ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾವ್ಯಾ ಲೇಖನ: ನಾವು ಹುಡುಗಿಯರು ಈಗ ಹೀಗೆ..

ಕಾವ್ಯಾ ಪಿ ಕೆ

ಲಡಾಯಿ

ಬೇರೆ ಕಡೆಗಳಲ್ಲಿ ಹೇಗೋ ಗೊತ್ತಿಲ್ಲ, ಆದರೆ ನಮ್ಮ ಉತ್ತರ ಕರ್ನಾಟಕದ ಜರ್ನಲಿಸಂ ಡಿಪಾರ್ಟಮೆಂಟುಗಳಲ್ಲಿ ಮಾತ್ರ ಕೋರ್ಸು ಸೇರುವ ಹುಡುಗಿಯರ ಸಂಖ್ಯೆ ಕಣ್ಣಿಗೆ ರಾಚುವಷ್ಟು ಕಡಿಮೆ. ನಮ್ಮ ಸೀನಿಯರ್‍ಸ ಮೂವತ್ತು ಜನರಲ್ಲಿ ಕೇವಲ ನಾಲ್ಕು ಜನ ಹುಡುಗಿಯರಿದ್ದಾರೆ. ಆದರೆ ಕ್ಲಾಸಿನಲ್ಲಿ ಅವರ ಮಾತೇ ನಡೆಯುವುದು ಎನ್ನುವುದು ಬೇರೆ ವಿಷಯ. ನಮ್ಮ ಕ್ಲಾಸಿನಲ್ಲಿ ಕೂಡ ನಾವು ಏಳೇ ಹುಡುಗಿಯರು ಇರುವುದು. ಇಲ್ಲಿ ಮುಖ್ಯವಾಗಿ ಹೇಳಬೇಕಾದುದೆಂದರೆ ನಮ್ಮ ಕ್ಲಾಸಿನ ಹುಡುಗರು ಯಾರೂ ನಮ್ಮನ್ನು ಹುಡುಗಿಯರು ಅಂತ ಪ್ರತ್ಯೇಕವಾಗಿ ನೋಡುವುದೇ ಇಲ್ಲ. ನಾವು ತಟಕ್ಕೆಂದು ಕೇಳುವ ಸಣ್ಣ ಸಣ್ಣ ಪ್ರಶ್ನೆಗಳಿಗೆ ಉತ್ತರಿಸುವಾಗ ಬೆವರುವುದಿಲ್ಲ, ನಾವು ಜೊತೆಗಿದ್ದಾಗ ಬೇರೆ ಡಿಪಾರ್ಟಮೆಂಟಿನ ಹುಡುಗಿಯರ ಟಾಪ್‌ನ ಅಳತೆಯ ಬಗ್ಗೆಯೋ ಅಥವಾ ಅವರ ದಾವಣಿಯ ಮುದ್ದಾದ ಸುಕ್ಕುಗಳ ಬಗ್ಗೆಯೋ ಅಥವಾ ಅವರ ಮುಂಗುರುಳು ಸಹಜವಾಗಿ ಹಾರುತ್ತದೋ ಇಲ್ಲಾ ಅದರ ಹಿಂದೆ ಬ್ಯೂಟೀಷಿಯನ್‌ಗಳ ಕೈವಾಡವಿದೆಯೋ ಎಂಬುದರ ಬಗ್ಗೆಯೋ ನಿಸ್ಸಂಕೋಚವಾಗಿ ಚರ್ಚಿಸಬಲ್ಲರು.

ನಾವು ಕೂಡ ನಿಮಗೆ ಹುಡುಗಿಯರು ಅಂದರೆ ಹಣೆಯ ಮೇಲಿಷ್ಟು ಕೂದಲು ಬಿಟ್ಟು, ತುಸು ಬೆಳ್ಳಗಿದ್ದು ಪರ್‌ಫ್ಯೂಮ್ ಮೂಗಿಗೆ ಹೊಡೆಯುವಂತಿದ್ದರೆ ಸಾಕು ಮಕ್ಕಳೇ ಕಣ್ಣುಮುಚ್ಚಿ ಹಿಂದೆ ಹೋಗಿಬಿಡುತ್ತೀರಿ ಅಂತ ರೇಗಿಸುತ್ತಿರುತ್ತೇವೆ. ಇದೆಲ್ಲವನ್ನೂ ಇಲ್ಲಿ ಏಕೆ ಹೇಳಲೇಬೇಕು ಅನ್ನಿಸಿತೆಂದರೆ ಗಂಡು ಹೆಣ್ಣಿನ ಸಂಬಂಧ ನಗರಗಳಲ್ಲಿ ಹೇಗೆ ಮೆಲ್ಲಗೆ ಹೊಸ ರೂಪ, ಹೊಸ ಅಂಗಿ ತೊಟ್ಟು ಸಹಜವಾಗುತ್ತಿದೆ ಎಂಬುದನ್ನು ಈ ಮಹಿಳಾ ದಿನಾಚರಣೆಯ ಹೊತ್ತಿನಲ್ಲಿ ನೆನೆಯಲೇಬೇಕು ಅಂತ ಅನ್ನಿಸಿತು. ಆ ಮೂಲಕ ಸ್ತ್ರೀವಾದದ ಕ್ಲೀಷೆ ಮೀರಿ ಹೆಣ್ಣಿನ ವ್ಯಕ್ತಿತ್ವ ವಿಕಸಿತವಾಗುತ್ತ ನಡೆದಿದೆ ಎಂದು ದಿಟ್ಟವಾಗಿ ನುಡಿಯಬಹುದು.

ಮೊನ್ನೆಯೂ ಹಾಗೆಯೇ ಆಯಿತು. ನಮ್ಮ ಡಿಪಾರ್ಟಮೆಂಟಿನಲ್ಲಿ ರಾಜ್ಯಮಟ್ಟದ ಮೀಡಿಯಾ ಫೆಸ್ಟ್ ಆರ್ಗನೈಸ್ ಮಾಡಿದ್ದೆವು. ಅಷ್ಟು ದೊಡ್ಡ ಇವೆಂಟ್ ಎಂದರೆ ಫೆಸ್ಟ್  ಹತ್ತಿರ ಬರುತ್ತಿದ್ದಂತೆ ಅದೂ ಇದೂ ಕೆಲಸ ಅಂತ ರಾತ್ರಿ ಒಂಭತ್ತು ಹೊಡೆದೇಬಿಡುತ್ತಿತ್ತು. ಆಗ ಮನೆಯಿಂದ ಪಪ್ಪ ಫೋನ್ ಮಾಡಿ ಪೀಜಿಯ ತನಕ ಒಬ್ಬಳೇ ಹೋಗಬೇಡ, ಕ್ಲಾಸಿನ ಹುಡುಗರನ್ಯಾರಾದರನ್ನೂ ಜೊತೆಗೆ ಕರೆದುಕೊಂಡು ಹೋಗು ಅಂತ ಹೇಳುತ್ತಿದ್ದರು. ಪಪ್ಪ ಅಮ್ಮನ ಮುಂದೆ ಕೂಡ ಇವನು ನನ್ನ ಫ್ರೆಂಡ್ ಅಂತ ಯಾವುದೇ ಹಿಂಜರಿತವಿಲ್ಲದೇ ಇಂದಿನ ಹುಡುಗಿಯರು ಪರಿಚಯ ಮಾಡಿಕೊಡುತ್ತಾರೆ.

ಮೊದಲೆಲ್ಲ ಟಾಯ್ಲೆಟ್ಟಿಗೆ ಹೋಗಬೇಕೆಂದರೂ ಹುಡುಗಿಯರು “ಲೇ ಪ್ಲೀಸ್ ಬಾರಲೇ” ಅಂತ ತಮ್ಮ ಸ್ನೇಹಿತೆಯರನ್ನು ಜೊತೆಗೆ ಕರೆಯುತ್ತಿದ್ದರು. ಆದರೆ ಇಂದು ಆಕೆ ಒಬ್ಬಳೇ ದುರ್ಗದಬೈಲಿಗೆ ಶಾಪಿಂಗ್ ಹೋಗಬಲ್ಲಳು, ತನ್ನಿಷ್ಟದ ಪಾನೀಪುರಿಯನ್ನು ಒಬ್ಬಳೇ ಸವಿಯಬಲ್ಲಳು, ಬಿಸಿಲಿನಿಂದ ಕಂಗೆಟ್ಟಾಗ ಒಬ್ಬಳೇ ಹೋಗಿ ಎಳನೀರನ್ನೋ ಕಬ್ಬಿನಹಾಲನ್ನೋ ಕೋಲ್ಡ ಬದಾಮ್ ಮಿಲ್ಕ್ ಅನ್ನೋ ಕುಡಿಯುವ ನಿರಾಳತೆಯನ್ನು ಅನುಭವಿಸಬಲ್ಲಳು, ಇಷ್ಟದ ಸಿನಿಮಾವನ್ನು ಒಬ್ಬಳೇ ಹೋಗಿ ಕೂತು ನೋಡಿ ಬಂದು ಹೊಸತನದಿಂದ ಕಂಗೊಳಿಸಬಲ್ಲಳು. ನಿರಮ್ಮಳ, ನಿಶ್ಕಪಟ ಆತ್ಮವಿಶ್ವಾಸದ ಗೆರೆಯಿದು.. ಆ ಗೆರೆಯುದ್ದಕ್ಕೂ ತನ್ನ ತೀಕ್ಷ್ಣ ದೃಷ್ಟಿಯನ್ನು ಅಷ್ಟೇ ಸೂಕ್ಷ್ಮವಾಗಿ ಬೀರಬಲ್ಲಳು. ತನ್ನ ಸ್ವಂತ ನಿರ್ಧಾರವನ್ನೂ, ಅನಿಸಿಕೆಯನ್ನೂ ಯಾವ ಕಳವಳವೂ ಇಲ್ಲದೇ ಯಾರ ಹಂಗೂ ಇಲ್ಲದೇ ನಿಶ್ಚಿತವಾಗಿ ಪ್ರಕಿಟಿಸಬಲ್ಲಳು.

