ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಲ ಚಕ್ರ…

ಕಿರಣ ಭಟ್

ನಾವೆಲ್ಲಿ ಸಾಯ್ಬೇಕು?

ಕಣ್ಣ ತುಂಬ ನೀರು ತುಂಬಿಕೊಂಡು ಮಕ್ಕಳನ್ನು ಕೇಳುತ್ತಾಳೆ ರುಕ್ಮಿಣಿ.

ಹತಾಶೆಯ ಉತ್ತುಂಗ ಇದು.

ಎಪ್ಪತ್ತು ದಾಟಿದ ಹಿರಿಯ ಜೀವಗಳನ್ನ ಮನೆಯಾಚೆ ಕಳಿಸೋದಕ್ಕೆ ಎಲ್ಲ ಸಿದ್ಧತೆಗಳಾಗಿವೆ. ಗಂಡು ಮಕ್ಕಳಿಬ್ಬರೂ ಅವರನ್ನ ‘ತುಂಬಿ’ ಕಳಿಸೋದಕ್ಕೆ ಆಂಬುಲೆನ್ಸ್ ಗಾಗಿ ಕಾಯ್ತಿದಾರೆ. ಈ ನಿರ್ಧಾರಕ್ಕೆ ತತ್ತರಿಸಿ ಹೋದ ಹಿರಿಯ ಜೀವಗಳು ಬೆದರಿದ ಗುಬ್ಬಚ್ಚಿಗಳಂತೆ ಮೂಲೆ ಹಿಡಿದು ಕುಳಿತಿವೆ.

ಜಯವಂತ ದಳ್ವಿಯವರ ‘ಕಾಲಚಕ್ರ’ ನಾಟಕದ ಮೊದಲ ಭಾಗದ ಕೊನೆಯಲ್ಲಿ ಈ ದೃಶ್ಯ ಬರುತ್ತದೆ.
ನಾಟಕದ ಜಾಡು ಹಿಡಿಯಲು ಈ ವಿವರಗಳೇ ಸಾಕೇನೋ.

ಯಸ್. ಇದು ಎರಡು ತಲೆಮಾರುಗಳ ಸಂಘರ್ಷದ ಕತೆ. ಗಡಿಯಾರ ರಿಪೇರಿ ಅಂಗಡಿಯ ಇನಾಂದಾರ್ ಎಪ್ಪತ್ತು ದಾಟಿದ ಹಿರೇ ಮನುಷ್ಯ. ರುಕ್ಮಿಣಿ ಆತನ ಹೆಂಡತಿ. ವಿಶು, ಶರತ್ ಆತನ ಮಕ್ಕಳು. ಜೊತೆಗೆ ಇಂಥ ಕತೆಗಳ ಟಿಪಿಕಲ್ ಸೊಸೆಯಂದಿರು. ಗಡಿಯಾರದ ಅಂಗಡಿ ಮುಂದುವರಿಸಿಕೊಂಡು ಹೋಗುವ ವಿಶು, ಬಹುರಾಷ್ಟ್ರೀಯ ಕಂಪ್ನಿಯಲ್ಲಿ ಕೆಲಸ ಮಾಡೋ ಶರತ್ ಗೆ ಅಪ್ಪ ತಮಗಾಗಿ ಏನೇನೂ ಮಾಡಿಲ್ಲ ಎನ್ನೋ ಭಾವ. ಅಪ್ಪ ಅಮ್ಮಂದಿರು ಹೊರೆ ಎನಿಸಿದಾಗ ಅವರನ್ನ ಚ್ಯಾರಿಟಿ ಹೋಂ ಗೆ ಸಾಗಹಾಕುವ ಇರಾದೆ ಮಕ್ಕಳದು. ಸಾಗಹಾಕುತ್ತಾರೆ ಕೂಡ. ಹಾಗೆ ಹೋಗುವ ಮುಂಚೆ ಅಳುತ್ತ ರುಕ್ಮಿಣಿ ಕೇಳುವ ಮಾತುಗಳಿವು. ಮೊದಲ ಭಾಗದ ಮುಕ್ತಾಯದ ಹಂತ.

ಈ ಭಾಗದ ಕೊನೆಯಲ್ಲಿ ರಾಘವ ನೆಂಬ ಸಮಾಜಸೇವಕ ಮುದಿ ದಂಪತಿಗಳನ್ನ ತನ್ನ ಮನೆಗೇ ಕರೆದೊಯ್ಯುತ್ತಾನೆ.
ಎರಡನೇ ಭಾಗ ಈ ದಂಪತಿಗಳ ಖುಶಿಯ ಮತ್ತು ಕೊನೆಯ ದಿನಗಳು. ರಾಘವ, ಇರಾವತಿಯರ ಪ್ರೀತಿ ಪಡೆಯುತ್ತ ಇನ್ನಷ್ಟು ಇಂಥದೇ ಹಿರಿಯರೊಂದಿಗೆ ಬೆರೆಯುತ್ತ ಸಂತೋಷವನ್ನು ಅನುಭವಿಸುತ್ತ ಈ ದಂಪತಿಗಳು ರಾಘವನ ಮನೆಯಲ್ಲಿ ಕೊನೆಯುಸಿರೆಳೆಯುತ್ತಾರೆ. ಈ ಮಧ್ಯೆ ಹಿರಿಯ ಮಗ ವಿಶು ತಂದೆ ಜೊತೆ ಕೂತು ಪಶ್ಚಾತ್ತಾಪಪಡುತ್ತಾನೆ. ಇತ್ಯಾದಿ.

ಈಗಾಗಲೇ ಇದೇ ಕಥೆಯ ಸಾಕಷ್ಟು ನಾಟಕಗಳೂ ಸಿನಿಮಾಗಳೂ ಬಂದು ಹೋಗಿವೆ. ಇಂಥದೊಂದು ಕಥೆಯನ್ನೆತ್ತಿಕೊಂಡು ಬೇರೆಯದೇ ರೀತಿಯಲ್ಲಿ ಕಥೆ ಹೇಳುವದು ಒಂಥರಾ ಸವಾಲೇ. ನಿರ್ದೇಶಕ ಹುಲುಗಪ್ಪ ಕಟ್ಟೀಮನಿ ಇಂಥ ಸವಾಲನ್ನ ಅವರ ಅಗಾಧ ನಟನೆಯ ಹಿನ್ನೆಲೆ , ಮತ್ತು ಕತೆ ಹೇಳುವ ವಿಶಿಷ್ಟ ವಾತಾವರಣ ನಿರ್ಮಿಸುವ ಮೂಲಕ ಗೆಲ್ಲುತ್ತಾರೆ.

ಅವರು ಪಾತ್ರ ಕಟ್ಟುವ ಕಲೆಯೇ ಹಾಗಿದೆ. ನಾಟಕದ ಮೊದಲ ಭಾಗದಲ್ಲಿ ಈ ಇನಾಂದಾರ್ ಸಿಕ್ಕಾಪಟ್ಟೆ ಸಿಡುಕಿನ, ಕೂಗಾಡುವ ಮನುಷ್ಯ. ಆದರೆ ಆತನ ಹೆಂಡತಿ ರುಕ್ಮಿಣಿ ಅಷ್ಟೇ ಶಾಂತ ಸ್ವಭಾವದ, ಗಂಡನ ಕೂಗಾಟಗಳನ್ನು ವಿನೋದವಾಗಿಯೇ ನೋಡುತ್ತ ಚುಡಾಯಿಸುತ್ತ, ನೋವುಗಳನ್ನು ಮರೆಯಲು ಯತ್ನಿಸುವವಳು. ಆದರೆ ಎರಡನೇ ಭಾಗದಲ್ಲಿ ಆತ ಶಾಂತ.

ಹಳೆಯ ಗೆಳತಿಯನ್ನು ನೆನಪಿಸಿಕೊಳ್ಳುತ್ತ ಆಕೆಯ ಕವನಗಳನ್ನ ಓದುತ್ತ ನೆಮ್ಮದಿ ಕಾಣುತ್ತಿರುವವ. ಆಕೆಗೋ ಮಕ್ಕಳ ನೆನಪು, ನೋವು. ನಾಟಕದ ಪ್ರಧಾನ ಪಾತ್ರಗಳನ್ನು ಅವುಗಳ ಭಾವಗಳ ಸ್ಥಿತ್ಯಂತರಗಳು ನಮುಟ್ಟುವಂತೆ ಕಟ್ಟುತ್ತಲೇ ಉಳಿದ ಪಾತ್ರಗಳನ್ನ ಪೂರಕವಾಗಿ ಸುತ್ತಿಸುತ್ತ ಕೇಂದ್ರಕ್ಕೆ ಒತ್ತುಕೊಡುವಂಥ ನಿರೂಪಣಾ ಶೈಲಿ. ಮುಖ್ಯವಾಗಿ ಅಭಿನಯ, ಮಾತುಗಳೇ ಪ್ರಧಾನವಾಗುವ ಈ ನಾಟಕ ಕಟ್ಟೀಮನಿಯವರಂಥ ಅದ್ಭುತ ನಟನ ಕೈಗೆ ಸಿಕ್ಕು ಹೊಸ ದಿಕ್ಕು ಕಂಡುಕೊಂಡಿದೆ.

ನಾಟಕ ನಡೆಯೋದು ಮಲೆನಾಡಿನ ಹಳೆಯ, ಸುಂದರವಾದ ಮನೆಯೊಂದರಲ್ಲಿ. ಮಂಚೀಕೇರಿಯ ಜೋಗಭಟ್ರಕೇರಿ ಜಿ.ಎನ್. ಶಾಸ್ತ್ರಿಗಳ ಮನೆ ‘ನಂದನ’, ತುಂಬ ಸುಂದರವಾದ ಹಳೇ ವಿನ್ಯಾಸದ ಮನೆ. ಮನೆಯ ಜಗಲಿ ಮತ್ತು ಮಹಡಿ ನಾಟಕ ನಡೆಯುವ ಸ್ಥಳಗಳು. ನಾಟಕಕ್ಕಾಗಿ ಇಂಥದೊಂದು ಆವರಣ ಆಯ್ದುಕೊಂಡಿದ್ದೇ ನಿರ್ದೇಶಕರ ಜಾಣತನ. ಮಹಡಿಯ ಭಾಗ ಇನಾಂದರ್ ರ ಮನೆಯಾದರೆ ಕೆಳಭಾಗ ರಾಘವನ ಮನೆ. ಎರಡೂ ಕಡೆ ಸುಮಾರು ಮೂವತ್ತು ನಲವತ್ತು ಜನ ಕುಳಿತುಕೊಳ್ಳುವ ಅವಕಾಶ.

ನಾಟಕದ ಮೊದಲ ಭಾಗದ ಹೆಣಿಗೆ ಎರಡನೇ ಭಾಗಕ್ಕಿಂತ ಹೆಚ್ಚು ಬಿಗು ಎನಿಸುವದೇ ಈ ಆವಕಾಶದ ಜಾಣತನದ ಬಳಕೆಯಿಂದ. ಇನಾಂದಾರನ ಹಳೆಯ ಮನೆ. ನಿಶ್ಷಲವಾದ ಗೋಡೆ ಗಡಿಯಾರ. ಮನೆಯ ಮೂಲೆಯಲ್ಲೊಂದು ಸುತ್ತಿದ ಹಾಸಿಗೆ. ಮನೆ ಬಿಟ್ಟು ಹೊರಡಬೇಕಾದ ಸೂಚನೆಯೋ ಎಂಬಂತೆ.. ಪಕ್ಕದಲ್ಲೇ ಅರ್ಧ ಅಗುಳಿ ಹಾಕಿರುವ ಇನ್ನೇನು ಅರ್ಧ ಅಗುಳಿ ಹಾಕಿದರೆ ಪೂರ್ತಿ ಮುಚ್ಚೇ ಹೋಗುವ ಅರ್ಧ ಬಾಗಿಲಿನ ಆಕಾರ . ಕೂತರೆ ತಲೆಯೆತ್ತರಕ್ಕೆ ಔಷಧ ಬಾಟ್ಲಿಗಳು.

ಬಹುಪಾಲು ಮೂಲೆಯಲ್ಲೇ ಹಾಸಿಗೆಯ ಮೇಲೇ ಕುಳಿತಿರುವ ಹಿರಿಯರು. ಮೂಲೆ ಹಿಡಿದವರು. ಈ ಮೂಲೆ ಹಿಡಿಸುವ ಹುನ್ನಾರ ಎಷ್ಟರಮಟ್ಟಿಗೆ ದಾಖಲಾಗುತ್ತದೆಂದರೆ ಮನೆ ಯಲ್ಲಿ ಒಂದೇ ಒಂದು ಬಾರಿ ಇನಾಂದಾರ್ ಕುರ್ಚಿಯ ಮೇಲೆ ಕುಳಿತಾಗಲೂ ಸೊಸೆ, ಏಳಿ, ಅಲ್ಲಿಂದ ಏಳಿ ಎಂದು ರೋಫು ಹಾಕಿ, ಆತನನ್ನು ಎಬ್ಬಿಸಿ ಮತ್ತೆ ಮೂಲೆಯಲ್ಲೇ ಕೂಡ್ರಿಸುತ್ತಾಳೆ. ಹೀಗೆ ಒಂದು ರೀತಿಯಲ್ಲಿ ಆವರಣವೇ ನಿರೂಪಕನಂಥೆ ಕಥೆ ಹೇಳುತ್ತ ಹೋಗುತ್ತದೆ.

ಎರಡನೇ ಭಾಗದ ಪ್ರಾರಂಭವೂ ಹಾಗೇ. ರಾಘವನ ಮನೆಯಲ್ಲಿ ಎರಡೂ ಕೈಗಳನ್ನು ಜೋಡಿಸಿ, ಬಿಳಿಯ ಬಟ್ಟೆ ತೊಟ್ಟ ಇನಾಂದಾರ್ ಬೆಳಗಿನ ಬೆಳಕಿನಲ್ಲಿ ಬೃಹದಾಕಾರ ಕಟ್ಟಿಗೆಯ ಕುಸುರಿ ಬಾಗಿಲಿನಿಂದ ಶ್ಲೋಕ ಪಠಿಸುತ್ತ ಹೊರಬರುತ್ತಿದ್ದರೆ, ಹಿರಿದಾದ, ಘನವಾದ ಆ ಬಾಗಿಲೇ ಬದಲಾದ ಆತನ ವ್ಯಕ್ತಿತ್ವವನ್ನು ಕಡೆದಿಟ್ಟುಬಿಡುತ್ತದೆ.
ಹೀಗೆ ಅಭಿನಯವೂ ಅವಕಾಶವೂ ಸೇರಿ ರಂಗಪ್ರಯೋಗವನ್ನ ಬೇರೆಯೇ ಹಂತಕ್ಕೆ ಒಯ್ಯುತ್ತವೆ.

ಹಾಗೇ ತಾಂತ್ರಿಕ ಸಂಗತಿಗಳೂ ಕೂಡ. ನಾಟಕದ ಪಾತ್ರಗಳು ಮೈಕ್ ಬಳಸುವದಿಲ್ಲ ಆದರೆ ಸ್ಪೀಕರ್ ನ್ನು ಹೊರಗಿಟ್ಟು, ಮನೆಯ ಹೊರಗಿನ ಶಬ್ದಗಳನ್ನು (ಉದಾ: ನಾಯಿಯ ಕೂಗು) ಅಲ್ಲಿಂದ ಹೊರಡಿಸುವ, ಕೆಳಗೆ ನಾಟಕ ನಡೆಯುತ್ತಿರುವಾಗ,ರುಕ್ಮಿಣಿಯ ಹುಟ್ಟುಹಬ್ಬದ ವಿಶ್ ಗಳನ್ನ, ಕವನ ವಾಚನ ವನ್ನ ಮಹಡಿಯಿಂದ ಕೇಳಿಸುವ, ರಂಗಿನ ಚಕ ಪಕ ಲೈಟನ್ನು ಮೇಲೆ ಏನೋ ಸಮಾರಂಭ ನಡೀತಿದೆಯೇನೋ ಎನ್ನೋ ಹಾಗೆ ಮಾಳಿಗೆ ಮೆಟ್ಟಿಲ ಗೋಡೆ ಮೇಲೆ ತೋರಿಸುವ ಜಾಣತನ, ನಾಟಕಕ್ಕೊಂದು ಬೇರೆಯೇ ಆಯಾಮ ಕೊಟ್ಟಿದೆ. (ಬೆಳಕು, ಧ್ವನಿ: ವಾಸುಕಿ, ಎಂ.ಜಿ.ಭಟ್) ರಂಗಪ್ರಯೋಗದ ಅಭಿನಯ, ಮಾತುಗಳಿಗೆ ಫುಲ್ ಮಾರ್ಕ.. ಇಂಥ ಕಥೆಯಲ್ಲಿ ಕೇಂದ್ರ ಪಾತ್ರಗಳು ಗೆದ್ದವೆಂದರೆ ನಾಟಕ ಗೆದ್ದಂತೆಯೇ. ಸ್ವಲ್ಪವೇ ಆಚೆ ಹೋದರೂ ತೀವ್ರ ಮೆಲೋಡ್ರಾಮಾ ಆಗಬಹುದಾದಂಥ ಅನೇಕ ಸನ್ನಿವೇಶಗಳಲ್ಲಿ ನಾಗರಾಜ ಹೆಗಡೆ, ನಿರ್ಮಲಾ ಹೆಗಡೆ ತುಂಬ ಸಂಯಮದಿಂದ ಅಭಿನಯಿಸಿದ್ದಾರೆ.

( ನಾನು ನೋಡಿದ ಪ್ರಯೋಗದಲ್ಲಿ. ನಾಟಕದಲ್ಲಿ ಡಬಲ್ ಕಾಸ್ಟ್ ಇದೆ). ಹಿರಿಯ ನಟ ಎಂ.ಕೆ. ಭಟ್ , ಪ್ರೀತಿ ಹೆಗಡೆ, ಸುಬೋಧ ಹೆಗಡೆ, ಕಿರಣ್ ಕಾನಗೋಡ್, ಪ್ರಕಾಶ ಭಟ್, ಅಮೃತಾ, ಕೃಷ್ಣಮೂರ್ತಿ ಶಾಸ್ತ್ರಿ, ಸಾಗರ ಹೆಗಡೆ, ವಿಕಾಸ ನಾಯ್ಕ, ಶಾಂತಾರಾಮ ಸಹಜ ಅಭಿನಯದಿಂದ ನಾಟಕಕ್ಕೆ ಮೆರಗು ತಂದಿದ್ದಾರೆ.

ಲಾಗಾಯ್ತಿನಿಂದಲೂ ಆಧುನಿಕ ನಾಟಕಗಳನ್ನಾಡುತ್ತ, ಸುತ್ತಲಿನವರಿಗೆ ನಾಟಕಗಳನ್ನು ತೋರಿಸುತ್ತ ನಾಟಕ ಸಂಸ್ಕೃತಿ ಬೆಳೆಸಿದ್ದು ‘ರಂಗಸಮೂಹ’ ಮಂಚೀಕೇರಿ. ಹಲವು ವರ್ಷಗಳ ಗ್ಯಾಪ್ ನ ನಂತರ ಇಂಥ ನಾಟಕವನ್ನೆತ್ತಿಕೊಂಡು ಆಡಿದ್ದಕ್ಕೆ. ತಿಂಗಳುಗಟ್ಲೆ ಅಲ್ಲಿದ್ದು ‘ರಂಗಸಮೂಹ’ಕ್ಕೆ ಹೊಸ ಹುರುಪು ತುಂಬಿ ಅಪರೂಪದ ಪ್ರಯೋಗಶೀಲ ನಾಟಕವೊಂದನ್ನು ಕೊಟ್ಟಿದ್ದಕ್ಕೆ ಹುಲುಗಪ್ಪ್ಪ ಕಟ್ಟೀಮನಿಯವರಿಗೆ ಅಭಿನಂದನೆಗಳು.

ಜೊತೆಗೆ ಹುಲುಗಪ್ಪ ಕಟ್ಟೀಮನೆಯವರನ್ನು ಕರೆತಂದು ಇಂಥದೊಂದು ನಾಟಕವಾಗಲು ಕಾರಣರಾದ ರಾಮಕೃಷ್ಣ ಭಟ್ ಧುಂಡಿ ಯವರಿಗೂ ಅಭಿನಂದನೆಗಳು.

ನಾಟಕ: ಕಾಲ ಚಕ್ರ
ಮೂಲ: ಜಯವಂತ ದಳ್ವಿ
ಕನ್ನಡಕ್ಕೆ: ಎಚ್.ಕೆ. ಕರ್ಕೇರ
ನಿರ್ದೇಶನ: ಹುಲುಗಪ್ಪ ಕಟ್ಟೀಮನಿ
ಸಹ ನಿರ್ದೇಶನ: ಸಾಲಿಯಾನ್ ಉಮೇಶ ನಾರಾಯಣ
ಅಭಿನಯ: ರಂಗಸಮೂಹ, ಮಂಚೀಕೇರಿ

‍ಲೇಖಕರು Admin

21 November, 2021

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. ಕಿರಣ ಭಟ್

    ಥ್ಯಾಂಕ್ಯೂ ‘ಅವಧಿ’

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading