ರೇಣುಕಾ ನಿಡಗುಂದಿ
ಸುಮ್ಮನೇ ಅಡ್ದಾದಿಡ್ಡಿಯಾಗಿ ಎತ್ತಲೋ ಗೊತ್ತುಗುರಿಯಿಲ್ಲದಂತೆ ಸಾಗುತ್ತಿದ್ದವಳನ್ನು ನಟ್ಟಡವಿಯಿಂದ ಎಳೆದು ಊರೊಳಗಿನ ಹಾದಿಗೆ ತಂದವನು ಅವನೇ. ಎಸೋ ಜನ್ಮದ ಗೆಳೆಯನೆಂಬಂತೆ ಅವಳೂ ತನ್ನ ಹೊಟ್ಟೆಯಲ್ಲಿನ ಗುಟ್ಟಿನ ಮಾತೆಲ್ಲವನ್ನೂ ಹೇಳಿಕೊಂಡಿದ್ದಳು. ಒಂದು ಪ್ರೇಮದ ಕಥೆಯನ್ನು ಬಣ್ಣಿಸಿದವನೂ ಅವನೇ ನೇರಳೆಹಣ್ಣಿನಂತ ದೊಡ್ಡ ದೊಡ್ದ ಕಣ್ಣಿನವನು. ತುಂಟ ನಗುವಿನವನು. ಯಾಕಿಷ್ಟು ತನ್ನೊಂದಿಗೆ ಒಳ್ಳೆಯವನಾಗಿರುತ್ತಾನೋ ಗೊತ್ತಿಲ್ಲ. ಯಾಕೆ ಇಷ್ಟವಾಗುತ್ತಾನೋ ಗೊತ್ತಿಲ್ಲ !. ಸುಮ್ಮನೇ ವರುಷಗಳವರೆಗೆ ತಿಂಗಳಾರು ತಿಂಗಳವರೆಗೆ ಮಾತೇ ಆಡದಿದ್ದರೂ ಇಬ್ಬರ ನಡುವೆ ತೀವ್ರವಾಗಿ ಬೇಕೆಸುವ ಮೋಹವಿಲ್ಲ, ಕಳೆದುಕೊಳ್ಳುವ ಭಯವೂ ಇಲ್ಲ.
ಹಾಗೇ ಒಂದು ಮುಂಜಾವು ಇದ್ದಕ್ಕಿದ್ದಂತೆ ಗರಿಕೆ ಮೊನೆಯೊಂದರ ಮೇಲಿನ ಇಬ್ಬನಿಯನ್ನು ಕಂಡಾಗ ಮನ ಅರಳುವಂತೆಯೇ ಅವ ನೆನಪಾಗುತ್ತಾನೆ. ಆ ಇಬ್ಬನಿ ಹನಿ ಮೆಲ್ಲನೇ ಹೂವಿನ ಒಡಲಿಗೆ ಇಳಿಯುವಾಗಲೂ ಅವನ ನೆನಪಿಂದ ಕೆನ್ನೆಯ ಗುಳಿಯಲ್ಲಿ ಗುಲಾಬಿ ನಸುನಗುವೊಂದು ಮೂಡಿರುತ್ತದೆ. ಯಾವುದೋ ಒಂದು ಕವಿತೆ ಓದುವಾಗಲೂ ಅವನವೇ ಸಾಲುಗಳಲ್ಲಿ ತಾನಿದ್ದೇನೆಯೇ ಎಂದು ಇಣುಕುತ್ತಾಳೆ ಅಕ್ಷರ ಅಕ್ಷರಗಳನ್ನು ಸಾಣೆ ಹಿಡಿಯುತ್ತಾ….ಊಹೂಂ..ಇಲ್ಲವೆಂದರೆ ಇಲ್ಲ..ಇದ್ದೆನೆಂದರೆ ಇದ್ದೇನೆ..
ಸುಮ್ಮನೇ ಪಿರುತಿ ಪಿರುತಿ ಎಂದು ತಲೆಗೆಡಿಸಿಕೊಂಡವಳನ್ನು ಯಾರೆಲ್ಲ ಹೇಳಿದರೂ ಕೇಳದಿದ್ದವಳು ಇವನು ಹೇಳಿದ ತಕ್ಷಣವೇ ಹೌದಲ್ಲ’ ಎಂದು ತಪ್ಪೊಪ್ಪಿಕೊಂಡುಬಿಡುವ ಮಗುವಿನಂತೆ ಒಪ್ಪಿದ್ದಳು. ಇಂಥದೇ ಒಂದು ನಡುಹಗಲಲ್ಲಿ ಹೊಂಗೆಮರದ ನೆರಳಲ್ಲಿ ಕುಳಿತು ರಾಶಿರಾಶಿಯಾಗಿ ಉದುರಿದ ನಸುನೇರಳೆ ಬಿಳಿ ಬೆರೆತ ಮೊಗ್ಗುಗಳನ್ನೂ, ಅರೆಬಿರಿದ ಹೊಂಗೆಹೂವುಗಳನ್ನೆಲ್ಲ ಆರಿಸುತ್ತ -ಕೈಬೆರಳಿನಲ್ಲಿ ರಂಗೋಲಿಯಾಗುತ್ತಾ ಕುಳಿತಾಗ ಒಂದು ದಿನ ದೊಡ್ಡ ಕಣ್ಣಿನವನು ಬುದ್ಧಿಹೇಳಿದ. ನಿನಗೆ ಖುಶಿಯಿದ್ದಂತೆ ಮಾಡು ಆದರೆ ಈ ಬದುಕು ಒಮ್ಮೆ ಸಿಗುವುದು,ಮತ್ತೆ ಮತ್ತೆ ಸಿಗಲಾರದು. ಇನ್ನಿಲ್ಲದಂತೆ ಬಾಳಬೇಕು. ನಮ್ಮ ಥರಾ. ನನ್ನ ನಿನ್ನ ಪ್ರೀತಿಯೇ ವಿಚಿತ್ರವಲ್ಲವಾ ಎನ್ನುತ್ತ ಸುಮ್ಮನೆ ಗಲಿಬಿಲಿಗೊಳ್ಳುತ್ತ , ಅವನು ಹೇಳಿದ್ದು ಶುದ್ಧ ಸುಳ್ಳು ಅಂತ ಗೊತ್ತಿದ್ದರೂ ಸುತರಾಂ ಒಪ್ಪದೇ, ಒಪ್ಪದಿರಲಾರದೇ ಒದ್ದಾಡಿದ್ದಳು. ತುಂಟತನದಲ್ಲಿ ಹೊಂಗೆಮರದ ಕೊಂಬೆಯನ್ನು ಅಲುಗಾಡಿಸಿ ಎಲ್ಲಾ ಹೂಗಳು ಪಟಪಟ ಉದುರಿ ಅವಳ ಮೇಲೆ ಮಳೆಗರೆಯುವಂತಾಗುವುದನ್ನೇ ನೋಡುತ್ತ ನಿಂತವನ ಎದೆಯಲ್ಲಾಗಲೇ ಕವಿತೆಯೊಂದು ಮೊಳಕೆ ಒಡೆದಿರುತ್ತಿತ್ತು; ಆರ್ದ್ರಗೊಂಡ ನೆಲದಲ್ಲಿ ಬೀಜವೊಂದು ಸದ್ದಿಲ್ಲದೇ ಬಿರಿವಂತೆ! ಅವಳ ಮುಖವೆಲ್ಲ ಸೂರ್ಯಕಾಂತಿ ತೋಟ…

ಆಗಲೇ ಅವನೇ ಬರೆದ ಪ್ರೇಮದ ಕಥೆಯನ್ನು ಓದಿದ ಗುಂಗಿನಲ್ಲೇ ಅವನನ್ನು ಸಿಕ್ಕಾಪಟ್ಟೆ ಇಷ್ಟಪಟ್ಟು ಅವನು ಒಲಿದವಳಿಗೆ ಮನಸ್ಸು ಕೊಟ್ಟವ. ಬದುಕು ಹಂಚಿಕೊಂಡವ. ಬದುಕಿನ ಬೇಲಿಯಲ್ಲಿ ಬಂದಿ. ತನಗೇನಿದ್ದರೂ ಹಾಗೇ ಸುಮ್ಮನೆ ಆಗಾಗ ಮಳೆ ಹುಳ ಮಿಣುಕಿ ಮಿಣುಕಿ ಇಲ್ಲವಾಗುವಂತೆ ಇರುವವನು. ಹುಚ್ಚನಂತೆ ಊರಿಂದೂರಿಗೆ ತಿರುಗಾಡುವವನು, ಜೋಗಪ್ಪನಂತೆ ಹೆಣ್ಣುಗಳ ಮನಸ್ಸೆಳೆದು ಮೋಡಿಮಾಡುವವನು. ಅವನನ್ನು ಪೋಲಿ, ಪೋಕರಿ ಏನೆನೋ ಅಂದುಕೊಂಡಿದ್ದವಳಿಗೆ ಎಲ್ಲಾ ಹುಸಿಯಾಗಿಸಿ ಅಂತಃಕರಣಕ್ಕೆ ಶಬ್ದವೇ ಇಲ್ಲದಂತೆ ಹಿತವಾಗಿದ್ದವನನ್ನೇ ಅವತ್ತು ಕಣ್ಣಿರಾಗಿ ಮನದಲ್ಲಿ ಬಚ್ಚಿಟ್ಟುಕೊಂಡಳು. ಕಣಿವೆಯೊಂದರ ಆಳದಿಂದ ಮೆಲ್ಲಗೇ ಸುಳಿಯಾಗಿ ಏಳುವ ದಟ್ಟ ಹೊಗೆ ಮಂಜಿನಲ್ಲಿ ಕೆಂಪು ಮಫ್ಲರ್, ಪೂಲ್ ಸ್ಲೀವ್ ಜಾಕೆಟಿನಲ್ಲಿ ಎಳೆ ಬಿಸಿಲಿನಂತೆ ಕಂಡವನನ್ನು ಮರೆಯಲು ಮನಸ್ಸಾಗಲಿಲ್ಲ.
ಭಯಂಕರ ಪ್ರೀತಿಯ ಕಲ್ಪನೆಯಲ್ಲ ಸುಟ್ಟು ಕರಕಲಾಗಿ ಬಿಳಿಯಬೂದಿಯನ್ನೆಲ್ಲ ಕೊಡವಿ ಏಳುವ ಫೀನಿಕ್ಸ್ ನಂತೆ ಇವಳು ಇದ್ದಕ್ಕಿದ್ದಂತೆ ಮಳೆಹುಯ್ಯುವ ಮಳೆದೇವತೆಯಾಗಿಬಿಟ್ಟಳು. ಮೋಡವಾಗಿ ಅವನ ಮನೆಯ ಹಂಚಿನ ಮೇಲೆಲ್ಲ ಸುರಿದಳು. ಕಾಡು – ಮೇಡು , ಕಣಿವೆ ಕೊರಕಲು ಎಲ್ಲ ಎದೆ ತುಂಬಿಕೊಳ್ಳುತ್ತ ಅಲೆದಳು. ಅವನಿಗೆ ಮೋಡದ ಸೊಬಗೂ ಮಳೆಯ ಗುನುಗಿನ ಹುಚ್ಚೂ ಸೇರಿ ಥೇಟ್ ಆ ಕಥೆಯ ಪ್ರೇಮಿಗಳು ತಾವೇ, ಮುಂದೊಂದು ದಿನ ಕಥೆಯ ಮುದುಕಿಯೂ ತಾನೇ ಆಗಿಬಿಡುವ ಭ್ರಮೆಯ ಮಾತಿಗೆಲ್ಲ ರಾತ್ರಿಯಲ್ಲ ಕತೆಕೇಳುತ್ತಿರುವಂತೆ ಹೂಂಗುಟ್ಟುತ್ತಲೇ, ನಡುನಡುವೆ ನಿದ್ದೆಯಿಂದ ಎಚ್ಚೆತ್ತು ಇಷ್ಟುಹೊತ್ತೂ ಪ್ರೇಮಿಸಿದ್ದು ಭ್ರಮೆಯಾ? ತಾನು ರಾತ್ರಿಯೆಲ್ಲ ಹೊಂಗೆಯ ಬುಡದಲ್ಲೇ ಕಳೆದನಾ? ಅವನ ಮಡಿಲಲ್ಲಿ ಚುಕ್ಕಿ ಕಾಣುತ್ತ ಕಳೆದನಾ? ಎಲ್ಲ ಗೋಜಲಾಗಿ ಮತ್ತೆ ಆಕಾಶದ ಬಯಲಿಗೆ ಓಡಿದ್ದಳು ದೇವಲೋಕದಂತಾ ಅವನೂರನ್ನೇ ನೆನೆಯುತ್ತ.

ಹೊಂಗೆಯ ನೆರಳಿನಷ್ಟು ಚೆಂದ ಯಾವುದೂ ಇಲ್ಲ. ದಟ್ಟ ನೆರಳಿನಲ್ಲಿ ಕುರ್ಚಿ ಹಾಕಿಕೊಂಡು ಕೂತರೆ ಸುತ್ತಲಿನ ಗಿಡ ಮರ, ಫಾಲ್ಗುಣದ ಒಣಗಿದ ತರಗಲೆಗಳ ಸರಪರ ಆಟ, ಚೈತ್ರದ ಮಗ್ಗುಲಲ್ಲೇ ಅರಳಿದ ಹೂ-ಮೊಗ್ಗುಗಳ ಪುನುಗು ಗಂಧದ ಗಾಳಿ ತನ್ನನ್ನೇ ಸುತ್ತುತ್ತಿರುತ್ತದೆ. ಒಂದು ಪುಟ್ಟ ಸಂದರ್ಶನಕ್ಕೆ ಬರ್ತೀನಿ ಅಲ್ಲೇ ಇರು ಎಂದು ಟೈಮು ತೆಗೆದುಕೊಂಡು ಅಲ್ಲೇ ಗೇಟಿನ ಹೊರಗೆ ನಿಂತ ಸರದಾರ್ಜಿಯ ಗಾಡಿಯನ್ನೇ ಅವನಿದ್ದಲ್ಲಿಗೆ ಓಡಿಸಿಕೊಂಡುಹೋದರೆ, ಅವ ಮಕ್ಕಳಂತೆ ಕಣ್ಣುಮುಚ್ಚಾಲೆಯಾಡುತ್ತ, ಮುಸಿಮುಸಿ ನಗಾಡಿಕೊಂಡು ಅಲ್ಲಿಂದಿಲ್ಲಿಗೆ ಓಡಾಡಿಸಿದ. ಯಾರದೊ ಅಂಗಳದಲ್ಲಿ, ಯಾರೋ ಬೆಳೆಸಿದ ಕಾಂಕ್ರೀಟು ಕಾಡಿನ ನೆರಳಲ್ಲಿ ಕೂತು ತನಗಾಗಿ ಕಾಯುತ್ತಿದ್ದ.
ದೇವತೆಯಂತೆ ಅವನ ಹೆಂಡತಿ ಪಕ್ಕದಲ್ಲೆ ಕುಳಿತು ಕತೆ ಕೇಳುತ್ತಿದ್ದಳು. ಅವ ಹೇಳಿದ್ದೇನೋ ತಾನು ಕೇಳಿದ್ದೇನೋ ಏನೊಂದೂ ತಿಳಿಯದ ತಾನು ಇವ ಅದೆ ಕತೆಯ ಮುದುಕನಂತೆ ಮಳೆಗಾಳಿ ಹೊಡೆಯುವ ಕಾರ್ಗತ್ತಲ ಇರುಳಿನಲ್ಲಿ ಅಲ್ಲಾಡುತ್ತ ಬಸ್ ಸ್ಟ್ಯಾಂಡೊಂದರ ಬಳಿ ತನ್ನ ಪ್ರೇಮದ ಮುದುಕಿಯನ್ನು ಆಪ್ಯಾಯತೆಯಿಂದ ಕಣ್ಣುತುಂಬಿಕೊಳ್ಳುತ್ತಿರುವವನಂತೆ ಕಾಣುತ್ತಿದ್ದ. ಅದೆಂಥ ಪ್ರೇಮ ! ಪುಳಕದ ಪಕಳೆಗಳು ಮೆಲುನುಡಿದಂತೆ. ಪ್ರೇಮವೆಂದರೆ ಅಂಥದ್ದು ಸದ್ದಿಲ್ಲದೇ ಅರಳುವ ಹೂವಿನಂತೆ, ಅರಳಿದ ಹೂವಿಗೂ ಗೊತ್ತಿರದ ಪರಿಮಳದಂತೆ. ಹಾಗೇ ಅನಿಸುತ್ತಿತ್ತು ! ತಾವಿಬ್ಬರೂ ಎಂದೂ ಉಸುರಿರದ ಆ ಪದ. ನಡುಹಗಲ ಆ ಸವಿಗಾಳಿಯಲ್ಲಿ ಅವರೂ ಮೌನದಲ್ಲಿ ಪ್ರೀತಿಸಿದ್ದರು. ಈಮೇಲು, ಚಾಟ್ , ವಿಡಿಯೋ ಚಾಟ್ ಗಳ ಅದ್ಭುತಗಳಲ್ಲಿ ಖಾಸಗೀತನದ ಯಾವ ಸುಖದ ಅನುಭೂತಿಗೊಳಗಾಗದೇ ಅವನು ಇವಳು ಸಂಬಂಧದ ಸವಿ, ಬದ್ಧತೆ, ಕಸಿವಿಸಿ, ಹಗರಣ, ತಲ್ಲಣಗಳ ಚೌಕಟ್ಟಿಗೊಳಗಾಗದೇ ಆದರ್ಶ ಜೋಡಿಗಳ ಭ್ರಮೆಯಲ್ಲಿ ತೇಲಾಡಿದ್ದರು. ಆದರ್ಶದ ಮಣ್ಣಿನ ಗೋಡೆಗೆಲ್ಲ ಗೆದ್ದಲು ಹಿಡಿದು ಉದುರಿ ಬೀಳತೊಡಗಿದಾಗ ಅರಿವಾಗಿತ್ತು. ಅದು ಗೆದ್ದಲಿನ ಗೂಡು. ಬಲವಿಲ್ಲದ್ದು. ಮಣ್ಣಿನ ಗುಣದ ಗಾಢತೆಯೇ ಇಲ್ಲದ್ದು ಎಂದು.
ಆಗಾಧವಾದ ಮನೋಬಲ, ಕಾಲದ ಎಚ್ಚರ, ಜಾಣ್ಮೆಯ ಅವಳನ್ನು ಕೈಹಿಡಿದು ತಂದವನು ಇವನೇ. ಅವಳ ನೆಚ್ಚಿನ ಸಖ. ಅವಳೊಂದಿಗೆ ತಿಂಗಳ ಬೆಳಕಿನಲ್ಲಿ ಕೂತು ತಲೆನೇವರಿಸಿ ಅವಳೊಂದಿಗೆ ಅತ್ತವನು. ಅವಳು ಕರೆದಾಗ ತನ್ನ ಅಗತ್ಯದ ಕೆಲಸಗಳನ್ನು ಬದಿಗೊತ್ತಿ ಬಂದು ಮತ್ಯಾವುದೋ ಸಂಕಟದಲ್ಲಿ ಸಿಲುಕಿದ್ದ ಇವಳೊಂದಿಗೆ ದೂರದ ಊರಿನವರೆಗೆ ಬಂದು ಆ ಕಛೇರಿ ಈ ಕಛೇರಿಯೆಲ್ಲ ಸುತ್ತಾಡಿ. ಬಿರು ಬಿಸಿಲಿಗೆ ಬಳಲಿದವಳನ್ನು ಹೊಂಗೆ ನೆರಳಲ್ಲಿ ಕೂರಿಸಿ ನೀರು ಕುಡಿಸಿ ಸಮಾಧಾನ ಹೇಳಿದವನು. ಬಿರುಬಿಸಿಲಲ್ಲಿ ಹಸಿವೆಯೆಂದದ್ದಕ್ಕೆ ಯಾವುದೋ ಮಾಣಿಯ ಹೊಟೇಲಿನಲ್ಲಿ ಮಂಗಳೂರಿನ ಕುಚ್ಚಲು ಅಕ್ಕಿ ಅನ್ನ ಮೀನು ಸಾರನ್ನು ಉಣ್ಣುತ್ತಿದ್ದರೆ ಇವಳು ಇನ್ನೂ ಅವನ ಬೆಚ್ಚಗಿನ ಎದೆಯ ಬಯಲಲ್ಲೇ ಕಳೆದುಹೋಗುವ ಕನಸು ಕಾಣುತ್ತಿದ್ದಳು.
ಮತ್ತವೇ ಕೊಳದ ಕಣ್ಣಿನಲ್ಲಿ ಕರಗಿ ತಾನು ಚಿಕ್ಕ ಮಗುವಾಗಿಬಿಡುತ್ತಿದ್ದೇನೆ ಅನಿಸಿತು. ಅವನ ದುಡು ದುಡು ನಡಿಗೆಯ ನೆರಳಲ್ಲಿ ಕಿರುಬೆರಳಿನಿಂದ ರಸ್ತೆ ದಾಟಿಸುತ್ತಿರುವ ಅಪ್ಪನ ಮುಖ ಕಂಡಂತಾಗಿಯೂ ಅವಳನ್ನು ಆಟೋ ಹತ್ತಿಸಿ ತಾನು ಊರಿನ ಬಸ್ಸು ಹಿಡಿಯಲು ಹೊರಟವನನ್ನು ಬಿಟ್ಟಿರಲಾರದೇ, ಇಲ್ಲೆ ಇದ್ದುಬಿಡುವ ಆಸೆಯನ್ನು ಅದುಮಿಡಲಾರದೇ, ಅಳಲೂ ಆರದೇ ನಿಂತವಳ ಒದ್ದೆ ಕಣ್ಣ ಕೊನೆಯಲ್ಲಿ ದೂರದ ನಿಯೋನ್ ದೀಪ ಮಿನುಗುತ್ತಿತ್ತು.







ಏನು ಹೇಳಲಿ …..???????