‘ಕಿಂಗ್ ಲಿಯರ್’ ನ ಮಾಗುವುದೊಂದೇ…

ಬಾಲ ಒಂದಿಲ್ಲ ಅಷ್ಟೇ..ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. 

ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ಪ್ರಥಮ್ ಬುಕ್ಸ್ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ. 

ಉಳಿದವರೆಲ್ಲಾ ಶಾಲೆ ಅಭಿವೃದ್ಧಿ ಮಾಡ್ತಾರೆ, ನಾನು ಮಕ್ಕಳ ಜೊತೆ ಬಾಲ ಕಟ್ಟಿಕೊಂಡು ಕುಣೀತೀನಿಅಂತ ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಡುತ್ತಾರೆ. 

ಹೇಮಾಗೆ ಪುಸ್ತಕ ಎಂದರೆ ಇನ್ನಿಲ್ಲದ ಹುಚ್ಚು. ತಾವು ಓದಿದ ಕೃತಿಗಳ ಪಾತ್ರಗಳು ಇವರನ್ನು ಇನ್ನಿಲ್ಲದಂತೆ ಕಾಡುತ್ತವೆ. ನಿದ್ದೆಯಲ್ಲೂ..ಎಂದು ಮಾತು ಸೇರಿಸುತ್ತಾರೆ. ಇಂದಿನಿಂದ ಪ್ರತೀ ವಾರ ಹೇಮಾ ತಮ್ಮನ್ನು ಕಾಡಿದ ಪಾತ್ರಗಳನ್ನು ತಂದು ನಮ್ಮ ಎದುರು ನಿಲ್ಲಿಸಲಿದ್ದಾರೆ.

ಅದು 2018, ಆಗಸ್ಟ್ ತಿಂಗಳ ಮೊದಲ ವಾರ. ಅಸ್ಸಾಂನ ಕಾಮರೂಪ ಜಿಲ್ಲೆಯಲ್ಲಿ ವಾರದಿಂದ ಸುರಿಯುತ್ತಿರುವ ಮಳೆ. ಪ್ರವಾಹ ಪರಿಸ್ಥಿತಿ. ಸೇನಾ ಪಡೆ ಸಮರೋಪಾದಿಯಲ್ಲಿ ರಕ್ಷಣಾ ಕೆಲಸ ಮಾಡುತ್ತಿತ್ತು.

ರೈತನೊಬ್ಬ ಒಂದು ದೊಡ್ಡ ಭತ್ತದ ಹುಲ್ಲಿನ ಹೊರೆಯನ್ನು ಹೊತ್ತೇ ಬೋಟ್ ಹತ್ತುತ್ತೇನೆ ಎನ್ನುತ್ತಿದ್ದಾನೆ. ಬೇಡಪ್ಪ ನೀನಷ್ಟೇ ಹತ್ತು ಅಂದ್ರೆ, ಎಷ್ಟೇ ದೂರವಿರಲಿ, ಗಂಜಿಕೇಂದ್ರವನ್ನು ನಾನು ಕುತ್ತಿಗೆ ಮಟ್ಟದ ನೀರಿನಲ್ಲಿ ಹೊರೆ ಹೊತ್ತು ನಡೆದೇ ಮುಟ್ಟುತ್ತೇನೆ ಎಂದು ಹಠ ಮಾಡುತ್ತಿದ್ದ.

ಅದು ಅವನ ಮನೆತನದವರು ಮಾತ್ರ ಬೆಳೆಯುತ್ತಿದ್ದ ಭತ್ತದ ತಳಿ. ಉಳಿದಿರೋದೇ ಇಷ್ಟು. ಇದನ್ನೂ ಬಿಟ್ಟರೆ ಅದು ನಮ್ಮ ಕೈ ಬಿಟ್ಟ ಹಾಗೆ ಎನ್ನುವುದು ಅವನ ಕಳಕಳಿ.

ಕೃಷಿ, ಓದು, ಬರವಣಿಗೆ… ಹೀಗೆ ಹೇಳಬಹುದಾದ ಕೆಲವನ್ನು, ಹೇಳಲಾಗದ ಕೆಲವನ್ನು ನನಗೆ ಏಕಕಾಲದಲ್ಲೇ ನೆನಪಿಸುತ್ತವೆ.

ನಾನು ಚಿಕ್ಕವಳಿದ್ದಾಗ ಅಪ್ಪ ಕಾಡಲ್ಲಿ ಕೃಷಿ ಮಾಡುತ್ತಿದ್ದರು. ಆ ವರ್ಷ ಸುರಿಯುತ್ತಿದ್ದ ಮಳೆಯಿಂದಾಗಿ ಕಾಡಿಗೂ ನಾಡಿಗೂ ಇದ್ದ ಸಂಬಂಧ ಕಡಿದು ಹೋಗಿತ್ತು. ಗಿರಣಿಗೆ ಹೋಗಿ ಹಿಟ್ಟು ಮಾಡಿಸಿಕೊಂಡೂ ಬರಲಾರದಂತಹ ಪರಿಸ್ಥಿತಿ.

ಎಲ್ಲಿಂದಲೋ ತಂದು ನಾಟಿ ಮಾಡಿ ಬೆಳೆದ ಭತ್ತದ ಅಪರೂಪದ ತಳಿಯ ಬೀಜವನ್ನು ಆ ಮಳೆಯಲ್ಲೂ ಮುಂದಿನ ಬಿತ್ತನೆಗಾಗಿ ಉಳಿಸಿಕೊಂಡಿದ್ದು ನೆನಪಾದಾಗಲೆಲ್ಲ, ತಂದೆ-ತಾಯಿ ಮಳೆಗಾಲಕ್ಕೆಂದು ಸಹನೆಯನ್ನು ಕೂಡಿಡುವುದು ಎಂದರೆ ಏನು ಎನ್ನುವುದು ಅರ್ಥವಾಗಿತ್ತು.

ಊರಿಗೆ ತೆರಳಿ, ಬಿಟ್ಟು ಬಂದ ಕೃಷಿಯನ್ನು ಮತ್ತೆ ಮಾಡುವ ಒಂದು ಹುಚ್ಚು ಇಂದಿಗೂ ನನ್ನಲ್ಲಿರುವುದನ್ನು ನೋಡುವ ಸ್ನೇಹಿತರು, ಹಗಲುಗನಸು ಕಾಣುವುದಕ್ಕೂ ಒಂದು ಮಿತಿ ಬೇಡವೇ ಎಂದು ಛೇಡಿಸುತ್ತಾರೆ.

ಮನುಷ್ಯನನ್ನು ಮನುಷ್ಯನನ್ನಾಗಿಸುವುದು ಇಂಥ ಹುಚ್ಚು ಹಂಬಲಗಳೇ ಎಂದು ನಂಬಿರುವ ನಾನು, “ನಾವು ಕೂಡಿಟ್ಟ ಹಣ, ಮಾಡಿಟ್ಟ ಆಸ್ತಿ, ಎಲ್ಲ ಅರ್ಥಹೀನ ಎಂದು ಅರಿವಾಗುವಂತಹ ಪರಿಸ್ಥಿತಿ ಏರ್ಪಡದ ಹೊರತು ಕೃಷಿಯ ಮಹತ್ವ ನಿಮಗೆ ತಿಳಿಯುವುದಿಲ್ಲ,” ಎನ್ನುವ ತೇಜಸ್ವಿ ಅವರ ಮಾತಿನೊಂದಿಗೆ ಸುಮ್ಮನಾಗುತ್ತೇನೆ.

ಕೃಷಿ ಯಾರಿಗೆ ಬೇಕೊ ಬೇಡವೋ ಗೊತ್ತಿಲ್ಲ. ಆದರೆ, ಮುಂದಿನ ಪೀಳಿಗೆಗೆ ಅನ್ನ ಬೇಕಲ್ಲವೇ? ಅದಕ್ಕಾಗಿ ಕಷ್ಟವಾದರೂ ಸರಿಯೇ, ನಾನು ಕೃಷಿಯನ್ನು ಇಷ್ಟಪಟ್ಟು ಮಾಡುತ್ತೇನೆ.

ಬರವಣಿಗೆ ಮತ್ತು ವ್ಯವಸಾಯವೆಂದರೆ ಅಮೂರ್ತ ಚಿಂತನೆಗಳ ಮೂರ್ತ ಸ್ವರೂಪದ ಕಾಯಕ ನನಗೆ. ಪುಸ್ತಕ ಮತ್ತು ಮಣ್ಣಿನ ಗುಣವೇ ಅಂಥದ್ದು. ಉತ್ತಿ-ಬಿತ್ತಿ, ಬೆಳೆದು-ತೂರುವ ವಿರಾಟ್ ಗರಡಿಯ ಗುರುತ್ವಾಕರ್ಷಣೆಯಲ್ಲಿ ಸಿಲುಕಿಕೊಂಡೇ ಇರುವಂತೆ ಮಾಡುತ್ತವೆ.

ಆವತ್ತೊಂದು ದಿನ ಇರುವುದೆಲ್ಲದರಿಂದ ಕೊಸರಿಕೊಂಡು ಕೃಷಿ ನಂಬಿ ಸುಮ್ಮನೆ ಸುಟ್ಟುಕೊಳ್ಳುವುದು ಚೆಂದ ಎಂದು ಎದ್ದು ನಡೆವಾಗ ಮಾಡುತ್ತಿರುವುದು ಎಷ್ಟು ಸರಿ? ತಪ್ಪು? ಎನ್ನುವ ಯೋಚನೆ ಕಾಡುವ ಹೊತ್ತಿಗೆ ಈ ದ್ವಂದ್ವವೇ ನನ್ನ ಪಾಲಿನ ಜೀವಂತಿಕೆ ಎನಿಸಿ ಹೆಜ್ಜೆಯನ್ನು ಗಟ್ಟಿಯಾಗಿ ಊರುವಂತೆ ಮಾಡಿದ್ದು ಎರಡು ಪುಸ್ತಕಗಳು.

ಒಂದು ಕಾರಂತರ ‘ಧರ್ಮರಾಯನ ಸಂಸಾರ’ ನಾನು ಕೃಷಿ ಮಾಡಲು ಶುರು ಮಾಡಿದ ಹೊಸದರಲ್ಲಿ ಓದಿದ ಪುಸ್ತಕ. ಅದರಲ್ಲಿ ಒಂದು ಸಾಲು ಬರುತ್ತದೆ. “…ನೋಡನೋಡುತ್ತ ಕೆರೆಯ ತಳದ ಯಾವತ್ತು ವಿಸ್ತಾರ ಬಿಳಿ ಬಣ್ಣದ ನೀರಿನಿಂದ ತುಂಬ ತೊಡಗಿತು. ಆತ, ಒಬ್ಬ ಆಳನ್ನು ಕರೆದು ‘ಮನೆಗೆ ಹೋಗಿ ಹೇಳು, ಅಲ್ಲಿದ್ದವರೆಲ್ಲರೂ ಬಂದು ನೀರು ತುಂಬುವ ಚೆಂದ ನೋಡಲಿ’ ಎಂದು ಹೇಳಿ ಕಳುಹಿಸಿದ,”  ಎಷ್ಟು ಜೀವಂತಿಕೆಯ ಸಾಲು.

ಇಂಥದ್ದೇ ಒಂದು ಸಾಲನ್ನು ‘ನನ್ನ ತೇಜಸ್ವಿ’ಯಲ್ಲೂ ಓದಿದೆ. “… ನಾಲ್ಕಾರು ವರ್ಷಗಳ ನಂತರ ನಮ್ಮ ತೋಟದ ಪಕ್ಕದ ಹೊಸಳ್ಳು ಹಳ್ಳಿಯವರೇ ಒಳ್ಳೊಳ್ಳೆ ತರಕಾರಿ ಬೆಳೆಯಲು ಶುರು ಮಾಡಿದರು. ಅದೂ ಹೇರಳವಾಗಿ ಮಾರ್ಕೆಟ್ಟಿಗಾಗಿ. ತಾಜಾ ತರಕಾರಿ ಎಲ್ಲ ಬಗೆಯದೂ ಬೆಳೆಯುತ್ತಿದ್ದರು. ಹೂಕೋಸು, ಕೋಸುಗಡ್ಡೆ ಮೈದಾನದಲ್ಲಿ ಹಬ್ಬಿ ಹರಡಿ ಬೆಳೆದಿರುವುದಂತೂ ಕಣ್ಣಿಗೆ ಹಬ್ಬ. ನೋಡು ಎಷ್ಟು ಚೆಂದವಿದೆಯೆಂದು ನನ್ನನ್ನು ತೇಜಸ್ವಿ ಕರೆದುಕೊಂಡು ಹೋಗಿ ತೋರಿಸಿದ್ದರು,” ಎಂದು ಬರೆಯುತ್ತಾರೆ ರಾಜೇಶ್ವರಿ.

ಚೆಂದವಿರುವುದನ್ನು ಎಲ್ಲರೂ ನೋಡಿ ಖುಷಿ ಪಡಲಿ ಎನ್ನುವ ಈ ಭಾವ ಬೇಕಲ್ಲವೇ ಬದುಕಿಗೆ!

ನಡೆವ ಹಾದಿಯುದ್ದಕ್ಕೂ ಹಿತವನ್ನೇ ಸುರಿಸುತ್ತಿದ್ದ ಜೀವನ ಬಿಟ್ಟು ಕೃಷಿ ಮಾಡಲು ಹೋಗಿದ್ದು. ದಿನವೂ ಇಷ್ಟಿಷ್ಟೇ ಭೂಮಿ ಮತ್ತು ಮನಸ್ಸನ್ನು ಹದ ಮಾಡಿಕೊಳ್ಳುತ್ತಿರುವಾಗಲೇ ಕಾಯುತ್ತಿದ್ದ ಮಳೆ ಶುರುವಾಯಿತು.

ಮೊದಲ ವಾರ ಪರವಾಗಿಲ್ಲ ಎನ್ನುತ್ತಿರುವಾಗಲೇ ಮುಂದಿನವಾರ ಮಳೆಯಾಗಲಿಲ್ಲ. ವಾರ ಬಿಟ್ಟು ಟೌನಿಗೆ ಹೋದವಳು ಬರುವಷ್ಟರಲ್ಲಿ ದಟ್ಟೈಸಿದ ಕರಿಮೋಡದಿಂದ ದೊಡ್ಡ ದೊಡ್ಡ ಹನಿಗಳು ತಗಡಿನ ಮೇಲೆ ಬೀಳುತ್ತಿದ್ದರೆ ಕರಿಗೆಜ್ಜೆ ಕುಣಿಸುತ್ತ ಯಾರೋ ಬಂದಂತಾಗುತ್ತಿತ್ತು.

ಕೃಷಿ ಮತ್ತು ಮಳೆ ಎಲ್ಲರಿಗೂ ಒಂದು ಕನಸು. ಆದರೆ ಅದೊಂದು ವಾಸ್ತವವೂ ಹೌದು. ಒಂದು ಮಳೆ ಏನನ್ನೂ ನಿರ್ಧರಿಸುತ್ತದೆ. ನಮ್ಮ ಮೇಲೆ ನೇರ ಪರಿಣಾಮ ಬೀರುವ ತನಕ ಅದನ್ನು ರೋಮ್ಯಾಂಟಿಕ್ ಆಗಿ ನೋಡಬಹುದು. ಅದರಾಚೆಗೆ ಕಷ್ಟ. ಪರಿಶ್ರಮ ಮತ್ತು ಫಲಿತಾಂಶದ ನೇರ ಫಲಾನುಭವಿ ನಾನು ಆ ವರ್ಷ.

‘‘ನಿನ್ನ ಹುಡುಗಾಟ, ಹಿಡಿದಿದ್ದನ್ನು ಸಾಧಿಸಿದಾಗ ನಿನ್ನ ಕಣ್ಣುಗಳಲ್ಲಿ ಕಾಣುವ ಸಂತೃಪ್ತಿ, ಇಂತಹ ಸಣ್ಣ-ಪುಟ್ಟ ಸಂಗತಿಗಳನ್ನೇ ಬದುಕಿನ ದೊಡ್ಡ ಸಂಪತ್ತೆಂದು ತಿಳಿದವ ನಾನು,” ಎನ್ನುತ್ತಿದ್ದ ಅಪ್ಪ ಕೂಡ ಕೃಷಿಯಲ್ಲಿ ನೊಂದು ಬೆಂದವರು. ಸಮಾಧಾನ ಮಾಡಲು ಅವರಲ್ಲೂ ಪದಗಳಿರಲಿಲ್ಲ.

ಆಗ ಹೃದಯವನ್ನು ನಿಯಂತ್ರಿಸಿದ್ದು, ಸಂತೈಸಿದ್ದು ಓದುತ್ತ ಎದೆಯ ಮೇಲಿಟ್ಟುಕೊಂಡ ಪುಸ್ತಕಗಳೇ.

ಬದುಕಿಗೆ ಬೇಕಾದ ಅಭಿರುಚಿ, ಸೃಜನಶೀಲತೆ, ಜೀವನೋತ್ಸಾಹ, ಕನಸು ನನಸಾಗಿಸಿಕೊಳ್ಳುವ ವಯಸ್ಸಿದ್ದಾಗಲೂ ಪುಸ್ತಕದ (ಆತ್ಮದ) ಕರೆಯಂತೆ ಬದುಕುತ್ತಿರುವ ನಿನ್ನ ಕಣ್ಣುಗಳಲ್ಲಿ ಯಾವತ್ತೂ ಅಸಹಾಯಕತೆ ಇಣುಕಿಲ್ಲ, ಈಗಲೂ ಇಣುಕಬಾರದು. ಒಳ್ಳೆಯದಾಗಲೀ… ಎಂದು ಹರಿಸಿದ್ದು ‘ಕಿಂಗ್ ಲಿಯರ್’ ನ ಮಾಗುವುದೊಂದೇ… (Ripeness is all) ಸಾಲು.

ವರುಷದ ಬೆಳೆಯೆಲ್ಲ ನಿಮಿಷದಲ್ಲಿ ಕೊಚ್ಚಿ ಹೋಗಿ, ಮಳೆ ನಿಂತ ಆ ಹೊತ್ತಲ್ಲೂ ಕಣ್ಣಲ್ಲಿ ಸುಗ್ಗಿ ಸಂಭ್ರಮ. 

ಎಲ್ಲವೂ ಒಂದು ಹಂತಕ್ಕೆ ಮುಗಿದು, ಮತ್ತೆ ಶುರುವಾಗಬೇಕು. ಆಗಲೇ ಬದುಕು ಒಂದು ಸುತ್ತು ಪೂರ್ತಿ ಮಾಡಿದಂತೆ ಎಂದು ತಿಳಿ ಹೇಳುವಂತೆ ರಾತ್ರಿ ಗಾಳಿಗೆ ತುಸು ಬಿರುಕು ಬಿಟ್ಟ ಮುಂಬಾಗಿಲ ಪಡಕಿನಿಂದ ಕಚಗುಳಿಯಿಕ್ಕುತ ಮಂದಾನಿಲವೊಂದು ನನ್ನ ಸುತ್ತ ಸುತ್ತಿಸುತ್ತಿ ಸುಳಿಯುತ್ತಿತ್ತು.

September 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: