‘ದಾಕ್ಷಿಣ್ಯಕ್ಕೆ ಬಸುರಾದವಳು ಹೆರೋಕೆ ತಾವಿಲ್ದೆ ಓಡಾಡಿದಳು’ ಎಂಬ ಗಾದೆಯೊಂದಿದೆ. ನನ್ನದು ಬಹಳ ದಾಕ್ಷಿಣ್ಯದ ಸ್ವಭಾವ. ಯಾವುದೇ ವ್ಯಕ್ತಿ, ಅವನು ಒಳಗಿನವನೇ ಆಗಿರಲಿ, ಇಲ್ಲ ಹೊರಗಿನವನೇ ಆಗಿರಲಿ, ಅವರ ಮನಸ್ಸಿಗೆ ಬೇಸರವುಂಟು ಮಾಡುವುದು ನನ್ನ ಸ್ವಭಾವದಲ್ಲೇ ಇಲ್ಲ. ಹಾಗಾಗಿ ಅವರು ಒಮ್ಮೊಮ್ಮೆ ತೆಗೆದುಕೊಳ್ಳುವ ತಪ್ಪು ನಿರ್ಣಯಗಳು ಅಥವಾ ಕಾರ್ಯರೂಪಕ್ಕೆ ತರುವ ತಪ್ಪುಯೋಜನೆಗಳು ನಾನು ಸರಿಯಾದ ಸಮಯದಲ್ಲಿ ವಿರೋಧಿಸದೆ ನನ್ನ ಅಪರೋಕ್ಷ ಅನುಮೋದನೆಗೆ ಒಳಗಾಗಿ ಬಿಟ್ಟಿರುತ್ತವೆ. ಅದರ ಸಲುವಾಗಿ ದೀರ್ಘಕಾಲೀನ ಅವಧಿಯಲ್ಲಿ ವ್ಯತಿರಿಕ್ತ ಪರಿಣಾಮ ಸಹಜವಾಗಿಯೇ ಉಂಟಾಗಿಬಿಡುತ್ತದೆ. ಅದರಿಂದ ನನ್ನ ಬದುಕಿನ ಅಮೂಲ್ಯ ಕ್ಷಣಗಳೂ, ಹಣವೂ ನಷ್ಟವಾಗಿರುವುದೂ ಉಂಟು!
ಅಂತಹಾ ಸಮಯದಲ್ಲೆಲ್ಲಾ ಒಳಗೇ ಕೊರಗುವುದು ಹಾಗೂ ಮೌನವಾಗಿ ಎಲ್ಲವನ್ನೂ ಅನುಭವಿಸುವುದೂ ಬಿಟ್ಟು ಬೇರೆ ದಾರಿಯೇ ಇರುವುದಿಲ್ಲ. ಒಂದಿಲ್ಲೊಂದು ದಿನ ನಾನು ಒಂದು ಕಾರನ್ನು ಹೊಂದಬೇಕೆಂಬ ನನ್ನ ಮನದೊಳಗಿನ ಬಯಕೆ ಅದು ಹೇಗೋ ನನ್ನ ಮನೆಯ ಸದಸ್ಯರಿಗೆಲ್ಲಾ ತಿಳಿದುಹೋಗಿತ್ತು. ಯಾವುದೇ ಯೋಜನೆಯನ್ನೂ ಪೂರ್ವಾಪರ ಯೋಚಿಸದೆ ದಿಡೀರ್ ಕಾರ್ಯಗತಗೊಳಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳಲು ಇಷ್ಟಪಡದ ನನಗೆ ತಾಳ್ಮೆವಹಿಸಿ ಕಾರ್ಯಗತಗೊಳಿಸುವ ವೇಳೇಗೆ ಸಾಕಷ್ಟು ಸಮಯವೇ ಹಿಡಿಯುತ್ತದೆ. ಕೆಲವು ವೇಳೆ ವರ್ಷಗಳೇ ಕಳೆದರೂ ಆಶ್ಚರ್ಯವಿಲ್ಲ. ಆದರೆ ನಮ್ಮ ಮನೆಯ ಕೆಲ ಸದಸ್ಯರ ಸ್ವಭಾವ ಇದಕ್ಕೆ ತದ್ವಿರುದ್ಧ. ಯಾವುದೇ ಯೋಜನೆಯಾದರೂ ದಿಡೀರ್ ಕಾರ್ಯಗತವಾಗಿಬಿಡಬೇಕು. ಅದರ ಪರಿಣಾಮ ಏನಾಗಬಹುದು ಎಂಬುದು ಅದು ನಂತರದ ಮಾತು.
ಅಲ್ಲೊಂದು ಒಳ್ಳೆಯ ಕಾರಿದೆಯಂತೆ, ಒಳ್ಳೆಯ ಬೆಲೆಗೆ ಕೊಡಿಸುತ್ತೇನೆ ಎಂದು ವರ್ಕ್ ಷಾಪ್ನವನು ಹೇಳಿದ. ಇಲ್ಲೊಂದು ಕಾರಿದೆಯಂತೆ, ಸಿಂಗಲ್ ಹ್ಯಾಂಡ್ನಲ್ಲಿ ಓಡಿದ್ದು, ನಮ್ಮ ಫ್ರೆಂಡ್ ಕರ್ಕಂಡು ಹೋಗಿ ತೋರಿಸ್ತೀನಿ ಅಂತಾ ಹೇಳಿದಾನೆ ಎಂದು ನನ್ನ ಒಬ್ಬ ಮಗ ನನ್ನೆದುರು ಹೇಳಿ ಆಸೆ ಹುಟ್ಟಿಸಲು ಯತ್ನಿಸಿದ. ಆದರೆ ನಾನು ತಾಳ್ಮೆ ವಹಿಸುವ ಬಗ್ಗೆ ಹೇಳಿ ಒಂದೆರಡು ವರ್ಷ ತಡೆದರೆ ಹೊಸಕಾರನ್ನೇ ಬ್ಯಾಂಕ್ ಲೋನ್ ಮುಖಾಂತರ ತೆದುಕೊಳ್ಳಬಹುದೆಂದು ಹೇಳಿದೆ. ಆತನಿಗೆ ಹಿಡಿಸಿದಂತೆ ತೊರಲಿಲ್ಲ.
ನಾನು ಹದಿನೈದು ದಿನದ ಮಟ್ಟಿಗೆ ಎನ್ಸಿಸಿ ಕ್ಯಾಂಪಿಗೆ ಮೈಸೂರಿಗೆ ಹೋಗಬೇಕಾಗಿ ಬಂದದ್ದು ಅವರಿಗೆ ವರದಾನವಾಯಿತು. ಕ್ಯಾಂಪ್ ಮುಗಿಸಿ ವಾಪಾಸು ಬರಲು ಎರಡು ದಿನ ಬಾಕಿ ಇದೆ ಎನ್ನುವಾಗ ನನ್ನ ಮಗ ಫೋನ್ ಮಾಡಿದ. ‘ಒಂದು ಒಳ್ಳೆಯ ಡೀಸಲ್ ಕಾರ್ ಸಿಕ್ಕಿದೆ. ಅಂಬಾಸಿಡರ್!’ ಎಂದ ‘ಅವಸರ ಮಾಡಬೇಡ, ಒಂದು ವರ್ಷ ತಡೆಯಿರಿ, ಬ್ಯಾಂಕ್ ಲೋನ್ ಮಾಡಿ ಹೊಸಾ ಕಾರೇ ತೆಗೆಯೋಣ’ಎಂದು ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಯತ್ನಿಸಿದೆ.
ಬರೀ ಆರವತ್ತು ಸಾವಿರಕ್ಕೆ ನಮ್ಮ ವರ್ಕ್ ಷಾಪ್ ಫ್ರೆಂಡ್ ಸರ್ದಾರ್ ಪಾಷಾ ಕೊಟ್ಟಿದ್ದಾನೆ, ಅಷ್ಟು ಕಡಿಮೆಗೆ ಈ ಕಾಲದಲ್ಲಿ ಯಾವ ಕಾರು ಸಿಕ್ಕುತ್ತೆ ಯೋಚಿಸಿ. ಕಾರ್ ಚೆನ್ನಾಗಿದೆ, ನಾನು ಓಡಿಸಿ ನೋಡಿದೀನಿ, ಹತ್ತು ಸಾವಿರ ಅಡ್ಜಸ್ಟ್ ಮಾಡಿ ಅಡ್ವಾನ್ಸ್ ಕೊಟ್ಟಿದೀವಿ, ನಾಳೆನೇ ಕಾರ್ ಡೆಲವರಿ ಕೊಡ್ತಾರೆ, ಉಳಿದ ಹಣ ನೀವು ಬಂದ ಮೇಲೆ ನಿಧಾನಕ್ಕೆ ಕೊಟ್ಟರೆ ಆಯಿತು, ಎನ್ನುತ್ತಾ ನನ್ನ ಮುಂದಿನ ಅಭಿಪ್ರಾಯವನ್ನು ಅವಕಾಶ ಕೊಡದೇ ಪೋನ್ ಕಡಿತಗೊಳಿಸಿದ.
ಮಾರನೇ ದಿನ ಮತ್ತೆ ಪೋನ್. ಅವನ ದನಿಯಲ್ಲಿ ಸಂಭ್ರಮ ತುಂಬಿತ್ತು. ಎಷ್ಟು ಗಂಟೆಗೆ ಬರುತ್ತೀರಿ ಹಾಸನಕ್ಕೆ. ಕಾರ್ ಬಂದಿದೆ ಕೈಗೆ. ಬೂದು ಕಲರ್ ಬಹಳ ಚೆನ್ನಾಗಿದೆ ಎಂದು ಅದರ ನಂಬರ್ ನೋಟ್ ಮಾಡಿಕೊಳ್ಳಿ ಎಂದ. ಇಲ್ಲೇ ಬಸ್ಸ್ಟಾಂಡ್ ಎದುರಿನ ಪಾರ್ಕಿಂಗ್ ನಲ್ಲಿ ಹಾಕಿರುತ್ತೇನೆ ಬನ್ನಿ ಅದರಲ್ಲೇ ಮನೆಗೆ ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾ ಡ್ರೈವರ್ ಭಾಷೆಯಲ್ಲಿ ಮಾತನಾಡ ತೊಡಗಿದ. ನನಗೆ ಮರು ಮಾತನಾಡಲು ಅವಕಾಶವೇ ಉಳಿದಿರಲಿಲ್ಲ, ಯೋಜನೆ ಆಕ್ರಮವಾಗಿ ಕಾರ್ಯಗತವಾಗಿ ಹೋಗಿತ್ತು, ಅದನ್ನು ಸಕ್ರಮಗೊಳಿಸಿಕೊಳ್ಳುವುದು ಅಷ್ಟೇನೂ ಕಷ್ಟವಾಗದು ಎಂಬುದು ನನ್ನ ಸ್ವಭಾವ ಅರಿತಿದ್ದ ಅವರಿಗೆ ತಿಳಿದು ಹೋಗಿತ್ತು,
ಹಾಸನ ನಿಲ್ದಾಣದಲ್ಲಿ ಇಳಿದೊಡನೆ ನನ್ನನ್ನು ಕಿಡ್ನಾಪ್ ಮಾಡುವರಂತೆ ಅವನು ಹಾಗೂ ಅವನ ಸ್ನೇಹಿತರು ನನ್ನನ್ನು ಲಗೇಜಿನೊಡನೆ ಕಾರಿನ ಬಳಿ ಕರೆತಂದರು. ಕಾರಿನ ಮಾಡೆಲ್, ಡೀಸಲ್ ಇಂಜಿನ್, ಅದರ ರೇಟು ಎಲ್ಲದರ ಬಗ್ಗೆ ಕೇಳಿ ತಿಳಿದಿದ್ದ ನನಗೆ ಮೊದಲೇ ಗಾಬರಿಯಾಗಿತ್ತು, ಹಾಗೆಯೇ ಕಣ್ಣಾಡಿಸಿದೆ. ಮುದುಕಿಗೆ ಪೌಡರ್ ಹಚ್ಚಿ ಹೂ ಮುಡಿದು ನಿಲ್ಲಿಸಿದಂತೆ ತೋರಿತು. ಟೈರುಗಳು ಸಂಪೂರ್ಣ ಸವೆದು ಹೋಗಿದ್ದುವು, ಅವುಗಳಿಗೆ ಕಾಲಿನಿಂದ ಒದೆಯುತ್ತಾ ‘ಏನು ಎಲ್ಲಾ ಪ್ಲಾಟ್ ಆಗಿದಾವಲ್ಲ. ಮನೆಯವರೆಗಾದರೂ ತಲುಪುತ್ತವಾ’ ಎಂದೆ, ಎಷ್ಟೇ ಮುಚ್ಚಿಡಲು ಯತ್ನಿಸಿದರೂ ನನ್ನ ಮಾತಿನಲ್ಲಿ ಅಸಮಾಧಾನ ಇರುತ್ತಿತ್ತು. ಅಂತೂ ಸಮಸ್ಯೆಯೊಂದು ನನ್ನ ಕೊರಳಿಗೆ ನೇತು ಬಿದ್ದಿದ್ದು ಖಾತರಿಯಾಯಿತು. ನಾನು ಕಾರಿನೊಳಗೆ ಹತ್ತಿ ಕುಳಿತ ಕೂಡಲೇ ತನ್ನ ಕಾರ್ಯಕ್ಕೆ ಅನುಮೋದನೆ ದೊರೆತ ಖುಷಿಯಲ್ಲಿ ಮಗ ಸ್ಟೇರಿಂಗ್ ಹಿಡಿದು ಕೀ ತಿರುವಿದ. ಒಂದೆರಡು ಬಾರಿ ಅಸಹಕಾರ ತೋರಿದ ಇಂಜಿನ್ ಹಿಂದುಗಡೆ ಹೊಗೆಯ ಕಾರ್ಮೋಡವನ್ನೇ ಉಗುಳುತ್ತಾ ಚಾಲೂ ಆಯಿತು. ಅವರ ಸಂಭ್ರಮದ ನಡುವೆ ನಾನು ಜೀವ ಹಿಡಿಮಾಡಿ ಕುಳಿತಿದ್ದೆ.
‘ನಾನು’ ಕಾರು ತೆಗೆದುಕೊಂಡ ಸುದ್ದಿ ಆಗಲೇ ಶರವೇಗದಲ್ಲಿ ಎಂಬಂತೆ ಹರಡಿ ಬಿಟ್ಟಿದೆ ಎಂಬುದು ಮನೆ ತಲುಪಿದಾಗಲೇ ತಿಳಿದದ್ದು. ಆಚೀಚೆಯವರೆಲ್ಲಾ ಬಂದು ನೋಡಿ ಕಾರನ್ನು ಪಾಸ್ ಮಾಡಿ ಸಿಹಿ ತಿಂದು ತೆರಳತೊಡಗಿದರು. ಈ ಸುದ್ದಿ ಎಪ್ಪತ್ತು ಕಿಲೋಮೀಟರ್ ದೂರದ ನನ್ನ ಹುಟ್ಟೂರಿಗೂ ಆಗಲೇ ತಲುಪಿಬಿಟ್ಟಿತ್ತು. ನಾಗ್ರಾಜಣ್ಣ, ನೀವ್ ಕಾರ್ ತಗಂಡಿದೋರಂತೆ, ಪಸ್ಟ್ ಒಂದ್ ಸಲ ಊರಿಗೆ ತಗಂಡ್ ಬಂದು ಬೋರೇದೇವ್ರಿಗೆ ಪೂಜೆ ಮಾಡಿಸ್ಕಂಡು ಹೋಗಿ, ದೇವರ ಬಗ್ಗೆ ಉದಾಸೀನ ಮಾಡಬೇಡ. ಊರವರು ನೋಡ್ಲಿ, ನಮ್ಮ ಅಣ್ಣ ತಮ್ಮರು ಕಾರ್ ತಗಳಂಗಾಗಿದಾರೆ ಅಂತ ಆ ಕಡೆಯಂದ ಪೋನಿನಲ್ಲಿ ನಮ್ಮ ಅಣ್ಣತಮ್ಮರ ಮನೆ ಅಮ್ಮಣ್ಣಮ್ಮ ಎಚ್ಚರಿಸುವವಳಂತೆ ಹೇಳಿದಾಗ ಅವಳ ಮಾತಿನಲ್ಲೂ ಸಂಭ್ರಮ ಕಂಡು ತಬ್ಬಿಬ್ಬಾದೆ.
ಮೂಲೆಯಲ್ಲಿ ಮಲಗಿದ್ದ ಎಂಬತ್ತೈದರ ತಂದೆ ಹಾಗೂ ತಾಯಿ ಸಹ ಸಂಭ್ರಮದಲ್ಲಿ ಪಾಲುದಾರರಾಗಿ ‘ನಡಿ ಒಂದ್ ಸಲ ಬದುಕಿದ್ದಾಗಲೇ ಮಗನ ಕಾರಲ್ಲಿ ಕೂತ್ಗಂಡು ಊರಿಗೆ ಹೋಗಿ ಬಂದ್ ಬಿಡಾನ’ ಎನ್ನುತ್ತಾ ಬದುಕಿನಲ್ಲಿ ಏನೋ ಸಾರ್ಥಕತೆಯನ್ನು ಕಂಡವರಂತೆ ನಮ್ಮ ತಾಯಿಗೆ ಹೇಳುತ್ತಿದ್ದುದು ಕೇಳಿದಾಗ ಈ ವಿಚಾರದಲ್ಲಿ ನನ್ನ ಯಾವುದೇ ವಿರೋಧ ಅರಣ್ಯರೋಧನವಾಗುವುದಲ್ಲದೆ ಬೇರೇನೂ ಅಲ್ಲ ಅಂದುಕೊಂಡೆ. ವಸ್ತುಸ್ಥಿತಿಯ ಅರಿವಿದ್ದ ನಾನು ಯಾರಾದರೂ ಏನಾದರೂ ಸಂಭ್ರಮ ಪಟ್ಟಿಕೊಳ್ಳಲಿ, ನನಗಂತೂ ಕಾರಿನ ಸಹವಾಸವೇ ಬೇಡ. ಅರವತ್ತು ಸಾವಿರದ ಹೊರೆಯಂತೂ ನನ್ನ ತಲೆಯ ಮೇಲೆಯೇ ಎಂದುಕೊಳ್ಳುತ್ತಾ ಮೌನವಹಿಸಿದೆ.
ಆದರೂ ಕಾರಿನಲ್ಲಿ ಪಯಣ ಹೊರಡಲೇ ಬೇಕಾದ ಸಂದರ್ಭ ಬಹಳ ಬೇಗನೇ ಬಂದು ಬಿಟ್ಟಿತು. ಊರಲ್ಲಿ ಸುಗ್ಗಿಹಬ್ಬ. ಕಾರಿದ್ದುದರಿಂದ ಊರಿಗೆ ಹೋಗಿ ಹಬ್ಬ ಮುಗಿಸಿ ಬರೋಣವೆಂದು ತಂದೆ ತಾಯಿ ಹೊರಟು ಬಿಟ್ಟಿದ್ದರು. ಅವರ ಮನಸ್ಸಿಗೆ ಬೇಸರ ಮಾಡಬಾರದೆಂದು ನಾನೂ ಸಮ್ಮತಿಸಿದೆ. ನಮ್ಮ ಆಪೀಸಿನ ಡ್ರೈವರ್ ರಾಮಶೆಟ್ಟಿ ಒಂದು ದಿನ ರಜಾಹಾಕಿ ನಮಗೆ ಸಾರಥಿಯಾಗಲು ಒಪ್ಪಿದ. ಕೀ ಪಡೆದುಕೊಂಡ ಕೂಡಲೇ ವೃತ್ತಿ ಸಹಜವೆಂಬಂತೆ ಕಾರ್ ಚಾಲೂ ಮಾಡಿ ಚೆಕ್ ಮಾಡಿಕೊಂಡು ನೋಡಿದ. ಟೈರುಗಳನ್ನೆಲ್ಲಾ ಕೈಯಲ್ಲಿ ಗುದ್ದಿ ನೋಡಿದ. ಸಮಾಧಾನವಾದಂತೆ ತೋರಲಿಲ್ಲ. ಅದನ್ನು ಕೊಂಡ ಸ್ಥಳ ಅದನ್ನು ರಿಪೇರಿ ಮಾಡುವ ಮೆಕ್ಯಾನಿಕ್ ಬಗ್ಗೆ ಎಲ್ಲ ವಿವರ ಹಾಗೂ ಪೋನ್ ನಂಬರ್ನ್ನು ನನ್ನ ಮಗನಿಂದ ಪಡೆದುಕೊಂಡ.
ಕಾರಿಗೆ ಡೀಸಲ್ ತುಂಬಿಸಿ ಮೊದಲಿಗೆ ಮೆಕ್ಯಾನಿಕ್ ಬಳಿ ತೆಗೆದುಕೊಂಡು ಹೋದ. ಅವನು ಹಿಂದೆ ಮುಂದೆ ಎಲ್ಲಾ ಬಗ್ಗಿ ನೋಡಿ ಒಮ್ಮೆ ಇಂಜಿನ್ ಚಾಲೂ ಮಾಡಿ ನೋಡಿ ‘ಹೋಗಿ ಬನ್ನಿ ಪರವಾಗಿಲ್ಲ’ ಎಂದ. ಕಪ್ಪು ಹೊಗೆ ಕಾರುತ್ತಾ ನಮ್ಮ ಕಾರು ಊರಿನ ಅಭಿಮುಖವಾಗಿ ಹೊರಟಿತು, ರಸ್ತೆಯಲ್ಲಿನ ಎಲ್ಲರೂ ನಮ್ಮ ಕಾರನ್ನು ಗಮನಿಸುತ್ತಿದ್ದರೂ ಅರ್ಧಗಂಟೆಯವರೆಗೂ ಪಯಣವಂತೂ ಸುಸೂತ್ರವಾಗಿ ಸಾಗಿತ್ತು. ಬಾಳ್ಳುಪೇಟೆ ಸಮೀಪಿಸುತ್ತಿದ್ದಾಗ ಇಂಜಿನಿನಲ್ಲಿ ಬುರ್ಬುರ್ ಸದ್ದು ಹೊರಡತೊಡಗಿತು. ರಾಮಶೆಟ್ಟಿ ಇಳಿದು ಬಾನೆಡ್ ಎತ್ತಿ ನೋಡಿದ. ಮತ್ತೆ ಬಂದು ಸ್ಟಾರ್ಟ್ ಮಾಡಿ ಚಾಲನೆ ಮಾಡತೊಡಗಿದ. ಕಾರು ಹಿಡಿದು ಹಿಡಿದು ಸ್ವಲ್ಪದೂರ ಮುಂದೆ ಹೋಗಿ ಮುಷ್ಕರ ಹೂಡುವವರಂತೆ ನಿಂತೇಬಿಟ್ಟಿತು. ಅಷ್ಟರಲ್ಲಿ ನಮ್ಮ ಅದೃಷ್ಟಕ್ಕೆ ಪಟ್ಟಣ ಪ್ರವೇಶಿಸಿದ್ದೆವು. ಹಿಂದುಗಡೆ ಸೀಟಿನಲ್ಲಿ ಅದುವರೆಗೂ ಆರಾಮವಾಗಿ ಕುಳಿತಿದ್ದ ತಂದೆ ತಾಯಿ ಇದ್ದಕ್ಕಿದ್ದಂತೆಯೇ ರಸ್ತೆಯ ಮಧ್ಯೆ ಕಾರು ನಿಂತದ್ದು ನೋಡಿ ಗಾಬರಿಯಿಂದ ‘ಏನಾಯ್ತು’ ಎಂದರು.
ಶೆಟ್ಟಿ ನನ್ನ ಕಡೆ ತಿರುಗಿ ‘ಗಾಡಿ ಸಿಕ್ಕಾಪಟ್ಟೆ ಡೀಸೆಲ್ ಕುಡಿಯುತ್ತೆ ಅಂತಾ ಕಾಣುತ್ತೆ. ಡೀಸೆಲ್ ಆಗೋಗಿರಬೇಕು. ಎಲ್ಲಿ ಕಾಸುಕೊಡಿ’ ಎನ್ನುತ್ತಾ ಡಿಕ್ಕಿಯೊಳಗಿದ್ದ ಹತ್ತು ಲೀಟರ್ ಕ್ಯಾನ್ ಕೈಗೆತ್ತಿಕೊಂಡ. ಇನ್ನೂ ಮೂವತ್ತು ಕಿಲೋಮೀಟರ್ ಬಂದಿಲ್ಲ. ಅದು ಹೇಗೆ ಡೀಸೆಲ್ ಮುಗಿಯಿತು ಎಂದು ಗಾಬರಿಯಿಂದ ನೋಡುತ್ತಿದ್ದೆ. ‘ಅಲ್ಲಿಂದಿಲ್ಲಿಗೆ ಸರಿಯಾಗಿ ಹತ್ತು ಲೀಟರ್ ಕುಡಿದಿದೆ, ಈಗ ಟ್ಯಾಂಕ್ ಮೊದಲಿನ ಲೆವೆಲ್ಲಿಗೇ ಬಂತು’ ಎನ್ನುತ್ತಾ ಶೆಟ್ಟಿ ಇಂಜಿನ್ ಚಾಲೂ ಮಾಡಿದ. ಗೇರ್ ಬದಲಿಸಿದ. ಆಕ್ಸಿಲೇಟರ್ ಒತ್ತಿದ. ಉಹುಂ. ಕಾರು ನಿಂತ ಸ್ಥಳದಿಂದ ಅಲುಗಾಡಲೊಲ್ಲದು. ಶೆಟ್ಟಿ ಕಾರು ಬಿಟ್ಟು ಇಳಿದ. ಮತ್ತೆ ಬಾನೆಟ್ ಎತ್ತಿ ಚಕ್ ಮಾಡಿದ. ಯಾವು ಯಾವುದೊ ವೈರನ್ನು ಎಳೆದು ನೋಡಿದ. ಅವನ ವಿದ್ಯೆ ಯಾವುದೂ ಅವನ ಉಪಯೋಗಕ್ಕೆ ಬರುವಂತೆ ತೋರಲಿಲ್ಲ. ಬೆವರೊರಸಿಕೊಳ್ಳುತ್ತಾ ಅತ್ತಿತ್ತಾ ಏನೋ ಹುಡುಕುವವನಂತೆ ನೋಡಿದ. ‘ಇರಿ ಬಂದೆ’ ಎನ್ನುತ್ತಾ ದೂರದಲ್ಲಿದ್ದ ವರ್ಕ್ ಷಾಪ್ ಕಡೆ ನಡೆದ. ತುಸು ಹೊತ್ತಿನಲ್ಲೇ ಮೆಕ್ಯಾನಿಕ್ನೊಡನೆ ಹಿಂತಿರುಗಿದ. ಮೆಕ್ಯಾನಿಕ್ ಇಂಜಿನ್ ತೆರೆದು ಅಮೂಲಾಗ್ರವಾಗಿ ಪರಿಶೀಲಿಸಿದ.
‘ಎಲ್ಲಿ ತಗಂಡ್ರಿ ಇಷ್ಟು ಹಳೇ ಡೀಸೆಲ್ ಕಾರು?’ ‘ಡೀಸೆಲ್ ಪೈಪ್ ಹಾಳಾಗಿದೆ. ಆ ಕಡೆ ಸ್ಪೇರ್ಪಾಟ್ಸ್ ಅಂಗಡಿಲಿ ಸಿಕ್ಕುತ್ತೆ, ಹೋಗಿತನ್ನಿ’ ಎಂದ ಶೆಟ್ಟಿಗೆ. ನಾನು ದುಡ್ಡು ಕೊಟ್ಟೆ. ಸರಿಪಡಿಸಿದ ಮೆಕ್ಯಾನಿಕ್ ಅವನ ಕೂಲಿ ಪಡೆದುಕೊಂಡ. ‘ಹುಷಾರಾಗಿ ಹೋಗಿ ಬನ್ನಿ. ಸದ್ಯಕ್ಕೇನೂ ತೊಂದರೆಯಿಲ್ಲ. ಹಾಸನಕ್ಕೆ ವಾಪಾಸ್ ಹೋದಮೇಲೆ ಮಾಮೂಲಿ ವರ್ಕ್ ಷಾಪ್ ನಲ್ಲಿ ಬಿಟ್ಟು ರಿಪೇರಿ ಮಾಡಿ’ ಎಂದು ಸಲಹೆ ಕೊಟ್ಟ. ಕಾರು ಹೊರಡುವವರೆಗೂ ನೋಡುತ್ತಾ ನಿಂತಿದ್ದ ಆತ ‘ಯಾರಾದ್ರೂ ಗಿರಾಕಿ ಸಿಕ್ಕಿದ್ರೆ ಬಿಟ್ಬಿಡಿ’ ಎಂದ. ನಾನು ಯೋಚಿಸುತ್ತಿದ್ದುದಕ್ಕಿಂತಲೂ ಕೇಸ್ ಸೀರಿಯಸ್ಸಾಗಿದೆ ಎನಿಸಿ ಗಾಬರಿಯಾಯಿತು. ಮುನ್ನೆಚ್ಚರಿಕೆಯಾಗಿ ನಾನು ಜೇಬಿನಲ್ಲಿ ಸಾಕಷ್ಟು ಹಣ ಇಟ್ಟುಕ್ಕೊಂಡು ಬಂದಿದ್ದರಿಂದ ಧೈರ್ಯ ತಂದುಕೊಂಡೆ. ಅಂತೂ ಇಂತೂ ಕಾರು ನಿಧಾನವಾಗಿ ಚಲಿಸುತ್ತಾ ಊರು ತಲಪಿಕೊಂಡು ಬಿಟ್ಟಿತು. ಶೆಟ್ಟಿ ಗಂಡಾಂತರದಿಂದ ಪಾರಾಗಿ ಬದುಕಿಕೊಂಡೆ ಎಂಬಂತೆ ನಿಟ್ಟುಸಿರು ಬಿಟ್ಟ.
ನಮ್ಮ ಪಕ್ಕದ ಮನೆಯವರು ಹೊಸದಾಗಿ ಮನೆಕಟ್ಟಲು ಮರಳು ಕಲ್ಲು ಇಟ್ಟಿಗೆ ಹೊಡೆಸಿದ್ದರು. ನಮ್ಮ ಅತ್ತಿಗೆ ಹೊರಬಂದು ಶೆಟ್ಟಿಯ ಬಳಿನಿಂತು ‘ನೋಡಿ ಆದಷ್ಟೂ ಈ ಕಡೆಗೆ ನಿಲ್ಲಿ. ನಮಗೂ ಅವರಿಗೂ ಮಧ್ಯೆ ಆಗದಿಲ್ಲ’ ಎಂದರು. ಶೆಟ್ಟಿ ಕಾರನ್ನು ಹಿಂದೆ ಮುಂದೆ ಹೊಡೆದು ಆದಷ್ಟೂ ನಮ್ಮ ಜಾಗಕ್ಕೆ ಬರುವಂತೆ ನಿಲ್ಲಿಸಿದ ಕಾರಿನ ಹಿಂಭಾಗಕ್ಕೆ ಅವರ ಇಟ್ಟಿಗೆಯ ರಾಶಿ ಇತ್ತು. ಕಾರಿನಿಂದ ಇಳಿದ ಶೆಟ್ಟಿ ‘ಎಲ್ಲಿಯವು ಸಾರ್ ಇಟ್ಟಿಗೆ! ಕೆಂಪಗೆ ಎಷ್ಟು ಕಲರ್ ಆಗಿದಾವೆ’ ಎಂದ. ‘ಇಲ್ಲೇ ಎಲ್ಲೋ ಸಕಲೇಶಪುರದ ಕಡೆಯವು ಇರಬಹ್ದು ಬಾ’ ಎಂದೆ. ತಂದೆ ತಾಯಿ ಊರು ತಲಪಿದ ಖುಷಿಯಲ್ಲಿದ್ದರು. ‘ಇನ್ನು ಎರಡು ದಿನ ಫ್ರೀ. ಬೇಕಾದ್ರೆ ತೋಟದ ಹತ್ರ ಇರುವ ಅಣ್ಣನ ಮನೆಗೆ ಕಳಿಸಿ ಕೊಡ್ತೀನಿ. ಆರಾಮವಾಗಿ ಇದ್ದುಬಿಡು ಸೇಂದಿ ಕುಡಿದುಕೊಂಡು’ ಎಂದೆ ಶೆಟ್ಟಿಗೆ. ‘ಎಲ್ಲಿ ಆರಾಮ ಸಾರ್. ಡೀಸೆಲ್ ಗಾಡಿ ಹಳೇದು ಬೇರೆ. ಆಗಾಗ ಸ್ಟಾರ್ಟ್ ಮಾಡ್ತಾ ಇರ್ಬೇಕು. ಎರಡು ದಿನಾ ಹಂಗೆ ನಿಲ್ಸಿದ್ರೆ ಮತ್ತೆ ಮೆಕ್ಯಾನಿಕನ್ನೆ ಕರಿಬೇಕಾದೀತು’ ಎಂದ.
ಅಣ್ಣನ ಮನೆಯಲ್ಲಿ ಸೇಂದಿಯಿತ್ತು. ಶೆಟ್ಟಿ ಚೆನ್ನಾಗಿ ಸೇವಿಸಿ ಊಟ ಹೊಡೆದು ಕಾರೊಳಗೆ ನಿದ್ದೆ ಮಾಡಿದ. ಬೆಳಗ್ಗೆ ಕಾರಿನ ಇಂಜಿನಿನ ಸದ್ದಾಯಿತು. ಎದ್ದು ಹೊರಬಂದೆ ಆಗಲೇ ಶೆಟ್ಟಿ ಎದ್ದು ಕಾರ್ ಸ್ಟಾರ್ಟ್ ಮಾಡುತ್ತಿದ್ದ. ಕಾರಿನ ಹಿಂಬದಿಯಿಂದ ಕಪ್ಪು ಹೊಗೆಯ ಕಾರ್ಮೋಡ ಏಳತೊಡಗಿತು. ಮುಂದಿನ ಅಂಗಳ ಗುಡಿಸುತ್ತಿದ್ದ ಪಕ್ಕದ ಮನೆಯವನ ಸೊಸೆ ಮೂಗಿಗೆ ಬಟ್ಟೆ ಹಿಡಿದುಕೊಂಡು ಒಳಹೋಗಿ ಬಾಗಿಲು, ಕಿಟಕಿ ಭದ್ರಪಡಿಸಿಕೊಂಡಳು. ಹಬ್ಬ ಮುಗಿಯಿತು. ಅಂದಿನ ರಾತ್ರಿ ನನ್ನ ತಂಗಿ ಜಯ ಹಾಗೂ ಅವಳ ಗಂಡ ರಮೇಶ ಊರಿಗೆ ಬಂದಿದ್ದ. ತಂದೆತಾಯಿಗಳನ್ನು ಮಾತನಾಡಿಸಿಕೊಂಡು ಹೋಗಲು ಬಂದಿದ್ದರು. ರಾತ್ರಿ ಹಾಲು ಕರೆದು ದನಗಳನ್ನು ಕೂಡಿ ಬಂದಿದ್ದ ಅವರು ಬೆಳಗ್ಗೆ ಎರಡು ಕಿಲೋಮೀಟರ್ ಹೆತ್ತೂರಿಗೆ ಹೋಗಿ ಬೆಳಗಿನ ಬಸ್ಸು ಹಿಡಿಯಬೇಕಾಗಿತ್ತು. ‘ಹ್ಯಾಂಗೂ ಬಾವನ ಕಾರು ಇದೆಯಲ್ಲ ಹೆತ್ತೂರಿಗೆ ಬಿಟ್ಟುಕೊಡುತ್ತಾರೆ’ ಎಂದು ರಾತ್ರಿಯೇ ಹೇಳಿದ್ದ ರಮೇಶ. ಅಣ್ಣನ ಕಾರಿನಲ್ಲಿ ಕುಳಿತು ಹೋಗುವುದು ತಂಗಿಗೂ ಹೆಮ್ಮೆಯ ವಿಷಯವಲ್ಲವೇ!
ಸರಿ ಎಂದು ಆ ಬಗ್ಗೆ ಶೆಟ್ಟಿಗೆ ಸೂಚನೆ ಕೊಟ್ಟಿದ್ದೆ. ಅವರನ್ನು ಕೂರಿಸಿಕೊಂಡ ಕಾರು ಎರಡು ದಿನಗಳಿಂದ ನಿಂತಲ್ಲಿಂದ ಮೊದಲಬಾರಿಗೆ ಕದಲಿತು. ಅವರನ್ನು ಬೀಳ್ಕೊಟ್ಟು ಒಳಬಂದ ನಾನು ಹೊರಡುವ ಸಿದ್ದತೆಯಲ್ಲಿ ತೊಡಗಿದೆ. ಅರ್ಧ ಗಂಟೆಯಾದರೂ ಕಾರು ಹಿಂತಿರುಗಿ ಬರಲಿಲ್ಲ. ನನಗೋ ಕಾತುರ. ಮನಸ್ಸಿನಲ್ಲಿ ಯಾಕೋ ಒಂದು ಬಗೆಯ ಕಳವಳ. ರಸ್ತೆಯ ಕಡೆಯೇ ನೋಡುತ್ತಾ ನಿಂತಿದ್ದೆ. ಶೆಟ್ಟಿ ನಡೆದುಕೊಂಡು ಬರುತ್ತಿದ್ದ. ನನ್ನ ಕಳವಳ ಗಾಬರಿಯಾಗಿ ಮಾರ್ಪಾಟಾಯಿತು. ‘ಕಾರು?’ ಎಂದೆ. ‘ಏ ಬಿಡಿ ಸಾರ್, ಅದೊಳ್ಳೆ ಕಾರು! ದೇವಸ್ಥಾನದ ಹತ್ತಿರ ನಿಲ್ಲಿಸಿ ಬಂದಿದೀನಿ’ ಎಂದ ಅಸಮಾಧಾನದಿಂದ. ‘ಯಾಕೆ ಮಾರಾಯ ಏನಾಯ್ತು’ ಎಂದೆ. ‘ಆ ದೇವಸ್ಥಾನದ ಮುಂದಿನ ಅಪ್ಪಿನಲ್ಲಿ ಹತ್ತಲೇಬಾರದ ಗಾಡಿ! ಪುಲ್ಲಿಂಗೇ ಇಲ್ಲ. ಅವರಿಬ್ಬರೂ ಇಳಿದು ನೂಕಿದರು. ಆದರೂ ಏನೆ ಮಾಡಿದರೂ ಆ ಏರು ರಸ್ತೆಯಲ್ಲಿ ಹತ್ತಲೇ ಇಲ್ಲ. ಅವರು ಬೇಸತ್ತು ನಡಕೊಂಡೇ ಹೋದರು. ನಾನು ಹಾಗೇ ಹಿಮ್ಮುಖನಾಗಿ ಬಂದು ತಗ್ಗಿನಲ್ಲಿ ದೇವಸ್ಥಾನದ ಬಳಿ ನಿಲ್ಲಿಸಿ ಬಂದೆ’ ಎನ್ನುತ್ತಾ ಮುಖದ ಬೆವರೊರೆಸಿಕೊಳ್ಳತೊಡಗಿದ.
ಅಷ್ಟರಲ್ಲಿ ಅಮ್ಮಣ್ಣಮ್ಮ ಅವಸರದಲ್ಲಿ ಬರುತ್ತಿರುವುದು ಕಂಡಿತು. ಅವಳ ಮುಖದಲ್ಲಿ ಗಾಬರಿ ತುಂಬಿತ್ತು. ‘ಉದಾಸೀನ ಮಾಡಬೇಡ ಅಂದ್ರು ಕೇಳಿದ್ರಾ! ದಿಣ್ಣೆ ಹತ್ತಿ ಮುಂದೆ ಹೋಗದಿಕ್ಕೇ ಬಿಡಲಿಲ್ವಲ್ಲ. ನೋಡಿದ್ರಾ ದೇವರ ಮಹಿಮೆ!’ ಎಂದು ಆಪಾದನೆ ಮಾಡತೊಡಗಿದಳು. ಹೊರಡಲು ಅಣಿಯಾಗಿದ್ದ ನನ್ನ ತಂದೆತಾಯಿಗಳ ಬಳಿಗೆ ಹೋಗಿ ‘ನೋಡಿ ಅಜ್ಜಾ. ಇವರೆಲ್ಲಾ ಯಾವಾಗ್ಲೂ ಹೀಗೇ…’ ಮುಂತಾಗಿ ದೂರುತ್ತಿದ್ದಳು. ನಾನು ಶೆಟ್ಟಿಯ ಕಡೆ ತಿರುಗಿ ‘ಈಗ ಏನ್ಮಾಡೋಣ’ ಎಂದೆ ಜೇಬು ಮುಟ್ಟಿ ನೋಡಿಕೊಳ್ಳುತ್ತಾ. ‘ಈಗ ನನ್ನ ಕೈಲೆ ಏನಿದೆ? ಯಾವುದೋ ಪಾರ್ಟ್ಸ್ ಎಲ್ಲಾ ಹೋಗಿರಬಹುದು. ಏನಿದ್ರೂ ಹಾಸನದಿಂದ ಸರ್ದಾರ್ ಪಾಷಾನೇ ಬರಬೇಕು!’ ಎನ್ನುತ್ತಾ ಅವನು ತನ್ನ ಜೇಬಿನಲ್ಲಿದ್ದ ಸಣ್ಣ ಡೈರಿ ತೆಗೆದು ಮೆಕ್ಯಾನಿಕ್ನ ಫೋನ್ ನಂಬರ್ ಹುಡುಕತೊಡಗಿದ್ದ. ನಾನು ಕಾರು ನಿಂತಿದ್ದ ಸ್ಥಳದತ್ತ ಕಣ್ಣಾಡಿಸಿದೆ. ಇಟ್ಟಿಗೆಯ ರಾಶಿ ಸಂಪೂರ್ಣ ಕಪ್ಪಾಗಿ ಹೋಗಿತ್ತು!







🙂 good one!!