ಇವೆಲ್ಲಕ್ಕೂ ಕಾರಣಗಳಲ್ಲಿ ಬಹುಶಃ ಮಾಧ್ಯಮದ ಪಾತ್ರವೂ ಮುಖ್ಯವಿರಬಹುದು. ಶೀಲಾ ಕಿ ಜವಾನಿಯಲ್ಲಿ ಕತ್ರೀನಾ ‘ಕಿಸೀ ಔರ ಕಿ ಮುಝಕೋ ಜರೂರತ ಕ್ಯಾ, ಮೈ ತೋ ಖುದ್ ಸೇ ಪ್ಯಾರ ಜತಾವೂ’ ಎಂದು ಆತ್ಮವಿಶ್ವಾಸದಿಂದ ಉಸುರಿದ್ದೂ ಇಂದಿನ ಹುಡುಗಿಯರ ಹೊಸ ವ್ಯಕ್ತಿತ್ವದ ಬೆನ್ನೆಲುಬಾಗಿದ್ದೂ ಸ್ವಲ್ಪಮಟ್ಟಿಗೆ ಸತ್ಯ. ನಮ್ಮ ಮನೆಯ ಕೆಲಸಕ್ಕೆ ಬರುವ ಚೆನ್ನವ್ವ ಕುಡಿದು ಬರುವ ಗಂಡನಿಗೆ ದಿನವೂ ತಾನೇ ಹೊಡೆಯುತ್ತಾಳೆ. ಇಂಟರ್ನೆಟ್ ಎಂಬ ಮಾಯಾಜಾಲ ಮೇನ್‌ಸ್ಟ್ರೀಮಿಗೆ ಬಂದಮೇಲಂತೂ ಜಗತ್ತಿನ ಎಲ್ಲ ಸಂಗತಿಗಳನ್ನೂ ಆಕೆ ತಿಳಿದುಕೊಳ್ಳುತ್ತಿದ್ದಾಳೆ. ಮಣಿಪುರದಲ್ಲಿ ನಡೆದ ಹಿಂಸೆಯ ಕುರಿತಾಗಿಯೂ ಫೇಸ್‌ಬುಕ್ಕಿನಲ್ಲಿ page ಕ್ರಿಯೇಟ್ ಮಾಡಿ ತನ್ನದೇ ರೀತಿಯಲ್ಲಿ ಪ್ರತಿಭಟಿಸಿದ್ದಾಳೆ. ಇಂದು ಜಗತ್ತಿನ ಯಾವ ಸಂಗತಿಯೂ ಅವಳ ಕೈಗೆಟುಕದಷ್ಟು ದೂರದಲ್ಲಿ ಇಲ್ಲ. ಇವಳಿಗೆ ಖಂಡಿತವಾಗಿಯೂ ‘ಮಹಿಳಾ ದಿನಾಚರಣೆ’ಯ ಪ್ರತ್ಯೇಕತೆ ಅವಶ್ಯಕತೆಯೂ ಇಲ್ಲ, ಅನಿವಾರ್ಯವೂ ಅಲ್ಲ.

* * * * * * * * * *

ಆದರೆ ಸಂಕಟದ ಸಂಗತಿಯೆಂದರೆ ಮೇಲೆ ಹೇಳಿದ ಎಲ್ಲ ಬಗೆಯ ಹೆಣ್ಣುಮಕ್ಕಳು ಒಳಗೊಳ್ಳುವುದು ಕೇವಲ ೫% ನಷ್ಟು ಮಹಿಳಾ ಜನಸಂಖ್ಯೆಯನ್ನು ಮಾತ್ರ. ಉಳಿದ ಹೆಣ್ಣುಮಕ್ಕಳು ಇಂದಿಗೂ ಮನೆಯಿಂದ ಹೊರಗೆ ಹೆಜ್ಜೆಯಿಡಲು ಮನೆಯವರ ಮರ್ಜಿ ಕಾಯುತ್ತಾರೆ. ಎಷ್ಟೋ ಆಫೀಸುಗಳಲ್ಲಿ ವಯಕ್ತಿಕ ಹಿಂಸೆಯನ್ನು ಮೌನವಾಗಿ ಅನುಭವಿಸುತ್ತಿದ್ದಾರೆ, ‘ಹೆಣ್ಣು’ ಎಂಬ ಒಂದೇ ಕಾರಣಕ್ಕೆ ‘ಯಾರಿಗೆ ಬೇಕ್ರೀ ರಗಳೆ’ ಎನ್ನಿಸಿಕೊಂಡು ಎಷ್ಟೋ ಇಂಟರ್ವ್ಯೂಗಳಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ, ಒಂದೇ ಕೊಡ ನೀರಿನ ಸಲುವಾಗಿ ಆರು ಮೈಲಿ ನಡೆದೇ ಜೀವ ಸವೆಸುವವರಿದ್ದಾರೆ, ಸ್ವಂತ ಹೊಟ್ಟೆಯ ಕುಡಿಗಳನ್ನು ವರ್ಷಾನುಗಟ್ಟಲೇ ನೋಡಲಾರದೇ ಬತ್ತಿದ ಕಣ್ಗಳಲ್ಲಿ ಕಾಣದ ಬಂಧುಗಳ ಬರುವಿಕೆಗಾಗಿ ಕಾಯುತ್ತಿರುವ ಜೈಲು ಹಕ್ಕಿಗಳಿದ್ದಾರೆ, ಸಂಜೆಯಾಗುತ್ತಲೇ ಎಬ್ಬಿಸಿಕೊಂಡು ಆರಿದ ತುಟಿ-ಕೆನ್ನೆಗಳಿಗೆ ರಂಗು ಬಳಿದುಕೊಂಡು ಫೇರ್ ಅಂಡ್ ಲವ್ಲಿಯನ್ನೇ ಕೂದಲಿಗೂ ಹಚ್ಚಿಕೊಂಡು ಸೆಟ್ ಮಾಡುತ್ತ ಕಣ್ಣಿನ ಸನ್ನೆಗಳನ್ನು ತನ್ನದೇ ವೃತ್ತಿಯ ಹಿರಿಯರಿಂದ ಹೊಸದಾಗಿ ಕಲಿಯುತ್ತಿರುವ ಹದಿನೈದು ವರುಷದ ತಂಗಿಯರೂ ಇಲ್ಲೇ, ಇದೇ ಊರಿನಲ್ಲಿ, ನಮ್ಮ ಕಣ್ಣಳತೆಯಿಂದ ತುಸುವೇ ಮರೆಯಲ್ಲಿ, ಕತ್ತಲಿನಲ್ಲಿ ಇದ್ದಾರೆ.

ಅವರ ಕಷ್ಟಗಳನ್ನು ತುಸುವಾದರೂ ದೂರಮಾಡಲು, ಅವರ ಅಸಹಾಯಕತೆಯನ್ನು ಚೂರಾದರೂ ಹೊಡೆದೋಡಿಸಲು, ಅವರ ಬದುಕಿನಲ್ಲಿ ಬೇರೆ ಬಣ್ಣಗಳೂ ಇವೆ ಅಂತ ಸಮಾಜಕ್ಕೆ ಮತ್ತು ಸ್ವತಃ ಅವರಿಗೇ ತೋರಿಸಿಕೊಡಲು ಮಹಿಳಾ ದಿನಾಚರಣೆ ಎಂಬ ಪ್ರತ್ಯೇಕವಾದ ಆಚರಣೆ ಖಂಡಿತ ಬೇಕು. ಇದೊಂದು ದಿನವಾದರೂ ಒಟ್ಟಿಗೆ ಕೂತು ಕತ್ತಲಲ್ಲಿರುವ ಈ ಗೆಳತಿಯರ ಸೌಖ್ಯಕ್ಕಾಗಿ ತುಸು ಸಮಯ ವ್ಯಯಿಸಿದರೆ ಏನೂ ತಪ್ಪಿಲ್ಲ ಎಂಬುದೇ ನನ್ನ ನಂಬಿಕೆ.

 

 

 

‍ಲೇಖಕರು G

8 March, 2011

2 Comments

  1. Vishwa sunkasala

    Very nice kaavya…

  2. Jayadeva Prasad

    ಚೆನ್ನಾಗಿ ಬರ್ದಿದೀರಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading