ರೇಣುಕಾ ನಿಡಗುಂದಿ

ಗೋಪಿ ಹಸುವಿನ ಸೆಗಣಿ ಹಾಕಿ ತೀಡಿ ತೀಡಿ ನೆಲ್ಲಕ್ಕಿ ಸಾರಿಸಿದ ಅಂಗಳದಲ್ಲಿ ತಿಂಗಳ ಬೆಳಕು ಚೆಲ್ಲಿದ ರಾತ್ರಿಯಲ್ಲಿ ಹೊಳೆಯೂರಿನ ಮನೆಯ ಜಗುಲಿಯ ಮೇಲೆ ಒರಗಿಕೊಂಡು ನೀಲಿ ಆಕಾಶವನ್ನೂ ಮಿಣುಕುವ ನಕ್ಷತ್ರಗಳನ್ನೂ ಎಣಿಸುವ ಆಟದಲ್ಲಿ ಸುಮ್ಮನೆ ಕನಸು ಹೆಣೆಯುತ್ತ ಮಲಗುವುದೆಂದರೆ ಅವಳಿಗೆ ಮೊದಲಿನಿಂದಲೂ ಹುಚ್ಚು ಪ್ರೀತಿ. ಚಿಕ್ಕಂದಿನಿಂದಲೂ ಹಾಗೆ ಆಕಾಶದತ್ತ ಏನನ್ನೋ ಹುಡುಕುವುದರಲ್ಲಿ, ತನ್ನವೇ ಕಲ್ಪನೆಯ ಲೋಕದಲ್ಲಿ ಕಳೆದುಹೋಗುವುದೆಂದರೆ ಆಯಿತು. ಕಾಮನಬಿಲ್ಲೆ ಕಣ್ಣಲ್ಲಿ ಮೂಡುತ್ತಿತ್ತು. ಕಣ್ಣು ಕಣ್ಣು ಬಿಡುವ ಚುಕ್ಕೆಗಳೆಲ್ಲ ಕಪ್ಪಾಗಿ ಆಕಾಶವೆಲ್ಲ ಕಡುನೀಲಿ ಬದಲು ಕಡು ಹಸಿರಾಗಿ, ಕಪ್ಪು ಚುಕ್ಕಿಗಳೆಲ್ಲ ಕೆಂಪು-ಹಳದಿ ಬಣ್ಣದ ಪುಟ್ಟ ಪಾತರಗಿತ್ತಿಗಳಾಗಿ ಹಾರಾಡುತ್ತಿರುತ್ತಿದ್ದವು. ಒಮ್ಮೊಮ್ಮೆ ಎಂಟು ವರ್ಶದ ತಮ್ಮನನ್ನು ಕಾಲ ಮೇಲೆ ಕೂಡಿಸಿ ಕತೆ ಹೇಳುತ್ತಲೋ, ಆನೆ ಆನೆ ಆಡಿಸುತ್ತಲೋ, ಇಲ್ಲಾ ಅವನ ಶಾಲೆಯ ಕತೆ ಕೇಳುತ್ತಲೋ ಕೂತಿರುವಾಗ ಅವನಿಗೆ ಬುಗುರಿಯ ನೆನಪೋ, ಗಾಜಿನ ಗುಂಡಗಳ ನೆನಪೋ ಆಗಿ ಕಿತ್ತುಕೊಂಡು ಓಡಿಬಿಡುತ್ತಿದ್ದ. ಆಗೆಲ್ಲ ಇದ್ದಕ್ಕಿದ್ದಂತೆ ಕೆರೆ ಹತ್ತಿರದ ಓಣಿಯ ವಜ್ರಕ್ಕ ಭಾವಿ ಹಾರಿಕೊಂಡಿದ್ದರ ನೆನಪು ಬಂದು, ಅವಳ ಭೂತ ಇಲ್ಲೇ ಆಸುಪಾಸಿನ ಪೊದೆಗಳಲ್ಲಿ ಅಡಗಿ ನಿಂತಿರಬಹುದಾದ ಕಲ್ಪನೆಯಲ್ಲೇ ಜಲ್ಲನೆ ಬೆವತು ಬೆದರಿ ಒಳಗೋಡುತ್ತಿದ್ದಳು. ಆಕಾಶದ ಕಪ್ಪು ಚುಕ್ಕಿಯ ಕನಸೂ ಬೆಳ್ಳಗಾಗಿರುತ್ತಿತ್ತು ಆಗ.
ಇದನ್ನೆಲ್ಲ ತನ್ನ ಹೊಳೆಯೂರಿನ ನೆನಪುಗಳನ್ನೆಲ್ಲ ಕಲೆಸಿ ತುತ್ತಿನೊಡನೆ ಮೆಲ್ಲುತ್ತಿರುವ ಸೊಗಸಿನಲ್ಲೇ ಅವಳಿಗೆ ಹಟ್ಟಿಹೊಳೆ ಜಾತ್ರೆಯ ನೆನಪು. ಜಾತ್ರೆಯ ಗದ್ದಲದಲ್ಲೂ ಕದ್ದು ಕದ್ದು ನೋಡಿದ ಜೋಡಿ ಕಂಗಳ ನೆನಪು. ತುಟಿಯಂಚಿನ ನಗು, ಯಾವುದೂ ತನ್ನದಾಗಲಿಲ್ಲದ ಸೆಳೆತದ ನೋವು. ಒಂದೆಡೆ ಹೊಳೆಯ ಹರಿವಿನ ಸೆಳವು ಕಡಿಮೆಯಾಗಿ ಮೆಲ್ಲನೆ ಒಂಟಿ ಹೊಳೆ ಸೆರಗು ಮುಂದೆ ಸಾಗಿ ಮೆಲ್ಲನೆ ಹರಿದು ಘಟಪ್ರಭೆಯಲ್ಲಿ ಐಕ್ಯವಾಗುತ್ತದೆ. ತುಸುದೂರ ಬದುವಿನ ಗುಂಟ ಕಾಲುದಾರಿಯಲ್ಲಿ ನಡೆದು ದೊಡ್ದ ರಸ್ತೆಯಂಚಿಗೆ ಬಂದರೆ ರಸ್ತೆ ದಾಟಿ ಆಚೆಗಿರುವುದೆ ಎದೆತುಂಬಿ ಹರಿಯುವ ವಿಶಾಲವಾದ ಘಟಪ್ರಭಾ ನದಿ. ನದಿಯಾವುದು ಹೊಳೆಯಾವುದು ಅರಿಯದ ವಯಸ್ಸು. ಹೊಳೆಯಲ್ಲಿ ಮನಸೋ ಇಚ್ಚೆ ನೀರಾಟ ಆಡಿ ಕುಣಿದಿದ್ದರ ನೆನಪಿಗಿಂತ ಮತ್ತೆ ಮತ್ತೆ ಕಾಡಿದ್ದು ಕಳೆದುಹೋದುದರ ಕಲ್ಪನೆ. ನೀರಿಗೆ ಬಿದ್ದ ತಂಬಿಗೆಯನ್ನು ತೆಗೆಯಲು ನೀರಿಗೆ ಕಾಲಿಳಿಬಿಡುತ್ತಿರುವಾಗಲೇ ಅಕಸ್ಮಾತ್ ಕಣ್ಣಿಗೆ ಬಿದ್ದ ಅಗಸರವಳು ’ಹುಡಗಿನ್ನ ಹಿಡಿರೀ,ಹಿಡೀಇಇರಿಯಪ್ಪೋ …… ಸುಳಿ ಐತಲ್ಲೆ…”ಎಂದು ಚೀರಿದ್ದಕ್ಕೆ ತಾನು ಬೆದರಿ ನೀರಿಗಿಳಿಯಲು ಹಾಕಿದ ಕಾಲನ್ನು ಮೇಲೆಳೆದುಕೊಂಡದ್ದು ನೆನೆದರೆ ಇಂದಿಗೂ ಬೆನ್ನ ಹುರಿಯಲ್ಲಿ ಸಣ್ಣಗೆ ಭಯ ಹರಿದಾಡುತ್ತದೆ. ಹಾಗಿದ್ದರೆ ಅಂದು ನಿಜವಾಗಿಯೂ ತಾನು ಘಟಪ್ರಭಾ ನದಿಯ ಪಾಲಾಗುತ್ತಿದ್ದೆನೇ ? ತಾನು ಬೆದರಿದ್ದು ಅಗಸರವಳ ದನಿಗೋ ? ಇಲ್ಲಾ ಸಾವಿನ ಕಲ್ಪನೆಯೆ ಇರದ ಆ ಶಬ್ದದ ಲಯಕ್ಕೋ ? ಗೊತ್ತಿಲ್ಲ.

ಹೊಳೆಯೂರಿನ ಶಾಲಾ ಮಾಸ್ತರ್ ಆಗಿದ್ದ ಕಕ್ಕನ ಸಾಲೆಗೆ ತಾನೂ ಇತರ ಆಸುಪಾಸಿನ ಮಕ್ಕಳೊಂದಿಗೆ ಹೋಗಿ ಕೂರುತ್ತಿದ್ದ ಪುಟ್ಟ ವಯಸ್ಸು. ಸಾರಣೆ ಕಾಣದ ನೆಲದಲ್ಲಿ ಕೂರಲು ಮಕ್ಕಳು ಸಿಮೆಂಟ ಚೀಲ, ಗೋಣಿಚೀಲವನ್ನು ಪಾಟಿಚೀಲದಲ್ಲಿ ಮಡಚಿ ಒಯ್ಯುತ್ತಿದ್ದ ಕಾಲವದು. ಹೊಳೆಯೂರೂ ಆಗ ಕಗ್ಗಳ್ಳಿ. ಇಂದು ಶಾರದೂರಿಗೆ ಕಡಿಮೆಯಿಲ್ಲದಿಂದ ಬೆಳೆದಿದೆ. ಆಗೆಲ್ಲ ಕಕ್ಕನೆಂದರೆ ಒಂಥರಾ ಹೆದರಿಕೆ. ” ಎಲ್ಲಿ ತಂಬಿಗೆ ಕಳೆದಳು ಈಕೆ..” ಎಂದು ಕಪಾಳಕ್ಕೆ ಬಾರಿಸಿಬಿಡುತ್ತಾರೆಂದು ನಡುಗಿದ್ದಳು. ಊಟಕ್ಕೆ ಮಕ್ಕಳೆಲ್ಲ ಕಕ್ಕನ ಜೊತೆ ಕೂತರೆ ಅವರು ಎಲ್ಲ ತಿದ್ದುವುದು ತನ್ನನ್ನೇ ! ಕಾಕೂ ಸುಮ್ಮನೆ ಮೆಲು ನಗುತ್ತ ಊಟ ಬಡಿಸುತ್ತಿರುತ್ತಿದ್ದಳು. ಅನ್ನಕ್ಕೆ ಉಪ್ಪು ಕೇಳಿದರೆ ರಾತ್ರಿ ಉಪ್ಪು ಅನ್ನಬಾರದು ಲವಣ ಅನ್ನಬೇಕು, ಜುಣಕಕ್ಕೆ ಉಪ್ಪೇ ಇಲ್ಲಾ ಎಂದರೆ ಎದುರಿನ ಎಲೆಯಲ್ಲಿ ಬಡಿಸಿದ್ದನ್ನು ಬಾಯಿಮುಚ್ಚಿಕೊಂಡು ಉಣ್ಣಬೇಕು. ಆಕೆ ಅನ್ನಪೂರ್ಣೆ. ಹಾಗೆಲ್ಲ ಹೆಸರಿಟ್ಟು ತಿನ್ನಬಾರದು. ಹೇಗಿದೆಯೋ ಹಾಗೇ ಸ್ವೀಕರಿಸಬೇಕು ಅನ್ನುತ್ತಿದ್ದರು. ಕಾಕೂ ಉಪ್ಪು ಹಾಕುವುದನ್ನೆ ಮರೆತು ಮಾಡಿದ ಅಡುಗೆಗೆ ಚಾ..ಚೂ..ಎಂದು ಏನೊಂದೂ ಅನ್ನದೇ ಉಣ್ಣುತ್ತಿದ್ದ ಅವರನ್ನು ಅರ್ಥಮಾಡಿಕೊಳ್ಳುವ ಬಗೆಯೇ ಗೊತ್ತಿದ್ದಿಲ್ಲ. ಉಳಿದವರಿಗೆ ಯಾವತ್ತೂ ತಿದ್ದಿದ್ದನ್ನು ಕಾಣದ ಅವಳಿಗೆ ತನ್ನನ್ನು ಮಾತ್ರ ಹೆಜ್ಜೆ ಹೆಜ್ಜೆಗೂ ತಿದ್ದುತ್ತಿದ್ದ ಅವರಿಗೆ ತನ್ನನ್ನು ಕಂಡರಾಗದು ಎಂದೇ ಊಹಿಸಿದ್ದಳು. ಹಟ್ಟಿಹೊಳೆಯಲ್ಲಿ ಸಾಕಷ್ಟು ನೀರು ಹರಿದು ಸಾಗಿದೆ. ಇಂದು ಅವರಿಗೆ ತಮ್ಮ ಹೆಣ್ಣುಮಕ್ಕಳಲ್ಲಿ ಇಲ್ಲದ ಪ್ರೀತಿ ಅಭಿಮಾನ ತನ್ನ ಮೇಲಿದ್ದುದು ನೋಡಿ ಕಣ್ಣುಮಂಜಾಗುತ್ತದೆ. ಬದುಕಿನ ಹೊಳೆ ಸಾಲಿನ ಬದು ದಾಟುವ ದಂದುಗದಲ್ಲಿ ಸವೆದಿದ್ದಾರೆ. ವಯಸ್ಸು ಮಾಗಿ ಲೌಕಿಕ ಲೋಕದಾಚೆಗಿನ ಅಲೌಕಿಕ ಬೆಳಕಿನಲ್ಲಿ ಮಿಂದು ಋಷಿಯಂತಾಗಿದ್ದಾರೆ. ಎಲ್ಲವನ್ನೂ ಅನುಭವಿಸಿ ಆ ಅನುಭವದ ಮೋಹದಿಂದ ಕಳಚಿಕೊಂಡ ಸುಖದ ಅನುಭೂತಿಯ ಶಾಂತತೆ ಅವರನ್ನು ಕಂಡಾಗ ಉದ್ದೀಪನಗೊಳ್ಳುತ್ತದೆ. “ಬಾ ಇಲ್ಲಿ ಕುತೂಕೋ ” ಎಂದು ಕೂರಿಸಿ ಬದುಕಿನ ಕತೆಯನ್ನು ತನ್ನೊಂದಿಗೆ ಹೇಳುವ ಅವರನ್ನು ಬೈದು ಕೂರಿಸಲು ಪ್ರಯತ್ನಿಸುವ ಮಕ್ಕಳನ್ನು ತಡೆದು ಅವರ ಮಾತಿಗೆ ಕಿವಿಯಾಗುತ್ತೇನೆ. ’ಜ್ಞಾನೇಶ್ವರಿ’ ಯ ಸಾರವನ್ನು ತಿಳಿಸಿ ಹೇಳುವ ಕಕ್ಕ ಒಬ್ಬ ಸಂತನಂತೆ ತೋರುತ್ತಾರೆ. ಇಡಿಯಾದ ಬದುಕಿನ ಬಿಡಿ ಬಿಡಿ ಚಿತ್ರಗಳಲ್ಲಿ ಒಂದು ಕಡೆ ಘಟಪ್ರಭೆ ಇನ್ನೊಂದು ಕಡೆ ಶಾಲ್ಮಲಿ ಸದಾ ಕಾಡುವ ನದಿಮೂಲ ನೆನಪುಗಳು.
ಕಬ್ಬಿನ ಗದ್ದೆಯ ಹಸಿರು ಮೈಯನ್ನು ತಬ್ಬಿ ಚಾಚಿದ ದಾರಿಗುಂಟದ ಪಯಣದ ಜಾಡು. ಕಾಡುಹೂಗಳ ಪರಿಮಳ. ಅಬ್ಬಲಿಗೆಯ ಹವಳಗೆಂಪಿನ ಜವನಿಕೆಯ ಲಾಸ್ಯ. ಬಿಸಿಲ ಬಯಲಿಗೆ ಹೊಳೆಯೂರಿನ ಕೆರೆಯ ನೀರು ಸೋಸಿ ತೆಂಗು ಕಂಗಿನ ಮರದಿಂದ ಸುಳಿದು ಬರುವ ತಂಪಾದ ಗಾಳಿ. ಮುಂಜಾವಿನ ಕುಳಿರು ಚಳಿಯಲೆದ್ದು ನೀರೊಲೆಯ ಬೆಂಕಿಯ ಶಾಖಕ್ಕೆ ಹಿತಗೊಳ್ಳುತ್ತ ಕೂರುವ ಕಟ್ಟೆಯ ಜಾಗ. ಎಲೆಗಳ ಮರೆಯ ಕಿಂಡಿಗಳಿಂದ ಅದೇ ತಾನೇ ತೂರಿ ಬರುವ ಎಳೆ ಬಿಸಿಲಕೋಲಿನ ಮಾಟದ ಆಟ. ಒಳಗೆ ಅಡುಗೆ ಮನೆಯಲ್ಲಿ ಶೆಗಡಿಯ ಕೆಂಡದ ಮೇಲೆ ಅರಳುತ್ತಿರುವ ಅಕ್ಕಿ ರವೆ ಉಪ್ಪಿಟ್ಟಿನ ಮೇಲೆ ಹಸುವಿನ ತುಪ್ಪದ ಕಂಪಿಗೆ ಬೆಳಗಿನ ಹಸಿವು ಹೆಚ್ಚಾಗುತ್ತಿತ್ತು. ನಡು ಹಗಲ ಬಿಸಿಲ ಚಡಪಡಿಕೆಗೆ ಹಿತ್ತಲಲ್ಲಿ ಬಿಟ್ಟ ಪಪಾಯಿ ಹಣ್ಣನ್ನು ಆಯೀ ಹೆಚ್ಚಿಕೊಡುವ ಖುಶಾಲಿಗೆ ಕರಿಹೆಂಚಿನ ಮಾಡು ತಂಪೆರೆಯುತ್ತಿತ್ತು. ಹಪ್ಪಳ ಸಂಡಿಗೆ, ಶ್ಯಾವಿಗೆಯ ಸುಗ್ಗಿಯ ಕಾಲ ಕಳೆದಿರಲಿಲ್ಲ. ಕೊಂಬೆಗಳನ್ನು ವಿಶಾಲವಾಗಿ ಹಬ್ಬಿಕೊಂಡ ಹಳೆಯ ಹುಣಿಸೆಮರ ಲಡ್ದಾಗಿಯೂ ಕಾಯಿ ಸುರಿಸುತ್ತಿತ್ತು. ಹೀಗೆಲ್ಲ ತನ್ನ ಹಿಂದು ಮುಂದಿನ ತಲೆಮಾರಿನ ಋಣಗಳನ್ನು ಗಂಟುಕಟ್ಟಿ ಉಡಿಯಲ್ಲಿ ಹಾಕಿಕೊಂಡು ಮುಚ್ಚು ಮರೆಯಲ್ಲಿ ಕಾಪಾಡಿದ್ದ ನದಿ ಹೆಸರಿನ ಸರಸೋತಿ ಅಜ್ಜಿ ತೀರಿಹೋದ ನಂತರ ಎಲ್ಲ ರಾತ್ರಿಗಳೂ ಕನಸಿನ ಬಣ್ಣಗಳೇ ಇಲ್ಲದ ಬರೀ ಕರಿಯ ಬಣ್ಣದ್ದುವಾಗೇ ಉಳಿದವು. ಬಣ್ಣದ ಬೀಸಣಿಕೆಯ ರಾಜಕುಮಾರಿ ಕತೆಯ ರಾಜಕುಮಾರ ಬೀಸಣೀಕೆ ಬೀಸಿದರೂ ಬರಲಿಲ್ಲ. ಗಂಡಭೇರುಂಡ ಪಕ್ಷಿಗಳ ಕತೆಯನ್ನೂ ಕೇಳುವರಿಲ್ಲ. ತಿಂಗಳ ಬೆಳಕಿನ ರಂಗವಲ್ಲಿ ತುಳಸಿಕಟ್ಟೆಯ ಸುತ್ತ ಬೆಳೆದ ಗರಿಕೆ ಹುಲ್ಲಲ್ಲಿ ಅಡಗಿಕೂತಿತ್ತು. ಹಂಡೆಗಟ್ಟಲೆ ನೀರನ್ನು ಕಾಯಿಸುತ್ತಿದ್ದ ಒಲೆಯೂ ಒಬ್ಬಂಟಿ ಹಾಡಿಗೆ ತೂಕಡಿಸುತ್ತಿತ್ತು.
ಹೀಗೆ ಪಡಸಾಲೆಯಲ್ಲಿ ಬಿಟ್ಟುಹೋದ ಹಳೆ ನೆನಪುಗಳನ್ನು ಸರಸೋತಜ್ಜಿಯ ವಯಸ್ಸಾದ ಮಗಳು ತನ್ನ ನೆರೆತ ಕೂದಲಿನಲ್ಲಿ ಕೈಯಾಡಿಸಿಕೊಳ್ಳುತ್ತ ಉದುರಿಹೋದ ಹಲ್ಲುಗಳ ಸಂದಿಯಲ್ಲಿ ಹುಳ್ಳುಳ್ಳಗೆ ನಗುತ್ತ ಹಾಡಿಕೊಳ್ಳುವಾಗ ಅಂಗಳದ ತುಂಬ ಉದುರಿದ ಸುರಗೀ ಹೂವಿನ ಕಂಪು ಮೂಗಡುರುವಾಗ ಹೊಳೆಸಾಲಿನ ಜಾತ್ರೆಯ ಸೊಲ್ಲು ಮನ ನೆನೆಯತೊಡಗುತ್ತದೆ……..







ಬರಹ ಗಪದ್ಯದಂತಿದೆ..
ಹೀಗೆ ಪಡಸಾಲೆಯಲ್ಲಿ ಬಿಟ್ಟುಹೋದ ಹಳೆ ನೆನಪುಗಳನ್ನು ಸರಸೋತಜ್ಜಿಯ ವಯಸ್ಸಾದ ಮಗಳು ತನ್ನ ನೆರೆತ ಕೂದಲಿನಲ್ಲಿ ಕೈಯಾಡಿಸಿಕೊಳ್ಳುತ್ತ ಉದುರಿಹೋದ ಹಲ್ಲುಗಳ ಸಂದಿಯಲ್ಲಿ ಹುಳ್ಳುಳ್ಳಗೆ ನಗುತ್ತ ಹಾಡಿಕೊಳ್ಳುವಾಗ ಅಂಗಳದ ತುಂಬ ಉದುರಿದ ಸುರಗೀ ಹೂವಿನ ಕಂಪು ಮೂಗಡುರುವಾಗ ಹೊಳೆಸಾಲಿನ ಜಾತ್ರೆಯ ಸೊಲ್ಲು ಮನ ನೆನೆಯತೊಡಗುತ್ತದೆ……..
nimma baraha tumbaa apyayamanavaagide…manamuttuvahaage,ondistu thrill koduva haage,ondistu kaaduva haage bareyuva nimma chintanege priitiya vandanegalu haagu abhinandanegalu….
good start … 🙂