ಡಾ ಎ ಸಿ ಎಂ ಹೇಳಿದ ‘ಒಂದು ಸಿನಿಮಾ ಕಥೆ’
ಗೊರೂರು ಶಿವೇಶ್
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಸಲಾದ ಹದಿಮೂರನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸುವಂತೆ ಮನವಿ ಮಾಡಲು ಜಿಲ್ಲಾ ಕ.ಸಾ.ಪ. ಕಾರ್ಯಕಾರಿ ಸಮಿತಿಯು ನಗರದ ಖ್ಯಾತ ವೈದ್ಯರಾದ ಡಾ ವಿ.ಸಿ. ಮುನಿವೆಂಕಟೇಗೌಡರ ಮನೆಗೆ ಭೇಟಿ ನೀಡಿತು. ಮೂಲತಃ ಕೋಲಾರದವರಾದ ಎ.ಸಿ.ಎಂ. ಎಂದೇ ಖ್ಯಾತರಾದ ಹಾಸನದಲ್ಲಿ ನೆಲೆಸಿ ಬಹಳಷ್ಟು ವರ್ಷಗಳು ಕಳೆದಿದೆ. ಜನಪ್ರಿಯ ವೈದ್ಯರಾಗಿ ಜನತಾ ನರ್ಸಿಂಗ್ ಹೋಂ ಸ್ಥಾಪಕರೂ ಆದ ಅವರು ಅನೇಕ ಸಮಾಜ ಉಪಯೋಗಿ ಕಾರ್ಯ ಚಟುವಟಿಕೆಗಳ ಜೊತೆಗೆ ಜನಪರ ಹೋರಾಟದಲ್ಲಿ ಭಾಗವಹಿಸಿದ್ದಾರೆ.
ಲೋಕೋಭಿರಾಮವಾಗಿ ಮಾತನಾಡುತ್ತಾ ಅವರು ಹೊರಗಿಟ್ಟ ವಿಷಯವೊಂದು ನಮ್ಮ ಅಚ್ಚರಿಗೆ ಕಾರಣವಾಯಿತು. ಅದು 1978ರ ಸುಮಾರಿನಲ್ಲಿ ಕುವೆಂಪುರವರ ಮಹತ್ವದ ಕಾದಂಬರಿ ‘ಕಾನೂರು ಹೆಗ್ಗಡತಿ’ ಯನ್ನು ತೆರೆಗೆ ತರಲು ನಡೆಸಿದ ಅವರ ಸಾಹಸಗಾಥೆ.

ಆ ಕಾಲದಲ್ಲಿ ಚಲನಚಿತ್ರರಂಗದಲ್ಲೂ ಸಕ್ರಿಯವಾಗಿದ್ದ ಅವರ ಸಹೋದರ ಮತ್ತು ಅವರ ಸ್ನೇಹಿತ ಆಗ ಜನಪ್ರಿಯವಾಗಿದ್ದ ಕುವೆಂಪುರವರ ಕಾದಂಬರಿಯೊಂದನ್ನು ತೆರೆಗೆ ಅಳವಡಿಸಲು ಯೋಜನೆಯಲ್ಲಿದ್ದರು. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ವಿಶಾಲ ಕ್ಯಾನ್ವಾಸ್ನಿಂದಾಗಿ ಅದನ್ನು ತೆರೆಗೆ ಅಳವಡಿಸಲು ಕಷ್ಟ ಎಂದು ಅರಿತ ಅವರು ‘ಕಾನೂರು ಹೆಗ್ಗಡತಿ’ ಕೃತಿಯನ್ನು ತೆರೆಗೆ ತರಬಹುದು ಎಂಬ ನಿರ್ಣಯಕ್ಕೆ ಬಂದು ಕೃತಿಯ ಹಕ್ಕು ಪಡೆಯಲು ಕುವೆಂಪುರವರನ್ನು ಭೇಟಿಯಾದರು.
ಪ್ರಾರಂಭದಲ್ಲಿ ಕುವೆಂಪುರವರು ಕಾದಂಬರಿಯ ಹಕ್ಕುಗಳನ್ನು ನೀಡಲು ನಿರಾಕರಿಸಿದರು. ಆದರೆ ತಂಡದ ಸದಸ್ಯರ ಆಸಕ್ತಿ ಹಾಗೂ ಸಿನಿಮಾ ಪ್ರೀತಿ ಕಂಡ ನಂತರ ಕೆಲವು ವಿಶೇಷ ಅನಿಸಿದ ಅಂಶಗಳನ್ನು ಅವರು ತಿಳಿಸಿದರು. ಕುವೆಂಪುರವರು ನೋಡಿದ್ದು ಮೂರೇ ಚಿತ್ರಗಳು. ಅದು ಅವರ ಆತ್ಮೀಯವಾಗಿದ್ದ ಪ್ರಭುಶಂಕರ್ರವರ ಒತ್ತಾಯಕ್ಕೆ. ಮೊದಲು ನೋಡಿದ್ದು ಭಾರತ್ ಮಿಲಾಪ್ ನೋಡಿದ್ದರ ಕಾರಣ ಗಾಂಧೀಜಿಯವರು ಆ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದು. ನಂತರ ಅವರು ನೋಡಿದ್ದು ಎರಡು ಚಿತ್ರಗಳು ಪ್ರಖ್ಯಾತ ಮಲೆಯಾಳಂ ಚಿತ್ರ ನಿರ್ದೇಶಕರಾದ ರಾಮುಕಾರಿಯತ್ ನಿರ್ದೇಶಿಸಿದ್ದು ಒಂದು ನೀಲ್ಕುಯಿಲ್ ಮತ್ತೊಂದು ಚೆಮ್ಮೀನ್. ಮೊದಲ ಚಿತ್ರದಲ್ಲಿ ಮಲೆನಾಡಿನ ಗ್ರಾಮೀಣ ಪರಿಸರವನ್ನು ಚಿತ್ರಿಸಿದ ರೀತಿ ಹಾಗೂ ‘ಚೆಮ್ಮೀನ್’ ಚಿತ್ರದಲ್ಲಿ ಮೀನುಗಾರರ ಬದುಕು ಮತ್ತು ಅವರ ನಂಬಿಕೆಯನ್ನು ತೆರೆಯ ಮೇಲೆ ಕಲಾತ್ಮಕವಾಗಿ ಬಿಂಬಿಸಿದ್ದು ಅವರಿಗೆ ತುಂಬಾ ಹಿಡಿಸಿತ್ತು. ಮಲೆಯಾಳಂನ ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿಕಾರ ‘ತಕಳಿ ಶಿವಶಂಕರ ಪಿಳ್ಳೈ’ ಕಾದಂಬರಿಯಾಧಾರಿತ ಆ ಚಿತ್ರ ಮಲೆಯಾಳಂನ ಮೊದಲ ಬಣ್ಣದ ಚಿತ್ರವೂ ಹೌದು. ಕಲಾತ್ಮಕವಾಗಿಯೂ ಇದ್ದು ಅಪಾರ ಜನಪ್ರಿಯತೆಯನ್ನು ಸಾಧಿಸಿದ ಚಿತ್ರವೂ ಅದಾಗಿತ್ತು. ರಾಮು ಕಾರಿಯತ್ರವರ ನಿರ್ದೇಶನದ ಶೈಲಿಯನ್ನು ಮೆಚ್ಚಿಕೊಂಡಿದ್ದ ಕುವೆಂಪುರವರು ‘ರಾಮುಕಾರಿಯತ್’ ನಿರ್ದೇಶಿಸುವುದಾದರೆ ಕಾದಂಬರಿ ಹಕ್ಕುಗಳನ್ನು ನೀಡುವುದಾಗಿ ತಿಳಿಸಿದರು.
ಕುವೆಂಪುರವರ ಬಯಕೆಯಂತೆ ಗೆಳೆಯರ ತಂಡವು ರಾಮುಕಾರಿಯತ್ರವರನ್ನು ಭೇಟಿಯಾಗಿ ತಮ್ಮ ಚಿತ್ರ ನಿರ್ಮಾಣದ ಆಸಕ್ತಿ ಹಾಗೂ ಕುವೆಂಪುರವರ ಮನದ ಅಭಿಲಾಷೆಯನ್ನು ತಿಳಿಸಿತು. ಜ್ಞಾನಪೀಠ ಪುರಸ್ಕೃತ ಲೇಖಕರೊಬ್ಬರು ತಮ್ಮ ನಿರ್ದೇಶನವನ್ನು ಮೆಚ್ಚಿಕೊಂಡಿದ್ದಾರೆ ಎಂಬ ವಿಷಯವೆ ರಾಮುಕಾರಿಯತ್ರಿಗೆ ಸಂತಸವನ್ನು ನೀಡಿತು. ಅವರು ಗೆಳೆಯರ ಗುಂಪಿನೊಂದಿಗೆ ಕುವೆಂಪುರವರನ್ನು ಭೇಟಿಯಾದರು. ಅದೇ ಸಂದರ್ಭದಲ್ಲಿ ಮೂಡಿಗೆರೆಯಲ್ಲಿ ತೋಟಮಾಡುವ ಸಾಹಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ತೇಜಸ್ವಿಯವರು ಆ ಸಂದರ್ಭದಲ್ಲಿ ಮೈಸೂರಿಗೆ ಬಂದಿದ್ದರು. ಪರಸ್ಪರ ಪರಿಚಯದ ನಂತರ ತೇಜಸ್ವಿಯವರು ಪ್ರತಿಪಾದಿಸಿದ ಅನೇಕ ವಿಷಯಗಳು ರಾಮುಕಾರಿಯತ್ರವರಿಗೆ ಮೆಚ್ಚುಗೆಯಾಯಿತು ಚರ್ಚೆಯ ನಂತರ ರಾಮುಕಾರಿಯತ್ ತೇಜಸ್ವಿಯವರು ಚಿತ್ರಕಥೆ ಬರೆಯುವುದಾದರೆ ಮಾತ್ರ ಆ ಚಿತ್ರವನ್ನು ನಿರ್ದೇಶಿಸುವುದಾಗಿ ತಿಳಿಸಿದರು. ಪ್ರಾರಂಭದಲ್ಲಿ ನಿರಾಕರಿಸಿದರೂ ನಂತರ ಒತ್ತಾಯಕ್ಕೆ ತೇಜಸ್ವಿ ಒಪ್ಪಿದರು. ಆ ಕಾಲದಲ್ಲಿ ಐದುಸಾವಿರ ಹಣ ಸಂಭಾವನೆ ನಿಗದಿಯಾಗಿ ಮೈಸೂರಿನ ಹೋಟೆಲೊಂದರಲ್ಲಿ ಚಿತ್ರಕಥೆಯನ್ನು ಬರೆಯಲು ತೇಜಸ್ವಿ ತೊಡಗಿಸಿಕೊಂಡರು.
ಮಲೆನಾಡಿನ ಜನಜೀವನವನ್ನು ಸಮರ್ಥವಾಗಿ ಚಿತ್ರಿಸಲು ರಾಮು ಬಯಸಿದ್ದರಿಂದ ಸಿಂಬಾವಿ, ಮೇಗರವಳ್ಳಿ ಮುಂತಾದ ಹಳ್ಳಿಗಳನ್ನು ನೋಡಲು ರಾಮು ಬಯಸಿ ಮಲೆನಾಡಿಗೆ ಹೋಗಿ ಅಲ್ಲಿ ಎರಡು ತಿಂಗಳು ತಂಗಿ ಅಲ್ಲಿನ ಜನಜೀವನವನ್ನು ಅಭ್ಯಸಿಸಿದರು. ಕಥೆಯಲ್ಲಿ ಬರುವ ಸಣ್ಣ ಸಣ್ಣ ಪಾತ್ರಗಳನ್ನು ಮತ್ತು ಅಲ್ಲಿನ ನಂಬಿಕೆ, ಆಚರಣೆಗಳನ್ನು ಕಂಡು ಸಿನಿಮಾದಲ್ಲಿ ಸಮರ್ಥವಾಗಿ ಬಿಂಬಿಸಬೇಕೆಂದು ಅವರ ಆಶಯವಾಗಿತ್ತು.
ಮುಂದೆ ಬೆಂಗಳೂರಿನ ಹೋಟೆಲ್ವೊಂದರಲ್ಲಿ ಕುಳಿತು ಕಥಾವಸ್ತುವಿನ ಬೆಳವಣಿಗೆ ಕುರಿತಾಗಿ ಕೆಲಸವನ್ನು ಪ್ರಾರಂಭಿಸಿದರು. ಚಿತ್ರದ ನಾಯಕರ ಹೂವಯ್ಯನ ಪಾತ್ರಕ್ಕಾಗಿ ರಾಜ್ಕುಮಾರ್ರವರನ್ನು, ಸೀತೆಯ ಪಾತ್ರಕ್ಕಾಗಿ ಜಯಪ್ರದರವರನ್ನು, ಸುಬ್ಬಮ್ಮಳ ಪಾತ್ರಕ್ಕೆ ಜಯಂತಿಯವರನ್ನು ಕೇಳಿಕೊಂಡಾಗ ರಾಮುಕಾರಿಯತ್ರವರು ಮತ್ತು ಕುವೆಂಪುರವರ ಹೆಸರುಗಳು ಕೂಡಲೇ ಕಾಲ್ಶೀಟ್ ದೊರೆಯುವಂತೆ ಮಾಡಿದವು. ಕಾದಂಬರಿಯಲ್ಲಿ ಬರುವ ಒಂದು ಪ್ರಮುಖ ಪಾತ್ರಕ್ಕಾಗಿ ಸ್ವತಃ ಕುವೆಂಪುರವರೆ ಎಂ.ಪಿ ಶಂಕರ್ರವರ ಹೆಸರನ್ನು ಸೂಚಿಸಿದರು.

ಎಲ್ಲಾ ಆಯ್ಕೆಗಳು ಮುಗಿದು ಚಿತ್ರೀಕರಣ ಪ್ರಾರಂಭವಾಗುವ ಕೆಲವು ದಿನಗಳು ಇದ್ದಾಗ ಆಘಾತಕಾರಿ ಘಟನೆಯೊಂದು ಸಂಭವಿಸಿತು. ರಾಮುಕಾರಿಯತ್ರವರಿಗೆ ಹೃದಯಘಾತವಾಗಿತ್ತು. ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಅಲ್ಲಿನ ವೈದ್ಯರು ನಿಸ್ಸಾಹಾಯಕತೆ ವ್ಯಕ್ತಪಡಿಸಿದಾಗ ಅಕಾಲದಲ್ಲಿ ಅವರನ್ನು ವಿಮಾನದಲ್ಲಿ ಕರೆದೊಯ್ದು ಜಸ್ಲೋಕ್ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಪರಿಣಾಮಕಾರಿಯಾಗದೆ ರಾಮುಕಾರಿಯತ್ರವರು ತೀರಿಕೊಂಡರು.
ಚಿತ್ರತಂಡಕ್ಕೆ ಇದು ಅಘಾತಕಾರಿ ವಿಷಯವಾಗಿತ್ತು. ಈ ಅಘಾತದಿಂದ ಚೇತರಿಕೆಯಾಗುವಷ್ಟರಲ್ಲಿ ಸಮಯ ಹಿಡಿಯಿತು. ಅಷ್ಟರಲ್ಲೇ ರಾಜ್ಕುಮಾರ್ರವರ ಜಯಪ್ರಧರವರ ಕಾಲ್ಶೀಟ್ ಅವಧಿ ಮುಗಿದಿತ್ತು. ರಾಜ್ಕುಮಾರ್ರವರು ಮುಂದಿನ ಆರೇಳು ವರ್ಷ ಬಿಡುವಿಲ್ಲದಂತೆ ಆಗಿದ್ದರು ಮತ್ತು ಅವರ ಕುಟುಂಬ ಚಿತ್ರ ನಿರ್ಮಾಣಕ್ಕೆ ಇಳಿದಿದ್ದರು.
ಹಾಗಾಗಿ ಕಾನೂನು ಹೆಗ್ಗಡತಿ ಚಿತ್ರೀಕರಣ ಮುರಿದುಬಿದ್ದಿತು. ಮುಂದೆ ಈ ಚಿತ್ರವು ಹಾಸನದ ನಿರ್ಮಾಪಕರಾದ ಹೆಚ್. ನಾರಾಯಣರವರಿಂದ ನಿರ್ಮಿಸಿಲ್ಪಟ್ಟು ಹೆಸರಾಂತ ನಿರ್ದೇಶಕರಾದ ಗಿರೀಶ್ ಕಾರ್ನಾಡರಿಂದ ನಿರ್ದೇಶಿಸಲ್ಪಟ್ಟಿತ್ತು. ಜೊತೆಗೆ ಶ್ರೇಷ್ಟ ಪ್ರಾದೇಶಿಕ ಚಿತ್ರವೆಂಬ ಪ್ರಶಸ್ತಿಗೂ ಪಾತ್ರವಾಯಿತು.

ಸ್ವತಃ ಕುವೆಂಪು, ತೇಜಸ್ವಿಯವರ ಆಸಕ್ತಿ, ಕಾಮುಕಾರಿಯತ್ರವರ ಸಮರ್ಥ ನಿರ್ದೇಶನ, ಡಾ||ರಾಜ್ಕುಮಾರ್, ಜಯಪ್ರದಾರಂತ ಜನಪ್ರಿಯ ನಟರುಗಳಿಂದಾಗಿ ಆ ಚಿತ್ರ ಇನ್ನೂ ಹೆಚ್ಚು ಸಮರ್ಥವಾಗಿ ಮಲೆನಾಡಿನ ಪರಿಸರ, ಜೀವನ ಚಿತ್ರಣವನ್ನು ಉತ್ತಮವಾಗಿ ಮೂಡಿಸಿ ಚಿತ್ರರಂಗ ಬಹುಕಾಲ ನೆನಪಿನಲ್ಲಿ ಉಳಿಯುವಂತ ಮೈಲಿಗಲ್ಲಾಗುವ ಎಲ್ಲಾ ಅವಕಾಶಗಳು ಇದ್ದವು ಎಂದು ನಿಡುಸುಯ್ಯುತ್ತಾ ತಮ್ಮ ಮಾತನ್ನು ನಿಲ್ಲಿಸಿದರು. ಎ.ಸಿಎಂ ಮುಂದುವರೆಸಲು ಅವರಿಗೂ ಕೇಳಲು ನಮಗೆ ಆಸಕ್ತಿಯಿದ್ದರೂ ತುರ್ತಾಗಿ ಅವರು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹೋಗಬೇಕಾದ್ದರಿಂದ ನಮ್ಮ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಹೊರಟರು.






ಛೆ ಎಂಥ ಸುವರ್ಣಾವಕಾಶ ತಪ್ಪಿ ಹೋಯಿತು
CINEMA SHRUSTIYAGUVUDHU INTHA AAKASMIKAGALINDALE
One of those “What IF?” moments.
Definitely would’ve been a milestone I feel.
DHANYAVAADAGALU
good one
THANKS FOR YOUR COMMENTS