿ ಕಮ್ಯುನಿಷ್ಟ್ ಪಕ್ಷದ ರಾಜ್ಯ ಸಂಚಾಲಕ ಪ್ರೊ ಪರಿಭ್ರಮಣ್ ಮರಲ್ ನೇತೃತ್ವದಲ್ಲಿ ಕೆಲವು ಅವಿವಾಹಿತ ಎಡಪಂಥೀಯವಾದಿಗಳು ಕೂಗುತ್ತ ಬಂದರು. ಅವರು ಏನು ಮಾಡುತ್ತಿದ್ದರೋ! ಅವರ ನಿರೀಕ್ಷೆಯಲ್ಲಿದ್ದ ಇವರು ಏನು ಮಾಡುತ್ತಿದ್ದರೋ! ಅಷ್ಟರಲ್ಲಿ ಬಂಧಿಸಿ ವ್ಯಾನಿನೊಳಗೆ ತುಂಬಿದರು. ಇಂಥ ಸಜೀವ ಪ್ರಸಂಗಗಳನ್ನು ಶ್ರೀಯುತರು ಮಂದಹಾಸದೊಂದಿಗೆ ಜೀರ್ಣಿಸಿಕೊಂಡರು. ನಡೆದೂ ನಡೆದು ಸುಸ್ತಾಗಿ ಉಕ್ಕಡ್ ಇನ್ನೂ ಎಷ್ಟು ದೂರ ನಡೆಯಬೇಕು ಸಿವಂಗಿ ಎಂದು ಕಾರ್ಯದರ್ಶಿಗಳನ್ನು ಕೇಳಿದರು. ಅದಕ್ಕೆ ಓಘವಂತ್ ಕೇವಲ ಎರಡೇ ಎರಡು ಕಿಲೋಮೀಟರ್ ನಡೆದಲ್ಲಿ ತಾವು ಮತದಾರನ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸುವಿರಿ ಸಾರ್ ಎಂದು ಹೇಳಿದರು. ರಸ್ತೆಯ ಎರಡೂ ಪಕ್ಕ ನಿಂತು ಹಷರ್ೋದ್ಗಾರ ಮಾಡುತ್ತಿರುವ ಜನ, ತಮ್ಮತ್ತ ಹೂವುಗಳನ್ನು ಎಸೆಯುತ್ತಿರುವ ಜನ, ತಮ್ಮ ಆಡಳಿತ ಕುರಿತಂತೆ ಅಪಾರ ನಿರೀಕ್ಷೆ ಇರಿಸಿಕೊಂಡಿರುವ ಜನ, ತಮ್ಮಂಥ ಸೋಗಲಾಡಿ ರಾಜಕಾರಣಿಗಳಿಗೆ ಹಿಡಿಹಿಡಿ ಶಾಪ ಹಾಕುತ್ತಿರುವ ಜನ! ಕ್ಷೇತ್ರಪಾಲ್ ವಿಚಿತ್ರ ಆಲೋಚನೆಗಳಿಂದ ಕಂಪಿಸಿದರು.
ಸೂಕ್ತನಿರ್ವಹಣೆಯಿಲ್ಲದೆ ಆ ರಸ್ತೆ ಕುಷ್ಟವ್ಯಾಧಿಗ್ರಸ್ತನ ದೇಹವನ್ನು ನೆನಪಿಸುವಂತಿತ್ತು. ಹಿಂದಿನ ದಿವಸ ತುಂತುರು ಮಳೆಯಾಗಿದ್ದರಿಂದ ಕಂದಕಗಳಲ್ಲಿ ಮಲಿನನೀರು ನಿಂತಿತ್ತು. ಅದಲ್ಲದೆ ಒಳಚರಂಡಿ ಕೆರಳಿ ಅಲ್ಲಲ್ಲಿ ಸ್ಪೋಟಿಸಿತ್ತು. ಬೀದಿ ನಾಯಿಗಳು ಭಯದಿಂದಾಗಿ ಬೊಗಳುವಿಕೆಯನ್ನು ಉಪಸಂಹರಿಸಿಕೊಂಡಿದ್ದವು. ಅಲ್ಲಲ್ಲಿದ್ದ ಇಲಿ ಹೆಗ್ಗಣಗಳ ಕಳೇಬರಗಳು ಕಾಗೆಗಳನ್ನು ಕೈಬೀಸಿ ಕರೆಯುತ್ತಿದ್ದವು. ಪಾದಾಚಾರಿಗಳು ಅವ್ಯಾಹತವಾಗಿ ವಿಸರ್ಜಿಸಿದ್ದ ಮೂತ್ರದ ದುರ್ವಾಸನೆಯ ಭೀಕರ ಕೊಕ್ಕು ಗಣ್ಯರ ಮೂಗುಗಳನ್ನು ಘಾಸಿಗೊಳಿಸುತ್ತಿತ್ತು. ಕರವಸ್ತ್ರದಿಂದ ಮೂಗನ್ನು ಭದ್ರಪಡಿಸಿಕೊಂಡರೆಲ್ಲಿ ನಗರದ ಸತ್ಪ್ರಜೆಗಳು ಉಪದ್ರವಿಗಳಾಗುವರೋ ಎಂಬ ಆತಂಕಕ್ಕೀಡಾದರು ಸನ್ಮಾನ್ಯರು. ಅವರ ದೊಡ್ಡಸ್ತಿಕೆ ಎಂದರೆ ತಮ್ಮೆರಡೂ ಕೈಗಳನ್ನು ಎತ್ತಿ ಅಲುಗಾಡಿಸುತ್ತ ಪ್ರಜಾನಿಕವನ್ನು ಸಮ್ಮೋಹನಗೊಳಿಸುತ್ತಿದ್ದರು. ಮಾರ್ಗಮಧ್ಯೆ ಮಾಧ್ಯಮದವರು ಕೇಳಿದ ಅಮೂಲ್ಯ ಪ್ರಶ್ನೆಗೆ ಶ್ರೀಯುತರು ತಡವರಿಸದೆ ಇಲಿ ಹೆಗ್ಗಣ ಕ್ರಿಮಿ ಕೀಟಗಳ ವಿದ್ವಂಸಕ ಕೃತ್ಯವನ್ನು ನಿಯಂತ್ರಿಸಲು ತಮ್ಮ ಸರ್ಕಾರ ಕಠಿಣ ಕಾನೂನುಗಳನ್ನು ರೂಪಿಸುವುದಾಗಿ ಹೇಳಿದರು. ಇನ್ನೊಂದು ಸಮಯೋಚಿತ ಪ್ರಶ್ನೆಗೆ ರಾಜ್ಯದ ಬಹುಮುಖ್ಯ ನಗರಗಳಲ್ಲಿನ ಒಳಚರಂಡಿ ಸರ್ವಾಂಗೀಣ ಅಭಿವೃದ್ದಿ ತಮ್ಮ ಸರ್ಕಾರದ ಗುರಿ ಎಂದು ಘೋಷಿಸುವುದನ್ನು ಶ್ರೀಯುತರು ಮರೆಯಲಿಲ್ಲ.
ಅಷ್ಟರಲ್ಲಿ ಆಗಮಿಸಿದ ರಸ್ತೆ ಕ್ರಮಿಸಿದ ರಸ್ತೆಯಷ್ಟು ಕಳಪೆಯಾಗಿರಲಿಲ್ಲ. ತುಂಡುಗುತ್ತಿಗೆದಾರ ಕೇವಲ ಅರ್ಧ ಕಿಲೋಮೀಟರ್ ಉದ್ದದ ರಸ್ತೆಯ ಕಾಮಗಾರಿ ನಡೆಸಿದ್ದ. ಅಧಿಕಾರಿಗಳು ಹಣ ಬಿಡುಗಡೆ ಮಾಡದಿದ್ದದರಿಂದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಲೋಕೋಪಯೋಗಿ ಕಛೇರಿಗೆ ಅಲೆಯುತ್ತಿದ್ದ. ಸ್ವಲ್ಪ ದೂರ ಕ್ರಮಿಸಿದ ಮುಖ್ಯಮಂತ್ರಿಯವರ ಇಮೇಜ್ ಹೆಚ್ಚಿಸಿದ ಘಟನೆ ಅನತಿದೂರದಲ್ಲಿ ಸಂಭವಿಸಿತು. ಅದೆಂದರೆ! ರಸ್ತೆ ಇಕ್ಕೆಲದುದ್ದಕ್ಕೂ ಅಪೂರ್ಣವಾಗಿದ್ದ ಬಹುಮಹಡಿ ಕಟ್ಟಡಗಳಿದ್ದವು. ಅವುಗಳಲ್ಲಿ ಬಹುಪಾಲು ಕಟ್ಟಡಗಳು ಅಹರ್ನಿಶಿ ನಿರ್ಮಾಣಗೊಳ್ಳುತ್ತಲೇ ಇದ್ದವು. ಮಹಿಷ್ಮತಿರಾಜ್ಯದ ಉತ್ತರ ಜಿಲ್ಲೆಗಳಿಂದಲೂ, ನೆರೆಹೊರೆಯ ರಾಜ್ಯಗಳ ಬರಪೀಡಿತ ಜಿಲ್ಲೆಗಳಿಂದಲೂ ವಲಸೆ ಬಂದಿದ್ದ ಅಸಂಘಟಿತ ಕಟ್ಟಡಕಾರ್ಮಿಕರು ರಸ್ತೆಯ ಎರಡೂ ಮಗ್ಗುಲು ತ್ಯಾಜ್ಯವಸ್ತುಳ ನೆರವಿನಿಂದ ಚಿಕ್ಕಚಿಕ್ಕ ಝೋಪಡಿಗಳನ್ನು ಅರಮನೆಯಾಕಾರದಲ್ಲಿ ರಚಿಸಿಕೊಂಡಿದ್ದರು. ಅವುಗಳಲ್ಲಿ ತಮ್ಮತಮ್ಮ ಅಸಂಖ್ಯಾತ ಕುಟುಂಬ ಸದಸ್ಯರೊಡನೆ ವಾಸಿಸುತ್ತಿದ್ದರು. ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುತ್ತಿರುವುದನ್ನು ಗೌರವಿಸಲೆಂದು ಮಾಲಿಕರ ಸಲಹೆಯಂತೆ ಗುತ್ತಿಗೆದಾರರು ಅವರಿಗೆಲ್ಲ ಸಂಬಳರಹಿತ ರಜೆ ಘೋಷಿಸಿದ್ದರು. ದೊಡ್ಡದೊಡ್ಡ ಅಸ್ಥಿಪಂಜರಗಳಂತಿದ್ದ ಬಹುಭಾಷಾ ತಾಯಂದಿರು ತಮ್ಮತಮ್ಮ ಕಂಕುಳಲ್ಲಿ ಚಿಕ್ಕಚಿಕ್ಕ ಸೈಜಿನ ಅಸ್ಥಿಪಂಜರಗಳಂತಿದ್ದ ಶಿಶುಗಳನ್ನು ಆಭರಣಗಳಂತೆ ಧರಿಸಿ ರಸ್ತೆ ಎರಡೂ ಪಕ್ಕ ನಿಂತಿದ್ದರು. ವಾಡೇ ಸೂಡು ಉಕ್ಕಡು ಎಂದು ಮಹಿಳೆ ತನ್ನ ಪಕ್ಕದ ಮಹಿಳೆಗೆ ಹೇಳಿದ್ದು ಕೇಳಿಸಿಕೊಂಡರು ಮುಖ್ಯಮಂತ್ರಿ. ತಮ್ಮ ಸ್ವಯಂಕೃಷಿಯ ಫಲ ರಸ್ತೆಯಲ್ಲಿ ಅಪೂರ್ವ ಕಲಾಕೃತಿ ರಚಿಸಬಹುದೆಂದು ಅವರು ಊಹಿಸಿರಲಿಲ್ಲ. ಅದೆಂದರೆ!
ಬಾಲಕ ದೈಹಿಕವಾಗಿ ಸಣಕಲನಿದ್ದ. ಟೊಣೆಯನೆಂಬ ನಾಮವಾಚಕದ ಗೌರವವಕ್ಕೆ ಭಾಜನನಾಗಿದ್ದ. ಅನಿಯಮಿತವಾಗಿ ಶಾಲೆಗೆ ಹೋಗುತ್ತಿದ್ದ, ಅಲ್ಲಿ ನಿಯಮಿತವಾಗಿ ಅಕ್ಷರ ದಾಸೋಹವನ್ನು ಭೋಜನ ಮಾಡುತ್ತಿದ್ದ. ಅವನು ತನ್ನ ಸಹವಾರಿಗೆ ಮಕ್ಕಳಿಗಿಂತ ಅಕ್ಷರಸ್ಥನಾಗಿದ್ದ ತಕ್ಕಮಟ್ಟಿಗೆ. ಸಕ್ಕರೆ ಖಾಯಿಲೆಯ ಪ್ರಭಾವದಿಂದಾಗಿ ಎಷ್ಟು ನೀರು ಕುಡಿಯುತ್ತಿದ್ದನೋ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮೂತ್ರ ವಿಸರ್ಜಿಸುವುದನ್ನು ಕರಗತ ಮಾಡಿಕೊಂಡಿದ್ದ. ಮುಖ್ಯಮಂತ್ರಿಗಳಿಗೆ ಶುಭಕೋರಲೆಂದೇ ಅಪಾರ ಮೂತ್ರವನ್ನು ವಿಸರ್ಜಿಸದೆ ಸಂಗ್ರಹಿಸಿಟ್ಟುಕೊಂಡಿದ್ದ. ಅತಿಗಣ್ಯ ವ್ಯಕ್ತಿ ಅಲ್ಲಿ ಆಗಮಿಸುವುದನ್ನು ನೋಡಿದೊಡನೆ ಕಾರ್ಯೋನ್ಮುಖನಾದ. ಓಡಿ ಬಂದವನೆ ರಸ್ತೆ ಮೇಲೆ ಮಕ್ಯಮಂತರಿ ಅವರಗ ಸೋಗತ ಎಂಬ ಅಕ್ಷರಗಳನ್ನು ಮೂತ್ರದ ನೆರವಿನಿಂದ ರಚಿಸುವಲ್ಲಿ ಸಫಲನಾದನು. ಬಂಧಿಸಲಿದ್ದ ಪೋಲಿಸರನ್ನು ಮುಖ್ಯಮಂತ್ರಿಗಳು ತಡೆದರು. ಮೆಲ್ಲಗೆ ಹೋಗಿ ಓದಿದರು, ಅಸಹ್ಯಪಟ್ಟುಕೊಳ್ಳದೆ ಆಸ್ವಾದಿಸಿದರು. ಅಳುಕದೆ ನಿಂತಿದ್ದ ಬಾಲಕನ ಬಳಿಗೆ ಹೋಗಿ ಹೆಗಲ ಮೇಲೆ ಕೈಯಿರಿಸಿದರು. ಐವತ್ತರ ನೋಟು ನೀಡಿ ಅಭಿನಂದಿಸಿದರು. ಆ ದೃಶ್ಯವನ್ನು ಮಾಧ್ಯಮಗಳು ನೇರಪ್ರಸಾರ ಮಾಡಿದವು. ಅದನ್ನು ನೋಡಿದ ಮಕ್ಕಳು ಅಲ್ಲಲ್ಲಿ ಅದನ್ನು ಪುನರಾವರ್ತಿಸಿದರು, ಆದರೆ ಅವರ ಸೃಜನಶೀಲ ಕ್ರಿಯೆಗೆ ನೇರಪ್ರಸಾರ ಸೌಲಭ್ಯವಿರಲಿಲ್ಲ.
ಆಲಾಯುಧರ ಹೃದಯಾಘಾತ, ನಾಂತರೀಯಕ್ ಆಸ್ಪತ್ರೆ, ಅಸ್ತವ್ಯಸ್ತ ಉಡುಪು, ಆಗಲೇ ಮೊಳೆಯಲುಪಕ್ರಮಿಸಿದ್ದ ಗಡ್ಡ, ಅಲ್ಲಿಂದ ಭುವನವಿಜಯದತ್ತ ಪಾದಯಾತ್ರೆ, ಇಕ್ಕೆಲ್ಲದಲ್ಲಿ ತಮ್ಮನ್ನು ಅಭಿನಂದಿಸುತ್ತಿರುವ ಜನಸ್ತೋಮ. ಅಲ್ಲಲ್ಲಿ ಘಟಿಸುತ್ತಿರುವ ಅಪರೂಪದ ಘಟನೆಗಳು! ವಿಮಾನ ನಿಲ್ದಾಣದಿಂದ ನೇರವಾಗಿ ಹೊರಟಿದ್ದರೆ ಈ ಇಮೇಜ್ ಲಭಿಸುತ್ತಿರಲಿಲ್ಲವೆಂದು ಶ್ರೀಯುತರು ಭಾವಿಸಿದರು. ವಿಲಕ್ಷಣ ಘಟನೆಗಳು ಪುನಃಪುನಃ ಸಂಭವಿಸಲೆಂದು ಆಪೇಕ್ಷಿಸಿದರು. ಅದಕ್ಕೆಂದೇ ಅವರು ತಮ್ಮ ನಡೆಗೆಯನ್ನು ಮಂದ್ರಸ್ಥಾಯಿಗೆ ಇಳಿಸಿದರು. ಮಾಧ್ಯಮದವರ ಗಮನ ಸೆಳೆಯಲೆಂದು ಕೆಲವು ಕೊಳಚೆಗೇರಿಯ ಮಕ್ಕಳನ್ನು ಎತ್ತಿ ಮುದ್ದಾಡಿದರು. ಇನ್ನೂ ಕೆಲವರ ಯೋಗಕ್ಷೇಮ ವಿಚಾರಿಸಿದರು. ವೃದ್ದೆಯರ ಎಣ್ಣೆವಂಚಿತ ತಲೆಗಳನ್ನು ನೇವರಿಸಿದರು ಸೂಕ್ತ ಸ್ಪರ್ಶದೊಡನೆ. ಇದ್ದಕ್ಕಿದ್ದಂತೆ ಝೋಪಡಿಗಳನ್ನು ಪ್ರವೇಶಸಿ ಬಡಿಸಿದ ಅಡುಗೆಯನ್ನು ಸೇವಿಸಿದರು. ಅಲ್ಯೂಮಿನಿಯಂ ಲೋಟಗಳಲ್ಲಿ ನೀಡಿದ ನೀರು ಕುಡಿದರು. ಅಮಶಂಕೆ ಕಾಲರ! ವೈದ್ಯರ ಸಲಹೆಯನ್ನು ಲೆಕ್ಕಿಸದೆ. ಆ ಕಡೆಯಿಂದ ಇವರು ಬಂದರೆ, ಈ ಕಡೆಯಿಂದ ಅವರು ಬಂದರು. ನೋಡು ನೋಡುವಷ್ಟರಲ್ಲಿ ಪಾದಯಾತ್ರೆ ಶೋಭಾಯಾತ್ರೆಯಾಗಿ ರೂಪಗೊಂಡಿತು. ಜಯಕಾರ ಜಯಘೋಷಣೆಗಳು ಹೆಚ್ಚುತ್ತ ಹೋದವು. ಕುರುಕ್ಷೇತ್ರದ ಅನಾಹತ ಪಕ್ಷದ ವರಿಷ್ಠರ ಪರವಾಗಿ ಆಗಮಿಸಿದ್ದ, ಆ ಯಾತ್ರೆಯಲ್ಲಿ ಸಜೀವವಾಗಿ ಪಾಲ್ಗೊಂಡಿದ್ದ ಶ್ರೀ ಜಗವರ್ತಿ ಸಿಪಿಲ್ ಅಡಿಗಡಿಗೆ ಪುಳಕಗೊಳ್ಳುತ್ತಿದ್ದರು. ತಮ್ಮ ಅನುಭವವನ್ನು ವರಿಷ್ಠರಾದ ಶ್ರೀದರ್ಭಶಯನ್ ಗುಲಾಲ್ ಅವರಿಗೆ ವರದಿ ಮಾಡುತ್ತಿದ್ದರು. ಗುಲಾಲ್ ಅದನ್ನು ಸಯ್ಗೆಗೆ ರವಾನಿಸುತ್ತಿದ್ದರು. ಶೋಭಾಯಾತ್ರೆಯಲ್ಲಿ ಛದ್ಮವೇಷ ಧರಿಸಿ ಪಾಲ್ಗೊಂಡಿದ್ದ ಋಣಾನುಬಂಧಪಕ್ಷದ ಗೂಢಾಚಾರಿ ಮುಗುಳಂಬ್ ತೀನು ತನ್ನ ವರದಿಗಳಿಂದ ಪಾಣಿಪತ್ನಲ್ಲಿದ್ದ ಪಕ್ಷದ ವರಿಷ್ಠ ಅರಣ್ಯಕ್ ಬರಾಟಿಯವರಲ್ಲಿ ಆತಂಕ ಸೃಷ್ಠಿಸಿದ್ದ. ಅಂತೂ ಇಂತೂ ಕೊನೆಗೂ ಶ್ರೀಕ್ಷೇತ್ರಪಾಲ ಉಕ್ಕಡ್ ತಮ್ಮ ಸಹಸ್ರಾರು ಸಂಗಡಿಗರೊಂದಿಗೆ ಭುವನವಿಜಯ ಸಮೀಪಿಸಿದರು.
***
ಬೇಸರ ಮಾಡಿಕೊಳ್ಳಲು ರಾಜ್ಯಪಾಲರಿಗೆ ಮತ್ತು ನ್ಯಾಯಮೂರ್ತಿಗಳಿಗೆ ಅವರವೇ ಆದಂಥ ಕಾರಣಗಳಿದ್ದವು. ಅವೆಲ್ಲ ವೈಯಕ್ತಿಕವೂ ಗಂಭೀರ ಸ್ವರೂಪದವೂ ಆಗಿದ್ದವು. ಘನವೆತ್ತ ಪರಜಾತ್ ನಿರಾಕಾರ್ ಧರ್ಮಪತ್ನಿ ಶ್ರೀಮತಿ ಪಾಪವಿಮೋಚನಾ ಧಾರ್ಮಿಕ ಸ್ವಭಾವದವರು. ಅವರು ಪ್ರತಿದಿವಸ ಒಂದಲ್ಲಾ ಒಂದು ವ್ರತಗಳನ್ನು ಆಚರಿಸುತ್ತಿದ್ದರು. ಐದು ಮಂದಿ ಸಾಧುಗಳನ್ನು ರಾಜಭವನಕ್ಕೆ ಬರಮಾಡಿಕೊಳ್ಳುತ್ತಿದ್ದರು. ಅವರ ಪಾದಗಳಿಗೆ ಪೂಜೆ ಸಲ್ಲಿಸಿ ಬಳಿಕ ಆಹಾರ ಪಾನೀಯ ನೀಡಿ ಸತ್ಕರಿಸುತ್ತಿದ್ದರು. ಭುಜಿಸುವ ಮುನ್ನ ಆಹಾರದ ಮೂರನೆ ಒಂದು ಭಾಗವನ್ನು ತಿನ್ನಿಸಲೆಂದು ಶ್ಯಾಮಲವರ್ಣದ ಹಸುವನ್ನು ಮಥುರಾದಿಂದ ತರಿಸಿ ಪೋಷಿಸುತ್ತಿದ್ದರು. ಅದನ್ನು ಕಾಶ್ಯಪಿ ಎಂಬ ಮುದ್ದಾದ ಹೆಸರಿನಿಂದ ಕರೆಯುತ್ತಿದ್ದರು. ಹದಿಹರೆಯದ ಆ ಚತುಷ್ಪಾದಿಯು ಅಂಬಾ ಅಂಬಾ ಎಂದು ಅರಚಿ ತಾನು ಬೆದೆಗೆ ಬಂದಿರುವುದಾಗಿ ಸಾದರಪಡಿಸುತ್ತಿತ್ತು. ಆ ಶಬ್ಧ ಅರ್ಧ ಕಿಲೋಮೀಟರ್ ದೂರದವರೆಗೆ ವ್ಯಾಪಿಸುತ್ತಿತ್ತು. ಅದರ ಜನನಾಂಗದ ಪರಿಮಳ ಎರಡು ಕಿಲೋಮೀಟರ್ ದೂರದವರೆಗೆ ಹರಡುತ್ತಿತ್ತು. ಕಾಕತಾಳೀಯವೆಂದರೆ ರಾಜಭವನದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ ಗೋವಳಿಗನೋರ್ವ ಸಹಸ್ರಾರು ಅಡಿ ವಿಸ್ತೀರ್ಣದ ನಿವೇಶನದಲ್ಲಿ ಮಣ್ಣು ಹಾಗೂ ಸಿಮೆಂಟ್ ಮಿಶ್ರಿತ ಕಟ್ಟಡವನ್ನು ನಿರ್ಮಿಸಿಕೊಂಡಿದ್ದನು. ಪ್ರಹರಿ ದ್ವಾರದ ಮೇಲೆ ಅಘಾಸುರನಿಲಯ ಎಂಬ ನಾಮಫಲಕವನ್ನು ಅಂಟಿಸಿದ್ದನು. ತನ್ನ ನಿಜವಾದ ಹೆಸರು ಕಟೂಕ್ತಿ ಎಂದಿತ್ತು. ಆದರೆ ತಾನು ನೋಟರಿ ಸಮಕ್ಷಮ ಮಹಿಷಾಸುರ ಕಟೂಕ್ತಿ ಎಂದು ಕಾನೂನು ರೀತ್ಯ ಬದಲಿಸಿಕೊಂಡಿದ್ದನು. ಅದರ ಸುತ್ತ ಇದ್ದ ಕೊಟ್ಟಿಗೆಯಲ್ಲಿ ನೂರಕ್ಕಿಂತ ಹೆಚ್ಚು ರಾಸುಗಳನ್ನು ಸಾಕಿಕೊಂಡಿದ್ದನು. ಅವುಗಳಲ್ಲಿ ಎಮ್ಮೆಗಳು ಅಧಿಕವಾಗಿದ್ದವು. ಹಸುಗಳು ಅಲ್ಪ ಸಂಖ್ಯೆಯಲ್ಲಿದ್ದವು. ಅವುಗಳಲ್ಲಿ ಒಂದೇಒಂದು ಹೋರಿ ಯುಕ್ತವಯಸ್ಸಿಗೆ ಬಂದಿತ್ತು. ಅದು ಅತ್ಯಾಕರ್ಷವಾಗಿತ್ತು. ಮಹಿಷಾಸುರ ಅದಕ್ಕೆ ಕಾರ್ತವೀರ್ಯ ಎಂಬ ಹೆಸರನ್ನಿರಿಸಿದ್ದನು. ಕಾಶ್ಯಪಿಯ ಅರಣ್ಯರೋಧನ ಆಲಿಸಿ, ಜನನಾಂಗದ ಪರಿಮಳವನ್ನು ಆಘ್ರಾಣಿಸಿ ಕಾರ್ತವೀರ್ಯ ನಿಂತಲ್ಲಿಯೇ ಕುಣಿದು ಕುಪ್ಪಳಿಸುತ್ತಿದ್ದನು. ಅದಕ್ಕೆ ಪ್ರತಿಯಾಗಿ ತನ್ನ ಹೇಷಾರವದಿಂದ ಕಾಶ್ಯಪಿಯನ್ನು ರೋಮಾಂಚನಗೊಳಿಸುತ್ತಿದ್ದನು. ಕೆಲವೊಮ್ಮೆ ಕಟ್ಟಿರುತ್ತಿದ್ದ ಗೂಟದ ಸಂಗಡ ರಾಜಭವನದವರೆಗೆ ಓಡುತ್ತಿದ್ದನು. ಪ್ರಿಯೆ ಎಲ್ಲಿರುವೆ, ನಿನ್ನಲ್ಲಿಗೆ ಬರುವೆ ಎಂದು ಗುಟುರು ಭಾಷೆಯಲ್ಲಿ ಸಂದೇಶ ರವಾನಿಸುತ್ತಿದ್ದನು. ಕಾಲು ಕೆದರಿ ನೆಲವನ್ನು ಅಗೆಯುತ್ತಿದ್ದನು. ಇನ್ನೇನು ಪ್ರಹರಿ ಗೋಡೆಯ ಮುಖ್ಯದ್ವಾರವನ್ನು ಪ್ರವೇಶಿಸಬೇಕೆನ್ನುವಷ್ಟರಲ್ಲಿ ಸಿಪಾಯಿಗಳಿಂದ ಹಲ್ಲೆಗೀಡಾಗುತ್ತಿದ್ದನು. ಹತಾಶನಾಗಿ ಅಘಾಸುರನಿಲಯಕ್ಕೆ ಮರಳುತ್ತಿದ್ದನು. ಕಾಶ್ಯಪಿಯ ಅನುಭವ ಅದೇ ಆಗಿತ್ತು. ರಾಜಭವನದ ಭದ್ರತಾ ಮುಖ್ಯಸ್ಥ ಏಕಧರ್ ಸುತಲ್ ಅವೆರಡೂ ಚತುಷ್ಪಾದಿಗಳ ನಡವಳಿಕೆಯನ್ನು ಅಶ್ಲೀಲ ಅನೈತಿಕವೆಂದು ಪರಿಗಣಿಸದೆ ಇದ್ದದು ತನ್ನ ದೊಡ್ಡಗುಣ. ಅವೆರಡರ ಸಮಾಗಮಕ್ಕೆ ಅವಕಾಶ ಕಲ್ಪಿಸಿ ಎಂದು ಪಾಪವಿಮೋನಾ ಮೇಡಂ ಅವರಿಗೆ ಉಪಯುಕ್ತ ಸಲಹೆ ನೀಡಿದನು. ಅದರಿಂದ ಆಕೆ ಕೆರಳಿದರು. ಸುತಲ್! ಕಾಶ್ಯಪಿ ಸಾಮಾನ್ಯ ಹಸುವೆಂದು ತಿಳಿದಿರುವಿ ಏನು? ಪವಿತ್ರ ಮುಥುರಾ ಆಕೆಯ ಜನ್ಮಸ್ಥಳ, ಆಕೆಯ ಪೂರ್ವಿಕರು ಶ್ರೀಕೃಷ್ಣಪರಮಾತ್ಮನ ಕೊಟ್ಟಿಗೆಯಲ್ಲಿದ್ದರು. ಅಂಥ ಮಹಿಮಾನ್ವಿತೆ ಒಬ್ಬ ಯಕಃಶ್ವಿತ್ ಗೋವಳಿಗನ ಹೋರಿ ಸಂಗಡ! ಛೇಛೆ ಹೇಳಲಾಗುತ್ತಿಲ್ಲ, ಧರ್ಮಸಂಕಟ ಅರ್ಥ ಮಾಡಿಕೋ, ಸಾಧ್ಯವಾದರೆ ಆ ಗೋವಳಿಗನನ್ನೂ ಅವನ ರಾಸುಗಳನ್ನೂ ಅಲ್ಲಿಂದ ಒಕ್ಕಲೆಬ್ಬಿಸು. ಇದರಿಂದ ನಿನಗೆ ಪುಣ್ಯ ಬರುವುದು. ಅದಕ್ಕೆ ಕಠಿಣ ಕಾನೂನುಗಳನ್ನು ಪ್ರಯೋಗಿಸಲು ಹಿಂಜರಿಯಬೇಡ ಎಂದು ನೋವು ಮಿಶ್ರಿತ ಸಲಹೆ ನೀಡಿದರು.
ಗೋವಳಿಗನ ಹೆಸರೇ ಮಹಿಷಾಸುರ! ಕಟೂಕ್ತಿ ಎಂಬ ಅಡ್ಡಹೆಸರು ಬೇರೆ. ಅಲ್ಲದೆ ಅವನು ದುಮಂಗಲ, ಪುಣ್ಯಚರಣ್ ಪಿಂಡಾರಿಯರಂಥ ಮಾಫಿಯಾ ದೊರೆಗಳ ಮಹಾಪೋಷಕ! ಮಾವೋವಾದಿ ಕಮ್ಯುನಿಷ್ಟ್ ಪಕ್ಷದ ನೇತಾರ ಪ್ರೊ ಪರಿಭ್ರಮಣ್ ಮರಲ್ ಅವರ ಸಾಕುತಂದೆ! ಅಲ್ಲದೆ ಕ್ಷೇತ್ರಪಾಲ್ ಅವರ ಮನೆಗೆ ಹಾಲು ಸರಬರಾಜು ಮಾಡುತ್ತಿರುವುದು ಅವನೆ! ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಮಹಿಷ್ಮತಿರಾಜ್ಯದ ಯಾದವ ಸಂಘದ ಗೌರವ ಅಧ್ಯಕ್ಷ ಅವನೆ! ಅವನ ಆ ಪಿತ್ರಾರ್ಜಿತ ಸ್ವತ್ತಿಗೆ ಎರಡು ಮೂರು ಶತಮಾನಗಳ ಇತಿಹಾಸವಿರುವುದು. ವಿಚಿತ್ರವೆಂದರೆ ಕಪಿತ್ಥನಗರ ಆಧುನಿಕತೆಯನ್ನು ಮೈಗೂಡಿಸಿಕೊಂಡರೂ ತಾನು ಮಾತ್ರ ಪಶುಪಾಲಕ ಸಂಸ್ಸೃತಿಯ ಪ್ರತಿನಿಧಿಯಂತೆ ಕಂಗೊಳಿಸುತ್ತಿರುವನು. ಆ ಚತುಷ್ಪಾದಿಗಳ ಲೈಂಗಿಕ ಸಮಸ್ಯೆಯನ್ನು ಹೇಗಾದರೂ ಪರಿಹರಿಸಬಹುದು. ಆದರೆ ಸಹಸ್ರಾರು ಅಡಿ ವಿಸ್ತೀರ್ಣದ ದನದ ಕೊಟ್ಟಿಗೆಯ ಉಪದ್ರವವನ್ನು ಪರಿಹರಿಸುವುದು ಕಷ್ಟ. ಅದರ ಹಿಂಬದಿಯಲ್ಲಿ ರೋಲಂಬ್, ಕಲ್ಪಾಗ್ನಿ ಹೆಸರಿನ ಬಹುಮಹಡಿ ಕಟ್ಟಡಗಳುಂಟು. ಅವುಗಳಲ್ಲಿ ಅಬಕಾರಿ ದೊರೆಗಳ, ಉದ್ಯಮಿಗಳ ಸರಕಾರೀ ನಿವೃತ್ತ ವರಿಷ್ಠಾಧಿಕಾರಿಗಳ, ಚಲನಚಿತ್ರ ಕಲಾವಿದರ ತಂತ್ರಜ್ಞರ ಹೆಚ್ಚುವರಿ ಕುಟುಂಬಗಳು ವಾಸಿಸುತ್ತಿರುವವು. ಆಯಾ ಕುಟುಂಬಗಳ ಸದಸ್ಯರು ಶಾರೀರಿಕವಾಗಿ ಸೂಕ್ಷ್ಮ. ಮಂಗಳಾರತಿ ಕೊಟ್ಟರೆ ಉಷ್ಣ, ತೀರ್ಥ ಸೇವಿಸಿದರೆ ಶೀತ ಎನ್ನುವಷ್ಟರ ಮಟ್ಟಿಗೆ! ದನಗಳ ಅರಚುವಿಕೆಯಿಂದ ತಮ್ಮ ಶ್ರವಣೇಂದ್ರಿಯಗಳು ಅಪವಿತ್ರವಾದವೆಂದು ಚೀರುತ್ತಿದ್ದರು. ದನಗಳ ಗಂಜಳ ವಾಸನೆಯಿಂದ ತಮ್ಮ ಘ್ರಾಣೇಂದ್ರಿಯಗಳ ಮೂಲಸ್ವರೂಪ ಬದಲಾದರೇನು ಗತಿ ಎಂದು ಚಿಂತಿಸುತ್ತಿದ್ದರು. ಮಹಿಷಾಸುರನನ್ನೂ ದನಗಳನ್ನೂ ಅಲ್ಲಿಂದ ನಿಖಾಲೆಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು, ನ್ಯಾಯಾಲಯದಲ್ಲಿ ಖಟ್ಲೆ ಸಹ ದಾಖಲಿಸಿದ್ದರು.
ಅದರ ಬಲಬದಿಯಲ್ಲಿ ಅಂದರೆ ಅಖಂಡಲ್ ರಸ್ತೆಯ ಪಕ್ಕ ಗ್ರೇಡಿಯಂಟ್ ಇಂಟರ್ನ್ಯಾಷನಲ್ ಫೈವ್ ಸ್ಟಾರ್ ಹೋಟಲ್ ಇರುವುದು. ಅಲ್ಲಿ ವಾಸ್ತವ್ಯ ಹೂಡುವವರಲ್ಲಿ ಬಹುತೇಕರು ವಿದೇಶಿ ಪ್ರವಾಸಿಗಳು. ಅವರು ಪರಿಮಳದ ದಾರಿ ಕ್ರಮಿಸಿ ಕೊಟ್ಟಿಗೆಯನ್ನು ಪ್ರವೇಶಿಸಿ ಓಹ್ ಕೌ, ಓಹ್ ಬಫೆಲೋ, ಓಹ್ ಬುಲ್ ಎಂದು ಉದ್ಗರಿಸಿ ಆನಂದಿಸುತ್ತಿದ್ದರು. ಆದರೆ ರಾಜ್ಯದ ಹಾಗೂ ದೇಶದ ಗಣ್ಯ ಗಿರಾಕಿಗಳು ವಾಟ್ ಎ ನಾನ್ಸೆನ್ಸ್. ಆ ಕೌವಾರ್ಡನನ್ನು ಜೈಲಿಗೆ ಕಳಿಸಿ ಎಂದು ಹೋಟಲ್ ಮಾಲಕನ ಮೇಲೆ ಒತ್ತಡ ಹೇರುತ್ತಿದ್ದರು. ಭೂಗರ್ಭದಲ್ಲಿದ್ದ ಒಳಚರಂಡಿ ಪೈಪುಗಳು ಅಲ್ಲಲ್ಲಿ ಚದುರಿ ಕುಡಿಯುವ ನೀರಿನೊಂದಿಗೆ ಬಾಂಧವ್ಯ ಬೆಸೆದಿದ್ದವು. ಅದರಿಂದಾಗಿ ದನಗಳು ನಿಮಿಷ ನಿಮಿಷಕ್ಕೊಮ್ಮೆ ವಿಸರ್ಜಿಸುತ್ತಿದ್ದ ಮೂತ್ರ ಕುಡಿಯುವ ನೀರಿನ ಪೈಪುಗಳಲ್ಲಿ ಸಮಪ್ರಮಾಣದಲ್ಲಿ ಮಿಶ್ರಣಗೊಳ್ಳುತ್ತಿತ್ತು. ಆದ್ದರಿಂದ ಸಹಜವಾಗಿಯೇ ನೀರು ಸೇವನೆ ಮಾಡುತ್ತಿದ್ದವರು ಮುಖಗಳನ್ನು ಸಿಂಡರಿಸಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ಸಮಸ್ಯೆಗಳಿದ್ದಾಗ್ಯೂ ಮಹಿಷಾಸುರನ ಮೈಗೂದಲು ಕೊಂಕಿಸುವ ಸಾಹಸಕ್ಕೆ ಯಾವ ಜನಪ್ರತಿನಿಧಿ ಕೈಹಾಕಲಿಲ್ಲ.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೊರಡಲೆಂದು ಘನವೆತ್ತರು ವಿಶೇಷ ಉಡುಪುಗಳನ್ನು ಧರಿಸಿ ಸಿದ್ದರಾಗಿದ್ದರು. ಆದರೆ ಅದೇ ಹೊತ್ತಿನಲ್ಲಿ ಕಾರ್ತವೀರ್ಯನಿಗೂ ರಾಜಭವನದ ಭದ್ರತಾ ಸಿಬ್ಬಂದಿಗೂ ನಡುವೆ ಘರ್ಷಣೆ ಸಂಭವಿಸಿತು. ವಿಷಯ ತಿಳಿದೊಡನೆ ಮಹಿಷಾಸುರ ತನ್ನ ಅಸಂಖ್ಯಾತ ಸಂಗಡಿಗರೊಂದಿಗೆ ಆ ಕಡೆಯಿಂದ ಬಂದರೆ, ಏಕಧರ್ ಸುತಲ್ ಕಳಿಸಿದ ತುರ್ತು ಸಂದೇಶದಿಂದಾಗಿ ಪೋಲಿಸರ ಮೀಸಲುಪಡೆ ಈ ಕಡೆಯಿಂದ ಆಗಮಿಸಿತು. ಇನ್ನೇನು ಆ ಎರಡೂ ಪಂಗಡಗಳ ನಡುವೆ ಘನಘೋರ ಸಂಗ್ರಾಮ ನಡೆಯಬೇಕೆನ್ನುವಷ್ಠರಲ್ಲಿ ಘನವೆತ್ತರು ಮಧ್ಯೆ ಪ್ರವೇಶಿಸಿದರು. ಹಿತನುಡಿಗಳನ್ನಾಡಿ ಅವರನ್ನು ಆ ಕಡೆಗೂ, ಇವರನ್ನು ಈ ಕಡೆಗೂ ಕಳಿಸಿದರು. ಈ ಕಾರಣದಿಂದ ಘನವೆತ್ತ ರಾಜ್ಯಪಾಲರಾದ ಶ್ರೀ ಪರಜಾತ್ ನಿರಾಕಾರ್ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭ ತಲುಪುವಲ್ಲಿ ವಿಳಂಬವಾಯಿತು.
ಇನ್ನು ನ್ಯಾಯಮೂರ್ತಿಗಳಾದ ಸರ್ವಶ್ರೀ ಪಿಂಗಾಕ್ಷ ಶ್ರಾವಸ್ಥಿಯವರು ಅದೇ ಅವಧಿಯಲ್ಲಿ ಕ್ಲಿಷ್ಟಕರ ಸಮಸ್ಯೆಯನ್ನು ಅನುಭವಿಸುತ್ತಿದ್ದರು. ಸನ್ಮಾನ್ಯರು ಹೊರಡಲೆಂದು ಸರ್ವಾಂಗಭೂಷಿತರಾಗಿ ನಿವಾಸದ ಮುಖ್ಯದ್ವಾರ ಸಮೀಪಿಸಿದರು. ತಮ್ಮ ಮೇಲಿರುವ ಅಮಾನತ್ತನ್ನು ಅನೂರ್ಜಿತಗೊಳಿಸುವಂತೆ ಮನವಿ ಮಾಡಿಕೊಳ್ಳಲೆಂದು ದೋಷಾಕರ ಜಿಲ್ಲೆಯ ನ್ಯಾಯಾಧೀಶ ಶ್ರೀ ಮಂಗಳಾಷ್ಟಕ್ ಹಡದೆ ಮೊನ್ನೆ ದಿವಸ ಅಲ್ಲಿಗೆ ಆಗಮಿಸಿದ್ದರು. ಅವರನ್ನು ಪ್ರಸನ್ನಗೊಳಿಸಲು ನಿವಾಸದ ಊಳಿಗಕ್ಕೆ ಸ್ವಇಚ್ಚಯಿಂದ ಸಮರ್ಪಿಸಿಕೊಂಡಿದ್ದರು. ಅವರು ಶ್ರೀಯುತರ ಬೆಲೆಬಾಳುವ ಶೂಸುಗಳನ್ನು ಅದೇ ತಾನೇ ಪಾಲಿಷ್ ಮಾಡಿ ಮುಗಿಸಿದ್ದರು. ಅದರಲ್ಲಿ ತಮ್ಮ ಪ್ರತಿಬಿಂಬ ದರ್ಶಿಸಿ ಸಂತೃಪ್ತರಾದರು. ಅವೆರಡನ್ನೂ ನ್ಯಾಯಮೂರ್ತಿಗಳ ಪಾದಗಳ ಬಳಿ ಇರಿಸಿದರು. ಅವರ ವರ್ತನೆ ಶ್ರಾವಸ್ಥಿಯವರಿಗೆ ಅಸಮಾಧಾನ ತಂದಿತು. ಅವರತ್ತ ತೀಕ್ಷ್ಣ ನೋಟ ಬೀರಲು ಸಾಧ್ಯವಾಗಲಿಲ್ಲ. ನೀವಿನ್ನು ಊರಿಗೆ ಹೊರಡಿ ಎಂದು ಹೇಳುವುದೂ ಸಾಧ್ಯವಾಗಲಿಲ್ಲ. ಎಲ್ಲೋ ಸದ್ದು ಕೇಳಿಸಿತು. ಕತ್ತೊರಳಿಸಿ ನೋಡಿದರು. ಮಧ್ಯವಯಸ್ಕ ಮಹಿಳೆ ಕಾವಲು ಪೋಲಿಸ್ನ ಸಂಗಡ ವಾಗ್ವಾದಕ್ಕಿಳಿದಿದ್ದಳು. ಅವನಿಂದ ಕೊಸರುತ್ತಿದ್ದಳು. ಅಷ್ಟರಲ್ಲಿ ಅವರಿಬ್ಬರು ತಮ್ಮನ್ನು ನೋಡಿದರು. ಬಳಿ ಬರುವಂತೆ ಆಕೆಗೆ ಕೈಸನ್ನೆಯಿಂದ ಸೂಚಿಸಿದರು. ಓಡಿ ಬಂದವಳೆ ತಮ್ಮ ಪಾದದ ಬಳಿ ಕುಸಿದಳು, ಬಿಕ್ಕಿದಳು. ಆಕೆ ಮುಂಗಾಲುಗಳನ್ನು ಬಿಗಿಯಾಗಿ ಹಿಡಿದದ್ದರಿಂದ ಶ್ರೀಯುತರ ಪ್ಯಾಂಟು ಮಲಿನವಾಯಿತು. ಹಿಂದಕ್ಕೆ ಸರಿಯಲಾಗಲಿಲ್ಲ. ಕೊನೆಗೂ ಬಿಡಿಸಿಕೊಂಡರು, ಎರಡೂ ಕೈಗಳಿಂದ ಆಕೆಯನ್ನು ಹಿಡಿದು ಮೇಲೆತ್ತಿದರು, ಅಪಾದಮಸ್ತಕ ದಿಟ್ಟಿಸಿದರು. ಕಾರಣ ತಿಳಿಯಬೇಕೆನ್ನುಷ್ಟರಲ್ಲಿ ಆಕೆ ಕೈಯಲ್ಲಿದ್ದ ಲಕೋಟೆಯನ್ನು ಅವರಿಗೆ ಹಸ್ತಾಂತರಿಸಿದಳು. ಅದನ್ನು ನೋಡುವ ಮೊದಲು ಶ್ರೀಯುತರು ಕನ್ನಡಕ ಧರಿಸಿದರು. ಲಕೋಟೆಯಲ್ಲಿ ಅಕ್ಷರಭರಿತ ಎರಡು ಹಾಳೆಗಳು ಒಂದಕ್ಕೊಂದು ಅಂಟಿದ್ದವು ಬೆವರಿನಿಂದ ಕಣ್ಣೀರಿನಿಂದ. ಆರಂಭದ ವಾಕ್ಯಗಳನ್ನು ಓದಿ ದಿಗ್ಭ್ರಮಿತರಾದರು. ಅದರಲ್ಲಿದ್ದ ಒಕ್ಕಣಿಕೆ ಎಂದರೆ..
ನ್ಯಾ ಶ್ರಾವಸ್ಥಿ ಚಂಬೋನ್ ಜಿಲ್ಲೆಯ ಸತ್ರ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ನಡೆದ ಘಟನೆ. ರಾಜಾರ್ಕ ಎಂಬ ವ್ಯಕ್ತಿಯ ಹೆಂಡತಿ ಮತ್ತು ಇಬ್ಬರು ಮಕ್ಕಳು ಹತ್ಯೆಗೀಡಾಗಿದ್ದರು. ಅದನ್ನು ಪತ್ನಿಗೆ ಗಂಡನಾದವನು, ಮಕ್ಕಳಿಗೆ ತಂದೆಯಾದವನು ಮಾಡಿರುವನೆಂದು ಮೃತಳಭಾವ ಖಟ್ಲೆ ದಾಖಲಿಸಿದ್ದ. ಮಾಡಿಲ್ಲವೆಂದು ಅವನು! ಮಾಡಿರುವನೆಂದು ಇವನು! ಕೇಸು ಹನ್ನೊಂದು ತಿಂಗಳು ಕಾಲ ನಡೆಯಿತು. ವಿಚಾರಣೆ ಸಂದರ್ಭದಲ್ಲಿ ಆಪಾದಿತನ ಮುಖದ ಮೇಲೆ ಮಂದಹಾಸ ಅಚ್ಚಳಿಯದೆ ಉಳಿದಿರುವುದನ್ನು ನ್ಯಾಯಧೀಶರು ಗಮನಿಸುತ್ತಿದ್ದರು. ಅವನ ಶ್ರೀಮದ್ಗಾಂಭೀರ್ಯವನ್ನು ತಮ್ಮಿಂದ ಸಹಿಸಲಾಗಲಿಲ್ಲ. ಸಾಕ್ಷ್ಯಾಭಾವದಿಂದಾಗಿ ಅವನನ್ನು ತಾವು ನಿರ್ಧೋಷಿ ಎಂದು ಘೋಷಿಸಿ ಬಿಡುಗಡೆ ಮಾಡಬಹುದಿತ್ತು, ಅದಕ್ಕೆ ತಕ್ಕ ಪುರಾವೆಗಳಿದ್ದವು. ಆದರೆ ಬರೆದಿದ್ದ ತೀರ್ಪನ್ನು ರಾತ್ರೋರಾತ್ರಿ ಪುನಃ ಬದಲಿಸಿದರು. ನ್ಯಾಯಾಲಯದಲ್ಲಿ ಜನ ಕಿಕ್ಕಿರಿದಿದ್ದರು. ಅವನು ಬಿಡುಗಡೆಗೊಳ್ಳುವನೆಂದೇ ಭಾವಿಸಿದ್ದರು. ಆದರೆ ತಾವು ಮರಣದಂಡನೆ ವಿಧಿಸಿ ತೀರ್ಪು ನೀಡಿದ್ದರಿಂದ ಅವರೆಲ್ಲ ಆಘಾತಕ್ಕೀಡಾದರು. ಬಂಧಿಸಲು ಧಾವಿಸಿದ ಪೋಲಿಸರಿಂದ ಕೊಸರಿ ರಾಜಾರ್ಕ ನಿರಪರಾಧಿಯಾದ ನನಗೆ ಮರಣದಂಡನೆ ವಿಧಿಸಿದ ನಿಮ್ಮನ್ನು ದೇವರು ಕ್ಷಮಿಸುವುದಿಲ್ಲ ನ್ಯಾಯಾಧೀಶರೆ ಎಂದು ಕೂಗಿ ಹೇಳಿದ. ಮನೆಯಲ್ಲಿ ತಮ್ಮ ಪತ್ನಿಯೂ ತಮ್ಮ ಆತ್ಮಸಾಕ್ಷ್ಯವನ್ನು ಸಂದೇಹಿಸಿದಳು. ಶೇಕಡಾ ಎಂಭತ್ತರಷ್ಟು ಮರೆತ್ತಿದ್ದ ಘಟನೆ. ಆದರೆ ಈ ಮಹಿಳೆ ಅಪರಾಧಿಯ ತಾಯಿಯಂತೆ! ತಾಯಿಯ ಹೃದಯ ಎಲ್ಲಾ ನ್ಯಾಯಾಲಯಗಳಿಗಿಂತ ಅತ್ಯುಚ್ಚ ಮಟ್ಟದಲ್ಲಿರುವುದಂತೆ! ತನ್ನ ಮಗ ನಿರಾಪರಾಧಿ ಎಂದು ತನ್ನ ಮಾತೃಹೃದಯಕ್ಕೆ ತಿಳಿದಿರುವುದಂತೆ! ಆ ತೀರ್ಪನ್ನು ಪುನಃ ಪರಿಶೀಲಿಸಬೇಕಂತೆ!
ನನ್ನ ಮಗ ಎಂಥವನೆಂಬುದು ತಾಯಿಯಾದ ನನಗೆ ಗೊತ್ತು ಸ್ವಾಮಿ. ಕಟಕಟೆಯಲ್ಲಿ ನುಡಿದ ನನ್ನ ಸಾಕ್ಷ್ಯವನ್ನು ಗಂಭೀರವಾಗಿ ಪರಿಗಣಿಸದೆ ಅನ್ಯಾಯ ಮಾಡಿದಿರಿ ಸ್ವಾಮಿ. ನಿಮಗೆ ಅಂತರಾತ್ಮ ಇರಬೇಕಿತ್ತಲ್ಲವೆ! ನನ್ನ ಮಗನನ್ನು ಭೌತಿಕವಾಗಿ ನಾಶಪಡಿಸಬಹದು, ಆದರೆ ನನ್ನ ಹೃದಯದಲ್ಲಿರುವ ಮಗ ಚಿರಂಜೀವಿ. ಈಗ ತಾವು ಉಚ್ಚನ್ಯಾಯಾಧೀಶರಾಗಿದ್ದೀರಿ. ನಿಮ್ಮ ತೀಪರ್ುಗಳನ್ನು ನನ್ನ ಮಗನ ಆತ್ಮ ಪ್ರಶ್ನಿಸುವುದು ಎನ್ನುವುದನ್ನು ಮರೆಯದಿರಿ ಸ್ವಾಮಿ. ನೀವೂ ನನ್ನಂಥ ತಾಯಿಯ ಮಗ ಎನ್ನುವುದನ್ನು ಮರೆಯದಿರಿ ಸ್ವಾಮಿ. ಕಾಲ ಮಿಂಚಿಲ್ಲ ಬುದ್ದಿ, ಇದನ್ನೇ ಮೇಲ್ಮನವಿ ಎಂದು ಪರಿಗಣಿಸಿ ನ್ಯಾಯ ಒದಗಿಸಿ ದೇವರೆ ಎಂದು ಕಿವಿಗಡಚಿಕ್ಕುವಂತೆ ತೋಡಿಕೊಂಡಳು ತನ್ನೆದೆಯೊಳಗಿನ ನೋವನ್ನು.
ತತ್ಕ್ಷಣ ವಿಷಾದಪೂರ್ಣ ನಿಟ್ಟುಸಿರುಬಿಡುವುದೋ! ನೀರಿನ ಹಬೆಯಿಂದಾಗಿ ಮಂಜುಗವಿಯುತ್ತಿರುವ ಕಣ್ಣುಗಳನ್ನು ಮೆಲ್ಲಗೆ ಉಜ್ಜಿ ಸರಿಪಡಿಸಿಕೊಳ್ಳುವುದೋ! ನ್ಯಾಯಾಲಯ ತನ್ನ ಕರ್ತವ್ಯ ನಿರ್ವಹಿಸಿದೆ ತಾಯಿ, ನಾನು ಅಸಹಾಯಕ ಎಂದು ಹೇಳುವುದೋ! ಉಭಯ ಸಂಕಟ ಅನುಭವಿಸುವಷ್ಟರಲ್ಲಿ ಧರ್ಮಪತ್ನಿ ಕ್ರೌಂಚಾಯಿನಿ ಧಾವಿಸಿ ಬಂದರು. ಸಮಸ್ತ ಮಾತುಕತೆಯನ್ನು ಆಲಿಸಿರುವುದಾಗಿ ಆಂಗಿಕ ಅಭಿನಯದ ಮೂಲಕ ಹೇಳಿದರು. ನಿಮ್ಮ ಕರ್ತವ್ಯ ಸರಿಯಾಗಿ ನಿರ್ವಹಿಸಿಲ್ಲವೆಂದು ಆ ದಿವಸವೇ ಹೇಳಿದ್ದು ನೆನಪಿದೆ ತಾನೆ! ನಾನೂ ಎರಡು ಮಕ್ಕಳ ತಾಯಿ ಎನ್ನುವುದನ್ನು ಮರೆಯದಿರಿ, ತಾಯಿಯ ಸಂಕಟ ತಾಯಿಗೆ ಅರ್ಥವಾಗುವುದೇ ವಿನಃ ಪುರುಷರಾದ ನಿಮಗೆ ಅರ್ಥವಾಗುವುದಿಲ್ಲ. ನಾನೂ ಈ ನತದೃಷ್ಟೆಯ ಪರವಾಗಿ ಮೇಲ್ಮಮನವಿ ಸಲ್ಲಿಸುತ್ತೇನೆ, ದಯವಿಟ್ಟು ವಿಚಾರಣೆ ಕೈಗೆತ್ತಿಕೊಳ್ಳಿ ಎಂಬ ಕಠಿಣ ಮಾತುಗಳನ್ನಾಡಿದರು.
ಶ್ರೀಯುತ ನಿರಾಕಾರ್ ಒಂದು ಕ್ಷಣ ಕಣ್ಣು ಮುಚ್ಚಿ ತೆರೆದರು. ನೋಡಿದರು. ಆಕೆಯೊಳಗೆ ಈಕೆಯೋ! ಈಕೆಯೊಳಗೆ ಆಕೆಯೋ! ತನ್ನ ಮಗ ಬೆಳೆದು ಯುಕ್ತವಯಸ್ಸಿಗೆ ಬಂದು ರಾಜಾರ್ಕನ ಸ್ಥಿತಿ ತಲುಪಿದಂತೆ! ತೆರೆದಿದ್ದ ರೆಪ್ಪೆಯೊಳಗೆ ಕನಸು ಕಂಡು ಬೆಚ್ಚಿದರು. ಮರಣದಂಡನೆಯ ವಿಧಿವಿಧಾನಗಳನ್ನು ಕಲ್ಪಿಸಿಕೊಂಡು ನಡುಗಿದರು. ತಡಮಾಡದೆ ಮನವಿಯನ್ನು ಅರ್ಜಿಯನ್ನಾಗಿ ಪರಿವರ್ತಿಸಿದರು. ಅದೇ ತಾನೆ ಬಂದ ನ್ಯಾಯಾಲಯದ ಶಿರಸ್ತೆದಾರ ಕಪರ್ದ್ ಕೈಗೆ ಅದನ್ನು ಹಸ್ತಾಂತರಿಸಿದರು, ಸೂಕ್ತ ಸಲಹೆ ನೀಡಿದರು. ಕ್ರೌಂಚಾಯಿನಿಯ ಸಮಾಧಾನದ ಉಸಿರ ಶೃಂಖಲೆಯಲ್ಲಿ ಬಂಧಿತಳಾದ ತಾಯಿ ಕರಜೋಡಿಸಿದಳು.
ತಮ್ಮ ದೇಹದಲ್ಲಿನ ಪಂಚೇದ್ರಿಯಗಳು ಸ್ಥಿತಿಸ್ಥಾಪಕ ಗುಣಗಳನ್ನು ಕಳೆದುಕೊಳ್ಳುತ್ತಿರುವಂತೆ ಭಾಸವಾಯಿತು. ಅವುಗಳಿಗೆ ಸಾಂತ್ವನ ಹೇಳುತ್ತ ಮೆಲ್ಲಗೆ ಮೆಟ್ಟಿಲಿಂದ ಮೆಟ್ಟಿಲಿಗಿಳಿದು ನಿರೀಕ್ಷೆಯಲ್ಲಿದ್ದ ಕಡು ನೀಲವರ್ಣದ ವಾಹನ ಸಮೀಪಿಸಿದರು. ಪ್ರಹರಿ ಆವರಣದಲ್ಲಿನ ಗಿಡಮರಗಳ ಮರೆಯಲ್ಲಿ ಸೌಜನ್ಯಯುತರಾಗಿ ಅವಿತಿದ್ದ ಅತಿಗಣ್ಯರು ತಮ್ಮತಮ್ಮ ವಾಹನಗಳ ಕಡೆ ನಡೆದರು. ಆಗಸದ ನಟ್ಟನಡುವೆ ಇದ್ದ ಸೂರ್ಯ ತಮ್ಮೆಲ್ಲರ ನೆರಳುಗಳನ್ನು ಹ್ರಸ್ವಗೊಳಿಸಿದ್ದ. ತಾವು ಉಪಸ್ಥಿತರಿದ್ದ ವಾಹನ ಅಗತ್ಯಕ್ಕಿಂತ ಹೆಚ್ಚು ವೇಗವಾಗಿ ಚಲಿಸಲಾರಂಭಿಸಿತು, ಕಾರಣ ಆಗಿರುವ ವಿಳಂಬ ಸರಿದೂಗಿಸುವ ಹೊಣೆ ಚಾಲಕನ ಹೆಗಲ ಮೇಲಿತ್ತು. ವಾಹನ ಮುಂದೆ ಮುಂದೆ ಚಲಿಸುತ್ತಿರುವುದೋ, ಇಕ್ಕೆಲದಲ್ಲಿದ್ದ ಗಿಡಮರಗಳು, ಸಾರಿಗೆಯ ಸೂಚನಾ ಫಲಕಗಳು, ಉಚ್ಚನ್ಯಾಯಾಲಯದ ನಿರ್ಧಾಕ್ಷಣ್ಯತೆಯ ರೂಪಕದಂತಿದ್ದ ಕೇಸರಿ ವರ್ಣದ ಕಟ್ಟಡಗಳು ಹಿಂದೆ ಹಿಂದೆ ಸರಿಯುತ್ತಿರುವವೋ! ಎಲ್ಲಿ ಅಪಘಾತ ಸಂಭವಿಸಿ ತಾವು ಕ್ಷತಗಾತ್ರರಾಗುವೆವೋ! ಅಗೋ ಅಲ್ಲಿ ಸ್ಥಾವರ ಸದೃಶ ಭುವನವಿಜಯ ತಮ್ಮನ್ನು ಸಮೀಪಿಸಿತು. ಕುಶಾಗ್ರಮತಿ ನಿರೂಪಕ ತಮ್ಮ ಆಗಮನವನ್ನು ಅಲಂಕಾರಯುಕ್ತ ವ್ಯಾಕರಣಶುದ್ದ ಮಾತುಗಳಲ್ಲಿ ಸಾದರಪಡಿಸುತ್ತಿರುವುದನ್ನು ಶ್ರೀಯುತರು ಕೇಳಿಸಿಕೊಂಡರು.
ಅದೇ ತಾನೆ ನಿಂತ ವಾಹನದಿಂದ ಚಾಲಕ ಓರೆ ಮಾಡಿದ ಬಾಗಿಲು ಮೂಲಕ ಇಳಿಯುತ್ತಿದ್ದಂತೆ ಶ್ರೀಯುತರು ಮರಣದಂಡೆನೆಗೊಳಗಾದ ಖೈದಿಯಾಗಿ ರೂಪಾಂತರಗೊಂಡಿದ್ದರು. ಅಲ್ಲದೆ ತಮ್ಮ ವಿಳಂಬದಿಂದ ನವಮುಖ್ಯಮಂತ್ರಿಗಳೆಲ್ಲಿ ಬೇಸರ ಮಾಡಿಕೊಂಡರೋ ಎಂಬ ಅಳುಕು. ಕಾಯುತ್ತಿರಬಹುದಾದ ಘನವೆತ್ತ ರಾಜ್ಯಪಾಲರ ಮನಸ್ಸಿಗೆಲ್ಲಿ ನೋವಾಯಿತೋ ಎಂಬ ಅಳುಕು! ಅಳುಕುವುದು ಅನವಶ್ಯಕ ಎಂದು ಮರುಕ್ಷಣದಲ್ಲಿ ಅರ್ಥವಾಯಿತು ಸನ್ಮಾನ್ಯರಿಗೆ. ತಮ್ಮ ಮೆಚ್ಚಿನ ನಾಯಕ ಅಲಾಯುಧರ ಕ್ಷೇಮವೇ ಮಹಿಷ್ಮತಿರಾಜ್ಯದ ಕ್ಷೇಮ! ಅಭಿಮಾನಿಗಳ ಘೋಷಣೆ ಕೇಳಿಸಿಕೊಳ್ಳುತ್ತ ಶ್ರೀ ಕ್ಷೇತ್ರಪಾಲ್ ಬಲದಿಕ್ಕಿನಿಂದ ಬಂದರು. ಎಡದಿಕ್ಕಿನಿಂದ ಬೆವರೊರೆಸಿಕೊಳ್ಳುತ್ತ ಘನವೆತ್ತ ರಾಜ್ಯಪಾಲ ಶ್ರೀ ಪರಜಾತ್ ನಿರಾಕಾರ್ ಆಗಮಿಸಿ ಅವರನ್ನು ಸಂಧಿಸಿದರು. ಅತಿಗಣ್ಯರೆನ್ನಿಸಿದ್ದ ಆ ಮುವ್ವರು ತಮ್ಮತಮ್ಮ ವಿಳಂಬಕ್ಕಿದ್ದ ಸಕಾರಣಗಳನ್ನು ವಿವರಿಸಲು ಉದ್ಯುಕ್ತರಾದರು. ಯಾರೂ ಯಾರನ್ನೂ ಕಾಯಿಸಿಲ್ಲವೆಂದ ಮೇಲೆ ಪರಸ್ಪರ ಸಮಜಾಯಿಷಿ ಅನಗತ್ಯವಿಲ್ಲವೆಂಬ ನಿರ್ಣಯಕ್ಕೆ ಬಂದರು. ಯಾರಲ್ಲೂ ಉತ್ಸಾಹ ಸಂಭ್ರಮವಿರಲಿಲ್ಲ, ಹೆಚ್ಚಿನ ಸಂಖ್ಯೆಯಲ್ಲಿದ್ದ ಅಲಾಯುಧರ ಅಭಿಮಾನಿಗಳು ಸೇರಿದಂತೆ.
ರಾಜ್ಯಪಾಲರ ಸಮಕ್ಷಮ ನ್ಯಾಯಮೂರ್ತಿಗಳು ಪ್ರಮಾಣ ವಚನ ಬೋಧಿಸಿದರು. ಶ್ರೀ ಕ್ಷೇತ್ರಪಾಲ ಅದನ್ನು ತಡವರಿಸಿದೆ ಅನುರಣಿಸಿದರು. ಅಲಾಯುಧರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದರಾದರೂ..
***
ಸನ್ಮಾನ್ಯ ಕ್ಷೇತ್ರಪಾಲ ಉಕ್ಕಡ್ ಅಲಂಕರಿಸಿದ ಮಹಿಷ್ಮತಿರಾಜ್ಯದ ಮುಖ್ಯಮಂತ್ರಿ ಸ್ಥಾನದ ವಿಸ್ತೀರ್ಣ ಇಷ್ಟೇ ಎಂದು ಹೇಳುವುದು ಎಂಥ ಗಣಿತಜ್ಞನಿಗೂ ಸಾಧ್ಯವಿಲ್ಲ. ಮೆಲ್ನೋಟಕ್ಕೆ ಅದು ಅತ್ಯಾಕರ್ಷವಿತ್ತು, ಆದರೆ ಅದರ ಮೇಲೆ ಹೂವುಗಳಿಗಿಂತ ಮುಳ್ಳುಗಳು ಅಧಿಕ ಸಂಖ್ಯೆಯಲ್ಲಿದ್ದವು. ಮುಳ್ಳುಗಳನ್ನು ಸೃಷ್ಠಿಸಿದ ಹಾಗೂ ಅವುಗಳನ್ನು ಪೋಷಿಸಿದ ಶ್ರೇಯಸ್ಸು ನಿಸ್ಸಂದೇಹವಾಗಿ ಮಾಜಿ ಮುಖ್ಯಮಂತ್ರಿ ಶ್ರೀಯುತ ಜಗದುದರ ನಿಷ್ಪತ್ತಿ ಅವರಿಗೆ ಸಲ್ಲಬೇಕು. ಅದಕ್ಕೆ ಅವರ ಸರಳತೆ ಸಜ್ಜನಿಕೆ ಪ್ರಧಾನ ಕಾರಣ. ಅವರು ಯಾರನ್ನೂ ಎದುರು ಹಾಕಿಕೊಳ್ಳಲು ಹೋಗಲಿಲ್ಲ, ಸ್ವಪಕ್ಷೀಯ ಸದಸ್ಯರ ಬೇಕುಬೇಡಗಳನ್ನು ಚಾಣಾಕ್ಷತನದಿಂದ ನಿರ್ವಹಿಸಲಿಲ್ಲ. ಸ್ವಕುಟುಂಬದ ಸದಸ್ಯರ ಮಹತ್ವಾಕಾಂಕ್ಷೆಯನ್ನು ಹತ್ತಿಕ್ಕಲಿಲ್ಲ. ರಾಜ್ಯದ ಕೃಷಿಕರ ಸಮಸ್ಯೆಗಳಲ್ಲಿ ಒಂದನ್ನಾದರೂ ಪರಿಹರಿಸುವ ಇಚ್ಚಾಶಕ್ತಿಯನ್ನು ಪ್ರದರ್ಶಿಸಲಿಲ್ಲ. ಕಪಿತ್ಥನಗರದ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಗತ್ಯಕ್ರಮಗಳನ್ನು ಕೈಗೊಳ್ಳಲಿಲ್ಲ. ಇಲಿಹೆಗ್ಗಣ ಕ್ರಿಮಿಕೀಟಗಳ ಉಪಟಳದ ಕಡೆ ಗಮನ ಹರಿಸಲಿಲ್ಲ. ವಿರೋದಪಕ್ಷದವರ ಹಾಗೂ ಮಾಧ್ಯಮದವರ ಪ್ರಶ್ನೆಗಳಿಗೆ ಪೂರ್ಣ ಪ್ರಮಾಣದ ಉತ್ತರಗಳನ್ನು ವಿತರಿಸಲಿಲ್ಲ. ತಮ್ಮ ನೆರಳಲ್ಲಿ ಪುನರ್ವಸತಿ ಕಂಡುಕೊಂಡಿದ್ದ ಆಡಳಿತಾತ್ಮಕ ದುಷ್ಟಶಕ್ತಿಗಳನ್ನು ನಿವಾರಿಸಲಿಲ್ಲ. ಜ್ಯೋತಿಷಿಗಳ ವಾಸ್ತುಶಾಸ್ತ್ರಜ್ಞರ ವಾಮಾಚಾರಿಗಳ ಸಲಹೆ ಸೂಚನೆಗಳನ್ನು ದಿಕ್ಕರಿಸಲಿಲ್ಲ. ರಾಜ್ಯದ ನೈಸರ್ಗಿಕ ಸಂಪತ್ತನ್ನು ಹಗಲಿರುಳು ಕೊಳ್ಳೆ ಹೊಡೆಯುತ್ತಿದ್ದ ದರೋಡೆಕೋರರನ್ನು ದೂರವಿರಿಸಲಿಲ್ಲ.
ಶ್ರೀಯುತರ ಆಡಳಿತದ ಅವಧಿಯಲ್ಲಿ ಭುವನವಿಜಯ ಸೂಟ್ಕೇಸುಗಳ ಆಗಮನ ನಿರ್ಗಮನ, ಹಾಗೂ ಅವುಗಳ ವಿನಿಮಯ ಕೇಂದ್ರವಾಯಿತು. ಶ್ರೀಯುತರು ಅಧಿಕಾರದುದ್ದಕ್ಕೂ ತಮ್ಮ ಪಂಚೇಂದ್ರಿಯಗಳ ಕ್ರಿಯಾಕಲಾಪವನ್ನು ಸ್ಥಗಿತಗೊಳಿಸಿದರು. ಮುರಿಯುವ ಕೆಲಸಕಾರ್ಯಗಳನ್ನು ಪ್ರೋತ್ಸಾಹಿಸಿದರು, ಆದರೆ ಕಟ್ಟುವ ಕೆಲಸಕಾರ್ಯಗಳನ್ನು ಸಂಪೂರ್ಣವಾಗಿ ಅಲಕ್ಷಿಸಿದರು. ಇದರಿಂದಾಗಿ ಸಾವಿರಗಳನ್ನು ಎಣೆಸುತ್ತಿದ್ದವರು ಲಕ್ಷಗಳನ್ನೂ, ಲಕ್ಷಗಳನ್ನು ಎಣೆಸುತ್ತಿದ್ದವರು ಕೋಟಿಗಳನ್ನೂ, ಕೋಟಿಗಳನ್ನು ಎಣೆಸುತ್ತಿದ್ದವರು ಬಹುಕೋಟಿಗಳನ್ನು ಎಣೆಸಲೆಂದು ಗಣಕಯಂತ್ರಗಳನ್ನು ಖರೀದಿಸಿದರು. ವಾಮಮಾರ್ಗದಿಂದ ಸಂಪಾದಿಸಿದ ಹೇರಳ ಧನರಾಶಿಯನ್ನು ರಾಜ್ಯದ ವಿವಿಧ ಮಠಗಳ ನೆಲಮಾಳಿಗೆಗಳಲ್ಲಿಯೂ, ವಿದೇಶಿ ಬ್ಯಾಂಕುಗಳಲ್ಲಿಯೂ ಭದ್ರಪಡಿಸಿದರು. ಶ್ರೀಯುತ ನಿಷ್ಪತ್ತಿಯವರ ಆಡಳಿತದ ಅವಧಿಯಲ್ಲಿ ಮಹಿಷ್ಮತಿರಾಜ್ಯದ ರಾಜಧಾನಿ ಕಪಿತ್ಥನಗರ ಬಂಡವಾಳಿಶಾಹಿಗಳ ಸ್ವರ್ಗವೆನಿಸಿತು. ದೇಶದ ಇನ್ನಿತರ ರಾಜ್ಯಗಳ ಗೌರವಾನ್ವಿತ ಖದೀಮರ ವಲಸೆಯನ್ನು ನಿಯಂತ್ರಿಸಲು ಶ್ರೀಯುತರಿಂದ ಸಾಧ್ಯವಾಗಲಿಲ್ಲ. ಅವರೆಲ್ಲ ತಮಗರಿವಿಲ್ಲದ ರೀತಿಯಲ್ಲಿ ಸಂಗಡ ಆಯಾ ರಾಜ್ಯಗಳ ಸೊಳ್ಳೆ ತಿಗಣಿಗಳನ್ನೂ ತಂದರು. ಇದರಿಂದಾಗಿ ನಿಷ್ಪತ್ತಿಯವರ ಕಾಲದಲ್ಲಿ ಪರಾವಲಂಭಿ ಕ್ರಿಮಿಕೀಟಗಳ ಸಂತತಿ ಉಪಟಳ ಹೆಚ್ಚಿತು. ಅಹಿಂಸಾವಾದಿಗಳೂ ಕರ್ಮಠರೂ ಆದ ಅವರು ತೆಗೆದುಕೊಂಡ ನಿರ್ಧಾರವೆಂದರೆ ಗೃಹೋಪಯೋಗಿ ಕ್ರಿಮಿನಾಶಕಗಳ ಬಳಕೆಯನ್ನು ನಿಷೇಧಿಸಿದ್ದು. ಇಂಥ ನಿರುಪದ್ರವಿ ಮುಖ್ಯಮಂತ್ರಿಗಳು ಕೇವಲ ಮಹಿಷ್ಮತಿರಾಜ್ಯದಲ್ಲಿ ಮಾತ್ರವಲ್ಲದೆ ಋಣಾನುಬಂಧಪಕ್ಷ ಆಡಳಿತವಿದ್ದ ಇನ್ನಿತರ ರಾಜ್ಯಗಳಲ್ಲೂ ಇದ್ದರು. ಹೀಗಾಗಿ ಚುನಾವಣೆಯಲ್ಲಿ ಋಣಾನುಬಂಧಪಕ್ಷ ಗಣನೀಯ ಸೋಲು ಅನುಭವಿಸಿತು. ಇಂಥ ಕ್ಲಿಷ್ಟಕರ ಸನ್ನಿವೇಶದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಸನ್ಮಾನ್ಯ ಕ್ಷೇತ್ರಪಾಲ ಉಕ್ಕಡ್!
ಮೊಟ್ಟಮೊದಲಿಗೆ ಪಶುಸಂಸ್ಕೃತಿಯ ಪುನರುತ್ಥಾನ ತಮ್ಮ ಸಕರ್ಾರದ ಗುರಿ ಎಂದು ಘೋಷಿಸಿದರು. ರಾಜ್ಯದ ಸಣ್ಣಪುಟ್ಟ ನಗರಗಳ ಆಡಳಿತಾಧಿಕಾರಿಗಳನ್ನು ಜನಪ್ರತಿನಿಧಿಗಳನ್ನು ಕಪಿತ್ಥನಗರಕ್ಕೆ ಆಮಂತ್ರಿಸಿದರು. ಮಣಿಕರ್ಣಿಕಾಘಾಟ್ನಲ್ಲಿ ನಡೆದ ಆ ಸಮಾರಂಭದಲ್ಲಿ ದೇಶದ ಸುವಿಖ್ಯಾತ ಸಾಕುಪ್ರಾಣಿ ಶಾಸ್ತ್ರಜ್ಞರು ಭಾಗವಹಿಸಿದರು. ಮುಖ್ಯಮಂತ್ರಿಗಳು ಸಭೆಯನ್ನು ಉದ್ದೇಶಿಸಿ ಒಂದು ತಾಸು ಉಪನ್ಯಾಸ ನೀಡಿದರು. ನಗರ ಪಟ್ಟಣಗಳ ನೈರ್ಮಲ್ಯ ಸಮಸ್ಯೆ ಬಗ್ಗೆ ಒತ್ತು ನೀಡಿದರು. ಆ ಕೆಲಸವನ್ನು ದ್ವಿಪಾದಿಗಳಿಗೆ ವಹಿಸುವುದೋ ಚತುಷ್ಪಾದಿಗಳಿಗೆ ವಹಿಸುವುದೋ! ಜಿಜ್ಞಾಸೆ ನಡೆಯಿತು. ಅಂತಿಮವಾಗಿ ದ್ವಿಪಾದಿಗಳಿಗಿಂತ ಸೂಕರಗಳಂಥ ಚತುಷ್ಪಾದಿಗಳ ಬಳಕೆ ಸೂಕ್ತವೆಂದು ಸಭೆ ಒಮ್ಮತದ ನಿರ್ಣಯಕ್ಕೆ ಬಂದಿತು. ವರಾಹಗಳ ಪ್ರಸ್ತಾಪ ಕೆಲವು ಪುರಾಣಗಳಲ್ಲಿದೆ, ವಿಷ್ಣು ಪರಮಾತ್ಮ ಅದರ ಅವತಾರದಲ್ಲಿ ಕಾಣಿಸಿಕೊಂಡು ಸೂಕರಗಳ ಪೌರಾಣಿಕ ಸಾಮಾಜಿಕ ಸ್ಥಾನಮಾನ ಎತ್ತಿ ಹಿಡಿದಿರುವನು. ವಿಜಯನಗರವನ್ನು ಆಳಿದ ತುಳುವ ಅರಸು ಶ್ರೀಕೃಷ್ಣದೇವರಾಯ ತನ್ನ ಲಾಂಛನದಲ್ಲಿ ಸೂಕರದ ಚಿಹ್ನೆ ಅಳವಡಿಸಿ ಗೌರವಿಸಿದ್ದನು. ಅವು ಯಾವುದೇ ಭತ್ಯೆಗಳನ್ನಾಗಲೀ, ಸಕರ್ಾರಿ ಸೌಲಭ್ಯಗಳನ್ನಾಗಲೀ ಆಪೇಕ್ಷಿಸದೆ ಹಗಲಿರುಳು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವು, ಶೌಚಫಲಾಹಾರದಿಂದ ಪರಿಸರ ನೈರ್ಮಲ್ಯ ಕಾಪಾಡುತ್ತಿರುವವು. ಅಲ್ಲದೆ ಅವು ಆಹಾರ ರೂಪದಲ್ಲಿ ಶೂದ್ರರ ದೇಹಗಳಿಗೆ ಪೌಷ್ಟಿಕಾಂಶ ಸರಬರಾಜು ಮಾಡುತ್ತಿರುವವು. ಇಂಥ ಬಹೋಪಯೋಗಿ ಚತುಷ್ಪಾದಿಗಳನ್ನು ಕಾರ್ಪೊರೇಟ್ ವಲಯ ನಿರ್ಲಕ್ಷಿಸಿರುವುದು ಅಕ್ಷಮ್ಯ. ತಮ್ಮಂಥ ಮುಖ್ಯಮಂತ್ರಿಗಳು ತಮ್ಮ ಸಂಪುಟದ ಕೆಲವು ಸಹೋದ್ಯೋಗಿಗಳು ಹಂದಿ ನಾಯಿ ಬೆಕ್ಕುಗಳಂಥ ಪ್ರಾಣಿಗಳ ಸಂಗಡ ಒಡನಾಡಿ ತಮ್ಮತಮ್ಮ ಬಾಲ್ಯ ಪೂರೈಸಿರುವೆವು. ಆದ್ದರಿಂದ ಅವುಗಳಿಗೆ ಸಾಮಾಜಿಕವಾಗಿ ಸೂಕ್ತಸ್ಥಾನಮಾನ ನೀಡುವುದು ತಮ್ಮ ಸರ್ಕಾರದ ಆದ್ಯಕರ್ತವ್ಯ. ಆದ್ದರಿಂದ ಎಲ್ಲರೂ ನಗರ ಪಟ್ಟಣಗಳಲ್ಲಿನ ಹಂದಿಗಳ ಜನ್ಮಸಿದ್ದ ಹಕ್ಕುಗಳನ್ನು ರಕ್ಷಿಸಬೇಕು. ಅವುಗಳ ಸಾಕಾಣಿಕೆ ಪ್ರೋತ್ಸಾಹಿಬೇಕು. ಸಾಕುವವರನ್ನು ಬಡತನದ ರೇಖೆಯಿಂದ ಮೇಲೆತ್ತಬೇಕು. ಅವುಗಳನ್ನು ಸಾರ್ವಜನಿಕ ನೈರ್ಮಲ್ಯ ಕೆಲಸಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಿತನುಡಿಗಳನ್ನಾಡಿದರು. ಅಲ್ಲದೆ ಹಂದಿಭಾಗ್ಯ ಯೋಜನೆಯನ್ನೂ ಪ್ರಕಟಿಸಿದರು. ಸಭೆಯಲ್ಲಿ ಉಪಸ್ಥಿತನಿದ್ದ ಮಹಿಷಾಸುರ ಕಟೂಕ್ತಿ ನೇರವಾಗಿ ವೇದಿಕೆ ಪ್ರವೇಶಿಸಿ ಮುಖ್ಯಮಂತ್ರಿಗಳ ಕೊರಳಿಗೆ ಹಾರ ಹಾಕಿ ಬೆಂಬಲ ಸೂಚಿಸಿದ. ಇದೊಂದೇ ಅಲ್ಲದೆ ಶ್ರೀಯುತರು..
ಮಹಿಷ್ಮತಿರಾಜ್ಯದಲ್ಲಿನ ಸಾಕು ಹಾಗೂ ಸಾಕೇತರ ಚತುಷ್ಪಾದಿಗಳು, ಖಗಚರಗಳು, ಭಾರಿರೆಕ್ಕೆಗಳಿದ್ದರೂ ಹಾರಲರಿಯದ ಪಕ್ಷಿಗಳು ಕುರಿತಂತೆ ಯೋಚಿಸಲು ತಮ್ಮ ಆರಂಭಿಕ ದಿವಸಗಳನ್ನು ಮೀಸಲಿರಿಸಿದರು. ಇಲಿಹೆಗ್ಗಣಗಳಂಥ ವಿದ್ವಂಸಕ ಪ್ರಾಣಿಗಳನ್ನು, ಸೊಳ್ಳೆ ತಿಗಣಿ ಚುಕ್ಕಾಡಿ ದೊಮ್ಮಾರಿಗಳಂಥ ಕ್ರಿಮಿಕೀಟಗಳನ್ನು ನಾಶಪಡಿಸುವುದು ದೊಡ್ಡ ಸಂಗತಿಯಲ್ಲ, ವಿದ್ವಂಸಕ ಕೃತ್ಯಗಳಲ್ಲಿ ಸುಶಿಕ್ಷಿತರ ಪಾತ್ರವೂ ಇಲ್ಲದಿಲ್ಲ. ಅಂದ ಮಾತ್ರಕ್ಕೆ ಅವರನ್ನೂ ಕ್ರಿಮಿನಾಶಕಗಳನ್ನು ಪ್ರಯೋಗಿಸಿ ನಾಶಪಡಿಸಲಾಗುವುದಿಲ್ಲ. ಆದ್ದರಿಂದ ಓದುಬರಹ ಅರಿಯದ, ಸಾಮಾನ್ಯ ತಿಳವಳಿಕೆ ಇಲ್ಲದ ಪ್ರಾಣಿ ಕ್ರಿಮಿಕೀಟಗಳನ್ನು ನಾಶಪಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಮುಖ್ಯಮಂತ್ರಿಗಳು ಯೋಚಿಸಿದರು. ಆದರೆ ಸಂಪುಟ ದರ್ಜಿಯ ಸಹೋದ್ಯೋಗಿಗಳು, ವರಿಷ್ಠಾಧಿಕಾರಿಗಳು ಅತೃಪ್ತಿ ಅಸಹನೆ ವ್ಯಕ್ತಪಡಿಸಿದರು. ಇಲ್ಲದಿದ್ದಲ್ಲಿ ಶ್ರೀಯುತರು ವಿದ್ವಂಸಕ ಜೀವಿಗಳ ಸರ್ವಾಂಗೀಣ ಅಭಿವೃದ್ದಿ ನಿಗಮ ಸ್ಥಾಪಿಸುವುದಾಗಿ ಘೋಷಿಸುತ್ತಿದ್ದರು. ಶ್ರೀಯುತ ಉಕ್ಕಡ್..
ಬಾಲ್ಯದಲ್ಲಿ ಚಿಕ್ಕಪುಟ್ಟ ಕ್ರಿಮಿಕೀಟಗಳ ದುಂಬಾಲು ಬೀಳುತ್ತಿದ್ದರು. ಅವುಗಳನ್ನು ಹಿಡಿದು ಸುಖಿಸುತ್ತಿದ್ದರು. ಏರೋಪ್ಲೇನ್ ಚಿಟ್ಟೆಗಳೆಂದರೆ ಅವರಿಗೆ ತುಂಬಾ ಪ್ರೀತಿ. ಸಹಪಾಠಿ ಗೌಡರ ಮಗಳನ್ನು ಪ್ರೀತಿಸಿ ಶಾಲೆಯಲ್ಲಿ ಸುದ್ದಿ ಮಾಡಿದ್ದರು. ಚಿಕ್ಕಮಕ್ಕಳ ಹುಡುಗಾಟ ಎಂದು ಹಿರಿಯರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮೂರೇಮೂರು ಅಕ್ಷರಗಳ ಪ್ರೇಮಪತ್ರವನ್ನು ಚಿಟ್ಟೆಯ ಬಾಲಕ್ಕೆ ಲಗತ್ತಿಸಿ ಹಾರಿಬಿಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಒಮ್ಮೆ ಕಾಗೆಮರಿಯನ್ನು ಜೇಬಿನಲ್ಲಿ ಅಡಗಿಸಿಟ್ಟುಕೊಂಡು ಮನೆಗೆ ತಂದು ಹಿರಿಯರಿಂದ ಒದೆಸಿಕೊಂಡಿದ್ದರು. ಎಮ್ಮೆ ಕೋಣ ಕತ್ತೆಗಳ ಮೇಲೆ ಸವಾರಿ ಮಾಡುತ್ತ ಶಾಲೆಯನ್ನು ತಲುಪುತ್ತಿದ್ದರು. ಬೆಲ್ಲದ ಚೂರುಗಳಿಗೆ ನವಿಲುಗರಿಗಳನ್ನು ವಿಕ್ರಯಿಸುತ್ತಿದ್ದರು. ಪ್ರೌಢಾವಸ್ಥೆ ತಲುಪಿದ ನಂತರವೂ ಉಕ್ಕಡ್ ಪ್ರಾಣಿ ಪ್ರೇಮದಿಂದ ವಿಮುಖರಾಗಲಿಲ್ಲ. ತಮ್ಮ ಮೊದಲ ಚುನಾವಣಾ ಪ್ರಚಾರವನ್ನು ಕತ್ತೆ ಮೇಲೆ ಕುಳಿತು ಪ್ರಚಾರ ಮಾಡಿದ್ದರು. ಕಾರಣ ಸನ್ಮಾನ್ಯರಿಗೆ ಕತ್ತೆಗಳೆಂದರೆ ಪಂಚಪ್ರಾಣ. ಮುಂದೆ ಮುಖ್ಯಮಂತ್ರಿಗಳಾದಲ್ಲಿ ಕತ್ತೆಗಳನ್ನು ಮೇಲ್ದರ್ಜೆಗೇರಿಸುವುದೆಂದು ನಿಶ್ವಯಿಸಿದ್ದರು ಹಿಂದೆ.
ಕಪಿತ್ಥನಗರದ ದಿವಾಂಧಬಡಾವಣೆಯಲ್ಲಿ ಮಡಿವಾಳ ಸಂಘದವರ ಸನ್ಮಾನ ಸ್ವೀಕರಿಸಿದರು. ದೋಬಿಘಾಟ್ ಉದ್ಘಾಟಿಸಿದರು. ಕತ್ತೆಗಳೇಕೆ ಕಾಣಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಕಾರಣ ದೋಬಿಗಳು ಕತ್ತೆಗಳನ್ನು ಮೂಲೆಗುಂಪು ಮಾಡಿದ್ದರು. ಮೈಲಿಗೆ ಬಟ್ಟೆಗಳನ್ನು ಮನೆಮನೆಗಳಿಂದ ತರಲು ಮೋಟಾರ್ ಬೈಕ್ಗಳನ್ನು ಉಪಯೋಗಿಸುತ್ತಿದ್ದರು. ಇದು ಶ್ರೀಯುತರಿಗೆ ಹಿಡಿಸಲಿಲ್ಲ. ಮಡಿವಾಳ ವೃತ್ತಿ ಎಷ್ಟು ಪ್ರಾಚೀನವೋ ಕತ್ತೆ ಸಹ ಅದಕ್ಕಿಂತ ಪ್ರಾಚೀನವೆಂದು ಹೇಳಿದರು. ಕತ್ತೆ ಸಾಕಿರುವವರಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ದೊರಕುವವೆಂದು ತಿಳಿಸಿದರು. ಅದಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಸೂಕ್ತ ತಿದ್ದುಪಡಿ ತರುವಂತೆ ಆಪ್ತಕಾರ್ಯದರ್ಶಿಯವರಿಗೆ ಸೂಚಿಸಿದರು. ಅಲ್ಲಿಂದ ಮರಳಿದ ಬಳಿಕ..
ಶ್ರೀಯುತರು ಶ್ರೀಮಂತರಿಂದ ಬಡವರು ನಿರ್ಲಕ್ಷೆಗೆ ಒಳಗಾಗಿರುವಂತೆ ಕುದುರೆಗಳಿಂದ ಕತ್ತೆಗಳು ತೀವ್ರನಿರ್ಲಕ್ಷೆಗೆ ಒಳಗಾಗಿರುವವೆಂದು ಅರ್ಥ ಮಾಡಿಕೊಳ್ಳಲು ಕೇವಲ ಐದು ನಿಮಿಷ ಹಿಡಿಯಿತು. ನಗರದ ಹೃದಯಭಾಗದಲ್ಲಿ ರೇಸ್ ಕೋರ್ಸ್ ಇರುವುದನ್ನು ನೆನಪಿಸಿಕೊಂಡರು. ಅದರಂತೆ ಕತ್ತೆಗಳಿಗೂ ರೇಸ್ಕೋರ್ಸ್ ಯಾಕೆ ಇರಬಾರದು ಎಂದು ನಿರ್ಧರಿಸಿದರು. ಕೂಡಲೆ ತುರ್ತು ಸಚಿವ ಸಂಪುಟ ಸಭೆ ಕರೆದರು. ಮಾಧ್ಯಮಗಳ ಸಮಕ್ಷಮ ತಮ್ಮ ನಿರ್ಧಾರ ಪ್ರಕಟಿಸಿದರು. ಅದಕ್ಕೆಂದು ಐದುನೂರಾಅರವತ್ತೆರಡು ಎಕರೆ ವಿಸ್ತೀರ್ಣದ ಜಾಗ ಹುಡುಕುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಕತ್ತೆಗಳ ವಂಶಾಭಿವೃದ್ದಿಗೆ ಸಂಬಂಧಿಸಿದ ಸಂಶೋಧನೆ ಕೈಗೊಳ್ಳಬೇಕೆಂದು ಪಶುಸಂಗೋಪನಾ ಇಲಾಖೆಗೆ ಸೂಚಿಸಿದರು. ಅದಕ್ಕೆಂದೇ ಪ್ರತ್ಯೇಕ ನಿರ್ದೇಶನಾಲಯ ತೆರೆಯುವಂತೆ ಸಂಬಂಧಿತ ಸಚಿವರಿಗೆ ಆದೇಶಿಸಿದರು.
ಪತ್ರಿಕೆಗಳು ಈ ವಾರ್ತೆಯನ್ನು ಮುಖಪುಟಗಳಲ್ಲಿ ಪ್ರಕಟಿಸಿದವು. ದೃಶ್ಯಮಾಧ್ಯಮಗಳು ಮುಖ್ಯಮಂತ್ರಿಗಳ ಮಾತುಕತೆಯನ್ನು ನೇರಪ್ರಸಾರ ಮಾಡಿದವು. ಇದನ್ನು ಜೈನಸಮುದಾಯ ಹಾರ್ಧಿಕವಾಗಿ ಸ್ವಾಗತಿಸಿತು. ಆ ಕ್ಷಣದಿಂದ ಕತ್ತೆಗಳಿಗೆ ಶುಕ್ರದೆಶೆ ಆರಂಭವಾಯಿತು. ಸಾಮಾಜಿಕವಾಗಿ ಛೀ ಥೂ ಎಂದು ಉಗುಳಿಸಿಕೊಳ್ಳುತ್ತ ನಿರ್ಲಕ್ಷೆಗೆ ಒಳಗಾಗಿದ್ದ ಕತ್ತೆಗಳು ಗೌರವಾನ್ವಿತ ಗಾರ್ದಭಗಳೆಂದು ಕರೆಸಿಕೊಳ್ಳಲಾರಂಭಿಸಿದವು. ಅವು ಅದಕ್ಕೂ ಮೊದಲು ಕೊಳಚೆಗೇರಿಗಳ ಮೋಟುಗೋಡೆಗಳ ಮರೆಯಲ್ಲಿ ಕುಟುಕು ಜೀವ ಹಿಡಿದುಕೊಂಡು ಅತಂತ್ರಸ್ಥಿತಿಯಲ್ಲಿದ್ದವು. ದೋಬಿಗಳು ಅವುಗಳನ್ನು ಪತ್ತೆಹಚ್ಚಿ ದಮ್ಮಯ್ಯ ಎಂದು ಸೌಜನ್ಯಪೂರ್ವಕವಾಗಿ ಸಂಬೋಧಿಸಿ ತಮ್ಮತಮ್ಮ ಮನೆಗಳನ್ನು ತುಂಬಿಸಿಕೊಳ್ಳಲಾರಂಭಿಸಿದರು.
ಇದರಿಂದ ರಾಜ್ಯದಲ್ಲಿನ ಅಸಂಖ್ಯಾತ ಗೋವಳಿಗರು ತಮ್ಮನ್ನು ಮಹಿಷಾವಳಿಗರು ಎಂದು ಕರೆದುಕೊಳ್ಳಲಾರಂಭಿಸಿದರು, ಅದೂ ಸ್ವಯಂಪ್ರೇರಿತರಾಗಿ. ತಾಲ್ಲೂಕು ಮಟ್ಟದಲ್ಲಿ ನಡೆದ ಸಭೆಗಳು ಜಿಲ್ಲಾಕೆಂದ್ರಗಳಿಗೆ ವರ್ಗಾಯಿಸಲ್ಪಟ್ಟವು, ಜಿಲ್ಲಾ ಕೇಂದ್ರಗಳಲ್ಲಿ ನಡೆದ ಸಭೆಗಳು ರಾಜ್ಯದ ರಾಜಧಾನಿಗೆ ವರ್ಗಾಯಿಸಲ್ಪಟ್ಟವು. ಕಪಿತ್ಥನಗರದಲ್ಲಿನ ಸಹಗಮನ ಉದ್ಯಾನದ ವಿಶಾಲ ಬಯಲಲ್ಲಿ ಮಹಿಷಾವಳಿಗರ ರಾಜ್ಯಮಟ್ಟದ ಸಮ್ಮೇಳನ ನಡೆಯಿತು. ಲಕ್ಷಕ್ಕೂ ಮಿಕ್ಕಿ ಪಶುಪಾಲಕರು ಅದರಲ್ಲಿ ಭಾಗವಹಿಸಿದರು. ಅವರ ಆಮಂತ್ರಣವನ್ನು ಮುಖ್ಯಮಂತ್ರಿಗಳು ಸ್ವೀಕರಿಸಿ ಹಾಜರಾದರು. ಮಹಿಷಾವಳಿಗಳ ರಾಜ್ಯಾಧ್ಯಕ್ಷ ಮಹಿಷಾಸುರ ಕಟೂಕ್ತಿ ಸನ್ಮಾನ್ಯರಿಗೆ ಪಶುಪತಿರತ್ನ ಬಿರುದು ಪ್ರದಾನ ಮಾಡಿದರು. ಹಾರತುರಾಯಿ ಮಾತ್ರವಲ್ಲದೆ ಎಮ್ಮೆಯ ಬೆಳ್ಳಿವಿಗ್ರಹ ನೀಡಿ ಸತ್ಕರಿಸಿದರು. ಈ ಅಧ್ಯಕ್ಷರು ಆ ಸನ್ಮಾನ್ಯರನ್ನುದ್ದೇಶಿಸಿ ಯಾವ ವಿಷಯ ಪ್ರಸ್ತಾಪಿಸಿದರೆಂದರೆ! ಅದೂ ಪಶುಪಾಲಕ ಸಂಸ್ಕೃತಿಯ ಪುನರುತ್ಥಾನದ ಆಧ್ಯಪ್ರವರ್ತಕರೆ ಎಂದು ಸಂಬೋಧಿಸಿ! ಎಲ್ಲಾ ವಿಷಯಗಳಲ್ಲಿ ಹಸುಗಿಂತ ಎಮ್ಮೆ ಹೆಚ್ಚು ಎಂದು ವೈಜ್ಞಾನಿಕವಾಗಿ ವಿವರಿಸಿದರು. ಸನಾತನ ಶಕ್ತಿಗಳ ಮಸಲತ್ತಿನಿಂದಾಗಿ ಹಸು ಎಮ್ಮೆಯ ಸ್ಥಾನಮಾನ ಅತಿಕ್ರಮಿಸಿರುವುದಾಗಿ ಹೇಳಿದರು. ಆದ್ದರಿಂದ ಎಮ್ಮೆ ರಾಷ್ಟ್ರಪ್ರಾಣಿ ಎಂದು ಅಧಿಕೃತವಾಗಿ ಘೋಷಿಸುವಂತೆ ಮನವಿ ಸಲ್ಲಿಸಿದರು. ಅಲ್ಲದೆ ಖಾಸಗಿಯಾಗಿ ಮಾತಾಡುತ್ತ ಕಟೂಕ್ತಿ ಖಾವಂದರೆ ಅನಾವೃಷ್ಟಿಯಿಂದಾಗಿ, ಕಾಪರ್ೊರೇಟ್ ಕಂಪನಿಗಳ ಸಂಚಿನಿಂದಾಗಿ ನಾಯಿಬೆಕ್ಕುಗಳಿಗೆ ಸಿಗುತ್ತಿರುವ ಸ್ಥಾನಮಾನ ಕ್ಷೀರಧಾರೆ ಹರಿಸುತ್ತಿರುವ ಸಾಕುಪ್ರಾಣಿಗಳಿಗೆ ಸಿಗುತ್ತಿಲ್ಲ. ನಗರದಲ್ಲಿದ್ದ ಕೆರೆಗಳನ್ನು ಹುಲ್ಲುಗಾವಲುಗಳನ್ನು ಕಟ್ಟಡಗಳು ಅತಿಕ್ರಮಿಸಿವೆ. ನಮ್ಮ ದನಗಳಿಗೆ ಮೇವು ನೀರು ದೊರಕುವುದು ದುಸ್ತರವಾಗಿದೆ. ಆದ್ದರಿಂದ ದಯಾಳುಗಳಾದ ತಾವು ನಗರದಲ್ಲಿರುವ ಉದ್ಯಾನಗಳಲ್ಲಿ ಗಾಲ್ಫ್ ಮೈದಾನಗಳಲ್ಲಿ ನಮ್ಮ ದನಗಳು ಮೇಯಲಿಕ್ಕೆ ವಿಶ್ರಮಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕೆಂಬುದು ನಮ್ಮ ಮನವಿ ಎಂದು ಮೌಖಿಕ ಮನವಿ ಸಲ್ಲಿಸಿದರು. ಆ ಮಾತನ್ನು ಅಸಂಖ್ಯಾತ ಮಹಿಷಾವಳಿಗಳು ಕರತಾಡನ ಮಾಡಿ ಹಷರ್ೋದ್ಗಾರದಿಂದ ಸ್ವಾಗತಿಸಿದರು.
ಗಾಲ್ಫ್ ಮೈದಾನ ಮುಖ್ಯಮಂತ್ರಿಗಳ ಕಣ್ಣಲ್ಲಿ ಹರಡಿತು. ಅದು ಇರುವುದು ನಗರದ ಹೃದಯಭಾಗದಲ್ಲಿ, ಅದರ ವಿಸ್ತೀರ್ಣವಂತೂ ಸಹಸ್ರಾರು ಎಕರೆ. ಒಂದೂವರೆ ಶತಮಾನದ ಹಿಂದೆ ರಾಜರು ಆ ಪ್ರದೇಶವನ್ನು ಹುಲ್ಲುಗಾವಲಿಗೆ ಮೀಸಲಿರಿಸಿದ್ದರು. ಇತಿಹಾಸದ ದಾಖಲೆ ಪ್ರಕಾರ ಅಲ್ಲಿ ಸಾವಿರಾರು ದನಕರುಗಳು ಮೇಯುತ್ತಿದ್ದವು, ಅಲ್ಲಲ್ಲಿ ಹೇರಳವಾಗಿದ್ದ ಮರಗಿಡಗಳ ನೆರಳಲ್ಲಿ ಮಲಗಿ ದಣಿವು ಆರಿಸಿಕೊಳ್ಳುತ್ತಿದ್ದವು. ಆದರೆ ಬ್ರಿಟೀಷರು ಮುಂದೆ ಅದನ್ನು ಗಾಲ್ಫ್ ಮೈದಾನವನ್ನಾಗಿ ಪರಿವರ್ತಿಸಿದರು. ಸ್ವಾತಂತ್ರ್ಯದ ನಂತರ ದೇಶದ ಶ್ರೀಮಂತರು ಬ್ರಿಟೀಷರ ನಡೆನುಡಿ ಅಳವಡಿಸಿಕೊಂಡರು. ಅವರ ಮನರಂಜನೆಯನ್ನು ತಾವೂ ಅನುಕರಿಸತೊಡಗಿದರು. ಅವರ ಆಟಪಾಟಗಳನ್ನು ತಾವೂ ಆಡಲಾರಂಭಿಸಿದರು. ಅವರ ಜಾಗಗಳನ್ನು ತಾವು ಆಕ್ರಮಿಸಿದರು. ಹಾಗೆ ಆಕ್ರಮಿಸಿದ ಜಾಗವೇ ಗಾಲ್ಫ್ ಮೈದಾನ. ಗಾಲ್ಫ್ ಕುಸ್ತಿ ಕಬಡ್ಡಿಗಳಂಥ ಬೆವರು ಸುರಿಸುವ ಆಟವೇನಲ್ಲ, ಕಡಿಮೆ ಶ್ರಮದಿಂದ ತಳ್ಳಲ್ಪಟ್ಟ ಚೆಂಡು ರಂದ್ರದೊಳಗೆ ಬೀಳುವುದು ಒಂದು ಆಟವೆ! ಮೈದಾನದ ಹಚ್ಚಹಸಿರು ನೋಡಿದ ದನಕರುಗಳ ಬಾಯಲ್ಲಿ ನೀರೂರದೆ ಇರಲಾದೀತೆ! ಅವರೂ ಆಡಿಕೊಳ್ಳಲಿ, ಅವರ ಸಂಗಡ ದನಕರುಗಳು ಸಹ ಅಲ್ಲಿನ ಹುಲ್ಲು ತಿಂದು ಹೊಟ್ಟೆ ತುಂಬಿಸಿಕೊಳ್ಳಲಿ. ನಾಳೆಯೇ ಗಾಲ್ಫ್ ಆಡಳಿತ ಮಂಡಳಿಯವರೊಂದಿಗೆ ಸಮಾಲೋಚಿಸಬೇಕೆಂದು ಸನ್ಮಾನ್ಯರು ನಿರ್ಧರಿಸಿದರು. ಗಂಭೀರವಾಗಿ ಪರಿಶೀಲಿಸುವುದಾಗಿ ಮಹಿಷಾಸುರ್ ಅವರಿಗೆ ಭರವಸೆ ನೀಡಿದರು.
ರಾಜ್ಯದ ಮುಖ್ಯಮಂತ್ರಿಗಳ ಮೂಕ ಪ್ರಾಣಿಗಳ ಸಂಗಡ ಭಾವನಾತ್ಮಕ ಸಂಬಂಧ ಪ್ರಜೆಗಳಿಗೆ ಸಹ್ಯವೆನ್ನಿಸಿತು, ಅದು ಅನೈತಿಕವಲ್ಲವೆಂಬ ಕಾರಣಕ್ಕೆ. ಕೃಷಿಕರಲ್ಲದವರು ಉದ್ಯಮಿಗಳು ಅಧಿಕಾರಿಗಳು ಧನಿಕರು ತಮ್ಮ ತಮ್ಮ ನಿವಾಸಗಳಲ್ಲಿನ ಪೊಮೇರಿಯನ್ ಜರ್ಮನ್ ಶಪರ್ಡ್ ಅಲ್ಸೇಷಿಯನ್ ಶುನಕಗಳ ಭವಿಷ್ಯ ಕುರಿತು ಯೋಚಿಸಲಾರಂಭಿಸಿದರು. ತಮ್ಮವೂ ಮೂಕಪ್ರಾಣಿಗಳಲ್ಲವೆ! ಇವುಗಳ ನಿರ್ವಹಣಾ ವೆಚ್ಚವನ್ನು ವಹಿಸುವುದು, ಪ್ಯಾಕೇಜುಗಳನ್ನು ಪ್ರಕಟಿಸುವುದು ಸರ್ಕಾರ ತನ್ನ ಹೊಣೆ ಎಂದು ಏಕೆ ಭಾವಿಸಬಾರದು! ಇದು ಕಪಿತ್ಥನಗರದ ಸಾಕುಪ್ರಾಣಿಗಳ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಡಾ ಗಿಜವಾಯಿ ಯೋಚನೆ. ಪಶುವೈದ್ಯಕೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯಾದ ತಾನು ಆಯಾ ಪ್ರಾಣಿಗಳ ಮಾಲಕರನ್ನು ತಮ್ಮ ನಿವಾಸಕ್ಕೆ ಆಮಂತ್ರಿಸಿದರು. ಆಹಾರ ಪಾನೀಯ ನೀಡಿ ಸತ್ಕರಿಸಿದರು. ತಮ್ಮ ನಿವಾಸದಲ್ಲಿನ ವಿವಿಧ ಸಾಕುಪ್ರಾಣಿಗಳನ್ನು ಅವುಗಳ ಗುಣಸ್ವಭಾವ ಸಹಿತ ಪರಿಚಯಿಸಿದರು. ಯಾವ ಯಾವ ಹೆಣ್ಣುಪ್ರಾಣಿಗಳು ಹೀಟಿಗೆ ಬಂದಿರುವವೆಂದು ಹೇಳಿದರು. ಬಳಿಕ ತಮ್ಮ ಲೆಕ್ಕಾಚಾರವನ್ನು ಶುದ್ಧ ಶಬ್ದಗಳಲ್ಲಿ ಅಭಿವ್ಯಕ್ತಿಸಿದರು. ಶುನಕಗಳ ತಳೀಸಂಬಂಧೀ ವಿಚಾರದಲ್ಲಿ ವಾದೋಪವಾದ ನಡೆಯಿತು. ಪೊಮೇರಿನ್ ತಳಿ ಮಾಲಕರು ಒಂದು ಕಡೆಗೂ, ಜರ್ಮನ್ ಶಪರ್ಡ್ ತಳಿ ಮಾಲಕರು ಇನ್ನೊಂದು ಕಡೆಗೂ! ಹೀಗೆ ತಮ್ಮತಮ್ಮ ತಳಿಗಳು ಶ್ರೇಷ್ಠವೆಂದು ಭಾವಿಸಿದರು. ತಳಿ ಬೇರೆ ಇದ್ದರೇನಂತೆ! ಬಾಲಗಳು ಒಂದೆ, ಮೂತಿಗಳು ಒಂದೆ, ಬೊಗಳುವ ಭಾಷೆಯು ಒಂದೆ! ಇದನ್ನು ಪ್ರಧಾನವಾಗಿ ಮರೆತರು. ಹೀಗಾಗಿ ಡಾ ಗಿಜವಾಯಿ ಪ್ರಯತ್ನ ನೆರವೇರಲಿಲ್ಲ. ನಿಮ್ಮ ಕರ್ಮವೆಂದು ಸುಮ್ಮನಾದರು. ಆದರೆ ಅದೇ ಕಪಿತ್ಥನಗರದಲ್ಲಿ!
ಬೀದಿ ಶುನಕಗಳು ಅಸಂಖ್ಯ ರೀತಿಯಲ್ಲಿದ್ದವು. ಅವು ಎಂದೋ ಎಲ್ಲೋ ದೊರಕುತ್ತಿದ್ದ ಚೂರುಪಾರು ತಿಂದು ತ್ರಿಕರಣಪೂರ್ವಕವಾಗಿ ಸಾರ್ವಜನಿಕ ಸೇವೆಸಲ್ಲಿಸುತ್ತಿದ್ದವು. ಅದೇ ನಗರದಲ್ಲಿ ‘ನ್ಯಾ ಉದರ್ಣ ಬೀದಿನಾಯಿ ಕಲ್ಯಾಣ ಪುನರ್ವಸತಿ ಕೇಂದ್ರ’ ಅಸ್ತಿತ್ವಕ್ಕೆ ಬಂದಿತ್ತು. ಕರ್ನಲ್ ಪರಪಿಂಡಿ ಅಪಗತ್ ಅದರ ಶಾಶ್ವತ ಅಧ್ಯಕ್ಷನಿದ್ದನು. ಅದರ ಮಹಾಪೋಷಕರು ಯಾರೆಂದರೆ ದುಮಂಗಲ, ಬರೀ ಪೋಷಕರೆಂದರೆ ಪುಣ್ಯಚರಣ್ ಪಿಂಡಾರಿ, ಕೊಂಗರಿ ಫೋರ್ಟ್ವೆಂಟಿ ಮತ್ತು ಪಂದಿತಲ್ ಕಠಾರಿ! ಡಾ ಹಸನ್ಮುಖ್ ಬಂಚ್, ಪ್ರೊ ಪುಣ್ಯಾಂಗನ್ ಅಕುಲ್, ಪ್ರೊ ದಕ್ಷಾರಿಗಳಂಥ ಬುದ್ದಿಜೀವಿಗಳು, ಮೇಹು, ನಿಷಾಧ್, ಚಚ್ಚಕಾರ, ಹರಿಕೇನ್ರಂಥವರು ನಿಯಮಿತವಾಗಿ ಕಲ್ಯಾಣ ಕೇಂದ್ರಕ್ಕೆ ಭೆಟ್ಟಿ ನೀಡಿ ಪರಾಮರ್ಶಿಸುತ್ತಿದ್ದರು. ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ತಮ್ಮ ಜನ್ಮದಿವಸಗಳಂದು ನಾಯಿಗಳಿಗೆ ಪಾರ್ಲರ್ ಗುಡ್ನೈಟುಗಳನ್ನು ಹಂಚುತ್ತಿದ್ದರು. ಜ್ಞಾನಕಾರಣಪಕ್ಷದ ಸಂಸ್ಥಾಪಕ ಶ್ರೀಉಪದ್ರವಾನಂದಸ್ವಾಮೀಜಿ ವರ್ಷದಲ್ಲಿ ಎರಡು ಸಲ ಅಲ್ಲಿಗೆ ದಯಮಾಡಿಸುತ್ತಿದ್ದರು, ಶುನಕಗಳ ಸಮೂಹಕ್ಕೆ ಆಧ್ಯಾತ್ಮವನ್ನು ಬೋಧಿಸುತ್ತಿದ್ದರು. ಡೊಂಕುಬಾಲದ ನಾಯಕರೆ ಎಂಬ ದಾಸರ ಪದವನ್ನು ಸಂಗೀತಗಾರರ ಸಂಗಡ ಹಾಡುತ್ತಿದ್ದರು.
ಆ ಸಂಘದ ಸರ್ವಾಧ್ಯಕ್ಷ ಕ.ಅಪಗತ್ ಸೈನ್ಯದಲ್ಲಿ ಸೇವೆಸಲ್ಲಿಸಿ ಎಂದೋ ನಿವೃತ್ತನಾಗಿದ್ದನು. ಗಡಿಯಲ್ಲಿ ಶತ್ರುಗಳ ಉಪಟಳ ನಿವಾರಿಸಿ ಹಂತಹಂತವಾಗಿ ಕರ್ನಲ್ ಪದವಿಗೇರಿದ್ದನು. ತನ್ನ ನಾಮವಾಚಕದಲ್ಲಿ ಕರ್ನಲ್ ಎಂಬ ಉಪಾದಿಯನ್ನು ಶಾಶ್ವತೀಕರಿಸಿಕೊಂಡಿದ್ದನು. ಅನೈತಿಕ ಕಾರಣಗಳಿಂದ ಪತ್ನಿಯಿಂದ ವಿಚ್ಚೇದನ ಪಡೆದು ಆಕೆಯಿಂದ ದೂರ ಉಳಿದಿದ್ದನು. ಕಠಿಣ ಶಿಸ್ತಿನಿಂದಾಗಿ ತನ್ನಿಬ್ಬರು ಮಕ್ಕಳಿಂದ ದೂರವಿದ್ದನು. ಪ್ರತ್ಯೇಕ ಜೀವನ ಶೈಲಿ ಅಳವಡಿಸಿಕೊಂಡಿದ್ದನು. ತಪ್ಪಿತಸ್ಥ ಪ್ರಜ್ಞೆಯಿಂದ ಬಿಡುಗಡೆಗೊಳ್ಳಲು ಬೀದಿನಾಯಿಗಳ ಮೊರೆ ಹೊಕ್ಕಿದ್ದನು. ಬೀದಿನಾಯಿಗಳನ್ನು ನಾಯಿಗಳೆಂದು ಕರೆಯದೆ ರಾಮಾ ನಾರಾಯಣ ಶ್ರೀಹರಿ ಎಂದು ಸಂಬೋಧಿಸುತ್ತ ಅಲೌಕಿಕ ಸುಖ ಅನುಭವಿಸುತ್ತಿದ್ದನು. ತಾನಿದ್ದ ಕಲಗರ್ ಬಡಾವಣೆಯ ಬೀದಿಗಳಲ್ಲಿ ಸಂಚರಿಸುತ್ತ ಬೀದಿನಾಯಿಗಳ ಹಿತಾಸಕ್ತಿ ರಕ್ಷಿಸಿ ಎಂದು ಪ್ರಚಾರ ಮಾಡುತ್ತಿದ್ದನು. ಇಂಥ ಒಳ್ಳೆಯವರನ್ನು ದೇವರು ಕೈಬಿಡುವುದಿಲ್ಲವೆನ್ನುವುದಕ್ಕೆ ತನಗಿದ್ದ ಅಪಾರ ಆಸ್ತಿಯೇ ನಿದರ್ಶನ. ಪಿತ್ರಾರ್ಜಿತ ಸ್ವಯಾರ್ಜಿತ ಆಸ್ತಿ ಸಾಕಷ್ಟಿತ್ತು. ಅಲ್ಲದೆ ಸರ್ಕಾರ ಸಹ ಬಹುವಿಸ್ತೀರ್ಣದ ನಿವೇಶನ ಮುಂಜೂರು ಮಾಡಿತ್ತು. ಅದರಲ್ಲಿ ವಿಶಾಲಭವನ ನಿರ್ಮಿಸಿದ್ದನು. ಅದಕ್ಕೆ ‘ಅನಾಥ ಶುನಕ ನಿಲಯ’ಎಂದು ಹೆಸರಿಟ್ಟಿದ್ದನು. ಬೀದಿನಾಯಿಗಳ ಸಲುವಾಗಿ ಅದನ್ನು ಮೀಸಲಿರಿಸಿದ್ದನು. ಅದಕ್ಕೆ ನ್ಯಾ ಆದಿನಾಥ ಉದರ್ಣರವರಿಂದ ಪ್ರೇರಣೆ ಪಡೆದಿದ್ದನು. ಬ್ರೆಡ್ ಬಿಸ್ಕತ್ಗಳ ಆಮಿಷವೊಡ್ಡಿ ನಾಯಿಗಳನ್ನು ಅಕರ್ಷಿ ಷರ್ಿಸುವುದು, ಅವುಗಳ ಮೈನೇವರಿಸುವುದು, ಅವುಗಳ ಪರಿಭಾಷೆಯಲ್ಲಿ ಸಂಭಾಷಿಸಿ ಅವುಗಳ ನೋವು ನಲಿವು ವಿಚಾರಿಸಿ ತಿಳಿದುಕೊಳ್ಳುವುದು, ಚತುರೋಪಾಯಗಳನ್ನು ಪ್ರಯೋಗಿಸಿ ಅವುಗಳನ್ನು ಹಿಡಿದು ತಂದು ಕಲ್ಯಾಣ ಕಾಯರ್ಾಲಯಕ್ಕೆ ಸೇರಿಸವುದು. ಇದು ತನ್ನ ದೈನಂದಿನ ಕಾಯಕವಾಗಿತ್ತು. ಅವುಗಳಿಗೆ ಸೇವೆ ಸಲ್ಲಿಸಲು ಸ್ವಯಂಸೇವಕರನ್ನು ನೇಮಿಸಿದ್ದನು. ಅವುಗಳ ಆರೋಗ್ಯ ಸಂರಕ್ಷಿಸಲು, ಅವುಗಳಲ್ಲಿ ಲೈಂಗಿಕ ಆಸಕ್ತಿ ಕೆರಳದಂತೆ ನೋಡಿಕೊಳ್ಳಲು ಕೆಲವು ಪಶುವೈದ್ಯರನ್ನು ನೇಮಿಸಿಕೊಂಡಿದ್ದನು. ವಾರಕ್ಕೊಮ್ಮೆ ಶುನಕ ಸಮೂಹ ಉದ್ದೇಶಿಸಿ ಬ್ರಹ್ಮಚರ್ಯ, ಪರನಾರಿ ಸಹೋದರತೆ, ಧ್ಯಾನ ಪ್ರಾಣಾಯಾಮ, ಲಘುಉಪಹಾರದ ಮಹತ್ವ ಕುರಿತು ಉಪನ್ಯಾಸ ನೀಡುತ್ತಿದ್ದನು. ಬಲಪ್ರಯೋಗಿಸಿ ಅವುಗಳಿಂದ ಕವಾಯತು ಮಾಡಿಸುತ್ತಿದ್ದನು. ಬಡಾವಣೆ ಮಕ್ಕಳು ಅದನ್ನು ನೋಡಿ ತಮ್ಮ ಮನಸ್ಸನ್ನು ರಂಜಿಸಿಕೊಳ್ಳುತ್ತಿದ್ದರು. ಒಂದೇ ಮಾತಲ್ಲಿ ಹೇಳುವುದಾದರೆ ಕಲ್ಯಾಣಕೇಂದ್ರದಲ್ಲಿ ಸೈನಿಕ ಶಿಸ್ತು ಅಳವಡಿಸಿದ್ದನು. ಅದರಿಂದ ರೋಸಿ ಶುನಕಗಳು ಕೆರಳುತ್ತಿದ್ದವು. ಹೋ ಎಂದು ಅರಣ್ಯರೋಧನಗೈಯುತ್ತಿದ್ದವು, ಬಂಧನ ಮುಕ್ತಿಗಾಗಿ ಅಹನರ್ಿಶಿ ಶ್ರಮಿಸುತ್ತಿದ್ದವು, ಆತ್ಮವಿಶ್ವಾಸ ಕಷ್ಟಸಹಿಷ್ಣುತೆ ಇಲ್ಲದ ಶುನಕಗಳು ಅಲ್ಲಿಯೇ ಅಕಾಲ ಮರಣಕ್ಕೆ ತುತ್ತಾಗುತ್ತಿದ್ದವು.
ನ್ಯಾ ಉದರ್ಣ ಬೀದಿನಾಯಿಗಳ ಕಲ್ಯಾಣ ಪುನರ್ವಸತಿ ಕೇಂದ್ರ ಕಲಗರ್ ಬಡಾವಣೆ ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿತು. ಅವರು ತಮ್ಮ ಹೈಬ್ರಿಡ್ ತಳಿ ಶುನಕಗಳನ್ನು ಅವುಗಳ ವಿರುದ್ದ ಎತ್ತಿ ಕಟ್ಟುತ್ತಿದ್ದರು. ಅಲ್ಲದೆ ಮೂಕಪ್ರಾಣಿಗಳ ಜನ್ಮಸಿದ್ದ ಹಕ್ಕುಗಳ ರಕ್ಷಣೆಗೆ ಹೋರಾಡುತ್ತಿದ್ದ ಕಾ ಮುಳುವೇಲ್ ಅದರ ವಿರುದ್ದ ನ್ಯಾಯಾಲಯದ ಮೊರೆ ಹೋಗಿದ್ದನು. ಇಂಥ ಸಾರ್ವಜನಿಕ ಕಿರುಕುಳಗಳನ್ನು ಕ. ಅಪಗತ್ ಚಾಣಾಕ್ಷತನದಿಂದ ನಿವಾರಿಸಿಕೊಳ್ಳುತ್ತಿದ್ದನು. ಮುಖ್ಯಮಂತ್ರಿ ಶ್ರೀ ಉಕ್ಕಡ್ ಪ್ರಾಣಿಪ್ರೇಮ ಅಪಗತ್ನನ್ನು ಪರವಶಗೊಳಿಸಿತು. ಇವರು ಹೋಗಿ ಪ್ರಾರ್ಥಿಸಿದ್ದಕ್ಕೆ ಅವರು ಆಗಮಿಸಿದರು. ನಾಯಿಗಳ ಯೋಗಕ್ಷೇಮ ವಿಚಾರಿಸಿದರು. ಬೀದಿನಾಯಿಗಳ ಹಿತಕಾಪಾಡಲು ತಮ್ಮ ಸಕರ್ಾರ ಕಂಕಣಬದ್ದವಾಗಿರುವುದಾಗಿ ಘೋಷಿಸಿದರು. ಅಲ್ಲದೆ ಅವುಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಒಂದು ಕೋಟಿಹಣವನ್ನು ತತ್ಕ್ಷಣ ಮಂಜೂರು ಮಾಡಿದರು. ಇದು ಸಹ ಅತಿರಂಜಿತವಾಗಿ ಮಾಧ್ಯಮಗಳಲ್ಲಿ ವರದಿಯಾಯಿತು. ಮಾರ್ಜಾಲ ಕಲ್ಯಾಣಕೇಂದ್ರ ಇನ್ನೇನು ಅಸ್ತಿತ್ವಕ್ಕೆ ಬಂದೀತೆನ್ನುವಷ್ಟರಲ್ಲಿ ಕುರುಕ್ಷೆತ್ರದಿಂದ!
ಇನ್ನು ನಾಳೆಗೆ ..




0 Comments