ಕಿರಣ ಭಟ್, ಹೊನ್ನಾವರ
**
ʼ ನನಗನ್ನಿಸತ್ತೆ ಇಲ್ಲೋ ಒಂದು ಕಡೆ ಮನುಷ್ಯನಲ್ಲೂ ಒಳ್ಳೆಯತನ ಇರತ್ತೆ ಅಂತ”
ನಾಟಕವೊಂದರಲ್ಲಿ ಹೀಗೆ ಹದಿಮೂರು ವರ್ಷದ ಹುಡುಗಿಯೊಬ್ಬಳು ಮತ್ತೆ ಮತ್ತೆ ಹೇಳುತ್ತಿದ್ದರೆ ಆಕೆ ʼಅನ್ಯಾʼ. ಇಂಥದೊಂದು ಆಶಾವಾದದ ಸೆಳಕನ್ನು ಎದೆಯಲ್ಲಿ ಹೊತ್ತುಕೊಂಡು ಬದುಕಿದ ಹುಡುಗಿ ಆನ್ಯಾ. ಕೊನೆಗೂ ಅಂಥ ಮನುಷ್ತ್ವವನ್ನು ಕಾಣದೇ ಸಾವಿಗೀಡಾದವಳು. ಆಕೆಯ ಡೈರಿಯೇ ʼಅನ್ಯಾʼ ಳ ಡೈರಿ
ʼಅನ್ಯಾ ಳ ಡೈರಿʼ ಯನ್ನು ಕನ್ನಡಕ್ಕೆ ಅನುವಾದಿಸಿದವರು : ಎಚ್.ಕೆ.ರಾಮಚಂದ್ರಮೂರ್ತಿ
೧೯೪೦ ರ ಹೊತ್ತು. ನಾಝಿ ಸೈನಿಕರ ಅಟ್ಟಹಾಸದ ಕಾಲವದು. ಹಿಟ್ಲರ್ ನ ಕ್ರೂರತನಕ್ಕೆ ಮನುಷ್ಯ ಕುಲವೇ ನಡುಗಿಹೋದ ಕಾಲ. ನೆದರಲ್ಯಾಂಡ್ ನ್ನ ನಾಝಿ ಸೈನಿಕರು ವಶಪಡಿಸಿಕೊಂಡಿದ್ದಾರೆ. ಎಷ್ಟೋ ಜನ ಮಡಿದಿದ್ದಾರೆ. ಇನ್ನೆಷ್ಟೋ ಜನ ಹಿಟ್ಲರ್ ನ ನಾಝಿ ಕ್ಯಾಂಪ್ ಸೇರಿ ಹಿಂಸೆ ಅನುಭವಿಸುತ್ತಿದ್ದಾರೆ. ಇನ್ನು ಕೆಲವರು ಬದುಕಿನ ಆಸೆ ಹೊತ್ತು ಅಡಗುದಾಣ ಸೇರಿದ್ದಾರೆ. ಏಮಸ್ಟರಡ್ಯಾಮ್ ನ ಇಂಥ ಅಡಗುದಾಣಕ್ಕೆ ಸೇರಿಕೊಂಡ ಕುಟುಂಬವೊಂದರ ದಿನಚರಿಯಿದು. ಓಟ್ಟೋ ಫ್ರಾಂಕ್ ಎನ್ನೋ ವ್ಯಾಪಾರಿ ತನ್ನ ಹೆಂಡತಿ ಎಡಿತ್, ಇಬ್ಬರು ಹೆಣ್ಣುಮಕ್ಕಳೊಂದಿಗೆ ಮುಚ್ಚಿಹೋದ ಆತನ ಕಚೇರಿಯ ಕೋಣೆಯೊಂದರಲ್ಲಿ ಅಡಗಿದ್ದಾನೆ. ಆ ಹೆಣ್ಣುಮಕ್ಕಳಲ್ಲಿ ಒಬ್ಬಳು ಅನ್ಯಾ. ಇನ್ನೊಬ್ಬಳು ಎಡಿತ್. ಇವರಲ್ಲದೆ ಅಲ್ಲಿ ಇನ್ನೂ ಇಬ್ಬರಿದ್ದಾರೆ. ಆತನ ಗೆಳೆಯ ವಾನ್ ಡೇನ್ ಮತ್ತು ಆತನ ಹೆಂಡತಿ ಡಸೆಲ್. ಅವರಿಗೊಬ್ಬ ಮಗ ಪೀಟರ್.
ತನ್ನ ಹದಿಮೂರನೆಯ ವರ್ಷದ ಹುಟ್ಟುಹಬ್ಬಕ್ಕೆ ತಂದೆಯಿಂದ ಉಡುಗೊರೆ ಪಡೆದ ಡೈರಿಯಲ್ಲಿ ಆನ್ಯಾ ಬರೆಯಲು ಶುರುಮಾಡುತ್ತಾಳೆ. ಎರಡು ವರ್ಷಗಳ ಕಾಲ ಅಡಗುದಾಣದಲ್ಲಿ ಕ್ಷಣ ಕ್ಷಣಕ್ಕೂ ಭೀತಿಯಿಂದ ನಡುಗುತ್ತಾ ಆ ಕುಟುಂಬ ಅನುಭವಿಸಿದ ನೋವು, ಹಿಂಸೆ, ಮಾನಸಿಕ ವೇದನೆಯ ವಿವರಗಳೆಲ್ಲ ಇಲ್ಲಿವೆ. ತಾಯಿಯ ಅಂಥ ಪ್ರೀತಿಯನ್ನೇನೂ ಕಾಣದ ಆಕೆ ತಂದೆಯನ್ನು ತುಂಬ ಪೀತಿಸುತ್ತಿದ್ದವಳು. ಆಕೆ ತನ್ನ ಬಾಲ್ಯ, ಶಾಲೆ, ಸ್ನೇಹ, ಪ್ರೀತಿ ಇವೆಲ್ಲವುಗಳ ಬಗ್ಗೆಯೂ ಡೈರಿಯಲ್ಲಿ ಹೇಳಿಕೊಳ್ಳುತ್ತಾಳೆ. ಇವೆಲ್ಲವುಗಳನ್ನೂ ಮೀರಿ ನೋವಿ, ಹತಾಷೆ, ಭಯಗಳಲ್ಲೇ ವಿಜ್ರಂಭಿಸುವ ಈ ಡೈರಿ ನಾಝಿಗಳ ಕಾಲದಲ್ಲಿ ಜನ ಅನುಭವಿಸಿದ ಮಾನಸಿಕ ಹಿಂಸೆಯ ಒಂದು ದಾಖಲೆ ಎಂದೇ ಹೇಳಲಾಗುತ್ತದೆ. ಮಿತ್ರ ಪಡೆಗಳೆಲ್ಲ ನೆದರಲ್ಯಾಂಡ್ ಗೆ ಬಂದಿಳಿದಿವೆ. ʼಇನ್ನೇನು ನಾವು ಬಿಡುಗಡೆ ಕಾಣಬೇಕುʼ ಎಂದು ಕನಸು ಕಾಣುತ್ತಿರುವಾಗಲೇ, ವಿಮೋಚನೆಯ ಎರಡು ವಾರ ಮೊದಲೇ ನಾಝಿ ಪಡೆಗಳು ಇವರನ್ನು ಪತ್ತೆ ಹಚ್ಚುತ್ತಾರೆ. ಅನ್ಯಾ ಅನಾರೋಗ್ಯದಿಂದ ನಾಝಿ ಕ್ಯಾಂಪ್ ನಲ್ಲೇ ಸಾಯುತ್ತಾಳೆ. ವಿಮೋಚನೆಯ ನಂತರ ಕುಟುಂಬದಲ್ಲಿ ಬದುಕುಳಿದ ಒಬ್ಬನೇ ವ್ಯಕ್ತಿ ಒಟ್ಟೋ.ಗೆ ಆತನ ಸೆಕ್ರೆಟರಿ ಮಿಯಾಪ್ ಕೈಗಿತ್ತ ಡೈರಿಯ ಹಾಳೆಗಳೇ ಮುಂದೆ ʼ ಅನ್ಯಾ ಳ ಡೈರಿʼ ಯಾಗುತ್ತವೆ.
ಇಂಥ ನೋವಿನ ಪುಟಗಳಿಗೆ ದೃಶ್ಯದ ರೂಪ ಕೊಡುವ ಪ್ರಯತ್ನ ಮಾಡುತ್ತದೆ ʼಕಿನ್ನರ ಮೇಳʼ ತುಮರಿಯ ರಂಗಪ್ರಯೋಗ ʼಅನ್ಯಾಳ ಡೈರಿʼ. ಸೂಚ್ಯವಾಗಿ ಒಂದು ಪುಸ್ತಕದ ಕಪಾಟಿನ ಅಡಗು ಬಾಗಿಲನ್ನ ಕಪ್ಪು ಪರದೆಗಳ ಹಿಂದಿಟ್ಟುಕೊಂಡು, ತುಂಬ ಸರಳವಾದ ರಂಗಸಜ್ಜಿಕೆಯಲ್ಲಿ ನಾಟಕ ಕಟ್ಟಿದ್ದಾರೆ ನಿರ್ದೇಶಕ ಉಮೇಶ್ ನಾರಾಯಣ ಸಾಲಿಯಾನ. ಸುಮಾರು ಒಂದು ಗಂಟೆಯ ಪ್ರಯೋಗದಲ್ಲಿ ಆ ಅಡಗುದಾಣದಲ್ಲಿ ಅನ್ಯಾ ಳ ಕುಟುಂಬದವರು, ಗೆಳೆಯರು ಅನುಭವಿಸಿದ ದುಗುಡ, ಭಯ, ನೋವು ಗಳನ್ನೆಲ್ಲ ಸಾಕ್ಷಾತ್ಕರಿಸುವ ಪ್ರಯತ್ನ ಮಾಡುತ್ತಾರೆ. ಕ್ಷಣ ಕ್ಷಣಕ್ಕೂ ಹೊರಗಡೆ ಬದಲಾಗುವ ವಾತಾವರಣದ ಬಿಸಿ ಈ ಕೋಣೆಗೂ ತಟ್ಟುತ್ತ ಅನಿರೀಕ್ಷಿತ ಪ್ರತಿಕ್ರಿಯೆಗಳಿಗೆ ಕಾರಣವಾಗುವದನ್ನ ಸಾಕಷ್ಟು ಚೆನ್ನಾಗಿಯೇ ನಿರೂಪಿಸುತ್ತ ಹೋಗುತ್ತಾರೆ. ಇಂಥ ಸ್ಥಿತಿಯಲ್ಲಿ ಒಬ್ಬಿಗೊಬ್ಬರು ದೂಷಿಸಿಕೊಳ್ಳುತ್ತ, ಒಮ್ಮೊಮ್ಮೆ ಬಡಿದಾಡುತ್ತ ಗಲಾಟೆ ಮಾಡುತ್ತಿದ್ದಾಗಲೂ ಅನ್ಯಾ, ಪೀಟರ್ ನಡುವೆ ಅವ್ಯಕ್ತವಾದ ಪ್ರೀತಿಯೊಂದು ಮೊಳೆಯಲಾರಂಭಿಸುತ್ತದೆ. ದೊಟ್ಟ ಪತಾಕೆಗಳ ತೋರಣವೊಂದನ್ನು ಸೂಚ್ಯವಾಗಿ ರಂಗಕ್ಕೆ ಅಡ್ಡಡ್ಡ ಕಟ್ಟಿ ರಂಗವನ್ನು ಸೂಚ್ಯವಾಗಿ ಮಾರ್ಪಡಿಸುತ್ತ ಉಳಿದವರ ರಂಗ ಚಲನೆಗಳನ್ನ ಫ್ರೀಜ್ ಮಾಡುತ್ತ ಇಂಥ ದೃಶ್ಯಕ್ಕೊಂದು ಚಂದದ ಆವರಣ ಕಲ್ಪಿಸುವಲ್ಲಿ ತಮ್ಮ ಜಾಣತನ ತೋರುತ್ತಾರೆ.
ಇದು ಶಾಲೆಗಳಲ್ಲಿ ಹಗಲು ಬೆಳಕಿನಲ್ಲೂ ಆಡುವದಕ್ಕಾಗಿ ವಿನ್ಯಾಸ ಮಾಡಿದ ನಾಟಕ. ಹಾಗಾಗಿ ಇದಕ್ಕೆ ಬೆಳಕಿನ ವಿನ್ಯಾಸದ ಹಂಗಿಲ್ಲ. ಪ್ರಸ್ತುತ ಪ್ರಯೋಗ- ಕೆರೆಮನೆ ರಾಷ್ಟ್ರೀಯ ನಾಟಕೋತ್ಸವ ದ ರಂಗಮಂಚದಲ್ಲಿ ಲಭ್ಯವಾದ ಬೆಳಕಿನ್ನೇ ತುಂಬ ಚೆನ್ನಾಗಿ ತಂಡ ಬಳಸಿಕೊಂಡಿತು. ಎಲ್ಲ ಪಾತ್ರಧಾರಿಗಳೂ ಚೆನ್ನಾಗಿಯೇ ಅಭಿನಯಿಸಿದ್ದಾರೆ. ʼಅನ್ಯಾʼ ಳ ಪಾತ್ರಧಾರಿ ಹುಡುಗಿ ಗಮನ ಸೆಳೆಯುತ್ತಾಳೆ. ಹಗಲು ಬೆಳಕಿನಲ್ಲೂ ಅಭಿನಯಿಸಲ್ಪಡುವ ಈ ನಾಟಕಕ್ಕೆ ಅಭಿನಯ ಸೂಕ್ಷ್ಮತೆ, ಧ್ವನಿಯ ತಾಲೀಮು ಇನ್ನಷ್ಟು ಬೇಕಿತ್ತೇನೋ ಎನಿಸುತ್ತದೆ.
ಇಂಥ ಪ್ರಯೋಗವೊಂದನ್ನು ಕೆರೆಮನೆಗೆ ಕರೆಸಿ ನೋಡುವ ಅವಕಾಶ ಕಲ್ಪಿಸಿದ ಗೆಳೆಯ ಶಿವಾನಂದ ಹೆಗಡೆ, ಕೆರೆಮನೆ ಗೆ ಶರಣು
0 ಪ್ರತಿಕ್ರಿಯೆಗಳು