ರೇಣುಕಾ ನಿಡಗುಂದಿ
ಕಲೆ : ಸೃಜನ್
ರಾತ್ರಿ ಇದ್ದಕ್ಕಿದ್ದಂತೆ ನೂಕಿ ತಳ್ಳುವಂಥ ಗಾಳಿಯ ಹೊಡೆತ, ತುಂತುರು ಹನಿಗಳನ್ನೆಲ್ಲ ಗಾಳಿ ತೂರಿ ತೂರಿ ಮೈಸೋಕಿದ ಚಳಿ, ಗುಡು ಗುಡುಗರಿಸಿ ಧೊಗುಟ್ಟಿ ಸುರಿದ ಮಳೆಯ ಅಬ್ಬರ ಕಂಡು ಅರೆಕ್ಷಣ ವಿಹ್ವಲಗೊಂಡಿದ್ದಳು. ಮಳೆಯುಲ್ಲಿ ನೆನೆದುಕೊಂಡೆ ಭಾವನೆಗಳ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿರುವಂತ ತಲ್ಲಣದಲ್ಲಿ ಬಸ್ಸು ಹತ್ತಿದ್ದು ಈ ವೈಶಾಖದ ಬಿಸಿಲಿಗೆ ದಣಿದ ಮನಸ್ಸನ್ನು ತಂಫುಗೊಳಿಸಿದಂತಾಗಿತ್ತು. ಎದೆ ತುಂಬ ಹಸಿ ಹಸಿ ಮಳೆಯಲ್ಲಿ ಬೆಚ್ಚಗಿನ ಬಿಸಿ ಮುತ್ತಿನ ಮಬ್ಬು ಆವರಿಸಿದಂತೆ ಸುಮ್ಮನೇ ಕಣ್ಮುಚ್ಚಿಕೊಂಡಿದ್ದಳು. ಈ ಜನ್ಮ ಪೂರ್ತಿ ಈ ಮಬ್ಬು ಹೀಗೆ ಆವರಿಸಿಕೊಂಡಿರಲಿ, ಮುತ್ತಿನ ಹನಿಗಳನ್ನು ಮಳೆಗರೆದ ಆ ಕ್ಷಣ ಹಾಗೇ ನಿಂತುಬಿಡಲಿ… ಅಲ್ಲೇ.. ದೇವರೇ ! ಎಂದು ಬೇಡುವ ಹುಚ್ಚು ಮನಸ್ಸನ್ನು ಹೇಗೆ ಸಂತೈಸಬೇಕೋ ತಿಳಿಯುವುದಿಲ್ಲ.
ಹೀಗೆ ರಾತ್ರಿಯಿಡಿ ಮಳೆಯಲ್ಲಿ ತೋಯ್ದು ನೆಂದು, ನಿದ್ದೆಯನ್ನು ಕದಿಯುವ ನಸು ಬೆಳಕಿನಲ್ಲೇ ಎದ್ದು ಡ್ರೈವ್ ಮಾಡಿಕೊಂಡು ಓಡೋಡಿ ಬಂದ ಅವನನ್ನು ಅಲ್ಲೇ ಹಿಡಿದು ಮುತ್ತಿಕ್ಕುವ ಆಸೆಯನ್ನು ಹಾಗೆ ಹತ್ತಿಕ್ಕಿದ್ದಳು. ಬೆರಗನ್ನು ತೊಳೆದಿಟ್ಟ ಬೆಳಗಿನ ಪೂರ್ವದಲ್ಲಿ ಸೂರ್ಯನಿನ್ನೂ ಮೈಮುರಿಯುತ್ತಿರುವ ಹೊತ್ತು. ಆಗಷ್ಟೇ ಕಣ್ಣು ಪಿಳಿಪಿಳಿಸುವ ಮುಗ್ಧ ಬೆಳಗು. ಆಗಸದಲ್ಲಿ ಕೆಂಪಿನ ಓಕುಳಿ. ಇಬ್ಬರಿಗೂ ಹೊತ್ತು ಗೊತ್ತಿನ ಪರಿವೆಯಿಲ್ಲದೇ ತಮ್ಮ ಕಾಲೇಜಿನ ಕಡೆ ಕಾರು ತಿರುಗಿಸಿದವನ ಕೈಬೆರಳು ಆಗಲೇ ಮೌನ ಮುರಿದು ಈಚೆ ತಿರುಗಿ ಇವಳ ಬೆರಳುಗಳಿಗೆ ಹೆಣೆದುಕೊಂಡಿದ್ದವು. ಏಸೋ ಜನ್ಮಗಳಿಂದ ಅಗಲಿದವರು ಒಮ್ಮೆಲೆ ಸಿಕ್ಕವರಂತೆ. ಮುಟ್ಟಲೋ ಬೇಡವೋ ಎನ್ನುವ ಅಳುಕಿನ ಗೋಡೆ ಕುಸಿದು ಪಾರಿಜಾತಗಳೆಲ್ಲ ಪಾದದೆಡೆಯಲ್ಲಿ ಉದುರಿದ್ದವು. ಕುಳಿರ್ಗಾಳಿಯ ಕಂಪನದಲ್ಲಿ ಇಬ್ಬರನ್ನೂ ಒಮ್ಮೆಲೆ ಕಟ್ಟಿಹಾಕಿದ ಹಿತವಾದ ಸ್ಪರ್ಶ. ‘ಒಂಚೂರು ಚಿವುಟು ನನ್ನ…ಇದು ನನಸಾ? ಇನ್ನೂ ಕನಸಲ್ಲೇ ಇದೀನಾ ?….ನೀನೆನಾ ದಿನಾ ನಂಜೊತೆ ಫೋನಿನಲ್ಲಿ ಕಲರವಿಸುವವಳು, ಮೋಡದ ಬಸಿರಲ್ಲಿ ಹನಿಮುತ್ತಾಗುವವಳು? ಮಾತು ಮುಗಿದ ಮೌನದಲ್ಲಿ ಬಿಸಿಯುಸಿರಾಗುವವಳು ?’ ಹೇಳಲ್ಲ ಗೆಳತೀ…!! ಎಂದಾಗ ಹೊಂಬಣ್ಣದ ಆಗಸದ ಕೆಂಪೆಲ್ಲ ಅವಳ ಕೆನ್ನೆಯಲ್ಲಿ ಮೂಡಿ ನಸುನಗುವೂ ತುಸು ನಾಚಿಕೆಯೂ ಲಾಸ್ಯವಾಗಿ ಮಾತೆಲ್ಲ ಮರೆತು ಮತ್ತಷ್ಟು ಮೌನಿಯಾಗಿ ಹೋದಳು. ಅಮೂರ್ತವೆಲ್ಲ ಮೂರ್ತಗೊಂಡ ಉನ್ಮತ್ತ ಕ್ಷಣಗಳು. ಎಚ್ಚರಗೊಂಡ ಊರಲ್ಲಿ ಮಲ್ಲಿಗೆ ಕಂಪಿನ ಬೆಳಗು, ದೂರದ ದೇವಸ್ಥಾನದ ಗಂಟೆಯ ಮೊಳಗು, ಕೋಗಿಲೆಯೊಂದರ ಕುಹೂ ಕುಹೂ ಕುಕಿಲು, ಬೀಸುವ ತಂಗಾಳಿ ಎಲ್ಲವೂ ತಮಗಾಗೇ ಮೇಳೈಸಿದ ಭಾವ ಮನಸ್ಸಲ್ಲಿ.

ಕಲೆ : ಸೃಜನ್
ಹೀಗೂ ಆಗುತ್ತದಾ? ಎಂದೋ ಒಮ್ಮೆ ಇಷ್ಟವಾದ ಮುಖ, ಪರಿಚಯವಿರದ, ಎಂದೂ ಸಂಪರ್ಕವಿರದ , ಆದರೆ ಯಾವತ್ತೂ ಮರೆಯದ ಆ ನೋಟ, ಕಣ್ಣಂಚಿನ ಹನಿ ಭಾರದ ಎರಡು ಜೀವಗಳು ಮತ್ತೆ ಸಿಗುತ್ತಾರಾ? ಗೊತ್ತಿಲ್ಲ. ಹಾಗೆ ಯಾರೂ ನೆನಪಿಟ್ಟುಕೊಳ್ಳೋದಿಲ್ಲ…ನೆನಪಿದ್ದರೂ ಯಾರು ಯಾರಿಗೂ ಕಾಯುವುದು ಇಲ್ಲ. ನನಗಾಗಿ ನೀ ಕಾದೆಯಲ್ಲ.. ‘ಹುಡುಗಿ ನೀ ಗ್ರೇಟು’ – ಎಂದವನ ಎದೆಯಲ್ಲಿ ಪ್ರೀತಿ ಆಗಲೇ ಮೊಳೆತು ಮುಲುಕಾಡುತ್ತಿತ್ತು. ಹಾಗಾಗಿದ್ದು ತಮ್ಮಿಬ್ಬರ ಲಕ್ಕು. ಎಂದೋ ಒಮ್ಮೆ ಜಿಟಿಜಿಟಿ ಮಳೆ ನಿಂತು ಮೆಲ್ಲಗೇ ಹರಡಿದ ಹೊಂಬಿಸಿಲಿನ ಮುಂಬಾಗಿಲಲಿ ಕಂಡವನ ಮುಖ ಮರೆತಿಲ್ಲ ಅವಳು. ಸೈಕಲ್ ಏರಿ ತನ್ನ ಹಿಂದೆ ಹಿಂದೆ ಬಂದ ಮುದ್ದು ಹುಡುಗನ ತುಟಿಯಂಚಿನ ಆ ಕಿರುನಗೆಯೂ ಮನಸ್ಸಿನಿಂದ ಮಾಸಿಲ್ಲ. ಕಾಯ ಮಾಗುವುದರ ಜತೆಗೆ ಮೋಹವೂ ಮಾಗಿ ಕಳಿತು ಹಣ್ಣಾಗಿ ಎದೆ ಬಯಲಲ್ಲಿ ಬೀಜ ಬಿದ್ದು ಮತ್ತೆ ಮೊಳೆತು, ಚಿಗಿತು, ಹೆಮ್ಮರವಾಗಿ ಬೆಳೆದಿತ್ತು ಪ್ರೇಮವೆಂಬೋ ಮಾಯಕ.
ತನ್ನ ಕನಸಿನ ಹುಡುಗನ ಬಗ್ಗೆ ಏನೆಲ್ಲ ಕನಸುಗಳನ್ನು ಕಟ್ಟಿಕೊಂಡು ಅಂತರಂಗದಲ್ಲಿ ಅವನನ್ನೆ ಹೊತ್ತುಕೊಂಡು ಬದುಕು ಸವೆಸಿದ್ದು ಸಾರ್ಥಕವೆನ್ನುವಂತೆ ಕೊನೆಗೂ ಅವಳ ಹುಡುಗ ಅವಳೆದುರಿದ್ದ. ಡ್ರೈವ್ ಮಾಡುತ್ತಲೇ ಕಣ್ಣ ಕೊನೆಯಲ್ಲಿ ಅವಳನ್ನೇ ನೋಡುತ್ತ ನೋಡುತ್ತ…ತುಟಿಯಂಚಿನ ನಗೆಯಲ್ಲೆ ಅವಳನ್ನು ಕೊಲ್ಲುತ್ತೇನೆಂಬ ಅವನ ಹುನ್ನಾರವನ್ನು ಬಲ್ಲೆಯೆಂಬಂತೆ ಅವಳು ಗುಲ್ ಮೊಹರಿನ ಕೆಂಪು ಹೂಗಳ ರಾಶಿಯನ್ನು ಹೊದ್ದ ಮರಗಳಲ್ಲಿ ಸುಳಿದು ಸರಸವಾಡುತ್ತಿದ್ದ ಗಾಳಿಯ ಜತೆಯಾದಳು. ಮಾವಿನ ತೋಟದಲ್ಲೆಲ್ಲ ಅಡ್ದಾದಿಡ್ಡಿಯಾಗಿ ಓಡುತ್ತಿದ್ದ ಗೊಲ್ಲ ಗಾಳಿ ಕಿವಿಯಲ್ಲಿ ಕೊಳಲೂದುತ್ತಿತ್ತು. ರೇಶ್ಮೆಗೂದಲಲ್ಲಿ ಬೆರೆಳೆರಡು ಸರಸವಾಡುತ್ತಿದ್ದವು. ಪಕ್ಕದಲ್ಲಿದ್ದವನು ಅವನೇ! ಆದರೆ ಅಂದಿನ ಎಳಸು ಮುಖದ ಅವನಲ್ಲ. ಕೈಯಲ್ಲಿ ಎರಡು ಬುಕ್ ಹಿಡಿದು ಕಾಲೇಜಿನ ಹಾದಿಯಾಗಿ ತನ್ನ ಮನೆಯೆದುರಿಂದ ಸರ ಸರ ನಡೆಯುತ್ತಿದ್ದ ಅವನು……ತಾನು ಹಿಂದಿಂದೆ ನವಿಲಂತೆ ಓಡಿ, ನಲಿದು ಕಣ್ಣು ತುಂಬಿಕೊಳ್ಳುತ್ತಿದ್ದ ನಡಿಗೆಯವನು…ಅವನೇ ! ಆಗೊಮ್ಮೆ ಈಗೊಮ್ಮೆ ಎದುರಾಗಿ ಕ್ಷಣ ಕೂಡಿ ಬೇರೆಯಾದ ಜೋಡಿ ನವಿಲುಗಣ್ಣಿನ ನೋಟ, ಕಂಡು ಕಾಣದಂತೆ ಮೂಡಿ ಮರೆಯಾಗುತ್ತಿದ್ದ ಹುಸಿನಗು …ಮನಸ್ಸು ಹೇಳುತ್ತಿತ್ತು ಅವನೇ… ಎಂದು ! …ಅಂತರಂಗದಲ್ಲೆಲ್ಲ ಮೃದಂಗದ ಅಲೆಗಳು, ಪುಳಕದ ಕಂಪನದಲ್ಲಿ ಕೈ ಬೆವರುತ್ತಿತ್ತು. ಬಿಗಿಯಾಗಿ ಅಪ್ಪಿಕೊಂಡಿದ್ದ ಬೆರಳುಗಳು ತುಸುವೇ ಬೇರ್ಪಟ್ಟು, ಕದಲಿ ಅವನು ಗೇರ್ ಬದಲಿಸಿ ಮತ್ತೆ ಬಿಗಿಗೊಳಿಸಿದ ಸ್ಪರ್ಶದ ಹಿತವನ್ನು ಕಣ್ಮುಚ್ಚಿ ಅನುಭವಿಸುತ್ತ….ಆ ಕ್ಷಣದ ಉನ್ಮತ್ತ ಸುಖದ ಅನುಭೂತಿಗೆ ಹಾಗೇ ಕರಗ ತೊಡಗಿದ್ದಳು.
ಕಲೆ : ಸೃಜನ್
ಗೋಕುಲ್ ರೋಡಿನ ಹಾವಿನಂತ ಮಿರಿ ಮಿರಿ ಮಿಂಚುವ ರಸ್ತೆಯ ಎಡಬಲದಲ್ಲಿ ನೋಟ ಚಾಚಿದಷ್ಟೂ ವಿಶಾಲ ಹಸಿರಿನ ಬಯಲು ದೂರದ ಸಣ್ಣ ಸಣ್ಣ ಗುಡ್ಡಗಳು…ಗುಡ್ಡ ಕಡಿದು ಮಾಡಿದ ತಗ್ಗು ದಿನ್ನೆಯ ನುಣುಪು ಹಾದಿಯಲ್ಲಿ , ಭೂಮಿ ಆಕಾಶ ಒಂದಾಗುವ ಅನಂತತೆಯತ್ತ, ಆಗಾಧ ವಿಸ್ಮಯವನ್ನು, ಮಾತಿನಲ್ಲಿ ಮೂಡಿಸಲಾಗದ ಭಾವನೆಗಳನ್ನೆಲ್ಲ ಮೌನದಲ್ಲಿ ಮೀಟುತ್ತ ಕಾಲ ತನ್ಮಯವಾಗಿ ಕುಳಿತಿತ್ತು. ಮೋಡವನ್ನೇ ಧ್ಯಾನಿಸುತ್ತ ನಿಂತ ಹಗಲು. ಅವನ ಬೆರಗು ಅವಳು. ಅವಳ ಬೆರಗು ಅವನು. ನಿನ್ನೆಯಿರದ ಅವಳು ಇಂದು ಅವನ ಎಲ್ಲವೂ ಆಗಿಹೋಗುವ ಕನವರಿಕೆ. ಅವಳಲ್ಲೇ ಅವಳ ಜತೆಯೇ ಇದ್ದನೆಂಬಂತೆ ಅವನು ಅನುಭವಿಸುವ ನೆನವರಿಕೆ. ಅವನ ಕಂದು ಬಣ್ಣದ ಕಣ್ಣಿನ ಆಪ್ಯಾಯತೆಯಲ್ಲಿ ಮಣ್ಣಿನ ಮೃದ್ಗಂಧ ಸೂಸುತ್ತಿತ್ತು. ಮೋಡ ಕವಿದಿದ್ದರೂ ಮಳೆಯಾಗದ ಹುರಿಗೊಂಡ ಹಗಲು ನೆರಳು ಬಿಸಿಲಿನಾಟದಲ್ಲಿ ಮಗ್ನವಾಗಿತ್ತು. ವೈಶಾಖದ ಬಿಸಿಲ ಧಗೆಗಳೆದು ಮುಂಗಾರಿನ ಹನಿಗೆ ಅನುರಣಿಸುವ ಮೋಹದ ಹಗಲು.
ನಿನ್ನ ಹುಡುಗ ನಿನ್ನ ಕಲ್ಪನೆಯಲ್ಲಿದ್ದಂತೆಯೇ ಇದ್ದಾನೋ ಇಲ್ಲವೋ……- ಎನ್ನುವ ಅವನು…..ನಿಜ ಹೇಳು ’ಅವತ್ತು ನೀನು ಸೈಕಲ್ ಮೇಲೆ ನನ್ನ ಹಿಂದೆ ಹಿಂದೆ ಬಂದದ್ದು’ ಹೌದೋ ಅಲ್ಲವೋ ? ನಿಜವಾಗಿಯೂ ನೆನಪಿಲ್ಲವಾ ? ಎಂದು ಪಾಟಿ ಸವಾಲು ಹಾಕಿ ಹಠಮಾಡುವ ಇವಳು. ತನಗೆ ನೆನಪಿದ್ದದ್ದು ಇವನಿಗೆ ನೆನಪಿಲ್ಲವೆನ್ನುವುದನ್ನು ಹೇಗೆ ನಂಬಬೇಕು ? ಮೂರು ದಶಕಗಳ ಹಿಂದಿನ ಮಾತನ್ನು ನೀ ಹೇಗೆ ನೆನಪಿಟ್ಟುಕೊಂಡೆಯೇ ಹುಡುಗಿ ಎನ್ನುವ ಅವನು – ಕೊನೆಗೂ ತುಂಟನಗುವಿನಲ್ಲಿ ಬಾಯಿ ಬಿಟ್ಟ – ಹಾಂ…ಬಂದದ್ದು ನೆನಪಿದೆ….ಆದರೆ ಆ ಹುಡುಗಿಯ ಮುಖವೇ ನೆನಪಾಗುತ್ತಿಲ್ಲ ಮಾರಾಯತೀ – ಎಂದರೆ ಇವಳು ಸರ್ರನೆ ಎಗರಿ ಅವನ ಕಿವಿ ಹಿಂಡಿ, ಕೆನ್ನೆ ಹಿಂಡಿ, ನೀಟಾಗಿದ್ದ ಕ್ರಾಪಿನ ಕೂದಲನ್ನೆಲ್ಲ ಬೆರಳಿಂದ ಚದುರಿಸಿ ಮೂಗಿನ ತುದಿಗೆ ಜಾರುತ್ತಿದ್ದ ಹುಸಿಗೋಪವನ್ನು ಅದುಮಿಕೊಂಡಳು. ಅವನ ನಗುವೆಲ್ಲಾ ಎಳೆ ಎಳೆಯಾಗಿ ಅವಳ ಮುಖದಲ್ಲಿ ಹರಡಿಕೊಂಡು ಅವನ ಕಣ್ಣಿನಲ್ಲಿ ಅವಳ ಹುಸಿ ನಗು ಪ್ರತಿಫಲಿಸುತ್ತಿತ್ತು. ಪ್ರೀತಿ ಹುಟ್ಟುವ ಅವನ ಸಂಭ್ರಮಗಳು, ಅಚ್ಚರಿಗಳು ಬೇರೆ. ಅವಳದೇ ಬೇರೆ.
ಪ್ರೀತಿಸಲು ಕಾರಣಗಳು ಬೇಕೇ ?? ಬೇಕಿಲ್ಲ ಎನಿಸುತ್ತದೆ. ಆದರೆ ಪ್ರೀತಿಯ ಸುಳಿವಾದರೂ ಬೇಕಲ್ಲ ! ತನಗೆ ಗೊತ್ತಿರದೇ ಹುಡುಗಿಯೊಬ್ಬಳು ಇಷ್ಟು ವರ್ಷ ತನ್ನನ್ನು ಪ್ರೇಮಿಸಿದ್ದಳು, ತನಗಾಗಿ ಕಾದಿದ್ದಳು ಎನ್ನುವ ಒಂದೇ ಸಂಭ್ರಮ ಅವನನ್ನು ಇಷ್ಟು ದೂರದ ಅವಳ ದಾರಿಗೆ ಕರೆತಂದಿದೆ. ಪ್ರೀತಿಯಲ್ಲಿ ಒಲಿಸಿಕೊಳ್ಳುವ, ಮಣಿಸಿಕೊಳ್ಳುವ ಆಗಾಧ ತಾಕತ್ತಿದೆಂದು ಗೊತ್ತಿತ್ತಾ? ಇಬ್ಬರ ಕಾತರದ ಕಾಯುವಿಕೆ ಮುಗಿದು ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದ ಖುಶಿ ಇಬ್ಬರಲ್ಲೂ. ಆಯ್ತು ನಿನ್ನ ಹುಡುಗ ಹೀಗಿರದೇ ….ಎಲ್ಲಾದರೂ ಕಳ್ಳನೋ, ಪೋಕರಿನೋ ಆಗಿದ್ದರೆ ನೀನು ಏನು ಮಾಡ್ತಿದ್ದೆ? ಆಗಲೂ ಹೀಗೆ ಸಿಗ್ತಿದ್ದೆಯ್ತಾ? ಕಾಲೆಳೆಯುವ ಅವನು. ಯಾಕಿಲ್ಲ…..ಸಿಕ್ಕೆ ಸಿಗ್ತಿದ್ದೆ…! ಅವಳದು ಅದೇ ಗತ್ತು.
ಕಾಲವೇ ಹೀಗೆ. ಬೊಗಸೆಯಲ್ಲಿ ಹಿಡಿದ ಆಲಿಕಲ್ಲಿನಂತೆ ಮೆಲ್ಲಗೆ ಕರಗಿ ಮಳೆ ಹನಿಯಂತೆ ಜಾರಿಹೋಗಿರುತ್ತದೆ. ಇಡೀ ಊರಿಗೆ ಊರೇ ಬದಲಾಗುತ್ತಿದೆ. ಮಣ್ಣಿನ ಮನೆಗಳು ಕಾಂಕ್ರೀಟ್ ನ ಹೊಸಕಳೆಯಲ್ಲಿ ಬೀಗುತ್ತಿವೆ. ಅವನ ಮನೆಯಿದ್ದ ಜಾಗದ ಪಕ್ಕದ ಸೈಟಲ್ಲಿ ಕೆಲಸ ನಡೆಯುತ್ತಿದೆ. ಪಾಳುಬಿದ್ದ ಗೋಡೆಗಳು, ಹೊಸ ಕಟ್ಟಡಕ್ಕಾಗಿ ಅಗೆದು ಹಾಕಿದ ಮಣ್ಣ ರಾಶಿಯ ಮುಂದೆ ನೆನಪುಗಳನ್ನು ಹರಡಿಕೊಂಡು ತಪಸ್ಸಿಗೆ ಕುಳಿತಂತೆ ಕೂತಿದ್ದಳು. ಮಂತ್ರವಶವಾದಂತೆ ಯಾವದೋ ಪೊಳ್ಳು ಕಾರಣ ಹಿಡಿದು ಇಲ್ಲಿಗೆ ಬಂದು ಕೂತು ಗತವನ್ನು ಧ್ಯಾನಿಸಿದ್ದಳು. ಯಾಕೆ ಕೆಲ ನೆನಪುಗಳು ಮಾಸುವುದಿಲ್ಲ ! ಈಗ ಬಿದ್ದ ಕನಸಿನಷ್ಟೇ ನಿಚ್ಚಳವಾಗಿರುತ್ತವೆ. ಪಾಳುಬಿದ್ದ ಮನೆಯ ಪಕ್ಕದಲ್ಲಿದ್ದ ಅವನ ಮನೆಯೂ ಅವನದಲ್ಲದ ಮನೆ…ಅವನದಲ್ಲದ ಊರಲ್ಲಿ ಅವನ ಹೆಜ್ಜೆ ಛಾಪುಗಳು ಅವಳೆದೆಯಲ್ಲಿ ನೆಲೆಯೂರಿದ್ದವು.
ಹೋಳಿಹುಣ್ಣಿವೆಯಂದು ಅವನು ಓಕುಳಿಯಾಡಿದ ಬಣ್ಣವೆಲ್ಲ ಅವಳ ಕಣ್ಣಲ್ಲೇ ಇಂಗಿಹೋದಂತಿದೆ. ಅವಳದೇ ಮನೆಯಂಗಳದ ಮೆದು ಮಣ್ಣಿನಲ್ಲಿ, ಸಾರಿಸಿದ ರಂಗವಲ್ಲಿ ನೆಲದಲ್ಲಿ ಅವಳವೇ ಕನಸುಗಳು ಚುಕ್ಕಿಗಳಾಗಿ ಯಾರ ತುದಿಬೆರಳ ಸ್ಪರ್ಶಕ್ಕಾಗಿ ಕಾಯುತ್ತಿದ್ದವೋ ಏನೋ! ಯಾರೂ ಬಾರದ ಅಂಗಳದಲ್ಲಿ ಅವಳದೇ ಕಿಟಕಿಯ ಗೂಡಲ್ಲಿ, ಮನಸಿನ ಹದ್ದು ಮೀರಿ ಅವನ ಮಾಡಿನ ಮೇಲೆ ಹಾರಿ ಹಾರಿ ಅವಳ ಬಣ್ಣ ಬಣ್ಣದ ಕನಸಿನ ಚಿಟ್ಟೆಗಳು ಗೂಡುಕಟ್ಟಿವೆ. ಈಗಲೂ ..ಈಗಂದರೆ ಈಗ ಸಧ್ಯಕ್ಕೇ ಏಏಏ….. ಅವಳ ಕಣ್ಣಿಗೆ ಕಟ್ಟಿದ ಎರಡು ಪುಸ್ತಕ ಹಿಡಿದು ಗಂಭೀರವಾಗಿ ಕಾಲೇಜಿಗೆ ಹೋಗುವ ಅವಳ ಹುಡುಗನ ಸೈಕಲ್ ಅಂಗಳಕ್ಕಿಳಿದು ಅವತ್ತಿನ ಇಳಿಸಂಜೆಯ ಹಾಗೆ, ಥೇಟ್…. ಅದೇ ಮುಗುಳ್ನಗುವಿನ ಮುಗ್ಧ ಸಂಜೆಗೆಂಪು ರಂಗಿನ ಬಣ್ಣ ಅಂಗಳತುಂಬ ಹಾಸಿರುತ್ತದೆ. ಎದೆಯಲ್ಲಿನ ಮಾತೆಲ್ಲ ಆಡಿ…ಮಾತಲ್ಲೇ ಕಾಡಿ ಬೇಡಿ,…ಮಾತೇ ಮರೆತ ಮೌನವೊಂದು ಕಡಲಿನಾಳಕ್ಕಿಳಿದು ಮುತ್ತುಗಳನ್ನೆಲ್ಲಾ ಹೆಕ್ಕಿ ತೆಗೆದ ಮನಸುಗಳನ್ನು ಬೆಸೆದರೂ ಎದೆಗಿಳಿದ ದನಿಯೊಂದು ಕಾಡುತ್ತಲೇ ಇದೆ…….







Lahari eshtu chendavide renuka ..:))))))
ನವಿರಾದ ಭಾವನೆಗಳನ್ನು ನುಡಿಯಲ್ಲಿ ಬಿಚ್ಚಿಡುವ ಯಶಸ್ವಿ ಪ್ರಯತ್ನ.