ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡುಹೂವಿನ ಸೊಲ್ಲು : ಬೆಳ್ಳಿಪುಟದ ಬರಹ

– ರೇಣುಕಾ ನಿಡಗುಂದಿ

ಬೆಳ್ಳಂ ಬೆಳಗ್ಗೆ ನಾಲಕೆಂದರೆ ನಾಲ್ಕು, ಇಲ್ಲಾ ನಾಲ್ಕೂವರೆಯೆಂದರೆ ಸರೀ..ನಾಲ್ಕೂವರೆಗೇ ನಳದಲ್ಲಿ ನೀರು ಬಂದುಬಿಡುತ್ತಿತ್ತು. ಈ ನಾಲ್ಕೂವರೆಯಿಂದ ಐದೂವರೆಗಿನ ಸಮಯವಿದೆಯಲ್ಲ ಅದು ಬೆಳ್ಳಿ ಬಟ್ಟಲಿನ ನೊರೆಹಾಲಿನಲ್ಲಿ ಬೆಳ್ಳಕ್ಕಿ ಮೀಯುವ ಸಮಯ. ಬೆಳ್ಳಿ ಪುಟದಲ್ಲಿ ಕನಸು ಚುಕ್ಕಿ ಇಡುವ ಸಮಯ. ಶುಕ್ಲಪಕ್ಷವಾಗಿದ್ದರಂತೂ ಮನೆಯ ಎದುರಿನ ವಿಶಾಲ ಅಂಗಳದಲ್ಲಿ ಬೆಳ್ಳಗಿನ ಹಿಟ್ಟು ಚೆಲ್ಲಿದಂತ ಬೆಳದಿಂಗಳಿನ ಹಾಸು. ನಮ್ಮ ಮನೆಯ ನಲ್ಲಿಯಿಂದ ಇನ್ನೂ ಮೂರು ಮನೆಗಳವರು ನೀರು ಹಿಡಿಯುತ್ತಿದ್ದುದರಿಂದ ಒಬ್ಬೊಬ್ಬರಾಗಿ ಕೊಡಪಾನ ತಂದಿಟ್ಟು ಹೋಗುತ್ತಿದ್ದರು. ಅವ್ವನೂ ಎದ್ದಿರುತ್ತಿದ್ದಳು. ದಿನಾ ಕೊಡ, ಹಂಡೆಗಳನ್ನು ಉಜ್ಜಿ ತೊಳೆದು ಜಳ ಜಳ ಬೆಳಗಿ ಮತ್ತೆ ನೀರು ತುಂಬಿಸುವ ಕಾಯಕಕ್ಕೆ. ನಸುಕಿನ ನೀರವತೆಯಲ್ಲಿ ತಿಂಗಳಬೆಳಕಿನಲ್ಲಿ ಮೀಯುವ ಸುಖವೂ, ತಿಳಿ ಲಾಸ್ಯದಿಂದ ಪಲ್ಲವಿಸುವ ತಂಗಾಳಿಯ ಹಿತವೂ ಕರಿಹೆಂಚಿನ ಮನೆಯೆದುರಿನ ಅಂಗಳವನ್ನು ಕಿನ್ನರಲೋಕದಂತೆ ಚೆಲುವಾಗಿಸುತ್ತಿತ್ತು. ಅವಳೇ ಬೆಳ್ಳಿಯಂತೆ ಹೊಳೆಯುವ ಶುಕ್ರಗ್ರಹವನ್ನು ತೋರಿಸಿ ಬೆಳದಿಂಗಳ ಹುಚ್ಚು ಹಿಡಿಸಿದ್ದು. ಶುಭ್ರವಾದ ನೀಲಾಕಾಶದಲ್ಲಿನ ಬೆಳ್ಳಿಚುಕ್ಕಿಯನ್ನು ನೋಡುತ್ತ ನೋಡುತ್ತ ನೀರು ತುಂಬಿಸಿದ್ದೇ ಗೊತ್ತಾಗುತ್ತಿರಲಿಲ್ಲ. ಹಿತ್ತಲಲ್ಲಿ ಮಲ್ಲಿಗೆ ಗಮಲು. ಮಣ್ಣಿನ ಗೋಡೆಯ ನೆಮ್ಮದಿಯಲ್ಲಿ ಬೆಚ್ಚಗೇ ಮಲಗುವ ಕೌದಿಯ ಕನಸು. ಕರಿಹೆಂಚಿನ ಒಳಹೊರ ಹಾಸಿ ತಂಪಾದ ಗಾಳಿಯಾಡುವ ಹವಾ ಮಹಲು ! ಬೆಳಕಿಂಡಿಗಳಿಂದ ಸೂಸುವ ಬಿಸಿಲಕೋಲನ್ನೇ ಹಿಡಿಯಲು ಓಡುವ ಹುಮ್ಮಸಿನ ದಿನಗಳು. ಮನೆಯಲ್ಲಿನ ಪ್ರೀತಿಯ ಮಲ್ಲಿಗೆ ಬಳ್ಳಿಯನ್ನೂ, ಮಲ್ಲಿಗೆ ಬಳ್ಳಿಯ ಪೊದೆಯಂತ ದಪ್ಪ ಕಾಂಡಗಳ ಹೆಣಿಕೆಯಲ್ಲಿ ಕಡ್ಡಿ ಕಸವನ್ನು ಕುಣಿಕೆ ಹಾಕಿ ಹೊಸೆದ ಗುಬ್ಬಚ್ಚಿ ಗೂಡನ್ನು ದೂರದಿಂದಲೇ ನೋಡಿ ಸಂಭ್ರಮಿಸುತ್ತಿದ್ದ ದಿನಗಳು. ಆಕಾರವೇ ಮೂಡದ ಮುಚ್ಚಿದ ಕಣ್ಣಲ್ಲಿ ಗುಟುಕಿಗಾಗಿ ಬಾಯ್ ಬಾಯ್ ಬಿಡುವ ಹಸಿ ಹಸಿ ಮರಿಗಳು ಸೋಜಿಗದ ಲೋಕವನ್ನೇ ತೆರೆದಿದ್ದವು. ಕಾಗೆ ಕುಕ್ಕಿ ಒಯ್ಯದಂತೆ ಬಳ್ಳಿಯನ್ನೆಳೆದು ಗೂಡನ್ನು ಮುಚ್ಚುತ್ತಿದ್ದೆವು. ಹಿತ್ತಲಲ್ಲಿ ಬೆಳೆದ ಕೆಸು, ಪುಂಡಿಗಿಡ, ಪುದೀನಾ, ದೇವರ ಪೂಜೆಗೆಂದೇ ಬೆಳೆಸಿದ ದಾಸವಾಳ, ಬಟ್ಟಲುಹೂವಿನ ಗಿಡ, ಕಲಬಾಳೇ ಗಿಡ. ನಾ ಹುಟ್ಟಿ ಬೆಳೆದ ಆ ಮನೆಯ ಮಣ್ಣಿನಗೋಡೆ, ಕರಿಹೆಂಚಿನ ಮಾಡಿನ, ಸಾರಕ್ಕಿ ನೆಲದ ಮಣ್ಣಿನ ಪರಿಮಳವನ್ನು ಹೇಗೆ ಮರೆಯಲಿ?
ಬೇಗ ಎದ್ದು ನನ್ನ ಹಿಂದಿಕ್ಲಾಸಿಗೆ ಇನ್ನು ನಸುಗತ್ತಲೆಯ ಮುಸುಕಿನಲ್ಲೇ ಇದ್ದ ನಸು ಮುಂಜಾವಿನಲ್ಲೇ ಓಡುತ್ತಿದ್ದೆ ಬೆಳದಿಂಗಳ ಜೊತೆಯಲ್ಲಿ. ಹಿಂದಿಪ್ರಚಾರ ಸಭೆಯವರು ಎಲ್ಲಾ ಕಡೆ ಹಿಂದಿಕ್ಲಾಸುಗಳನ್ನು ನಡೆಸುತ್ತಿದ್ದು ನಾನೂ ನನ್ನ ಕೆಲ ಗೆಳತಿಯರಿಗೂ ಹೊಸದೊಂದು ಭಾಷೆಯನ್ನು ಕಲಿಯುವ ಹುಮ್ಮಸ್ಸು. ಮಟ್ಟಿಪರಪ್ಪನ ಕೂಟಿನಲ್ಲಿದ್ದ ಗಾಂಧಿಹಿಂದಿ ಹೈಸ್ಕೂಲಿನ ಕ್ಲಾಸ್ ರೂಮೊಂದನ್ನೆ ತೆರವು ಮಾಡಿಕೊಂಡು ಬೆಳವಲ ಸರ್ ನಮಗೆ ಹಿಂದಿಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಕೆಲವೊಮ್ಮೆ ಅವರ ಪತ್ನಿಯೂ ಬರುತ್ತಿದ್ದರು. ಅವರೂ ಟೀಚರ್. ಬೆಳವಲ್ ಸರ್ ಅವರನ್ನು ನೋಡಿದರೆ ಗುರು ರವೀಂದ್ರರ ನೆನಪಾಗುತ್ತಿತ್ತು. ಕೊಕ್ಕರೆಯಷ್ಟು ಬೆಳ್ಳಗಿನ ಜುಬ್ಬ ಪಾಯಿಜಾಮವನ್ನೆ ಅವರು ನಿತ್ಯ ತೊಡುತ್ತಿದ್ದುದು. ಭುಜದವರೆಗೂ ಇಳಿಬಿದ್ದ ಉದ್ದನೆಯ ಕಪ್ಪು ಕೂದಲು. ಅದಕ್ಕ ತಕ್ಕಂತೆ ಗುರುದೇವರಂಥಾ ನೀಳ ಗಡ್ದ. ಆಗಿನ್ನೂ ಹರಯದವರಾಗಿದ್ದು ಬೆಳವಲ್ ಸರ್ ವಯಸ್ಸಾದಾಗ ಥೇಟ್ ಗುರುದೇವರಂತೆಯೇ ಆಗಿರುತ್ತಾರೆಂದು ನಾವೆಲ್ಲ ಅಂದುಕೊಂಡಿದ್ದೆವು. ಯಾವತ್ತೂ ಹೆಚ್ಚು ಮಾತಾಡಿದವರೇ ಅಲ್ಲ. ಬೈದವರೂ ಅಲ್ಲ. ಯಾರೂ ಸಲುಗೆಯಿಂದ ಹತ್ತಿರ ಹೋಗುತ್ತಿರಲ್ಲಿಲ್ಲ. ಅವರ ಗಾಂಭಿರ್ಯವೇ ಅಂಥದ್ದು. ನಮಗೆ ಕಲಿಸುವುದನ್ನು ಕಲಿಸಿ, ತಿಳಿಸುವುದನ್ನು ತಿಳಿಸಿ, ಕೈಗೊಂದಿಷ್ಟು ಬರೆಯುವ ಕೆಲಸಕೊಟ್ಟರೆ ಅವರ ಕೆಲಸ ಮುಗೀತು. ಆಮೇಲೆ ಎದುರಿನ ಕುರ್ಚಿಯಲ್ಲಿ ಪದ್ಮಾಸನರಾಗಿಯೋ ಇಲ್ಲ ಹಾಗೇ ಕೂತಲ್ಲೆ ಕಣ್ಣುಮುಚ್ಚಿಕೊಂಡು ಧ್ಯಾನಸ್ಥರಾಗಿ ಬಿಡುತ್ತಿದ್ದರು. ಆಗಾಗ ನಿಮಿಲಿತ ನೇತ್ರದಿಂದ ನಮ್ಮನ್ನೆಲ್ಲ ನೋಡುತ್ತಿದ್ದಾರೆಂದೇ ಅನಿಸುತ್ತಿತ್ತು. ಕೆಲವೊಮ್ಮೆ ಉದ್ದಕೂದಲನ್ನು ತುರುಬು ಹಾಕಿ ಬಿಗಿದು ಕೂರಿಸಿ ಧ್ಯಾನಸ್ತರಾಗುತ್ತಿದ್ದರು. ನಾವೆಲ್ಲ ನಮ್ಮ ಬರೆಯುವ ಕೆಲಸ ಮುಗಿಸಿ ಅವರನ್ನು ಎಬ್ಬಿಸಿ ತೊಂದರೆಕೊಡಲಿಚ್ಚಿಸದೇ ನಮ್ಮ ನಮ್ಮಲ್ಲೆ ಪಿಸಿಪಿಸಿ ಮಾತಾಡುತ್ತ ಕೊನೆಗೆ ಬೆಳಗಿನ ಶಾಂತ ವಾತಾವರಣವನ್ನು ಕಲಕುವ ಹಕ್ಕಿಗಳಂತೆ ನಮ್ಮ ಪಿಸಿಪಿಸಿಯ ಕಲರವವೇ ಹೆಚ್ಚಾದಾಗ ಅವರು ಕಣ್ಣುಬಿಡುತ್ತಿದ್ದರು. ನಾವೆಲ್ಲ ಗಪ್ ಚಿಪ್. ಬೆಳವಲ್ ಸರೇ ನಮ್ಮ ಹತ್ತನೇ ನಂಬರ್ ಶಾಲೆಯಲ್ಲಿ ಓದಿಸುತ್ತಿದ್ದುದು. ಅವರ ಮನೆ ಆ ಕಡೆ ರವಿವಾರ ಪೇಟೆ ದಾಟಿ ಎಲ್ಲೋ ಇತ್ತು. ಒಮ್ಮೆ ಹೋದ ನೆನಪು. ಓಣಿಯ ಹೆಸರು ನೆನಪಿಲ್ಲ. ಗುರುದೇವರಂಥ ನಮ್ಮ ಬೆಳವಲ್ ಗುರುಗಳನ್ನೂ, ಕಿನ್ನರಲೋಕದಂತ ಬೆಳದಿಂಗಳ ಬೆಳಗನ್ನೂ, ನನ್ನೂರಿನ ದೇವಲೋಕದಂತ ಜನರನ್ನೂ ಈ ಜನ್ಮಪೂರ್ತಿ ಮತ್ತೆ ಕಾಣಲಿಲ್ಲ! ಏನೋ ಧಾವಂತದ, ಎಲ್ಲೋ ತಲ್ಲಣದ ಬದುಕಿನಲ್ಲಿ ನೆನಪಾಗುವ, ಅಲ್ಲೊಮ್ಮೆ ಇಲ್ಲೊಮ್ಮೆ ನೆನಪಾಗಿ ಹರಿಯುವ ನನ್ನ ಶಾಲ್ಮಲಿಯ ಪ್ರಶಾಂತ ಸೆರಗಿನಲ್ಲಿ ಮುಗ್ಧ ಮಗುವಿನ ಹುಚ್ಚು ನಗೆಯಂಥ ನನ್ನೂರು ಮಲಗಿ ನಿದ್ರಿಸುತ್ತಿದ್ದಂತಿತ್ತು.

ಲೋಕವಿನ್ನೂ ಕಣ್ಣುಬಿಡುವ ಹೊತ್ತು. ಸೂರ್ಯ ಮೂಡಲು ಸಜ್ಜಾಗುವ ಪ್ರಾತಃ ಕಾಲದಲ್ಲೆ ವಿದ್ಯಾರ್ಥಿಗಳನ್ನು ಕೂರಿಸಿ ಆಗ ನಮಗೆ ಅರ್ಥವಾಗದ ’ಹೇತುಹೇತುಮದ್ಭೂತ’ಕಾಲವನ್ನು ವಿವರಿಸುತ್ತಿದ್ದರೆ ನಾವು ಕಿಸಿಕಿಸಿ ನಗುತ್ತಿದ್ದೆವು. ಎಂಥ ಭೂತಕಾಲವಿದು ! ಅವರು ಓದಿಸಿದ ಹಿಂದಿ ವ್ಯಾಕರಣದ ರಚನಾ ಪುಸ್ತಕಗಳು ಇನ್ನೂ ನನ್ನ ಹತ್ತಿರವಿವೆ. ಯಾವುದೋ ಪೆಟ್ಟಿಗೆಯಲ್ಲಿ ಸುಖವಾಗಿ ನಿಶ್ಚಿಂತೆಯಿಂದ ಮಲಗಿವೆ. ಮುಂದೆ ಉತ್ತರಾಯಣದ ನನ್ನ ಬದುಕಿನಲ್ಲಿ ಹಿಂದಿಯನ್ನು ಚೆನ್ನಾಗಿ ಕಲಿಸಿ ಬೆಳೆಸಿದ ನನ್ನ ಗುರುಗಳನ್ನು ಹೇಗೆ ಮರೆಯೋದು ? ಎಲ್ಲೂ ಕಲಿಸಲು ಜಾಗ ಸಿಗದಾಗ ನಗರೇಶ್ವರ ಗುಡಿಯ ಹತ್ತಿರದ ಕಾಳಮ್ಮನ ಗುಡಿಯ ಅಟ್ಟದ ಮೇಲೆ ನಮ್ಮ ಹಿಂದಿ ಕ್ಲಾಸು ನಡೆಯುತ್ತಿದ್ದವು. ಎರಡೇ ಕೋಣೆಯ ಪುಟ್ಟ ಅಟ್ಟದ ಮೇಲೆ ಒಂದೆಡೆ ಪ್ರಥಮಾ, ಇನ್ನೊಂದೆಡೆ ಮಧ್ಯಮಾ, ಮತ್ತೆ ರಾಷ್ಟ್ರಭಾಷಾ ಕ್ಲಾಸು ಹೀಗೆ ಬೇರೆ ಬೇರೆ ಗುಂಪುಗಳಿದ್ದವು. ವಿದ್ಯಾರ್ಥಿ- ವಿದ್ಯಾರ್ಥಿನಿಯರೂ ಒಟ್ಟಿಗೆ ಇದ್ದೆವು. ಅಲ್ಲಿ ಸ್ಕೂಲಿನ, ಹೈಸ್ಕೂಲಿನ ಮಕ್ಕಳು, ಕಾಲೇಜಿನವರು ಇಲ್ಲ ಶ್ರೇಣಿಯವರೂ ಇದ್ದೆವು. ಬಹುತೇಕ ಮಧ್ಯಮಾ ಕ್ಲಾಸುಗಳನ್ನು ತೆಗೆದುಕೊಳ್ಳಲು ಮುಂದೆ ಪಟೇಗಾರ್ ಓಣಿಯ ವಹೀದಾ ರೆಹಮಾನ್ ತರಾ ಕಣ್ಣಿಗೆ ಕಾಡಿಗೆ ಹಚ್ಚಿ, ನಡುವೆ ಬೈತಲೆ ತೆಗೆದು ಬಾಚಿಕೊಳ್ಳುತ್ತಿದ್ದ ಚೆಂದದ ಟೀಚರ್ ಬರತೊಡಗಿದ್ದರು. ಆಮೇಲೆ ಮತ್ತೊಬ್ಬ ಸರ್ ಕೂಡ ಬರತೊಡಗಿದ್ದರು. ಆ ಪಟೇಗಾರ್ ಓಣಿಯ ಟೀಚರ್ಗೂ ಈ ಸರ್ ಗೂ ದೋಸ್ತಿ ಇದೆಯೆಂದು ಗಂಡು ಹುಡುಗರೆಲ್ಲ ಮಾತಾಡಿಕೊಳ್ಳುತ್ತಿದ್ದರು. ಅವರಿಗದು ಹೇಗೆ ಗೊತ್ತಾಯಿತಪ್ಪಾ ಎಂದು ನಾನು ನನ್ನ ಗೆಳತಿ ಯೋಚಿಸಿದರೂ ತಿಳಿದಿದ್ದಿಲ್ಲ. ಆದರೆ ಬೆಳವಲ್ ಸರ್ ಬರುವುದನ್ನೇ ನಾವು ನಿರೀಕ್ಷಿಸುತ್ತಿದ್ದೆವು. ನೋಡಿದರೂ ಮತ್ತೆ ನೋಡಬೇಕೆನ್ನುವ ಆಕರ್ಷಕ ಋಷಿಯಂತ ವ್ಯಕ್ತಿತ್ವ ಅವರದು. ಅವರಿದ್ದರೆ ಎಲ್ಲರೂ ಶಿಸ್ತಿನಲ್ಲಿರುತ್ತಿದ್ದರು. ಇಲ್ಲಾಂದರೆ ಟೀಚರ್ ಹೇಳಿದ್ದೂ ಕೇಳಿಸದಷ್ಟು ಗಲಾಟೆಯಾಗುತ್ತಿರುತ್ತಿತ್ತು. ಹತ್ತನೇ ನಂಬರ್ ಶಾಲೆಯಲ್ಲೂ ಅವರು ಇದ್ದಾರೋ ಇಲ್ಲವೋ ಎನ್ನುವಷ್ಟು ಶಾಂತತೆಯಿಂದ, ಸೌಮ್ಯ ಧ್ಯಾನಸ್ಥ ತಪಸ್ವಿಯಂತೆ ಗಾಳಿಯಲ್ಲಿ ಬಂದು ಗಾಳಿಯಂತೆ ತೇಲುಹೋಗುತ್ತಾರೋ ಅನ್ನುವಷ್ಟು ನಿಶ್ಯಬ್ಧ ಪದ ಛಾಪುಗಳು. ಸ್ಟಾಫ್ ರೂಮಿನಲ್ಲಿ ಕೂಡ ಅವರದು ಸದ್ದಿಲ್ಲದ ಇರುವು.
ಗಾಂಧಿ ಹಿಂದೀ ಹೈಸ್ಕೂಲಿನಲ್ಲಿ ಓದುವವರೆಲ್ಲ ಮಾರವಾಡಿ ಮಕ್ಕಳು. ಅದೇ ಆವರಣದಲ್ಲಿ ನಮ್ಮ ಹತ್ತನೇ ನಂಬರ್ ಶಾಲೆ. ಎರಡೂ ಸಾಲೆಗೂ ಒಂದೇ ಮೈದಾನ. ಪೂರ್ವದ ಆಚೆ ಬದಿಯಲ್ಲಿ ಎಲ್ಲ ತೊಗರಿ, ಶೇಂಗಾ, ಜೋಳ ಬೆಳೆಯುವ ಹೊಲಗಳು. ಮಕ್ಕಳು ಹಾಯದಂತೆ ಮುಳ್ಳುಬೇಲಿ ಹಾಕಿರುತ್ತಿದ್ದರು. ಇಂದು ಅದೆಲ್ಲ ಕಾಂಕ್ರೀಟ್ ಕಾಡಾಗಿದೆ. ಚರಂತೀಮಠ ಗಾರ್ಡನ್ ಎಂದು ಪ್ಲಾಟುಗಳನ್ನು ಮಾಡಿ ಮಾರಿ ಈಗ ಮನೆಗಳಾಗಿವೆ. ಅದೇ ಮಟ್ಟಿಪರಪ್ಪನ ಕೂಟಿನಲ್ಲಿದ್ದ ಎರಡನೇ ನಂಬರ್ ಶಾಲೆಯಲ್ಲೇ ಬೇಂದ್ರೆ ಅಜ್ಜನೂ ಓದಿದ್ದರೆಂಬುದು ಇತಿಹಾಸ. ಶಾಲ್ಮಲಿಯ ಮಡಿಲಿನ ಬೆಳದಿಂಗಳನ್ನೂ , ಸಾಧನಕೇರಿಯ ಗಾಳಿಯನ್ನೂ ಉಂಡೇ ನಾನು ಬೆಳೆದಿದ್ದಿನಲ್ಲಾ ಎಂಬ ಧನ್ಯತೆ ನನ್ನದು. ಇತ್ತಿಚೆಗೆ ದೆಹಲಿಗೆ ಬಂದ ಸಿದ್ದಲಿಂಗ ಪಟ್ಟಣಶೆಟ್ಟಿ ದಂಪತಿಗಳೇ ನನ್ನ ಬೆಳವಲ್ ಸರ್ ತುಂಬಾ ಮೊದಲೇ ತೀರಿಹೋಗಿದ್ದಾರೆಂದು ತಿಳಿಸಿದರು. ಏನೋ ಕಳಕೊಂಡ ಭಾವ ಆವರಿಸುವ,…ಕಣ್ಣು ಹನಿಯಾಗುವ ಮೊದಲೇ ದನಿಯೊಂದು ತಬ್ಬಿತು, “ನೀ ಸ್ಟೇಶನ್ ಇಳಿದ ಕೂಡ್ಲೇ ಸೀದಾ ನಂ ಮನೀಗೆ ಬಾ..ಒಂದಿನ ಹೂಮನೆಯಲ್ಲಿದ್ದು ಆಮೇಲೆ ಮನೀಗೆ ಹೋಗು” ಪ್ರೀತಿಯಿಂದ ಕರೆಯುವ ಪಟ್ಟಣಶೆಟ್ಟಿ ಅಕ್ಕೋರು, ’ ನಂ ಮನೀ ದೊಡ್ಡದದ ಇಲ್ಲೇ ಬರ್ರಿ ’ ಕರೆಯುವ ಜೋಗಳೇಕರ್ ತಂಗಿ…ಇನ್ನೇನು ಬೇಕು ನನಗೆ ಈ ಬೆಳ್ಳಿಪುಟದ ಒಲವಿಗೆ ?
 
 

‍ಲೇಖಕರು avadhi

13 April, 2013

2 Comments

  1. P. Bilimale

    Touching, I am moved

  2. bharathi bv

    Chennaagide renuka … waiting for next one … gud going …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading