ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕುಂವಿ' ಯೆಂಬ ಕಥೆಗಾರನೂ, ನೃಪತುಂಗ ಪ್ರಶಸ್ತಿಯೂ

ಗೊರೂರು ಶಿವೇಶ್

ಪ್ರಿಯ ಕುಂವಿ (ಕುಂ. ವೀರಭದ್ರಪ್ಪ),

ಹೇಗಿದ್ದೀರಿ, ನಿಮಗೆ ಈ ಬಾರಿಯ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ಕೊಡಮಾಡುವ ನೃಪತುಂಗ ಪ್ರಶಸ್ತಿ ಬಂದದ್ದು ಕೇಳಿ ಸಂತೋಷವಾಯಿತು. ಅಭಿನಂದನೆಗಳು. ಕೆಲವು ದಿನಗಳ ಹಿಂದೆ ಜ್ಞಾನಪೀಠ ಪ್ರಶಸ್ತಿ ಕುರಿತಾಗಿ ವ್ಯಕ್ತಪಡಿಸಿದ ಅಭಿಪ್ರಾಯದಿಂದಾಗಿ ವಿವಾದಕ್ಕೀಡಾಗಿದ್ದಿರಿ. ಈಗ ಜ್ಞಾನಪೀಠ ಪ್ರಶಸ್ತಿಯ ‘ನಗದು’ ಮೌಲ್ಯಕ್ಕಿಂತ ಒಂದು ರೂ ಹೆಚ್ಚಿನ ಮೌಲ್ಯದ ನಗದು ಬಹುಮಾನಗಳಿಸಿದ್ದಿರಿ. ಈ ಜ್ಞಾನಪೀಠದ ‘ಗರ’ದಿಂದ ಮುಕ್ತರಾಗದ ನಮ್ಮವರು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಪಂಪ, ರನ್ನ, ರಾಘವಾಂಕ, ಕುಮಾರವ್ಯಾಸ, ಮುದ್ದಣ, ಬಿ.ಎಂ.ಶ್ರೀ, ಡಿ.ವಿ.ಜಿ, ತ.ರಾ.ಸು, ತೇಜಸ್ವಿ, ಲಂಕೇಶ್, ದೇವನೂರು ಮಹಾದೇವ, ಕೆ.ಎಸ್. ನರಸಿಂಹಸ್ವಾಮಿ ಜೊತೆಗೆ ನಿಮ್ಮನ್ನು ಸೇರಿಸಿ ಇನ್ನೂ ಹತ್ತು ಹಲವು ಲೇಖಕರನ್ನು ಕಡೆಗಾಣಿಸಿ ಕೇವಲ ಎಂಟೆ ಲೇಖಕರಿಗೆ ಶಾಲಾ, ಕಾಲೇಜುಗಳ ಗೋಡೆಗಳಲ್ಲಿ, ಸಭೆ ಸಮಾರಂಭಗಳ ಭಾಷಣಗಳಲ್ಲಿ, ರಾಜ್ಯೋತ್ಸವ, ಕನ್ನಡ ಸಾಹಿತ್ಯದ ಪರಿಷೆಯಾದ ಸಾಹಿತ್ಯ ಸಮ್ಮೇಳನಗಳಲ್ಲಿ ಒತ್ತು ನೀಡುತ್ತಿರುವುದು ನಿಮಗೆ ಇರಿಸು-ಮುರಿಸು ಉಂಟು ಮಾಡಿರಲಿಕ್ಕೆ ಸಾಕು.
ಇರಲಿ. ಕನ್ನಡ ಓದುಗ ಪ್ರಪಂಚದ ಹೊಸಲೋಕವನ್ನು ಪರಿಚಯಿಸಿದ ಕೀರ್ತಿ ನಿಮಗಿದೆ. ಕಳೆದ ಶತಮಾನದ ಎಂಭತ್ತರ ದಶಕದಲ್ಲಿ ಓದುವ ಪ್ರಪಂಚ ವಿಸ್ತಾರವಾಗುತ್ತಿದ್ದ ಸಂದರ್ಭದಲ್ಲಿ ಎರಡು,ಮೂರು ಅಕ್ಷರಗಳ ಸೇಡು, ಬಲಿ, ತೀರ್ಮಾನ, ಮತ್ಸರ-ಮುಂತಾಗಿ ಪ್ರಗತಿಶೀಲರ ಕಥೆಗಳ ಜೊತೆಗೆ ನವ್ಯ ಸಾಹಿತ್ಯದ ವೃತ್ತ, ಪರಿಧಿ, ವ್ಯಾಸ, ತ್ರಿಜ್ಯ, ಕ್ಷೇತ್ರ ಹೀಗೆ ನಾವು ಕಲಿಯಲಾರದೆ ಕಲಿತು, ಭಯಪಟ್ಟು ಬಿಟ್ಟುಬಂದ ಗಣಿತದ ಪದಗಳೆ ಶೀರ್ಷಿಕೆಗಳಾಗುತ್ತಿದ್ದ ಸಂದರ್ಭದಲ್ಲಿ ನಿಮ್ಮ ‘ದೇವರಹಣ’ ಶೀಷರ್ಿಕೆಯನ್ನು ನೋಡಿ ಬೆಚ್ಚಿಬಿದ್ದಿದ್ದೆವು. ಕತ್ತಲನು ತ್ರಿಶೂಲ ಹಿಡಿದ ಕಥೆ, ಕಿವುಡ ನಾಯಿಯಾದ ಪ್ರಸಂಗ, ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ, ಕೆಂಡದ ಮಳೆ ಕರೆವಲ್ಲಿ ಉದಕವಾಗಿದ್ದದರ ಕಥೆ ಮುಂತಾದ ಕಥೆಗಳು ತಮ್ಮ ಶೀರ್ಷಿಕೆಗಳಿಂದಲೆ ನಮ್ಮ ಗಮನಸೆಳದಿದ್ದಲ್ಲದೆ ತಮ್ಮ ವಿಭಿನ್ನ ಕಥಾ ನಿರೂಪಣೆಯಿಂದ ಓದುಗರ ಮನಗೆದ್ದವು.
ನಿಮ್ಮ ಮಾಂತ್ರಿಕ ಕೈಗಳಿಂದ ಕರ್ನಾಟಕ ಆಂದ್ರದ ಗಡಿಭಾಗದ ಪಾಳೆಯಗಾರಿಕೆಯ ಅಟ್ಟಹಾಸ, ಕುರಿಕೋಳಿಗಳಂತೆ ಕತ್ತರಿಸಿ ಬಿಸಾಡಿದ ದೀನ ದಲಿತರ ದೀನಲೋಕವನ್ನು ಪರಿಚಯ ಸುತ್ತಲೆ, ಸಂಪೂರ್ಣ ಬಾಗಿದ ತಂತಿ, ರಭಸದಿಂದ ಚಿಮ್ಮುವಂತೆ ಸಿಡಿದೆದ್ದು ನಿಂತ ಡೋಮ, ಚವುಡ, ಕಿವುಡ, ಉಪ್ಪಳಿ, ಕೊಟ್ರ, ಠೊಣ್ಣಿನಂಥ ಪಾತ್ರವನ್ನು ಕನ್ನಡ ಕಥಾ ಸಾಹಿತ್ಯಕ್ಕೆ ಪರಿಚಯಿಸಿದಿರಿ ಕೆಳವರ್ಗದ ಕೇರಿಗಳಲ್ಲಿ ಕ್ರಿಮಿಗಳಂತೆ ಬದುಕುತ್ತಿರುವ ಪಾತ್ರಗಳ ನಡುವೆ ಹರಡಿದ ಸಹಬಾಳ್ವೆ, ಪ್ರೀತಿ, ಅಂತಃಕರಣ, ಅನುಕಂಪ, ರಾಗ ದ್ವೇಷಗಳನ್ನು ಪರಿಚಯಿಸುತ್ತಾ ಹೋದಂತೆ ನಿಮ್ಮ ಓದುಗವಲಯ ವಿಸ್ತರಿಸುತ್ತಾ ಹೋಯಿತು. ಈ ಪಾತ್ರಗಳು ಉಳಿಸಲಾರದೆ ಉಳಿಸಿದ್ದ ಆಹಾರಕ್ಕಾಗಿ, ಅವರು ಉಗಿಯುವ ತೊಂಟೆಗಾಗಿ, ಕಾದು ಕುಳಿತ ನಾಯಿ, ಬೆಕ್ಕು, ಕಾಗೆ, ಕೋಳಿಗಳಿಗೆಲ್ಲ ಹುಲಿ, ಅಜರ್ುನ, ಮುಂತಾಗಿ ಹೆಸರಿಸಿ ಆ ಪಾತ್ರಗಳಿಗೂ ಜೀವ ತುಂಬಿದಿರಿ.
ವ್ಯವಸ್ಥೆಯ ವಿರುದ್ಧ ತಮ್ಮದೆ ರೀತಿಯಲ್ಲಿ ಸಿಡಿದೇಳುವ ನಿಮ್ಮ ಪಾತ್ರಗಳು ಅದರಲ್ಲೂ ‘ದೇವರ ಹೆಣ’ ಕಥೆಯನ್ನು ಓದಿದಾಗ ಮೈ ನವಿರೆದ್ದಿದೆ. ಸತ್ತ ಎತ್ತಿನ ಹಕ್ಕಿಗಾಗಿ ಹೋಗಿಡುವ ಠೊಣ್ಣಿ, ಕೊನೆಗೆ ಅದು ತನಗೆ ದೊರೆಯದಾದಾಗ ಸಶ್ಮಾನಕ್ಕೆ ಹೋಗಿ ಹೂಳಲಾಗಿದ್ದ ಎತ್ತಿನ ಹೆಣವನನು ಕದ್ದುಕೊಂಡು ಬರುತ್ತಾನೆ. ಮುಂದೆ ವಿಷಯ ಪೋಲಿಸನವರಿಗೂ ಹೋಗಿ, ಅವರು ತಮ್ಮ ಬಲವನ್ನು ಪ್ರಯೋಗಿಸಲು ಮುಂದಾದಾಗ ‘ಆರ್ತಿಂಗಳ್ಯಾಕೆ ಒಂದ್ವರ್ಸ ಆಕಿಬುಡ್ರೀ ಎಪ್ಪಾ ಕಾಲಿಗೆ ಬೀಳ್ತೀನಿ ಬೇಕಾರೆ’ ಎಂದು ಇನ್ಸ್ಪೆಕ್ಟರಿಗೆ ಗಾಬರಿ ಮೂಡಿಸುತ್ತಾನೆ. ಪೋಲಿಸರೆ ಅಲ್ಲಿಂದ ತಪ್ಪಿಸಿಕೊಂಡು ಹೋಗುವಾಗ ಜೀಪೆಬ್ಬಿಸಿದ ದೂಳಿನಲ್ಲಿ ಠೊಣ್ಣಿ ಮತ್ತವನ ಹೆಂಡತಿ ಮಕ್ಕಳು ನಮ್ಮನ್ನು ಕರ್ಕೊಂಡೊಗ್ರೋ, ಬರ್ತಿನ್ರೋ, ಬರ್ತೀನ್ರೋ ಎಂದು ಕೂಗುತ್ತಾ ಅಟ್ಟಸಿಕೊಂಡು ಹೋಗುವ ಸನ್ನಿವೇಶ ಕಣ್ಣಿಗೆ ಕಟ್ಟಿದಂತಿದೆ. ಇನ್ನೂ ಎನ್.ಎಸ್. ರಾವ್ರವರ ಮಗ ಓಂಪ್ರಕಾಶ್ರಾವ್ ನಿರ್ದೇಶಿಸಿದ ಮೊದಲು ಟಿವಿ ಸೀರಿಯಲ್ನ್ನು ‘ಕತ್ತಲನು ತ್ರಿಶೂಲ ಹಿಡಿದ ಕಥೆ’ಯಲ್ಲಿ ಬರುವ ಉಣ್ಣೊ ಆಟ ಆಡಾಣ, ಉಣ್ಣೊ ಆಟ ಆಡಾಣ, ಯಾರು ಬತ್ತಿರ, ಯಾರು ಬತ್ತಿರೋ’ ಎಂಬ ಸನ್ನಿವೇಶ ನೆನಪಿನಲ್ಲಿ ನಿಂತಿದೆ.
ಮುಂದೆ ನಿಮ್ಮ ಹಲವಾರು ಕಥೆಗಳು ಸಿನಿಮಾಗಳಾದವು. ನಿಮ್ಮ ಕಥೆಗಳನ್ನಾಧರಿಸಿದ ಮನಮೆಚ್ಚಿದ ಹುಡುಗಿ, ದೊರೆ ಶಿವರಾಜ್ಕುಮಾರ್ ಅಭಿನಯದಲ್ಲಿ ಹೊರಬಂದು ಕಮರ್ಷಿಯಲ್ ಹಿಟ್ಟಾದರೆ, ಕೊಟ್ರೇಶಿ ಕನಸು, ಕೂರ್ಮಾವತಾರ ಸಹೃದಯ ಮನ ಗೆದ್ದಿದ್ದಲ್ಲದೆ ಅನೇಕ ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳನ್ನು ಪಡೆದಿವೆ.
ನೀವು ಬರೆದ ‘ಶ್ಯಾಮಣ್ಣ’ ಮಹಾಕಾದಂಬರಿಯನ್ನು ಓದುವಾಗ ತಿಣುಕಿದ್ದು ನಿಜ. ಮುಂದೆ ಇಡೀ ಕಾದಂಬರಿಯನ್ನು ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಮೊಟ್ಟಮೊದಲಬಾರಿಗೆ ಎನ್ನುವಂತೆ ಪುನಃ ಬರೆದು ಪ್ರಕಟಿಸಿದರಿ. ಮಲೆಮಾದೇಶ್ವರ, ಮೈಲಾರಲಿಂಗ, ಮಂಟೇಸ್ವಾಮಿ, ಮುಂತಾದ ಮೌಖಿಕ ಮಹಾಕಾವ್ಯಗಳ ದಾಟಿಯಲ್ಲಿ ರಚಿತವಾದ ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಕಥಾನಕವಾದ ಕರ್ನಾಟಕ ಆಂದ್ರಪ್ರದೇಶಗಳಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಕಲೆಕ್ಟರ್ಗಾಗಿ ಅಪಾರ ಜನಪ್ರಿಯತೆಯನ್ನು ಸಾಧಿಸಿದ ಸರ್ ಥಾಮಸ್ ಮನ್ರೋ (1761-1827)ನ ಕಾಲದ ಚಾರಿತ್ರಿಕ ಘಟನೆಗಳು, ಐತಿಹ್ಯಗಳು, ಅವನ ಸುತ್ತ ಹರಡಿದ ಕಥೆಗಳನ್ನು ಮಹಾಕಾದಂಬರಿಯಾಗಿ ‘ಅರಮನೆ’ ಬರೆದಿರಿ. ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮೆ ಪ್ರಶಸ್ತಿ ಪಡೆದಿರಿ. ಮುಂದೆೆ ‘ಗಾಂಧಿಕ್ಲಾಸ್’ ಮೂಲಕ ನಿಮ್ಮ ಆತ್ಮಕಥಾನಕದಲ್ಲಿ ನಿಮ್ಮ ನಿಜಜೀವನವನ್ನು ತೆರೆದಿಟಿರಿ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನೀವು ಇಂದು ಡಿಸೆಂಬರ್ 13 ಶಿಕ್ಷಕರ ಭವನದಲ್ಲಿ ನೃಪತುಂಗ ಪ್ರಶಸ್ತಿಯನ್ನು ಪಡೆಯುತ್ತಿರುವುದು ಶಿಕ್ಷಕರ ವೃಂದಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ವಿಶಿಷ್ಟ ಶೈಲಿಯಿಂದಾಗಿ ವಿಶೇಷ ಸ್ಥಾನ ಪಡೆದಿರುವ ನಿಮ್ಮಿಂದ ಮುಂದೇನು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ಮತ್ತೊಮ್ಮೆ ಅಭಿನಂದನೆಗಳು.
 

‍ಲೇಖಕರು G

13 December, 2014

7 Comments

  1. Dr.S.B.Jogur

    Kum.Vee. Orva diatya barahagaara..kalushita saahityaka parisaradalliyoo svachchavaagiye kelasa maadida aparoopada barahagaara..inthavarigallade innaarige prashsti kodabeku..? kum.vee ge kodamaadida nrupatunga prshstiya gourvavaoo hechchide.

  2. K.HEMCHANDRA

    PRASHASTIGE ONDU GAURAVADA GARI

  3. ಕೆ.ಶಿವಪ್ಪ ಕುರುಗೋಡು.

    ನಿಮ್ಮ ಬರಹಗಳಿಂದ ಸಾಹಿತ್ಯ ಕ್ಷೇತ್ರ ಸಂವೃದ್ದವಾಗಿದೆ.ನೃಪತುಂಗ ಪ್ರಶಸ್ತಿಯ ಗರಿ ನಿಮ್ಮ ಮುಡಿಗೇರಿದ್ದು ತುಂಬಾ ಸಂತೋಷ.

  4. mmshaik

    abhinadanegaLu sir….

  5. mahesh kalal

    kumvee yavara devara hena kathe dasaka kaledaru innu nanna manadalli hasiragi nenapugalannu niduthide good story writer

  6. suvarna

    ಶಿವೇಶ್ ಸಾರ್ ನಿಮ್ಮ ಲೇಖನ ತುಂಬಾ ಚನ್ನಾಗಿದೆ.
    ಲೇಖಕರು, ಸಾಹಿತಿಗಳು, ಕನ್ನಡ ನಾಡಿನ ಸಮಸ್ತ ನಾಗರೀಕರ ಪರವಾಗಿ ಕುಂ.ವಿ ಸರ್ ಗೆ ಅಭಿನಂದನೆಗಳು ಮತ್ತೋಮ್ಮೆ.

  7. kumbar Veerabhadrappa

    ನಿಮ್ಮ ಬರಹದಲ್ಲಿನ ಆಪ್ತತೆ ಪ್ರೀತಿಗಾಗಿ ಧನ್ಯವಾದಗಳು ಪ್ರಿಯ ಮಿತ್ರ ಗೊರೂರು ಶಿವೇಶ್,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading