ಕಿಶೋರ್ ಹಾಡೆಂದರೆ ಪಂಚಪ್ರಾಣ…

ಶ್ರೀಪಾದ್ ಹೆಗಡೆ

ಇಂದು ಕಿಶೋರ ಕುಮಾರ್ ಹುಟ್ಟಿದ ದಿನ. ನನಗೆ ಕಿಶೋರ್ ಹಾಡೆಂದರೆ ಪಂಚಪ್ರಾಣ. ಕಿಶೋರ ಕುಮಾರ ಶಾಸ್ತ್ರೀಯ ಗಾಯನದಲ್ಲಿ ತರಬೇತು ಪಡೆದ ಗಾಯಕರಾಗಿರಲಿಲ್ಲ. ಆದರೆ ಅವರು ಹಾಡುವಾಗ ಎಷ್ಟು ನಿಖರವಾಗಿ ಸ್ವರಸ್ಥಾನಗಳನ್ನು ಅಳೆಯುತ್ತಿದ್ದರೆಂದರೆ ಅವರೊಬ್ಬ ಶಾಸ್ತ್ರೀಯ ಗಾಯನದಲ್ಲಿ ತರಬೇತು ಹೊಂದಿರದ ಗಾಯಕನಲ್ಲ ಎನ್ನುವುದನ್ನು ಊಹಿಸಲೂ ಸಾಧ್ಯವಾಗದ ಮಾತಾಗಿತ್ತು.

ಕ್ಲಾಸಿಕಲ್ ಹಿನ್ನೆಲೆಯ ಚಿತ್ರಗೀತೆಗಳನ್ನು ಹಾಡುವುದರಲ್ಲಿ ಅದ್ವಿತಿಯರೆನಿಸಿದ್ದ ಮನ್ನಾಡೆ ಸಹ ತಾನು ಕಿಶೋರ ಕುಮಾರಗೆ ಸರಿಸಾಠಿಯಲ್ಲ ಎಂದು ಒಮ್ಮೆ ಸಂದರ್ಶನದಲ್ಲಿ ಸೋದಾಹರಣವಾಗಿ ಹೇಳಿದ್ದರು. ಅವರು ’ಪಡೋಸನ್” ಚಿತ್ರದ ’ಇಕ ಚೆತುರ ನಾರ’ ಎನ್ನುವ ಹಾಡಿಗೆ ಸಂಬಂಧಿಸಿದ ವಿಚಾರವಾಗಿ ಈ ಮಾತನ್ನು ಹೇಳಿದ್ದರು. ಆ ಹಾಡು ಶಾಸ್ತ್ರೀಯ ಸಂಗೀತದ ಹಿನ್ನೆಲೆಯಲ್ಲಿ ಸಂಯೋಜಿಸಿದ್ದಾಗಿತ್ತು. ಅದರಲ್ಲೂ ಮನ್ನಾಡೆ ಹಾಡಿದ ಭಾಗವಂತೂ ಹಾಗೆಯೇ ಇತ್ತು.

ಈ ಹಾಡನ್ನು ತೆರೆಯ ಮೇಲೆ ಸುನಿಲ ದತ್ತ ಮತ್ತು ಮೆಹ್ಮೂದ್ ನಡುವಿನ ಸ್ಪರ್ದೆಯಂತೆ ಚಿತ್ರೀಕರಿಸಿದ್ದರೆ ಹಿನ್ನೆಲೆ ಗಾಯನದಲ್ಲಿ ಮನ್ನಾಡೆ ಮತ್ತು ಕಿಶೋರ ಕುಮಾರ ನಡುವಿನ ಸ್ಪರ್ಧೆಯಂತೆ ಅನಿಸುತ್ತಿತ್ತು. ತಮಗೆ ಸಿಕ್ಕಿರುವ ಹಾಡಿನ ಭಾಗವು ಕ್ಲಾಸಿಕಲ್ ಆಧಾರಿತವಾದದ್ದರಿಂದ ಇದರಲ್ಲಿ ತಾನು ಕಿಶೋರ ಕುಮಾರ ನ್ನು ಸುಲಭವಾಗಿ ಮಣಿಸುವೆ ಎಂದು ಮನ್ನಾಡೆ ಅಂದು ಕೊಂಡಿದ್ದರಂತೆ. ಆದರೆ ಆ ಹಾಡಿನಲ್ಲಿ ಮನ್ನಾಡೆಗೆ ಸರಿ-ಮಿಗಿಲಾಗಿ ಕಿಶೋರ್ ಹಾಡಿದ್ದರು. ತೆರೆಯ ಮೇಲೆ ಆ ಹಾಡಿನ ಸ್ಪರ್ಧೆಯಲ್ಲಿ ಸುನಿಲ ದತ್ತ ಗೆದ್ದಂತೆ, ಹಿನ್ನೆಲೆ ಗಾಯನದಲ್ಲಿ ಕಿಶೋರ ಕುಮಾರ ಮನ್ನಾಡೆ ಮೇಲೆ ಜಯ ಸಾಧಿಸಿದ್ದರು. ಇದನ್ನು ಮನ್ನಾಡೆಯವರೇ ಸ್ವತಃ ಆ ಸಂದರ್ಶನದಲ್ಲಿ ಪ್ರಾಂಜಲವಾಗಿ ನುಡಿದಿದ್ದರು.

ಇರಲಿ, ಈಗ ನಾನು ‘ಮೆಹಬೂಬ’ ಚಿತ್ರದ ‘ಮೇರೆ ನೈನಾ ಸಾವನ್ ಬಾದೋ’ ಹಾಡಿನ ವಿಷಯಕ್ಕೆ ಬರುತ್ತೇನೆ. ಇದನ್ನು ಕಿಶೋರ್ ಮತ್ತು ಲತಾ ಮಂಗೇಶ್ಕರ್ ಇಬ್ಬರೂ ಬೇರೆ ಬೇರೆಯಾಗಿಯೇ ಹಾಡಿದ್ದಾರೆ (ಇದು ಯುಗಳ ಗೀತೆಯಲ್ಲ) ಇದು ಸಹ ತುಂಬ ಕಷ್ಟವಾದ ಹಾಡು. ಕೆಲವು ಸಾಲುಗಳು ತಾರಕದ ಪರಾಕಷ್ಠೆಯನ್ನು ತಲುಪಿ ಹಾಗೆಯೇ ನಯವಾಗಿ ಇಳಿಯುತ್ತವೆ.

ಸ್ವರ ಸಂಯೋಜಿಸಿದ ಆರ್ ಡಿ ಬರ್ಮನ ಇದರ ಟ್ಯೂನನ್ನು ಮೊದಲು ಕಿಶೋರ ಕುಮಾರರಿಗೆ ಕೇಳಿಸಿ ಹಾಡುವಂತೆ ಅವರನ್ನು ಮೊದಲು ಕೇಳಿಕೊಂಡರಂತೆ. ಅದಕ್ಕೆ ಕಿಶೋರ ಕುಮಾರ ಇದು ಬಹಳ ಕಷ್ಟದ ಹಾಡು, ಮೊದಲು ಇದನ್ನು ಲತಾ ದೀದಿಯೇ ಹಾಡಲಿ. ಅದನ್ನು ಕೇಳಿ ಅನುಸರಿಸಿ ನಂತರ ತಾನು ಹಾಡುವೆ ಎಂದರಂತೆ. ಈ ಹಾಡನ್ನು ಕೇಳಿದವರೆಲ್ಲರಿಗೂ ಇದರಲ್ಲಿ ಕಿಶೋರ ಕುಮಾರ ಲತಾ ಮಂಗೇಶ್ಕರರನ್ನು ಮೀರಿಸಿದ್ದು ಗೊತ್ತಿರುವ ಸಂಗತಿಯೆ. ಹೀಗೆ ಕಿಶೋರ್ ಗೆ ಶಾಸ್ತ್ರೀಯ ಹಿನ್ನೆಲೆ ಇಲ್ಲದೆಯೇ ಹಾಡುಗಾರಿಕೆ ಒಲಿದು ಬಿಟ್ಟಿತ್ತು. ಅವರೊಬ್ಬ ಅಭಿಜಾತ ಹಾಡುಗಾರರಾಗಿದ್ದರು.

‘ಮೇರೆ ನೈನಾ —‘ ಹಾಡನ್ನು ಕನ್ನಡಕ್ಕೆ ಅನುವಾದಿಸುವ ಪ್ರಯತ್ನ ಮಾಡಿದ್ದೇನೆ. ಹಿಂದಿನ ಜನ್ಮದಲ್ಲಿ ಪ್ರೇಮಿಗಳಾಗಿ ಅಗಲಿದ್ದ ನಾಯಕ ನಾಯಕಿಯರಿಗೆ ಅದರ ಸ್ಮರಣೆ ಉಂಟಾಗುವ ಕಥಾನಕದ ಹಿನ್ನೆಲೆಯಲ್ಲಿ ಈ ಹಾಡಿನ ಸಂದರ್ಭವಿದೆ.

ಅನುವಾದ ‘ಮೇರೇ ನೈನಾ ಸಾವನ್ ಬಾದೊ’

ನನ್ನ ಕಣ್ಣು ಶ್ರಾವಣದ ಮೋಡ
ಆದರೂ ಮನ ಬಾಯಾರಿಹುದು
ಮರುಳು ಮನವೇ ಏನು ನಿನ್ನಾಟ
ನೋವಿನ ಹಾಡೊಂದು ಎಲ್ಲಿಂದಲೋ ಬಂದು ಈ ತುಟಿಯಲಿ ಮೂಡಿತು ಹೇಗೆ
ದೂರಕೆ ಒಯ್ಯಿತು ನನ್ನ
ಮರತೆಯೇನು ? ಮರೆತರು ಕೂಡ ನೆನಪಿದೆ ನನಗೆ
ಸ್ವಲ್ಪ ಸ್ವಲ್ಪವೇ ಮಾತ್ರ
ಮನ ಬಾಯಾರಿಹುದು
ಹಳೆಯ ಕಾಲದ ಕತೆ ಇದಹುದು
ಈಗ ಎಷ್ಟೆ ಯೋಚಿಸಿದರೂ ನೆನಪಿಲ್ಲ ನೀನು
ಆದರೂ ಮರೆಯಲಾರೆನು ಎಂದೆಂದೂ ಆ ಶ್ರಾವಣದ ಜೋಕಾಲಿ
ಋತುಗಳು ಬಂದವು ಋತುಗಳು ಹೋದವು
ಸುಳ್ಳಿನ ಭರವಸೆ ನೀಡಿ
ಮನ ಬಾಯಾರಿಹುದು
ವರುಷಗಳುರುಳಿದವು ನಾವಿಬ್ಬರು ಸಂಧಿಸಿ ಅಗಲಿ
ಯಾವಾಗ ಕಳೆದ ಕಾಲದ ಗೆರೆಯು ಮಿಂಚಂತೆ ಬಂದು ಗಗನದಿ ಹೊಳೆಯಿತೊ
ನಿನ್ನನು ನೋಡಿದೆ ಆಗ
ಆಶೆ ನಿರಾಸೆಯು ಕಣ್ಣುಮುಚ್ಚಾಲೆಯಾಡುತ
ಮನಸನು ದಣಿಸಿಹವು
ಮನ ಬಾಯಾರಿಹುದು
ಬಣ್ಣಗೆಟ್ಟಿಹ ಈ ಚಿತ್ರವ ನೋಡಿ
ಗೆಜ್ಜೆಯ ಜಣಜಣ ನಾದವು ಎದೆಯನು ಮೀಟಿಹುದು
ಖಾಲಿ ಅರಮನೆ, ಕುಣಿಯುವ ನರ್ತಕಿ
ಮನ ಪುನಃ ನಿನ್ನ ನೆನಪಲಿ ಮುಳುಗಿಹುದು
ಮನ ಬಾಯಾರಿಹುದು
ನನ್ನ ಕಣ್ಣು ಶ್ರಾವಣ ಮೋಡ
ಆದರೂ ಮನ ಬಾಯಾರಿಹುದು

‍ಲೇಖಕರು Admin

August 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: