ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು. ಅದು ‘ಅವಧಿ’ಯಲ್ಲಿ ಮೊನ್ನೆ ಮೊನ್ನೆ ತಾನೇ ಪ್ರಕಟವಾಗಿತ್ತು.
ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿ ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು.
ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದರು.

ನಿಮಗೂ ಇಷ್ಟವಾದರೆ ಅಥವಾ ನಿಮ್ಮ ಮನದೊಳಗೆ ಈ ಲಹರಿ ಇನ್ನೂ ಬೆಳೆದರೆ ನಮಗೆ ಕಳಿಸಿಕೊಡಿ ಎಂದು ಕೇಳಿದ್ದೆವು ..
ಹಾಗೆ ಮುಂದುವರೆದ ಎರಡು ಲಹರಿಗಳು ಇಲ್ಲಿವೆ. ಅದಕ್ಕೆ ಎಸ್ ಪಿ ವಿಜಯಲಕ್ಷ್ಮಿ ತಮ್ಮದೊಂದು ಹೂ ಸೇರಿಸಿದರು.
ನಂತರದ ಸರದಿ ಚೈತ್ರಾ ಅವರದ್ದು. ತಮ್ಮ ಹುಬ್ಬುಗಳ ಲೋಕವನ್ನು ಅವರು ಹಿಡಿದಿಟ್ಟರು.
ಈಗ ರೇಷ್ಮಾ ನಾರಾಯಣ ಉಪ್ಪುಂದ ಈ ಲಹರಿಯನ್ನು ಮುಂದುವರಿಸಿದ್ದಾರೆ. ಕರ್ಚೀಫಿನ ಮೂಲಕ

ನಿಮ್ಮ ಮನದಾಳದೊಳಗೆ ಉಕ್ಕುತ್ತಿದ್ದರೆ ತಡ ಯಾಕೆ ನೀವೂ ಬರೆದು ಕಳಿಸಿ

ರೇಷ್ಮಾ ನಾರಾಯಣ ಉಪ್ಪುಂದ
ಲಿಫ್ಟು ಗ್ರೌಂಡ್ ಫ್ಲೋರ್ ತಲುಪಿ ಬಾಗಿಲು ತೆರೆದುಕೊಂಡಾಗ ಇವಳು ಹೊರಬರುವುದಕ್ಕೂ ಮುನ್ನವೇ ಇವಳನ್ನು ತಳ್ಳಿಕೊಂಡು ಕಾಲೇಜು ಹುಡುಗಿಯೊಬ್ಬಳು ಲಿಫ್ಟಿನ ಒಳಸೇರಿದ್ದಾಳೆ ತನ್ನ ಅಮ್ಮನನ್ನು ಕೈ ಹಿಡಿದು ಎಳೆದುಕೊಂಡೇ.
ಆ ಹೆಂಗಸನ್ನು ನೋಡಿದ ಮದುಮಗಳಿಗೆ ಆಕೆ ಉಟ್ಟಿದ್ದ ಸೀರೆಯಂಥದ್ದೇ ಸೀರೆ ತನ್ನ ಅಮ್ಮನ ಬಳಿ ಇರುವುದು ನೆನಪಾಗುವುದಕ್ಕೂ, ಲಿಫ್ಟು ಬಾಗಿಲು ಮುಚ್ಚಿಕೊಂಡು ಮತ್ತೆ ಮೇಲೇರುವುದಕ್ಕೂ ಸರಿಯಾಯಿತು. ಅಮ್ಮನ ನೆನಪಲ್ಲಿ ಕಣ್ಣಲ್ಲಿ ಜಿನುಗಿದ ಹನಿಯಿಂದ ಮೇಕಪ್, ಐ ಲೈನರ್ ಹಾಳಾಗದಿರಲೆಂದು ಒರೆಸಲು ಕರ್ಚೀಪಿಗಾಗಿ ಬ್ಯಾಗು ತಡಕಾಡಿದಾಗಲೇ ಅವಳಿಗೆ ಕರ್ಚೀಪು ಬಿಟ್ಟು ಬಂದೆ ಎಂದು ಅರಿವಾಗಿದ್ದು.
ವಾಪಾಸು ಹೋಗಿ ಕರ್ಚೀಪು ತರುವುದೋ ಬೇಡವೋ ಎಂಬ ಗೊಂದಲದಲ್ಲೇ ನಿಂತಿದ್ದಾಳೆ. ನಿಂತಲ್ಲಿಂದ ಕಣ್ಣಳತೆ ದೂರದಲ್ಲೇ ಕಾಣುತ್ತಿದ್ದಾನೆ ಹುಡುಗ. ಅಕ್ಕ ತನಗೆಂದೇ ಪುಟ್ಟ ಹಳದಿ, ಕೆಂಪು ಹೂಗಳ ಕಸೂತಿ ಹಾಕಿದ ನೀಲಿ ಬಾರ್ಡರಿನ ಕರ್ಚೀಪು. ತಾಯಿ ಮನೆಯ ನೆನಪುಗಳನ್ನು ತನ್ನ ಪ್ರತಿ ನೂಲಿನಲ್ಲೂ ಬಚ್ಚಿಟ್ಟುಕೊಂಡ ಪುಟ್ಟ ಬಿಳಿ ಕರವಸ್ತ್ರ.
ತರಲು ಹೋದರೆ ರಿಜಿಸ್ಟ್ರೇಶನ್ ಆಫೀಸಿಗೆ ಲೇಟಾದೀತು ಬೇಡ ಎಂದು ನಿರ್ಧರಿಸಿ ಇನ್ನೇನು ರಸ್ತೆಗೆ ಕಾಲಿಡಬೇಕು, ಓಡುತ್ತಾ ಬಂದ ಏದುಸಿರು ಬಿಡುತ್ತಿದ್ದ ಹುಡುಗ ’ ಅಕ್ಕ’ ಎಂದು ಕೂಗಿದ. ಆ ಅಪರಿಚಿತ ದನಿ ತನಗೇ ಸಂಬಂಧಿಸಿದ್ದು ಎಂದೆನಿಸಿ ತಿರುಗಿ ನೋಡಿದಳು. ಅವಳ ಕರವಸ್ತ್ರವನ್ನು ಗಟ್ಟಿಯಾಗಿ ಹಿಡಿದು ರೈಲು ನಿಲ್ಲಿಸಲು ಕೆಂಪು ಬಾವುಟ ತೋರಿಸುವಂತೆ ತೋರಿಸುತ್ತಿದ್ದಾನೆ. ಅಲ್ಲೇ ನಿಂತಳು.
’ ಅಕ್ಕ, ನಿಮ್ಮ ಕರ್ಚೀಪು, ಶಾಲಿನಿ ಅಕ್ಕ ಕೊಟ್ರು’ ಅಂದವನೆಡೆಗೆ ಕೃತಜ್ನತೆ ತುಂಬಿದ ನಗು ಬೀರಿ ’ ಶಾಲಿನಿ ಅಕ್ಕಂಗೂ ಥ್ಯಾಂಕ್ಸ್ ಹೇಳ್ಬಿಡು. ಅದೆಷ್ಟು ವೇಗವಾಗಿ ಓಡ್ತೀಯೋ.. ಒಲಿಂಪಿಕ್ಸ್ ಗೆ ಹೋದರೆ ಪದಕ ಗ್ಯಾರಂಟಿ’ ಎಂದು ಬೆನ್ನು ತಟ್ಟಿದಳು. ಮುದ್ದಾಗಿ ನಗುತ್ತಾ, ತನ್ನ ವೇಗದ ಬಗ್ಗೆ ಹೆಮ್ಮೆ ಪಡುತ್ತಾ, ಒಲಿಂಪಿಕ್ಸ್ ನ ಪದಕದ ಕನಸು ಕಾಣುತ್ತಾ ಮತ್ತೆ ಮೆಟ್ಟಿಲು ಹತ್ತಿದ ಹುಡುಗ.
ಆ ಹುಡುಗ ಅದೇ ತಾನೆ ಹತ್ತಿ ಹೋದ ಮೆಟ್ಟಿಲನ್ನು ಒಮ್ಮೆ ನೋಡಿ ಕರ್ಚೀಪನ್ನು ವ್ಯಾನಿಟಿ ಬ್ಯಾಗ್ ಗೆ ತುಂಬುತ್ತಾ ’ ಆ ಹುಡುಗನ ಹೆಸರು ಕೇಳಲೇ ಇಲ್ಲವಲ್ಲ’ ಅಂದುಕೊಳ್ತಾ ರಸ್ತೆಯ ತುದಿಗೆ ಬಂದಳು. ಇವಳನ್ನು ದೂರದಿಂದಲೇ ನೋಡಿದ ಹುಡುಗ ಬೈಕ್ ಗೆ ಆಕ್ಸಿಲೇಟರ್ ಕೊಟ್ಟ. ತರಾತುರಿಯಲ್ಲಿ ರಸ್ತೆ ದಾಟಿ ಬಂದವಳು ಬೈಕಿನ ಹಿಂದುಗಡೆ ಕೂರುತ್ತಾ ಬೈಕಿನ ಮಿರರ್ ನಲ್ಲಿ ಒಮ್ಮೆ ನೋಡಿಕೊಂಡಳು. ಅವನು ಕನ್ನಡಿಯಲ್ಲಿ ಅವಳ ಬಿಂಬ ನೋಡಿ ’ ಸೂಪರ್’ ಎಂದ. ನವಿರಾಗಿ ಕಂಪಿಸಿದಳು ಅವಳು. ತಾನು ಇಷ್ಟು ಹೊತ್ತು ಮುಖವನ್ನು ಯಾರದೋ ಕೈಗೊಪ್ಪಿಸಿ ಅಲಂಕರಿಸಿಕೊಂಡಿದ್ದು ಸಾರ್ಥಕವಾಯಿತೆನಿಸಿತವಳಿಗೆ.





Thank you avadhi 🙂