ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೀಚಕ ಸಾಮ್ರಾಜ್ಯವಾಗಿ ಬದಲಾಗುತ್ತಿದೆಯೇ ಭಾರತ?

ಲಕ್ಷ್ಮೀಶ ಜೆ

‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರದೇವತಾ’ ಎಂಬ ಮಾತು ಸಂಸ್ಕೃತದಲ್ಲಿದೆ.ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬುದು ಇದರ ಅರ್ಥ.ಭಾರತೀಯ ಸಂಸ್ಕೃತಿಯಲ್ಲಿ ಅದರಲ್ಲೂ ಹೆಚ್ಚಾಗಿ ಹಿಂದೂ ಧರ್ಮದಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ.ಅನಾದಿ ಕಾಲದಿಂದಲೂ ಹೆಣ್ಣಿನ ಮಾನ-ಪ್ರಾಣವನ್ನು ರಕ್ಷಿಸಲು ಅನೇಕ ವೀರ ಪುರುಷರು ಹೋರಾಡಿ ಪ್ರಸಿದ್ಧರಾಗಿದ್ದಾರೆ.ಶ್ರೀರಾಮ,ಅರ್ಜುನ,ಹನುಮಂತ ಮತ್ತು ಇನ್ನೂ ಅನೇಕ ಪುರಾಣದ ವ್ಯಕ್ತಿಗಳು ಹೆಣ್ಣನ್ನು ಕಾಪಾಡಲು ಶ್ರಮಿಸಿ ಅಜರಾಮರರಾಗಿದ್ದಾರೆ.ತಾಯಿಯಾಗಿ,ತಂಗಿಯಾಗಿ,ಅಕ್ಕನಾಗಿ,ಪತ್ನಿಯಾಗಿ,ಅತ್ತಿಗೆಯಾಗಿ ಎಲ್ಲದಕ್ಕೂ ನಮಗೆ ಹೆಣ್ಣು ಬೇಕು.ಈ ಜಗತ್ತು ಮುಂದುವರೆಯಬೇಕಾದರೂ ಹೆಣ್ಣು ಬೇಕು.ಹೀಗೆ ಮೊದಲಿನಿಂದಲೂ ತನ್ನ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶಿಷ್ಟ ಸ್ಥಾನವನ್ನು ನೀಡಿದ ಭಾರತ ಇದೀಗ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಗಳಿಂದ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ.ಹೆಣ್ಣನ್ನು ಪೂಜಿಸಬೇಕು ಎಂದು ಹೇಳಿದ ಭಾರತವೇ ‘ಕೀಚಕ ಸಾಮ್ರಾಜ್ಯ’ವಾಗಿ ಬದಲಾಗುತ್ತಿದೆ.ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಸಾಲು ಸಾಲು ಅತ್ಯಾಚಾರಗಳು,ದೆಹಲಿಯ ನಿರ್ಭಾಯಾಳ ಮೇಲಿನ ಅತ್ಯಾಚಾರ,ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ,ಗೋವಾ ಗೋಕರ್ಣದ ಬೀಚುಗಳಲ್ಲಿ ವಿದೇಶೀ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳು ಭಾರತ ಕೀಚಕ ಸಾಮ್ರಾಜ್ಯವಾಗುತ್ತಿರುವುದಕ್ಕೆ ಜ್ವಲಂತ ಉದಾಹರಣೆಗಳು.
 
ದೆಹಲಿಯ ನಿರ್ಭಯಾ ಪ್ರಕರಣ ಮೊದಲ ಬಾರಿಗೆ ಅತೀ ದೊಡ್ಡ ಮಟ್ಟದಲ್ಲಿ ದೇಶವನ್ನು ಬೆಚ್ಚಿಬೀಳಿಸಿತ್ತು.ನಿರ್ಭಯಾಳನ್ನು ಅವಳ ಗೆಳೆಯನೆದುರಿಗೇ ಐದು ಜನ ಕಾಮಾಂಧ ದುರುಳರು ಸಾಮೂಹಿಕ ಅತ್ಯಾಚಾರ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದರು.ಅಲ್ಲದೇ ಅತ್ಯಂತ ಭೀಬತ್ಸ ರೀತಿಯಲ್ಲಿ ಅವಳ ಜನನಾಂಗಕ್ಕೆ ಕಬ್ಬಿಣದ ರಾಡ್ ತುರುಕಿ ಪಾಶವೀ ಕೃತ್ಯ ಎಸಗಿದರು.ಇದನ್ನು ಮೃಗೀಯ ವರ್ತನೆ ಎಂದರೂ ತಪ್ಪಾದೀತು.ಏಕೆಂದರೆ ಮೃಗಗಳು ಸಹ ಬಹುಷಃ ಇಷ್ಟು ಭೀಬತ್ಸವಾಗಿ ವರ್ತಿಸಲಿಕ್ಕಿಲ್ಲ.ಕೊನೆಗೆ ರಸ್ತೆ ಮಧ್ಯೆ ನಗ್ನಳಾಗಿ ಬಿದ್ದಿದ್ದ ನಿರ್ಭಾಯಾ ಮತ್ತು ಅವಳ ಗೆಳೆಯ ಹೇಗೋ ಆಸ್ಪತ್ರೆ ಸೇರಿದರಾದರೂ ಕೆಲದಿನಗಳ ಜೀವನ್ಮರಣ ಹೋರಾಟದ ಬಳಿಕ ನಿರ್ಭಯಾ ಸಾವನ್ನಪ್ಪಿದಳು.ಐದು ಜನ ಅತ್ಯಾಚಾರಿಗಳಿಗೂ ಶಿಕ್ಷೆಯಾಯಿತಾದರೂ ಒಬ್ಬ ಅತ್ಯಾಚಾರಿ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡರೆ ಇನ್ನೊಬ್ಬ ಅಪ್ರಾಪ್ತ ಎಂಬ ಕಾರಣಕ್ಕಾಗಿ ಆತ ಅತ್ಯಂತ ಕ್ರೂರವಾಗಿ ಅತ್ಯಾಚಾರ ಎಸಗಿದರೂ ದೊಡ್ಡ ಶಿಕ್ಷೆಯಿಂದ ಪಾರಾದ.ಇಡೀ ದೇಶದ ಜನರೂ ಈ ಅತ್ಯಾಚಾರದ ವಿರುದ್ಧ ಪ್ರತಿಭಟಿಸಿದರು.ಆದರೆ ಇದರಿಂದ ಏನಾದರೂ ಪರಿಣಾಮವಾಯಿತೇ ಇಲ್ಲ.ಬದಲಿಗೇ ನಿರ್ಭಯಾ ಪ್ರಕರಣದ ಬಳಿಕ ಇಡೀ ದೇಶಾದ್ಯಂತ ಇನ್ನಷ್ಟು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರತೊಡಗಿದವು.ತಂದೆಯೇ ಮಗಳ ಮೇಲೆ ಅತ್ಯಾಚಾರ ಮಾಡಿದ ಸುದ್ದಿ ಬರುವುದೂ ಸಾಮಾನ್ಯವಾಯಿತು.ಶಿಕ್ಷಣ ಕಾಶಿ ಎಂದು ಹೆಸರಾದ ಉಡುಪಿಯ ಹೆಸರಾಂತ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ರಾತ್ರಿ ಹನ್ನೊಂದರ ಸುಮಾರಿಗೆ ಲೈಬ್ರರಿಯಲ್ಲಿ ಓದು ಮುಗಿಸಿ ತನ್ನ ಹಾಸ್ಟೆಲ್ ಗೆ ಬರಲು ಒಂದು ಆಟೋ ಹತ್ತಿ ಹೊರಟಳು.ಅವಳನ್ನು ನಿರ್ಜನ ಪ್ರದೇಶಕ್ಕೆ ತನ್ನ ಸ್ನೇಹಿತರೊಂದಿಗೆ ಕರೆದೊಯ್ದ ರಿಕ್ಷಾ ಚಾಲಕ ಮತ್ತವನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿ ಅವಳ ಕಾಲು ಮುರಿದು ಹಾಸ್ಟೆಲ್ ಕ್ಯಾಂಪಸ್ ಒಳಗೆ ಎಸೆದು ಹೋದರು.ಅಲ್ಲಿಂದ ಮುಂದೆ ಒಂದು ರೀತಿಯಲ್ಲಿ ಮಾನಸಿಕ ಶಾಕ್ ಗೆ ಒಳಗಾದ ಆ ವಿದ್ಯಾರ್ಥಿನಿ ಇನ್ನೂ ಚೇತರಿಸಿಕೊಂಡಿಲ್ಲ.ಇನ್ನು ಗೋವಾ,ಗೋಕರ್ಣ ದ ಸಮುದ್ರತೀರದಲ್ಲಿಯೂ ವಿದೇಶೀ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜಾಯಿತು.

ತೀರಾ ಇತ್ತೀಚೆಗಷ್ಟೇ ಉತ್ತರಪ್ರದೇಶದ ಬದೌನ್ ನಲ್ಲಿ ನಡೆದ ಘಟನೆ ಇನ್ನೂ ಭೀಕರವಾದದು.ಹಾಡುಹಗಲೇ ಇಬ್ಬರು ಹದಿಹರೆಯದ ಸಹೋದರಿಯರನ್ನು ಎಳೆದೊಯ್ದ ದುರುಳರು ಸಾಮೂಹಿಕ ಅತ್ಯಾಚಾರ ನಡೆಸಿ ಊರಿನಲ್ಲಿರುವ ಮರವೊಂದಕ್ಕೆ ನೇಣು ಬಿಗಿದು ಕೊಂದು ಹಾಕಿದರು.ಮಕ್ಕಳು ಕಾಣೆಯಾದ್ದನ್ನು ಕಂಡು ಕಂಗಾಲಾದ ಪಾಲಕರು ಹುಡುಕಿದಾಗ ಇಬ್ಬರು ಹೆಣ್ಣು ಮಕ್ಕಳ ಶವ ಮರದಲ್ಲಿ ನೇತಾಡುತ್ತಿತ್ತು.ಇದನ್ನು ನೋಡಿದರೆ ಕೇವಲ ಕಾಮಲೋಲುಪತೆಯಿಂದಷ್ಟೇ ಅಲ್ಲದೇ ಆ ಕುಟುಂಬದ ಮೇಲಿನ ದ್ವೇಷದಿಂದಲೂ ಅತ್ಯಾಚಾರ ಮಾಡಿದ್ದಾರೇನೋ ಎನ್ನಿಸುತ್ತದೆ.ಇದಾಗಿ ನಾಲ್ಕು ದಿನಗಳಲ್ಲೇ ಉತ್ತರಪ್ರದೇಶದಲ್ಲೀಯೇ ಉತ್ತರಾಖಂಡದ ಯುವತಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರ ಮಾಡಿ ನಂತರ ಆಸಿಡ್ ಕುಡಿಸಿ ಕೊಲೆ ಮಾಡಿದ್ದಾರೆ.ಈ ಎರಡೂ ಕೃತ್ಯಗಳೂ ದೆಹಲಿಯ ನಿರ್ಭಯಾ ಪ್ರಕರಣಕ್ಕಿಂತಲೂ ಕ್ರೂರವಾದುದು ಎಂದು ಜನರು ಹೇಳುತ್ತಿದ್ದಾರೆ.೩ನೇ ಜೂನ್ ನ ಪತ್ರಿಕೆಯಲ್ಲಿ ವರದಿಯಾದಂತೆ ಕರ್ನಾಟಕದ ಅರಕಲಗೂಡಿನಲ್ಲಿ ತಂದೆಯೊಬ್ಬ ತನ್ನ ಸ್ವಂತ ಅಪ್ರಾಪ್ತ ಮಗಳ ಮೇಲೆ ಬಹುದಿನಗಳಿಂದ ಅತ್ಯಾಚಾರ ಎಸಗಿದ್ದರ ಫಲವಾಗಿ ಅವಳು ಗರ್ಭಿಣಿಯಾಗಿದ್ದಾಳೆ ಎಂದು ತಿಳಿದಿದೆ.ಇದನ್ನೆಲ್ಲಾ ತೀರಾ ಸಂಪ್ರದಾಯಸ್ಥರಾದ ಜನಗಳು ಊಹಿಸಲೂ ಸಾಧ್ಯವಿಲ್ಲ.ಹಾಗಾದರೆ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲವಾಗುತ್ತಿದೆಯೇ?ಹಾಡು ಹಗಲೇ ಯಾವ ಹುಡುಗಿಯನ್ನು ಯಾರು ಬೇಕಾದರೂ ಎಳೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಳ್ಳಬಹುದೇ? ಇದನ್ನೆಲ್ಲಾ ಕೇಳುವವರು ಯಾರೂ ಇಲ್ಲವೇ?
ಅತ್ಯಾಚಾರಕ್ಕೆ ಹೆಣ್ಣು ಮಕ್ಕಳು ನಾನಾ ರೀತಿಯ ಮೈತೋರಿಸುವ ಬಟ್ಟೆಗಳನ್ನು ತೊಟ್ಟು ಪ್ರಚೋದಿಸುವುದೇ ಕಾರಣ ಎಂದು ಅನೇಕರು ವಾದಿಸುತ್ತಾರೆ.ಎಲ್ಲೋ ಕೇವಲ ೧೦% ಅತ್ಯಾಚಾರದ ಪ್ರಕರಣಗಳಲ್ಲಿ ಇದು ನಿಜವಿರಬಹುದು.ಉಳಿದೆಲ್ಲಾ ಪ್ರಕರಣಗಳಲ್ಲಿ ಪುರುಷರ ಮನಸ್ಥಿತಿಯೇ ಅತ್ಯಾಚಾರಕ್ಕೆ ಕಾರಣ.ಉದಾಹರಣೆಗೆ ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೊಳಗದ ಇಬ್ಬರು ಸಹೋದರಿಯರೇನೂ ಮೈತೋರಿಸುವ ಬಟ್ಟೆಗಳನ್ನುಟ್ಟು ಪ್ರಚೋದಿಸಲಿಲ್ಲವಲ್ಲ.ತಂದೆಯಿಂದಲೇ ಅತ್ಯಾಚಾರಕ್ಕೊಳಗಾಗುವ ಮಗಳೇನೂ ಅತ್ಯಾಚಾರಿಗೆ ಮೈತೋರಿಸಿ ಪ್ರಚೋದಿಸಲಿಲ್ಲವಲ್ಲ.ಆದರೂ ಅತ್ಯಾಚಾರಗಳು ನಡೆದವೇಕೆ?ಈ ಅತ್ಯಾಚಾರಿಗಳ ಮನಸ್ಸೇ ಒಂದು ರೀತಿಯಲ್ಲಿ ತಲ್ಲಣಗೊಂಡಿರುತ್ತದೆ.ಹೆಚ್ಚಿನ ಸಂದರ್ಭಗಳಲ್ಲಿ ಮಾನಸಿಕ ಹಿಡಿತ ಕಳೆದುಕೊಂಡು ಕಾಮೋದ್ರೇಕಕ್ಕೆ ಒಳಗಾಗಿ ಅತ್ಯಾಚಾರ ಮಾಡುವ ಅವರು ಕೊನೆಗೆ ಸಿಕ್ಕಿ ಬೀಳುವ ಭಯದಿಂದ ಕೊಲೆಯನ್ನೂ ಮಾಡುತ್ತಾರೆ.ಹಾಗಾಗಿ ಹೆಣ್ಣು ಮಕ್ಕಳು ಪ್ರಚೋದಿಸುವಂತಹ ಬಟ್ಟೆ ತೊಡುವುದರಿಂದಲೇ ಅತ್ಯಾಚಾರವಾಗುತ್ತದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ.ಇನ್ನು ಅನಕ್ಷರತೆಯೂ ಕೂಡಾ ಅತ್ಯಾಚಾರಕ್ಕೆ ಒಂದು ರೀತಿಯಲ್ಲಿ ಕಾರಣವೇ.ಏಕೆಂದರೆ ಸಾಮಾನ್ಯವಾಗಿ ಶಾಲೆ ಕಲಿತು ಅಕ್ಷರಸ್ಥರಾದ ಜನರು ಅತ್ಯಾಚಾರದಲ್ಲಿ ಭಾಗಿಯಾಗುವುದು ಕಡಿಮೆ.ಇಲ್ಲವೇ ಇಲ್ಲ ಎಂತಲ್ಲ.ಆದರೆ ಅಕ್ಷರಸ್ಥರಿಗೆ ಹೋಲಿಸಿದರೆ ಅನಕ್ಷರಸ್ಥರು ಅತ್ಯಾಚಾರಿಗಳಾಗಿ ವರದಿಯಾಗಿರುವುದು ಹೆಚ್ಚು.ಏಕೆಂದರೆ ಸದಾ ಅತ್ಯಾಚಾರ,ಕೊಲೆ,ಕೋಮುಗಲಭೆಗಳಿಗಾಗಿ ಸುದ್ದಿಯಲ್ಲಿರುವ ಉತ್ತರ ಪ್ರದೇಶದಲ್ಲಿ ಸಾಕ್ಷರತಾ ಪ್ರಮಾಣ ಶೇಕಡಾ ೬೯.೭೨ ಇದೆ.ಅತೀ ಹೆಚ್ಚು ಅತ್ಯಾಚಾರಗಳು ನಡೆಯುವ ರಾಜ್ಯ ಎಂದು ಅಂಕಿಅಂಶಗಳು ಹೇಳುವ ರಾಜ್ಯ ಮಧ್ಯಪ್ರದೇಶದಲ್ಲಿ ಸಾಕ್ಷರತಾ ಪ್ರಮಾಣ ೭೦.೬೩% ಇದ್ದರೆ,ಬಿಹಾರದಲ್ಲಿ ೬೩.೮೨%,ಕರ್ನಾಟಕದಲ್ಲಿ ೭೫.೬೦% ಇದೆ.ಅತೀ ಹೆಚ್ಚು ಸಾಕ್ಷರತಾ ಪ್ರಮಾಣ ಅಂದರೆ ಶೇಕಡಾ ೯೩.೯೧ ಹೊಂದಿರುವ ಕೇರಳ ರಾಜ್ಯ ಅತ್ಯಾಚಾರಕ್ಕಾಗಿ ಸುದ್ದಿಯಾಗುವುದು ತೀರಾ ವಿರಳ.ಇನ್ನು ಭಾರತದ ಅನೇಕ ಜನರಲ್ಲಿ ಮೂಢನಂಬಿಕೆಯೊಂದಿದೆ.ಅದೇನೆಂದರೆ ಹದಿಹರೆಯದ ಹುಡುಗಿಯರು,ಯುವತಿಯರೊಂದಿಗೆ ಲೈಂಗಿಕ ಸಂಪರ್ಕ ಮಾಡಿದರೆ ಲೈಂಗಿಕ ಖಾಯಿಲೆಗಳು ಮತ್ತು ಇನ್ನೂ ಅನೇಕ ರೋಗಗಳು ಗುಣವಾಗುತ್ತವೆಯೆಂಬುದು.ಇದು ಶುದ್ಧ ಸುಳ್ಳು.ಮತ್ತು ಈ ನಂಬಿಕೆ ಇರುವುದು ಅನಕ್ಷರಸ್ಥರಲ್ಲಿ ಮಾತ್ರ. ಹಾಗಾಗಿ ಈ ದೇಶದ ಎಲ್ಲರಿಗೂ ಸರಿಯಾಗಿ ಶಿಕ್ಷಣ ಸಿಗುವಂತಾದರೆ ಜನರ ಮನಸ್ಥಿತಿಯೇ ಬದಲಾಗಿ ಹೆಣ್ಣಿನ ಮೇಲೆ ಗೌರವ ಮೂಡಿ ಅತ್ಯಾಚಾರಗಳು ಸಂಭವಿಸುವುದು ಕಡಿಮೆಯಾಗುತ್ತವೆ ಎಂಬುದು ನನ್ನ ಅನಿಸಿಕೆ.
ಅತ್ಯಾಚಾರವನ್ನು ತಡೆಗಟ್ಟುವಲ್ಲಿ ಯಾವ ರಾಜ್ಯ ಸರ್ಕಾರಗಳೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಬಹುತೇಕ ಜನರು ದೂರುತ್ತಾರೆ.ಆದರೆ ಇದು ನಿಜವೂ ಹೌದು.ಉದಾಹರಣೆಗೆ ಮೊನ್ನೆ ಉತ್ತರಪ್ರದೇಶದಲ್ಲಿ ಇಬ್ಬರು ಸಹೋದರಿಯರು ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದಾಗ ಮಾಧ್ಯಮದವರು ಅಲ್ಲಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಕೇಳಿದಾಗ ಅವರು “ನೀವು ಸುರಕ್ಷಿತವಾಗಿದ್ದೀರಿ ತಾನೇ?ನಿಮಗೇನಾದರೂ ತೊಂದರೆಯಾಗಿದ್ದರೆ ಹೇಳಿ.ಉಳಿದವರ ಚಿಂತೆ ಬಿಡಿ.ಏನು ಮಾಡಬೇಕೋ ನಮಗೆ ಗೊತ್ತಿದೆ”ಎಂದು ತೀರಾ ಉಡಾಫೆಯ ಉತ್ತರ ಕೊಟ್ಟರು.ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಜವಾಬ್ದಾರಿಯುತ ವ್ಯಕ್ತಿಯಾಗಿ ಅವರು ಇಂತಹ ಮಾತುಗಳನ್ನಾಡಬಹುದೇ?ಇನ್ನು ಹತ್ಯೆಗೊಳಗಾದ ಹೆಣ್ಣು ಮಕ್ಕಳ ಪೋಷಕರು ದೂರು ಕೊಡಲು ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂಜರಿದರಂತೆ.ಅಂದರೆ ಇದರ ಅರ್ಥವೇನು. ಆರೋಪಿಗಳನ್ನು ತಮ್ಮ ಓಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ರಾಜಕಾರಣಿಗಳೇ ರಕ್ಷಿಸುತ್ತಾರೆ ಎಂದಲ್ಲವೇ.ಅನೇಕ ಸಂದರ್ಭಗಳಲ್ಲಿ ಅಧಿಕಾರದ ಅಮಲು ತಲೆಗೇರಿದ ರಾಜಕಾರಣಿಗಳ ಕಡೆಯವರೇ ಅತ್ಯಾಚಾರಗಳಲ್ಲಿ ಭಾಗಿಯಾಗಿರುತ್ತಾರೆ.
ಹೊಸದಿಗಂತ ಪತ್ರಿಕೆ ಜೂನ್ ಮೂರನೇ ತಾರೀಖಿನಂದು ವರದಿ ಮಾಡಿದಂತೆ ಉತ್ತರಪ್ರದೇಶದಲ್ಲಿ ಕಳೆದ ೭ ದಿನಗಳಲ್ಲಿ ೬ ಅತ್ಯಾಚಾರಗಳು ಸಂಭವಿಸಿದ್ದು ಸರ್ಕಾರವು ಆರೋಪಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳುವಲ್ಲಿ ಮೀನಮೇಷ ಎಣಿಸುತ್ತಿದೆ.ಹಾಗಾಗಿ ಏನು ಮಾಡಿದರೂ ನಮ್ಮನ್ನು ಕೇಳುವವರಿಲ್ಲ ಎಂದು ಜನರು ಅತ್ಯಾಚಾರ ಮಾಡಿಕೊಂಡು ರಾಜಾರೋಷವಾಗಿ ತಿರುಗುತ್ತಾರೆ.ಒಬ್ಬರು ಸಂತರಂತೂ ಅತ್ಯಾಚಾರ ನಡೆಯುವ ಸಮಯದಲ್ಲಿ ಹುಡುಗಿ”ಅಣ್ಣಾ ದಯವಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಕೇಳಿಕೊಂಡರೆ ಅವರು ಬಿಟ್ಟುಬಿಡುತ್ತಾರೆ”ಎಂಬಂತಹ ಮೂರ್ಖ ಹೇಳಿಕೆಗಳನ್ನು ಕೊಡುತ್ತಾರೆ.ಅಲ್ಲಾ ಸ್ವಾಮಿ ತಂದೆಯೇ ಮಗಳ ಮೇಲೆ ಅತ್ಯಾಚಾರ ಮಾಡುತ್ತಿರುವ ಈ ಕಾಲದಲ್ಲಿ “ಅಣ್ಣಾ” ಎಂದು ಕರೆದರೆ ಅತ್ಯಾಚಾರಿಗಳು ಬಿಟ್ಟುಬಿಡುತ್ತಾರೆಯೇ? ಇನ್ನೂ ಅನೇಕ ಸಂದರ್ಭಗಳಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣಿನ ಶೀಲವನ್ನೇ ಅನುಮಾನಿಸುವ ಮನಸ್ಥಿತಿ ನಮ್ಮ ಜನರದ್ದು.
ಸೆಕ್ಷನ್ ೩೭೬ ರ ಪ್ರಕಾರ ಅತ್ಯಾಚಾರಕ್ಕೆ ಜೀವಾವಧಿ ಶಿಕ್ಷೆ ಇದ್ದರೂ ಜನರು ಅಂಜುತ್ತಿಲ್ಲ.ಅನೇಕರಿಗೆ ರಾಜಕೀಯ ಫುಡಾರಿಗಳ ಶ್ರೀರಕ್ಷೆ ಇದೆ.ಇಂದು ಬರುತ್ತಿರುವ ಚಲನಚಿತ್ರಗಳನ್ನು ನೋಡಿ ಅನೇಕ ಹುಡುಗರು ಮನಸ್ಸು ಕೆಡಿಸಿಕೊಂಡು ಅತ್ಯಾಚಾರ ಮಾಡುವ ಮಟ್ಟಕ್ಕೆ ಹೋಗುತ್ತಿದ್ದಾರೆ.ಇದನ್ನು ತಡೆಗಟ್ಟಲು ಸರ್ಕಾರ ಮತ್ತು ಜನರೂ ಕ್ರಮಕೈಗೊಳ್ಳಬೇಕು.ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗಿಂತಲೂ ಜಾಸ್ತಿ ಗಂಡುಮಕ್ಕಳಿಗೆ ಸರಿಯಾದ ಲೈಂಗಿಕ ಶಿಕ್ಷಣ ದೊರೆಯಬೇಕು.ಅತ್ಯಾಚಾರವೆಂಬುದು ಕೇವಲ ಹೆಣ್ಣಿನ ದೇಹಕ್ಕೆ ಮಾತ್ರ ಆಗುವ ಅವಮಾನವಲ್ಲ.ದೇಹಕ್ಕಿಂತಲೂ ಮನಸ್ಸಿಗೆ ಆಗುವ ಗಾಯವೇ ದೊಡ್ಡದು. ಅತ್ಯಾಚಾರಕ್ಕೊಳಗಾದ ಹೆಣ್ಣು ಮಾನಸಿಕ ಆಘಾತಕ್ಕೊಳಗಾಗಿ ಆತ್ಮಹತ್ಯೆಯತ್ತ ಮನಸ್ಸು ಮಾಡುತ್ತಾಳೆ.ಆದ್ದರಿಂದ ಅತ್ಯಾಚಾರಕ್ಕೊಳಗಾದ ಹೆಣ್ಣನ್ನು ಕೀಳಾಗಿ ನೋಡದೇ ಅವಳಿಗೆ ಮಾನಸಿಕವಾಗಿ ಧೈರ್ಯ ತುಂಬಿ ಅವಳು ಮತ್ತೆ ಭಯಮುಕ್ತ ವಾತಾವರಣದಲ್ಲಿ ಬದುಕಲು ಅನುವು ಮಾಡಿಕೊಡಬೇಕು.ಅತ್ಯಾಚಾರಿಗಳನ್ನು ರಕ್ಷಿಸುವ ರಾಜಕಾರಣಿಗಳಿಗೂ ಶಿಕ್ಷೆಯಾಗಬೇಕು.ಮತ್ತು ಮೊದಲೇ ಹೇಳಿದಂತೆ ಸಾಕ್ಷರತಾ ಪ್ರಮಾಣ ಜಾಸ್ತಿಯಾದರೆ ಅತ್ಯಾಚಾರಗಳು ಕಡಿಮೆಯಾಗುತ್ತವೆ.ಅಂದು ಕೀಚಕನಿಂದ ದ್ರೌಪದಿಯನ್ನು ಕಾಪಾಡಲು ಭೀಮನಿದ್ದ.ಇಂದು ಸಾವಿರ ಸಾವಿರ ಸಂಖ್ಯೆಯಲ್ಲಿರುವ ಕೀಚಕರಿಂದ ಹೆಣ್ಣು ಮಕ್ಕಳಿಗೆ ಸರಿಯಾದ ರಕ್ಷಣೆ ದೊರೆಯದೇ ಹೋದರೆ ಭಾರತ ಮುಂದೊಂದು ದಿನ ಅತ್ಯಾಚಾರದ ತವರಾಗಿ ಕೀಚಕ ಸಾಮ್ರಾಜ್ಯವಾಗುವುದರಲ್ಲಿ ಸಂದೇಹವಿಲ್ಲ.

‍ಲೇಖಕರು G

17 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading