ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡು ಹಕ್ಕಿಯ ಹಾದಿನೋಟ : ಒಂದು ಬೇಟೆಯ ವೃತ್ತಾಂತ

ಹೊಳೆಯಿಂದ ಎಮ್ಮೆ ಗುಂಡಿ ಹರೆಗೆ ಅರ್ಧಮೈಲಿ ದೂರ. ಆದರೆ ಕಡಿದಾದ ಏರು ದಾರಿಯಲ್ಲಿ ಪರ್ವತಾರೋಹಣ ಮಾಡುವವರಂತೆ ನಡೆದು ಬರಲು ಅರ್ಧಗಂಡೆಯೇ ಹಿಡಿಯಿತು. ಮೀನಿನ ಖಂಡ ಹಾಗೂ ತೊಡೆಯ ಸ್ನಾಯುಗಳಲ್ಲಿ ಸೆಳೆತ ಉಂಟಾಗಿತ್ತು. ದಿನವೂ ತಿರುಗಾಡಿ ರೂಢಿಯಲ್ಲಿದ್ದ ಅನುಭವಸ್ಥರು ಆಗಲೇ ಮುಂದೆ ಹೋಗಿದ್ದರು. ಉಳಿದಿದ್ದವರು ‘ಸುಸ್ತಾಗಿದೆ. ಒಂದರ್ಧ ಗಂಟೆಯಾದರೂ ಇಲ್ಲಿ ಕುಳಿತು ಸುಧಾರಿಸಿಕೊಂಡು ಹೋಗೋಣ’ ಎಂದರು. ಬೆಳಗ್ಗೆ ಕುಳಿತಿದ್ದ ಸ್ಥಳವನ್ನು ಬಿಟ್ಟು ಬಲಕ್ಕೇ ತಿರುಗಿ ಬಂಡೆಯ ತುದಿಯ ಪ್ರಶಸ್ತ ಸ್ಥಳವನ್ನು ಆಯ್ದು ಕುಳಿತೆವು. ಅದರ ತಗ್ಗಿನಲ್ಲಿ ನಾವು ಕುಳಿತ ಬೆಟ್ಟದುದ್ದಕ್ಕೂ ಕಣಿವೆಯಲ್ಲಿರುವ ಕಾಡೇ ನಾವು ಹೋಗಿ ಬಂದ ಕಾರೇಕಾಯಿ ಹಡ್ಲು. ಅದರ ಪಕ್ಕದಲ್ಲೇ ಹರಿಯುವ ಹೊಳೆ ಅಲ್ಲಲ್ಲಿ ಕಾಡಿನ ಮದ್ಯೆ ಕಾಣುತ್ತಿದೆ. ನಮ್ಮೆದುರಿನ ಬಲತುದಿಯ ಕಣಿವೆಯಲ್ಲಿ ತೊಟ್ಟಿಲು ಅಬ್ಬಿ ಮಸುಕಾಗಿ ಕಾಣುತ್ತಿದೆ. ಎದುರಿಗೇ ಎತ್ತರದಲ್ಲಿ ಪುಷ್ಪಗಿರಿಯಿಂದ ಹಿಡಿದು ಅರಮನೆ ಗುಡ್ಡದವರೆಗೆ ಹರಡಿರುವ ಗಿರಿಶ್ರೇಣಿ. ಆ ಸುಂದರ ಪರಿಸರದಲ್ಲಿ ದೂರದಿಂದ ಬೀಸಿಬರುವ ತಂಗಾಳಿಗೆ ಮೈಯೊಡ್ಡಿ ಕುಳಿತಿದ್ದ ನಮ್ಮೆಲ್ಲರ ಮನಸ್ಸೂ ಪುಳಕಿತವಾಗಿದ್ದವು.
 
ಒಳ್ಳೇಯ ಊಟ. ಬೆಳಗಿನಿಂದ ತಿರುಗಾಡಿದ ಆಯಾಸ. ತೂಕಡಿಕೆ ಸುಳಿದಾಡ ತೊಡಗಿತು. ದೇವರು ಮಕ್ಕಳ ಅಬ್ಬಿ ಎಂಬ ವಿಶಿಷ್ಟ ಹೆಸರಿನ ಐತಿಹ್ಯ ತಿಳಿಯಲು ಕಾತರರಾಗಿದ್ದ ಅವರೆಲ್ಲಾ ಕಣ್ಣಗಲಿಸಿ ನನ್ನ ಮುಖವನ್ನೇ ದಿಟ್ಟಿಸತೊಡಗಿದರು. ನನಗೆ ಅರ್ಥವಾಯಿತು. ಮಾತನಾಡತೊಡಗಿದೆ. ಇತಿಹಾಸ, ಅದರಲ್ಲೂ ಜಾಗತಿಕ ಇತಿಹಾಸ ಗೊತ್ತಿದ್ದವರಿಗೆ ಜನಾಂಗೀಯ ದ್ವೇಷದ ಬಗ್ಗೆ, ಅದರ ಪರಿಣಾಮವಾಗಿ ಕ್ರೌರ್ಯಕ್ಕೇ ತುತ್ತಾದ ಅಮಾಯಕರ ಬಗ್ಗೆ ತಿಳಿದೇ ಇರುತ್ತದೆ. ಅಷ್ಟು ಹಿಂದೆ ಯಾಕೆ? ಇತ್ತೀಚೆಗೆ ಗುಜರಾತಿನಲ್ಲಿ ಅಟ್ಟಹಾಸ ಮೆರೆದ ಮತೀಯ ದ್ವೇಷ, ತತ್ಪರಿಣಾಮವಾಗಿ ನಡೆದ ನರಮೇಧ ಯಾರಿಗೆ ತಿಳಿದಿಲ್ಲ!…. ‘ಇತಿಹಾಸ, ಜಂನಾಗೀಯ ದ್ವೇಷ, ನರಮೇಧ ಇಂತಹಾ ಗಂಭೀರ ವಿಚಾರ ಈಗ್ಯಾಕೆ? ನಮಗೆ ಈ ಹೊಳೆಯ ಅಬ್ಬಿಗಳಿಗೆ ಬಂದ ಹೆಸರಿನ ಹಿನ್ನಲೆ ಹೇಳಿ ಅಷ್ಟೇ ಸಾಕು’ ಎಂದು ನನ್ನ ಮಾತನ್ನು ತುಂಡರಿಸಿದರು.
ನಾವು ಚಿಕ್ಕವರಿದ್ದಾಗ ನಮ್ಮೂರಿನಲ್ಲಿ ಸಾಕಷ್ಟು ವಿಶಾಲವಾಗಿದ್ದ ಹಳೆಯ ಮನೆಯೊಂದಿತ್ತು. ‘ಸೀತೆ ಮನೆ’ ಎಂದು ಎಲ್ಲರೂ ಕರೆಯುತ್ತಿದ್ದ ಆ ಮನೆಯ ಹೆಸರು ನಮಗೆ ಕೌತುಕ ಹುಟ್ಟಿಸುತ್ತಿತ್ತು. ಆಮನೆಯಲ್ಲಿ ಯಾರೂ ಖಾಯಂ ಆಗಿ ವಾಸವಾಗಿದ್ದನ್ನು ನಾವು ಕಂಡಿರಲಿಲ್ಲ. ಮಳೆಗಾಲದಲ್ಲಿ ತೋಟದ ಕೆಲಸಕ್ಕಾಗಿ ಕೇರಳದಿಂದ ಬರುತ್ತಿದ್ದ ನಾಯಮ್ಮೂರರ ಬಿಡಾರವಾಗುತ್ತಿದ್ದ ಸೀತೆಮನೆ ರಾತ್ರಿಯ ಹೊತ್ತು ಊರ ಕೆಲವರು ಸೋಮಾರಿಗಳ ಇಸ್ಪೀಟ್ ಅಡ್ಡೆಯಾಗುತ್ತಿತ್ತು.
 
ಆ ಮನೆ ಯಾರದು? ಅದರಲ್ಲಿ ಯಾಕೆ ಯಾರೂ ಬಹಳ ಕಾಲದಿಂದ ವಾಸವಾಗಿಲ್ಲ? ಅದನ್ನು ಸೀತೆಮನೆ ಎಂದು ಯಾಕೆ ಕರೆಯುತ್ತಾರೆ? ಎಂಬ ಕುತೂಹಲ ನಮ್ಮನ್ನು ಕಾಡುತ್ತಿತ್ತಾದರೂ, ಆ ಕುತೂಹಲ ತಣಿಸಿಕೊಳ್ಳಲು ಕಾಲೇಜು ದಿನಗಳವರೆಗೂ ಕಾಯಬೇಕಾಯಿತು. ಸೀತೆ ಎಂದರೆ ಯಾರು? ಈ ಊರಲ್ಲಿ ಯಾರ ಪೈಕೆ? ಎಂದು ಹಿರಿಯರ ಮುಂದೆ ಪ್ರಶ್ನೆ ಮುಂದಿಟ್ಟಿದ್ದೆವು. ಆಕೆ ಯಾರ ಪೈಕಿಯೂ ಅಲ್ಲ. ಅಸಲಿಗೆ ನಮ್ಮ ಜಾತಿಯೇ ಅಲ್ಲ. ದೇವರಮಕ್ಕಳು! ಉತ್ತರ ಕೇಳಿ ಅಚ್ಛರಿಯಾಗಿತ್ತು.

ನಮ್ಮೂರಲ್ಲಿ ಗೌಡರನ್ನು ಬಿಟ್ಟರೆ ಬೇರೆ ಯಾವುದೇ ಜಾತಿಯವರಿಲ್ಲ. ಊರಿಂದ ಎರಡು ಮೈಲಿ ದೂರದಲ್ಲಿ ಊರಿಗೆ ಸೇರಿದ ಜಾಗದಲ್ಲಿ ‘ಪಾಲೆ’ ಎಂಬ ದಲಿತ ಜನಾಂಗದವರು ಗುಡಿಸಲು ಕಟ್ಟಿಕೊಂಡಿದ್ದಾರೆ ಅಷ್ಟೇ. ಈ ನಡುವೆ ಊರೋಳಗೆ ದೇವರು ಮಕ್ಕಳ ಮನೆ ಹೇಗೆ ಬಂತು? ಅವರಲ್ಲೂ ಅದಕ್ಕೆ ಉತ್ತರ ಇರಲಿಲ್ಲ. ಆ ಪ್ರದೇಶದ ಅಷ್ಟಿಷ್ಟು ಇತಿಹಾಸಬಲ್ಲ ಒಬ್ಬ ಹಿರಿಯನ ಹೆಸರು ಹೇಳಿ ಕೈತೊಳೆದುಕೊಂಡರು. ಇದೇನು ಸತ್ಯವೋ ಸುಳ್ಳೊ ನೀವೇ ವಿಚಾರ ಮಾಡಿಕೊಳ್ಳಿ. ನಾನೂ ಅವರಿವರಿಂದ ಕೇಳಿ ತಿಳಿದುಕೊಂಡಿರುವುದು. ಹಿರಿಯರು ಮಾತಿಗೆ ತೊಡಗಿದರು. ಇದು ಇತ್ತೀಚಿನ ತಲೆಮಾರಿನ ವಿಚಾರವಲ್ಲ. ಈ ಊರು ಆರಂಬವಾದಾಗಿನ ತಲೆಮಾರುಗಳ ಕತೆ ಇರಬಹುದು. ಇಲ್ಲಿ ಕಾಡು ಕಣಿವೆ ಬೆಟ್ಟಗುಡ್ಡ, ನದಿ ಜಲಪಾತ ಎಲ್ಲವೂ ಪ್ರಕೃತಿದತ್ತವಾಗಿ ಮೊದಲಿನಿಂದಲೂ ಇದ್ದವು. ಇಲ್ಲಿ ಬದುಕು ಕಾಣಬಹುದೆಂದು ಬಂದು ನೆಲೆ ನಿಂತವನು ಒಬ್ಬ ಗೌಡ. ಅವನಿಗೊಂದು ಸಂಸಾರ, ಮಕ್ಕಳು ಮರಿ ಆದವು.
‘ಹಾಳೂರಿಗೆ ಇದ್ದವನೇ ಗೌಡ’ ಎಂಬಂತೆ ಆ ಪ್ರದೇಶಕೆಲ್ಲಾ ಅವನೇ ಪಾಳೇಗಾರ. ಪಾಳೆಗಾರ ಎಂದ ಮೇಲೆ ಅವನಿಗೆ ಸಹಾಯಕರು ಬೇಡವೇ! ಗೌಡರ ಜಾತಿಯದೇ ಉಪಜಾತಿಯಂತಿದ್ದ ದೀವರ ಮಕ್ಕಳು ಪಂಗಡದ ಒಬ್ಬಬನ್ನು ಕರೆಸಿಕೊಂಡ ಅವನಿಗೂ ಸಂಸಾರ ಮಕ್ಕಳು ಆದವು. ಬೈನೆಯಿಂದ ಸೇಂದಿ ಇಳಿಸುವ ಕಸುಬು ಇವನಿಗೆ ಗೊತ್ತಿದ್ದರಿಂದ ಗೌಡನಿಗೆ ಅನುಕೂಲವೇ ಆಯಿತು. ಊರಿಂದ ಎರಡು ಮೈಲಿದೂರದಲ್ಲಿ ನೆಲೆನಿಂತಿದ್ದರು ಪಾಲೆಯವರು! ಘಟ್ಟದ ಕೆಳಗಿನಿಂದ ಬಂದಿದ್ದ ಆ ತುಳುಮಾತಿನ ದಲಿತರು ಗೌಡರ ವ್ಯವಸಾಯದ ಕೂಲಿ ಕೆಲಸಕ್ಕೆಂದೇ ನಿಯಮಿತವಾಗಿದ್ದರು. ತೋಟಗದ್ದೆಯ ಕೆಲಸಕ್ಕೇ ಪಾಲೆಯವರು! ಸೇಂದಿ ಇಳಿಸಿ ಕೊಡುತ್ತಾ ವ್ಯವಹಾರಕ್ಕೇ ಸಹಾಯವಾಗಲು ದೇವರ ಮಕ್ಕಳು! ಇನ್ನೇನಾಗಬೇಕು? ಕೋವಿ ಹೆಗಲು ಮೇಲೆ ಹಾಕಿಬೆಟ್ಟಗುಡ್ಡ ಅಲೆಯುತ್ತಾ, ಕಾಡುಪ್ರಾಣಿಗಳ ಬೇಟೆಯಾಡುತ್ತಾ, ಕಾಲು ಬುಡಕ್ಕೇ ಬರುತ್ತಿದ್ದ ಸೇಂದಿ ಸಾರಾಯಿ ಕುಡಿಯುತ್ತಾ ನಿಜದ ಪಾಳೇಗಾರನಂತೇ ನಡೆದುಕೊಳ್ಳುತ್ತಿದ್ದರು ಗೌಡರು.

ವರ್ಷಗಳು ಕಳೆಯುತ್ತಾ ಹೋದಂತೆ ಮನೆ ತುಂಬಾ ಮಕ್ಕಳಾದರು ಸಂಸಾರ ಟಿಸಿಲೊಡೆದು ಊರಾಯಿತು. ಮೊದಲ ಗೌಡರ ಕಾಲ ಮುಗಿದಿತ್ತು. ಇವರೆಲ್ಲೂ ಪಾಳೇಗಾರಿಕೆಯ ರಕ್ತ ಹರಿಯುತ್ತಿತ್ತು. ಅಂತೆಯೇ ದೇವರ ಮಕ್ಕಳದೂ ಒಂದು ಸಣ್ಣ ಕೇರಿಯಾಯಿತು. ಕಾಡಿನ ದೊಡ್ಡ ದೊಡ್ಡ ಹನಾಲುಗಳು ಗೌಡರ ಕುಂಡುಬಗಳ ಕೈವಶವಾಗಿದ್ದವು. ಕಾಡಿನಲ್ಲಿ ಹನಾಲುಗಳಲ್ಲಿ ಯಾಲಕ್ಕಿ ಗಿಡ ಕೂರಿಸಿ ಫಸಲು ತೆಗೆದುಕೊಡಲು, ತಗ್ಗಿನಲ್ಲಿ ಗದ್ದೆ ಮಾಡಿ ಭತ್ತಬೆಳೆದು ಕಣಜ ತುಂಬಲು ಪಾಲೆಯವರು ಇದ್ದೇ ಇದ್ದರು. ಊರ ಸಮೀಪದಲ್ಲಿ ಅಳಿದುಳಿದ ಸಣ್ಣ ಪುಟ್ಟ ಜಾಗಗಳನ್ನು ದೀವರ ಮಕ್ಕಳು ವ್ಯವಸಾಯಕ್ಕೇ ಬಳಸಿಕೊಳ್ಳ ತೊಡಗಿದರು. ಸಂಸಾರದಲ್ಲಿ ಗಂಡ ಹೆಂಡಿರು ಮಕ್ಕಳೆಲ್ಲಾ ದುಡಿಯುತ್ತಿದ್ದರು. ಬಿಡುವಿನಲ್ಲಿ ಹೆಂಗಸರು ಏಡಿ ಮೀನು ಹಿಡಿಯುತ್ತಿದ್ದರು. ಗಂಡಸರು ಇಡಿಚಲು, ಕಣಕಲು ಮುಂತಾದವುಗಳನ್ನೂ ಕಾಡುಪ್ರಾಣಿಗಳು ತಿರುಗಾಡುವ ದಾರಿಗಳಲ್ಲಿ ಒಡ್ಡಿ ಅವುಗಳ ಬೇಟೆಯಾಡುತ್ತಿದ್ದರು. ಹಾಗಾಗಿ ಅವರಿಗೆ ಯಾವಾಗಲೂ ಪುಷ್ಕಳ ಆಹಾರ. ಯಥೇಚ್ಛವಾಗಿ ಸಿಗುತ್ತಿದ್ದ ಮೀನು ಮಾಂಸವನ್ನು ಒಣಗಿಸಿ ಸಂಡಿಗೆ ಮಾಡಿ ಮಳೆಗಾಲದಲ್ಲಿ ಉಪಯೋಗಿಸುತ್ತಿದ್ದರು.
ಹಗಲಿರುಳೂ ಸ್ವಂತ ಜಮೀನಿನಲ್ಲಿ ದುಡಿಮೆ. ಸಂಜೆಯಯಿತೆಂದರೆ ಸೇಂದಿ ಜತೆಗೆ ಹೊಟ್ಟೆ ತುಂಬಾ ಸ್ವಾದಿಷ್ಟೂ ಊಟ. ರಾತ್ರಿಯಿಡೀ ಕಾಣ್ತುಂಬ ನಿದ್ದೆ. ಇನ್ನೇನು ಬೇಕು? ಯಾವುದೇ ರೋಗ ರುಜೀನಗಳಿಲ್ಲದೆ ದೃಡಕಾಯರಾಗಿರಲು! ಹೆಂಗಸರಂತೂ ಮೈಕೈ ತುಂಬಿಕೊಂಡಿದ್ದು ಆಕರ್ಷಕ ಸುಂದರಿಯರಾಗಿ ಕಂಗೊಳಿಸುತ್ತಿದ್ದರು. ಈ ಕಡೆ ಗೌಡರದೋ ಎಲ್ಲವೂ ಆಳಿನ ಮೇಲೆ ಅವಲಂಬನೆ, ಅವರಿಷ್ಟದಂತೆ ವ್ಯವಸಾಯ ವ್ಯವಹಾರ ಎಲ್ಲಾ. ಗೌಡರುಗಳಂತೂ ತೋಟಗದ್ದೆಗಳ ಕಡೆ ಸುಳಿಯುತ್ತಲೂ ಇರಲಿಲ್ಲ. ಏನು ನಡೆಯುತ್ತಿದೆ ಎಂದು ತಿಳಿಯಲು ಅವರ ಹೆಂಗಸರುಗಳೇ ತೋಟಗದ್ದೆಗಳಿಗೆ ಹೋಗಬೇಕು. ಹಗಲಿರುಳೂ ತೋಟಗದ್ದೆ ತಿರುಗಿ ಸುಸ್ತಾದ ಅವರು ರಾತ್ರಿಯಿಡೀ ಮದವೇರಿದ ಗಂಡಸರಿಗೆ ಮೈಯೊಡ್ಡಿಕೊಂಡು ಸತತವಾಗಿ ವರ್ಷಕ್ಕೊಂದನ್ನು ಹೆರಬೇಕು. ಹಾಗಾಗಿ ಯೌವನ ಕಳೆಯುವ ಮೊದಲೇ ಮುದುಕಿಯಾಗಿ ಹೋಗುತ್ತಿದ್ದರು.
ತಮ್ಮ ಸೊರಗಿದ ಹೆಂಗಸರು, ಬರಕತ್ತಾಗದ ತೋಟಗಳು, ಇನ್ನೋಂದೆಡೆ ತಮ್ಮ ಸಹಾಯಕ್ಕೆಂದೇ ಬಂದು ಸೇರಿದ ದೀವರ ಮಕ್ಕಳ ಕಂಗೊಳಿಸುವ ತೋಟಗಳು, ಆರೋಗ್ಯ ತಂಬಿದ ಕಳೆಕಳೆಯಾದ ಅವರ ಹೆಂಗಸರು. ಹೊಟ್ಟೆಕಿಚ್ಚು ಹುಟ್ಟಲು ಇನ್ನೇನು ಬೇಕು! ಅವರ ಹೆಂಗಸರನ್ನು ಇಲಿಸಿಕೊಳ್ಳಲು ನೋಡಿದರು. ಅವರ ಹರಿತವಾದ ಬೈನೆಕುಡಲು ಹಾಗೂ ಮುಂಡಗತ್ತಿಗಳು ನೆನಪಾಗಿ ಹಿಂಜರಿದರು. ಅವರನ್ನೆಲ್ಲಾ ಊರು ಬಿಡಿಸಿ ಅವರ ತೋಟಗದ್ದೆಗಳನ್ನೂ ತಮ್ಮದಾಗಿಸಿಕೊಳ್ಳಲು ಅಲವಾರು ಉಪಾಯಗಳನ್ನು ಹೂಡಿದರು. ಸಫಲವಾಗಲಿಲ್ಲ. ಹೊಟ್ಟೆಕಿಚ್ಚು ದ್ವೇಷಕ್ಕೇ ತಿರುಗಿತು! ದ್ವೇಷದ ಕಿಡಿ ಜ್ವಾಲೆಯಾಗಲು ಹೆಚ್ಚು ಕಾಲ ಬೇಕಾಗಲಿಲ್ಲ. ಗುಟ್ಟಾಗಿ ಗೌಡರ ಸಭೆ ಸೇರಿತು. ದೀವರ ಮಕ್ಕಳನ್ನೂ ಮುಗಿಸುವ ಬಗ್ಗೆ ಚರ್ಚೆಯಾಯಿತು. ಯೋಜನೆ ಸಿದ್ಧವಾಯಿತು. ಮ್ಯಾರನ ಕುಂಬ್ರಿ ಹನಾಲಿಗೆ ಒಂಟಿಗ ಹಂದಿ ಬಂದಿದೆ. ಭಾರೀ ಬಲವಾದ ಹಂದಿ. ಎಂಟಾಳು ಹೊರೆ ಇರಬಹುದು. ಅದರ ಹೆಜ್ಜೆ ಗುರುತು ನೋಡಿದರೆ ಕೋಣದ ಗೊರಸು ಇದ್ದ ಹಾಗೆ ಇದೆ. ಸುದ್ಧಿ ಹಬ್ಬಿಸಿ ಎಲ್ಲರ ಬಾಯಲ್ಲಿ ನೀರೂರುವಂತೆ ಮಾಡಿದರು.
ಬೆಳಗ್ಗೆನೇ ಊರ ಗಂಡಸರೆಲ್ಲಾ ಬೇಟೆಗೆ ಹೊರಡಬೇಕು. ಕಾಡು ಸೋಸದಿಕ್ಕೆ ಜನ ಸಾಲದಿಲ್ಲ. ಊರಿನ ಎಲ್ಲ ಗಂಡು ಮಕ್ಕಳು ಹೊರಡಬೇಕು ಗೌಡರ ಪಡೆಯ ಆದೇಶವಾಯಿತು! ಎಂಟಾಳು ಹೊರೆಯ ಹಂದಿ! ಏನಿಲ್ಲವೆಂದರೂ ಹತ್ತು ಮಣಮಾಂಸ. ಒಂದೊಂದು ಸಾಲಿಗೆ ಎರಡು ಸೇರು! ಯಾಕೆ ಬಿಡಬೇಕು. ಸಣ್ಣ ಮಕ್ಕಳೂ ಹೊರಟರು. ಪ್ರತಿ ಗೌಡರ ಮನೆಯಲ್ಲೂ ಕೇಪಿನಕೋವಿ ಇತ್ತಲ್ಲ. ಅವರೆಲ್ಲಾ ಗಾಟು ತುಂಬಿಸಿದ ಕೋವಿ ಹಿಡಿದು ಮುಂದೆ ದೊಡ್ಡ ಅಬ್ಬಿಯ ಕಡೆ ಹೋಗಿ ಅಲ್ಲಲ್ಲಿ ನಿಗಧಿಯಾದ ಗಂಡಿಯಲ್ಲಿ ಉಳಿಕೂರುವುದೆಂದಾಯಿತು. ದೀವರ ಮಕ್ಕಳೆಲ್ಲಾ ಈಟಿ ಕತ್ತಿ ಹಿಡಿದು ಮ್ಯಾರನ ಕುಂಬಿ ನೆತ್ತಿಯಿಂದ ಹಂದಿ ಏಳಿಸುವುದೆಂದು ನಿರ್ಧಾರವಾಯಿತು. ಅವರ ಮಕ್ಕಳೂ ಅವರನ್ನೂ ಹಿಂಬಾಲಿಸುವುದೆಂದಾಯಿತು. ಗೌಡರ ಇನ್ನೊಂದು ಗುಂಪು ಒಂದೆರಡು ಕೋವಿ ಹಿಡಿದು ಮಕ್ಕಳನ್ನು ಕರೆದುಕೊಂಡು ಹಂಚಿನ ಹನಾಲು ಕಡೆಯಿಂದ ಕಾಡು ನುಗ್ಗಿ ಅಬ್ಬಿಯ ದಿಕ್ಕಿಗೆ ಕಾಡು ಹೊಡೆಯುವುದು. ಆಕಡೆ ಕಾಡೆಬ್ಬಿಸುವಾಗ ಹಂದಿಯೇನಾದರೂ ಅಡ್ಡತಿರುಗಿದರೆ ಈ ಕಡೆ ಓಡುತ್ತದೆ. ಗುಂಡಿಕ್ಕುವುದು.
ಆದರೆ ಆ ಕಾಡಿನಲ್ಲಿ ಹಂದಿಯೇ ಇರಲಿಲ್ಲ ಎಂಬುದು ಗೌಡರ ಪಡೆಗೆ ಮಾತ್ರ ತಿಳಿದ ಗುಟ್ಟಾಗಿತ್ತು! ಎಲ್ಲವೂ ಯೋಜನೆಯಂತೆಯೇ ನಡೆಯತೊಡಗಿತ್ತು. ಮ್ಯಾರನ ಕುಂಬ್ರಿಯ ಕಾಡು ಹೊಕ್ಕ ದೀವರ ಪಡೆ ಬೊಬ್ಬೆ ಹಾಕುತ್ತಾ, ಟೊಳ್ಲು ಮರ ಬೈನೆ ದಬ್ಬಲುಗಳಿಗೆ ದೊಣ್ಣೆಯಿಂದ ಬಡಿದು ಸದ್ದು ಮಾಡುತ್ತಾ ಅಬ್ಬಿಯ ದಿಕ್ಕಿನಲ್ಲಿ ಇಳಿಮುಖನಾಗಿ ಅರ್ಧದೂರ ಬಂದಿತ್ತು. ಹಿಂದುಗಡೆ ಹಂಚಿನ ಹನಾಲು ಕಾಡಿನ ಕಡೆಯಿಂದಲೂ ಬೊಬ್ಬೆ ಕೇಳಿ ಬರುತ್ತಿತ್ತು. ಆ ಕಡೆಯಿಂದ ಗುಂಡಿನ ಸದ್ದಾಯಿತು. ‘ಹಂದಿಗೆ ಗುಂಡು ಬಡಿದಿದೆ. ಕೆರಳಿದ ಹಂದಿ ಆ ಕಡೆಯೇ ಬರುತ್ತಿದೆ. ಓಡಿ ಓಡಿ’ ಎಂಬ ಬೊಬ್ಬೆ ಕೇಳತೊಡಗಿತು. ಕಾಡಿನ ನಡುವೆ ಸಿಲಿಕಿಕೊಂಡಿದ್ದ ದೀವರ ಮಕ್ಕಳ ಗುಂಪು ಬೆಚ್ಚಿ ಬೆವರಿತು. ಒಂದು ತಿಂಗಳ ಹಿಂದಷ್ಟೇ ಜೇಡಗದ್ದೆಯ ಬೇಟೆಗಾರನೊಬ್ಬ ಕೆರಳಿದ ಹಂದಿಯ ದಾಳಿಗೆ ಸಿಲುಕಿ ಭೀಕರ ಸಾವು ಕಂಡದ್ದನ್ನು ಕೇಳಿದ್ದರು. ಆ ಹಂದಿ ಕೋರೆಯಿಂದ ಆತನ ತೊಡೆಯನ್ನು ಸಿಗಿದು ಹಾಕಿತ್ತು. ಹೊಟ್ಟೆಯ ಭಾಗಕ್ಕೆ ಕೋರೆ ನೆಟ್ಟು ಅವನನ್ನು ಮೇಲೆತ್ತಿ ಕೊಡವಿತತು. ಕರುಳೆಲ್ಲಾ ಚಲ್ಲಾಡಿ ಆತ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣಬಿಟ್ಟಿದ್ದ!
ಹಂದಿಯ ದಾಳಿಯಿಂದ ಪಾರಾಗಲು ಗುಂಪು ಮಕ್ಕಳ ಮರಿಗಳನ್ನು ಎಳೆದುಕೊಂಡು ಕಾಡು ಮುಳ್ಲು ಎನ್ನದೆ ಉಸಿರುಕಟ್ಟಿ ಓಡತೊಡಗಿದರು. ಕೆಲವರು ಬಳ್ಳಿ ತೊಡರಿ ಮಗುಚಿ ಬಿದ್ದರು. ಮತ್ತೆ ಎದ್ದು ಓಡಿದರು. ‘ಓಡಿ ಓಡಿ’ ಹಿಂದಿನಿಂದ ಕೂಗು ಕೇಳಿ ಬರುತ್ತಲೇ ಇತ್ತು. ‘ಎಡಕ್ಕೆ ತಿರುಗಿ, ದೀಣೆಗೆ ಹತ್ತಿ, ಇಳಿಮುಖನೆ ಅಬ್ಬಿಯ ಕಡೆ ಓಡಿ’ ಹಿಂದಿದ್ದ ಗುಂಪಿನ ನಿರ್ದೇಶನದಂತೆಯೇ ಓಡಿದರು. ಬೆನ್ನಟ್ಟಿಬರುವ ಮೃತ್ಯು ಸ್ವರೂಪಿಯಾದ ಹಂದಿಯನ್ನು ಕಲ್ಪಸಿಕೊಂಡಿದ್ದರು. ಅದರಿಂದ ತಾವೂ ಹಾಗೂ ತಮ್ಮ ಮಕ್ಕಳು ಪಾರಾಗಲು ಓಡಿದರು. ಆದರೆ ತಾವು ಮ್ರತ್ಯುರೂಪದೆಡೆಗೆ ಓಡುತ್ತಿದ್ದೇವೆಂಬುದು ಅವರಿಗೆ ಅರಿವಾಗಲೇ ಇಲ್ಲ! ದೀಣೆಯಲ್ಲಿ ಇಳಿಮುಖನೆ ಓಡಿದರು. ಇನ್ನು ಸ್ವಲ್ಪವೇ ದೂರ. ಅಬ್ಬಿಯ ಎಡಬದಿಯಲ್ಲಿ ಮೇಲೆದ್ದ ನಲವತ್ತು ಅಡಿ ಎತ್ತರದ ಬಂಡೆ. ಗುಂಪು ಇನ್ನೊಂದು ಇಪ್ಪತ್ತು ಮಾರು ಓಡಿದರೆ ಆ ಬಂಡೆಯ ತುದಿ ತಲಪುತ್ತದೆ. ಅದರ ಕೆಳಗೆ ಪ್ರಪಾತದಲ್ಲಿ ಅಬ್ಬಿ. ದೀಣೆಯ ಅಂಚಿನಲ್ಲಿ ಬಂಡೆ ಇನ್ನೆರಡು ಮಾರು ಇದೆ ಎನ್ನುವಾಗ ಒಂದು ಒಂಟಿ ಹೊನ್ನೆಮರ ಬೆಳೆದು ನಿಂತಿದೆ. ‘ಓಡಿ ಓಡಿ ಆ ಮರ ಹತ್ತಿಕೊಳ್ಳಿ’ ಹಿಂದಿನಿಂದ ಬರುತ್ತಿದ್ದ ಗುಂಪು ಕೂಗು ಹಾಕಿತು. ಹಿಂದಿನಿಂದ ಕೆರಳಿದ ಹಂದಿ! ಮುಂದೆ ಪ್ರಪಾತ! ಬೇರೆ ದಾರಿಯಿಲ್ಲ. ಎದ್ದೆವೊ ಬಿದ್ದೆವೋ ಎಂದು ಮರ ಏರ ತೊಡಗಿದರು. ಮಕ್ಕಳನ್ನು ದೊಡ್ಡವರು ತಮ್ಮ ಸೊಂಟದ ಒಡ್ಯಾಣ ಹಿಡಿದುಕೊಳ್ಳುವಂತೆ ಹೇಳಿದರು.

ನೋಡ ನೋಡುತ್ತಿದ್ದಂತೆ ಇಡೀ ಗುಂಪು ಮರವೇರಿ ಕೊಂಬೆಗಳ ಮೇಲೆ ಕುಳಿತುಕೊಂಡಿತು. ಆಗ ಪೊದೆಗಳ ಮರೆಯಿಂದ ಒಬ್ಬ ಕೊಡಲಿ ಹಿಡಿದು ಹೊರಬಂದ. ಅವನು ಮರದೆಡೆಗೆ ನಡೆದು ಬರುವುದನ್ನು ಮೇಲಿದ್ದವರು ಭಯಕಾತರದಿಂದ ನೋಡಿದರು. ಅವರು ಮುಂದೇನು ಎಂದು ಯೋಚಿಸುವಷ್ಟರಲ್ಲೇ ಮರದ ಕಾಂಡಕ್ಕೆ ಮೇಲ್ಬದಿಯಿಂದ ಬಿರುಸಾಗಿ ನಾಲ್ಕಾರು ಏಟು ಹಾಕಿದ. ಅವನು ಬೆಳಗ್ಗೆಯೇ ಬಂದು ಕಾಡಕ್ಕೇ ಅಬ್ಬಿಯು ಕಡೆ ಬಾಗತೊಡಗಿತು. ಕೊಂಬೆಯ ಮೇಲೆ ಕುಳಿತವರೆಲ್ಲಾ ಬೀಸಿ ಒಗೆದಂತೆ ರಾತ್ರಿಯ ಮಳೆಗೆ ಅಬ್ಬರದಿಂದ ದುಮ್ಮಿಕ್ಕುತ್ತಿದ್ದ ಅಬ್ಬಿಯ ನೀರಿನ ಪ್ರವಾಹಕ್ಕೆ ಬಿದ್ದರು ಮೃತ್ಯು ಒಬ್ಬರನ್ನು ಬಡದಂತೆ ಸೆಳೆದೊಯ್ದಿತು! ಎಲ್ಲೆಡೆ ಚದುರಿ ಹೋಗಿದ್ದವರು ಕೆಲವೇ ನಿಮಿಷಗಳಲ್ಲಿ ಅಬ್ಬಿಯ ಸನಿಹ ದೀಣೆಯಲ್ಲಿ ನೆರೆದರು.
ತಮ್ಮೊಂದಿಗೆ ಬಂದ ಎದುರಾಳಿ ಜಾತಿಯವರು ಒಬ್ಬರೂ ಉಳಿದಿರಲಿಲ್ಲ. ಆದರೆ ಅವರು ಬೆಲಗ್ಗೆ ಬಸಿದು ಕೊಟ್ಟಿದ್ದ ಸೇಂದಿ ಹಾಗೆಯೇ ಇತ್ತು. ಯೋಜನೆ ಕಾರ್ಯಗತವಗಿದ್ದರೂ ಇವರೆಲ್ಲಾ ಒಂದು ರೀತಿ ದಿಗ್ಭ್ರೆಮೆಗೆ ಒಳಾಗಾಗಿದ್ದರು. ಸ್ವಲ್ಪ ಹೊತ್ತು ಸುಧಾರಿಸಿಕೊಂಡರು. ಸೇಂದಿ ಕುಡಿದರು. ಬುತ್ತಿ ಬಿಚ್ಚಿ ಉಂಡರು. ದ್ವೇಷದ ಜ್ವಾಲೆ ಆರಿಹೋಗಿತ್ತು. ವಿಜಯ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದವರಂತೆ ಊರ ದಾರಿಯಲ್ಲಿ ನಡೆದರು. ಇನ್ನು ನಮ್ಮನ್ನು ಕೇಳಿವವರು ಯಾರೂ ಇಲ್ಲಾ. ಅವರ ಆಸ್ತಿ ಹೆಣ್ನುಗಳು ಎಲ್ಲಾ ನಮ್ಮವೇ! ಎನ್ನುತ್ತಾ ಊರು ತಲಪಿದರು. ಎದುರಾಳಿಗಳಾಗಿದ್ದವರ ಗಂಡು ಸಂತಾನವನ್ನೇ ನಿರ್ಮೂಲನೆ ಮಾಡಿದೆವು ಎಂದು ಕೊಳ್ಳುತ್ತಾ ಗಂಡಸರಿಲ್ಲದ ಅವರ ಮನೆಗಳಿಗೆ ನುಸುಳಿಹೋಗಿ ನೋಡುತ್ತಾರೆ. ತೊಟ್ಟಿಲಲ್ಲಿ ಮಲಗಿ ಕಿಲಕಿಲ ನಗುತ್ತಿವೆ ಗಂಡು ಕೂಸುಗಳು!
ಮತ್ತೆ ಜಾಗೃತವಾಯಿತು ಕ್ರೌರ್ಯ!
ತೂಗುತ್ತಿದ್ದ ತೊಟ್ಟಿಲುಗಳನ್ನು ಕೆಳಗಿಳಿಸಿ ತಲೆಯ ಮೇಲೆ ಹೊತ್ತರು. ಕೃತಿಕಾ ಮಳೆ ಸಂಜೆಯಾಗುತ್ತಿದ್ದಂತೆ ಧೋ ಎಂದು ಸುರಿಯತೊಡಗಿತ್ತು. ಮೇಲಿನ ದೊಡ್ಡ ಅಬ್ಬಿಗೆ ಬಳಸಿ ಹೋಗಬೇಕಾಗಿತ್ತು. ಕೆಳಗಿನ ಸಣ್ಣ ಅಬ್ಬಿ ತಲಪಲು ಹತ್ತಿರದ ದಾರಿ. ಕಾಡುದಾರಿ, ಕತ್ತಲು ಬೇರೆ, ಮೇಲೆ ಅಬ್ಬರಿಸಿ ಸುರಿವ ಮಳೆ. ಹೊತ್ತು ನಡೆಯುತ್ತಿದ್ದ ತೊಟ್ಟಿಲ ಕೂಸುಗಳ ಚೀರಾಡುತ್ತಿದ್ದವು. ಹೊಳೆಯಲ್ಲಿ ಪ್ರವಾಹ ಭಯಂಕರವಾಗಿತ್ತು. ಅಬ್ಬಿಯ ಬಳಿ ಬಂದವರು ಒಂದೊಂದೇ ತೊಟ್ಟಿಲನ್ನು ಪ್ರವಾಹದಲ್ಲಿ ತೇಲಿ ಬಿಟ್ಟು ನಿಟ್ಟುಸಿರುಗರೆದರು. ಆ ಹಿರಿಯರು ಹೇಳಿದ ಶೈಲಿಯಲ್ಲೇ ನಾನು ಕತೆ ಹೇಳಿ ಮುಗಿಸಿದಾಗ, ಅದುವರೆಗೂ ಉಸಿರು ಬಿಗಿಹಿಡಿದು ಕುಳಿತಿದ್ದ ನಮ್ಮವರು ನಿಟ್ಟುಸಿರುಗರೆದರು. ಅಬ್ಬಿಯ ಹೆಸರಿನ ಹಿನ್ನಲೆ ಅವರಿಗೆ ಅರ್ಥವಾಗಿತ್ತು. ಅವರೆಲ್ಲಾ ದಿಗ್ಭ್ರಮೆಗೊಳಗಾದವರಂತಿದ್ದರು! ‘ನಂಬಿದರೆ ನಂಬಿ ಬಿಟ್ಟರೆ ಬಿಡಿ, ನಾನು ಕೇಳಿಸಿ ಕೊಂಡದ್ದನ್ನು ನಿಮಗೆ ಯಥಾವತ್ತಾಗಿ ಹೇಲಿದ್ದೇನೆ ಅಷ್ಟೇ’ ಎಂದೆ. ಮಳೆ ಸಣ್ಣಗೆ ಹನಿಯಲು ಶುರುವಾಗಿತ್ತು. ತೊಡಮನ ಹರೆ ತಲುಪಲು ಇನ್ನೂ ಒಂದು ಕಿಲೋಮೀಟರ್. ನಾವು ತೊಡಮನ ಹರೆಯ ಅಣ್ಣನ ಮನೆ ತಲಪಿದಾಗ ಪುಟ್ಟಮ್ಮ ಕೈಯಲ್ಲಿ ಬಟ್ಟೆಯಗಂಟು ಹಿಡಿದು ಸಿದ್ಧವಾಗಿದ್ದರು. ನನ್ನನ್ನು ಕಾಣುತ್ತಲೇ ‘ನಡೀರಿ ಹೋಗೋಣ’ ಎನ್ನತ್ತಾ ಕಾರು ನಿಂತಿದ್ದ ಕಡೆ ಹೆಜ್ಜೆ ಹಾಕತೊಡಗಿದರು. ಯಾಕೆ? ಒಂದೆರಡು ದಿನ ಇಲ್ಲಿ ಇದ್ದು ಬನ್ನಿ’ ಅಂದೆ. ಅವರು ಹೊರಡುವಾಗಿನ ಉದ್ದೇಶವೂ ಅದೇ ಆಗಿತ್ತು. ‘ಬ್ಯಾಡ ನಡಿ ಇಲ್ಲಿಂದ ಹೋಗಾಣ’ ಎನ್ನುತ್ತಾ ಕಾರನ್ನು ಏರ ತೊಡಗಿದರು. ಕಾಲಕ್ರಮೇಣ ನಶಿಸಿ ಹೋಗಿರುವ ಬದುಕಿನ ಮೌಲ್ಯಗಳು ಇವರ ಮನಸ್ಸನ್ನು ಘಾಸಿಗೊಳಿಸಿರಬಹುದು ಅಂದುಕೊಂಡೆ. ಅವರು ಕಾರೆಕಾಯಿ ಹಡ್ಲವರೆಗೂ ನಡೆದು ಬರಲು ಸಾದ್ಯವಾಗದುದೇ ಒಳ್ಳೇಯದಾಯಿತು ಎಂದು ಕೊಳ್ಳುತ್ತಾ ಸ್ಟಾರ್ಟ್ ಆಗಿದ್ದ ಕಾರಿಗೆ ಹತ್ತಿ ಕುಳಿತುಕೊಂಡೆ.

‍ಲೇಖಕರು avadhi

10 June, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading