ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡುಹೂವಿನ ಸೊಲ್ಲು : ಹಲವು ಜನ್ಮದಿಂದ ಬಂದ ಯಾವುದೋನೋ ಧ್ಯಾನ..

ರೇಣುಕಾ ನಿಡಗುಂದಿ

ಬೆಳ್ಳನೆಯ ಮೊಸರು ಚೆಲ್ಲಿದಂತ ಬೆಳದಿಂಗಳು ಅಂಗಳದಲ್ಲಿ ಹೆಪ್ಪುಗಟ್ಟಿ ಹರಡಿದರೆ ಬೆಳಗಿನವರೆಗೂ ಬಾಚಿ ಮಡಿಲಿಗೆ ತುಂಬಿಕೊಂಡೇನು. ಆಷ್ಟು ಮೋಹವುಕ್ಕಿಸುವ ಬೆಳದಿಂಗಳು ನಮ್ಮ ಅಂಗಳಕ್ಕೆ ಇಳಿದಿರುತ್ತಿತ್ತು. ಹಿತ್ತಲಿಗೆ ಹೋದರೆ ಘಮಘಮಿಸುವ ಸೂಜಿಮಲ್ಲಿಗೆ, ದುಂಡುಮಲ್ಲಿಗೆ ಕಂಪು…ಶೀತಲ ಸಮೀರೆ. ತಲೆ ಎತ್ತಿದರೆ ಶುಭ್ರ ನೀಲಿ ಆಕಾಶ. ಮೋಡಗಳಿಲ್ಲದ ನೀರವ ಆಗಸವನ್ನು ನಿರುಕಿಸುವುದು ಎಷ್ಟು ಖುಶಿ. ತಾನೇನು ಕಡಿಮೆ ಎಂದು ಬಿಳಿಹೂವು ಹೊತ್ತ ಪತ್ತವರೆ ಬಳ್ಳಿ, ಕುಂಬಳ ಬಳ್ಳಿ, ಆಬೂಲಿ, ಬಟ್ಟಲ ಹೂವು, ಗೊರಟಿ ಹೂವು, ದಾಸವಾಳ, ದಾಳಿಂಬೆ ಗಿಡ, ಪೇರಲ ಗಿಡ, ಪಪ್ಪಾಯಿ, ನಿಂಬೆ ಗಿಡ, ಪುಂಡಿ ಗಿಡ, ಪುದೀನಾ, ಕಾಡಿಗ್ಗರ್ಲು… ಪುಟ್ಟ ಹಿತ್ತಲ ಲೋಕದ ತುಂಬ ಹಾಲು ಬೆಳದಿಂಗಳ ಸಾರೋಟು ನಡೆಯುತ್ತದೆ ನೆನೆದರೆ.
ಇದೂ ಸಾಲದೆಂಬಂತೆ ನೈರುತ್ಯದ ಒಂದು ಕಡೆ ಪುಟ್ಟ ಗುಡಿಯಿತ್ತು. ಅದರಲ್ಲಿ ಕಲ್ಲಿನ ಆಂಜನೇಯ. ಯಾಕೆ ಅಲ್ಲಿತ್ತು? ಯಾರು ಕಟ್ಟಿದ್ದರು ಗೊತ್ತಿಲ್ಲ! ನಮ್ಮ ಆಟವೆಲ್ಲ ಹಿತ್ತಲ ತುಂಬ ಹನುಮಪ್ಪನ ಎದುರಿಗೆ. ಸೂಜಿಮಲ್ಲಿಗೆ , ದುಂಡುಮಲ್ಲಿಗೆ ಹೂ ಸುರಿಯುವಾಗ ಅವ್ವ ಹೂ ಬಿಡಿಸಿ ಮಾಲೆ ಕಟ್ಟಿಟ್ಟರೂ ಮುಡಿಯದ ಸೋಮಾರಿತನ. ಹಿತ್ತಲಿನ ನೆನೆಹುಗಳು ಎಷ್ಟೊಂದು ಮಧುರವಾಗಿರುತ್ತವೆ. ಅವ್ವನಿಗೆ ಗೊತ್ತಾಗದಂತೆ ಮಾಡುವ ಕಿತಾಪತಿಗಳಿಗೆಲ್ಲ ಹಿತ್ತಲೇ ಬೇಕು. ಶಾಲೆ ಮುಗಿಸಿ ಮನೆ ಸೇರಿದಾಗ ಸಂಜೆ ಹಕ್ಕಿಗಳ ಹಿಂಡು ಹಿಂಡು ಪಯಣ ಆಗಸದಲ್ಲಿ. ಹಿತ್ತಲಿನಲ್ಲಿ ದನದ ಕೊಟ್ಟಿಗೆಯ ತಗಡಿನ ಮಾಡು ಹತ್ತಿ ಕೂತು ಜೋಳದ ಭಕ್ಕರಿ ತಿನ್ನುತ್ತಿದ್ದೇವು. ಕತೆಯಲ್ಲಿ ಕೇಳಿದ ಕಾಗಕ್ಕ ಗುಬ್ಬಕ್ಕ ಈಗ ಜೋಪಡಿ ಸೇರಿ ಅಡುಗೆ ಮಾಡುತ್ತಾರೆ, ಮಕ್ಕಳನ್ನು ನೋಡಿಕೊಳ್ಳುತ್ತಾರೆಂಬ ನಮ್ಮ ಕಲ್ಪನೆಯ ಕತೆಯ ಜಾಡು ಅಲ್ಲಿಂದ ಮುಂದೆ ಹೆಣೆಯುತ್ತಿತ್ತು. ಅವ್ವ, ಮಂಟಮ್ಮ ಇಬ್ಬರೂ ಕೂತು ಹರಟುತ್ತ ಬಿದಿರಿನ ಮೊರಕ್ಕೆ ಹಳೆಬಟ್ಟೆ ಸುಟ್ಟು ಕರೀ ಬೂದಿಮಾಡಿ, ಅಗಸೆ ಎಣ್ಣೆ ಕಲಸಿ , ಸುಣ್ಣಗೆ ಕಾಡಿಗೆಯಂತೆ ನುರಿದು ಬಿದಿರಿನ ಬುಟ್ಟಿ, ಕೈಮೊರಕ್ಕೆಲ್ಲ ಮೇಣ ಮಾಡುತ್ತಿದ್ದುದು ನೆನಪಾಗುತ್ತದೆ. ಒಲೆ ಬೂದಿ ಗಿಡಗಳಿಗೆ ಸುರಿಯಲು, ಸಂಡಿಗೆ ಹಪ್ಪಳಗಳನ್ನು ಹರವಿ ಒಣಗಿಸಲು, ಕೊನೆಗೆ ಮುಂದೆ ಮುಟ್ಟಾದಾಗ ದೂರ ಕೂರುವ ಏಕಾಂತಕ್ಕೆ ಹಿತ್ತಲು ಸಂಗವೇ ಹಿತವಾಗಿರುತ್ತಿತ್ತು.
ಎಲೆಬಿಸಿಲು ಎಳೆ ಬೆಳದಿಂಗಳ ಹಿತ್ತಲ ಸಾಂಗತ್ಯದ ಸವಿ ಬಲ್ಲವರೇ ಬಲ್ಲರು. ಇವೆಲ್ಲದರ ಜತೆ ಅವ್ವನ ಹೇಳಿದ ಕತೆಗಳು. ಶಂಕರಮ್ಮ ಅಜ್ಜಿಯ ಕತೆಗಳು, ಸರಸಮ್ಮಜ್ಜಿಯ ಕತೆಗಳ ಪಲ್ಲಕಿಯಲ್ಲೆ ಮಲಗಿ ಬೆಳದಿಂಗಳ ಹಾಸಿಗೆಯಲ್ಲಿ ಹರಳುಗಟ್ಟಿದ ಕನಸಿನ ಚಿತ್ತಾರದ ಸಡಗರ. ಈಗಲೂ ಮನಸಿನ ನವಿಲುಗರಿಯಲ್ಲಿ ನನಗೆ ಅವ್ವ ಹೇಳಿದ ಕತೆಗಳು ಎಲ್ಲೋ ಹೊರಟು ಮತ್ತೆ ನನ್ನಲ್ಲಿಗೆ ಬಂದು ನವಿಲ ಕಣ್ಣು ಸೇರುತ್ತವೆಯೆನಿಸುತ್ತಿದೆ. ಮೋಡದೊಡಲ ಬಸಿದು ಮಳೆ ಹೊಯ್ಯುವಾಗ ನವಿಲಿನಂತೆ ನರ್ತಿಸುತ್ತವೆ ಅ ಕತೆಗಳೂ. ಗರಿಯ ಕಡಲನೀಲ ಹಸಿರು ಬಣ್ಣದ ಹರವಿನಲ್ಲಿ ರೆಕ್ಕೆಬಿಚ್ಚಿ ಹಾರುತ್ತವೆ. ಅಜ್ಜನ ಮನೆಯ ಪೀಟೀಲು, ತಂಬೂರಿ ವಾದ್ಯಗಳು ಯಾವುದೋ ಹಳೆಯ ತಂತಿ ಹರಿದುಹೋಗಿದೆಯೆಂದು ಗುಜರಿ ಸಾಮಾನಿನಲ್ಲಿಟ್ಟಿದ್ದು, ಇನ್ನೆಲ್ಲೋ ನಿಶ್ಯಬ್ದದಲಿ ಮೀಟಿ ನುಡಿಯುತ್ತಿದೆಯೆನಿಸತೊಡಗಿದ್ದು ಅವನ ಮನೆ, ಕುಲ , ಗೋತ್ರಗಳ ಪ್ರವರವನ್ನೆಲ್ಲಾ ಕೇಳಿದಾಗ. ತುಂಬಿ ಬರುವ ಸೆಳೆತ. ಸಂಬಂಜ ಅನ್ನೊದು ದೊಡ್ದದು ಕಲಾ…ಎನ್ನುವ ಮಾತು ಸತ್ಯವೆನಿಸುವಂತೆ ಜನ್ಮ ಜನ್ಮಾಂತರದ ಋಣಾನುಬಂಧವೂ ಸತ್ಯವಾಗಿರಲೇಬೇಕು ಎನಿಸುತ್ತದೆ. ಇಲ್ಲವೆಂದರೆ ಸುಮ್ಮ ಸುಮ್ಮನೆ ಇವನಿಗೂ ತನಗೂ ಯಾವ ಬಾದರಾಯಣ ಸಂಬಂಜವಿದ್ದೀತು ? ಯಾವ ಜನ್ಮಾನುಬಂಧದ ಸಾಲದ ಋಣ ಸೆಳೆದಿರಬಹುದು ಅನಿಸಿತು. ಅವನು ಬೇರೆ ಅನಿಸಲೇ ಇಲ್ಲ. ಯಾವ ಸಂಬಂಜದ ಪುರಾತನ ವಾಸನೆಯೋ ಕಾಣೆ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ…!

ಅಲ್ಲಿ ಹುಟ್ಟಿದ ನದಿಯೊಂದು ಇಲ್ಲಿ ಹರಿಯುವಂತೆ, ಅಲ್ಲಿ ಹರಿದ ತೊರೆಯೊಂದು ಇಲ್ಲಿ ನನ್ನ ಪಾದ ತೊಳೆಯುವ ಈ ವಿಲಕ್ಷಣ ಸಂಬಂಜವೂ ಸಂದಿಗ್ಧತೆಯಲ್ಲಿ ಅರಳತೊಡಗಿದ್ದನ್ನು ನನ್ನ ಶಾಲ್ಮಲಿಗೆ ಕೂತು ಹೇಳಲೇಬೇಕೆನಿಸತೊಡಗಿದ್ದು ಒಂದು ಕತೆಯ ಭಾಗವನ್ನಷ್ಟೇ ಆಗಿ. ಬೊಗಸೆಯಲ್ಲಿ ಬಿದ್ದ ಕ್ಷಣಗಳನ್ನು ಎದೆಗವಚಿಕೊಂಡು ಮುತ್ತಿಟ್ಟು ಬರೀ ಸಮಯದ ಕೈಗೊಂಬೆಯಾಗಿ ಕೂತು ನೋಡತೊಡಗಿದಷ್ಟೇ ಆಗಿರದೇ ಅದರಲ್ಲಿನ ಪಾತ್ರವೂ ಆಗಿಹೋಗಿದ್ದು ಸೋಜಿಗವೆನಿಸಿತು. ಅವನು ತನ್ನನ್ನು ಕರೆಯುವಾಗ…..ಮಗುವಿನಂತೆ ಲಲ್ಲೆಗರೆಯುವಾಗ….ಈ ದನಿಯನ್ನು ಮೊದಲೂ ಯಾವಾಗಲೋ ಕೇಳಿರುವಂತೆ ಅದು ಕರುಳನ್ನು ಮೀಟುತ್ತಿತ್ತು. ಅದು ಅವನಾಗಿಯೇ ಇಟ್ಟ ಹೆಸರು. ಬೇಡವೆನ್ನಲಿಲ್ಲ. ಅಪರಿಚಿತವೂ ಅನಿಸಲಿಲ್ಲ. ಇದೇ ಹೆಸರು ಹಿಂದೂ ಇತ್ತು ಎಲ್ಲೋ ನಾ ಕೇಳದ ದನಿಯಲ್ಲಿ ಅಡಗಿತ್ತು ಎನಿಸುವಷ್ಟು ಹಿತ…ಆ ಕರೆಯುವಿಕೆಯಲ್ಲಿ…!
ಬದುಕಿನ ಯೌವನದ ಕಾಲವನ್ನು ಬಸಿರು ಬಾಣಂತನದಲ್ಲೆ ಕಳೆದ ನನ್ನ ಅಜ್ಜಿಯ ಕಾಲದ ಕತೆ ತೊಡರಿಕೊಳ್ಳುತ್ತಿದೆ. ಮಕ್ಕಳೆಲ್ಲ ಅತ್ತೆಯ ಮಡಿಲಲ್ಲೇ ಬೆಳೆದರಂತೆ. ಮುದ್ದು ಮಾಡಿ ಬೆಳೆಸಿದವಳು ಮಕ್ಕಳ ಇನ್ನೊಬ್ಬ ಅಜ್ಜಿ ( ನನ್ನಮ್ಮನ ಅಜ್ಜಿ). ಆಕೆಯನ್ನು ಅಜ್ಜ ಮನೆಯಲ್ಲೇ ತಂದಿಟ್ಟುಕ್ಜೊಂಡಿದ್ದರಂತೆ. ಬೇರೆ ಮತದವಳಾಗಿದ್ದು ಹಸು ಕಟ್ಟುವ ಗೋದನಿಯಲ್ಲಿ ಅವಳ ಬಿಡಾರ. ಮಕ್ಕಳನ್ನು ಸಲುಹಿದ್ದು ಆಕೆ. ಅವಳ ಹೆಸರನ್ನು ಅತ್ಯಂತ ಆರ್ದ್ರವಾಗಿ ನೆನೆಯುವ ನನ್ನಮ್ಮನ ಪ್ರೀತಿ ಮಮಕಾರಗಳು ಎಂದಿಗೂ ಕಲುಷಿತಗೊಳಲಿಲ್ಲ. ಇಟ್ಟುಕೊಂಡವಳೆಂಬ ಪಟ್ಟಕ್ಕೂ ನೋಯದೇ ಮನೆಯೊಳಗೊಂದಾಗಿ ಆ ಮನೆಯ ಕಂದಮ್ಮಗಳನ್ನು ಉಡಿಯಲ್ಲಿಟ್ಟು ಜೋಪಾನಮಾಡಿದಳಂತೆ. ಇದು ಸಂಬಂಧವೋ ಋಣಾನುಬಂಧವೋ ! ನೈತಿಕದಾಚೆಗೂ ಮೀರಿದ್ದು, ಇಹಪರ, ಪಾರಮಾರ್ಥಕ್ಕೂ ನಿಲುಕದ ಮಾತಿದು. ಹೆಸರಿಲ್ಲದ ಸಂಬಂಜವನ್ನು ಜೀವತೇದು ಹಿರಿದಾಗಿಸಿದ ನಿಸ್ವಾರ್ಥ ಪ್ರೇಮ!
ಅಣ್ಣತಮ್ಮಂದಿರು ಇಬ್ಬಾಗವಾದಾಗ ಒಂದು ಮೇಲಿನ ಮನೆ ಇನ್ನೊಂದು ಕೆಳಗಿನ ಮನೆಯವರಾಗಿ ಬೆಳೆದವರು. ಅವರ ನೆರೆಯವರೇ ಇವನ ತಾತ ಮುತ್ತಾತಂದಿರ ವಂಶಜರು. ಬೆಳ್ಳಿಗಟ್ಟನ್ನು ಕುಟ್ಟತೊಡಗಿದರೆ ನೆಲ ನಡುಗಬೇಕು ಅಂಥ ಮೈಕಟ್ಟಿನ ಆರಡಿ ಎತ್ತರದ ಆಳು ಅವನಜ್ಜ.. ಥೇಟ್ ಇವನಂತೆಯೇ ಅಂತೆ. ಕಥಾಸೂತ್ರದ ಎಳೆಯನ್ನು ತಟ್ಟನೇ ಗ್ರಹಿಸಿದವಳು ನನ್ನಮ್ಮ. ಏಳುವಸುಗಳನ್ನು ನೀರಿನಲ್ಲಿ ಪ್ರವಹಿಸಿ ದೇವವೃತನೊಬ್ಬನನ್ನು ಶಂತನುವಿಗೊಪ್ಪಿಸಿ ಹರಿದುಹೋದ ಗಂಗೆಯಂತೆ ನನ್ನೊಳಗೆಲ್ಲೋ ಇವನ ಬಗ್ಗೆ ಹೇಳಹೆಸರಿಲ್ಲದ ಭಾವ ಪ್ರವಹಿಸಿದ್ದು ಸುಳ್ಳಲ್ಲ ! ನಿರಂತರವಾಗಿ ಸಂವಹಿಸುವ ತರಂಗಗಳ ತಾಕಲಾಟ. ಕಣ್ಣುಗಳೇಕೆ ಮಾತಾಡುತ್ತವೆ ? ಮನಸ್ಸೇಕೆ ಆಲಿಸುತ್ತದೆ? ಜೀವ ಮೊರೆಯುವಷ್ಟು….ಜಾಸ್ತಿ ತಲೆಕೆಡಿಸಿಕೊಳ್ಳಬಾರದೆಂದರೂ ಆಗುತ್ತಿಲ್ಲ.
ಹಳೇ ಮರದ ಬೇರುಗಳು ಬೇರೂರಿ ಮತ್ತೆಲ್ಲೋ ಕೊನರುವ ಧ್ಯಾನ. ಇಬ್ಬರ ಹಿತ್ತಲಿನ ಕತೆ ನಮ್ಮ ಹರಟೆಯಲ್ಲಿ ಹಿತ್ತಲವರೆ ಬಳ್ಳಿ , ಬಸಳೆಬಳ್ಳಿಯಂತೆ ಮನಸಿನ ತುಂಬ ಹಬ್ಬಿ ಹೂಬಿಡತೊಡಗಿದ್ದವು. ತುಳಸೀಲಗ್ನದ ಕುಳಿರು ಚುಮುಚುಮು ಚಳಿಯಲ್ಲಿ ಮಡಿಯುಟ್ಟು ಪೂಜೆಗೆ ಅಣಿಯಾಗಿದ್ದ ಅವನನ್ನು ಕಣ್ಣುತುಂಬಿಕೊಂಡದ್ದೂ, ಕಂಕುಳಲ್ಲಿ ಮಗುವನ್ನು ಹೊತ್ತ ಹೆಂಗಸಿನ ನೆನಹು. ಅವನವೇ ಕಣ್ಣು, ಹುಬ್ಬು , ಕದಪುಗಳನ್ನು ನೋಡುವಾಗ ಆರಡಿ ಎತ್ತರ, ಚೆಲುವ ಮುತ್ತಜ್ಜನ ಬಿಟ್ಟುಹೋದ ವಿರಹಿ ಪ್ರೇಮಿಯಂತೆ ಅಂತರಾತ್ಮ ಕಲಕತೊಡಗುತ್ತದೆ. ಪುರಾತನ ಪ್ರೇಮಿಗಳಂತೆ ಉನ್ಮತ್ತ ಪ್ರೇಮದಲ್ಲಿ ಒಳಗಿನದೆಲ್ಲ ಕಲಕುವ ಕರುಳುಬಳ್ಳಿಯ ಸೆಳೆತವನ್ನು ಮೌನದಲ್ಲಿ ಬಿಡಿಸಿಕೊಳ್ಳಲಾರದೇ , ಬಿಡಿಸಿಕೊಳ್ಳಬೇಕೆನಿಸದೇ ಒದ್ದಾಡುತ್ತೇನೆ. ತೊಡೆತುಂಬ ಮಲಗಿದ ಮಗುವನ್ನು ಎತ್ತಿ ಮುತ್ತಿಡಬೇಕೆನಿಸುತ್ತದೆ. ಅವೇ ಮುತ್ತಿನ ಹಾರ, ಬೆಳ್ಳಿ ಕಡಗು, ಬೆಳ್ಳಿ ಪೈಜಣದ ಘಲಿರುಘಲಿರಿನ ಸದ್ದಿನಲ್ಲಿ ಓಡಾಡುವ ಕೆಳಗಿನ ಮನೆ ಅಜ್ಜನ ತೂಗುಮಂಚ, ದೊಡ್ದ ಮನೆ ನೆನಪಾಗುತ್ತದೆ. ಈಗ ಒಂದನ್ನೂ ಉಳಿಸಿಕೊಳ್ಳದ ಒಬ್ಬರೂ ಜೀವಂತವಿಲ್ಲ. ನದಿ ಒಮ್ಮೆ ಹರಿದುಹೋದರೆ ಮರಳಿಬಾರದು. ಅದು ಎತ್ತ ಹರಿದರೂ ಕೊನೆಗೆ ಕಡಲನ್ನೇ ಸೇರಬೇಕು ಇಲ್ಲಾ ಬತ್ತಿಹೋಗಬೇಕು. ಸ್ವಸ್ಥಾನದ ಹಂಗೂ ಇರದು. ಹಾಗೇ ತನ್ನ ಎದೆಗೆ ಹರಿದು ಬಂದ ಹೆಸರಿಲ್ಲದ ನದಿಯ ಬೆಚ್ಚಗಿನ ಅಪ್ಪುಗೆಯಲ್ಲಿ ಸತ್ತು ಬಿಡಬೇಕೆನಿಸುತ್ತದೆ. ಈ ಬೆಳದಿಂಗಳ ಬಟ್ಟಲಲ್ಲಿ ಹೆಪ್ಪುಗಟ್ಟಿದ ತುಸು ನಲಿವನ್ನೂ, ತುಸು ಹರಳುಗಟ್ಟಿದ ಪ್ರೀತಿಯನ್ನು ಆ ನದಿಗೆ ಚೆಲ್ಲಿ…….
 

‍ಲೇಖಕರು G

16 November, 2013

4 Comments

  1. Raghunandan K

    ಬಾಲ್ಯದ ಕನವರಿಕೆಗಳಲ್ಲಿ ಪ್ರಾಜ್ಞ ಮನಸ್ಸಿನ ಭಾವಗಳ ನೆನಹುಗಳು ಇಷ್ಟವಾಯಿತು…
    ಒಂದಿಷ್ಟು ಚಿಂತನೆಗೆ ಒಂದಿಷ್ಟು ಭಾವುಕತೆಗೆ ಕಾರಣವಾದದ್ದಕ್ಕೆ ಧನ್ಯವಾದ.

  2. ರಮೇಶ್ ಹಿರೇಜಂಬೂರು

    `ಹರಳುಗಟ್ಟಿದ ಕನಸಿನ ಚಿತ್ತಾರದ ಸಡಗರ.`
    `ಮೋಡದೊಡಲ ಬಸಿದು ಮಳೆ ಹೊಯ್ಯುವಾಗ ನವಿಲಿನಂತೆ ನರ್ತಿಸುತ್ತವೆ ಅ ಕತೆಗಳೂ. ಗರಿಯ ಕಡಲನೀಲ ಹಸಿರು ಬಣ್ಣದ ಹರವಿನಲ್ಲಿ ರೆಕ್ಕೆಬಿಚ್ಚಿ ಹಾರುತ್ತವೆ…`
    ಇಂಥ ಸಾಲುಗಳು ಹೆಚ್ಚು ಮುದ ನೀಡುತ್ತವೆ. ಇಡೀ ಲೇಖನ ತುಂಬಾ ಆಪ್ತವಾಗಿದೆ. ನಿಮ್ಮ ಭಾವ `ಲಹರಿ` ನದಿಯಾತಿ ತೊರೆಯಾಗಿ ಬಾಲ್ಯದ ನೆನಪುಗಳನ್ನು ಹರಡಿಸಿ, ನಮ್ಮ ಬಾಲ್ಯವನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು..
    ರಮೇಶ್ ಹಿರೇಜಂಬೂರು

  3. bharathi b v

    ಅಬ್ಬಾಆಆ! ಎಲ್ಲೋ ಕಳೆದು ಹೋಗಿದ್ದೆ ಓದಿ ಮುಗಿಸುವವರೆಗೂ …..

  4. Shwetha Hosabale

    ಬೆಳದಿಂಗಳು…ಹಿತ್ತಲು…ಹೂವಿನ ಗಿಡಗಳ ಕಂಪು…ಜೊತೆಗಿನ ಭಾವ ಪಯಣ ಎಲ್ಲವನ್ನೂ ಸ್ವತಃ ಅನುಭವಿಸಿದಷ್ಟು ತೀವ್ರತೆ ಬರಹದಲ್ಲಿ…ಇಷ್ಟ ಆಯ್ತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading