ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡುವ ರಘು ಇಡ್ಕಿದು ಅವರ ‘ಒಂಜಿ ಪೆತ್ತದ ಕತೆ’

 

ಇಂದಿರಾ ಹೆಗ್ಗಡೆ 

ಐತಿಹಾಸಿಕವಾಗಿ ಮಾತ್ರವಲ್ಲ ಸ್ವಾತಂತ್ರ್ಯಾನಂತರ ಕೂಡಾ ಆಳುವ ವರ್ಗದಿಂದ ನಿರ್ಲಕ್ಷಿತವಾದ ಭಾಷೆ ಮತ್ತು ಪ್ರದೇಶ ತುಳುನಾಡು. . ಹೀಗಾಗಿ ಭಾಷಾವಾರು ಪ್ರಾಂತದಲ್ಲಿ ತುಳುನಾಡಿನ ಒಂದು ಭಾಗ ಕೇರಳಕ್ಕೆ ಹೋಗಿದೆ. ಮತ್ತೊಂದು ಭಾಗ ಕರ್ನಾಟಕಕ್ಕೆ ಸೆರಿದೆ. ಗೋವಾಕ್ಕಿಂತ ಹೆಚ್ಚಿನ ಪ್ರದೇಶವನ್ನು ಹೊಂದಿರುವ ತುಳುನಾಡು ರಾಜ್ಯ ಆಗದೆ ಹೋದರೂ, ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರಕದೆ ಹೋದರೂ ಈಗಿನ ತುಳುನಾಡಿನ ಯುವ ಪೀಳಿಗೆ -ಎಲ್ಲ ಜಾತಿ ಧರ್ಮಕ್ಕೆ ಸೇರಿದ ಯುವ ಪೀಳಿಗೆ -ತುಳುವನ್ನು ಬಹಳ ಅಸ್ಥೆಯಿಂದ ಬೆಳೆಸುತ್ತಿದೆ.

ತುಳು ಈ ಭಾಗದ ಎಲ್ಲಾ ಜಾತಿ ಧರ್ಮಗಳ ಸಂಪರ್ಕ ಭಾಷೆ ಕುಡಾ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ತುಳು ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದೆ. ಶಾಲಾ ತರಗತಿಗಳಲ್ಲಿ ತುಳುವಿನಲ್ಲಿ ಪಾಠ, ತುಳು ಭಾಷೆಯಲ್ಲಿ ಎಮ್. ಎ. ಮತ್ತು ಪಿ.ಯಚ್.ಡಿ ಮಾಡಲು ಅವಕಾಶ- ಈ ಎಲ್ಲಾ ಪೂರಕ ವಾತಾವರಣಜೊತೆಗೆ ಬಳಕೆ ತಪ್ಪಿದ ತುಳು ಲಿಪಿಯನ್ನು ಮತ್ತೆ ಬಳಕೆಗೆ ತರುವ ಪ್ರಯತ್ನ ಕೂಡಾ ಬಹಳ ವ್ಯವಸ್ಥಿತವಾಗಿ ನಡೆಯುತ್ತಿದೆ. ಜೊತೆಗೆ ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸ್ಥಾಪಿತವಾದ ತುಳುಅಕಾದೆಮಿ ತುಳು ಬರವಣಿಗೆಗಳನ್ನು ಹೆಚ್ಚಾಗಿ ಪ್ರೋತ್ಸಾಹಿಸತೊಡಗಿದೆ. ಪರಿಣಾಮವಾಗಿ ತುಳು ಸಾಹಿತ್ಯ ಇತರೆ ಭಾಷೆಗಳಿಗೂ ಅನುವಾದ ಆಗುತ್ತಿದೆ.

ನಾನು ಬೆಂಗಳೂರುನಿಂದ ಸುರತ್ಕಲ್ ನಲ್ಲಿ ಬಂದು ಕೆಲವು ದಿನ ಕುಳಿತರೆ ಇಲ್ಲಿಯ ಸಮಾನ ಮನಸ್ಕರ ಸಂಪರ್ಕಕ್ಕೆ ಬರುತ್ತೇನೆ. ಈ ಬಾರಿ ರಘು ಇಡ್ದಿದು ಅವರ ‘ಒಂಜಿ ಪೆತ್ತದ ಕತೆ’ ತುಳು ನಾಟಕವನ್ನು ಬಿಡುಗಡೆಗೊಳಿಸುವ ಆಪ್ತ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ದೊರಕಿತು. ಒಟ್ಟು 7 ಕಿರು ನಾಟಕಗಳ ಸಂಕಲನಗಳ 76 ಪುಟಗಳ ಕಿರು ಹೊತ್ತಗೆ ಇದು. ರಘು ಅವರ ಮಡದಿ ವಿದ್ಯಾ ಶಾಲಾ ಶಿಕ್ಷಕಿ. ಆಕೆಗೆ ಮಕ್ಕಳ ನಾಟಕದ ಅವಶ್ಯಕತೆ ಬಹಳ. ಮಾತ್ರವಲ್ಲ ಅವರ ಸಹದ್ದೋಗಿಗಳಿಗೂ ಮಕ್ಕಳ ತುಳು ನಾಟಕದ ಅವಶ್ಯಕತೆ ಇರುತ್ತದೆ. ಹೀಗೆ ಮಡದಿಯ ಬೇಡಿಕೆಗಳನ್ನು ಪೂರೈಸಲು ರಚಿಸಿದ ತುಳು ನಾಟಕಗಳಿವು. ನಾಟಕಕಾರರೇ ಹೇಳಿಕೊಂಡಂತೆ, ಕೆಲವನ್ನು ಮಡದಿಯ ಆಶಯದಂತೆ, ಕೆಲವನ್ನು ತನ್ನ ಸೃಜನಶೀಲತೆಗೆ ದಕ್ಕಿದಂತೆ ಕೆಲವನ್ನು ಇತರ ಬರಹಗಾರರ ಪ್ರೇರಣೆಯಿಂದ ಬರೆದ ಪುಟ್ಟ ಪುಟ್ಟ ನಾಟಕಗಳಿವು.

ಈ ಕೃತಿಯ ಆರಂಭದಲ್ಲೇ ನಮ್ಮ ಅರಿವಿಗೆ ಬರುವುದು ಇಲ್ಲಿ ಕಾಣುವ ದರ್ಮ ಸಾಮರಸ್ಯ. ತುಳುನಾಡಿನ ಜನತೆ ನಿನ್ನೆಯನ್ನು ಮರೆತವರು. ಅವರಿಗೆ ಮತ್ತೆ ನಿನ್ನೆಯ ಧರ್ಮ ಸಾಮರಸ್ಯವನ್ನು ನೆನಪಿಸಬೇಕಾಗಿದೆ. ಆ ಕೆಲಸವನ್ನು ಮಕ್ಕಳು ಮಾತ್ರ ಮಾಡಿಯಾರು.

ಇಲ್ಲಿಯ ಎಲ್ಲಾ ಕಥೆಗಳು “ಮನುಷ್ಯನಿಗೆ ಬದುಕು ನೀಡುವುದು ಧರ್ಮ ಅಲ್ಲ. ಪರಸ್ಪರ ನೆರವು” ಎಂಬುದನ್ನು ಮನದಟ್ಟು ಮಾಡುತ್ತದೆ. “ತನ್ನಿಂದಾಗಿ ಜನರು ಪರಸ್ಪರ ಕಾದಾಡಿ ರಕ್ತದ ಮಡುವಿನಲ್ಲಿ ಬಿದ್ದ ವಿಷಯ ತಿಳಿದು ನೊಂದುಕೊಳ್ಳುವ ಪೆತ್ತ(ಹಸು) (ಒಂಜಿ ಪೆತ್ತದ ಕಥೆ) “ನಲ್ಲಿಯ ಬಳಿ ನೀರಿಗಾಗಿ ಕಾದಾಡಿದ ವಿವಿಧ ಜಾತಿಗಳವರು ನೀರುಕ್ಕಿ ಹೊಳೆಯಾಗಿ ಹರಿದು ಎಲ್ಲರನ್ನು ಎಲ್ಲವನ್ನು ಕೊಚ್ಚಿಕೊಂಡು ಹೋಗುವಾಗ ಜಾತಿ ದರ್ಮವನ್ನು ಮರೆತ ಅದೇ ಮಂದಿಗಳು. (ನೀರ್..ನೀರ್..) ಹಾಗೂ ಒಂಜಿ ಬಿಂದ್ ನೆತ್ತೆರ್ -ಇವು ಮನಮುಟ್ಟುವ ಜಾತಿ- ಧರ್ಮ ಸಾಮರಸ್ಯದ ನಾಟಕಗಳು. ಇವಲ್ಲದೆ ಮೊಬೈಲ್ ಗೀಳ್, ಆದರ್ಶ , ಪರಶುರಾಮೆ -ನಾಟಕಗಳು ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುವ ನಾಟಕಗಳು.

ಈ ಎಲ್ಲಾ ನಾಟಕಗಳನ್ನು ಪ್ರಾಥಮಿಕ ಶಾಲಾ ಅಧ್ಯಾಪಕರುಗಳು ಮಕ್ಕಳಿಂದ ಆಡಿಸುತ್ತಾರೆ ಎಂದು ತಿಳಿಯಿತು. ನಾಟಕ ರಚನೆಯ ಉದ್ದೇಶವನ್ನು ಸಾರ್ಥಕಗೊಳಿಸುತ್ತಾರೆ ಈ ಅಧ್ಯಾಪಕರ ಬಳಗ. ಈ ನಾಟಕಗಳಲ್ಲಿ ಇರುವ ವೈಜ್ಞಾನಿಕ ದೃಷ್ಟಿಯ ಮತ್ತು ಹಾಸ್ಯದ ಕೊರತೆಯನ್ನು ಮಕ್ಕಳಿಗೆ ನಾಟPದ ತರಬೇತಿ ನೀಡುವಾಗ ಶಿಕ್ಷಕ, ಶಿಕ್ಷಕಿಯರು ತುಂಬುತ್ತಾರೆ ಎಂದು ತಿಳಿಯಿತು.

ಒಟ್ಟಿನಲ್ಲಿ ಆಧುನಿಕ ಸಮಾಜದ ಮಕ್ಕಳ ಗಮನವನ್ನು ಎಳೆವೆಯಲ್ಲಿಯೇ ಸಹಬಾಳ್ವೆಯತ್ತ ತಿರುಗಿಸಲು ಈ ನಾಟಕಗಳು ಸಹಕಾರಿಯಾಗ ಬಲ್ಲದು ಎಂಬುದು ನನ್ನ ಭಾವನೆ.

.

‍ಲೇಖಕರು avadhi

22 November, 2019

1 Comment

  1. T S SHRAVANA KUMARI

    ಓದಬೇಕಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading