ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡುವ 'ಹುಲಿಕಡ್ಜಳ'

ನಂದಿನಿ ಎಚ್.ಎಂ
ಕಥೆಗಳನ್ನು ಓದುವಾಗ ಕಥೆಯ ಪರಿಸರಕ್ಕನುಸಾರ ಮನೋಭೂಮಿಕೆಯಲ್ಲಿ ಒಂದು ಚಿತ್ರ ಕಟ್ಟುತ್ತಿರುತ್ತದೆ. ನಗರದ ಕಥೆಗಳು, ಗ್ರಾಮೀಣ ಪರಿಸರದ ಕಥೆಗಳು, ವೈದ್ಯಕೀಯ ಕಥೆಗಳು, ವೈಜ್ಞಾನಿಕ ಕಥೆಗಳು, ಪುರುಷ ಕೇಂದ್ರಿತ, ಮಗು, ಸಾಕುಪ್ರಾಣಿ ಕೇಂದ್ರವಾಗಿಟ್ಟ ಕಥೆಗಳು ಬೇರೆಬೇರೆಯಾಗಿ ಪರಿಣಾಮ ಬೀರುತ್ತವೆ. ಅವರವರ ಪರಿಸರದ ಕಥೆಗಳು ಅವರವರಿಗೆ ಬಹುತೇಕ ನಮ್ಮದೇ ಕಥೆಗಳು ಅಂತಲೂ ಅನ್ನಿಸುವುದಿದೆ.
ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಹರೀಶ್.ಟಿ.ಜಿ ಅವರ ಸಂಕಲನ‌ ‘ಹುಲಿಕಡ್ಜಿಳ’ ಇತ್ತೀಚಿಗೆ ನಾನು ಓದಿದ ಕಥೆಗಳ ಸಂಕಲನ.
ಪೇಟೆಯವರಿಗೆ ಹೊಸತಾಗಿ ಕೇಳುವ ಈ ಹುಲಿಕಡ್ಜಿಳ ಅಂದರೆ ಒಂದು ಬಗೆಯ ಜೇನಿನ ಅಥವ ಬೇಣದ ಜಾತಿಯ ಕೀಟ. ಗಾತ್ರದಲ್ಲಿ ಹೆಜ್ಜೇನಿನಷ್ಟಿದ್ದು ಪೊದೆಗಳಲ್ಲಿ, ಮರದಲ್ಲಿ, ಹೂಗಿಡದಲ್ಲಿ ಕೆಲವೊಮ್ಮೆ ತಾರಸಿಯಲ್ಲಿ ಕೂಡ ದೊಡ್ಡ ಗಾತ್ರದ ಗೂಡುಗಳನ್ನು ಕಟ್ಟಿ ವಾಸಿಸುತ್ತದೆ.
ಗುಂಪಿನಲ್ಲಿ ವಾಸಿಸುವ ಇದು ಯಾರಾದರೂ ಅದರ ಸನಿಹ ಹೋದರೆ ಕೆರಳಿ ದಾಳಿ ಮಾಡುತ್ತದೆ. ಒಂದು ಹುಳುವಿನ ಕಡಿತಕ್ಕೇ ಅಗಾಧ ನೋವಿದ್ದು ಹೆಚ್ಚು ಹುಳು ಕಡಿದರೆ ನೋವಿನ ತೀವ್ರತೆಗೆ ಸಾಯುವ ಸಾಧ್ಯತೆಯೂ ಇರುತ್ತದೆ. ಇದು ಹುಲಿಕಡ್ಜಿಳದ ಅರ್ಥ.
ಒಟ್ಟು ಹನ್ನೊಂದು ಕಥೆಗಳ ಈ ಸಂಕಲನ ಮಲೆನಾಡಿನ ಗ್ರಾಮೀಣ ಪರಿಸರದ ಸ್ವರೂಪವನ್ನು ಕಟ್ಟಿಕೊಡುತ್ತಲೇ ಹಳ್ಳಿಗಳು ಆಧುನಿಕತೆಯತ್ತ ಮುಖ ಮಾಡುವ ನಿಟ್ಟಿನಲ್ಲಿ ಆಗುವ ಅನಾಹುತಗಳತ್ತ ಬೊಟ್ಟು ಮಾಡುತ್ತಿವೆ. ಅಭಿವೃದ್ಧಿ ಮತ್ತು ಪರಿಸರ ಎರಡೂ ಒಟ್ಟಿಗೇ ನಡೆಯುವುದು ಎಷ್ಟು ಅಸಾಧ್ಯ ಎನ್ನುವ ಅರಿವಿನೊಂದಿಗೇ ಅರ್ಧ ರಾತ್ರೀಲಿ ಕೊಡೆ ಹಿಡಿದವನ‌ ಹಾಗೆ ನಗರಕ್ಕೆ ತೆರೆದುಕೊಳ್ಳುತ್ತಿದ್ದೇವೆ ಎನ್ನುವ ಬರಾಸಿನಲ್ಲಿ ಅನಾಹುತಗಳು ಗೊತ್ತೇ ಆಗದಂತೆ ಘಟಿಸಿ ಬದುಕಿಗೆ ಬದುಕನ್ನೇ ಆಹುತಿ ತೆಗೆದುಕ್ಕೊಳ್ಳುವ ಪಾತ್ರಗಳು ಕಥೆಯಲ್ಲಿ ಮಾತಾಡುತ್ತಿವೆ.

ನನ್ನ ಮೊದಲ ಇಷ್ಟದ ಕಥೆ ‘ಕಟ್ಟೆ’. ಮೂಲತಃ ಕೃಷಿ ಆಸಕ್ತಿ ಇರುವ ಸಲುವಾಗಿಯೋ ಅಥವಾ ಹೀಗೊಂದು ಮಾತು ನಮ್ಮಲ್ಲಿಯೂ ಕೇಳಿಬರುವುದರಿಂದಲೋ ಕಥೆ ಆಪ್ತವೆನಿಸುತ್ತದೆ. ಜಮೀನು ಮಾಡುವ ಅಣ್ಣನಿಗೆ ತಮ್ಮ ತಾನು ದುಡಿದು ಕಳಿಸುವ ಹಣದಲ್ಲಿ ಇನ್ನಷ್ಟು ತೋಟ ವಿಸ್ತರಿಸುವ ಬಯಕೆ ಹೇಳಿದಾಗ ಇದ್ದುದ್ದರಲ್ಲಿ ತೃಪ್ತಿ ಕಂಡುಕೊಳ್ಳುವ ಮನಸ್ಥಿತಿ.
ಎಷ್ಟು ಅನಿವಾರ್ಯ ಸದ್ಯ ಎನ್ನುವುದನ್ನು ಗಬಡಿ ನಾಗರಾಜರಾಯರ ದೃಷ್ಟಾಂತದೊಂದಿಗೆ ಹೇಳುತ್ತಾ ಕೃಷಿಯಲ್ಲಿ ಸ್ವಲ್ಪ ಆಯಾ ತಪ್ಪಿದರೂ ಹಾಳಾಗುವ ಮನೆಗಳು, ಆಳು ಮಾಡಿದ್ದೇ ತಾನೂ ತಿರುಗಿದ್ದೇ ಎನ್ನುವಂತಾದಾಗ ಮನೆತನಗಳು ಹಾಳಾಗುವುದನ್ನು ಹೇಳುವ ಕಥೆ. ‘ಫೈನಾನ್ಸಿನಲ್ಲಿ ಮಾಡಿದ ಸಾಲದ ಬಡ್ಡಿ ಮೀಟರಿಂದ ಕಿಮೀಗೆ ಏರಿತು.ಕುಟುಂಬಸ್ತರೆ ಒಬ್ಬರಿಗೊಬ್ಬರಿಗೆ ಕಾಣದ ಹಾಗೆ  ಮನೆಯ ಆಸ್ತಿ‌ಮಾರಾಟ ಮಾಡಿಕೊಂಡು ಕೊನೆಗೆ ದಿವಾಳಿಯೆದ್ದು ಕೂಲಿ ಮಾಡುವ ಸ್ಥಿತಿಯಂತ ವಾಸ್ತವದ ಕಥೆ..
ಬಹಳಷ್ಟು ಹಳ್ಳಿಗಳಲ್ಲಿ ತೀರ ಈ ಮಟ್ಟಕ್ಕಲ್ಲದಿದ್ದರೂ ಶೋಕಿ ಮಾಡಿದ ಕೃಷಿಕ ಖಾಲಿ ಕೈಯಾಗುವುದನ್ನು ನೋಡಿರುವುದೇ. ಅಗಲ ಮಾಡುವುದಕ್ಕಿಂತ ಆಳ ಮಾಡು ಎನ್ನುವುದು ಕೃಷಿಯಲ್ಲಿ ಸಾಮಾನ್ಯವಾಗಿ ಬಳಸೋ ಮಾತು.. ಅಂದರೆ ಕೃಷಿ ಭೂಮಿಯನ್ನು ವಿಸ್ತರಿಸುವುದಕ್ಕಿಂತ ಇರುವುದನ್ನು ಆಸಕ್ತಿ ಮತ್ತು ಶ್ರಮವಹಿಸಿ ಮಾಡು ಎನ್ನುವ  ಭಾವ.
ಇನ್ನೊಂದು ಕಥೆ ‘ಬೇಗೆ’
ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಹೆಣ್ಣುಗಳ ಮನೋಲೋಕ. ಹಣದ ಮೇಲಾಟದೊಂದಿಗೆ ಆರಂಭವಾಗುವ ಕಥೆ ನಂತರದಲ್ಲಿ ಸಂಸಾರ, ಸಮಾಜ, ವೈಯಕ್ತಿಕ ಸುಖ, ಕಾಮನೆಗಳ ಕಡೆಗೆ ಮುಖ ಮಾಡುತ್ತಾ ಈ ಕಾಲದ ಹೆಣ್ಣುಗಳ ಮಾತು ಮನಸಿನ ಕತೆ. ಮುಖವಾಡ ತೊಡುವಲ್ಲಿ ಬಲು ನಿಸ್ಸೀಮರಾದ ನಮ್ಮ ಹೆಣ್ಣುಮಕ್ಕಳು ಕೇವಲ ಆಡಂಬರ ಮಾತ್ರ ನಟಿಸುತ್ತಿಲ್ಲ.
ಬದಲಾಗಿ ಸಂಸಾರ ಸುಖ, ಕಾಮತೃಪ್ತಿ, ಮನಶ್ಯಾಂತಿಯನ್ನೂ ನಟಿಸುತ್ತಾ ಈ ಯಾವುದಕ್ಕೂ ಸಲ್ಲದ ಗಂಡನನ್ನು ಬಿಟ್ಟು ಹೋಗಬೇಕೆಂದರೂ ಸಾಧ್ಯವಾಗದ ಒಂದು ಸಾಂಸಾರಿಕ ಬಂಧನದೊಳಗೆ ಬಲಿಯಾಗಿ ಹೋಗುವ, ಅದನ್ನು ಬಲಿ ಎನ್ನುವುದಾ? ಸಹನೆ ಎನ್ನುವುದಾ ಎಂಬ ಗೊಂದಲದಲ್ಲಿ ಇರುವಾಗ ಯಾರಾದರೂ ಆತ್ಮೀಯರ ಹತ್ರ ಹೇಳಿಕೊಂಡು ಹಗುರಾಗಿ ಮತ್ತೆ ಹೊಸದಾಗಿ ಸಂಸಾರದತ್ತ ಮುಖ ಮಾಡಲು ಸಾಧ್ಯವಾಗುತ್ತದೆ‌ ಎನ್ನುವ ಕಥೆ.
ಬಿಟ್ಟು ಹೋಗಬೇಕು ಅನಿಸುತ್ತೆ ಇವನನ್ನು. ಆದರೆ ನಮ್ಮ ಅಪ್ಪನ ಅಮ್ಮನ ಎದಿರು ಸುಭಗನ ಥರ ನಡಕೊಳ್ಳೋದು, ಅವರೆದುರು ನನ್ನ ಇನ್ನಿಲ್ಲದಂತೆ ಪ್ರೀತಿಸೋ ನಾಟಕ ಆಡೋದು.. ಇಂಥ ಬಂಗಾರದಂತ ಅಳಿಯನ ‌ಮೇಲೆ ಪುಕಾರು ಹೇಳಿದರೆ ತವರಲ್ಲಿ ತನಗೆ ಮರ್ಯಾದೆ ಎಲ್ಲಿ ಇದು ‘ಬೇಗೆ’ಯ ಸಾಲುಗಳು. ನಮ್ಮ ಬಹುತೇಕ ಹೆಣ್ಣುಮಕ್ಕಳ ಬೂದಿ ಮುಚ್ಚಿದ ಸಂಸಾರದ ಕಥೆಯಂತೆ ಅನಿಸುತ್ತದೆ.
ಇನ್ನೂ ಹುಲಿಕಡ್ಜಿಳ ಸಂಕಲನದ ಶ್ರೇಷ್ಠ ಕಥೆ. ಹಣವಿದ್ದವರ ಅಹಮ್ಮು ಹೇಗೆ ಹಳ್ಳಿಯೊಂದರಲ್ಲಿ ಕೆಲಸ ಮಾಡುತ್ತದೆ.. ಎಲ್ಲರ ಮನೆಯ ಅಡುಗೆಯನ್ನು ತಾನು ಎಂಜಲು ಮಾಡಬಹುದೆನ್ನುವ ಮನಸ್ಥಿತಿಯ ನಾಗೇಸಣ್ಣನಂತ ಗೌಡ್ರ ಮಗ, ಶಾಲೆಗೆ ಹೋಗೊ ಹುಡುಗಿ ಪುಸ್ಪ ನ ಮೇಲೆ ತನ್ನ ಕಾಮದ ಕಣ್ಣು ಹಾಕಿದ್ದು ಗೊತ್ತಾದಾಗ ಹುಡುಗಿಯ ಅಪ್ಪ ಅತ್ಯಂತ ತಣ್ಣಗೆ ಅವನನ್ನು ನಿವಾರಿಸಿಕೊಳ್ಳುವ ಬಗೆ.

ಹಳೆಯ ವಿಷಯವೇ ಆದರೂ ಕಥೆ ಹೊಸದೇ ಕುತೂಹಲಯಲ್ಲಿ ಓದಿಸಿಕೊಂಡು, ನಾಗೇಸಣ್ಣನ ಅಂತ್ಯದಲ್ಲಿ ಒಂದು ರಹಸ್ಯವನ್ನು ಉಳಿಸಿಕೊಳ್ಳುವುದರ ಮೂಲಕ ಯಶಸ್ವಿ ಕಥೆಯಾಗಿದೆ.
‘ತವರು’ ಕಥೆ ಹೆಣ್ಣು ಅದೆಷ್ಟೇ ವಯಸ್ಸಾದರೂ ತನ್ನ ತೌರಿನ ವ್ಯಾಮೋಹದಿಂದ, ವಾತ್ಸಲ್ಯ ದಿಂದ ಮುಕ್ತಳಾಗದ ಕಥೆ. ತನ್ನ ಹಣ್ಣು ಹಣ್ಣು ಮುದುಕಿ ತಾಯಿ ತನ್ನ ಅಣ್ಣನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರನ್ನು ನೋಡಿ ಬರುವ ಕಥೆ. ಹೋಗುವಾಗ ತವರ ಹಾದಿಯಲ್ಲಿ ಕಾಣುವ ತನ್ನ ಬಾಲ್ಯ, ಯೌವನ ಜೊತೆಗೆ ತವರಿನ ತನ್ನ ಮನೆಯ ಕೋಣೆ-ಕೋಣೆಯಲ್ಲೂ ಏನೋ ಹುಡುಕುವವಳಂತೆ ತನ್ನನ್ನು ತಾನು ಕಂಡುಕೊಂಡಿದ್ದು, ಹಿಂದಿನ ಅತ್ತಿಗೆ ನಾದಿನಿ ಬಾಂಧವ್ಯ, ಅಣ್ಣ-ತಂಗಿಯರ ಅಕ್ಕರೆ ಇವೆಲ್ಲವನ್ನೂ ಹೇಳುತ್ತಾ ಕುಟುಂಬ ಸಾಮರಸ್ಯ ಕೊಡುವ  ನೆಮ್ಮದಿಯ ಕುರಿತು ಹೇಳುತ್ತದೆ.
ಕಡ್ಗೋಲು‌ ಮುರ್ಗ ಕತೆಯ ಭಾವನಾ ಪಾತ್ರ ಒಂಥರ ಹೆಚ್ಚೇ ಆಪ್ತವಾಗುತ್ತಾ ಹೆಣ್ಣು ಹೇಗಿರಬಾರದು ಎನ್ನುವುದನ್ನು ಹೇಳುವ ಕಥೆ. ಅಣ್ಣ-ತಮ್ಮಂದಿರ ಆಸ್ತಿ ಜಗಳಕ್ಕೆ ಹೇಗೆ ಭಾವನಾ ತುಪ್ಪ ಸುರಿದು ಉರಿ ಆರದಂತೆ‌ ನೋಡಿಕೊಳ್ತಾಳೆ ಮತ್ತು ಅದರೊಳಗೂ ತನ್ನ ಮಗನನ್ನು ಇಂಗ್ಲೀಷ್ ಶಾಲೆಯಲ್ಲಿ ಓದಿಸಲು ಮಾಡಿಕೊಂಡಿರುವ ಸಾಲ ತೀರಿಸುವ ಅಸಹಾಯಕತೆ ಹೇಳುವಾಗಲೇ ದೋಸೆ ಮಗುಚಿದ ಹಾಗೆ ಅವಳ ಗಂಡ ಬಿದ್ದು ಸೊಂಟ ಮುರಿದುಕೊಳ್ಳುವ ವಿಚಾರ ಕಲಿಕಾಲದಲ್ಲೂ ಸಂಭವಿಸೋದು ಸ್ವಲ್ಪ ಮಟ್ಟಿಗಿನ ಕಥೆಯ ಕೊರತೆಯಂತೆ ಅನಿಸುತ್ತದೆ.
ಪರಮಸುಖಿ ಕಥೆ ಬೈರಪ್ಪನವರ ತಬ್ಬಲಿಯು ನೀನಾದೆ ಮಗನೆ ಕಾದಂಬರಿಯ ಸಂಕ್ಷಿಪ್ತ ರೂಪದಂತೆ ಭಾಸವಾಗುತ್ತದೆ. ಸಾಕಲಾರದೆಯೆನ್ನ ಕಥೆ ಕಥೆಯಂತಲ್ಲದಿದ್ದರೂ ಅಪ್ಪ-ಮಗಳ ಮುದ್ಮುದ್ದು ಸಂಭಾಷಣೆಯಿಂದಾಗಿಯೇ ಗೆದ್ದಿದೆ. ಇದೇನಿದು, ಗೊಂಬೆ, ಕುರುಡ ಹಿಡಿದ ಬಡಿಗೆ, ಪರಿಮಳದ ಮಿಡಿ ಕಥೆಗಳೆಲ್ಲವೂ ಆಧುನಿಕತೆಯ ಆವಾಂತರಗಳನ್ನೇ ಬೇರೆ ಬೇರೆ ಬಗೆಯಲ್ಲಿ, ಪರಿಸರದಲ್ಲಿ ಹೇಳಿರುವ ಕಥೆಗಳು. ಒಟ್ಟಿನಲ್ಲಿ ಒಂದು ಅಪ್ಪಟ ಮಲೆನಾಡು ಹೊಕ್ಕ ಅನುಭವ ಸಂಕಲನದ ಮುಕ್ತಾಯದೊಂದಿಗೆ ಆಗುತ್ತಾ ಒಳ್ಳೆಯ ಕಥೆಗಳನ್ನು ಓದಿದ ಸಮಾಧಾನವೂ ಸಿಗುತ್ತದೆ.
ಸಂಕಲನಕ್ಕೆ ಜಿ.ರಾಜಶೇಖರ್ ಅವರ ದೀರ್ಘ ಮುನ್ನುಡಿಯಿದ್ದು ಕಥೆಯ ಪ್ರವೇಶಿಕೆಗೆ ಸೂಕ್ತವಾಗಿದೆ. ಸಂಕಲನದ ಹಿಂಬದಿಯ ರಕ್ಷಾಪುಟವು ಒಳಗಿನ ಒಟ್ಟು ಸಾರ ಹೀರಿ ತೆಗೆದ ಚಿತ್ರದಂತೆನಿಸಿ ಸಂಕಲನಕ್ಕೆ ಸಾರ್ಥಕ್ಯ ಕೊಟ್ಟಿದೆ.
ಸಂಕಲನವನ್ನು ಸೊರಬದ ‘ನೇಕಾರ ಪ್ರಕಾಶನ’ವೂ ಪ್ರಕಟಿಸಿದ್ದು 9538650944 ನಂಬರಿನಲ್ಲಿ
ಪುಸ್ತಕದ ಪ್ರತಿಗಳು ದೊರೆಯುತ್ತವೆ.

‍ಲೇಖಕರು avadhi

19 October, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading