ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾರಂತರಂತೆ ಬರೆಯುವ ಸಂತತಿ ಮುಂದುವರೆಯಲಿ…

ಪ್ರಭಾವತಿ ಎಸ್ ವಿ

ವಿಜಯಶ್ರೀ ಹಾಲಾಡಿಯವರ ಎರಡು ಪುಸ್ತಕ ಗಳು ಇಲ್ಲಿವೆ. ಒಂದು ಕವನ ಸಂಕಲನ ಇನ್ನೊಂದು ಮಕ್ಕಳಿಗೆ ಎಂದು ಬರೆದ ಆದರೆ ನಮ್ಮಂಥವರೂ ಚಪ್ಪರಿಸಿಕೊಂಡು ಓದಬಹುದಾದ ಲೇಖನ ಗಳ ಸಂಕಲನ. ಸುಮಾರು ೭೫ ಕವಿತೆ ಗಳು ಅವಕ್ಕೆ ಅವರೇ ಬರೆದ ರೇಖಾಚಿತ್ರ ಗಳು ಒಂದು ಅಪೂರ್ವ ಸಮ್ಮಿಲನ. ಇತ್ತೀಚೆಗೆ ದಿವಂಗತರಾದ ಡಿ ಎಸ್‌ ನಾಗಭೂಷಣ ಅವರ ಪತ್ರಿಕೆಗೆ ಇವರ ರೇಖಾ ಚಿತ್ರಗಳನ್ನು ಬಳಸಿಕೊಂಡಿದ್ದರಂತೆ.

ನನ್ನ ಸೀಮಿತ ಅನುಭವದ ಅವಧಿಯಲ್ಲಿ ಅಂದರೆ ಎರಡು ವರ್ಷಗಳ ಕಾಲದಲ್ಲಿ ಇವರ ಮುಖಪುಟದ ಕವಿತೆ ಗಳನ್ನು ಕಂಡಾಗ ನನಗೆ ಬೆರಗು ಹುಟ್ಟಿಸುವಂತೆ ಇದೆ ಇವರು ಕವಿತೆಯಿಂದ ಕವಿತೆಗೆ ಬೆಳೆಯುತ್ತ ಹೋದ ಪರಿ, ಮಾಗುತ್ತಾ ಹೋದ ಪರಿ ೨೫ ಲೇಖನ ಗಳ ಈ ಸಂಕಲನ ದ ಪ್ರತಿ ಯೊಂದು ಬರವಣಿಗೆಯೂ ಚೇತೋಹಾರಿ. ಕವಿತೆ ಯಿರಲಿ ಲೇಖನ ವಿರಲಿ ಅಲ್ಲಿ ಆಳುವವರು ಒಬ್ಬರು ಮಾತ್ರ. ಅದು ಪ್ರಕೃತಿ. ನಾನೂ ಹಳ್ಳಿಯಲ್ಲಿ ಹುಟ್ಟಿ ಬೆಳೆದವಳಾದುದರಿಂದ ಇಲ್ಲಿನ ಅನುಭವಗಳು ನನ್ನೊಳಕ್ಕೆ ಬಹುಬೇಗ ಇಳಿಯುತ್ತವೆ.

ಹೆಸರಾಂತ ಕವಯಿತ್ರಿ ಯರೂ ಹಿರಿಯ ಲೇಖಕಿಯರೂ ಆದ ಎಂ ಆರ್ ಕಮಲ ಮತ್ತು ಕಮಲಾ ಹೆಮ್ಮಿಗೆಯವರು ಈ ಎರಡೂ ಪುಸ್ತಕಗಳಿಗೆ ಬೆನ್ನುಡಿ ಬರೆದಿದ್ದಾರೆ. ಹೀಗಿದ್ದೂ ನನ್ನ ಅಭಿಪ್ರಾಯ ವನ್ನು ಕೇಳಿರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ ಪ್ರಕೃತಿಯ ಸಕಲ ಸಚರಾಚರ ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳು ಗಿಡ ಮರಗಳು ಮಣ್ಣು ಆಕಾಶ ಕತ್ತಲೆ ಬೆಳಕು ಮಳೆ ಬಿಸಿಲು…. ಯಾವುದೂ ಇವರ ಕೈಯಿಂದ ತಪ್ಪಿಸಿಕೊಂಡಿಲ್ಲ. ನೇರಿಳೆ ಹಣ್ಣು ರೂಪಕವಾಗಿ ಒಂದು ಕವಿತೆ ಗೆ ವಸ್ತು ವಾಗುತ್ತದೆ.

ಅಮ್ಮ ತಂದ ಹರಳೆಣ್ಣೆ ಪಾದಕ್ಕೆ ಒತ್ತಿ ಒಂದು ಕವಿತೆ ಯಾಗುತ್ತದೆ. ನವ್ಯೋತ್ತರ ಕಾವ್ಯ ದ ಎಲ್ಲಾ ಲಕ್ಷಣಗಳೂ ಇಲ್ಲಿವೆ. ತೆಂಗಿನ ಮರವೊಂದು ತುದಿಯಿಂದ ತಾಳದವರೆಗೆ ಉಪಯುಕ್ತ ಅನ್ನುತ್ತಾರೆ ಅದರ ಸಶಕ್ತ ಚಿತ್ರಣ ಇಲ್ಲಿದೆ. ಮಾವಿನ ಮರ ಇನ್ನೇನು. ಮಿಡಿಗಾಯಿ ಹಣ್ಣು ರಸಾಯನ ಚಟ್ನಿ ಕೆಡದಂತೆ ಕಾಪಾಡಿದ ರಸದ ಹಲ್ಲೆಗಳು… ಬೇಡವೆಂದರೂ ಕಾರಂತರ ಬೆಟ್ಟದ ಜೀವ ನೆನಪಾಗುತ್ತಲೇ ಇತ್ತು ಬೆಕ್ಕು ನಾಯಿ ಕೋಳಿ ಇಲ್ಲಿ ಜೀವಂತ ಪಾತ್ರ ಗಳು.

ಮೈದುಂಬಿಕೊಂಡ ಅಜ್ಜಿ, ಆಂಧ್ರದಲ್ಲಿ ಇದ್ದು ಒಮ್ಮೊಮ್ಮೆ ಬರುವ ಅಪ್ಪ. ಎಲ್ಲ ಕಣ್ಣಿಗೆ ಕಟ್ಟುವಂತೆ ಇದ್ದಾರೆ. ನೀಲಿಮಾ ಎಂಬ ಹುಡುಗಿ ಎರಡೂ ಪುಸ್ತಕಗಳಲ್ಲಿ ಇದ್ದಾಳೆ. ಲಂಕೇಶರ ನೀಲು ನೆನಪಾಗುತ್ತಾಳೆ ಒಂದು ಕಾಲದಲ್ಲಿ ನೀವು ಲೇಖಕಿಯರಲ್ಲಿ ಒಬ್ಬ ಕಾರಂತ ಬರಲಿಲ್ಲ ಏಕೆ ಎಂದು ವಿಮರ್ಶಕರು ಕೇಳಿದ್ದರು. ಅದಕ್ಕೆ ಉತ್ತರವೋ ಎಂಬಂತೆ ನಾಗವೇಣಿಯ ‘ಗಾಂಧಿ ಬಂದ’ ಕಾದಂಬರಿ ಪ್ರಕಟವಾಯಿತು. ಅದಾಗಿ ಎಷ್ಟೋ ಕಾಲವಾದ ಮೇಲೆ ಕಾರಂತರಂತೆ ಬರೆಯುವ ಹುಡುಗಿಯರು ಬರುತ್ತಿದ್ದಾರೆ ಎಂಬುದೇ ಒಂದು ಸಂತಸ ಈ ಸಂತತಿ ಮುಂದುವರೆಯಲಿ…

‍ಲೇಖಕರು Admin

21 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading