ಸಾಲಿಸಾಹೇಬ್ : ಸಮಸಮಾಜದ ಆಶಯದ ಕಥೆಗಳು

-ಡಾ.ಕಿರಣ ವಲ್ಲೇಪುರೆ
*
ಪುಸ್ತಕ : ಸಾಲಿಸಾಹೇಬ್
ಲೇಖಕಿ : ಪೂರ್ಣಿಮಾ ಪೋತೆ
ಪ್ರಕಾಶನ : ಸಪ್ನಾ ಬುಕ್ ಹೌಸ್
ವರ್ಷ : ೨೦೨೫
ಪುಟ : ೮೩
ಬೆಲೆ : ೯೫
*
ಕವಯಿತ್ರಿ, ಕಥೆಗಾರ್ತಿ ಪೂರ್ಣಿಮಾ ಪೋತೆ ಅವರು ರಚಿಸಿದ ‘ಸಾಲಿಸಾಹೇಬ್’ ಕಥಾಸಂಕಲನದಲ್ಲಿ ‘ಸಾಲಿ ಸುಖ’, ‘ರೊಟ್ಟಿ’, ‘ಸಾಲಿಸಾಹೇಬ್’, ‘ಸ್ತ್ರೀ ಎಂದರಷ್ಟೇ ಸಾಕೆ!’, ‘ಇವನಾರವ, ಇವನಾರವ’, ‘ಕಳ್ಳು ಬಳ್ಳಿ’, ‘ಪಯಣ’, ‘ಜಲಕಲಹ’, ‘ನಾಗಪುರ’, ‘ಟೆಡ್ ಟಾಕ್ ಅಂಬೇಡ್ಕರ್ ಬದುಕಿದ್ದರೆ’, ‘ನಾಮಾಂತರ-ಸ್ಥಳಾಂತರ – ಧರ್ಮಾಂತರ’, ‘ಊರ ಜಾತ್ರೆ’ ಎಂಬ ಒಟ್ಟು ಹನ್ನೆರಡು ಕಥೆಗಳಿವೆ.
ಸಮಸಮಾಜಕ್ಕಾಗಿ ಶ್ರಮಿಸಿದ ವ್ಯಕ್ತಿತ್ವಗಳ ಸ್ಮರಣೆ, ಸಮಸಮಾಜಕ್ಕಾಗಿ ತುಡಿತ, ಶಿಕ್ಷಣದ ಮಹತ್ವ, ವೈಚಾರಿಕತೆಯ ಅರಿವು, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ, ಕೌಟುಂಬಿಕ ಸಂಬಂಧಗಳ ಆಪ್ತತೆ, ಪರಂಪರೆಯ ಅರಿವು, ಅಂಬೇಡ್ಕರ್ ತೋರಿದ ದಾರಿ, ನೀಡಿದ ಸಂದೇಶಗಳು, ಸಾಂಪ್ರದಾಯಿಕ ನಂಬಿಕೆ-ಆಚರಣೆಗಳಿAದ ಕಳಚಿಕೊಳ್ಳಬೇಕಾದ ತುರ್ತು ಕಥೆಗಳಲ್ಲಿ ಮುಖ್ಯವಾಗಿ ಕಾಣಸಿಗುತ್ತದೆ. ಸಮಾಜದಲ್ಲಿ ಬೇರೂರಿದ ಜಾತಿ ವ್ಯವಸ್ಥೆಯ ನಾನಾ ರೂಪಗಳ ಬಗ್ಗೆ ಆಕ್ರೋಶ ವ್ಯಕ್ತಗೊಂಡಿದೆ.
ಆಶಾ ಕೇಂದ್ರ ಪಾತ್ರದ ‘ಸಾಲಿ ಸುಖ’ ಕಥೆಯು ಅಕ್ಷರದ ಮೂಲಕ ಬದುಕನ್ನು ರೂಪಿಸಿಕೊಂಡ ದಲಿತ ಕುಟುಂಬದ ಯಶೋಗಾಥೆ ನಿರೂಪಿಸುತ್ತದೆ. ಶಿಲ್ಪಾ ಕೇಂದ್ರ ಪಾತ್ರದ ‘ರೊಟ್ಟಿ’ ಕಥೆಯಲ್ಲಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೊಸತಲೆಮಾರು ಹೊಸ ರೀತಿಯ ತಿನಿಸುಗಳಿಗೆ ಆಕರ್ಷಿತರಾದರೂ ತಂದೆಯಂತೆಯೆ ಜನಪದರ ರೊಟ್ಟಿ ಊಟಕ್ಕೆ ಒಗ್ಗಿಕೊಳ್ಳುವ ಮಗಳ ಚಿತ್ರಣ ಇದೆ. ಪೂರ್ಣಾ ಕೇಂದ್ರ ಪಾತ್ರದ ‘ಸಾಲಿಸಾಹೇಬ್’ ಕಥೆಯಲ್ಲಿ ಸಾಲಿ ಕಲಿತು ನೌಕರಿ ಪಡೆದು ಬದುಕನ್ನು ಹಸನಾಗಿ ಕಟ್ಟಿಕೊಂಡು ಮುಂದೆ ತನ್ನೂರಿನ ಓಣಿಯ ಜನ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಮಕ್ಕಳಿಗೆ ಸಾಲಿ ಕಲಿಸಲು ಆಧ್ಯತೆ ನೀಡುವಂತೆ ಮಾಡಲು ಪ್ರಯತ್ನಿಸುವ ಮತ್ತು ಅವರಲ್ಲಿನ ಮೌಢ್ಯಗಳನ್ನು ಹೊಡೆದೊಡಿಸಿ ವೈಚಾರಿಕತೆಯ ಅರಿವು ನೀಡಲು ಪ್ರಯತ್ನಿಸುವ ಕಥೆ ಇದೆ. ‘ಸಾಲಿಸಾಹೇಬ್’ ಎಂಬುದು ಈ ಕಥೆಯ ಶಿರ್ಷಿಕೆ ಮತ್ತು ಕಥಾಸಂಕಲನದ ಶಿರ್ಷಿಕೆ ಆಗಿದ್ದು; ಶಾಲೆ ಕಲಿತು ಉತ್ತಮ ಬದುಕನ್ನು ರೂಪಿಸಿಕೊಂಡು ತನ್ನಂತೆ ಇತರರಿಗೂ ಶಾಲೆ ಕಲಿಯುವುದುರ ಬಗ್ಗೆ ಅರಿವು ನೀಡುವ ವ್ಯಕ್ತಿತ್ವಕ್ಕೆ ಜನ ಅಭಿಮಾನದಿಂದ ಕರೆಯುವ ಹೆಸರಾಗಿದೆ.

‘ಸ್ತ್ರೀ ಎಂದರಷ್ಟೇ ಸಾಕೆ!’ ಕಥೆಯು ಅಂಬೇಡ್ಕರ್ ಅವರ ಬೆನ್ನ ಹಿಂದಿನ ಬೆಳಕು, ಅವರ ಸಾಧಕ ಬದುಕಿಗೆ ನೆಲೆಯಾಗಿ, ಜೊತೆಯಾಗಿ ನಿಂತಿದ್ದ ಪತ್ನಿ ರಮಾಬಾಯಿ ಅವರ ಕಷ್ಟದ, ತ್ಯಾಗದ ಬದುಕಿನ ಚಿತ್ರಣ ಇದೆ. ಬಸವಣ್ಣನ ವಚನದ ಸಾಲಿನ ‘ಇವನಾರವ, ಇವನಾರವ!’ ಕಥೆಯು ಬಸವಾದಿ ಶರಣರು ಸಮಾನತೆಗಾಗಿ ಹೋರಾಡಿದ ಘಟನೆಗಳನ್ನು ಮೇಲುಕುಹಾಕಿ ಇಂದು ಬಸವ ಅನುಯಾಯಿಗಳು ಸಾಂಪ್ರದಾಯಿಕ ಮೌಢ್ಯಗಳಿಗೆ ಒಳಗಾಗದೆ ಎಲ್ಲರನ್ನು ಒಳಗೊಳ್ಳುವ ಶರಣರ ತತ್ವಗಳನ್ನು ಪಾಲಿಸಬೇಕು ಎಂಬ ಎಚ್ಚರಿಕೆಯ ಅರಿವನ್ನು ನೀಡುತ್ತದೆ. ‘ಕಳ್ಳು ಬಳ್ಳಿ’ ಕಥೆಯು ಕಳ್ಳುಬಳ್ಳಿಯ ಸಂಬAಧಗಳ ಮಹತ್ವವನ್ನು ಎತ್ತಿಹಿಡಿಯುತ್ತದೆ. ಶಿಕ್ಷಣ ಪಡೆದು ಬದುಕನ್ನು ರೂಪಿಸಿಕೊಂಡ ಅಣ್ಣನು ತಮ್ಮನಿಗೆ ಕಾಲೇಜಿಗೆ ಹೋಗಲು ಬೈಕ್ ಬೇಕೆಂದಾಗ ತನಗೆ ಕಷ್ಟ ಆದರೂ ಹಣ ಹೊಂದಿಸಿ ತಮ್ಮನಿಗೆ ಬೈಕ್ ಕೊಡಿಸಿ ಶಿಕ್ಷಣ ಮುಂದುವರಿಸುವAತೆ ಪ್ರೇರೆಪಿಸುವ ಕಥನ ಇದೆ.
‘ಪಯಣ’ ಕಥೆಯಲ್ಲಿ ಅಜ್ಜಿ, ಮಗಳು, ಮೊಮ್ಮಗಳು –ಮೂರು ತಲೆಮಾರಿನ ಪಯಣದ ಚಿತ್ರಣ ಇದೆ. ಅಜ್ಜಿಯಿಂದ ಮಗಳು ಧೈರ್ಯ, ಸಹನೆ ಗುಣಗಳನ್ನು ಕಲಿತರೆ ಮೊಮ್ಮಗಳಿಂದ ಅಜ್ಜಿ ಹೊಸ ಜಗತ್ತಿನ ದರ್ಶನ ಪಡೆಯುವ ಕಥೆ ಇಲ್ಲಿದೆ. ‘ಜಲಕಲಹ’ ಕಥೆಯು ಬುದ್ಧ ನಾಡನ್ನು ತೋರೆದಿದ್ದು ನದಿ ನೀರಿನ ಕಲಹದಿಂದ ಎಂಬುದನ್ನು ಮತ್ತು ಅಂಬೇಡ್ಕರ್ ನೀರಿಗಾಗಿ ಹೋರಾಟ ಮಾಡಿದ್ದನ್ನು ಮೇಲುಕು ಹಾಕಿ ಇಂದು ಅಂಬೇಡ್ಕರ್ ಹೋರಾಟದ ಫಲವಾಗಿ ಬದಲಾದ ಕಾಲಘಟ್ಟದಲ್ಲಿ ಹೊಸತಲೆಮಾರು ಹಕ್ಕುಗಳನ್ನು ಅನುಭವಿಸುತ್ತಿದೆ ಎಂಬುದನ್ನು ಕಥೆ ವಿವರಿಸುತ್ತದೆ. ಮಹಾಡ್ ಕೆರೆ ನೀರು ಮುಟ್ಟುವ ಹೋರಾಟಕ್ಕಿಗ ನೂರು ವರ್ಷ. ‘ನಾಗಪುರ’ ಕಥೆಯು ಅಂಬೇಡ್ಕರ್ ಅವರು ಲಕ್ಷಾಂತರ ದಲಿತರೊಂದಿಗೆ ಬೌದ್ಧ ಧರ್ಮ ಸ್ವಿಕರಿಸಿದ ಸ್ಥಳ ನಾಗಪುರ ದಲಿತರಿಗೆ ಮಹತ್ವದ ಸ್ಥಳ ಎಂಬುದನ್ನು ನಿರೂಪಿಸುತ್ತದೆ.
‘ಟೆಡ್ ಟಾಕ್ ಅಂಬೇಡ್ಕರ್ ಬದುಕಿದ್ದರೆ’ ಕಥೆ ಅಂಬೇಡ್ಕರ್ ಅವರು ಅನುಭವಿಸಿದ ನೋವು, ಅವರ ಹೋರಾಟದ ಬದುಕು, ಇಂದು ಜನಸಾಮಾನ್ಯರಿಗೆ ಸಿಕ್ಕ ಸಮಾನ ಅವಕಾಶಗಳನ್ನು ಚಿತ್ರಿಸಿ ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತರಾಗದೆ ಎಲ್ಲರ ಏಳಿಗೆಗೆ, ಎಲ್ಲರಿಗೂ ಸಮಾನ ಹಕ್ಕಿಗಾಗಿ ಹೋರಾಡಿದ ಎಲ್ಲರ ನಾಯಕ ಎಂಬುದನ್ನು ನಿರೂಪಿಸಿದೆ. ‘ನಾಮಾಂತರ-ಸ್ಥಳಾAತರ-ಧರ್ಮಾAತರ’ ಕಥೆ ಅಂಬೇಡ್ಕರ್ ಅವರು ಅವಮಾನಗಳಿಂದ, ತಿರಸ್ಕಾರಗಳಿಂದ ಹೊರಬರಲು ಸೂಚಿಸಿದ ಮೂರು ಮಾರ್ಗಗಳನ್ನು ಎತ್ತಿಹಿಡಿಯುತ್ತದೆ. ಹೆಸರಿನಿಂದ ನಮಗೆ ಅವಮಾನ ಆಗುತ್ತಿದ್ದರೆ ಹೆಸರನ್ನು ಬದಲಿಸಬೇಕು, ನಾವಿರುವ ಸ್ಥಳದಲ್ಲಿ ನಮಗೆ ತಿರಸ್ಕಾರ ಆಗುತ್ತಿದ್ದರೆ ಸ್ಥಳ ಬದಲಿಸಬೇಕು, ಜಾತಿಕಾರಣದಿಂದ ಶೋಷಣೆಯಾಗುತ್ತಿದ್ದರೆ ಧರ್ಮಾಂತರ ಆಗಬೇಕು, ಸ್ವಾಭಿಮಾನದಿಂದ ಬದುಕಬೇಕು ಎಂದು ಹೇಳಿದ್ದನ್ನು ವಿವರಿಸುತ್ತದೆ. ‘ಊರ ಜಾತ್ರೆ’ ಕಥೆಯು ಹಳ್ಳಿಯಲ್ಲಿ ನಡೆಯುವ ಜಾತ್ರೆ ಎಂಬ ಉತ್ಸವದ ನಿರೂಪಣೆಯ ಜೊತೆಗೆ ಅಲ್ಲಿನ ಜಾತಿ ಆಧಾರಿತ ಅವಕಾಶಗಳನ್ನು ಖಂಡಿಸುತ್ತದೆ. ಸಮಾನ ಅವಕಾಶಗಳು ಇರದ ಆಚರಣೆ ನಮಗೆ ಬೇಕಾಗಿಲ್ಲ ಎಂಬ ನಿರಾಕರಣೆ ಇಲ್ಲಿದೆ.
ಕಥೆಗಾರ್ತಿಯ ಆತ್ಮಕಥಾನಕದ ಎಳೆಗಳು ಮುಖ್ಯವಾಗಿ ಕಥೆಯಲ್ಲಿ ಕಾಣಸಿಗುತ್ತವೆ. ಲೇಖಕಿ ತಾನಿರುವ ಪಾತ್ರಕ್ಕೆ ಕೆಲವೊಮ್ಮೆ ನೇರವಾಗಿ ತನ್ನ ಹೆಸರನ್ನೆ ನೀಡಿದ್ದು, ಕೆಲವೊಮ್ಮೆ ಬೇರೆಯ ಹೆಸರನ್ನು ನೀಡಿ ಕಥೆಯನ್ನು ನಿರೂಪಿಸಿದ್ದು ಕಾಣಸಿಗುತ್ತದೆ. ಉಳಿದಂತೆ ಬೇರೆ ಪಾತ್ರಗಳು ಅದರಲ್ಲು ಕುಟುಂಬದ ಸದಸ್ಯರೆ ಪಾತ್ರಗಳಾಗಿದ್ದು, ಅವರ ನೇರ ಹೆಸರಿನಿಂದಲೆ ಕಥೆ ನಿರೂಪಿಸಿದ್ದು ವಿಶೇಷವಾಗಿ ಕಂಡುಬರುತ್ತದೆ. ಈ ರೀತಿಯ ಕಥೆ ನಿರೂಪಣೆಯ ಕ್ರಮ ಲೇಖಕಿಯ ತಂದೆ ಕಥೆಗಾರ ಎಚ್.ಟಿ.ಪೋತೆ ಅವರ ಕಥೆಯ ನಿರೂಪಣೆಯಲ್ಲು ಕಾಣಸಿಗುತ್ತದೆ. ಕಥೆಯ ಮುಖ್ಯ ಪಾತ್ರಗಳಲ್ಲಿ ಮತ್ತು ಕಥೆ ನಿರೂಪಕಿಯಾಗಿ ಕಥೆಗಾರ್ತಿ ಕಾಣಸಿಗುತ್ತಾರೆ. ಕಥೆಯ ಮುಖ್ಯ ಪಾತ್ರದ ಕನಸಿನಲ್ಲಿ ಇಡೀ ಕಥೆ ನಡೆಯುವ ನಿರೂಪಣಾ ತಂತ್ರವೂ ಇಲ್ಲಿದೆ. ಈಡೀ ಕಥೆಗಳು ಕೌಟುಂಬಿಕ ಹಿನ್ನಲೆಯಲ್ಲಿಯೇ ಸಾಮಾಜಿಕ ವ್ಯವಸ್ಥೆಯನ್ನು ನಿರೂಪಿಸುತ್ತವೆ. ಅಂಬೇಡ್ಕರ್ ಅವರ ಹೋರಾಟವನ್ನು ಸ್ಮರಿಸುವ ಜೊತೆಗೆ ಅವರ ಪರಿಶ್ರಮದ ಫಲವಾಗಿ ಎಲ್ಲರಿಗೂ ಇಂದು ಸಮಾನ ಅವಕಾಶಗಳು ಸಿಗುತ್ತಿರುವುದರ ಬಗ್ಗೆ ಕೃತಜ್ಞತಾ ಭಾವವನ್ನು ಕಥೆಗಳು ಒಳಗೊಂಡಿವೆ. ಇಲ್ಲಿನ ಕಥೆಗಳು ಕಥೆಗಾರ್ತಿಯು ಭವಿಷತ್ತಿನಲ್ಲಿ ಕನ್ನಡದ ಮಹತ್ವದ ಕಥೆಗಾರ್ತಿಯಾಗಿ ಬೆಳೆಯಬಲ್ಲ ಮುನ್ಸೂಚನೆಯನ್ನು ನೀಡುತ್ತವೆ.






0 Comments